Feb 13, 2016

ಬಂಧನಕ್ಕೂ ಮುನ್ನ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್ ಹೇಳಿದ್ದೇನು?

ಜೆ.ಎನ್.ಯು ಸಾಮಾನ್ಯವಾಗಿ ಇಂತಹ ಗಲಭೆಗಳಿಂದಲೇ ಸುದ್ದಿಯಾಗಿಬಿಡುತ್ತದೆ. ಅಫ್ಜಲ್ ಗುರುನನ್ನು ನೇಣಿಗೇರಿಸಿದ ದಿನ ಸಭೆ ಆಯೋಜಿಸಿ ಭಾರತದ ವಿರುದ್ದ, ಪಾಕಿಸ್ತಾನದ ಪರವಾಗಿ, ಉಗ್ರಗಾಮಿಗಳ ಪರವಾಗಿ ಘೋಷಣೆ ಕೂಗಿದರೆಂಬ ಕಾರಣಕ್ಕೆ ವಿದ್ಯಾರ್ಥಿ ಸಂಘದ ಹಲವರ ಮೇಲೆ ಕೇಸು ಬಿದ್ದಿದೆ. Ofcourse ಸಂವಿಧಾನಬದ್ಧವಾಗಿ ನಡೆದ ವಿಚಾರಣೆಯಿಂದ ಗಲ್ಲು ಶಿಕ್ಷೆಗೊಳಗಾದ (ಗಲ್ಲು ಶಿಕ್ಷೆ ಸರಿಯೋ ತಪ್ಪೋ ಎನ್ನುವುದು ಬೇರೆಯೇ ಚರ್ಚೆ) ಅಪರಾಧಿಯೊಬ್ಬನ ಪರವಾಗಿ ಸಭೆ ನಡೆಸುವುದು, ದೇಶದ ವಿರುದ್ಧ ಘೋಷಣೆ ಕೂಗುವುದು, ವೈರಿ ರಾಷ್ಟ್ರದ ಪರವಾಗಿ ಕೂಗುವುದೆಲ್ಲವೂ ತಪ್ಪು ಕೆಲಸವೇ. ಆದರದು ವಿದ್ಯಾರ್ಥಿ ಸಂಘದ ಅಧ್ಯಕ್ಷನನ್ನು ರಾಷ್ಟ್ರದ್ರೋಹದ ಆರೋಪದಲ್ಲಿ ಬಂಧಿಸುವಷ್ಟು ಗಂಭೀರದ್ದೇ? ಹೌದೆನ್ನುವರು ನೀವಾದರೆ ಹದಿನೈದು ದಿನದ ಹಿಂದೆ ಜನವರಿ ಮೂವತ್ತರಂದು ಮಹಾತ್ಮ ಗಾಂಧಿಯನ್ನು ಕೊಂದ ಉಗ್ರ ನಾಥೂರಾಮ್ ಗೋಡ್ಸೆಯನ್ನು ಹೊಗಳುವ ಕಾರ್ಯಕ್ರಮವೊಂದನ್ನು ಅಖಿಲ ಭಾರತ ಹಿಂದೂ ಮಹಾಸಭಾ ಹಮ್ಮಿಕೊಂಡಿತ್ತು. ಅವರನ್ನೂ ರಾಷ್ಟ್ರದ್ರೋಹದ ಆರೋಪದ ಮೇಲೆ ಬಂಧಿಸಲಾಗಿದೆಯಾ? ಒಂದು ತಪ್ಪನ್ನು ಮತ್ತೊಂದು ತಪ್ಪಿನಿಂದ ಸಮರ್ಥಿಸಬಾರದು ಎಂಬ ಅರಿವಿನೊಂದಿಗೇ ಕೇಂದ್ರ ಸರಕಾರ ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಿದೆಯಾ ಎಂಬ ಅನುಮಾನ ಬರುವುದಂತೂ ಸಹಜ. ತಪ್ಪು ಯಾರು ಮಾಡಿದರೂ ತಪ್ಪೇ ಅಲ್ಲವೇ? ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ವ್ಯವಸ್ಥೆ ಸರಿಯಾ ಎಂದು ಕೇಳಿಕೊಳ್ಳಬೇಕಾದ ಸಮಯವಿದು.

ಬಂಧನಕ್ಕೂ ಮುನ್ನ ಜೆ.ಎನ್.ಯು ವಿದ್ಯಾರ್ಥಿಗಳನ್ನುದ್ದೇಶಿಸಿ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಡಿದ ಭಾಷಣದ ಕನ್ನಡ ರೂಪವಿದು. ಇದನ್ನು ಕನ್ನಡಕ್ಕೆ ಅನುವಾದಿಸಿ ಹಿಂಗ್ಯಾಕೆಯಲ್ಲಿ ಪ್ರಕಟಿಸುತ್ತಿರುವುದಕ್ಕೆ ಮೂರು ಕಾರಣವಿದೆ. ಒಂದು ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನದಲ್ಲಿರುವವರನ್ನು ಬಂಧಿಸಿರುವುದು ಇದು ಎರಡನೇ ಸಲವಂತೆ. ಮೊದಲ ಸಲ ಬಂಧನವಾಗಿದ್ದು ಭಾರತದ ಕರಾಳ ಅಧ್ಯಾಯವಾದ ಕಾಂಗ್ರೆಸ್ಸಿನ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ. ಎರಡನೇ ಕಾರಣ ಭಾಷಣದ ವೀಡಿಯೋ ಮಾಡಿದಾತ ಗೆಳೆಯನೊಟ್ಟಿಗೆ ಇಷ್ಟು ವೀಡಿಯೋ ಸಾಕಾ? ಎಂದು ಕೇಳುತ್ತಾನೆ. ಅವನ ಗೆಳೆಯ ಮಾಧ್ಯಮದವರಿದನ್ನು ಹಾಕುವುದಿಲ್ಲ ಪೂರ್ತಿ ರೆಕಾರ್ಡ್ ಮಾಡಿಕೊಂಡು ಯೂಟ್ಯೂಬಿಗೆ ಹಾಕೋಣ ಅನ್ನುತ್ತಾನೆ. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಇದರ ಬಗ್ಗೆ ಯಾವುದೇ ಸುದ್ದಿಯಿಲ್ಲ. ದೇಶದ್ರೋಹದ ಕೂಗಷ್ಟೇ ಇದೆ. ಮೂರನೆಯ ಕಾರಣ ಜೆ.ಎನ್.ಯುನಲ್ಲಿ ಮಾರ್ಚಿ ತಿಂಗಳಿನಲ್ಲಿ ಚುನಾವಣೆ ಇದೆಯೆಂದು ಈ ಭಾಷಣದಲ್ಲಿ ಕನ್ನಯ್ಯ ಹೇಳುತ್ತಾನೆ. ಇದು ಎಬಿವಿಪಿಯ ಚುನಾವಣಾ ತಯಾರಿಯಾ? ಎಂಬ ಅನುಮಾನದೊಂದಿಗೆ ಕನ್ನಡ ರೂಪಕ್ಕಿಳಿಸಲಾಗಿದೆ. ದೇಶದ್ರೋಹಿಗಳನ್ನು, ಆತಂಕವಾದಿಗಳನ್ನು ವಿಶ್ವವಿದ್ಯಾನಿಲಯವೊಂದು ಸೃಷ್ಟಿಸಬಾರದು ಎಂಬ ಎಚ್ಚರಿಕೆಯೊಂದಿಗೇ ವಿಶ್ವವಿದ್ಯಾಲಯಗಳು ಹುಸಿ ರಾಷ್ಟ್ರೀಯತೆಯನ್ನು ಪೋಷಿಸುತ್ತ ಅರೆಬೆಂದ ದೇಶಭಕ್ತರನ್ನು ಬೆಳೆಸಬಾರದೆಂದ ಎಚ್ಚರಿಕೆಯೂ ಇರಬೇಕು – ಡಾ. ಅಶೋಕ್.ಕೆ.ಆರ್ 

ಜೆ.ಎನ್.ಯು,ಎಸ್.ಯುದ ಅಧ್ಯಕ್ಷ ಕನ್ನಯ್ಯ ಕುಮಾರ್
……….ಬ್ರಿಟೀಷರಿಂದ ಕ್ಷಮೆ ಕೇಳಿದ್ದ ಸಾವರ್ಕರನ ಚೇಲಾಗಳಿವರು. ಹರಿಯಾಣದಲ್ಲಿರುವ ಕಟ್ಟರ್ ಸರ್ಕಾರ ಶಹೀದ್ ಭಗತ್ ಸಿಂಗನ ಹೆಸರಲ್ಲಿದ್ದ ವಿಮಾನ ನಿಲ್ದಾಣಕ್ಕೆ ಸಂಘಿಯ ಹೆಸರನ್ನಿಟ್ಟುಬಿಟ್ಟರು. ನಾನು ಹೇಳುತ್ತಿರುವುದೇನೆಂದರೆ ನಮಗೆ ದೇಶಭಕ್ತಿಯ ಸರ್ಟಿಫಿಕೇಟ್ ಆರ್.ಎಸ್.ಎಸ್ ನಿಂದ ಬೇಕಾಗಿಲ್ಲ. ನಮಗೆ ನ್ಯಾಷನಲಿಷ್ಟ್ ಎಂಬ ಸರ್ಟಿಫಿಕೇಟ್ ಆರ್.ಎಸ್.ಎಸ್ ನಿಂದ ಬೇಕಾಗಿಲ್ಲ. ನಾವು ಈ ದೇಶದವರು, ಇದರ ಮಣ್ಣಿನ ಬಗ್ಗೆ ನಮಗೆ ಪ್ರೀತಿಯಿದೆ, ಈ ದೇಶದ ಒಳಗಿರುವ 80% ಬಡವರ ಪರವಾಗಿ ನಾವು ಹೋರಾಡುತ್ತೇವೆ. ನಮಗೆ ಇದೇ ದೇಶಪ್ರೇಮ. ನಮಗೆ ಸಂಪೂರ್ಣ ನಂಬಿಕೆಯಿದೆ ಬಾಬಾ ಸಾಹೇಬರ ಬಗ್ಗೆ, ನಮಗೆ ಸಂಪೂರ್ಣ ನಂಬಿಕೆಯಿದೆ ದೇಶದ ಸಂವಿಧಾನದ ಮೇಲೆ, ಬಹಳ ಸ್ಪಷ್ಟವಾಗಿ ಹೇಳುತ್ತೇನೆ ಈ ದೇಶದ ಸಂವಿಧಾನದ ಮೇಲೆ ಯಾರಾದರೂ ಬೆರಳ ತೋರಿಸಿದರೆ, ಆ ಬೆರಳು ಸಂಘಿಯದ್ದಾಗಲೀ ಆ ಬೆರಳು ಇನ್ಯಾರದೇ ಆಗಲಿ ನಾವದನ್ನು ಸಹಿಸುವುದಿಲ್ಲ. ನಾವು ಸಂವಿಧಾನವನ್ನ ನಂಬುತ್ತೇವೆ, ಆದರೆ ನಾಗಪುರದಲ್ಲಿ ಹೇಳಿಕೊಡಲಾಗುವ ಸಂವಿಧಾನದ ಮೇಲೆ ನಮಗೆ ಭರವಸೆಯಿಲ್ಲ. ನಮಗೆ ಮನುಸ್ಮ್ರತಿಯ ಬಗ್ಗೆ ಯಾವುದೇ ಭರವಸೆಯಿಲ್ಲ ನಮಗೆ ಈ ದೇಶದ ಒಳಗಿರುವ ಜಾತಿವಾದದ ಮೇಲೆ ಯಾವುದೇ ಭರವಸೆಯಿಲ್ಲ. 

ಇದೇ ಸಂವಿಧಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರರು ಗಲ್ಲು ಶಿಕ್ಷೆಯನ್ನು ರದ್ದು ಮಾಡುವ ಬಗ್ಗೆ ಹೇಳುತ್ತಾರೆ, ಇದೇ ಬಾಬಾ ಸಾಹೇಬ್ ಅಂಬೇಡ್ಕರರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳುತ್ತಾರೆ. ನಾವು ಸಂವಿಧಾನವನ್ನು ಎತ್ತಿ ಹಿಡಿಯುತ್ತಾ ನಮ್ಮ ಮೂಲಭೂತ ಹಕ್ಕನ್ನು ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿಯಲು ಬಯಸುತ್ತೇವೆ. ಆದರಿದು ನಾಚಿಕೆಗೇಡಿನ ವಿಷಯ, ದುಃಖದ ವಿಷಯ ಇವತ್ತು ಎಬಿವಿಪಿ ತಮ್ಮ ಮಾಧ್ಯಮ ಮಿತ್ರರ ಜೊತೆ ಸೇರಿ ಪೂರ್ತಿ ವಿಷಯವನ್ನು ತಿರುಚಿಬಿಟ್ಟಿದೆ, ತೆಳುವಾಗಿಸಿಬಿಟ್ಟಿದೆ. ನಿನ್ನೆ ಎಬಿವಿಪಿಯ Joint secretary ಹೇಳ್ತಿದ್ರು ಫೆಲ್ಲೋಶಿಪ್ಪಿಗೆ ಹೋರಾಟ ನಡೆಸುತ್ತೀವೆಂದು. ಇದು ಎಷ್ಟು ಹಾಸ್ಯಾಸ್ಪದವೆಂದರೆ ಇವರದೇ ಸರಕಾರದ ಮೇಡಮ್ ಮನು ಸ್ಮೃತಿ ಇರಾನಿ ಫೆಲ್ಲೋಶಿಪ್ಪನ್ನು ರದ್ದು ಮಾಡಿಬಿಟ್ಟಿದ್ದಾರೆ. ಇವರೇಳುತ್ತಾರೆ ಫೆಲ್ಲೋಶಿಪ್ಪಿಗೆ ಹೋರಾಡುತ್ತೇವೆಂದು. ಇವರ ಸರಕಾರ ಉನ್ನತ ಶಿಕ್ಷಣಕ್ಕೆ ಮೀಸಲಿಡುವ ಹಣದಲ್ಲಿ 70% ಕಡಿತಗೊಳಿಸಿಬಿಟ್ಟಿದೆ. ಇದರಿಂದ ನಮ್ಮ ಹಾಸ್ಟೆಲ್ ಕಳೆದ ನಾಲ್ಕು ವರ್ಷದಿಂದ ಪೂರ್ಣವಾಗಿಲ್ಲ. ಇವತ್ತಿನವರೆಗೂ ವೈಫೈ ಕೊಡಲಾಗಿಲ್ಲ……………………… ಎಬಿವಿಪಿಯ ಜನರು ದೇವಾನಂದನ ತರ ಪೋಸು ಕೊಡುತ್ತಾ ಹಾಸ್ಟೆಲ್ ಕಟ್ಟಿಸುತ್ತೇವೆ, ವೈಫೈ ಕೊಡಿಸುತ್ತೇವೆ, ಫೆಲ್ಲೋಶಿಪ್ ಕೊಡಿಸುತ್ತೇವೆ ಎಂದು ಹೇಳುತ್ತಾರೆ. ಮೂಲಭೂತ ಹಕ್ಕಿನ ಬಗ್ಗೆ ಚರ್ಚೆಯಾದರೆ ಇವರ ಸತ್ಯಗಳೆಲ್ಲ ಹೊರಗೆ ಬಂದುಬಿಡುತ್ತವೆ. ಗೆಳೆಯರೇ ನಮಗೆ ಹೆಮ್ಮೆಯಿದೆ ಜೆ.ಎನ್.ಯು ಬಗ್ಗೆ. ನಾವು ಮೂಲಭೂತ ಹಕ್ಕಿನ ಬಗ್ಗೆ ಚರ್ಚೆ ನಡೆಸುತ್ತೇವೆ. ಇದರ ಬಗ್ಗೆ ಪ್ರಶ್ನೆ ಕೇಳುತ್ತೇವೆ. …………. ಆ ಸ್ವಾಮಿ ಹೇಳ್ತಾರೆ ಜೆ.ಎನ್.ಯುನಲ್ಲಿ ಜಿಹಾದಿಗಳಿದ್ದಾರೆ. ಜೆ.ಎನ್.ಯುನಲ್ಲಿರುವ ಜನ ಹಿಂಸೆ ಹಬ್ಬಿಸುತ್ತಾರೆ ಎಂದು. ಜೆ.ಎನ್.ಯುನಲ್ಲಿರುವ ಆರ್.ಎಸ್‍.ಎಸ್ ಹಿಂಬಾಲಕರಿಗೆ ನಾನು ಸವಾಲ ಹಾಕುತ್ತೇನೆ. ಬನ್ನಿ ಡಿಬೇಟ್ ಮಾಡೋಣ. ಹಿಂಸೆಯ ಬಗ್ಗೆ ಚರ್ಚಿಸೋಣ …………………….. ಎಬಿವಿಪಿ ನಾಚಿಕೆಯಿಲ್ಲದೆ ಹೇಳುತ್ತೆ ರಕ್ತದ ತಿಲಕ ಮಾಡಿ ಗುಂಡುಗಳಿಂದ ಆರತಿ ಎತ್ತಿ ಎಂದು. ಯಾರ ರಕ್ತ ಹರಿಸಬೇಕೆಂದಿದ್ದೀರಿ ಈ ಮಣ್ಣಿನಲ್ಲಿ? ನೀವು ಗುಂಡು ಹಾರಿಸಿದ್ದೀರಿ, ಬ್ರಿಟೀಷರ ಜೊತೆ ಸೇರಿಕೊಂಡು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದವರ ಮೇಲ ಗುಂಡು ಹಾರಿಸಿದ್ದೀರಿ. ಈ ಮಣ್ಣಿನಲ್ಲಿ ಬಡವರು ಅನ್ನದ ಬಗ್ಗೆ ಮಾತನಾಡಿದಾಗ, ಹಕ್ಕಿನ ಬಗ್ಗೆ ಮಾತನಾಡಿದಾಗ ಅವರ ಮೇಲೆ ಗುಂಡು ಹಾರಿಸುತ್ತೀರಿ. ಮುಸ್ಲಿಮರ ಮೇಲೆ ಗುಂಡು ಹಾರಿಸಿದ್ದೀರಿ. ತಮ್ಮಧಿಕಾರದ ಬಗ್ಗೆ ಮಹಿಳೆಯರು ಮಾತನಾಡಿದಾಗ ನೀವೇಳುತ್ತೀರಿ ಐದು ಬೆರಳುಗಳು ಸಮನಾಗಿರುವುದಿಲ್ಲವೆಂದು. ಮಹಿಳೆಯರು ಸೀತೆಯ ಆಗಿರಬೇಕು ಮತ್ತು ಸೀತೆಯ ತರ ಅಗ್ನಿಪರೀಕ್ಷೆಗೊಳಗಾಗಬೇಕೆಂದು ಹೇಳುತ್ತೀರಿ. ಈ ದೇಶದಲ್ಲಿ ಲೋಕತಂತ್ರವಿದೆ, ಈ ಲೋಕತಂತ್ರ ಎಲ್ಲರಿಗೂ ಸಮಾನ ಹಕ್ಕು ನೀಡುತ್ತದೆ. ಅದು ವಿದ್ಯಾರ್ಥಿಯೇ ಇರಲಿ, ಕರ್ಮಚಾರಿಯೇ ಇರಲಿ, ಬಡವ – ಬಲ್ಲಿದನಿರಲಿ, ಕೂಲಿಯವನಿರಲಿ, ರೈತನಿರಲಿ, ಅಂಬಾನಿಯಿರಲಿ, ಅದಾನಿಯಿರಲಿ ಎಲ್ಲರಿಗೂ ಸಮಾನ ಹಕ್ಕಿದೆ. ಮಹಿಳೆಯ ಸಮಾನತೆಯ ಬಗ್ಗೆ ಮಾತನಾಡಿದರೆ ಹೇಳುತ್ತಾರೆ ಭಾರತೀಯ ಸಂಸ್ಕೃತಿಯನ್ನು ಹಾಳುಮಾಡುತ್ತಿದ್ದಾರೆಂದು. ನಾವು ಹಾಳುಮಾಡಬೇಕೆಂದಿದ್ದೇವೆ, ಶೋಷಣೆಯ ಸಂಸ್ಕೃತಿಯನ್ನು, ಜಾತಿವಾದದ ಸಂಸ್ಕೃತಿಯನ್ನು, ಮನುವಾದ ಮತ್ತು ಬ್ರಾಹ್ಮಣವಾದದ ಸಂಸ್ಕೃತಿಯನ್ನು ……………………….. ಇವರಿಗೆ ಕಷ್ಟವಾಗುವುದು ಈ ಮಣ್ಣಿನ ಜನರು ಲೋಕತಂತ್ರದ ಬಗ್ಗೆ ಮಾತನಾಡಿದಾಗ, ಲಾಲ್ ಸಲಾಮಿನ ಜೊತೆ ಜನರು ನೀಲಿ ಸಲಾಮ್ ಮಾಡಿದಾಗ, ಮಾರ್ಕ್ಸ್ ಜೊತೆ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ತೆಗೆದುಕೊಂಡಾಗ ………………….. ಇವರ ಹೊಟ್ಟೆಯಲ್ಲಿ ತಳಮಳವೇಳುತ್ತದೆ. ಇವರ ಕುತಂತ್ರವಿದು, ಇವರು ಬ್ರಿಟೀಷರ ಚಮಚಾಗಳು …….. ಹಾಕಿ ದೇಶದ್ರೋಹದ ಕೇಸನ್ನು. ನಾನೇಳುತ್ತೇನೆ ಆರ್.ಎಸ್.ಎಸ್ ಇತಿಹಾಸ ಬ್ರಿಟೀಷರ ಜೊತೆಗೆ ನಿಂತ ಇತಿಹಾಸ. ಈ ದೇಶದ್ರೋಹಿಗಳು ಇವತ್ತು ದೇಶಪ್ರೇಮದ ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ನನ್ನ ಮೊಬೈಲ್ ನೋಡಿ ಗೆಳೆಯರೇ ನನ್ನ ತಾಯಿ ಮತ್ತು ತಂಗಿಗೆ ಕೆಟ್ಟಕೆಟ್ಟದಾಗಿ ಬಯ್ದಿದ್ದಾರೆ, ಬಯ್ಯುತ್ತಿದಾರೆ. ಯಾವ ಭಾರತ ಮಾತೆಯ ಬಗ್ಗೆ ಮಾತನಾಡುತ್ತಿದ್ದಿರಾ? ನಿಮ್ಮ ಭಾರತ ಮಾತೆಯಲ್ಲಿ ನಮ್ಮ ತಾಯಿ ಇಲ್ಲದಿದ್ದರೆ ನನಗೆ ಆ ಭಾರತ ಮಾತೆಯ ಪರಿಕಲ್ಪನೆ ಒಪ್ಪಿತವಲ್ಲ. ಈ ದೇಶದ ಬಡ ಮಹಿಳೆಯರು, ನನ್ನಮ್ಮ ಅಂಗನವಾಡಿಯಲ್ಲಿ ಕೆಲಸಕ್ಕಿದ್ದಾರೆ, ಮೂರು ಸಾವಿರದ ಮೇಲೆ ನಮ್ಮ ಕುಟುಂಬ ನಡೆಯುತ್ತದೆ. ಮತ್ತಿವರು ಅವರ ವಿರುದ್ಧ ಬಯ್ಗುಳ ಸುರಿಸುತ್ತಿದ್ದಾರೆ. ಇಂತಹ ದೇಶದ ಬಗ್ಗೆ ನನಗೆ ನಾಚಿಕೆಯಿದೆ. ಈ ದೇಶದೊಳಗಿರುವ ದಲಿತ, ಕಾರ್ಮಿಕ, ರೈತರ ತಾಯಿ ಭಾರತ ಮಾತೆಯಲ್ಲ. ನಾನು ಜೈಕಾರ ಹಾಕುತ್ತೇನೆ, ಭಾರತದ ತಾಯಂದರಿಗ, ಅಪ್ಪಂದರಿಗೆ, ತಾಯಿ ಸಹೋದರಿಗೆ ಜೈ, ರೈತ ಕಾರ್ಮಿಕ, ದಲಿತ ಆದಿವಾಸಿಗಳಿಗೆ ಜೈ. ನಿಮ್ಮಲ್ಲಿ ತಾಕತ್ತಿದ್ದರೆ ಹೇಳಿ ಇಂಕ್ವಿಲಾಬ್ ಜಿಂದಾಬಾದ್, ಹೇಳಿ ಭಗತ್ ಸಿಂಗ್ ಜಿಂದಾಬಾದ್, ಹೇಳಿ ಸುಖದೇವ್ ಜಿಂದಾಬಾದ್, ಹೇಳಿ ಅಶ್ವಾಕುಲ್ಲಾ ಖಾನ್ ಜಿಂದಾಬಾದ್, ಹೇಳಿ ಬಾಬಾ ಸಾಹೇಬ್ ಜಿಂದಾಬಾದ್.

ನೀವು ಬಾಬಾ ಸಾಹೇಬರ 125ನೇ ವರ್ಷಾಚರಣೆಯನ್ನಾಚರಿಸುವ ನಾಟಕವಾಡುತ್ತೀರಿ. ನಿಮ್ಮಲ್ಲಿ ತಾಕತ್ತಿದೆಯಾ? ಬಾಬಾ ಸಾಹೇಬರು ಜಾತಿವಾದ ಈ ದೇಶದ ದೊಡ್ಡ ಸಮಸ್ಯೆಯೆಂದು ಹೇಳಿದ್ದರು…………….. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತೆಗೆದುಕೊಂಡು ಬನ್ನಿ …………… ದೇಶ ಕಟ್ಟುವಿಕೆ ನಡೆಯುವುದು ಅಲ್ಲಿರುವ ಜನರಿಂದ. ಈ ದೇಶದಲ್ಲಿ ಬಡವ – ಕಾರ್ಮಿಕರಿಗೆ ಜಾಗವಿಲ್ಲ……….. ನಿನ್ನೆ ಟಿವಿ ಡಿಬೇಟಿನಲ್ಲಿ ದೀಪಕ್ ಚೌರಾಸಿಯಾರವರಿಗೆ ಈ ಮಾತು ಹೇಳುತ್ತಿದ್ದೆ ‘ಇದು ಗಂಭೀರ ಸಮಯವೆಂದು ನೆನಪಿಟ್ಟುಕೊಳ್ಳಿ. ಇದೇ ರೀತಿಯ ಮೂಲಭೂತವಾದತನ ಮುಂದುವರೆದರೆ ಮಾಧ್ಯಮ ಕೂಡ ಸುರಕ್ಷಿತವಾಗಿರುವುದಿಲ್ಲ. ಸಂಘದ ಆಫೀಸಿನಿಂದ ಸ್ಕ್ರಿಪ್ಟ್ ಬರೆದುಕೊಂಡು ಬರುತ್ತಾರೆ. ಇಂದಿರಾಗಾಂಧಿಯ ಸಮಯದಲ್ಲಿ ಕಾಂಗ್ರೆಸ್ ಆಫೀಸಿನಿಂದ ಸ್ಕ್ರಿಪ್ಟ್ ಬರುತ್ತಿದ್ದಂತೆ ಬರುತ್ತದೆ ಎಂದು ನೆನಪಿರಲಿ’ ನೀವು ನಿಜಕ್ಕೂ ಈ ದೇಶದಲ್ಲಿರುವ ದೇಶಭಕ್ತಿಯನ್ನು ತೋರಿಸಬೇಕೆಂದರೆ, ಕೆಲವು ಮಾಧ್ಯಮಮಿತ್ರರು ಹೇಳುತ್ತಿದ್ದರು, ನಮ್ಮ ತೆರಿಗೆ ಹಣದಲ್ಲಿ, ಸಬ್ಸಿಡಿ ಹಣದಲ್ಲಿ ಜೆ.ಎನ್.ಯು ನಡೆಯುತ್ತಿದೆಯೆಂದು. ಹೌದು ನಿಜ, ತೆರಿಗೆ ಹಣದಲ್ಲಿ, ಸಬ್ಸಿಡಿಯ ಹಣದಲ್ಲಿ ಜೆ.ಎನ್.ಯು ನಡೆಯುತ್ತಿದೆ ಎನ್ನುವುದು ಸತ್ಯ. ಆದರೊಂದು ಪ್ರಶ್ನೆ ಕೇಳಬಯಸುತ್ತೇನೆ, ಈ ವಿಶ್ವವಿದ್ಯಾನಿಯಲಗಳು ಇರುವುದಾದರೂ ಏತಕ್ಕೆ, ಸಮಾಜದ ಆಗುಹೋಗುಗಳನ್ನು ವಿಶ್ಲೇಷಣೆ ಮಾಡಲು ……………… ವಿಶ್ವವಿದ್ಯಾನಿಲಯಗಳು ಇದರಲ್ಲಿ ವಿಫಲವಾದರೆ ದೇಶ ನಿರ್ಮಾಣವಾಗುವುದಿಲ್ಲ. ಆ ದೇಶದಲ್ಲಿ ಜನರ ಭಾಗವಹಿಸುವಿಕೆ ಇರುವುದಿಲ್ಲ………………….. ಲೂಟಿ ಮತ್ತು ಶೋಷಣೆಯೇ ಆ ದೇಶದಲ್ಲಿರುತ್ತದೆ. ದೇಶದೊಳಗಿನ ಜನರ ಸಂಸ್ಕೃತಿ, ವಿವಿಧತೆಯನ್ನು ಒಳಗೊಳ್ಳದಿದ್ದರೆ ಆ ದೇಶದ ನಿರ್ಮಾಣವಾಗುವುದಿಲ್ಲ. ನಾವು ದೇಶದ ಜೊತೆಗಿದ್ದೇವೆ. ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರರ ಕನಸುಗಳ ಜೊತೆಗಿದ್ದೇವೆ…………….ಸಮಾನತೆಯ ಹಕ್ಕು ಸಿಗಬೇಕು, ಎಲ್ಲರಿಗೂ ಜೀವಿಸುವ ಹಕ್ಕಿರಬೇಕೆಂಬ ಕನಸಿನ ಜೊತೆಗಿದ್ದೇವೆ. ಎಲ್ಲರಿಗೂ ಆಹಾರದ ಹಕ್ಕಿರಬೇಕೆಂಬ ಕನಸಿನ ಜೊತೆಗಿದ್ದೇವೆ. ಆ ಕನಸಿನ ಜೊತೆ ನಿಲ್ಲುವ ಕಾರಣಕ್ಕೆ, ರೋಹಿತ ತನ್ನ ಪ್ರಾಣ ನೀಡಿದ್ದಾನೆ. ಈ ಸಂಘಿಗಳಿಗೆ ನಾನು ಹೇಳಬಯಸುತ್ತೇನೆ ………………ರೋಹಿತನ ವಿಷಯದಲ್ಲಿ ನೀವು ಮಾಡಿದ್ದನ್ನು ಜೆ.ಎನ್.ಯು ವಿಷಯದಲ್ಲಿ ನಡೆಯಲು ಬಿಡುವುದಿಲ್ಲ………………….. ರೋಹಿತನ ತ್ಯಾಗವನ್ನು ನೆನೆಯುತ್ತಾ ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನಿಲ್ಲುತ್ತೇವೆ. ಪಾಕಿಸ್ತಾನದ ವಿಷಯ ಬಿಟ್ಟುಬಿಡಿ, ಬಾಂಗ್ಲಾದೇಶದ ವಿಷಯ ಬಿಟ್ಟುಬಿಡಿ, ನಾವು ಹೇಳುತ್ತೇವೆ ಇಡೀ ಜಗತ್ತಿನ ಬಡವರು ಒಂದು, ಜಗತ್ತಿನ ಕಾರ್ಮಿಕರು ಒಂದು, ಮಾನವೀಯತೆ ಜಿಂದಾಬಾದ್ ………………. ಮಾನವೀಯತೆಯ ವಿರುದ್ಧ ನಿಂತಿರುವವರಾರೆಂದು ನಾವಿವತ್ತು ಗುರುತಿಸಿಬಿಟ್ಟಿದ್ದೇವೆ. ಜಾತಿವಾದ, ಮನುವಾದ, ಬ್ರಾಹ್ಮಣವಾದದ ಮುಖಗಳನ್ನು ನಾವು ಬಹಿರಂಗಗೊಳಿಸಬೇಕು. ನಿಜವಾದ ಲೋಕತಂತ್ರ ನಿಜವಾದ ಸ್ವಾತಂತ್ರ್ಯವನ್ನು ದೇಶದಲ್ಲಿ ಸ್ಥಾಪಿಸಬೇಕಾಗಿದೆ. ……………. ಆ ಸ್ವಾತಂತ್ರ್ಯ ಬರುವುದು ಸಂವಿಧಾನದಿಂದ, ಲೋಕತಂತ್ರದಿಂದ, ಸಂಸತ್ತಿನಿಂದ ಎಂದು ಹೇಳಲಿಚ್ಛಿಸುತ್ತೇವೆ. ಇದಕ್ಕಾಗಿ ಇಲ್ಲಿರುವ ಕೇಳುಗರಲ್ಲಿ ವಿನಂತಿಸುತ್ತೇನೆ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ನಾವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ನಮ್ಮ ಸಂವಿಧಾನ, ನಮ್ಮ ಭೂಮಿಯ ಏಕತೆಗಾಗಿ ನಾವು ಒಗ್ಗಟ್ಟಿನಿಂದರಬೇಕು. ದೇಶ ಒಡೆಯುವ, ಆತಂಕವಾದ ಹರಡುವ ಜನರಿಗೆ ಒಂದು ಪ್ರಶ್ನೆ, ಕೊನೆಯ ಪ್ರಶ್ನೆ ಕೇಳುತ್ತಾ ನನ್ನ ಮಾತು ಮುಗಿಸುತ್ತೇನೆ. ‘ಈ ಕಸಾಬ್ ಯಾರು? ಅಫ್ಜಲ್ ಗುರು ಯಾರು? ಇಂತಹ ಪರಿಸ್ಥಿತಿಯಲ್ಲಿರುವ ಈ ಜನರ್ಯಾರು? ತಮ್ಮ ದೇಹಕ್ಕೆ ಬಾಂಬು ಸಿಕ್ಕಿಸಿಕೊಂಡು ಕೊಲೆ ಮಾಡಲು ತಯಾರಾಗುವ ಈ ಜನರಾರು? ಈ ಪ್ರಶ್ನೆ ವಿಶ್ವವಿದ್ಯಾನಿಲಯದಲ್ಲಿ ಹುಟ್ಟದಿದ್ದರೆ ವಿಶ್ವವಿದ್ಯಾನಿಲಯಕ್ಕೆ ಅರ್ಥವೇ ಇಲ್ಲ ………. ನಾವು ನ್ಯಾಯವನ್ನು ವ್ಯಾಖ್ಯಾನಿಸದಿದ್ದರೆ, ನಾವು ಹಿಂಸೆಯನ್ನು ವ್ಯಾಖ್ಯಾನಿಸದಿದ್ದರೆ, ಹಿಂಸೆಯೆಂದರೆ ಬಂದೂಕೆತ್ತಿಕೊಂಡು ಕೊಲ್ಲುವುದಷ್ಟೇ ಅಲ್ಲ. ಸಂವಿಧಾನ ದಲಿತರಿಗೆ ಕೊಟ್ಟಿರುವ ಹಕ್ಕನ್ನು ಜೆ.ಎನ್.ಯು ಆಡಳಿತ ಕೊಡದಿರುವುದೂ ಹಿಂಸೆಯೇ, ವ್ಯವಸ್ಥೆಯ ಹಿಂಸೆ …………. ನ್ಯಾಯದ ಮಾತನಾಡುತ್ತೇವೆ, ಯಾರು ನಿರ್ಧರಿಸುತ್ತಾರೆ ಈ ನ್ಯಾಯವೇನೆಂಬುದನ್ನು. ಬ್ರಾಹ್ಮಣವಾದದ ವ್ಯವಸ್ಥೆಯಿದ್ದಾಗ ದಲಿತರನ್ನು ಮಂದಿರದೊಳಗೆ ಬಿಡುತ್ತಿರಲಿಲ್ಲ, ಅದೇ ನ್ಯಾಯವಾಗಿತ್ತು. ಬ್ರಿಟೀಷರಿದ್ದಾಗ ನಾಯಿಗಳಿಗೆ ಮತ್ತು ಭಾರತೀಯರಿಗೆ ಹೋಟೆಲ್ಲುಗಳೊಳಗೆ ಬಿಡುತ್ತಿರಲಿಲ್ಲ, ಅದೇ ನ್ಯಾಯವಾಗಿತ್ತು. ಈ ‘ನ್ಯಾಯ’ವನ್ನು ನಾವು ಪ್ರಶ್ನಿಸಿದೆವು ಮತ್ತಿವತ್ತೂ ಎಬಿವಿಪಿ ಮತ್ತು ಆರ್.ಎಸ್.ಎಸ್ ನ ನ್ಯಾಯವನ್ನು ಪ್ರಶ್ನಿಸುತ್ತೇವೆ………………..ನಿಮ್ಮ ನ್ಯಾಯದಲ್ಲಿ ನಮ್ಮ ನ್ಯಾಯಕ್ಕೆ ಜಾಗವಿರದಿದ್ದರೆ ನಿಮ್ಮ ನ್ಯಾಯವನ್ನು ನಾವು ಮಾನ್ಯ ಮಾಡುವುದಿಲ್ಲ. ನಿಮ್ಮ ಸ್ವತಂತ್ರವನ್ನು ನಾವು ಮಾನ್ಯ ಮಾಡುವುದಿಲ್ಲ. ಪ್ರತಿಯೊಬ್ಬನಿಗೂ ಅವನ ಸಂವಿಧಾನಿಕ ಹಕ್ಕು ಸಿಕ್ಕ ದಿನ ಸ್ವಾತಂತ್ರ್ಯ ಮಾನ್ಯ ಮಾಡುತ್ತೇವೆ. ಸಂವಿಧಾನದ ಹಕ್ಕು ಎಲ್ಲರಿಗೂ ಸಿಕ್ಕು ಸಮಾನರಾದ ದಿನ ನ್ಯಾಯವನ್ನು ಒಪ್ಪುತ್ತೇವೆ. ಗೆಳೆಯರೇ ತುಂಬಾ ಗಂಭೀರ ಪರಿಸ್ಥಿತಿಯಿದೆ. ಜೆ.ಎನ್.ಯು.ಎಸ್.ಯು ಯಾವುದೇ ಹಿಂಸೆ, ಆತಂಕವಾದ, ದೇಶದ್ರೋಹದ ಯಾವ ಕೆಲಸವನ್ನೂ ಸಮರ್ಥಿಸುವುದಿಲ್ಲ……………………..ಕೆಲವು ಅನಾಮಿಕ ಆಗುಂತಕರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ. ಜೆ.ಎನ್.ಯು.ಎಸ್.ಯು ಅದನ್ನು ಕಠಿಣ ಮಾತುಗಳಲ್ಲಿ ಖಂಡಿಸುತ್ತದೆ. ಜೊತೆಜೊತೆಗೆ ಜೆ.ಎನ್.ಯು ಆಡಳಿತ ಮತ್ತು ಎಬಿವಿಪಿಗೊಂದು ಸವಾಲು. ಈ ಕ್ಯಾಂಪಸ್ಸಿನಲ್ಲಿ ಸಾವಿರ ತರಹದ ಘಟನೆಗಳು ನಡೆಯುತ್ತವೆ, ಗಮನವಿಟ್ಟು ಎಬಿವಿಪಿಯ ಘೋಷಣೆಗಳನ್ನು ಕೇಳಿಸಿಕೊಳ್ಳಿ, ಅವರು ಹೇಳುತ್ತಾರೆ ಕಮ್ಯುನಿಷ್ಟ್ ನಾಯಿ, ಹೇಳುತ್ತಾರೆ ಅಫ್ಜಲ್ ಗುರುವಿನ……….ಹೇಳುತ್ತಾರೆ ಜಿಹಾದಿಗಳ ಮಕ್ಕಳು……….. ಈ ಸಂವಿಧಾನ ನಮಗೆ ನಾಗರೀಕರಾಗುವ ಅಧಿಕಾರ ನೀಡಿದ್ದರೆ ನನ್ನ ತಂದೆಯನ್ನು ನಾಯಿಯೆಂದು ಕರೆಯುವುದು ಸಂವಿಧಾನದ ಹರಣವೇ ಅಲ್ಲವೇ? ಈ ಪ್ರಶ್ನೆ ನಾನು ಎಬಿವಿಪಿಗೆ ಕೇಳುತ್ತೇನೆ. ನೀವು ಯಾರಿಗಾಗಿ ಕೆಲಸ ಮಾಡುತ್ತಿದ್ದೀರೆಂದು ಜೆ.ಎನ್.ಯು ಆಡಳಿತಕ್ಕೆ ಕೇಳಬಯಸುತ್ತೇನೆ. ಯಾರ ಜೊತೆ ಕೆಲಸ ಮಾಡುತ್ತಿದ್ದೀರಾ? ಮತ್ತು ಯಾವ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೀರಾ? ಇವತ್ತು ಒಂದಂಶ ಸ್ಪಷ್ಟವಾಗಿ ತಿಳಿದುಹೋಗಿದೆ. ಈ ಜೆ.ಎನ್.ಯು ಆಡಳಿತ ಮೊದಲು ಅನುಮತಿ ಕೊಡುತ್ತದೆ. ನಂತರ ನಾಗಪುರದಿಂದ ಫೋನ್ ಬಂದ ಮೇಲೆ ಅನುಮತಿಯನ್ನು ನಿರಾಕರಿಸಲಾಗುತ್ತದೆ. ಅನುಮತಿ ಕೊಡುವ ಮತ್ತು ವಾಪಸ್ಸು ತೆಗೆದುಕೊಳ್ಳುವ ಈ ಪ್ರಕ್ರಿಯೆಗಳು ಫೆಲ್ಲೋಶಿಪ್ ಕೊಡುವ ತೆಗೆದುಕೊಳ್ಳುವ ಪ್ರಕ್ರಿಯೆಯಂತೆಯೇ ಇದೆ. ಫೆಲ್ಲೋಶಿಪ್ ಜಾಸ್ತಿ ಮಾಡುತ್ತೇವೆಂದು ಘೋಷಣೆ ಮಾಡಲಾಗುತ್ತದೆ ಮತ್ತು ನಂತರ ಫೆಲ್ಲೋಶಿಪ್ ನಿಲ್ಲಿಸಿಬಿಡಲಾಗುತ್ತದೆ. ಇದು ಸಂಘಿಗಳ ರೀತಿ, ಎಬಿವಿಪಿ ಮತ್ತು ಆರ್.ಎಸ್.ಎಸ್ ರೀತಿ. ಈ ರೀತಿಯಿಂದ ಅವರು ದೇಶ ಮುನ್ನಡೆಸಬೇಕೆಂದಿದ್ದಾರೆ. ಮತ್ತಿದೇ ರೀತಿಯಿಂದ ಜೆ.ಎನ್.ಯು ಆಡಳಿತವನ್ನು ನಡೆಸಲಿಚ್ಛಿಸಿದ್ದಾರೆ. ಜೆ.ಎನ್.ಯು ಉಪಕುಲಪತಿಗಳಿಗೆ ನಮ್ಮ ಪ್ರಶ್ನೆಯಿದೆ, ಪೋಸ್ಟರ್ ಹಾಕಲಾಗಿತ್ತು ಗೋಡೆಗಳ ಮೇಲೆ, ಮೆಸ್ಸಿನಲ್ಲಿ; ತೊಂದರೆಯೆನಿಸಿದ್ದರೆ ಅನುಮತಿ ನೀಡಬಾರದಿತ್ತು. ಅನುಮತಿ ಕೊಟ್ಟ ಮೇಲೆ ಯಾರ ಮಾತು ಕೇಳಿ ಅನುಮತಿ ರದ್ದು ಮಾಡಿದಿರಿ? ಈ ವಿಷಯವನ್ನು ಜೆ.ಎನ್.ಯು ಆಡಳಿತ ಸ್ಪಷ್ಟಪಡಿಸಬೇಕೆಂದು ನಾನು ಕೇಳುತ್ತೇನೆ…………. ಜೊತೆಗೆ ಈ ಜನರ ಸತ್ಯಾಂಶವನ್ನು ತಿಳಿದುಕೊಳ್ಳಿ. ಇವರನ್ನು ದ್ವೇಷಿಸಬೇಡಿ. ಯಾಕೆಂದರೆ ದ್ವೇಷಿಸುವುದು ನಮ್ಮ ಗುಣವಲ್ಲ. ಇವರ ಪರಿಸ್ಥಿತಿಯ ಬಗ್ಗೆ ನನ್ನಲ್ಲಿ ದಯೆಯ ಭಾವನೆಯಿದೆ. ಇವರಿಷ್ಟೊಂದು ಕುಣಿಯುತ್ತಿದ್ದಾರೆ ಯಾಕೆ? ಇವರಿಗನ್ನಿಸುತ್ತೆ ಗಜೇಂದ್ರ ಚೌಹಾಣರನ್ನು ಕೂರಿಸಿದಂತೆ ಎಲ್ಲಾ ಕಡೆ ಚೌಹಾಣ್, ದಿವಾನ್, ಫರ್ಮಾನರನ್ನು ಕೂರಿಸ…………………. ಇವರು ಜೋರಾಗಿ ಭಾರತ ಮಾತಾಕಿ ಜೈ ಎಂದಾಗ ನೀವು ತಿಳಿದುಕೊಂಡುಬಿಡಿ ನಾಳೆ ಅವರಿಗೆ ಕೆಲಸದ ಸಂದರ್ಶನವಿದೆಯೆಂದು…………ಕೆಲಸ ಸಿಗುತ್ತಿದ್ದಂತೆ ದೇಶಭಕ್ತಿ ಹಿಂದಾಗಿಬಿಡುತ್ತದೆ. ಕೆಲಸ ದಕ್ಕುತ್ತಿದ್ದಂತೆ ಭಾರತ ಮಾತೆಯ ಚಿಂತೆಯಿರುವುದಿಲ್ಲ. ಕೆಲಸ ಸಿಗುತ್ತಿದ್ದಂತೆ…………….ತ್ರಿವರ್ಣದ ಧ್ವಜವನ್ನಿವರ್ಯಾವತ್ತೂ ಮಾನ್ಯ ಮಾಡಿಲ್ಲ. ಅವರಿಗೆ ಭಗವಾ ಧ್ವಜವಷ್ಟೇ ಮುಖ್ಯ. ನಾನು ಸವಾಲು ಹಾಕುತ್ತೇನೆ. ಇದು ಎಂತಹ ದೇಶಭಕ್ತಿ? ಮಾಲೀಕ ತನ್ನ ನೌಕರನೊಂದಿಗೆ ಸರಿಯಾಗಿ ನಡೆದುಕೊಳ್ಳದಿದ್ದರೆ, ರೈತ ತನ್ನ ಕಾರ್ಮಿಕನೊಂದಿಗೆ ಸರಿಯಾಗಿ ನಡೆದುಕೊಳ್ಳದಿದ್ದರೆ………………..ವಿವಿಧ ಚಾನೆಲ್ಲುಗಳಲ್ಲಿ ಹತ್ತದಿನೈದು ಸಾವಿರ ರುಪಾಯಿಗಳಿಗೆ ಪತ್ರಕರ್ತರ ಕೆಲಸ ಮಾಡುವವರೊಂದಿಗೆ ಅವರ ಸಿ.ಇ.ಓಗಳು ಸರಿಯಾಗಿ ನಡೆದುಕೊಳ್ಳದಿದ್ದರೆ…………… ಇವರ ದೇಶಭಕ್ತಿ ಭಾರತ ಪಾಕಿಸ್ತಾನದ ನಡುವಿನ ಮ್ಯಾಚಿನ ದಫನು ನಡೆಸುತ್ತದೆ. ಹೀಗಾಗಿ ರಸ್ತೆಯಲ್ಲಿ ನಡೆವಾಗ ಬಾಳೆಹಣ್ಣು ಮಾರುವವನೊಂದಿಗೆ ಕೆಟ್ಟದಾಗಿ ಅಹಂಕಾರದಿಂದ ಮಾತನಾಡುತ್ತಾರೆ. ಬಾಳೆಹಣ್ಣಿನವನು ಹೇಳುತ್ತಾನೆ ಒಂದು ಡಜನ್ನಿಗೆ ನಲವತ್ತು ರುಪಾಯಿ, ಇವರು ಹೇಳುತ್ತಾರೆ ನಡಿ ಅತ್ಲಾಗೆ, ನೀವು ಲೂಟಿ ಮಾಡುತ್ತಿದ್ದೀರಿ ಕಮ್ಮಿಗೆ ನೀಡು. ಬಾಳೆ ಮಾರುವವನು ನೀವೇ ದೊಡ್ಡ ಲೂಟಿಕೋರರು, ಕೋಟ್ಯಂತರ ಲೂಟಿ ಮಾಡಿದ್ದೀರಿ ಎಂದು ತಿರುಗಿಸಿ ಹೇಳಿದರೆ ಅವನನ್ನು ದೇಶದ್ರೋಹಿ ಎಂದುಬಿಡುತ್ತಾರೆ………………

ಎಬಿವಿಪಿಯ ಅನೇಕರು ನನಗೆ ಪರಿಚಿತರು. ಅವರಲ್ಲಿ ಕೇಳುತ್ತೇನೆ. ನಿಮ್ಮಲ್ಲಿ ನಿಜಕ್ಕೂ ದೇಶಭಕ್ತಿಯ ಭಾವನೆ ಪುಟಿಯುತ್ತದೆಯಾ? ಅವರು ಹೇಳುತ್ತಾರೆ ‘ಏನ್ ಮಾಡೋದಣ್ಣ ಐದು ವರ್ಷದ ಸರಕಾರ, ಎರಡು ವರ್ಷ ಮುಗಿದು ಹೋಗಿದೆ, ಮೂರು ವರ್ಷದ ಟಾಕ್ ಟೈಮ್ ಉಳಿದಿದೆ. ಏನೆಲ್ಲ ಮಾಡಬೇಕೋ ಅದನ್ನೀಗಲೇ ಮಾಡಿಬಿಡಬೇಕು.’ ನಾನು ಹೇಳಿದೆ ಸರಿ, ಮಾಡಿಕೊಳ್ಳಿ. ಜೆ.ಎನ್.ಯು ಬಗ್ಗೆ ಸುಳ್ಳು ಹೇಳಿದರೆ ನಾಳೆ ನಿಮ್ಮ ಸಂಗಾತಿಯೇ ನಿಮ್ಮ ಕುತ್ತಿಗೆ ಹಿಡಿದು, ಟ್ರೇನಿನಲ್ಲಿ ಬೀಫ್ ಹುಡುಕುವ ಸಂಗಾತಿ ನಿಮ್ಮ ಕುತ್ತಿಗೆ ಹಿಡಿದು ಹೇಳುತ್ತಾನೆ ‘ನೀನು ಜೆ.ಎನ್.ಯು ವಿದ್ಯಾರ್ಥಿ. ಹಾಗಾಗಿ ನೀನು ದೇಶದ್ರೋಹಿ’. ಇದರ ಅಪಾಯದ ಅರಿವಿದೆಯಾ ನಿನಗೆ? ಅದಕ್ಕವನು ಹೇಳುತ್ತಾನೆ ‘ಅರ್ಥವಾಗುತ್ತೆ ಅಣ್ಣ. ಇದೇ ಕಾರಣಕ್ಕೆ ನಾವು JNUShutdown ಎಂಬ ಹ್ಯಾಷ್ ಟ್ಯಾಗನ್ನು ವಿರೋದಿಸುತ್ತೇವೆ. ನಾನೇಳಿದೆ ತುಂಬ ಒಳ್ಳೆ ಕೆಲಸ ಸಾಹೇಬರೆ. ಮೊದಲು JNUShutdown ಎಂಬ ಹ್ಯಾಷ್ ಟ್ಯಾಗನ್ನು ಮಾಡಿ ಪ್ರಚಾರ ಮಾಡಿ ನಂತರ ಅದನ್ನು ವಿರೋಧಿಸುತ್ತೀರಿ. ಯಾಕೆಂದರೆ ಜೆ.ಎನ್.ಯುನಲ್ಲೇ ಇರಬೇಕಲ್ಲವೇ?! ಈ ಕಾರಣಕ್ಕೆ ನಾನು ಜೆ.ಎನ್.ಯುಗಳಿಗೆ ಹೇಳಲು ಬಯಸುತ್ತೇನೆ. ಮಾರ್ಚಿನಲ್ಲಿ ಚುನಾವಣೆಯಿದೆ. ಎಬಿವಿಪಿಯ ಜನರು ಓಂನ ಬಾವುಟ ತೆಗೆದುಕೊಂಡು ನಿಮ್ಮ ಬಳಿ ಬರುತ್ತಾರೆ. ಆಗವರಿಗೆ ಕೇಳಿ ‘ನಾವು ದೇಶದ್ರೋಹಿಗಳು. ನಾವು ಜಿಹಾದಿಗಳು. ನಾವು ಆತಂಕವಾದಿಗಳು. ನಮ್ಮ ಮತ ತೆಗೆದುಕೊಂಡು ನೀವು ದೇಶದ್ರೋಹಿಗಳಾಗುತ್ತೀರಾ?’ ಇದನ್ನವರಲ್ಲಿ ಖಂಡಿತವಾಗಿ ಕೇಳಿ. ಆಗವರು ಹೇಳುತ್ತಾರೆ ‘ಇಲ್ಲ ಇಲ್ಲ. ನೀವಲ್ಲ. ಯಾರೋ ಕೆಲವರು ಮಾತ್ರ’ ಆಗ ನಾವು ಹೇಳುತ್ತೇವೆ ‘ಅವರು ಕೆಲವರಿದ್ದರು ಎಂದು ನೀವು ಮಾಧ್ಯಮದಲ್ಲಿ ಹೇಳಲಿಲ್ಲ. ನಿಮ್ಮ ಕುಲಪತಿಗಳು ಹೇಳಲಿಲ್ಲ. ನಿಮ್ಮ ರಿಜಿಸ್ಟ್ರಾರ್ ಕೂಡ ಹೇಳುತ್ತಿಲ್ಲ. ಮತ್ತು ಆ ಕೆಲವರೇ ಹೇಳುತ್ತಿದ್ದಾರೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಲಿಲ್ಲವೆಂದು, ಆ ಕೆಲವರೇ ಹೇಳುತ್ತಿದ್ದಾರೆ ನಾವು ಆತಂಕವಾದಿಗಳ ಪಕ್ಷದವರಲ್ಲವೆಂದು. ಆ ಕೆಲವರೇ ಹೇಳುತ್ತಿದ್ದಾರೆ ನಮಗೆ ಅನುಮತಿ ಕೊಟ್ಟು ರದ್ದು ಮಾಡಿದ್ದು ಪ್ರಜಾಪ್ರಭುತ್ವದ ಹಕ್ಕಿನ ಮೇಲಿನ ಹಲ್ಲೆಯೆಂದು. ಈ ದೇಶದೊಳಗಿನ ಹೋರಾಟಗಳ ಜೊತೆಯಿರುತ್ತೇವೆಂದು ಆ ಕೆಲವರೇ ಹೇಳುತ್ತಿದ್ದಾರೆ. ಇಷ್ಟೆಲ್ಲ ಅವರಿಗೆ (ಎಬಿವಿಪಿ) ಅರ್ಥವಾಗುವುದಿಲ್ಲ. ನನಗೆ ಪೂರ್ಣ ನಂಬಿಕೆಯಿದೆ. ಅತಿ ಶೀಘ್ರ ನೋಟೀಸಿಗೆ ಇಷ್ಟೊಂದು ಜನರಿಲ್ಲಿ ಬಂದಿದ್ದೀರಿ. ಎಬಿವಿಪಿ ಈ ದೇಶವನ್ನು, ಜೆ.ಎನ್.ಯು ಅನ್ನು ಒಡೆಯುತ್ತಿದೆ ಎಂದು ತಿಳಿಸೋಣ. ಜೆ.ಎನ್.ಯು ಒಡೆಯಲು ನಾವು ಬಿಡುವುದಿಲ್ಲ. ಜೆ.ಎನ್.ಯು ಜಿಂದಾಬಾದ್, ಈ ದೇಶದೊಳಗಿನ ಸಂಘರ್ಷಗಳಲ್ಲಿ ಭಾಗವಹಿಸುತ್ತೇವೆ. ಈ ದೇಶದೊಳಗಿನ ಲೋಕತಂತ್ರದ ದನಿಯನ್ನು ಗಟ್ಟಿಗೊಳಿಸುತ್ತ ಸ್ವಾತಂತ್ರ್ಯದ ದನಿಯನ್ನು ಗಟ್ಟಿಗೊಳಿಸುತ್ತ, ಅಭಿವ್ಯಕ್ತಿ ಸ್ವಾತಂತ್ರ್ಯದ ದನಿಯನ್ನು ಗಟ್ಟಿಗೊಳಿಸುತ್ತ ಈ ಸಂಘರ್ಷವನ್ನು ಮುಂದುವರೆಸುತ್ತೇನೆ. ಸಂಘರ್ಷ ನಡೆಸುತ್ತೇವೆ, ಗೆಲ್ಲುತ್ತೇವೆ, ದೇಶದ ದ್ರೋಹಿಗಳನ್ನು ಮಟ್ಟ ಹಾಕುತ್ತೇವೆ.

ಧನ್ಯವಾದ.
ಇಂಕ್ವಿಲಾಬ್ ಜಿಂದಾಬಾದ್
ಜೈ ಭೀಮ್.
ಲಾಲ್ ಸಲಾಮ್.
ವೀಡಿಯೋ ಕೊಂಡಿ: https://www.youtube.com/watch?v=KMi0D__l7IE
(ಸುತ್ತಲಿದ್ದವರ ಚಪ್ಪಾಳೆ, ಘೋಷಣೆಗಳ ಕೂಗುವಿಕೆಯ ಸಮಯದಲ್ಲಿ ಒಂದಷ್ಟು ಮಾತುಗಳು ಸ್ಪಷ್ಟವಾಗಿ ಕೇಳಿಸಲಿಲ್ಲ. ಹಾಗಾಗಿ ಆ ಜಾಗಗಳನ್ನು .......... ಖಾಲಿ ಬಿಡಲಾಗಿದೆ. ನಿಮಗೆ ಗೊತ್ತಾದರೆ ತಿಳಿಸಿ - ಹಿಂಗ್ಯಾಕೆ)


9 comments:

 1. ಒಳ್ಳೆಯ ಬರಹ ಅಶೋಕ್. ..

  ReplyDelete
 2. ಯಾವುದೇ ದೃಷ್ಟಿಕೋನದಿಂದ ನೋಡಿದರೂ ಜೆ. ಎನ್. ಯು. ವಿದ್ಯಾರ್ಥಿ ಸಂಘದ ಅಧ್ಯಕ್ಷನ ಬಂಧನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮರ್ಥನೀಯವಲ್ಲ. ಇಂಥ ಬಂಧನ ಸರ್ವಾಧಿಕಾರಿ ರಾಜಪ್ರಭುತ್ವದಲ್ಲಿ ಅಥವಾ ಭಿನ್ನಾಭಿಪ್ರಾಯಗಳನ್ನು ಸಹಿಸದ ಫ್ಯಾಸಿಸ್ಟ್ ಅಥವಾ ಕಮ್ಯುನಿಸ್ಟ್ ಸರ್ವಾಧಿಕಾರದ ಪ್ರಭುತ್ವದಲ್ಲಿ ನಡೆಯುತ್ತದೆ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂಥ ಬಂಧನ ನಡೆಯುವುದು ಸರ್ವಾಧಿಕಾರಿ ಪ್ರಭುತ್ವದ ಆರಂಭಿಕ ಹೆಜ್ಜೆಯೆಂದೇ ಕಂಡುಬರುತ್ತದೆ. ಭಿನ್ನ ರಾಜಕೀಯ ಸಿದ್ಧಾಂತ, ಚಿಂತನೆ ಇರುವವರನ್ನು ಹತ್ತಿಕ್ಕಲು ಅಧಿಕಾರದ ದುರ್ಬಳಕೆ ಮಾಡುವುದು ತಪ್ಪು. ಇದರ ದುಷ್ಪರಿಣಾಮ ಆಳುವ ಸರ್ಕಾರಕ್ಕೆ ಮುಂದೆ ಗೊತ್ತಾಗಲಿದೆ.

  ಯಾವುದೇ ದೃಷ್ಟಿಕೋನದಿಂದ ನೋಡಿದರೂ ಜೆ. ಎನ್. ಯು. ವಿದ್ಯಾರ್ಥಿ ಸಂಘದ ಅಧ್ಯಕ್ಷನ ಬಂಧನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮರ್ಥನೀಯವಲ್ಲ. ಇಂಥ ಬಂಧನ ಸರ್ವಾಧಿಕಾರಿ ರಾಜಪ್ರಭುತ್ವದಲ್ಲಿ ಅಥವಾ ಭಿನ್ನಾಭಿಪ್ರಾಯಗಳನ್ನು ಸಹಿಸದ ಫ್ಯಾಸಿಸ್ಟ್ ಅಥವಾ ಕಮ್ಯುನಿಸ್ಟ್ ಸರ್ವಾಧಿಕಾರದ ಪ್ರಭುತ್ವದಲ್ಲಿ ನಡೆಯುತ್ತದೆ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂಥ ಬಂಧನ ನಡೆಯುವುದು ಸರ್ವಾಧಿಕಾರಿ ಪ್ರಭುತ್ವದ ಆರಂಭಿಕ ಹೆಜ್ಜೆಯೆಂದೇ ಕಂಡುಬರುತ್ತದೆ. ಭಿನ್ನ ರಾಜಕೀಯ ಸಿದ್ಧಾಂತ, ಚಿಂತನೆ ಇರುವವರನ್ನು ಹತ್ತಿಕ್ಕಲು ಅಧಿಕಾರದ ದುರ್ಬಳಕೆ ಮಾಡುವುದು ತಪ್ಪು. ಇದರ ದುಷ್ಪರಿಣಾಮ ಆಳುವ ಸರ್ಕಾರಕ್ಕೆ ಮುಂದೆ ಗೊತ್ತಾಗಲಿದೆ.

  ವಿದ್ಯಾಭ್ಯಾಸದ, ಉನ್ನತ ಶಿಕ್ಷಣದ ಉದ್ದೇಶ ದೊಡ್ಡ ಸಂಬಳದ ನೌಕರಿಗೆ ಸೇರಿ ಶ್ರೀಮಂತರ ಸಾಲಿನಲ್ಲಿ ಗುರುತಿಸಿಕೊಂಡು ಬಡವರಿಂದ ದೂರ ನಿಲ್ಲುವುದು ಎಂಬಂಥ ಸಂಕುಚಿತ ಮನೋಭಾವ ಇಂದು ತಾಂಡವವಾಡುತ್ತಿದೆ. ಒಮ್ಮೆ ಉನ್ನತ ಸಂಬಳದ ನೌಕರಿಗೆ ಸೇರಿದರೆ ನಂತರ ನಮ್ಮ ಜನ ಜನಸಾಮಾನ್ಯರೊಂದಿಗೆ ಬೇರೆಯದೇ ತಮ್ಮ ಅಂತಸ್ತಿನ ಜನರ ಜೊತೆ ಮಾತ್ರ ಬೆರೆಯುವುದೇ ಶ್ರೇಷ್ಠತೆ ಎಂಬ ಸಂಕುಚಿತ ಮನೋಭಾವ ಬೆಳೆಸಿಕೊಂಡಿದ್ದಾರೆ. ಭಾರತದ ಶೇಕಡಾ ೯೫ ಜನ ಐಎಎಸ್ ಅಧಿಕಾರಿಗಳಲ್ಲಿ ಹಾಗೂ ಸರ್ಕಾರೀ ಅಧಿಕಾರಿಗಳಲ್ಲಿ ಇಂಥ ಶ್ರೇಷ್ಟತೆಯ ವ್ಯಸನವನ್ನು ನಾವು ಕಾಣಬಹುದು. ಚಿರಂಜೀವಿ ಸಿಂಗ್ ರಂಥ ಸೂಕ್ಷ್ಮ ಸಂವೇದನಾಶೀಲ ಐಎಎಸ್ ಅಧಿಕಾರಿಗಳನ್ನು ಸೃಷ್ಟಿಸಲು ಅಸಮರ್ಥವಾದ ಉನ್ನತ ಶಿಕ್ಷಣ ವ್ಯವಸ್ಥೆ ಭಾರತದ ಸರ್ಕಾರೀ ಜಡತ್ವಕ್ಕೆ, ಕೆಂಪು ಪಟ್ಟಿಯ ನೀಚ ಆಡಳಿತ ಧೋರಣೆಗೆ ಕಾರಣ. ಬರಿಯ ಪ್ರತಿಭೆ ಇದ್ದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ಐಎಎಸ್, ಕೆ ಎ ಎಸ್ ಅಧಿಕಾರಿಯಾದ ಮಾತ್ರಕ್ಕೆ ಅವರಲ್ಲಿ ಜನಪರ ಕಾಳಜಿ, ಸೂಕ್ಷ್ಮ ಸಂವೇದನಾಶೀಲ ಪ್ರವೃತ್ತಿ ಬೆಳೆಯುವುದಿಲ್ಲ. ಇದು ನಮ್ಮ ಶಿಕ್ಷಣ ವ್ಯವಸ್ಥೆಯ ಹಾಗೂ ಆಡಳಿತ ತರಬೇತಿ ಸಂಸ್ಥೆಗಳ ದೊಡ್ಡ ವೈಫಲ್ಯ. ಇಂಥ ವ್ಯವಸ್ಥೆಯನ್ನು ಬದಲಿಸುವ ಕುರಿತು ವಿಶ್ವವಿದ್ಯಾಲಯಗಳಲ್ಲಿ ಚಿಂತನೆ ನಡೆಯಬೇಕಾಗಿದೆ ಮತ್ತು ಇಂಥ ಚಿಂತನೆ ನಡೆಸುವ ದೇಶದ ಮುಂಚೂಣಿ ವಿಶ್ವವಿದ್ಯಾಲಯ ಜೆ. ಎನ್. ಯು. ಆಗಿದೆ.

  ReplyDelete
  Replies
  1. ನಿಮ್ಮ ಎಲ್ಲಾ ಮಾತುಗಳನ್ನೂ ಒಪ್ಪುತ್ತೇನಾದರೂ ಸರಕಾರೀ ಅಧಿಕಾರಗಳ ಜೊತೆಗೆ ಖಾಸಗಿಯಲ್ಲಿ ಕೆಲಸಕ್ಕಿರುವ ಜನರಲ್ಲೂ ಈ ಶ್ರೇಷ್ಟತೆಯ ವ್ಯಸನವಿದೆ ಎಂಬ ಸಣ್ಣ ತಿದ್ದುಪಡಿ ಮಾಡಲಿಚ್ಛಿಸುತ್ತೇನೆ....

   Delete
 3. Though we agree all arguments put by kanhaiah at JNU, One word is continuously repeated is.brahminism.while appreciating concern for upliftment of faults etc.and also social Justice,why always target Brahman? Are u not creating more gap in the society? instead of focusing on uplifting people based on their cast colour or religion provide good facilities and make them fit to compete and achieve.

  ReplyDelete