Aug 24, 2016

ನಿಜವಾದ ದೇಶದ್ರೋಹದ ಬಗ್ಗೆ ಮೌನವೇಕೆ?

ಆನಂದ ಪ್ರಸಾದ್
24/08/2016
ಬೆಂಗಳೂರಿನಲ್ಲಿ ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯವರು ಏರ್ಪಡಿಸಿದ ಕಾರ್ಯಕ್ರಮವೊಂದರಲ್ಲಿ ಕೆಲವರು ದೇಶದ್ರೋಹದ ಘೋಷಣೆ ಕೂಗಿದರೆಂದು ಎಬಿವಿಪಿ (ಅಖಿಲ ಭಾರತ ವಿದ್ಯಾರ್ಥಿ ಪರಿಷತ್) ಕಾರ್ಯಕರ್ತರು ರಾಜ್ಯದಲ್ಲಿ ಭಾರೀ ರಾದ್ಧಾಂತವನ್ನೇ ಸೃಷ್ಟಿಸಲು ಯತ್ನಿಸಿದರು. ಆಮ್ನೆಸ್ಟಿ ಕಾರ್ಯಕ್ರಮದಲ್ಲಿ ದೇಶದ್ರೋಹವೆನಿಸುವ ಯಾವ ಘೋಷಣೆ ಕೂಗಲಾಯಿತು ಎಂಬ ಬಗ್ಗೆ ಮಾಧ್ಯಮಗಳಲ್ಲಿ ಏನೂ ಮಾಹಿತಿ ಅಥವಾ ವಿಡಿಯೋ ದೃಶ್ಯಾವಳಿ ಕಂಡುಬರಲಿಲ್ಲ. ಹೀಗಿದ್ದರೂ ಎಬಿವಿಪಿ ಕಾರ್ಯಕರ್ತರು ರಾದ್ಧಾಂತ ಎಬ್ಬಿಸಿದ್ದು ರಾಜಕೀಯಕ್ಕೆ ಹೊರತು ಮತ್ತೇನೂ ಅಲ್ಲ ಎಂಬುದು ಕಂಡುಬರುತ್ತದೆ. ಒಂದು ಘೋಷಣೆ ಕೂಗಿದ ಕೂಡಲೇ ದೇಶದ್ರೋಹ ಎಂದು ಹೇಳುವವರು ನಮ್ಮ ದೇಶದಲ್ಲಿ ದಿನನಿತ್ಯವೂ ನಡೆಯುತ್ತಿರುವ ನಿಜವಾದ ದೇಶದ್ರೋಹದ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ ಎಂಬ ಬಗ್ಗೆ ಜನಸಾಮಾನ್ಯರು ವಿಚಾರ ಮಾಡಬೇಕಾಗಿದೆ.

ನಮ್ಮದೇ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಸರ್ಕಾರೀ ನೌಕರರು/ಅಧಿಕಾರಿಗಳು ನಮ್ಮ ನ್ಯಾಯಬದ್ಧ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡದೇ ಸತಾಯಿಸುವುದು ದೇಶದ್ರೋಹವಲ್ಲವೇ? ಇವರನ್ನು ಬಂಧಿಸಬೇಕು ಹಾಗೂ ಜನರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡಬೇಕೆಂದು ದೇಶದ್ರೋಹದ ಬಗ್ಗೆ ರಾದ್ಧಾಂತ ಎಬ್ಬಿಸುವವರು ಯಾಕೆ ಧ್ವನಿ ಎತ್ತುವುದಿಲ್ಲ? ರಾಜಕಾರಣಿಗಳು, ರಾಜಕೀಯ ಪಕ್ಷಗಳು ಕಾಮಗಾರಿಗಳಲ್ಲಿ ಕಮಿಷನ್ ಪಡೆಯುವುದು ದೇಶದ್ರೋಹವಲ್ಲವೇ? ಇಂಥ ಕೃತ್ಯ ನಡೆಸುವವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡುವವರು ಯಾರಾದರೂ ಇದ್ದಾರೆಯೇ? ರಾಜಕೀಯ ಪಕ್ಷಗಳು ಬಹುಮತಕ್ಕಾಗಿ ಶಾಸಕರ ಕುದುರೆ ವ್ಯಾಪಾರ ಮಾಡುವುದು ದೇಶದ್ರೋಹವಲ್ಲವೇ? ಆಪರೇಷನ್ ಕಮಲ ಎಂಬ ಹೆಸರಿನಲ್ಲಿ ಬೇರೆ ಪಕ್ಷದ ಶಾಸಕರಿಂದ ರಾಜೀನಾಮೆ ಕೊಡಿಸಿ ಮರುಚುನಾವಣೆ ಹೇರುವುದು ದೇಶದ್ರೋಹವಲ್ಲವೇ? ಗಣಿಧಣಿಗಳಿಂದ ಯಥೇಚ್ಛ ಹಣ ಪಡೆದು ಅಕ್ರಮ ಗಣಿಗಾರಿಕೆಗೆ ಸ್ವಚ್ಛಂದ ಅವಕಾಶ ಕೊಡುವುದು ದೇಶದ್ರೋಹವಲ್ಲವೇ? ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಕಪ್ಪು ಹಣ ಸಂಗ್ರಹಿಸಿ ಅದರ ಬಲದಿಂದ ಮಾಡಬಾರದ ಅಕ್ರಮ ವ್ಯವಹಾರ, ರಾಜಕೀಯವನ್ನು ಹೊಲಸೆಬ್ಬಿಸುವುದು ದೇಶದ್ರೋಹವಲ್ಲವೇ? ಕಾಳಸಂತೆಯಲ್ಲಿ ಸರಕುಗಳನ್ನು, ಆಹಾರ ಧಾನ್ಯಗಳನ್ನು, ಬೇಳೆಕಾಳುಗಳನ್ನು ಅಡಗಿಸಿಟ್ಟು ಹೆಚ್ಚು ಲಾಭಕ್ಕೆ ಮಾರುವವರು ದೇಶದ್ರೋಹಿಗಳಲ್ಲವೇ? ಇದರ ಬಗ್ಗೆ ಧ್ವನಿ ಎತ್ತುವವರು ಯಾರಾದರೂ ಇದ್ದಾರೆಯೇ?

ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಎಲ್ಲ ರಾಜಕೀಯ ಪಕ್ಷಗಳು ಪ್ರಯತ್ನಿಸುವಾಗ ಅದನ್ನು ಪ್ರತಿಭಟಿಸಲು ನಮ್ಮ ಸಂಘಟನೆಗಳಿಗೆ ವೀರಾವೇಶ ಬಂದದ್ದು ಕಾಣಲಿಲ್ಲ. ಲೋಕಸೇವಾ ಆಯೋಗಕ್ಕೆ ಭ್ರಷ್ಟರ ನೇಮಕ ಮಾಡಿ ಇಡೀ ವ್ಯವಸ್ಥೆಯ ಉಗಮ ಸ್ಥಾನವನ್ನೇ ಕುಲಗೆಡಿಸಿದ ರಾಜ್ಯ ಸರ್ಕಾರದ ನಿರ್ಧಾರ ದೇಶದ್ರೋಹವಲ್ಲವೇ? ಇದನ್ನು ತಡೆಯಬೇಕೆಂದು ರಾದ್ಧಾಂತ ಎಬ್ಬಿಸಲು ಯಾರೂ ಇಲ್ಲ. ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು ನ್ಯಾಯಾಧೀಶರ ನೇಮಕ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಕಣ್ಣೀರು ಹಾಕಿ ಕೇಳಿಕೊಂಡರೂ ಸರ್ಕಾರ ನ್ಯಾಯಾಧೀಶರ ನೇಮಕಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ದೇಶದ್ರೋಹವಲ್ಲವೇ? ಲೋಕಪಾಲ್ ವ್ಯವಸ್ಥೆ ತರಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಕಾಲಹರಣ ಮಾಡುತ್ತಿರುವುದು ದೇಶದ್ರೋಹವಲ್ಲವೇ? ಇದರ ಬಗ್ಗೆ ಪ್ರಶ್ನಿಸಲು ಎಬಿವಿಪಿಯವರಿಗೆ ಧೈರ್ಯ ಇಲ್ಲವೇ? ಈ ದೇಶವನ್ನು ಹಾಳುಗೆಡಹುತ್ತಿರುವ ರಾಜಕೀಯ ಪಕ್ಷಗಳೇ ಅತಿ ದೊಡ್ಡ ದೇಶದ್ರೋಹಿಗಳು ಏಕೆಂದರೆ ಚುನಾವಣಾ ಸುಧಾರಣೆ ಬಗ್ಗೆ, ಆಡಳಿತ ಸುಧಾರಣೆ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರ ಇವರಿಗೆ ಸಂವಿಧಾನಬದ್ಧವಾಗಿ ಲಭ್ಯವಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ನಮ್ಮ ದೇಶವು ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿಯುವಂತೆ ಮಾಡಿರುವುದು ಇವರ ಸಾಧನೆ.

ಎಬಿವಿಪಿಯಂಥ ಸಂಘಟನೆಗಳಿಗೆ ನಮ್ಮ ದೇಶದ ನಿಜವಾದ ಶತ್ರುಗಳು ನಮ್ಮದೇ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಎಂಬುದು ತಿಳಿಯದೆ ಇರುವುದು ಅಥವಾ ತಿಳಿದಿದ್ದರೂ ನಿಜವಾದ ದೇಶದ್ರೋಹದ ವಿರುದ್ಧ ಪ್ರತಿಭಟಿಸದೇ ಇರುವುದು ವಿಪರ್ಯಾಸ. ಭ್ರಷ್ಟಾಚಾರ, ಅಸ್ಪೃಶ್ಯತೆ, ಧರ್ಮ ಹಾಗೂ ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು, ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುವುದು, ಓಟಿಗಾಗಿ ನೋಟು ಕೊಡುವುದು ಹಾಗೂ ಪಡೆಯುವುದು ಇವೆಲ್ಲವೂ ನಿಜವಾಗಿ ದೇಶದ್ರೋಹಗಳೇ. ಇವುಗಳು ಯಾರೋ ಕೆಲವು ವ್ಯಕ್ತಿಗಳು ಕೂಗಿದ ಘೋಷಣೆಗಳಿಗಿಂತ ದೇಶಕ್ಕೆ ಹೆಚ್ಚು ಮಾರಕ. ವಿದ್ಯಾರ್ಥಿ ಸಮುದಾಯ ನಿಜವಾದ ದೇಶದ್ರೋಹಿಗಳ ಬಗ್ಗೆ ಆಲೋಚಿಸದೆ ರಾಜಕೀಯ ಪಕ್ಷಗಳ ಘಟಕಗಳಾಗಿ ರಾಜಕೀಯ ಕಾರ್ಯಸೂಚಿಯ ಅನುಸಾರವಾಗಿ ಪ್ರತಿಭಟನೆ ಮಾಡುವುದರಿಂದ ದೇಶಕ್ಕೆ ಯಾವುದೇ ಪ್ರಯೋಜನ ಇಲ್ಲ. ವಿದ್ಯಾರ್ಥಿಗಳು ರಾಜಕೀಯರಹಿತವಾಗಿ ಪ್ರತಿಭಟನೆಗಳಲ್ಲಿ ತೊಡಗಿಕೊಂಡರೆ ಮಾತ್ರ ದೇಶಕ್ಕೆ ಏನಾದರೂ ಒಳಿತಾಗಬಹುದೇ ವಿನಃ ರಾಜಕೀಯ ಪಕ್ಷಗಳ ಕಾರ್ಯಸೂಚಿಯ ದಾಳಗಳಾಗಿ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುವುದು, ವಿದ್ಯಾರ್ಥಿಗಳಲ್ಲಿ ರಾಜಕೀಯದ ಹೆಸರಿನಲ್ಲಿ ಒಡಕು ಉಂಟಾಗುವುದು ದೇಶಕ್ಕೆ ಮಾರಕ. ನಮ್ಮ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಸ್ವತಂತ್ರವಾಗಿ ಚಿಂತಿಸುವುದನ್ನು ಕಲಿಯಬೇಕು. ಇಲ್ಲದೇ ಹೋದರೆ ದೇಶದ ಭವಿಷ್ಯ ಉತ್ತಮವಾಗಲಾರದು.

No comments:

Post a Comment