Jan 2, 2016

1 ಜನವರಿ, 1818: ಭೀಮಾ ಕೊರೇಗಾಂವಿನ ಯುದ್ಧ

ಕೊರೇಗಾಂವಿನ 'ವಿಜಯ ಸ್ಥಂಭ'
ಮೂಲ: drambedkarbooks.com
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.

ಭಾರತದ ಇತಿಹಾಸವೆಂದರೆ ಅಸ್ಪ್ರಶ್ಯರು ಮತ್ತು ಮೇಲ್ಜಾತಿಯರ ನಡುವಿನ ಸಂಘರ್ಷ. ಭಾರತದ ಇತಿಹಾಸದ ನಿಜ ಬಣ್ಣವನ್ನು ತೋರಿಸಲು ಇತಿಹಾಸಕಾರರು ಆಸಕ್ತರಾಗಿಲ್ಲ.

ಜನವರಿ 1, 1818ರಲ್ಲಿ ಸಂಖ್ಯಾಬಲದಲ್ಲಿ ಮೇಲುಗೈ ಸಾಧಿಸಿದ್ದ ಪೇಶ್ವೆಯ ಸೈನ್ಯದ ವಿರುದ್ಧ ಕೆಲವು ನೂರು ಅಸ್ಪ್ರಶ್ಯ ಸೈನಿಕರು ಕೊರೇಗಾಂವಿನ ಯುದ್ಧದಲ್ಲಿ ದಿಗ್ವಿಜಯ ಸಾಧಿಸಿದ ಮಹತ್ವದ ಸಂಗತಿಯನ್ನು ಬಹಳ ನಾಜೂಕಿನಿಂದ ಇತಿಹಾಸದ ಪುಟಗಳಲ್ಲಿ ಅಡಗಿಸಿಡಲಾಗಿದೆ.

ಬ್ರಿಟೀಷ್ ಸೈನ್ಯದಲ್ಲಿದ್ದ ಐದು ನೂರು ಮಹರ್ ಸೈನಿಕರು ಪುಣೆಯನ್ನಾಳುತ್ತಿದ್ದ ಬ್ರಾಹ್ಮಣ ಪೇಶ್ವೆಯರ ವಿರುದ್ಧ ನಡೆಸಬೇಕಿದ್ದ ಯುದ್ಧದ ತಯಾರಿಯಲ್ಲಿದ್ದರು. ಇತಿಹಾಸದ ಪುಸ್ತಕಗಳಲ್ಲಿ ಈ ಯುದ್ಧಕ್ಕೆ ಮಹತ್ವ ಕೊಡಲಾಗಿದೆ ಮತ್ತು ನಾವೆಲ್ಲರೂ ಇದನ್ನು ಪೇಶ್ವೆಯವರ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ನಾಶಪಡಿಸಿದ ಮತ್ತು ಬ್ರಿಟೀಷ್ ಸಾಮ್ರಾಜ್ಯವನ್ನು ಭಾರತದಲ್ಲಿ ಭದ್ರವಾಗಿ ಸ್ಥಾಪಿಸಿದ ಎರಡನೇ ಆಂಗ್ಲ – ಮರಾಠ ಯುದ್ಧವೆಂದು ಓದಿದ್ದೇವೆ. ಈ ಯುದ್ಧಕ್ಕೆ ಮತ್ತೊಂದು ಐತಿಹಾಸಿಕ ಆಯಾಮವೂ ಇದೆ, ಅದರ ಅರಿವು ನಮಗಿರಬೇಕು.

ಈ ಯುದ್ಧ ಭಾರತದ ಅಸ್ಪ್ರಶ್ಯರ ಮತ್ತು ಬ್ರಾಹ್ಮಣ್ಯದ ನಡುವೆ ನಡೆದ ಯುದ್ಧ.

ಭೀಮಾ ಕೊರೇಗಾಂವಿನ ಬಗೆಗಿನ ಪುಟ್ಟ ಡಾಕ್ಯುಮೆಂಟರಿ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಮಹರ್ ಸೈನಿಕರಿಗೆ, ಇದು ಮತ್ತೊಂದು ಯುದ್ಧವಷ್ಟೇ ಆಗಿರಲಿಲ್ಲ. ತಮ್ಮ ಆತ್ಮಗೌರವವನ್ನು ಹೆಚ್ಚಿಸುವ, ಮನುಸ್ಮೃತಿಯ ಚಾತುರ್ವರ್ಣ್ಯದ ವಿರುದ್ಧದ ಹೋರಾಟವಾಗಿತ್ತು. ಕೇವಲ ಐನೂರರಷ್ಟು ಸಂಖೈಯಲ್ಲಿದ್ದ ಮಹರ್ ಸೈನಿಕರು ಮೂವತ್ತು ಸಾವಿರದಷ್ಟಿದ್ದ ಪೇಶ್ವೆಯವರ ಸೈನ್ಯವನ್ನು ಸೋಲಿಸಲು ತೆಗೆದುಕೊಂಡಿದ್ದ ಕೇವಲ ಒಂದು ದಿನ. ಇದಕ್ಕೆ ಸಮನಾದ ದಿಗ್ವಿಜಯ ಭಾರತದ ಇತಿಹಾಸದಲ್ಲಿ ಬಹುಶಃ ಯಾವುದೂ ಇಲ್ಲ.

ಬ್ರಾಹ್ಮಣರ ಆಡಳಿತವಿದ್ದ ಮಹಾರಾಷ್ಟ್ರದಲ್ಲಿ ಜಾತಿ ಆಧಾರಿತ ಅಸಮಾನತೆ ವಿಜ್ರಂಭಿಸುತ್ತಿತ್ತು; ಚಾತುರ್ವರ್ಣ್ಯದ ವ್ಯವಸ್ಥೆಯ ಹೊರಗಿದ್ದ ಅಸ್ಪ್ರಶ್ಯರು ಬ್ರಾಹ್ಮಣ್ಯದ ನೀತಿ ನಿಯಮಗಳ ಕಾರಣದಿಂದ ಅಭಿವೃದ್ಧಿ ವಂಚಿತರಾಗಿದ್ದರು.

ಅಸ್ಪ್ರಶ್ಯರು ಬೆನ್ನಿಗೊಂದು ಕಸಪೊರಕೆಯನ್ನು ಕಟ್ಟಿಕೊಂಡು ನಡೆಯಬೇಕಿತ್ತು. ಕಾರಣ? ಊರಿನೊಳಗೆ ನಡೆಯುವಾಗ ಮೂಡುವ ಅವರ ಹೆಜ್ಜೆಗುರುತುಗಳನ್ನು ಕಸಪೊರಕೆ ಅಳಿಸಿಹಾಕಬೇಕಿತ್ತು. ಮಹರರ ಹೆಜ್ಜೆ ಗುರುತು ಹಾದಿಯನ್ನು ಕಲುಷಿತಗೊಳಿಸಬಾರದೆಂದು ಮಾಡಿದ್ದ ನಿಯಮವಿದು! ಇಷ್ಟಕ್ಕೇ ಮುಗಿಯಲಿಲ್ಲ. ಉಗುಳಲು ಕತ್ತಿಗೊಂದು ಮಡಿಕೆಯನ್ನು ನೇತುಹಾಕಿಕೊಳ್ಳಬೇಕಿತ್ತು. ಮೇಲ್ಜಾತಿಯವರಿಗೆ ಎಲ್ಲೆಂದರಲ್ಲಿ ಉಗುಳುವ ಸ್ವಾತಂತ್ರ್ಯವಿತ್ತೆನಿಸುತ್ತೆ ಬಿಡಿ. ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಅವರಿಗೆ ಅನುಮತಿಯಿರಲಿಲ್ಲ ಮತ್ತು ಶಿಕ್ಷಣದಿಂದ ದೂರನಿಲ್ಲಬೇಕಿತ್ತು. ಈ ನಿಯಮಗಳನ್ನು ಪಾಲಿಸದ ಅಸ್ಪ್ರಶ್ಯರನ್ನು ಹತ್ಯೆ ಮಾಡಲಾಗುತ್ತಿತ್ತು. ಭೀಮಾ ಕೊರೇಗಾಂವಿನ ಯುದ್ಧ ಬ್ರಾಹ್ಮಣ ಹಿತಸಾಕ್ತಿಗೆ ಅಸ್ಪ್ರಶ್ಯರು ಕೊಟ್ಟ ಉತ್ತರವಾಗಿತ್ತು.

ಈ ಯುದ್ಧ ಜನವರಿ 1, 1818ರಂದು ಕೊರೇಗಾಂವಿನ ಭೀಮಾ ನದಿಯ ತೀರದಲ್ಲಿ ಬ್ರಿಟೀಷ್ ಸರಕಾರದ ಬಾಂಬೆ ನೇಟಿವ್ ಇನ್ಫೆಂಟ್ರಿಯ ಮಹರ್ ಸೈನಿಕರ ನಡುವೆ ಮತ್ತು ಪೇಶ್ವೆ ಸೈನಿಕರ ನಡುವೆ ನಡೆಯಿತು. ಶಿರೂರಿನಿಂದ ಭೀಮಾ ಕೊರೇಗಾಂವಿನವರೆಗೆ 27 ಕಿಲೋಮೀಟರುಗಳನ್ನು ಸರಿಯಾದ ಅನ್ನಾಹಾರವಿಲ್ಲದೆ ಕ್ರಮಿಸಿದ ಅಸ್ಪ್ರಶ್ಯ ಸೈನಿಕರು ಪೇಶ್ವೆಯ ಸೈನ್ಯದೊಂದಿಗೆ ಹನ್ನೆರಡು ತಾಸು ಕಾದಾಡಿ ದಿನದ ಕೊನೆಗೆ ಅವರನ್ನು ಸಂಪೂರ್ಣವಾಗಿ ಸೋಲಿಸಿಯೇ ಬಿಟ್ಟರು.

ಅನೇಕ ಕಾರಣಗಳಿಂದ ಈ ಯುದ್ಧ ಮಹತ್ವವುಳ್ಳದ್ದು. ಮೊದಲಿಗೆ, ಬ್ರಿಟೀಷರು ಒಂದು ಪುಟ್ಟ ಸೈನ್ಯದೊಂದಿಗೆ ಈ ಯುದ್ಧಕ್ಕೆ ಅಣಿಯಾಗಿದ್ದರು, ಅತ್ಯಂತ ಕೆಟ್ಟ ಸೋಲನ್ನು ಅವರು ನಿರೀಕ್ಷಿಸಿದ್ದರು. ಎರಡನೆಯದಾಗಿ, ಕೊರೇಗಾಂವಿನ ಈ ಯುದ್ಧ ಪೇಶ್ವೆಯವರನ್ನು ಹಣಿಯಲು ಮತ್ತವರನ್ನು ಶರಣಾಗತರನ್ನಾಗಿಸಲು ನೆರವಾಯಿತು. ಮೂರನೆಯ ಬಹುಮುಖ್ಯ ಮಹತ್ವ, ಈ ಯುದ್ಧ ಜಾತಿ ಬಂಧನದ ಸರಪಳಿಗಳನ್ನು ಒಡೆದು ಹಾಕಲು ಮಹಾರಾಷ್ಟ್ರದ ಅಸ್ಪ್ರಶ್ಯ ಮಹರರು ನಡೆಸಿದ ಪ್ರಯತ್ನ.

ಯುದ್ಧದಲ್ಲಿ ಭಾಗವಹಿಸಿದ್ದ ಬಾಂಬೆ ನೇಟಿವ್ ಇನ್ಫೆಂಟ್ರಿಯ ಸೈನಿಕರ ಶೌರ್ಯವನ್ನು ಗೌರವಿಸಲಾಯಿತು. ಅಧಿಕೃತ ವರದಿಯಲ್ಲಿ ಈ ಸೈನಿಕರ ಧೀರೋದ್ದಾತ ಮನೋಭಾವನೆ, ಶಿಸ್ತಿನ ಹೋರಾಟ, ಧೈರ್ಯವನ್ನು ನೆನಪು ಮಾಡಿಕೊಳ್ಳಲಾಗಿದೆ.

ಅತ್ಯಂತ ಕಠಿಣವಾಗಿದ್ದ ಶಿರೂರು – ಕೊರೇಗಾಂವ್ ನಡುವಿನ 27 ಕಿಲೋಮೀಟರುಗಳ ನಡುಗೆಯನ್ನು ಅನ್ನಾಹಾರದ ಕೊರತೆ, ಖಾಯಿಲೆಗಳ ನಡುವೆ ಯಶಸ್ವಿಯಾಗಿ ಪೂರೈಸಿ ಯುದ್ಧವನ್ನು ಗೆದ್ದ ಮಹರ್ ಸೈನಿಕರ ಕಾರ್ಯ ಪ್ರಶಂಸಾರ್ಹವಾಗಿತ್ತು. ಯುದ್ಧರಂಗದಲ್ಲಿ ಮುನ್ನಡೆಯುತ್ತಿದ್ದಾಗ, ಬಂಧನವಾದಾಗ, ಕೋಟೆಗೆ ಲಗ್ಗೆ ಇಡುತ್ತಿದ್ದಾಗ ಅಥವಾ ಕೆಲವೊಮ್ಮೆ ಗೆಲುವಿನ ಕಾರಣಕ್ಕಾಗಿ ಎರಡೆಜ್ಜೆ ಹಿಂದಿಡುತ್ತಿದ್ದಾಗ ಈ ಸೈನಿಕರು ತಮ್ಮ ಅಧಿಕಾರಿಗಳು ಮತ್ತು ಕಾಮ್ರೇಡುಗಳ ಜೊತೆ ಬದ್ಧತೆಯಿಂದ ನಿಂತಿದ್ದರು, ರೆಜಿಮೆಂಟಿನ ಗೌರವವನ್ನು ಮಣ್ಣುಪಾಲು ಮಾಡುವ ಯಾವ ಕೆಲಸವನ್ನೂ ಇವರು ಮಾಡಲಿಲ್ಲ.

ಮಹರ್ ಸೈನಿಕರ ಶೌರ್ಯವನ್ನು ನೆನಪಿನಲ್ಲಿಡುವ ಸಲುವಾಗಿ 1851ರಲ್ಲಿ ಕೊರೇಗಾಂವಿನಲ್ಲಿ ಬ್ರಿಟೀಷರು ವಿಜಯ ಸ್ಥಂಭವನ್ನು ಸ್ಥಾಪಿಸಿದರು. ಸ್ಥಂಭದ ಮೇಲೆ ಯುದ್ಧದಲ್ಲಿ ಹುತಾತ್ಮರಾದ 22 ಮಹರ್ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ. ಭಾರತದ ಜಾತಿವ್ಯವಸ್ಥೆಯ ವಿರುದ್ಧ ಯುದ್ಧ ಸಾರಿದ ಮಹರರ ಶೌರ್ಯದ ವಿಜಯ ಸ್ಥಂಭ ನಮ್ಮ ಹೆಮ್ಮೆಯ ಪ್ರತೀಕವಾಗಿ ಇವತ್ತಿಗೂ ಕೊರೇಗಾಂವಿನಲ್ಲಿ ಘನತೆಯಿಂದ ನಿಂತಿದೆ.

ಡಾ. ಬಾಬಾಸಾಹೇಬ್ ಅಂಬೇಡ್ಕರರು ಪ್ರತಿ ವರ್ಷ ಜನವರಿ ಒಂದರಂದು ಕೊರೇಗಾಂವಿಗೆ ಭೇಟಿ ಕೊಡುತ್ತಿದ್ದರು, ಈಗಿನ ದಲಿತರು ಇದೇ ರೀತಿಯ ಶೌರ್ಯ ಮತ್ತು ಬದ್ಧತೆಯನ್ನು ತೋರಿಸಿ ಇಡೀ ದೇಶದಿಂದ ಬ್ರಾಹ್ಮಣ್ಯವನ್ನು ತೊಲಗಿಸಬೇಕೆಂದು ಹೇಳುತ್ತಿದ್ದರು. 1927ರ ಜನವರಿ ಒಂದರಂದು ಕೊರೇಗಾಂವಿನಲ್ಲಿ ದೊಡ್ಡ ಸಮಾವೇಶವನ್ನು ಆಯೋಜಿಸಿದ ಅಂಬೇಡ್ಕರರು ಅಸ್ಪ್ರಶ್ಯ ಸೈನಿಕರ ವೀರಗಾಥೆಯನ್ನು ಸಾರ್ವಜನಿಕರಿಗೆ ನೆನಪು ಮಾಡಿಕೊಟ್ಟರು.

ಪ್ರತಿ ವರ್ಷ ವರ್ಷದಾರಂಭದ ಹಿಂದಿನ ದಿನ ಅರ್ಥಹೀನ ಮೋಜು ಮಸ್ತಿಗಳಲ್ಲಿ ತೊಡಗುವ ಬದಲು ಪೇಶ್ವೆಗಳನ್ನು ಸೋಲಿಸಿ, ಮನುಸ್ಮ್ರತಿಯ ಆರಾಧಕರಾದ ಬ್ರಾಹ್ಮಣರ ಆಳ್ವಿಕೆಯಿಂದ ಅಸ್ಪ್ರಶ್ಯರಿಗೆ ಸ್ವತಂತ್ರ ತಂದುಕೊಟ್ಟ ನಮ್ಮ ಧೀರೋದ್ದಾತ ಹಿರೀಕರಿಗೆ ಗೌರವ ಸಲ್ಲಿಸೋಣ. ನಮ್ಮ ಭವ್ಯ ಇತಿಹಾಸವನ್ನು ಮತ್ತಷ್ಟು ಅರಿಯಲೂ ಇದು ಸುಸಂದರ್ಭ.

ಬಿ.ಆರ್.ಭಾಸ್ಕರ್ ಪ್ರಸಾದ್ ರವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದ ಭೀಮಾ ಕೊರೇಗಾಂವಿನ ಬಗೆಗಿನ ಸಾಕ್ಷ್ಯಚಿತ್ರವನ್ನು ನೋಡಿದ ನಂತರ ಆ ಯುದ್ಧದ ಬಗ್ಗೆ ತಿಳಿದುಕೊಳ್ಳಲು ಒಂದಷ್ಟು ಅಂತರ್ಜಾಲ ಜಾಲಾಡುತ್ತಿದ್ದಾಗ drambedkarbooks.comನಲ್ಲಿ ಸಿಕ್ಕ ಲೇಖನದ ಕನ್ನಡ ಭಾವಾನುವಾದವಿದು.

No comments:

Post a Comment