Aug 4, 2016

ದಲಿತ ದಂಪತಿಗಳ ಹತ್ಯೆಯೂ ಉತ್ತರ ಪ್ರದೇಶದ ರಾಜಕೀಯವೂ

ಹದಿನೈದು ರುಪಾಯಿಗೆ ಹತ್ಯೆಯಾದ ದಲಿತ ದಂಪತಿ
(ಚಿತ್ರ ಕೃಪೆ: ಎನ್ ಡಿ ಟಿ ವಿ)
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
04/08/2016
ಸ್ವಾತಂತ್ರ ದೊರೆತ ಎಪ್ಪತ್ತು ವರ್ಷಗಳ ನಂತರವೂ ಈ ದೇಶದಲ್ಲಿ ದಲಿತರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ ಮತ್ತು ಅವುಗಳನ್ನು ತಡೆಯಬೇಕಾದ ಪ್ರಭುತ್ವಗಳು ಮೊಸಳೆ ಕಣ್ಣೀರು ಸುರಿಸಿ ಮೇಲ್ಜಾತಿಯವರಿಗೆ ತೊಂದರೆಯಾಗದ ರೀತಿಯಲ್ಲಿ ಅಂತಹ ಪ್ರಕರಣಗಳನ್ನು ನಿಬಾಯಿಸುತ್ತಿವೆಯೆನ್ನುವು
ದೇ ನಮ್ಮ ನಾಡಿನ ಬಹು ದೊಡ್ಡ ದುರಂತ. ಎರಡು ದಿನದ ಹಿಂದೆ ಉತ್ತರಪ್ರದೇಶದಲ್ಲಿ ನಡೆದ ಈ ಘಟನೆಯನ್ನೇ ನೋಡಿ:

ಈ ತಿಂಗಳ 21ನೇ ತಾರೀಖು ಗುರುವಾರ ಉತ್ತರಪ್ರದೇಶದ ಕುರಾ ವ್ಯಾಪ್ತಿಯ ಲಕ್ಷ್ಮಿಪುರ ಎಂಬ ಹಳ್ಳಿಯಲ್ಲಿ ದಲಿತ ದಂಪತಿಗಳಾದ ಶ್ರೀಭರತ್ ನಾಥ್(48), ಮಮತಾ(45)ರವರನ್ನು ಮೇಲ್ಜಾತಿಯ ಅಂಗಡಿ ಮಾಲೀಕನೊಬ್ಬ ಕೊಡಲಿಯಿಂದ ಕತ್ತರಿಸಿ ಕೊಂದಿದ್ದಾನೆ. ಕೆಲ ದಿನಗಳ ಹಿಂದೆ ಈ ದಂಪತಿಗಳು ಬಿಸ್ಕೆಟ್ ಖರೀದಿಸಿದ 15 ರೂಪಾಯಿಗಳ ಸಾಲವನ್ನು ಹಿಂದಿರುಗಿಸಲು ಇನ್ನಷ್ಟು ಸಮಯಾವಕಾಶ ಕೇಳಿದ್ದೇ ಈ ಕೊಲೆಗೆ ಕಾರಣವೆನ್ನಲಾಗಿದೆ. ಹತ್ಯೆಯಾದ ದಂಪತಿಗಳು ನಾತ್ (ದೊಂಬರ ಜಾತಿ) ಸಮುದಾಯಕ್ಕೆ ಸೇರಿದ್ದು ಕೂಲಿ ಮಾಡಲು ಜಮೀನಿಗೆ ಹೋಗುತ್ತಿದ್ದ (ಬೆಳಗಿನ 6ಗಂಟೆ ಸುಮಾರಿಗೆ) ಸಂದರ್ಭದಲ್ಲಿ ಈ ಹತ್ಯೆ ನಡೆದಿದೆ. ಗಮನಿಸಬೇಕಾದ ಅಂಶವೆಂದರೆ ಉತ್ತರ ಪ್ರದೇಶದಲ್ಲಿರುವ ನಾತ್ ಸಮುದಾಯದವರು ಪಾರಂಪರಿಕವಾಗಿ ದೊಂಬರ ಆಟ ಆಡಿ ಜನರಿಗೆ ಮನೋರಂಜನೆ ಒದಗಿಸುವ ಕಸುಬಿನವರು ಮತ್ತು ಹೆಚ್ಚಿನ ಭಾಗದಲ್ಲಿ ಅಲೆಮಾರಿ ಪ್ರವೃತ್ತಿಯವರು. ಈ ಸಮುದಾಯದ ಶೇಕಡಾ 99ರಷ್ಟು ಜನರಿಗೆ ಉಳುಮೆ ಮಾಡಲು ಸ್ವಂತದ ಭೂಮಿಯಿಲ್ಲವಾಗಿದ್ದು ತಮ್ಮ ಕುಲಕಸುಬನ್ನೇ ನಂಬಿ ಕೊಂಡು ಬದುಕುವವರು. ಕೊಲೆಯಾದ ಈ ದಂಪತಿಗಳು ತಮ್ಮ ಕುಲಕಸುಬನ್ನು ಮುಂದುವರೆಸಲಾಗದೆ ಹಳ್ಳಿಯಲ್ಲಿ ನೆಲೆಸಿ ಭೂಮಾಲೀಕರ ಜಮೀನುಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರಾಗಿದ್ದರು. ಈ ಹತ್ಯೆ ನಡೆದ ಲಕ್ಷ್ಮಿಪುರ ಮಿಯಾಪುರ ಕ್ಷೇತ್ರಕ್ಕೆ ಸೇರಿದ್ದು ಇಲ್ಲಿ ಮುಲಾಯಂಸಿಂಗ್ ಯಾದವರ ಸೋದರ ಸಂಬಂದಿ ಸಂಸದರಾಗಿದ್ದಾರೆ. ಉತ್ತರ ಪ್ರದೇಶದ ಮಟ್ಟಿಗೆ ದಲಿತನೊಬ್ಬನ ಜೀವದ ಬೆಲೆ ಕೇವಲ 15 ರೂಪಾಯಿಗಳೆಂಬ ಕಠೋರ ಸತ್ಯವನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ.

ಕಳೆದ ಕೆಲ ವಾರಗಳಿಂದಲೂ ದೇಶದ ವಿವಿದ ಭಾಗಗಳಲ್ಲಿ, ಅದರಲ್ಲೂ ಹೆಚ್ಚಾಗಿ ಉತ್ತರಭಾರತದಲ್ಲಿ ದಲಿತರ ಮೇಲಿನ ಹಲ್ಲೆಗಳು ಸರಣಿ ರೂಪದಲ್ಲಿ ನಡೆಯುತ್ತಿವೆ 

ಈ ಘಟನೆಗೆ ಕೆಲದಿನಗಳ ಮೊದಲು ಮೇಲ್ವರ್ಗಕ್ಕೆ ಸೇರಿದ ಉತ್ತರಪ್ರದೇಶ ಬಾಜಪದ ಉಪಾದ್ಯಕ್ಷರಾದ ದಯಾಶಂಕರ್ ಎಂಬುವವರು ಬಹುಜನ ಪಕ್ಷದ ನಾಯಕಿ ಮಾಯಾವತಿಯವರನ್ನು (?)ಗೆ( ಸದರಿ ಪದವನ್ನು ಬಳಸಲು ನಾನು ಬಯಸುವುದಿಲ್ಲ) ಹೋಲಿಸಿ ಬಾಷಣ ಮಾಡಿ ದಲಿತರ ಮೇಲೆ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಹಲ್ಲೆ ಮಾಡುವ ತಮ್ಮ ಮೇಲ್ಜಾತಿಗಳ ಚಾಳಿಯನ್ನು ಬಹಿರಂಗಗೊಳಿಸಿದರು. ಉತ್ತರ ಪ್ರದೇಶದ ಮಟ್ಟಿಗೆ ದಲಿತರ ಮೇಲಿನ ಇಂತಹ ಹಲ್ಲೆಗಳು ಹೊಸವೇನು ಅಲ್ಲ. ಜೊತೆಗೆ ಅಪರೂಪಕ್ಕೊಮ್ಮೆ ಆಗುವಂತಹವು ಅಲ್ಲ. ನ್ಯಾಷನಲ್ ಕ್ರೈಂ ಬ್ಯೂರೊದ ವರದಿಗಳ ಪ್ರಕಾರ ಅಲ್ಲಿ ದಲಿತರ ಮೇಲಿನ ಹಲ್ಲೆಗಳು ಕನಿಷ್ಠ ವಾರಕ್ಕೊಂದಾದರು ನಡೆಯುತ್ತಿವೆಯಂತೆ. ಆದರೆ ಶೇಕಡಾ 50ರಷ್ಟು ಪ್ರಕರಣಗಳನ್ನು ಮೇಲ್ಜಾತಿಯವರ ಭಯದ ಕಾರಣದಿಂದಾಗಿ ದಲಿತರು ಹೊರಜಗತ್ತಿಗೆ ಬಾಯಿ ಬಿಡುವುದೇ ಇಲ್ಲ. ರಾಷ್ಟ್ರ ರಾಜದಾನಿಗೆ ಬಹಳ ಸಮೀಪವಿರುವ ರಾಜ್ಯದಲ್ಲೇ ದಲಿತರ ಮೇಲಿನ ಹಲ್ಲೆಗಳು ಸತತವಾಗಿ, ಯಾವ ಭಯವೂ ಇಲ್ಲದೆ ನಡೆಯುತ್ತಿರುವುದು ನಿಜಕ್ಕೂ ಖಂಡನೀಯ.

ಹಾಗಿದ್ದರೆ ಇಂತಹ ಹಲ್ಲೆಗಳನ್ನು ನಡೆಸುವಲ್ಲಿ ಮತ್ತು ನಿಲ್ಲಿಸುವಲ್ಲಿ ರಾಜಕಾರಣಿಗಳ ಪಾತ್ರವೇನೂ ಇಲ್ಲವೇ ಎನ್ನುವುದೇ ಅತ್ಯಂತ ಮುಖ್ಯ ಪ್ರಶ್ನೆಯಾಗಿದೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಸಿಗುವುದು ಹಲ್ಲೆಗಳ ಹಿಂದೆ ಮತ್ತು ಅದನ್ನು ತಡೆಯುವ ಯತ್ನದ ಹಿಂದೆ ಇರುವ ರಾಜಕೀಯದ ಚದುರಂಗದಾಟಗಳು. ತೀರಾ ಕ್ಷುಲ್ಲಕ ಕಾರಣಕ್ಕೂ ದಲಿತರ ಮೇಲೆ ಹಲ್ಲೆ ನಡೆಸುವ ಮೇಲ್ಜಾತಿಗಳ ಮನಸಿನಲ್ಲಿರುವ ಶ್ರೇಷ್ಠತೆಯನ್ನು ಬಡಿದೆಬ್ಬಿಸಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಅವುಗಳ ನಾಯಕರುಗಳು ಬಹುಮುಖ್ಯಪಾತ್ರ ವಹಿಸುತ್ತಿವೆ. ತಾವು ಬೆಂಬಲಿಸುವ ರಾಜಕಾರಣಿಗಳ ಅಭಯಹಸ್ತ ತಮಗಿದೆಯೆಂಬ ನಂಬಿಕೆಯೇ ಮೇಲ್ಜಾತಿಗಳ ಈ ಕ್ರೌರ್ಯಕ್ಕೆ ಮೂಲಭೂತ ಕಾರಣವಾಗಿವೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಸರಕಾರದ ವ್ಯವಸ್ಥೆಯೊಳಗಿರುವ ಮೇಲ್ಜಾತಿಗಳ ಪಟ್ಟಭದ್ರ ಹಿತಾಸಕ್ತಿಗಳು ತಮ್ಮನ್ನು ಕಾಪಾಡಬಲ್ಲವೆಂಬ ಆತ್ಮವಿಶ್ವಾಸದಿಂದಲೇ ಇವತ್ತು ದಲಿತರ ಮೇಲಿನ ಹಲ್ಲೆಗಳು ಹೆಚ್ಚುತ್ತಿವೆ. ಅದರಲ್ಲೂ ಜಾತಿ ಆಧಾರಿತ ರಾಜಕಾರಣವೇ ಪರಾಕಷ್ಠೆಯಲ್ಲಿರುವ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಇಂತಹವುಗಳು ಹೆಚ್ಚಿವೆ, ಇಂತಹ ಘಟನೆಗಳು ನಡೆದ ತಕ್ಷಣ ಸ್ಪರ್ದೆಗೆ ಬಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸುವ ರಾಜಕಾರಣಿಗಳು ತಮ್ಮ ವಿಷಾದದ ಹೇಳಿಕೆಗಳನ್ನು, ತಪ್ಪು ಮಾಡಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕೆಂಬ ಆಕ್ರೋಶಭರಿತ ಹೇಳಿಕೆಗಳನ್ನು, ತಕ್ಷಣಕ್ಕೆ ಒಂದಿಷ್ಟು ಪರಿಹಾರದ ಹಣವನ್ನು ನೀಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಬಹುತೇಕ ಪಕ್ಷಗಳ ರಾಜಕಾರಣಿಗಳು ಇಂತಹ ನಾಟಕಗಳಲ್ಲಿ ಪಳಗಿದವರಾಗಿದ್ದು, ಅವರಿಗೆ ಜಾತಿ ರಾಜಕಾರಣದ ಒಳಸುಳಿಗಳು ಗೊತ್ತಿರುವುದರಿಂದಲೇ ಯಾವ ಪ್ರಕರಣಕ್ಕೆ ಎಷ್ಟು ಕಣ್ಣೀರು ಸುರಿಸಬೇಕು, ಯಾವ ಪ್ರಕರಣಕ್ಕೆ ತಮ್ಮ ದನಿ ಎತ್ತರಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಪಳಗಿ ಹೋಗಿದ್ದಾರೆ. ಬಹುಶ: ಇಂಡಿಯಾದ ವೃತ್ತಿಪರ ರಾಜಕಾರಣಿಗಳನ್ನು ಮೀರಿಸಲು ಬೇರಿನ್ಯಾವ ದೇಶದ ರಾಜಕಾರಣಿಗಳಿಂದಲೂ ಸಾದ್ಯವಿಲ್ಲವೇನೊ?

ಇವತ್ತು ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆಯ ಲಾಭವನ್ನು ಪಡೆಯಲು, ಮತ್ತು ಇದರಿಂದ ತನಗಾಗುವ ನಷ್ಟವನ್ನು ಸರಿದೂಗಿಸಲು ರಾಜಕೀಯ ಪಕ್ಷಗಳು ಪ್ರಯತ್ನ ನಡೆಸಿವೆ. ಯಾಕೆಂದರೆ ಇನ್ನೊಂದು ವರ್ಷದಲ್ಲಿ ಅಲ್ಲಿ ರಾಜ್ಯವಿದಾನಸಭಾ ಚುನಾವಣೆಗಳು ನಡೆಯಲಿದ್ದು ಚುನಾವಣೆ ಗೆಲ್ಲಲು ಎಲ್ಲ ಪಕ್ಷಗಳು ಒಂದೊಂದು ಜಾತಿಯನ್ನು ಅವಲಂಬಿಸಿವೆ. ಕೊಲೆಯಾದ ದಂಪತಿಗಳು ದಲಿತರಾಗಿದ್ದು ಶೇಕಡಾ 21ರಿಂದ 22ರಷ್ಟಿರುವ ದಲಿತ ಮತಗಳನ್ನು ಪಡೆಯಲು ಎಲ್ಲ ಪಕ್ಷಗಳೂ ಪ್ರಯತ್ನಿಸಿದರೆ, ಹಲ್ಲೆ ಮಾಡಿದವನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು ಶೇಕಡಾ 13ರಷ್ಟಿರುವ ಬ್ರಾಹ್ಮಣ ಮತಗಳನ್ನು ಕಳೆದುಕೊಳ್ಳಲು ಉಳಿದ ಯಾವ ಪಕ್ಷಗಳೂ ತಯಾರಿರುವುದಿಲ್ಲ. ದಲಿತರ ಮತಗಳು ಬಹುಜನಪಕ್ಷಕ್ಕೆ ಹೋಗುತ್ತವೆಯೆಂಬ ಕಾರಣಕ್ಕೆ ಮತ್ತು ಬ್ರಾಹ್ಮಣ ಮತಗಳು ತಮ್ಮ ಕೈತಪ್ಪ ಬಹುದೆಂಬ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಾಜಪಗಳು ಈ ಘಟನೆಯನ್ನು ತೀರಾ ಹೆಚ್ಚು ಪ್ರಸ್ತಾಪಿಸಲಾರವು. ಇನ್ನು ಸಮಾಜವಾದಿ ಪಕ್ಷ ಈ ಎರಡೂ ಸಮುದಾಯಗಳ ಮತ ತನಗೆ ದೊರೆಯಲಾರದೆಂಬ ನಂಬಿಕೆಯಿಂದ ಈ ಪ್ರಕರಣದ ಬಗ್ಗೆ ಹೆಚ್ಚು ಆಸಕಿ ವಹಿಸಲಾರದು. ಹೀಗಾಗಿ ಇದೂ ಕೂಡ ಮತ್ತೊಮದು ಪ್ರಕರಣವಾಗಿ ಮುಚ್ಚಿಹೋಗಬಲ್ಲದು. ಆದ್ದರಿಂದ ಈ ಘಟನೆಯನ್ನು ತೀವ್ರವಾಗಿ ಖಂಡಿಸುವಲ್ಲಿಯೂ ರಾಜಕೀಯ ಪಕ್ಷಗಳು ಅಗಾಧವಾದ ತಾಳ್ಮೆಯಿಂದಲೇ ಕೆಲಸ ಮಾಡುವುದು ನಿಶ್ಚಿತ. ಹೀಗಾಗಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.

ಸಾಮಾಜಿಕ ಪರಿವರ್ತನೆ, ರಾಜಕೀಯ ಇಚ್ಚಾ ಶಕ್ತಿ, ದಲಿತರಿಗೆ ರಾಜಕೀಯ ಬಲ ನೀಡುವುದು ಮುಂತಾದ ಮಾತುಗಳೆಲ್ಲ ಸದ್ಯದ ಮಟ್ಟಿಗೆ ಬೊಗಳೆಗಳಂತೆ ಕಂಡರೆ ಅಚ್ಚರಿಯೇನಿಲ್ಲ. ಯಾಕೆಂದರೆ ಜಾತಿಯ ಆಧಾರದಲ್ಲಿ ಈಗಾಗಲೇ ಒಡೆದು ಹೋಗಿರುವ ಭಾರತೀಯ ಸಮಾಜವನ್ನು ಅಷ್ಟು ಸುಲಭವಾಗಿ ಬದಲಾಯಿಸುವುದು ಸಾದ್ಯವಿಲ್ಲ. ಹಾಗೆ ಬದಲಾಗಿಬಿಟ್ಟರೆ ರಾಜಕೀಯ ಮಾಡಲಾಗುವುದಿಲ್ಲವೆಂಬ ಸತ್ಯ ನಮ್ಮ ರಾಜಕೀಯ ಪಕ್ಷಗಳಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಈ ಜಾತಿವ್ಯವಸ್ಥೆಯ ಕರಾಳ ಮುಖವನ್ನು, ಆಂತರೀಕವಾಗಿರುವ ದ್ವೇಷದ ದಳ್ಳುರಿಯನ್ನು ಯಥಾ ಸ್ಥಿತಿಯಲ್ಲಿಡಲು ಶಕ್ತಿಮೀರಿ ಪ್ರಯತ್ನ ನಡೆಸುತ್ತಿವೆ, ಮುಂದೆಯೂ ನಡೆಸುತ್ತಲಿರುತ್ತವೆ.

No comments:

Post a Comment