Aug 1, 2016

ಸಾವೂ ಸಂಭ್ರಮದ ಸಂಗತಿಯಾದಾಗ…………..

ಕು.ಸ.ಮಧುಸೂದನನಾಯರ್
ಮುಖ್ಯಮಂತ್ರಿಯವರ ಮಗ ಸತ್ತ ಸುದ್ದಿ ಕೇಳಿ ಸಂಭ್ರಮಿಸುವ ಮನಸ್ಸುಗಳನ್ನು ನೋಡಿ ಈ ಹಿಂದೆ ಬರೆದ ಲೇಖನವೊಂದು ನೆನಪಾಗಿ ನಿಮ್ಮ ಓದಿಗಾಗಿ ಇಲ್ಲಿ ಮತ್ತೆ ಹಾಕಿರುವೆ:

ಧರ್ಮಗಳ ನಡುವಿನ ಅಸಹನೆ, ಕೋಮುವಾದ ಹುಟ್ಟು ಹಾಕಿದ ಭಯೋತ್ಪಾದಕತೆ, ಮಾನವೀಯ ಮೌಲ್ಯಗಳನ್ನೆಲ್ಲ ಗುಡಿಸಿ ಗುಂಡಿಗೆ ಹಾಕಿರುವ ಜಾಗತೀಕರಣದೀ ಸಮಯದಲ್ಲಿ ವ್ಯಕ್ತಿಯೊಬ್ಬನ ಸಾವಿಗೆ ಮಿಡಿಯಬಲ್ಲ ಅಂತ:ಕರಣ ಮನುಷ್ಯನಲ್ಲಿನ್ನೂ ಉಳಿದಿರಬಹುದೆಂಬ ನನ್ನ ನಂಬಿಕೆ ಹುಸಿಯಾಗತೊಡಗಿದೆ.

ಅದಕ್ಕೆ ಕಾರಣ ಮೊನ್ನಿನ ಕೆಲವು ಘಟನೆಗಳು: ಜಾಗತಿಕ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಅಮೇರಿಕಾ ಸೇನೆಯಿಂದ ಹತನಾದ ನಂತರ ಆ ದೇಶದ ಜನತೆ ತಡರಾತ್ರಿಯವರೆಗು ಕುಡಿದು-ಕುಪ್ಪಳಿಸಿ ವಿಶ್ವವನ್ನೇ ಗೆದ್ದಂತೆ ವಿಜಯೋತ್ಸವ ಆಚರಿಸಿದರು. ಸರಿ ಸುಮಾರು ಅದೇ ಸಮಯದಲ್ಲಿ ಬೆಂಗಳೂರಿನ ಶ್ರೀರಾಮಸೇನೆಯ ಕೆಲ ಕಾರ್ಯಕರ್ತರು ಉದ್ದುದ್ದನೆಯ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಮ್ಮ ಗೌರವಾನ್ವಿತ ಮಠಾಧೀಶರೊಬ್ಬರು ತಮ್ಮ ಕೈಯಾರೆ ಭಕ್ತರಿಗೆ ಸಿಹಿ ಹಂಚಿ ,ಅವನ ಸಾವಿನಸಂತಸಹಂಚಿಕೊಂಡರು.

ವ್ಯಕ್ತಿಯೊಬ್ಬನ ಸಾವನ್ನು (ಅವನು ಸಂತನಾಗಿರಲಿ - ಹಂತಕನಾಗಿರಲಿ, ನಕ್ಸಲನಾಗಿರಲಿ-ಪೋಲಿಸನಾಗಿರಲಿ, ರಾಜನಾಗಿರಲಿ - ರಾಜದ್ರೋಹಿಯಾಗಿರಲಿ) ಸಿಹಿ ತಿಂದು ಸಂಭ್ರಮಿಸುವುದಿದೆಯಲ್ಲ ಅದಕ್ಕಿಂತ ಅಮಾನವೀಯವಾದ್ದು ಬೇರೊಂದಿದೆ ಅಂತನ್ನಿಸುವುದಿಲ್ಲ. ಹಾಗಾದರೆ ಅಮಾಯಕರನ್ನು ಹತ್ಯೆಗೆಯ್ಯುತ್ತ,ಭಯೋತ್ಪಾದಕತೆಯ ಬೀಜಗಳನ್ನು ಭೂಮಿಯೆಲ್ಲೆಡೆ ಬಿತ್ತುತ್ತಿದ್ದ ಲಾಡೆನ್ನಿನ ಸಾವನ್ನು ನಾವು ಹೇಗೆ ಸ್ವೀಕರಿಸ ಬಹುದಿತ್ತು?

" ಅಬ್ಬಾ! ಇನ್ನು ಮೇಲಾದರು ಬಯೋತ್ಪಾದಕನೊಬ್ಬನ ಹಾಳಿ ನಿಂತು, ಜಗತ್ತಿನಲ್ಲಿ ಶಾಂತಿ ನೆಲೆಸಲಿ" ಎಂದು ಹಾರೈಸುತ್ತ ನಿರಾಳತೆಯ ನಿಟ್ಟುಸಿರು ಬಿಡಬಹುದಿತ್ತು.

ಇಲ್ಲಿ ಇನ್ನೊಂದು ವಿಷಯದತ್ತ ನೋಡೋಣ: ಹಾಗೆ ನೋಡಿದರೆ ಅಮೇರಿಕಾಕ್ಕೆ ಈ ಹತ್ಯೆ ವಿಷಯದಲ್ಲಿ ಸಂತೋಷ ಪಡುವ ಯಾವ ಅಧಿಕಾರವೂ ಇರಲಿಲ್ಲ! ಯಾಕೆಂದರೆ: ಆಧುನಿಕ ಜಗತ್ತಿನ ಮೊದಲ ಮತ್ತು ಅತಿ ದೊಡ್ಡ ಭಯೋತ್ಪಾದಕನೆಂದರೆ ಅದು ಸ್ವತ: ಅಮೇರಿಕಾ ಆಗಿದೆ.

ಎರಡನೇ ಮಹಾ ಯುದ್ದದಲ್ಲಿ ಸೋತು ಸುಣ್ಣವಾಗಿದ್ದ ಜಪಾನಿನ ಹಿರೋಷಿಮಾ ನಾಗಸಾಕಿಗಳ ಮೇಲೆ ಅಣು ಬಾಂಬುಗಳನ್ನು ಹಾಕಿ ಮಿಲಿಯನ್ ಗಟ್ಟಲೆ ಮುಗ್ದ ಜನರನ್ನು ಕ್ಷಣಾರ್ದದಲ್ಲಿ ಇನ್ನಿಲ್ಲವಾಗಿಸಿದ ಅಮೇರಿಕಾದ ಕೃತ್ಯ ಭಯೋತ್ಪಾದಕತೆಯಲ್ಲದಿದ್ದರೆ ಇನ್ಯಾವುದು? ಅರವತ್ತರ ದಶಕದಲ್ಲಿ ಅದು ವಿಯೆಟ್ನಾಂನಂತ ಪುಟ್ಟ ರಾಷ್ಟ್ರದ ಮೇಲೆ ನಡೆಸಿದ ದೌರ್ಜನ್ಯ,ಪ್ರಜಾಪ್ರಬುತ್ವ ಸ್ಥಾಪನೆಯ ಹೆಸರಲ್ಲಿ ಇರಾಕ್ ಮುಂತಾದ ದೇಶಗಳ ಮೇಲೆ ನಡೆಸಿದ ಯುದ್ದಗಳು ಅಮೇರಿಕಾದ ಕರಾಳ ಮುಖಕ್ಕೆ ಸಾಕ್ಷಿಯಾಗಿವೆ.ಸೋವಿಯತ್ ಯೂನಿಯನ್ ಹಿಡಿತದಿಂದ ಆಫ್ಗಘಾನಿಸ್ಥಾನವನ್ನು ಮುಕ್ತಗೊಳಿಸುವ ನೆಪದಲ್ಲಿಅಲ್ಲಿನ ಬುಡಕಟ್ಟು ಜನರಿಗೆಹಣ-ಆಯುಧಗಳನ್ನು ಪೂರೈಸುತ್ತ,ಅವರನ್ನು ಉಗ್ರಗಾಮಿಗಳನ್ನಾಗಿ ಮಾಡಿದ ಕುಖ್ಯಾತಿ ಅಮೇರಿಕಾದ್ದು. ಇಸ್ರೇಲ್ ಎಂಬ ರಾಜ್ಯವನ್ನು ರಾತ್ರೋರಾತ್ರಿ ಸೃಷ್ಠಿಸಿ,ಮದ್ಯಪ್ರಾಚ್ಯದಲ್ಲಿ ನಿರಂತರವಾಗಿ ರಕ್ತ ಹರಿಯುವಂತೆ ಮಾಡಿದ್ದು ಸಹ ಇದೇ ಅಮೇರಿಕ.

ಇಷ್ಟಲ್ಲದೆ ಇವತ್ತು ಲಾಡೆನ್ ಹತ್ಯೆ ಮಾಡಿ ತಾನೇನೋ ಮಹಾಸಾಧನೆ ಮಾಡಿದ್ದೇನೆಂದು ಬಿಂಬಿಸಿಕೊಳ್ಳುತ್ತಿರುವ ಅಮೇರಿಕಾ,ಬಿನ್ ಲಾಡೆನ್ ಅಂತಹ ಭಯೋತ್ಪಾದಕನನ್ನು ತಾನೇ ಸೃಷ್ಠಿಸಿದ ಭೂತವೆಂಬುದನ್ನು ಒಪ್ಪಿಕೊಳ್ಳಲು ಸಹ ತಯಾರಿಲ್ಲ.

ಇವೆಲ್ಲವನ್ನೂ ಅರ್ಥಮಾಡಿಕೊಳ್ಳಲಾಗದಷ್ಟು ಮುಗ್ದರೇನಲ್ಲ ಅಮೇರಿಕನ್ನರು.ಸಾಮ್ರಾಜ್ಯಶಾಹಿ ಮನೋಬಾವನೆಯ ಅವರಿಗೆ ತಮ್ಮ ದೇಶ ಮಾಡಿದ ನರಮೇಧಗಳ ಬಗ್ಗೆ ,ಅದು ಹುಟ್ಟು ಹಾಕಿದ ಬಯೋತ್ಪಾದಕತೆಯ ಬಗ್ಗೆ ನಾಚಿಕೆಯಾಗ ಬೇಕಿತ್ತೆ ಹೊರತು ಸಂಭ್ರಮಾಚರಣೆಯ ಅಗತ್ಯವಿರಲಿಲ್ಲ.
ಇನ್ನು ನಮ್ಮ ಶ್ರೀರಾಮ ಸೇನೆಯ ಮತ್ತು ಗೌರವಾನ್ವಿತ ಮಠಾಧೀಶರು ಸಂಭ್ರಮಿಸಿದ್ದರ ಹಿಂದೆ ಇರುವ ಮನಸ್ಥಿತಿಯಾದರು ಲಾಡೆನ್ ಒಬ್ಬ ಮುಸ್ಲಿಂ ಎಂಬುದೇ ಹೊರತು ಅವನೊಬ್ಬ ಜೀವ ವಿರೋಧಿ ಭಯೋತ್ಪಾಕ ಎಂದೇನು ಅಲ್ಲ.

ನಕ್ಸಲರ ನೆಲಬಾಂಬಿಗೆ ಬಲಿಯಾಗುವ ಪೋಲಿಸರ ಸಾವುಗಳಿಗೆ, ಪೋಲಿಸರ ಗುಂಡಿಗೆ ಬಲಿಯಾಗುವ ನಕ್ಸಲರ ಸಾವುಗಳಿಗೆ, ಮನುಷ್ಯರು ಸಂಭ್ರಮಿಸುತ್ತ ಹೋದರೆ ಮಾನವೀಯತೆ ಎಲ್ಲಿ ಉಳಿಯುತ್ತದೆ?

ಸಾವನ್ನು ಸಂಭ್ರಮಿಸುವ ಮನಸ್ಸುಗಳ ಹಿಂದಿರುವ ಕ್ರೌರ್ಯವನ್ನು ನೆನೆಸಿಕೊಂಡರೆ ನಾಳೆಗಳ ಬಗ್ಗೆ ಭಯವಾಗುತ್ತದೆ!

ಹುಟ್ಟಿನ ಮನೆಯಲ್ಲಿ ಅಳುವ-ಸಾವಿನ ಮನೆಯಲ್ಲಿ ನಗುವ ಮನುಷ್ಯನೊಳಗಿನ ರಾಕ್ಷಸತ್ವದ ಮುಂದೆ ಜಗತ್ತಿನೆಲ್ಲ ಆಯುಧಗಳೂ ಹರಿತವಾದವೇನಲ್ಲ ಅನಿಸುತ್ತಿದೆ. 

No comments:

Post a Comment