Oct 29, 2015

ದಲಿತ ಜಾತಿ ಹುಟ್ಟಿದ್ದು ಸಾಬರಿಂದ: ಬಿಜೆಪಿ ವಕ್ತಾರ

bizoy sonkar shastri
ಬಿಜೆಪಿಯ ವಕ್ತಾರ ಬಿಝಯ್ ಸಂಕರ ಶಾಸ್ತ್ರಿ ಹೊಸದೊಂದು ವಿಚಾರವನ್ನು 'ಕಂಡು ಹಿಡಿದಿದ್ದಾರೆ'. ಭಾರತದಲ್ಲಿ ದಮನಿತ ದಲಿತ ಜಾತಿ ಹುಟ್ಟಿದ್ದೇಗೆ ಎನ್ನುವುದರ ಕುರಿತು ಬೆಳಕು ಚೆಲ್ಲಿದ್ದಾರೆ. ಎಲ್ಲದಕ್ಕೂ ಮುಸ್ಲಿಮರೇ ಕಾರಣ ಎನ್ನುವ ಸಿದ್ಧಾಂತವನ್ನು ನಂಬುವಂತೆ ಮಾತನಾಡುವ ಬಿಜೆಪಿಯವರಾದ ಬಿಝಯ್ ಅವರ ಅಧ್ಯಯನದ ಪ್ರಕಾರ ಸಾಬರು ಬರುವುದಕ್ಕೆ ಮುಂಚೆ ಭಾರತದಲ್ಲಿದ್ದ ಬ್ರಾಹ್ಮಣರು ದೇಶದ ಸಂಸ್ಕೃತಿ ಮತ್ತು ಧರ್ಮವನ್ನು ರಕ್ಷಿಸುವುದರಲ್ಲಿ ನಿರತರಾಗಿದ್ದರೆ ಕ್ಷತ್ರಿಯರು ಭಾರತದ ಗಡಿಯ ರಕ್ಷಣೆಯಲ್ಲಿ ಬ್ಯುಸಿಯಾಗಿದ್ದರು. ಆಗ ಬಂದ ಸಾಬರು ಈ ಬ್ರಾಹ್ಮಣ ಮತ್ತು ಕ್ಷತ್ರಿಯರ ಮೇಲೆ ಭಯಂಕರವಾಗಿ ಹಲ್ಲೆ ನಡೆಸಿ ಅವರು ಇಸ್ಲಾಮಿಗೆ ಮತಾಂತರವಾಗುವಂತೆ ಮಾಡಿದರಂತೆ. ಧರ್ಮ ಮತ್ತು ತಮ್ಮ ಕುಲದ ಬಗ್ಗೆ ಅಪಾರ ಭಯ ಭಕ್ತಿ ಇಟ್ಟುಕೊಂಡಿದ್ದ ಕೆಲವು ಬ್ರಾಹ್ಮಣರು ಮತ್ತು ಕ್ಷತ್ರಿಯರು ಮತಾಂತರವಾಗಲು ಒಪ್ಪಲಿಲ್ಲವಂತೆ. ಇವರ ಆತ್ಮಾಭಿಮಾನವನ್ನು ತೊಡೆದು ಹಾಕುವ ಕಾರಣಕ್ಕೆ ಮುಸ್ಲಿಮರು ಇವರಿಗೆ ಮಲ ಹೊರುವ ಕೆಲಸವನ್ನು ಮತ್ತು ಪ್ರಾಣಿ ಚರ್ಮವನ್ನು ಹದಗೊಳಿಸುವ ಕೆಲಸವನ್ನು ಮಾಡಿಸಿದರಂತೆ. ಇಂತಹ ಕೆಲಸ ಮಾಡುವವರು ಪರಿಶಿಷ್ಟ ಜಾತಿಯವರಾದರೆಂದು ಬಿಝಯ್ ರವರ ಅಭಿಪ್ರಾಯ! ಸಾಬರು ದಾಳಿ ನಡೆಸಿದಾಗ ಕೆಲವು ಬ್ರಾಹ್ಮಣರು ಮತ್ತು ಕ್ಷತ್ರಿಯರು ಬೆಟ್ಟಗಳಿಗೆ ಓಡಿ ಹೋದರಂತೆ; ಅವರೇ ಇವತ್ತಿರುವ ಪರಿಶಿಷ್ಟ ಪಂಗಡದವರಂತೆ!
ಇಂತಹ ಬ್ರಹಸ್ಪತಿಗಳ ಮಾತುಗಳನ್ನು ಕೇಳಿದಾಗ ಯಾವ ಯಾವ ಕಡೆಯಿಂದ ನಗಬೇಕೋ ಗೊತ್ತಾಗುವುದಿಲ್ಲ. ಮನುಷ್ಯ ಮೂಲತಃ ಕಾಡುವಾಸಿ, ನಂತರ ಕಾಡು ಕಡಿದು ಕಾಡು ತೊರೆದು ಊರುಗಳನ್ನು ನಿರ್ಮಿಸಿದಾತ ಎನ್ನುವಷ್ಟೂ ಸಾಮಾನ್ಯ ಜ್ಞಾನ ಇವರಿಗೆ ಇರುವುದಿಲ್ಲವಾ? ಸಾಬರ ದಾಳಿಯಲ್ಲಿ ಮತಾಂತರಗೊಳ್ಳದೇ ಇರುವವರೆಲ್ಲ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿಕೊಂಡುಬಿಟ್ಟಿದ್ದರೆ ಇವತ್ತು ಭಾರತದ ಬಹುಭಾಗದಲ್ಲಿ ಮುಸ್ಲಿಮರು ಮತ್ತು ದಲಿತರಷ್ಟೇ ಇರಬೇಕಿತ್ತಲ್ಲವೇ? ಅದೇಕೆ ಇನ್ನೂ ಇಲ್ಲಿ ಬ್ರಾಹ್ಮಣರಿದ್ದಾರೆ? ಕ್ಷತ್ರಿಯರಿದ್ದಾರೆ? ಇವರ ಅಧ್ಯಯನದಲ್ಲಿ ಶೂದ್ರರೇ ಇಲ್ಲವಲ್ಲ! ಶೂದ್ರ ಜಾತಿಯ ಹುಟ್ಟಿಗೆ ಕಾರಣಗಳಾವುದು? ಬಹುಶಃ ಕ್ರಿಶ್ಚಿಯನ್ನರ ದಾಳಿಯಿಂದ ಶೂದ್ರ ಸಮುದಾಯ ಹುಟ್ಟಿರಬಹುದು! ಒಂದು ಕ್ಷಣ ಇವರ ನಗೆಪಾಟಲಿನ ಹೇಳಿಕಗಳನ್ನೆಲ್ಲ ಒಪ್ಪಿಕೊಂಡುಬಿಡೋಣ. ಸಾಬರೇ ದಲಿತ ಜಾತಿಯ ಹುಟ್ಟಿಗೆ ಕಾರಣ ಎಂದು ನಂಬೋಣ. ದಲಿತ ಜಾತಿಯನ್ನು ಹುಟ್ಟಿಸಿದ ಸಾಬರಿಗೆ ದಲಿತರನ್ನು ಕಂಡರೆ ಅಸ್ಪ್ರಶ್ಯ ಮನೋಭಾವವಿಲ್ಲ. ಆ ಅಸ್ಪ್ರಶ್ಯ ಮನೋಭಾವ ಇರೋದು ಬ್ರಾಹ್ಮಣ, ಕ್ಷತ್ರಿಯ ಮತ್ತು ಶೂದ್ರರಿಗೆ. ದಲಿತ ಜಾತಿಯವರೆಲ್ಲ ಬ್ರಾಹ್ಮಣ ಮತ್ತು ಕ್ಷತ್ರಿಯ ಜಾತಿಯಿಂದಲೇ ಬಂದವರೆಂದ ಮೇಲೆ ಈ ಜಾತಿಯವರಿಗೇ ದಲಿತರ ಮೇಲಿರುವ ಅಸ್ಪ್ರಶ್ಯತೆ ಅಚ್ಚರಿ ಮೂಡಿಸುವ ವಿಷಯವಲ್ಲವೇ?! ಸಾಬರ ಮೇಲೆ ಎಲ್ಲದಕ್ಕೂ ಗೂಬೆ ಕೂರಿಸುವ ಪ್ರಯತ್ನದ ಜೊತೆಜೊತೆಗೆ ದಲಿತರಿಗೆ 'ನೋಡಿ ನೀವು ಬ್ರಾಹ್ಮಣ ಮತ್ತು ಕ್ಷತ್ರಿಯ ಜಾತಿಯ ಪೂರ್ವಜರಿಂದ ಬೇರ್ಪಟ್ಟವರು. ನೀವು ಸಾಬರ ಹತ್ತಿರ ಚೆನ್ನಾಗಿರಬಾರದು' ಎಂದು ಬ್ರೈನ್ ವಾಶ್ ಮಾಡುವ ಹುನ್ನಾರವೇ? ಉಳಿದವರ ಬಗ್ಗೆ ಗೊತ್ತಿಲ್ಲ ಬಿಜೆಪಿಯ ವಕ್ತಾರ ಬಿಝಯ್ ರವರ ತಲೆಯಂತೂ ಚೆನ್ನಾಗಿ ತೊಳೆಯಲ್ಪಟ್ಟಿದೆ!
ಸುದ್ದಿಮೂಲ: ದಿಹಿಂದೂ

No comments:

Post a Comment