Jan 18, 2016

ರೋಹಿತ್ ವೇಮುಲನ ಸಾವಿಗೆ ಹೊಣೆಯಾರು?

“ಶುಭ ಮುಂಜಾನೆ,
ಈ ಪತ್ರವನ್ನು ನೀವು ಓದುವಾಗ ನಾನಿರುವುದಿಲ್ಲ. ಕೋಪ ಮಾಡಿಕೊಳ್ಳಬೇಡಿ. ನನಗೆ ಗೊತ್ತು, ನಿಮ್ಮಲ್ಲಿ ಹಲವರು ನನ್ನ ಒಳಿತು ಬಯಸಿದಿರಿ, ಪ್ರೀತಿಸಿದಿರಿ ಮತ್ತು ಚೆಂದ ನೋಡಿಕೊಂಡಿರಿ. ಯಾರ ಮೇಲೂ ನನಗೆ ದೂರುಗಳಿಲ್ಲ. ಯಾವಾಗಲೂ ನಾನೇ ನನ್ನ ಸಮಸ್ಯೆಗಳಿಗೆ ಕಾರಣ. ನನ್ನ ದೇಹ ಮತ್ತು ಆತ್ಮದ ನಡುನಿನ ಕಂದಕ ದೊಡ್ಡದಾಗುತ್ತಿರುವ ಭಾವನೆ. ಮತ್ತು ನಾನು ರಾಕ್ಷಸನಾಗಿಬಿಟ್ಟಿದ್ದೇನೆ. ನನಗೆ ಬರಹಗಾರನಾಗಬೇಕೆಂದಿತ್ತು. ವಿಜ್ಞಾನ ಲೇಖಕ ಕಾರ್ಲ್ ಸಗಾನಿನ ಹಾಗೆ. ಕೊನಗೆ, ಇದೊಂದೇ ಪತ್ರವನ್ನಷ್ಟೇ ಬರೆಯಲು ನನ್ನಿಂದಾದದ್ದು.

ವಿಜ್ಞಾನ, ನಕ್ಷತ್ರ, ಪ್ರಕೃತಿಯನ್ನು ಪ್ರೀತಿಸಿದೆ; ಪ್ರಕೃತಿಯಿಂದ ಮನುಷ್ಯರು ವಿಚ್ಛೇದನ ಪಡೆದು ಬಹಳ ದಿನಗಳಾಯಿತು ಎಂಬುದನ್ನು ಅರಿಯದೆ ಮನುಷ್ಯರನ್ನು ಪ್ರೀತಿಸಿದೆ. ನಮ್ಮ ಭಾವನೆಗಳೆಲ್ಲ ಸೆಕೆಂಡ್ ಹ್ಯಾಂಡು. ಪ್ರೀತಿಯನ್ನಿಲ್ಲಿ ‘ಕಟ್ಟಲಾಗಿದೆ’. ನಂಬಿಕೆಗಳಿಗೆ ಬಣ್ಣ ಬಳಿಯಲಾಗಿದೆ. ನಮ್ಮ ಸ್ವಂತಿಕೆಗೆ ಬೆಲೆ ಬರುವುದು ಕೃತಕ ಕಲೆಯಿಂದ. ನೋವುಣ್ಣದೆ ಪ್ರೀತಿಸುವುದು ನಿಜಕ್ಕೂ ಕಷ್ಟಕರವಾಗಿಬಿಟ್ಟಿದೆ.

ಮನುಷ್ಯನ ಮೌಲ್ಯ ಅವನ ತತ್ ಕ್ಷಣದ ಗುರುತು ಮತ್ತು ಸಾಧ್ಯತೆಗಳಿಗೆ ಇಳಿದುಬಿಟ್ಟಿದೆ. ಒಂದು ವೋಟಿಗೆ. ಒಂದು ನಂಬರ್ರಿಗೆ. ಒಂದು ವಸ್ತುವಿಗೆ. ನಕ್ಷತ್ರದ ಧೂಳಿನಿಂದ ಉದ್ಭವವಾದ ಅತ್ಯದ್ಭುತ ವಸ್ತುವಿನಂತಹ ಬುದ್ಧಿವಂತಿಕೆ ಮೂಲಕ ಎಂದೂ ಮನುಷ್ಯನನ್ನು ಗುರುತಿಸಲಿಲ್ಲ. ಬೀದಿಯಲ್ಲಿ, ಓದಿನಲ್ಲಿ, ರಾಜಕೀಯದಲ್ಲಿ, ಸಾವಿನಲ್ಲಿ, ಬದುಕಿನಲ್ಲಿ.

ಈ ರೀತಿಯ ಪತ್ರವನ್ನು ಮೊದಲ ಬಾರಿಗೆ ಬರೆಯುತ್ತಿದ್ದೇನೆ. ಮೊದಲ ಬಾರಿಗೆ ಕೊನೆಯ ಪತ್ರ. ಸರಿಯಿರದಿದ್ದರೆ ಕ್ಷಮಿಸಿ.

ಬಹುಶಃ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ತಪ್ಪಿದೆ. ಪ್ರೀತಿ, ನೋವು, ಬದುಕು, ಸಾವು ಅರ್ಥ ಮಾಡಿಕೊಳ್ಳುವಲ್ಲಿ ಸೋತೆ. ಆತುರವೇನಿರಲಿಲ್ಲ, ನಾನು ಓಡುತ್ತಲೇ ಇದ್ದೆ. ಬದುಕು ಪ್ರಾರಂಭಿಸುವ ಅವಸರವಿತ್ತು. ಕೆಲವರಿಗೆ ಬದುಕೇ ಶಾಪ. ನನಗೆ, ನನ್ನ ಹುಟ್ಟೇ ಮಾರಾಣಾಂತಿಕ ಅಪಘಾತ. ಬಾಲ್ಯದ ಒಂಟಿತನದಿಂದ ನಾನೆಂದೂ ಹೊರಬರಲಾರೆ. ಹೊಗಳಿಕೆ ಪಡೆಯದ ಮಗುವಿನ ಭೂತ.

ಈ ಕ್ಷಣದಲ್ಲಿ ನನಗೆ ನೋವಾಗುತ್ತಿಲ್ಲ, ದುಃಖವಾಗುತ್ತಿಲ್ಲ; ಖಾಲಿಯಾಗಿದ್ದೀನಷ್ಟೇ. ನನ್ನ ಬಗ್ಗೆ ನನಗೇ ಕ್ಯಾರೆಯಿಲ್ಲ. ಇದು ಅಸಹ್ಯ. ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ.

ಜನರು ನನ್ನನ್ನು ಹೇಡಿಯೆಂದು ಜರಿಯಬಹುದು. ನಾನು ಹೋದ ಮೇಲೆ ಮೂರ್ಖ, ಸ್ವಾರ್ಥಿ ಎನ್ನಬಹುದು. ನನ್ನನ್ನು ಹೇಗೆ ಕರೆಯುತ್ತಾರೋ ಎನ್ನುವುದರ ಬಗ್ಗೆ ನನಗೆ ಚಿಂತೆಯಿಲ್ಲ. ಮರಣಾನಂತರದ ಕತೆಗಳಲ್ಲಿ, ದೆವ್ವಗಳಲ್ಲಿ ನನಗೆ ನಂಬಿಕೆಯಿಲ್ಲ. ಏನನ್ನಾದರೂ ನಂಬಬಹುದೆಂದರೆ, ನಕ್ಷತ್ರಗಳ ಜೊತೆ ಪಯಣಿಸುವುದನ್ನು ನಂಬುತ್ತೇನೆ. ಮತ್ತು ಇತರೆ ವಿಶ್ವಗಳ ಬಗ್ಗೆ ತಿಳಿದುಕೊಳ್ಳಬಯಸುತ್ತೇನೆ.

ಈ ಪತ್ರ ಓದುತ್ತಿರುವ ನೀವು ನನಗೇನಾದರೂ ಮಾಡಬಹುದಾದರೆ, ಕಳೆದ ಏಳು ತಿಂಗಳಿನ ಫೆಲ್ಲೋಶಿಪ್ ಹಣ ಒಂದು ಲಕ್ಷದ ಎಪ್ಪತ್ತೈದು ಸಾವಿರ ರುಪಾಯಿ ಇನ್ನೂ ಬರಬೇಕಿದೆ. ನನ್ನ ಕುಟುಂಬದವರಿಗೆ ಆ ಹಣ ತಲುಪುವುದನ್ನು ಖಾತ್ರಿ ಪಡಿಸಿಕೊಳ್ಳಿ. ರಾಮ್ಜಿಗೆ ನಲವತ್ತು ಸಾವಿರದತ್ತಿರ ಕೊಡಬೇಕಿದೆ. ಅವನದ್ಯಾವತ್ತನ್ನೂ ವಾಪಸ್ಸು ಕೇಳಿಲ್ಲ. ದಯವಿಟ್ಟು ನನಗೆ ಬರುವ ಹಣದಲ್ಲಿ ಅವನ ಹಣವನ್ನು ಕೊಟ್ಟುಬಿಡಿ.

ನನ್ನ ಅಂತ್ಯಕ್ರಿಯೆ ಶಾಂತವಾಗಿ ಸರಾಗವಾಗಿ ನಡೆಯಲಿ. ಹಿಂಗೆ ಕಾಣಿಸಿಕೊಂಡು ಹಂಗೆ ಮರೆಯಾಗಿಬಿಟ್ಟ ಎನ್ನುವಂತೆ ವರ್ತಿಸಿ. ನನಗಾಗಿ ಕಣ್ಣೀರು ಬೇಡ. ಬದುಕಿಗಿಂತ ಸಾವಿನಲ್ಲೇ ನನಗೆ ಹೆಚ್ಚು ಖುಷಿಯಿದೆ ಎನ್ನುವುದು ಗೊತ್ತಿರಲಿ.

ಉಮಾ ಅಣ್ಣ, ಈ ಕೆಲಸಕ್ಕೆ ನಿಮ್ಮ ರೂಮನ್ನು ಉಪಯೋಗಿಸಿದ್ದಕ್ಕೆ ಕ್ಷಮೆ ಇರಲಿ.

ನಿರಾಸೆ ಮೂಡಿಸಿದ್ದಕ್ಕೆ ಎ.ಎಸ್.ಎ ಕುಟುಂಬದ (ASA: Ambedkar Students Association) ಕ್ಷಮೆ ಕೇಳುತ್ತೇನೆ. ನೀವೆಲ್ಲರೂ ನನ್ನನ್ನು ತುಂಬಾ ಪ್ರೀತಿಸಿದಿರಿ. ಎ.ಎಸ್.ಎನ ಭವಿಷ್ಯಕ್ಕೆ ಶುಭ ಕೋರುತ್ತೇನೆ.
ಕೊನೆಯ ಬಾರಿಗೆ,
ಜೈ ಭೀಮ್.

ಫಾರ್ಮಾಲಿಟಿಗಳನ್ನು ಬರೆಯುವುದನ್ನು ಮರೆತುಬಿಟ್ಟೆ. ಈ ಆತ್ಮಹತ್ಯೆಗೆ ಯಾರೂ ಜವಾಬ್ದಾರರಲ್ಲ. 
ತಮ್ಮ ಕಾರ್ಯ ಅಥವಾ ತಮ್ಮ ಮಾತಿನಿಂದ ಯಾರೂ ಪ್ರೇರೇಪಿಸಲಿಲ್ಲ.
ಇದು ನನ್ನ ನಿರ್ಧಾರ ಮತ್ತು ಇದಕ್ಕೆ ನಾನೊಬ್ಬನೇ ಜವಾಬ್ದಾರ.
ನಾನು ಹೋದ ಮೇಲೆ ಈ ವಿಷಯವಾಗಿ ನನ್ನ ಸ್ನೇಹಿತರಿಗೆ ಮತ್ತು ಶತ್ರುಗಳಿಗೆ ತೊಂದರೆ ಕೊಡಬೇಡಿ.”

ಇಂತಹುದೊಂದು ಮನಕಲಕುವ ಪತ್ರವನ್ನು ಬರೆದು ಭಾನುವಾರ ರಾತ್ರಿ ನೇಣಿನ ಕುಣಿಕೆಗೆ ಕುತ್ತಿಗೆಯನ್ನೊಡ್ಡಿದವನು ರೋಹಿತ್ ವೇಮುಲಾ, ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಪೂರ್ಣವಾಗಿ ಹೇಳಬೇಕೆಂದರೆ Dalit Research scholar. ಮರಣ ಪತ್ರ ಸಾವಿಗೆ ಹತ್ತಲವು ಕಾರಣಗಳಿದ್ದಿರಬಹುದೆಂಬ ಅನುಮಾನ ಮೂಡಿಸುತ್ತದೆ. ಹತ್ತಲವು ಕಾರಣಗಳಲ್ಲಿ ಕಳೆದೈದು ತಿಂಗಳುಗಳಿಂದ ರೋಹಿತ್ ವೇಮುಲ ಮತ್ತವನ ಸ್ನೇಹಿತರ ಮೇಲಾದ ಮಾನಸಿಕ ಕ್ರೌರ್ಯ ಪ್ರಮುಖವಾದುದು. ಉಳಿದ ಕಾರಣಗಳನ್ನು ಪ್ರಮುಖವಾಗಿಸಿ ಮೂಲಕಾರಣವನ್ನು ಮರೆಮಾಚುವ ಮುನ್ನ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ನಡೆದಿದ್ದರ ಕಡೆಗೆ ಗಮನಹರಿಸೋಣ.

ದೆಹಲಿ ವಿಶ್ವವಿದ್ಯಾಲಯದಲ್ಲಿ ‘ಮುಝಾಫರ್ ನಗರ್ ಬಾಕೀ ಹೈ’ ಸಾಕ್ಷ್ಯಚಿತ್ರದ ಪ್ರದರ್ಶನದ ವೇಳೆ ಎಬಿವಿಪಿಯ ಕಾರ್ಯಕರ್ತರು ನುಗ್ಗಿ ದಾಂಧಲೆ ಮಾಡಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ನಿಲ್ಲಿಸಿಬಿಟ್ಟರು. ಎಬಿವಿಪಿಯ ಈ ಕೃತ್ಯವನ್ನು ವಿರೋಧಿಸಿ ಹೈದರಾಬಾದ್ ವಿಶ್ವವಿದ್ಯಾಲಯದ ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎ.ಎಸ್.ಎ: Ambedkar student association) 2015ರ ಆಗಸ್ಟ್ ಮೂರರಂದು ಪ್ರತಿಭಟನೆ ಆಯೋಜಿಸುತ್ತಾರೆ. 
ಪ್ರತಿಭಟಿಸುವುದು ತಪ್ಪೇ?
ಹೈದರಾಬಾದ್ ವಿಶ್ವವಿದ್ಯಾಲಯದ ಎಬಿವಿಪಿಯ ಮುಖಂಡ ನಂದನಂ ಸುಶೀಲ್ ಕುಮಾರ್ ಈ ಪ್ರತಿಭಟನೆಯ ಕುರಿತಂತೆ ಕೆಳಗಿನಂತೆ ಫೇಸ್ ಬುಕ್ಕಿನಲ್ಲೊಂದು ಪೋಸ್ಟ್ ಹಾಕುತ್ತಾನೆ. 
ಸುಶೀಲ್ ಕುಮಾರನ ಫೇಸ್ ಬುಕ್ ಪೋಸ್ಟ್
ಕೆರಳಿದ ಎ.ಎಸ್.ಎ ಹುಡುಗರು ಗುಂಪು ಕಟ್ಟಿಕೊಂಡು ಸುಶೀಲ್ ಕುಮಾರನ ರೂಮಿಗೆ ನುಗ್ಗುತ್ತಾರೆ. ಅಲ್ಲವನು ಸೆಕ್ಯುರಿಟಿಯವರ ಮುಂದೆ ಒಂದು ಕ್ಷಮಾಪಣೆ ಪತ್ರ ಬರೆದುಕೊಡುತ್ತಾನೆ. ಸಂಘಟನೆಗಳ ಗಲಾಟೆ, ಹುಡುಗರ ಗಲಾಟೆ ಅಲ್ಲಿಗೆ ಮುಗಿಯಬೇಕಿತ್ತು. ಮುಗಿಯಲಿಲ್ಲ. 
ಸುಶೀಲ್ ಕುಮಾರ್ ಬರೆದುಕೊಟ್ಟ ಕ್ಷಮಾಪಣಾ ಪತ್ರ
ಸುಶೀಲ್ ಕುಮಾರ್ ಎ.ಎಸ್.ಎ ಹುಡುಗರಿಂದ ಪೆಟ್ಟು ತಿಂದಿದ್ದಾನೆ ಎಂದು ಆಸ್ಪತ್ರೆಗೆ ಸೇರುತ್ತಾನೆ. ಬಿಜೆಪಿಯಲ್ಲಿರುವ ಸುಶೀಲನ ಅಣ್ಣ, ಬಿಜೆಪಿಯ ಎಂ.ಎಲ್.ಸಿ ರಾಮಚಂದ್ರ ರಾವ್ ಹೀಗೆ ರಾಜಕೀಯ ಪಕ್ಷದ ಪ್ರವೇಶವಾಗುತ್ತದೆ. ದಲಿತ ಹುಡುಗರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತದೆ.

ನಡೆದಿದ್ದೇನು ಎನ್ನುವುದನ್ನು ವಿಚಾರಿಸಲು ಆಗಿದ್ದ ಉಪಕುಲಪತಿ ಪ್ರೊಫೆಸರ್ ಆರ್.ಪಿ.ಶರ್ಮಾ, ಪ್ರೊಫೆಸರ್ ಅಲೋಕ್ ಪಾಂಡೆಯವರ ನೇತೃತ್ವದಲ್ಲೊಂದು ಸಮಿತಿ ರಚಿಸುತ್ತಾರೆ. ಈ ಸಮಿತಿ ಕೊಟ್ಟ ವರದಿ ಅವರೇ ಕಂಡುಕೊಂಡೆವೆಂದು ಬರೆದಿದ್ದ ಸಂಗತಿಗಳಿಂತ ಸಂಪೂರ್ಣ ಭಿನ್ನವಾಗಿತ್ತು! 



ಸಮಿತಿಯ ಮೊದಲ ನಿರ್ಧಾರಗಳು

ಸಮಿತಿ ಕಂಡುಕೊಂಡ ಸಂಗತಿಗಳಲ್ಲಿ ಸುಶೀಲ್ ಕುಮಾರ್ ಮೇಲೆ ಹಲ್ಲೆಯಾಗಿದ್ದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಸುಶೀಲ್ ಕುಮಾರರನ್ನು ನೋಡಿಕೊಳ್ಳುತ್ತದ್ದ ಡಾ. ಅನುಪಮಾ ಕೊಟ್ಟ ವರದಿಯಲ್ಲೂ ಹಲ್ಲೆಗೂ ಸುಶೀಲ್ ಕುಮಾರನ ಪರಿಸ್ಥಿತಿಗೂ ಸಂಬಂಧವಿಲ್ಲವೆಂದೇ ಹೇಳುತ್ತಿತ್ತು. (ಸುಶೀಲ್ ಕುಮಾರನಿಗೆ ಅಪೆಂಡಿಸೈಟಿಸ್ ಆಗಿತ್ತು). ಎಡ ತೋಳಿನ ಮೇಲೆ ಕೆಲವು ಗೀರು ಗಾಯಗಳಿದ್ದವು ಎಂದಷ್ಟೇ ವೈದ್ಯೆ ಹೇಳಿದ್ದರು. ಸೆಕ್ಯುರಿಟಿ ಆಫೀಸರ್ ದಿಲೀಪ್ ಸಿಂಗ್ ಕೂಡ ಎ.ಎಸ್.ಎ ಹುಡುಗರು ಸುಶೀಲ್ ಕುಮಾರನನ್ನು ಹೊಡೆದಿದ್ದನ್ನು ನಾನು ನೋಡಲಿಲ್ಲ ಎಂದು ತಿಳಿಸಿದರು. ಸುಶೀಲ್ ಕುಮಾರ್ ಆಸ್ಪತ್ರೆಯಲ್ಲಿದ್ದರಿಂದ ಆತನ ಹೇಳಿಕೆಯನ್ನು ಪಡೆದಿರಲಿಲ್ಲ. ಎ.ಎಸ್.ಎ ಬಗ್ಗೆ ಸುಶೀಲ್ ಕುಮಾರ್ ಬರೆದ ಫೇಸ್ ಬುಕ್ ಪೋಸ್ಟು, ಅದರಿಂದಾಗಿ ಉಂಟಾದ ವಾಗ್ವಾದ ಮತ್ತು ಕೊನೆಯಲ್ಲಿ ಬರೆದುಕೊಟ್ಟ ಕ್ಷಮಾಪಣಾ ಪತ್ರದ ಬಗ್ಗೆ ಪ್ರಸ್ತಾಪಿಸುತ್ತಾರೆ. ಗಮನಿಸಬೇಕಾದ್ದೆಂದರೆ ವಿಚಾರಣೆಯನ್ನು ಮೂರ್ನಾಲ್ಕು ದಿನದಲ್ಲೇ ಕೊಡಬೇಕೆಂಬ ಒತ್ತಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಸಮಿತಿ ತನ್ನ ಮೊದಲ ನಿರ್ಧಾರದಲ್ಲಿ ಫೇಸ್ ಬುಕ್ಕಿನಲ್ಲಿ ಆ ರೀತಿ ಬರೆದ ಸುಶೀಲ್ ಕುಮಾರನಿಗೆ ಎಚ್ಚರಿಕೆ ಕೊಡಬೇಕು ಮತ್ತು ಸಂಬಂಧಪಟ್ಟವರಲ್ಲಿ ದೂರು ನೀಡದೆ ಸುಶೀಲ್ ಕುಮಾರನ ರೂಮಿಗೆ ಹೋಗಿ ಕ್ಷಮೆ ಕೋರುವಂತೆ ಮಾಡಿದ ಡಿ.ಪ್ರಶಾಂತ್, ವಿನ್ಸೆಂಟ್, ರೋಹಿತ್ ವೆಮುಲ, ಪಿ.ವಿಜಯ್, ಸುಂಕನ್ನ, ಸೇಶು ಚೆಮುದುಗುಂಟರಿಗೆಲ್ಲ ಎಚ್ಚರಿಕೆ ನೀಡಬೇಕು ಎಂದು ಹೇಳುತ್ತಾರೆ. ಜೊತೆಗೆ ರಾಜಕೀಯ ಸಂಘಟನೆಗಳು ಹೇಗೆ ವಿಶ್ವವಿದ್ಯಾಲಯದ ಗೌರವವನ್ನು ಮಣ್ಣುಪಾಲು ಮಾಡುತ್ತಿವೆ, ಮತ್ತಿದನ್ನು ತಡೆಯಲು ಮಾಡಬೇಕಾದ ಕೆಲಸಗಳ್ಯಾವುವು ಎಂದು ವಿವರಿಸುತ್ತಾರೆ. ಆದರೆ ಕೊನೆಯ ನಿರ್ಣಯದಲ್ಲಿ ಎರಡೂ ಕಡೆಯವರಿಗೆ ಎಚ್ಚರಿಕೆ ಕೊಡುವ ನಿರ್ಧಾರ ದಲಿತ ಹುಡುಗರನ್ನೆಲ್ಲರನ್ನೂ ವಿಶ್ವವಿದ್ಯಾಲಯದಿಂದ ಹೊರಹಾಕಬೇಕೆಂದು ಬರೆದುಬಿಡುತ್ತಾರೆ! ಸುಂಕನ್ನ ವಿದ್ಯಾರ್ಥಿಯಲ್ಲ, ಹೊರಗಿನವರ ಪ್ರವೇಶದ ಮೇಲೆ ನಿಗಾ ಇಡಬೇಕು ಎಂಬ ಸಮಿತಿಯ ನಿರ್ಧಾರವನ್ನೇನೋ ಒಪ್ಪಬಹುದು. ಆದರೆ ಹೊರಗಿನವರ ಒತ್ತಾಯಕ್ಕೆ ಇಡೀ ವರದಿಯನ್ನೇ ಬದಲಿಸುವುದನ್ನು ಹೇಗೆ ಒಪ್ಪುವುದು? 
ಸಮಿತಿಯ ಅಂತಿಮ ನಿರ್ಧಾರ
ವರದಿಯಲ್ಲಿನ ಅಂತಿಮ ವಿಷಯಗಳನ್ನು ತಿಳಿಯುತ್ತಿದ್ದಂತೆ ಎ.ಎಸ್.ಎ ಪ್ರತಿಭಟನೆ ನಡೆಸುತ್ತದೆ. ಆಗಿನ ಉಪಕುಲಪತಿ ಆರ್.ಪಿ.ಶರ್ಮಾರವರೊಡನೆ ಚರ್ಚೆ ನಡೆಸುತ್ತದೆ. ಅಮಾನತ್ತಿನ ಆದೇಶವನ್ನು ಹಿಂಪಡೆದು ತನಿಖೆ ನಡೆಸಲು ಮತ್ತೊಂದು ಸಮಿತಿ ರಚಿಸಲವರು ಒಪ್ಪುತ್ತಾರೆ. 
ಹೊಸ ತನಿಖೆ ನಡೆಸಲು ಮಾಡಿದ ಆದೇಶ
ಆದರೆ ಈಗಿನ ಉಪಕುಲಪತಿ ಪ್ರೊಫೆಸರ್ ಪೋಡಿಲೇ ಅಪ್ಪಾರಾವ್ ಹೊಸ ತನಿಖೆಗೆ ಆದೇಶಿಸುವುದಿಲ್ಲ. ಐದೂ ಜನ ಹುಡುಗರನ್ನು ಹಾಸ್ಟೆಲಿನ ರೂಮು ಖಾಲಿ ಮಾಡುವಂತೆ ಆದೇಶ ಹೊರಡಿಸುತ್ತಾರೆ.
ಹಾಸ್ಟೆಲ್ಲಿನಿಂದ ಹೊರಹಾಕಿದ ಆದೇಶ
ಮೇಲ್ನೋಟಕ್ಕೆ ಎರಡೂ ಕಡೆಯಿಂದ ಒಂದಷ್ಟಷ್ಟು ತಪ್ಪುಗಳಾಗಿರುವುದು ಎದ್ದು ಕಾಣುತ್ತಿರುವ ಪ್ರಕರಣದಲ್ಲಿ ಎರಡೂ ಕಡೆಯವರನ್ನು ಕರೆಸಿ ಕೂರಿಸಿ ಮಾತನಾಡಿ ಬಗೆಹರಿಸಬೇಕಾದ ವಿಷಯವಿಲ್ಲಿ ಬಿಜೆಪಿ ಮತ್ತು ಹಿಂದೂ ಬಲಪಂಥೀಯ ಸಂಘಟನೆಗಳ ಒತ್ತಡದಿಂದ ದಲಿತ ಹುಡುಗರಷ್ಟೇ ಬಲಿಪಶುವಾಗುವಂತಹ ಸಂದರ್ಭವನ್ನು ಸೃಷ್ಟಿಸಿದೆ.
ಹಾಸ್ಟೆಲ್ಲಿನಿಂದ ಹೊರಗಡಿಯಿಟ್ಟಾಗ (ಅಂಬೇಡ್ಕರ್ ಫೋಟೋ ಇಟ್ಟುಕೊಂಡಿರುವವನು ರೋಹಿತ್ ವೇಮುಲ
ಹಾಸ್ಟೆಲ್ಲಿನಿಂದ ಹೊರಹಾಕಲ್ಪಟ್ಟ ಹುಡುಗರು ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ್ದಾರೆ. ಪ್ರತಿಭಟನೆ ಮುಂದುವರೆಯುತ್ತಿರುವ ಹೊತ್ತಿನಲ್ಲೇ ರೋಹಿತ್ ವೆಮುಲ ನೇಣಿಗೆ ಶರಣಾಗಿದ್ದಾನೆ. ಈ ಸಾವಿಗೆ ಹೊಣೆಯಾರು?
ಮೂಲ: ಎ.ಎಸ್.ಎ, ಸ್ಕ್ರಾಲ್, ದಿ ಹಿಂದೂ ಮತ್ತು ಇತರೆ ನ್ಯೂಸ್ ತಾಣಗಳು.

1 comment:

  1. To a large extend the person himself is responsible for his fate...depression is simple a state where over a period of time u have moved very far from yourself....all this sectarianism, idealism has bought only mental disorders!!!

    ReplyDelete