May 1, 2016

ಭಾರತ್ ಮಾತಾಕಿ ಜೈ, ಐ.ಪಿ.ಎಲ್ ಎಂಬ ದೇಶಪ್ರೇಮಿ ಚಟುವಟಿಕೆಗಳ ನಡುವೆ ಬರಗಾಲವೆಂಬ ಮಾರಿಹಬ್ಬ!

ಕು.ಸ.ಮಧುಸೂದನ ರಂಗೇನಹಳ್ಳಿ
01/05/2016 
ದೇಶಪ್ರೇಮವನ್ನು ಯಾರೂ
ಘೋಷಣೆ ಕೂಗಿ ಸಾಬೀತು ಪಡಿಸಬೇಕಿಲ್ಲ!
ಹೆರಿಗೆ ವಾರ್ಡಿನಲ್ಲಿ ಯಾರೂ ‘ಸ್ತ್ರೀಯರಿಗೆ ಮಾತ್ರ’
ಎಂದು ಬರೆಯಬೇಕಾಗಿಲ್ಲ!---
· ಜೀರ್ಮುಖಿ

ದೇಶಭಕ್ತಿಯನ್ನು ಸಾಬೀತು ಪಡಿಸಲು ಕೂಗಿ ಬೋಲೋ ‘ಭಾರತ್ ಮಾತಾಕಿ ಜೈ’ ಇದನ್ನು ಕೂಗದೇ ಇದ್ದವರ ಮೇಲೆ ದೇಶದ್ರೋಹದ ಕೇಸು ಹಾಕಬೇಕು. ಇಲ್ಲ,ತಲೆ ಕಡಿದರೂ ಇದನ್ನು ನಾವು ಕೂಗಲಾರೆವು, ಲೋಕಸಭಾ ಸದಸ್ಯನೊಬ್ಬ ಅಸಂಬದ್ದ ಪ್ರಲಾಪ!

ಐ.ಪಿ.ಎಲ್. ಕ್ರಿಕೇಟ್ ಪಂದ್ಯಗಳ ಯಶಸ್ಸಿಗೆ ಟೊಂಕ ಕಟ್ಟಿ ನಿಂತ ಬಿ.ಸಿ.ಸಿ.ಐ.ಮತ್ತು ಸರಕಾರಗಳು. ಒಂದು ಪಂದ್ಯಕ್ಕೆ ಲಕ್ಷಗಟ್ಟಲೆ ಕುಡಿಯುವ ನೀರಿನ ಬಳಕೆ. ಪಂದ್ಯಗಳನ್ನು ರದ್ದುಪಡಿಸಲು ಕೋರ್ಟ್ ಮಧ್ಯಪ್ರವೇಶ!

ಬರಗಾಲದ ಬಿಸಿಲ ಬೇಗೆಗೆ ಸತ್ತವರ ಸಂಖ್ಯೆ ಸಾವಿರಗಳನ್ನು ದಾಟುತ್ತಿದೆ! ಜನರಿಗೆ ಕುಡಿಯುವ ನೀರು ಒದಗಿಸಲು ಟ್ಯಾಂಕರುಗಳಲ್ಲಿ ನೀರು ಪೂರೈಕೆ ಮಾಡಲಾಗದೆ ಅಸಹಾಯಕ ಸ್ಥಿತಿಯಲ್ಲಿ ಕುಂತಿರುವ ಸರಕಾರಗಳು!

ಈ ಮೂರೂ ವಿಭಿನ್ನ ಸುದ್ದಿಗಳನ್ನೂ ಒಂದೇ ಸಮಯದಲ್ಲಿ ಓದುವ ಕೇಳುವ ಸೌಭಾಗ್ಯ, ನಾವು ಭಾರತೀಯರಿಗಲ್ಲದೆ ಬೇರ್ಯಾರಿಗೂ ದೊರೆಯುವ ಸಾದ್ಯತೆಯಿಲ್ಲ. ನಾವೇ ಧನ್ಯರು!!!

ಮೊದಲಿಗೆ ಭಾರತ ಮಾತೆಗೆ ಜೈಕಾರ ಹಾಕುವ ಬಗ್ಗೆ ನೋಡೋಣ. ಸ್ವಾತಂತ್ರ ಹೋರಾಟದ ಸಮಯದಲ್ಲಿ ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸಲು ಇಂತಹ ಘೋಷಣೆಗಳು ಅಗತ್ಯವಾಗಿದ್ದಿರಬಹುದು. ಇವತ್ತಿನ ಹಾಗೆ ಅವತ್ತು ಕೋಮುಗಳ ನಡುವಣ ಸಾಮರಸ್ಯ ಇಷ್ಟೊಂದು ಹದಗೆಟ್ಟಿರಲಿಲ್ಲ. ಹೀಗಾಗಿ ಅದನ್ನು ಕೂಗಲು ಯಾವ ಧರ್ಮದವರೂ ನಿರಾಕರಿಸಿರಲಿಲ್ಲ. ಮೊನ್ನೆ ಮೊನ್ನೆಯವರೆಗೂ ಅಂದರೆ 2014 ರಲ್ಲಿ ಬಾಜಪ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ತನಕ ಈ ಘೋಷಣೆಯನ್ನು ಸಹಜವಾಗಿಯೇ ಕೂಗಲಾಗುತ್ತಿತ್ತು. ಶಾಲೆ ಕಾಲೇಜುಗಳಲ್ಲಿ, ರಾಷ್ಟ್ರೀಯ ಹಬ್ಬದ ದಿನಗಳಂದು, ಬಹುತೇಕ ರಾಜಕೀಯ ಪಕ್ಷಗಳ ಸಮ್ಮೇಳನಗಳಲ್ಲಿ, ಮುಷ್ಕರಗಳಲ್ಲಿ, ಧರಣಿಗಳಲ್ಲಿ ಧರ್ಮಾತೀತರಾಗಿ ಜನ ಈ ಘೋಷಣೆ ಕೂಗುತ್ತಿದ್ದರು. ಯಾವೊಬ್ಬ ಕ್ರಿಶ್ಚಿಯನ್, ಸಿಕ್, ಮುಸ್ಲಿಮನೂ ನಾನಿದನ್ನು ಕೂಗಲಾರೆನೆಂದು ಹೇಳಿದ ಉದಾಹರಣೆಯಿರಲಿಲ್ಲ. ಯಾವಾಗ ಬಲಪಂಥೀಯ ಸಂಘಪರಿವಾರದ ವ್ಯಕ್ತಿಯೊಬ್ಬರು ಭಾರತ್ ಮಾತಾ ಕಿ ಜೈ ಎಂದು ಕೂಗುವುದು ದೇಶಭಕ್ತಿಯ ಪ್ರತೀಕ, ಮತ್ತದನ್ನು ಕೂಗಲು ಎಲ್ಲರನ್ನೂ ಪ್ರೇರೇಪಿಸುವುದು ಸಹ ದೇಶಭಕ್ತಿಯ ಒಂದು ಕರ್ತವ್ಯವೆಂದು ಹೇಳಿದರೊ ತಗೋ ಶುರುವಾಯಿತು ಪರ ವಿರೋಧದ ಹೇಳಿಕೆಗಳು. ಭಾರತ್ ಮಾತಾಕಿ ಜೈ ಎನ್ನದವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಮೊಕದ್ದಮೆ ಹೂಡುವಂತ ಕಾನೂನು ಜಾರಿಯಾಗಬೇಕೆಂದು ಕೆಲವರು ವಾದಿಸಿದರೆ, ನನ್ನ ಕತ್ತು ಕತ್ತರಿಸಿದರು ಅದನ್ನು ಕೂಗಲಾರೆನೆಂದು ಇನ್ನೊಬ್ಬ ಮತಿಗೆಟ್ಟ ರಾಜಕೀಯ ಮುಖಂಡ ಸವಾಲು ಹಾಕಿದ. ಹೀಗೆ ಇಡೀ ದೇಶದಾದ್ಯಂತ ದೇಶಭಕ್ತಿ ಎಂದರೇನು ಎನ್ನುವ ಬಗ್ಗೆ ಚರ್ಚೆಯೊಂದು ಶುರುವಾಯಿತು. ಬಲಪಂಥೀಯರು ಎಡಪಂಥೀಯರು ತಮ್ಮ ತಮ್ಮ ಅನಿಸಿಕೆಗಳನ್ನು ಹೇಳ ತೊಡಗಿದರು. ಎಲ್ಲರೂ ಅವರವರಿಗೆ ತೋಚಿದ ರೀತಿಯಲ್ಲಿ ಅರ್ಥೈಸುತ್ತ ನನ್ನಂತವರಿಗೆ ಗೊಂದಲ ಉಂಟು ಮಾಡಿದರು.

ಇಂತಹ ಚರ್ಚೆಗಳು ನಡೆಯುತ್ತಿರುವಾಗಲೇ ದೇಶಕ್ಕೆ ಬರಗಾಲ ಬಂದೆರಗಿದ್ದನ್ನು ಯಾರೂ ಗಮನಿಸಲೇ ಇಲ್ಲ. ಯಾಕೆಂದರೆ ಹೀಗೆ ದೇಶಭಕ್ತಿಯನ್ನು ವ್ಯಾಖ್ಯಾನ ಮಾಡಲು ಹೊರಟವರಿಗೆ, ಆ ಚರ್ಚೆಯ ಕಾವಿನಲ್ಲಿ ಬೇಸಿಗೆಯ ಬೇಗೆ ಅರಿವಾಗಲೇ ಇಲ್ಲ. ಇದು ಅರ್ಥವಾಗುವಷ್ಟರಲ್ಲಿ ಏಪ್ರಿಲ್ ತಿಂಗಳು ಶುರುವಾಗಿ ಇಡೀ ದೇಶದಲ್ಲಿ ಬರಗಾಲ ತಾಂಡವವಾಡುತ್ತ ಜನರಿಗೆ ಕುಡಿಯಲು ನೀರೂ ಸಿಗದ ಬೀಕರ ಪರಿಸ್ಥಿತಿ ಬಂದೊದಗಿತ್ತು.

ದೇಶದ 330 ಬಿಲಿಯನ್ ಜನರು ಈ ಬರದ ಬೇಗೆಗೆ ಸಿಲುಕಿದ್ದು, ಹಗಲಿನ ಉಷ್ಣಾಂಶ ಅಂದಾಜು 40 ಡಿಗ್ರಿಗಳನ್ನೂದಾಟಿ ಜನ ಬಿಸಿಲಿನ ಹೊಡೆತಕ್ಕೆ ಸಾಯುತ್ತಿದ್ದಾರೆಂದು ಬಹುತೇಕ ರಾಜ್ಯ ಮತ್ತು ಕೇಂದ್ರ ಸರಕಾರಗಳೇ ಅಧಿಕೃತವಾಗಿ ಹೇಳಬೇಕಾಯಿತು. ಜನರಿಗೆ ಕುಡಿಯುವ ನೀರನ್ನು ರಾಜ್ಯದಿಂದ ರಾಜ್ಯಕ್ಕೆ ಸಾಗಿಸಲು ರೈಲ್ವೇ ವ್ಯಾಗನ್ನುಗಳನ್ನು ಬಳಸಕೊಳ್ಳಬೇಕಾಯಿತು. ಬರ ಅದ್ಯಯನ ಮಾಡಿದ್ದೇವೆ ಎಂದು ಹೇಳಿಕೊಂಡ ಹಲವು ರಾಜ್ಯಸರಕಾರಗಳು ಕೇಂದ್ರಕ್ಕೆ ಪರಿಹಾರ ನೀಡುವಂತೆ ಪತ್ರ ಬರೆದು ಮೊರೆಯಿಟ್ಟವು. ಕೇಂದ್ರವೊ ರಾಜ್ಯಗಳು ಕೇಳಿದ್ದರಲ್ಲಿ ಅರ್ದದಷ್ಟನ್ನು ದಾನವೇನೊ ಎಂಬಂತೆ ನೀಡಿತು.. ಆಡಳಿತ ಪಕ್ಷದ ಸರಕಾರಗಳಿಗೆ ಹೆಚ್ಚು ಪರಿಹಾರ ನೀಡಿ ವಿರೋಧ ಪಕ್ಷಗಳ ಸರಕಾರಗಳ ರಾಜ್ಯಗಳಿಗೆ ಕಡಿಮೆ ಪರಿಹಾರ ನೀಡಿ ಮಲತಾಯಿ ಧೋರಣೆ ಅನುಸರಿಸಿದೆಯೆಂದು ಕೇಂದ್ರ ಸರಕಾರದ ಮೇಲೆ ಆರೋಪ ಮಾಡಲಾಯಿತು. ಇಲ್ಲ ಇಲ್ಲ ನಾವು ಕೊಟ್ಟ ಪರಿಹಾರವನ್ನೇ ಸರಿಯಾಗಿ, ಪೂರ್ಣವಾಗಿ ರಾಜ್ಯಗಳು ಬಳಸಿಕೊಂಡಿಲ್ಲವೆಂದು ಕೇಂದ್ರ ಉತ್ತರ ನೀಡಿತು. ಇವೆರಡರ ಕಿತ್ತಾಟಗಳ ನಡುವೆ ಬರದಿಂದ ತತ್ತರಿಸುತ್ತಿದ್ದ ಜನತೆ ಪರಿಹಾರ ಇವತ್ತು ದೊರಯಬಹುದು ನಾಳೆ ದೊರೆಯಬಹುದೆಂದು, ಮುಖಮುಖ ನೋಡುತ್ತಾ ಕಾಯುತ್ತಾಕೂತಿದ್ದಾರೆ ಮೂರ್ಖರಂತೆ! ಹೀಗೆ ಜನ ಸಹಾಯಹಸ್ತದ ನಿರೀಕ್ಷೆಯಲ್ಲಿರುವಾಗಲೇ ದೇಶಭಕ್ತಿ ಪ್ರದರ್ಶಿಸಲು ಜನರಿಗೆ ಮತ್ತೊಂದು ಅವಕಾಶ ದೊರೆಯುವ ವಿಶೇಷವೂ ಬಂತು.

ಅದು ದೇಶವಿದೇಶದ ಪ್ರಖ್ಯಾತ ಆಟಗಾರರನ್ನೊಳಗೊಂಡ ಎಂಟು ಕ್ರಿಕೇಟ್‍ ತಂಡಗಳು ಪರಸ್ಪರ ಸೆಣೆಸಲಿರುವ ಇಂಡಿಯನ್ ಪ್ರೀಮೀಯರ್ ಲೀಗ್(ಐ.ಪಿ.ಎಲ್.) ಈ ಪಂದ್ಯಗಳನ್ನು ಹಾಗೇ ಸುಮ್ಮನೇ ಬರಿ ನೆಲದಲ್ಲಿ ಆಡಲಾಗುವುದಿಲ್ಲ ಕೆಳಗೆ ಬಿದ್ದರೆ ಕೈಕಾಲು ಮುರಿದುಕೊಳ್ಳಲು ಆಟಗಾರರೇನು ರೈತರೆ! ಸರಿ, ಕ್ರಿಕೇಟ್ ಮೈದಾನಗಳಲ್ಲಿ ಬೆಳೆಸಿರುವ ಹಸಿರು ಹುಲ್ಲನ್ನು ಕಾಪಾಡಿಕೊಳ್ಳಬೇಕು, ಅದಕ್ಕಾಗಿ ಮುಂಗಾರು ಮಳೆಗಾಗಿ ಕಾಯಲಿಕ್ಕಾಗುತ್ತದೆಯೇ? ಹೇಗಿದ್ದರೂ ಖ್ಯಾತ ನಗರಗಳಲ್ಲಿ ನೀರು ಸರಬರಾಜು ಮಾಡುವ ಕೇಂದ್ರಗಳಿವೆಯಲ್ಲ, ಅದರಿಂದ ಒಂದಷ್ಟು ಲಕ್ಷ ಲೀಟರು ನೀರು ಬಳಸಿಕೊಂಡರಾಯಿತೆಂದು ಕೊಂಡ ಕ್ರಿಕೇಟ್ ಸಂಸ್ಥೆಗಳು ಕೆಲಸ ಶುರು ಹಚ್ಚಿಕೊಂಡವು. ಜನರಿಗೆ ಕುಡಿಯಲು ನೀರಿಲ್ಲವೆಂದ ಮಾತ್ರಕ್ಕೆ ದೇಶಭಕ್ತಿಯ ಆಟವನ್ನು ಆಡದೇ ನಿಲ್ಲಿಸಲಾಗುತ್ತದೆಯೇ? ದೇಶದ ಎಂಟು ಉದ್ಯಮಿಗಳು ಸಾವಿರಾರು ಕೋಟಿ ರೂಪಾಯಿಗಳನ್ನು ಬಂಡವಾಳವನ್ನಾಗಿ ಹೂಡಿ ತಂಡಗಳನ್ನು, ಆಟಗಾರರರನ್ನು ಖರೀದಿಸಿಲ್ಲವೇ? ಅವರಿಗಾಗುವ ನಷ್ಟವನ್ನು ಭರಿಸಿ ಕೊಡುವವರು ಯಾರು?

ತಲೆಕೆಟ್ಟ ದೇಶದ್ರೋಹಿಯೊಬ್ಬ ಮಹರಾಷ್ಟ್ರದ ಕೋರ್ಟಿಗೆ ಈ ಬಗ್ಗೆ ಅಂದರೆ ನೀರನ್ನು ಮೈದಾನಕ್ಕೆ ಬಳಸಿಕೊಳ್ಳುವ ಬಗ್ಗೆ ಮೊಕದ್ದಮೆ ಹೂಡಿದ!. ಪಾಪದ ನ್ಯಾಯಾಧೀಶರಿಗೂ ದೇಶಪ್ರೇಮದ ಅರಿವಿಲ್ಲವೆನಿಸುತ್ತೆ, ಸರಿ, ಮಹಾರಾಷ್ಟ್ರದಲ್ಲಿ ನಡೆಯುವ ಪಂದ್ಯಗಳನ್ನು ಬೇರೇ ರಾಜ್ಯಗಳಿಗೆ ವರ್ಗಾಯಿಸುವಂತೆ ಆದೇಶಿಸಿಬಿಟ್ಟರು.. ಸರಿ ಕ್ರಿಕೇಟ್ ಮಂಡಳಿ ಅಕ್ಕಪಕ್ಕದ ರಾಜ್ಯಗಳ ಮಂಡಳಿಗಳ ಜೊತೆ ಮಾತಾಡಿ ಪಂದ್ಯ ನಡೆಸಲು ಕೋರಿಕೊಂಡಿತು, ಇದಕ್ಕೆ ಕಾದಿದ್ದವರಂತೆ ಅವೂ ಸಹ ನಮಗೆ ಇನ್ನಷ್ಟು ಲಾಭ ಬರಲೆಂದು ಒಪ್ಪಿಕೊಂಡವು. ಹೀಗಾಗಿ ಕರ್ನಾಟಕದ ಬೆಂಗಳೂರಿಗೂ ಇನ್ನಷ್ಟು ಪಂದ್ಯಗಳು ದೊರಕಿದಂತಾಗಿ ಕಾವೇರಿ ತಾಯಿಗೆ ಆನಂದವಾಯಿತು. ಕರ್ನಾಟಕದಲ್ಲೂ ಬರವಿದೆಯೆಲ್ಲ, ಇಲ್ಲಿ ನೀರು ಪೋಲಾಗುವುದಿಲ್ಲವ ಅಂತ ಯಾವನೊ ತಲೆಮಾಸಿದವ ಕೇಳಿದ್ದಕ್ಕೆ, ವಿಶ್ವಕನ್ನಡ ಸಮ್ಮೇಳನದ ಸಮಯದಲ್ಲಿ ಸನ್ಮಾನ್ಯ ಶಿವರಾಮ ಕಾರಂತರು ಬರ ಇದೆಯೆಂದು ನೀವು ಮಸಾಲೆ ದೋಸೆ ತಿನ್ನೋದನ್ನು ಬಿಡ್ತೀರೇನ್ರಿ ಅಂತ ಕೇಳಿದ್ದನ್ನು ನೆನಪು ಮಾಡಿದ ಮಹಾನುಭಾವರೊಬ್ಬರು ಮತ್ತೆ ಸಿಗದಂತೆ ಮಾಯವಾದರು.

ಇದೀಗ ಮಹಾನ್ ದೇಶದ ದೇಶಪ್ರೇಮಿ ಪ್ರಜೆಗಳಿಗೆ ಎರಡೆರಡು ಸ್ಕೋರ್ ನೋಡುವ ಅವಕಾಶ ಲಭ್ಯವಾಗಿದೆ. ಒಂದು ಬರದಿಂದ ತತ್ತರಿಸಿರುವ ಹಳ್ಳಿಗಳ ಸಂಖ್ಯೆ ಮತ್ತು ಬಿಸಿಲಿಗೆಸಾವಿಗೀಡಾದವರ ಅಂಕಿಸಂಖ್ಯೆಯಾದರೆ, ಇನ್ನೊಂದು ಐ.ಪಿ.ಎಲ್. ನಲ್ಲಿ ವಿರಾಟ್ ಕೋಹ್ಲಿ ಹೊಡೆದ ಬೌಂಡರಿ ಸಿಕ್ಸರ್‍ಗಳ ಅಂಕಿಸಂಖ್ಯೆ. ಹೀಗೆ ಎರಡನ್ನು ನೋಡುತ್ತಾ ಕುಳಿತ ದೇಶ ಪ್ರೇಮಿಗಳ ದೇಶಭಕ್ತಿಗೆ ಮೆಚ್ಚಿದ ಸರಕಾರಗಳು ಮತ್ತಿನ್ಯಾವ ಭಾಗ್ಯಗಳನ್ನು ದಯಪಾಲಿಸುತ್ತವೆಯೊ ಕಾದು ನೋಡಬೇಕಿದೆ.

ಇದೀಗ ಬಂದ ಬ್ರೇಕಿಂಗ್ ನ್ಯೂಸ್:

ಬೆಂಗಳೂರು ತಂಡದ ದೇಶಪ್ರೇಮಿ ಆಟಗಾರ ವಿರಾಟ್ ಕೋಹ್ಲಿಯವರು ಬೆಳೆನಾಶದಿಂದ ಸತ್ತ ರೈತರ ಒಟ್ಟು ಸಂಖ್ಯೆಯನ್ನು ದಾಟುವ ಎಲ್ಲ ಲಕ್ಷಣಗಳನ್ನೂ ತೋರಿಸುತ್ತಿದ್ದಾರೆ. ಈಗ ಐದು ಪಂದ್ಯಗಳಿಂದ ಅವರು 367 ರನ್ ಹೊಡೆದಿದ್ದಾರೆ. ಲಂಡನ್ನಿನಲ್ಲಿರುವ ಅದರ ಮಾಲೀಕರಾದ ಶ್ರೀ ವಿಜಯ ಮಲ್ಯರವರು ಕೋಹ್ಲಿಯವರನ್ನು ಅಭಿನಂದಿಸಲು ಕೊಹ್ಲಿಯವರನ್ನೇ ಲಂಡನ್ನಿಗೆ ಆಹ್ವಾನಿಸಿರುವ ಬಗ್ಗೆ ನಮ್ಮ ವರದಿಗಾರರು ಅಧಿಕೃತ ಮಾಹಿತಿ ತಂದಿದ್ದಾರೆ

ಬೋಲೋ ಭಾರತ್ ಮಾತಾಕಿ ಜೈ
ಬೋಲೋ ವಿರಾಟ್ ಕೊಹ್ಲಿಕಿ ಜೈ!
ಬೋಲೋ ಬರಗಾಲಾಕಿ ಜೈ!

No comments:

Post a Comment