Mar 3, 2016

ಕನ್ಹಯ್ಯನಿಗೆ ಜಾಮೀನು ಕೊಟ್ಟ ಹೈಕೋರ್ಟ್ ಹೇಳಿದ್ದೇನು?

ಡಾ. ಅಶೋಕ್.ಕೆ.ಆರ್
03/03/2016
ದಿನದಿನಕ್ಕೂ ಹೊಸ ತಿರುವು ಪಡೆಯುತ್ತಲೇ ಇದ್ದ ಕನ್ಹಯ್ಯ ಬಂಧನ ಪ್ರಕರಣ ಒಂದು ಹಂತಕ್ಕೆ ಬಂದು ನಿಂತಿದೆ. ‘ದೇಶದ್ರೋಹ’ದ ಆರೋಪ ಎದುರಿಸುತ್ತಿದ್ದ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರನಿಗೆ ಹೈಕೋರ್ಟ್ ಆರು ತಿಂಗಳ ಜಾಮೀನು ನೀಡಿದೆ. ಬಡತನದ ಕುಟುಂಬದಿಂದ ಬಂದವನೆಂಬ ಕಾರಣದಿಂದ ಹತ್ತು ಸಾವಿರ ರುಪಾಯಿಗಳ ವೈಯಕ್ತಿಕ ಬಾಂಡ್ ಕಟ್ಟಲು ಸೂಚಿಸಿದೆ. ಕನ್ಹಯ್ಯನೇ ದೇಶದ್ರೋಹಿ ಘೋಷಣೆಗಳು ಕೂಗಿದನೆಂಬ ವೀಡಿಯೋಗಳು ಮೊದಲೆರಡು ದಿನ ಹರಿದಾಡಿದವು, ವಾಹಿನಿಗಳಲ್ಲೂ ಅದೇ ಪ್ರಸಾರವಾಯಿತು. ಕನ್ಹಯ್ಯನ ಪರವಾಗಿ ಮಾತನಾಡಿದವರಿಗೆಲ್ಲ ‘ದೇಶದ್ರೋಹಿ’ ಸರ್ಟಿಫಿಕೇಟುಗಳನ್ನು ಹಂಚುವಲ್ಲಿ ‘ದೇಶಪ್ರೇಮಿ’ಗಳು ಬ್ಯುಸಿಯಾಗಿಬಿಟ್ಟರು. ನಂತರದ ದಿನಗಳಲ್ಲಿ ಘೋಷಣೆ ಕೂಗಿದ್ದು ಎಬಿವಿಪಿಯವರು ಎಂದರು, ಇಲ್ಲ ಘೋಷಣೆ ಕೂಗಿದ್ದು ಕಾಶ್ಮೀರಿಗಳು ಎಂದರು. ಕನ್ಹಯ್ಯನ ವೀಡಿಯೋ ನಕಲಿ, ಅವನು ಮನುವಾದದ ವಿರುದ್ಧ ಬ್ರಾಹ್ಮಣವಾದದ ವಿರುದ್ಧ ಬಡತನದ ವಿರುದ್ಧ ಜಾತೀಯತೆಯ ವಿರುದ್ಧ ಕೂಗಿದ್ದ ಘೋಷಣೆಗಳ ವೀಡಿಯೋದ ಧ್ವನಿ ಬದಲಿಸಿ ದೇಶದ್ರೋಹಿಯಾಗಿ ಬಿಂಬಿಸಲು ಝೀ ನ್ಯೂಸಿನಂತಹ ಕೆಲವು ಮಾಧ್ಯಮಗಳು ನಡೆಸಿದ್ದ ಪ್ರಯತ್ನವನ್ನು ಇಂಡಿಯಾ ಟುಡೇ ಬಯಲಿಗೆಳೆಯಿತು. ಫೊರೆನ್ಸಿಕ್ ವರದಿಗಳು ಕೂಡ ಏಳು ವೀಡಿಯೋಗಳಲ್ಲಿ ಎರಡು ನಕಲಿ ಎಂದ್ಹೇಳಿತು. ಝೀ ನ್ಯೂಸಿನ ವರದಿಗಾರ ಘಟನೆ ನಡೆಯುವ ಒಂದು ಘಂಟೆ ಮೊದಲೇ ಎಬಿವಿಪಿ ಮುಖಂಡನ ಆಹ್ವಾನದ ಮೇರೆಗೆ ಜೆ.ಎನ್.ಯು ಒಳಗೆ ಹೋಗಿದ್ದರು ಎಂಬಂಶ ಜೆ.ಎನ್.ಯು entry bookನಿಂದ ಪತ್ತೆಯಾಯಿತು. ಹಿಂಗೆ ದಿನಕ್ಕೊಂದು ತಿರುವು ಪಡೆಯುತ್ತಿದ್ದ, ‘ದೇಶದ್ರೋಹ’ದ ಕೆಲಸವನ್ನು ಕನ್ಹಯ್ಯ ಮಾಡಿದ್ದನೇ ಇಲ್ಲವೇ ಎಂಬ ಗೊಂದಲಗಳು ಚಾಲ್ತಿಯಲ್ಲಿರುವಾಗಲೇ ಹೈಕೋರ್ಟ್ ಕನ್ಹಯ್ಯನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ನಮ್ಮ ಚರ್ಚೆಗಳು ವಾದಗಳು ಏನೇ ಇರಲಿ ನ್ಯಾಯಾಲಯ ಕನ್ಹಯ್ಯನ ಬಿಡುಗಡೆಯ ಸಂದರ್ಭದಲ್ಲಿ ಹೇಳಿದ ಪ್ರಮುಖ ಅಂಶಗಳೇನು ಎನ್ನುವುದನ್ನು ನೋಡೋಣ.

ಎಫ್ ಐ ಆರಿನ ಪ್ರಕಾರವೇ ಜೆ.ಎನ್.ಯುನಲ್ಲಿ ದೇಶವಿರೋಧಿ ಹೇಳಿಕೆಗಳನ್ನು ಕೂಗಿದರೆನ್ನಲಾದ ದಿನ ಯಾವುದೇ ರೀತಿಯ ಹಿಂಸೆ ನಡೆದಿಲ್ಲ. ಕನ್ಹಯ್ಯ ಕುಮಾರ್ ತನಿಖೆಗೆ ಪೂರ್ಣ ಸಹಕರಿಸಿದ್ದಾನೆ, ಸದ್ಯಕ್ಕೆ ಈ ಪ್ರಕರಣದ ತನಿಖೆಗೆ ಅವನ ಅವಶ್ಯಕತೆಯಿಲ್ಲ ಎಂದು ಕನ್ಹಯ್ಯನ ಪರ ವಕೀಲರಾದ ಕಪಿಲ್ ಸಿಬಲ್ ವಾದಿಸಿದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದ ಕನ್ಹಯ್ಯನ ಮೇಲೆ ಆರೋಪ ಹೊರಿಸಲಾಗಿದೆ. ದಿನಾಂಕ 11ರಂದು (ಘಟನೆ ನಡೆದ ಎರಡು ದಿನಗಳ ನಂತರ) ಮಾಡಿದ ಭಾಷಣದಲ್ಲಿ ಕನ್ಹಯ್ಯಕುಮಾರ್ ದೇಶದ ಸಂವಿಧಾನದ ಪರವಾಗಿ ಮಾತನಾಡಿದ್ದಾನೆ. ಕಾರ್ಯಕ್ರಮದ ಆಯೋಜನೆಯಲ್ಲಿ ಕನ್ಹಯ್ಯನ ಪಾತ್ರವಿರಲಿಲ್ಲ, ಆ ಕಾರ್ಯಕ್ರಮದ ಪೋಸ್ಟರುಗಳಲ್ಲಿ ಕನ್ಹಯ್ಯನ ಹೆಸರಿರಲಿಲ್ಲ. ಕನ್ಹಯ್ಯನಿಗೂ ಅವತ್ತಿನ ಘಟನೆಗೂ ಯಾವುದೇ ರೀತಿಯ ಸಂಬಂಧವೂ ಇರಲಿಲ್ಲ. ಝೀ ವಾಹಿನಿ ಹತ್ತನೇ ಫೆಬ್ರವರಿಯಂದು ಪ್ರಸಾರ ಮಾಡಿದ ವೀಡಿಯೋದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳಿದ್ದವು. ಆದರೆ ಅದನ್ನೇ ಆಧಾರವಾಗಿಟ್ಟುಕೊಂಡು ಪ್ರಕರಣ ದಾಖಲಿಸಿದ ಪೋಲೀಸರ ಎಫ್.ಐ.ಆರಿನಲ್ಲಿ ನಮೂದಾಗಿರುವ ಮೂವತ್ತು ಘೋಷಣೆಗಳಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಯೇ ಇಲ್ಲ! ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಬಹುದೆಂಬ ಕಾರಣದಿಂದ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ ಕನ್ಹಯ್ಯ ಗಲಭೆ ತಪ್ಪಿಸುವ ಸಲುವಾಗಿ ಘಟನಾ ಸ್ಥಳಕ್ಕೆ ಹೋಗಿ ಪರಿಸ್ಥಿತಿ ಶಾಂತವಾದ ಮೇಲೆ ವಾಪಸ್ಸಾದ. ಮತ್ತು ದಿನಾಂಕ 11ರಂದು ಕನ್ಹಯ್ಯ ಮಾಡಿದ ಭಾಷಣ ದೇಶದ ಸಂವಿಧಾನ ಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಧಿಯೊಳಗೇ ಇತ್ತು, ಅದನ್ನು ದೇಶದ್ರೋಹವೆಂದು ಕರೆಯಲು ಬರುವುದಿಲ್ಲವೆಂಬುದು ಕನ್ಹಯ್ಯ ಪರ ವಕೀಲರ ವಾದವಾಗಿತ್ತು.

ಇನ್ನು ಸರಕಾರವನ್ನು ಪ್ರತಿನಿಧಿಸುತ್ತಿದ್ದ ವಕೀಲರಾದ ತುಷಾರ್ ಮೆಹ್ತಾ ದಿನಾಂಕ 9ರಂದು ಎರಡು ಗುಂಪುಗಳ ನಡುವೆ ಘರ್ಷಣೆ, ಸಣ್ಣಪುಟ್ಟ ತಳ್ಳಾಟ ಮತ್ತು ಘೋಷಣೆಗಳು ನಡೆದವು. ಪೋಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಣ್ಣಗಾದ ನಂತರ ಎಲ್ಲರೂ ವಾಪಸ್ಸಾದರು ಎಂದು ತಿಳಿಸಿದರು. ಝೀ ವಾಹಿನಿ ಪ್ರಸಾರ ಮಾಡಿದ ವೀಡೀಯೋವನ್ನು ಪಡೆದ ನಂತರ ಪೋಲೀಸರು ಎಫ್.ಐ.ಆರ್ ದಾಖಲಿಸಿದರು (ಈಗ ಆ ವೀಡಿಯೋದ ಅಸಲಿಯತ್ತೇ ಪ್ರಶ್ನಾರ್ಹವಾಗಿಬಿಟ್ಟಿದೆ!). ಅಫ್ಜಲ್ ಗುರು ಮತ್ತು ಮಕ್ಬೂಲ್ ಭಟ್ ನ ಫೋಟೋಗಳನ್ನು ಹಿಡಿದುಕೊಂಡಿದ್ದ ಕೆಲವು ವಿದ್ಯಾರ್ಥಿಗಳು ಅವರ ಪರವಾಗಿ ಘೋಷಣೆ ಕೂಗುತ್ತಿದ್ದರು ಎಂಬಂಶವನ್ನು ತಿಳಿಸಿದರು. ಕಾರ್ಯಕ್ರಮಕ್ಕೆ ಕೊಟ್ಟ ಅನುಮತಿಯನ್ನು ಜೆ.ಎನ್.ಯು ವಾಪಸ್ಸು ತೆಗೆದುಕೊಂಡದ್ದರ ಬಗ್ಗೆ ಕನ್ಹಯ್ಯ ಕುಮಾರ್ ಅಸಂತೋಷ ವ್ಯಕ್ತಪಡಿಸಿದ್ದರ ಬಗ್ಗೆ ಸಾಕ್ಷಿದಾರರು ಹೇಳಿದ್ದನ್ನು ನ್ಯಾಯಾಲಯದ ಗಮನಕ್ಕೆ ತಂದರು ತುಷಾರ್ ಮೆಹ್ತಾ. ತುಷಾರ್ ಮೆಹ್ತಾರ ಪ್ರಕಾರ ದಿನಾಂಕ 11ರಂದು ಕನ್ಹಯ್ಯ ಮಾಡಿದ ಭಾಷಣ ಘಟನೆ ನಡೆದ ನಂತರ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಡೆಸಿದ ಯೋಜನೆಯ ಭಾಗವಾಗಿತ್ತು. ವೀಡಿಯೋದ ಜೊತೆಗೆ ಸಾಕ್ಷಿಗಳ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ಮತ್ತು ಗಂಭೀರ ಕಾಯಿದೆಗಳಡಿಯಲ್ಲಿ ಕನ್ಹಯ್ಯನನ್ನು ಬಂಧಿಸಿರುವುದರಿಂದ ಆತನಿಗೆ ಜಾಮೀನು ಕೊಡಬಾರದೆಂಬುದು ಸರಕಾರೀ ವಕೀಲರ ವಾದವಾಗಿತ್ತು.

ವಾದ ಪ್ರತಿವಾದಗಳನ್ನೆಲ್ಲವನ್ನೂ ಆಲಿಸಿದ ನ್ಯಾಯಾಲಯ ಘಟನೆ ನಡೆದ ದಿನ ಕನ್ಹಯ್ಯ ಅದೇ ಜಾಗದಲ್ಲಿದ್ದುದನ್ನು ಯಾರೂ ನಿರಾಕರಿಸುತ್ತಿಲ್ಲ, ಆದರಾತ ಇದ್ದದ್ದು ಸಂಭವನೀಯ ಗಲಭೆ ನಡೆಯದಂತೆ ನೋಡಿಕೊಳ್ಳಲೇ ಹೊರತು ದೇಶವಿರೋಧಿ ಘೋಷಣೆ ಕೂಗಲಲ್ಲ. ಅಫ್ಝಲ್ ಗುರು, ಮಕ್ಬೂಲ್ ಭಟ್ ನ ಪರವಾಗಿ ಘೋಷಣೆ ಕೂಗಿದ್ದು, ಭಾರತವನ್ನು ವಿಭಜಿಸುವ ಘೋಷಣೆ ಕೂಗಿದ್ದೆಲ್ಲವೂ ಎಫ್.ಐ.ಆರ್ ನಲ್ಲಿ ದಾಖಲಾಗಿದೆ. ಆ ದಿನ ಕನ್ಹಯ್ಯ ಅದೇ ಜಾಗದಲ್ಲಿದ್ದ ಎನ್ನುವುದಕ್ಕೆ ಫೋಟೋ ದಾಖಲೆಗಳಿವೆ. ಆದರೆ ಸರಕಾರೀ ವಕೀಲರು ಕೂಡ ಅವತ್ತಿನ ವೀಡಿಯೋದಲ್ಲಿ ಕನ್ಹಯ್ಯಕುಮಾರ್ ದೇಶವಿರೋಧಿ ಘೋಷಣೆ ಕೂಗಿಲ್ಲ ಎಂಬಂಶದ ಬಗ್ಗೆ ತಕರಾರು ಎತ್ತಿಲ್ಲ. ಸ್ವತಂತ್ರ ಸಾಕ್ಷಿಗಳು ಆತನೂ ಅದರಲ್ಲಿ ಭಾಗವಹಿಸಿದ್ದ ಎಂದಿದ್ದಾರೆ, ಅದರ ಬಗ್ಗೆ ತನಿಖೆಯಾಗಬೇಕಷ್ಟೇ. ಇನ್ನು ದಿನಾಂಕ ಹನ್ನೊಂದರಂದು ಕನ್ಹಯ್ಯ ಕುಮಾರ್ ಮಾಡಿದ ಭಾಷಣ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೂಡಿದ ಯೋಜನೆಯಾಗಿತ್ತು ಎನ್ನುವುದನ್ನು ಈ ಸಂದರ್ಭದಲ್ಲಿ ನ್ಯಾಯಾಲಯ ಪರೀಕ್ಷಿಸಲು ಸಾಧ್ಯವಾಗುವುದಿಲ್ಲ. ತನಿಖೆ ಪೂರ್ಣವಾದ ಮೇಲಷ್ಟೇ ಕನ್ಹಯ್ಯ ಕುಮಾರನ ಮೇಲಿನ ದೇಶದ್ರೋಹದ ಆರೋಪ ಸರಿಯೋ ತಪ್ಪೋ ಎಂದು ನಿರ್ಧರಿತವಾಗುವುದು. ತನಿಖೆ ಈಗಷ್ಟೇ ಪ್ರಾರಂಭವಾಗಿದೆ, ವಿಡೀಯೋ ಆಧಾರಗಳು ಕನ್ಹಯ್ಯ ಘಟನಾ ಸ್ಥಳದಲ್ಲಿದ್ದ ಎನ್ನುತ್ತಿವೆ, ಗಂಭೀರ ಆಪಾದನೆ ಆತನ ಮೇಲಿದೆ, ಇದರ ಮೇಲೆ ಆತನನ್ನು ಜೈಲಿನಲ್ಲಿಡುವುದೇ ಸೂಕ್ತವೆಂಬ ಭಾವನೆ ಬರುತ್ತದೆ. ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿರುವ ಕಾರಣ ಕ್ಯಾಂಪಸ್ಸಿನಲ್ಲಿ ನಡೆಯುವ ಘಟನೆಗಳಿಗೆ ಕನ್ಹಯ್ಯ ಜವಾಬ್ದಾರಿಯಾಗುತ್ತಾನೆ. ಸಂವಿಧಾನದ ಚೌಕಟ್ಟಿನೊಳಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಪ್ರತಿಯೊಬ್ಬರೂ ತಮ್ಮ ಇಷ್ಟಾನಿಷ್ಟದ ಸಿದ್ಧಾಂತವನ್ನು ಸಂವಿಧಾನದ ಚೌಕಟ್ಟಿನೊಳಗೆ ಪಾಲಿಸಲು ಸ್ವತಂತ್ರರು. ಈ ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿದಿರುವುದು ನಮ್ಮ ಗಡಿಗಳಲ್ಲಿ ಸೈನಿಕರು ಮಳೆ ಚಳಿ ಹಿಮವೆನ್ನದೆ ಕಾಯುತ್ತಿರುವ ಕಾರಣದಿಂದ ಎನ್ನುವುದನ್ನು ಮರೆಯದಿರೋಣ. ಅಫ್ಜಲ್ ಗುರು, ಮಕ್ಬೂಲ್ ಭಟ್ ಪರವಾಗಿ ಕೂಗುವ ಘೋಷಣೆಗಳು, ದೇಶವಿರೋಧಿ ಕೂಗುಗಳು ದೇಶದ ಸಮಗ್ರತೆಗೆ ಅಪಾಯ ತರುತ್ತವೆಂದು ಹೇಳಿದ ನ್ಯಾಯಾಧೀಶರು ಇಂತಹ ಕೂಗುಗಳು ನಮ್ಮನ್ನು ಕಾಯುವ ಸಲುವಾಗಿ ಹುತಾತ್ಮರಾದವರ ಕುಟುಂಬಗಳಲ್ಲಿ ಮೂಡಿಸುವ ಭಾವನೆಗಳೇನು ಎನ್ನುವುದರ ಕುರಿತು ಕಳವಳ ವ್ಯಕ್ತಪಡಿಸಿದರು. ಸಂವಿಧಾನ ಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳಿರುವ ಕನ್ಹಯ್ಯಕುಮಾರನಿಗೆ ಅದೇ ಸಂವಿಧಾನ ಹೇಳಿರುವ ಕರ್ತವ್ಯಗಳ ಬಗ್ಗೆಯೂ ನೆನಪಿಸಲು ಬಯಸುತ್ತೇನೆ. ಅಫ್ಜಲ್ ಗುರು, ಮಕ್ಬೂಲ್ ಭಟ್ ನ ಫೋಟೋಗಳನ್ನು ಹಿಡಿದು ನಿಂತಿರುವ ಚಿತ್ರಗಳು ನಮ್ಮ ಮುಂದಿವೆ, ಇಂತಹ ವಿದ್ಯಾರ್ಥಿ ಸಮುದಾಯ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂತಹ ಘಟನೆಗಳು ಮತ್ತೆ ನಡೆಯದಂತೆ ಜೆ.ಎನ್.ಯು ಆಡಳಿತ ಮಂಡಳಿ ನೋಡಿಕೊಳ್ಳಬೇಕು. ತನಿಖೆ ಪ್ರಾರಂಭಿಕ ಹಂತದಲ್ಲಿದೆ. ಕೆಲವು ವಿದ್ಯಾರ್ಥಿಗಳು ಕೂಗಿದ ಘೋಷಣೆಗಳು ಸರ್ವವ್ಯಾಪಿಯಾಗದಂತೆ ತಡೆಯುವ ಕೆಲಸಗಳಾಗಬೇಕು. ಕಾಲಿಗೆ ಗಾಯವಾಗಿದೆ, ಗಾಯ ಮಾಯಲು ಮೊದಲು ಔಷಧ ಕೊಡಬೇಕು; ಮಾಯದಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕವೇ ತೆಗೆಯಬೇಕಾಗುತ್ತದೆ. ಬಂಧನದ ದಿನಗಳಲ್ಲಿ ಕನ್ಹಯ್ಯಕುಮಾರ್ ಘಟನೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿರಬಹುದು. ಆತ ಮುಖ್ಯವಾಹಿನಿಯಲ್ಲಿ ಉಳಿಯಲಿ ಎಂಬುದ್ದೇಶದಿಂದ ಔಷಧ ಕೊಡುವ ಕೆಲಸವನ್ನು ಮಾಡಬಯಸುತ್ತೇನೆ. ಹಾಗಾಗಿ ಕನ್ಹಯ್ಯನಿಗೆ ಆರು ತಿಂಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡುತ್ತಿದ್ದೇನೆ. ಕನ್ಹಯ್ಯ ಹನ್ನೊಂದರದು ಮಾಡಿದ ಭಾಷಣದಲ್ಲಿ ತನ್ನ ಮನೆ ನಡೆಯುತ್ತಿರುವುದು ಮೂರು ಸಾವಿರ ರುಪಾಯಿಯ ಸಂಬಳದಿಂದ ಎಂದು ತಿಳಿಸಿದ್ದಾನೆ. ಹಾಗಾಗಿ ಬಾಂಡಿನ ಮೊತ್ತವನ್ನು ಕಡಿಮೆ ಇಡುವುದಕ್ಕೆ ನಿರ್ಧರಿಸಿದ್ದೇನೆ. ಯಾವುದೇ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕಾಗಬಹುದು. ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ತನ್ನ ಕೈಲಾದ ಮಟ್ಟಿಗೆ ಕ್ಯಾಂಪಸ್ಸಿನೊಳಗೆ ದೇಶದ್ರೋಹಿ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು. ಹತ್ತು ಸಾವಿರದ ಬಾಂಡ್ ಕಟ್ಟಿಸಿಕೊಂಡು ಆರು ತಿಂಗಳ ಜಾಮೀನು ನೀಡಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳೆಲ್ಲವೂ ಜಾಮೀನಿಗೆ ಸಂಬಂಧಪಟ್ಟಂತೆಯೇ ಹೊರತು ಇಡೀ ಪ್ರಕರಣಕ್ಕೆ ಸಂಬಂಧಿಸಿದಂತಲ್ಲ ಎಂದ್ಹೇಳಿದ ನ್ಯಾಯಾಧೀಶರು ಪ್ರತಿಯನ್ನು ಜೈಲಿನ ಅಧಿಕಾರಿಗಳಿಗೆ ತಲುಪಿಸುವಂತೆ ತಿಳಿಸಿ ತಮ್ಮ ಹೇಳಿಕೆಯನ್ನು ಮುಗಿಸಿದರು.

ಮೂಲ: http://indiankanoon.org/doc/77368780/

No comments:

Post a Comment