Jan 19, 2016

ದನಕ್ಕಿರುವ ಬೆಲೆ ದಲಿತನಿಗಿಲ್ಲದ ದೇಶದಲ್ಲಿ....

(ಈ ಲೇಖನ ಓದಿದ ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಕೋಪ ಮತ್ತು ಬೇಸರ ವ್ಯಕ್ತಪಡಿಸಿರುವುದರಿಂದ ಈ ಸ್ಪಷ್ಟೀಕರಣ. ನಮ್ಮ ನಡುವೆ ಮಾನವೀಯತೆ ಮರೆತ ಮನುವಾದಿ ಮನಸ್ಥಿತಿಯವರು ಹೀಗೂ ಯೋಚಿಸಬಹುದು ಎನ್ನುವ ವಿಡಂಬನಾತ್ಮಕ ಲೇಖನವೇ ಹೊರತು ರೋಹಿತ್ ವೇಮುಲನ ಕುರಿತಾಗಲೀ ಅಥವಾ ದಲಿತರ ಕುರಿತಾಗಲೀ ಅವಹೇಳನ ಮಾಡುವ ಉದ್ದೇಶದ ಲೇಖನವಲ್ಲ. ಸತ್ಯ ಶೋಧನಾ ವರದಿ ಮತ್ತೊಂದು ಮಗದೊಂದು ಎಂಬ ನಾಟಕಗಳಿಂದ ಮೂಡಿದ ವಿಡಂಬನೆಯಿದು. ಆಗಸ್ಟಿನಿಂದ ಇಲ್ಲಿಯವರೆಗೆ ರೋಹಿತ್ ವೇಮುಲ ಮತ್ತವನ ಗೆಳೆಯರ ಸುತ್ತ ನಡೆದ ರಾಜಕೀಯಗಳ ಬಗ್ಗೆ ವಿವರವಾಗಿ ಹಿಂದಿನ ಬರಹದಲ್ಲಿ ದಾಖಲೆಗಳ ಸಮೇತ ಬರೆಯಲಾಗಿದೆ. ಅದನ್ನೋದಲು ಇಲ್ಲಿ ಕ್ಲಿಕ್ಕಿಸಿ - ಹಿಂಗ್ಯಾಕೆ?)
ಡಾ. ಅಶೋಕ್. ಕೆ. ಆರ್
ಭಾನುವಾರ ರಾತ್ರಿ ಒಂದು ಭಾವಪೂರ್ಣ ಪತ್ರ ಬರೆದಿಟ್ಟು ನೇಣಿಗೆ ಶರಣಾಗಿಬಿಟ್ಟವನು ರೋಹಿತ್ ವೇಮುಲ. ಇಂಗ್ಲೀಷಿನಲ್ಲಿದ್ದ ಆ ಪತ್ರವನ್ನು ಕನ್ನಡಕ್ಕೆ ಅನುವಾದಿಸಿ ಜೊತೆಗೆ ಹೈದರಾಬಾದಿನಲ್ಲಿ ಕಳೆದ ಆಗಸ್ಟಿನಿಂದ ನಡೆದಿದ್ದೇನು ಎನ್ನುವುದನ್ನು ನಿನ್ನೆ ಪ್ರಕಟಿಸಲಾಗಿತ್ತು. ಕಿರಣ್ ಗಾಜನೂರು ಕೂಡ ಆ ಪತ್ರವನ್ನು ಕನ್ನಡಕ್ಕೆ ಅನುವಾದಿಸಿ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದರು. ಹಿಂಗ್ಯಾಕೆಯಲ್ಲಿ ಬಂದಿದ್ದ ಅನುವಾದ, ಕಿರಣ್ ಗಾಜನೂರು ಮಾಡಿದ್ದ ಅನುವಾದ ಉಳಿದ ವೆಬ್ ಪುಟಗಳಲ್ಲಿ, ಫೇಸ್ ಬುಕ್ಕಿನಲ್ಲಿ, ವಾಟ್ಸ್ ಅಪ್ಪಿನಲ್ಲಿ ಹರಿದಾಡುತ್ತಲೇ ಇದೆ. ನನ್ನ ವಾಟ್ಸಪ್ಪಿಗೆ ಹಲವು ಸಲ ಬಂದಿದೆ. ಎಷ್ಟೇ ಸಲ ಬಂದರೂ ಮತ್ತೆ ಮತ್ತೆ ಓದಬೇಕೆನ್ನಿಸುತ್ತಿತ್ತು. ಓದಿ ಓದಿ ಈಗ ರೋಹಿತನ ಮೇಲೆ ಕೋಪ ಬಂದಿದೆ. ಹೈದರಾಬಾದಿನ ಉಪಕುಲಪತಿ ಅಪ್ಪಾರಾವ್, ಈ ಐದು ಹುಡುಗರ ಜಾತಿವಾದಿ, ದೇಶದ್ರೋಹಿ ಕೆಲಸಗಳಿಗೆ ತಡೆ ಹಾಕಬೇಕೆಂದು ಸ್ಮೃತಿ ಇರಾನಿಗೆ ಪತ್ರ ಬರೆದ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯರ ವಿರುದ್ಧ ಆತ್ಮಹತ್ಯಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೇಸು ದಾಖಲಾಗಿದೆ. ಸಚಿವೆ ಸ್ಮೃತಿ ಇರಾನಿಯವರು ಸತ್ಯ ಶೋಧನಾ ಸಮಿತಿಯನ್ನು ಕಳುಹಿಸಲಾಗುವುದೆಂದು ಹೇಳಿದ್ದಾರೆ. ಸತ್ಯ ಕಣ್ಣಿಗೆ ಕಾಣುವಾಗ ಶೋಧನಾ ಸಮಿತಿ ಯಾಕೆ? ಮೊದಲಿಗೆ ಮಾಡಬೇಕಾದ ಕೆಲಸವೆಂದರೆ ಅಮಾಯಕರಾದ ಬಂಡಾರು ದತ್ತಾತ್ರೇಯ ಮತ್ತು ಅಪ್ಪಾರಾವರ ವಿರುದ್ಧ ಹಾಕಿರುವ ಕೇಸುಗಳನ್ನು ಹಿಂತೆಗೆದುಕೊಳ್ಳಬೇಕು. ಯಾರ್ಯಾರು ಈ ಪ್ರಕರಣದಲ್ಲಿ ಅಪರಾಧಿಗಳೆಂದು ನೋಡೋಣ.
ಮೊದಲ ಅಪರಾಧಿಯ ಸ್ಥಾನದಲ್ಲಿ ಅಂಬೇಡ್ಕರರನ್ನು ನಿಲ್ಲಿಸಬೇಕು. ಚಾತುರ್ವರ್ಣ ನೀತಿಯೊಳಗೂ ಇಲ್ಲದ ದಲಿತರಿಗೊಂದು ಆತ್ಮಾಭಿಮಾನ ಮೂಡಿಸುವ ಕೆಲಸಕ್ಕಿಂತ ದೊಡ್ಡ ಅಪರಾಧ ಯಾವುದಾದರೂ ಇದೆಯೇ? ದಲಿತರು ಓದಬೇಕು, ದಲಿತರಿಗೆ ಸಮಾನತೆ ಸಿಗಬೇಕು ಎಂಬ ಕೆಟ್ಟ ಬುದ್ಧಿಯನ್ನೆಲ್ಲ ಅವರು ಪ್ರಚುರಪಡಿಸದಿದ್ದರೆ ಎಲ್ಲಾ ದಲಿತರು ಊರಾಚೆ ಬದುಕಿ ದೊಡ್ಡ ಜಾತಿಯವರ ಮಲ ಬಳಿದು, ಸತ್ತ ದನದ ಚರ್ಮ ಸುಲಿದು, ಊರೊಳಗೆ ಬರುವಾಗ ತಮಟೆ ಬಡಿಯುತ್ತ, ತಮ್ಮ ನೆರಳು ಮೇಲ್ಜಾತಿಯವರಿಗೆ ತಗುಲದಂತೆ ಎಚ್ಚರ ವಹಿಸುತ್ತ ಅಕ್ಷರ ಭಯೋತ್ಪಾದಕರ ಹಂಗಿಲ್ಲದೆ ನೆಮ್ಮದಿಯಾಗಿ ಇದ್ದುಬಿಡಬಹುದಿತ್ತಲ್ಲ. ಸುಖಾಸುಮ್ಮನೆ ಹದಿನೆಂಟು ಪರ್ಸೆಂಟು, ರಿಸರ್ವೆಷನ್ನು ಅಂತೆಲ್ಲ ಹೀಯಾಳಿಸಿಕೊಂಡು ಓದಿ ಉದ್ಧಾರವಾಗಬೇಕಾದ ದರ್ದೇನಿತ್ತಿವರಿಗೆ? ಇಂತ ಕೆಟ್ಟ ಬುದ್ಧಿಯನ್ನೆಲ್ಲ ಹೇಳಿಕೊಟ್ಟು ಸ್ವಾಭಿಮಾನ ತುಂಬಿದ್ದು ಆ ಅಂಬೇಡ್ಕರ್ ತಾನೇ? ಅದಿಕ್ಕೆ ಅವರ ಮೇಲೆ ಮೊದಲು ಕೇಸು ಹಾಕಬೇಕು. ಜೊತೆಗೆ ಎಲ್ಲರಿಗೂ ಶಿಕ್ಷಣ ನೀಡಲು ಶ್ರಮಿಸಿದ ಜ್ಯೋತಿಭಾ ಪುಲೆ, ಸಾವಿತ್ರಿಭಾಯಿ ಪುಲೆಯವರ ಮೇಲೆ ಕೇಸು ಜಡಿಯುವುದನ್ನು ಮರೆಯಬಾರದು. ಸತ್ತೋರ ಮೇಲೆ ಹಾಕುವ ಕೇಸಿನಿಂದ ಉಪಯೋಗ ಜಾಸ್ತಿ ಇಲ್ಲ ಅಲ್ಲವೇ.
ಮುಂದಿನ ಕೇಸನ್ನು ರೋಹಿತ್ ವೇಮುಲನ ತಂದೆ ತಾಯಿಯ ಮೇಲೆ ಹಾಕಬೇಕು. ಆಂಧ್ರದಲ್ಲೇನು ಜಮೀನುದಾರರಿಗೆ, ಭೂಮಾಲೀಕರಿಗೆ ಕೊರತೆಯೇ? ಅಂತವರ ಬಳಿಗೆ ತಮ್ಮ ಮಗನನ್ನು ಜೀತಕ್ಕೋ ಕೂಲಿಗೋ ಕಳುಹಿಸಿ ಚಾತುರ್ವರ್ಣ ಪದ್ಧತಿಯ ಉಳಿವಿಗೆ ಶ್ರಮಿಸುವುದನ್ನು ಬಿಟ್ಟು ಹೈದರಾಬಾದಿನ ವಿಶ್ವವಿದ್ಯಾಲಯಕ್ಕೆ ಓದಲು ಕಳುಹಿಸುವ ದುರಹಂಕಾರದ ಕೆಲಸವನ್ಯಾಕೆ ಮಾಡಬೇಕಿತ್ತವರು. ಓದಲಾತ ಇಲ್ಲಿಗೆ ಬರದಿದ್ದರೆ ಹೋರಾಟ ಮಣ್ಣು ಮಸಿ ಅಂತೆಲ್ಲ ಅವನ ತಲೆಗೆ ಹೋಗುತ್ತಲೇ ಇರಲಿಲ್ಲ. ನೆಮ್ಮದಿಯಾಗಿ ತಂಗಳನ್ನ ತಿಂದುಕೊಂಡು ಮೈಮುರಿದು ದುಡಿದು, ದಲಿತರ ಮೇಲಿನ ಅನ್ಯಾಯ ಕಣ್ಣಿಗೆ ಬಿದ್ದಾಗ 'ಎಲ್ಲಾ ನಮ್ ಪೂರ್ವಜನ್ಮದ ಪಾಪದ ಫಲ' ಎಂಬ ಅಯ್ನೋರ ಹೇಳಿಕೆಯನ್ನು ನೆನಪಿಸಿಕೊಂಡು ತಲೆ ತಗ್ಗಿಸಿ ಹೋಗಿಬಿಡಬಹುದಾಗಿದ್ದ ಯುವಕನನ್ನು ಓದಿಸಿ ಅವನ ಸಾವಿಗೆ ಕಾರಣವಾಗಿದ್ದು ವೇಮುಲನ ತಂದೆ ತಾಯಿಯೇ ಅಲ್ಲವೇ?
ಹೋಗ್ಲಿ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಓದಲು ಬಂದ ಮೇಲೆ ರಾಜಕೀಯ ಪ್ರಜ್ಞೆಯನ್ನು ಚೂರೂ ಬೆಳೆಸಿಕೊಳ್ಳದೇ ಓದಿಕೊಂಡು, ನಲಿದಾಡಿಕೊಂಡು, ಪಿಚ್ಚರ್ರು, ಮಾಲೂ ಅಂತ ತಿರುಗಾಡಿಕೊಂಡು ಇರುವುದನ್ನು ಬಿಟ್ಟು ಅದ್ಯಾಕೆ ಅಂಬೇಡ್ಕರ್ ವಿದ್ಯಾರ್ಥಿ ಸಂಘಕ್ಕೆಲ್ಲ ಸೇರಬೇಕಿತ್ತು? (ನೋಡಿ ಮತ್ತೆ ಇಲ್ಲಿ ಅಂಬೇಡ್ಕರ್ ಅಪರಾಧಿ). ಮುಜಾಫರ್ ನಗರದಲ್ಲಿ ನಡೆದ ಘಟನೆ ಕಟ್ಟಿಕೊಂಡು ಇವರಿಗೇನಾಬೇಕು? ಅಲ್ಲಿನ ಗಲಭೆಯ ಬಗೆಗಿನ ಡಾಕ್ಯುಮೆಂಟರಿಯನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಲು ಬಿಡದಿದ್ದರೆ ಇವರಿಗೇನು ಹೋಗಬೇಕು? ಓ! ಅಲ್ಲಿನ ಕೋಮುಗಲಭೆಯಲ್ಲಿ ಹಿಂಸೆಗೊಳಗಾಗಿದ್ದು ಮುಸ್ಲಿಮರು, ಇದ್ದ ಹೆಚ್ಚು ಕಡಿಮೆ ಎಲ್ಲಾ ನಿರಾಶ್ರಿತ ಶಿಬಿರಗಳು ಮುಸ್ಲಿಮರದು, ಎರಡೇ ಎರಡು ನಿರಾಶ್ರಿತ ಶಿಬಿರಗಳು ಹಿಂದೂಗಳದ್ದಿತ್ತು. ಹಿಂದೂ ಧರ್ಮ ಅಸಹ್ಯಿಸುವ ದಲಿತರ ನಿರಾಶ್ತಿತ ಶಿಬಿರಗಳು. ದಲಿತರ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ ಬಗ್ಗೆಯೂ ಸಾಕ್ಷ್ಯಚಿತ್ರದಲ್ಲಿತ್ತು
(ಮುಜಾಫರ್ ನಗರದ ಕೋಮುಗಲಭೆಯಲ್ಲಿ ನಲುಗಿದ ಧರ್ಮವ್ಯಾವುದು?

ಅದರ ಬಗ್ಗೆಯೆಲ್ಲ ಇವರ್ಯಾಕೆ ತಲೆಕೆಡಿಸಿಕೊಳ್ಳಬೇಕಿತ್ತು. ದೇಶದಲ್ಲಿ ಹಿಂದೂ ಧರ್ಮವನ್ನು ರಕ್ಷಿಸಲು ಬಹುದೊಡ್ಡ ಪಡೆ ಸಿದ್ಧವಾಗಿರುವಾಗ ಅಂತವರ ಜೊತೆ ಕೈಜೋಡಿಸುವ ಕೆಲಸ ಮಾಡುವುದನ್ನು ಬಿಟ್ಟು ಸತ್ಯ - ಧರ್ಮ - ನ್ಯಾಯ ಎಂದೆಲ್ಲ ಬೊಬ್ಬೆ ಹೊಡೆಯುವುದ್ಯಾಕೆ? ಇಂತಹ ಚಿಂತನೆಗಳನ್ನೆಲ್ಲ ತಲೆಗೆ ತುಂಬಿದ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಮೇಲೂ ಮರೆಯದೆ ಪ್ರಕರಣ ದಾಖಲಾಗಬೇಕು.
ರೋಹಿತನ ತಲೆಕೆಡಿಸಿದ ಅಂಬೇಡ್ಕರ್, ಜ್ಯೋತಿಭಾ ಪುಲೆ, ಶಿಕ್ಷಣ ಕೊಡಿಸಿದ ತಂದೆ ತಾಯಿ, ವಿಚಾರಗಳನ್ನು ತುಂಬಿದ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಮೇಲೆ ಕೇಸುಗಳನ್ನು ದಾಖಲಿಸುವುದನ್ನು ಬಿಟ್ಟು ಹಿಂದೂ ಧರ್ಮ ರಕ್ಷಕರ ಮೇಲೆ ಕೇಸು ಹಾಕಿರುವುದು ಸರಿಯಲ್ಲ. ಮತ್ತು ದನ ಸಾಯಿಸಿದಾಗ ಮಾತನಾಡದವರೆಲ್ಲರೂ ಯಕಶ್ಚಿತ್ ಒಬ್ಬ ದಲಿತ ಸತ್ತಾಗ ದೇಶವೇ ಹಾಳಾಯಿತೆಂದು ಬೊಬ್ಬೆ ಹೊಡೆಯುವ ದುರ್ವಿಧಿ ಈ ದೇಶಕ್ಕೆ ಬರಬಾರದಿತ್ತು. ಅಲ್ಲರೀ ದನದೊಳಗೆ ಮೂವತ್ತುಮೂರು ಕೋಟಿ ದೇವತೆಗಳು ಬದುಕಿ ಬಾಳುತ್ತಿವೆ, ಈ ಹಾಳಾದ ದಲಿತರಲ್ಲೇನಿದೆ? ಅವರ ಮುಖ ಕಂಡ್ರೆ ನಮ್ ದೇವ್ರಿಗೇ ಮೈಲಿಯಾಗಿಬಿಡುತ್ತೆ ಅನ್ನೋ ಕಾಮನ್ ಸೆನ್ಸ್ ಕೂಡ ನಮ್ ಜನರಲ್ಲಿ ಕಾಣೆಯಾಗಿಬಿಟ್ಟಿದೆಯಲ್ಲ. ಸಮಾನ ಆಹಾರದ ಹಕ್ಕಿನ ಕುರಿತು ಮಾಂಸ ತಿನ್ನೋರು ತಿನ್ದೇ ಇರೋರೆಲ್ಲ ಸೇರ್ಕಂಡು ವಡೆ, ಬೀಫು ತಿಂದು ಪ್ರತಿಭಟನೆ ನಡೆಸಿದಾಗ ಅಂಡು ಬಡ್ಕೊಂಡು ಅರಚಿಕೊಂಡವರೆಲ್ಲ ನೋಡಿ ಎಷ್ಟೊಂದು ಮೌನದಿಂದಿದ್ದಾರೆ. ಅವರಿಗೆ ಗೊತ್ತು ಇಂತಹ ಘಟನೆಗಳು ಸನಾತನ ಧರ್ಮ ಮರುಪ್ರತಿಷ್ಟಾಪನೆಯಾಗುತ್ತಿರುವ ಲಕ್ಷಣಗಳೆಂದು. ಅವರ ಮೌನವನ್ನು ನೋಡಿಯೂ ಕಲಿಯದ ಈ ದೇಶದ ದ್ರೋಹಿಗಳು ರೋಹಿತನ ಆತ್ಮಹತ್ಯೆಯನ್ನು ಪ್ರತಿಭಟಿಸಿ ಇವತ್ತು (19/01/2015) ಅದೇ ಬೆಂಗಳೂರಿನ ಟೌನ್ ಹಾಲಿನ ಮುಂದೆ ಸಂಜೆ ನಾಲ್ಕೂವರೆಗೆ ನಾಲಕ್ಕು ಫೋಟೋ ಇಟ್ಕೊಂಡು, ಹತ್ತು ಬ್ಯಾನರ್ ಕಟ್ಕೊಂಡು ಕೂಗುವ ಕಾರ್ಯಕ್ರಮ ಇಟ್ಕೊಂಡಿದ್ದಾರಂತೆ. ಬಿಡುವಾಗಿದ್ದರೆ ನೀವು ಅತ್ತ ಕಡೆ ಒಮ್ಮೆ ಬಂದು ದೇಶದ್ರೋಹಿಗಳನ್ನು ಕಣ್ತುಂಬ ನೋಡಿಕೊಂಡು ಹೋಗಬೇಕಾಗಿ ವಿನಂತಿ

No comments:

Post a Comment