Jan 21, 2016

ಅಂತರರಾಷ್ಟ್ರೀಯ ಚಿತ್ರೋತ್ಸವ ಕೂಡ ಮಾಲುಗಳಿಗೆ ಸೀಮಿತವೇ?

S Abhi Hanakere
ಬೇರೆ ಇನ್ಯಾವುದೇ ಕಲಾ ಪ್ರಕಾರಗಳಿಗೆ ಸೆನ್ಸಾರ್‍ ಇಲ್ಲ! ಸಿನಿಮಾಗೆ ಮಾತ್ರ ಇದೆ? ಯಾಕೆಂದರೆ ಸಿನಿಮಾ ಒಂದು (ಟಾಕೀಸ್‍ನಲ್ಲಿ ನೋಡೋ) ಬೆಳಕಿನಿಂದ ಕತ್ತಲೆಗೆ ಕರೆದುಕೊಂಡು ಬಂದು, ಯಾವುದೇ ಜಾತಿ-ಮತ-ಲಿಂಗ ಭೇದವಿಲ್ಲದೆ ಅಕ್ಕ-ಪಕ್ಕದಲ್ಲಿ ಕುಳ್ಳಿರಿಸಿ, ಪರದೆಯ ಮುಖಾಂತರ ಹೃದಯ ಮತ್ತು ಮನಸ್ಸಿನಲ್ಲಿ ಬೆಳಕು ಚೆಲ್ಲುವ ಮಾಧ್ಯಮ ಮತ್ತು ಪರಿಣಾಮಕಾರಿಯಾಗಿ ಮನುಷ್ಯನನ್ನು ಆಕರ್ಷಿಸಿ ಆಕ್ರಮಿಸಿಕೊಳ್ಳುವಂತದ್ದು. ಆದರೆ ವ್ಯಾಪಾರದ ದೃಷ್ಠಿಯಿಂದ ಬರೀ ಕೊಳಕನ್ನೇ ನೀಡುವ ಅಪಾಯವಿರುವ ಕಾರಣ ಸೆನ್ಸಾರ್‍ ಇದೆ. ಇಂಥ ಸಿನಿಮಾ ಟಾಕೀಸ್‍ಗಳ ಸ್ಥಿತಿ ದುರ್ಗತಿಗೆ ತಲುಪುತ್ತಿರುವ ಸಮಯದಲ್ಲಿ ಅದನ್ನ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಮೊದಲೆಲ್ಲಾ ಚಿಕ್ಕ-ಪುಟ್ಟ ಊರುಗಳಲ್ಲಿದ್ದ ಟೆಂಟುಗಳನ್ನು ಟಿ.ವಿ ನುಂಗಿ ಹಾಕಿತು. ಈಗ ಸಿ.ಡಿಗಳು, ಮೊಬೈಲ್ ಚಿಪ್‍ಗಳು ಸಣ್ಣ-ಪುಟ್ಟ ನಗರಗಳ ಟಾಕೀಸ್‍ಗಳನ್ನು ನುಂಗಿ ಹಾಕ್ತಿವೆ. ಒಮ್ಮೆ ಮಾಲ್‍ಗಳಲ್ಲಿ ಚಿತ್ರ ವೀಕ್ಷಿಸಿದ ಪ್ರೇಕ್ಷಕ ತನ್ನೂರಿನ ಟಾಕೀಸ್‍ ಕಡೆ ಮುಖ ಕೂಡ ಮಾಡದೆ ಹಿಂತಿರುಗುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರದ ವತಿಯಿಂದ ನಡೆಯುತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು “ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಮರುನಾಮಕರಣ ಮಾಡಿ, ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ವರ್ಷ-ವರ್ಷವು ಅಭಿವೃದ್ಧಿ ವಂಚಿತ ಊರುಗಳಲ್ಲಿ ಆಯೋಜಿಸಿದರೆ ಈ ನೆಪದಲ್ಲಿ ಅಂಥ ಊರಿನ ಭೌತಿಕ ಮತ್ತು ಆ ಊರಿನ ಸುತ್ತ-ಮುತ್ತಾ ಜನರ ಬೌದ್ಧಿಕ ಅಭಿವೃದ್ಧಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ.

ಒಂದು ಮಾತು ನೆನಪಿರಲಿ, ನಾವು ಟಿ.ವಿ, ಮೊಬೈಲ್, ಲ್ಯಾಪ್‍ಟಾಪ್‍ ಇತ್ಯಾದಿ ವಯಕ್ತಿಕ ಡಿವೈಸ್‍ಗಳಲ್ಲಿ ಸಿನಿಮಾ ವೀಕ್ಷಿಸುವುದರಿಂದ ಮನುಷ್ಯ ಸಂಬಂಧಗಳು ಕ್ಷೀಣಿಸುತ್ತವೆ ಅದೇ ಟಾಕೀಸ್‍ನಲ್ಲಿ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಮತ್ತು ಹೊಸ ಸಂಬಂಧಗಳಾಗುತ್ತದೆ ಮತ್ತೆ ಪರಿಣಾಮಕಾರಿಯಾಗಿ ಕಲೆಯ ಮುಖೇನ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು.

ಈ ಒಂದು ಕ್ರಮದಿಂದ ನಿಶ್ಚಿತವಾಗಿ ಕನ್ನಡ ಚಿತ್ರರಂಗದ ಅಭಿವೃದ್ಧಿ, ಕರ್ನಾಟಕದಾದ್ಯಂತ ಟಾಕೀಸ್‍ಗಳ ಅಭಿವೃದ್ಧಿ, ಕರ್ನಾಟಕದಾದ್ಯಂತ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಎಲ್ಲರಿಗೂ, ಮುಖ್ಯವಾಗಿ ಸಣ್ಣ-ಪುಟ್ಟ ಊರಿನಲ್ಲಿ ವಾಸಿಸುತ್ತಿರುವವರಿಗೆ ಅಂತರರಾಷ್ಟ್ರೀಯ ಸಿನಿಮಾಗಳು ತಲುಪುತ್ತವೆ. ಅದರಲ್ಲು ಅಂತರರಾಷ್ಟ್ರೀಯ ಚಿತ್ರೋತ್ಸವ ಅಂದರೆ ಮನರಂಜನೆಯೇ ಪ್ರಧಾನವಾಗಿರೋ, ಹೀರೋ-ಹೀರೋಯಿನ್ ಪ್ರಧಾನವಾಗಿರೋ ಚಿತ್ರಗಳು ಇರೋದಿಲ್ಲ. ಇಂಥ ಚಿತ್ರೋತ್ಸವದಲ್ಲಿ ಮನಷ್ಯನ ಮನಸ್ಸು ಮತ್ತು ಹೃದಯಕ್ಕೆ ನಾಟಿ, ವಿಮರ್ಶೆ ಮಾಡಿಸುವಂತಹ ಚಿತ್ರಗಳೇ ಪ್ರದರ್ಶನವಾಗುವುದರಿಂದ ಇದು ಸಣ್ಣ-ಪುಟ್ಟ ಊರುಗಳಲ್ಲಿ ನಡೆದರೆ ಹೆಚ್ಚು ಪರಿಣಾಮಕಾರಿ.

ಈಗಾಗಲೇ ಜನಸಂಖ್ಯೆ ಮತ್ತು ಭೌತಿಕ ಅಭಿವೃದ್ಧಿ ಅತೀ ಅನಿಸಿರುವ ಬೆಂಗಳೂರು-ಮೈಸೂರಿಗೆ ಅಂತರರಾಷ್ಟ್ರೀಯ ಚಿತ್ರೋತ್ಸವ ಸೀಮಿತ ಮಾಡದೆ, ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಸಣ್ಣ-ಪುಟ್ಟ ಊರುಗಳಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ಆಯೋಜಿಸಿದರೆ ಹೇಗೆ? ಎಂದು ನಿಮ್ಮೆಲ್ಲರ ಅಭಿಪ್ರಾಯವನ್ನು ಕೇಳುತ್ತಿದ್ದೇನೆ?

ನಿಮ್ಮೆಲ್ಲರ ಪ್ರತಿಕ್ರಿಯೆ ಮತ್ತು ಚರ್ಚೆಯ ನಂತರ ಸರಿ-ತಪ್ಪುಗಳ ಆಧಾರದ ಮೇಲೆ ಮುಂದಿನ ನಡೆ ಬಗ್ಗೆ ಯೋಚಿಸೋಣ. ಕಡೆ ಪಕ್ಷ ಆಚರಣೆಗಳನ್ನಾದರು ಮಾಡುವ ಮುಖೇನ ಬೆಂಗಳೂರಿನ ದಟ್ಟಣೆಯನ್ನ ಕಡಿಮೆ ಮಾಡೋಣ.

No comments:

Post a Comment