Oct 23, 2015

ಕಾಣೆಯಾಗಿದ್ದಾರೆ: ಕೆ.ಜೆ.ಜಾರ್ಜ್, ಗೃಹಮಂತ್ರಿಗಳು ಕರ್ನಾಟಕ.

ಕರ್ನಾಟಕದಲ್ಲಿ ಹಿಂಸೆಯ ಚಕ್ರ ಯಶಸ್ವಿಯಾಗಿ ತಿರುಗಲಾರಂಭಿಸಿದೆ. ಜಾತಿ ಮತ್ತು ಧರ್ಮದ ಕಾರಣಕ್ಕೆ ತಿರುಗಲಾರಂಭಿಸಿರುವ ಈ ಹಿಂಸೆಯ ಚಕ್ರ ನಿಲ್ಲುವ ಯಾವ ಸೂಚನೆಯೂ ಕಾಣುತ್ತಿಲ್ಲ. ಹಿಂಸೆಯನ್ನು ತಡೆಯಲಾರದ ಪೋಲೀಸ್ ಇಲಾಖೆಯ ವೈಫಲ್ಯದಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿದ್ದ ಜಾರ್ಜ್ ಎನ್ನುವ ನಾಲಾಯಕ್ ಗೃಹಮಂತ್ರಿ ಎಷ್ಟು ಜನರು ರೇಪ್ ಮಾಡಿದರೆ ಗ್ಯಾಂಗ್ ರೇಪ್ ಎಂಬುದರ ಬಗ್ಗೆ ಅಧ್ಯಯನ ನಡೆಸುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ನಂಬಲನರ್ಹವಾದ ಮೂಲಗಳಿಂದ ತಿಳಿದು ಬಂದಿದೆ. ಈ ಗೃಹಮಂತ್ರಿಯ ಉಸ್ತುವಾರಿಲ್ಲಿ ಇಬ್ಬರು ಪೋಲೀಸರೂ ಕಳ್ಳರಿಂದ ಹತ್ಯೆಯಾಗಿಬಿಟ್ಟರು. ಪೋಲೀಸರ ನೈತಿಕ ಸ್ಥೈರ್ಯ ಹೆಚ್ಚಿಸುವ ಮಾತುಗಳನ್ನು ಇವರಿಂದಾಗಲೀ ಅಥವಾ ಇವರ ಮೇಲಿರುವ ಸಿದ್ಧರಾಮಯ್ಯನವರಿಂದಾಗಲೀ ಕೇಳಿ ಬರಲೇ ಇಲ್ಲ. ಹಾಡು ಹಗಲೇ ಪುಡಿಗಳ್ಳರಿಂದ ರೌಡಿಗಳಿಂದ ಪೋಲೀಸರು ಹತ್ಯೆಯಾಗುವ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ?

ಡಾ.ಎಂ.ಎಂ.ಕಲಬುರ್ಗಿಯವರ ಹತ್ಯೆಯಾಗಿ ತಿಂಗಳುಗಳೇ ಕಳೆಯಿತು. ಆರೋಪಿಗಳು ಪತ್ತೆಯಾಗಲಿಲ್ಲ. ಅವರ ಹತ್ಯೆಯ ಸಮರ್ಥಕರು ಕೇಕೆ ಹಾಕಿ ನಗುತ್ತಿದ್ದಾರೆ. ಕೆ.ಎಸ್.ಭಗವಾನರಿಗೆ ಬೆದರಿಕೆಯ ಮೇಲೆ ಬೆದರಿಕೆ ಬರುತ್ತಿವೆ. ಬೆದರಿಕೆ ಹಾಕಿದವರ‍್ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ. ಪೇಜಾವರ ಸ್ವಾಮೀಜಿಗಳ ಕಾರಿನ ಮೇಲೆ ಹಾಡಹಗಲೇ ಕಲ್ಲು ತೂರಲಾಗುತ್ತದೆ, ಅವರ ಬಂಧನವೂ ಸಾಧ್ಯವಾಗಿಲ್ಲ. ಧರ್ಮದ ಹುಳುಕುಗಳನ್ನು ಎತ್ತಿ ತೋರುವ ಲೇಖಕರ ವಿರುದ್ಧ ಕತ್ತಿ ಮಸೆಯುವವರ ಸಂಖೈ ಹೆಚ್ಚಾಗಿದೆ. ಪೋಲೀಸರ ಮತ್ತು ಸರಕಾರದ ನಿಷ್ಕ್ರಿಯತೆ ಇಂತಹ ಮತಾಂಧರಿಗೆ ಮತ್ತಷ್ಟು ಮಗದಷ್ಟು ಹಲ್ಲೆ ನಡೆಸುವ ಆ ಮೂಲಕ ಧರ್ಮರಕ್ಷಕರ ಪಟ್ಟ ಕಟ್ಟಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಕಲಬುರ್ಗಿಯವರ ಹತ್ಯೆಯಾದ ಸ್ಥಳದಿಂದ ನೂರು ಕಿಮಿ ದೂರದಲ್ಲಿ ಉಚ್ಛಂಗಿ ಪ್ರಸಾದ್ ಎಂಬ ಯುವಕನ ಮೇಲೆ ಹಲ್ಲೆಯಾಗಿದೆ. ಕಾರಣ ‘ಒಡಲ ಕಿಚ್ಚು’ ಎಂಬ ಕವನ ಸಂಕಲನದಲ್ಲಿ ಹಿಂದೂ ಧರ್ಮದ ಜಾತಿ ಪದ್ಧತಿಯ ವಿರುದ್ಧ ಉಚ್ಛಂಗಿ ಪ್ರಸಾದ್ ಕಿಡಿಕಾರಿರುವುದು. ಇನ್ನೊಮ್ಮೆ ಹೀಗೆಲ್ಲ ಬರೆದ್ರೆ ಬೆರಳುಗಳಿರೋರಿದಿಲ್ಲ ಬರೆಯೋದಕ್ಕೆ ಎಂದು ಧಮಕಿ ಹಾಕಿ ಹೋಗಿದ್ದಾರೆ. ಶೋಷಿತ ದಲಿತನೊಬ್ಬ ಜಾತಿಯ ವಿರುದ್ಧ ಬರೆಯೋದು ಇವರಿಗೆ ಧರ್ಮ ವಿರೋಧದ ಘಟನೆಯಾಗಿ ಕಾಣಿಸುತ್ತದೆ! ಇನ್ನು ಮೂಡಬಿದರೆಯಲ್ಲಿ ಕಸಾಯಿಖಾನೆಯ ವಿರುದ್ಧ ಹೋರಾಟ ರೂಪಿಸುತ್ತಿದ್ದ ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯನ್ನು ಮತಿಗೆಟ್ಟ ಮುಸ್ಲಿಮರು ಕೊಂದುಹಾಕಿದ್ದಾರೆ. ಆ ಹತ್ಯೆಗೆ ಸಾಕ್ಷಿಯಾದವನು ಹೆಚ್ಚೇನು ಕಾರಣವಿಲ್ಲದೆ ಆತ್ಮಹತ್ಯೆ ಮಾಡಿಕೊಂಡುಬಿಡುತ್ತಾನೆ. ಪುಣ್ಯಕ್ಕೆ ಕೋಮುಗಲಭೆಯ ವಿಷಯದಲ್ಲಿ ಒಂದಷ್ಟು ಸೋಮಾರಿತನ ತೋರುವ ದಕ್ಷಿಣ ಕನ್ನಡ ಪೋಲೀಸರು ಈ ಪ್ರಕರಣದಲ್ಲಿ ಹಂತಕರನ್ನು ಶೀಘ್ರವಾಗಿ ಬಂಧಿಸಿದ್ದಾರೆ.

ರಾಜ್ಯದಲ್ಲಿ ವ್ಯವಸ್ಥಿತವಾಗಿ ಹಲ್ಲೆಗಳು, ಹತ್ಯೆಗಳು, ಅತ್ಯಾಚಾರಗಳು ನಡೆಯುತ್ತಿರುವಾಗ ಅದರ ಬಗ್ಗೆ ಪ್ರತಿಕ್ರಯಿಸುವ, ಪೋಲೀಸರನ್ನು ಚುರುಕುಗೊಳಿಸಿ ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾದ ಗೃಹಮಂತ್ರಿಗಳು ‘ಇಬ್ರು ರೇಪ್ ಮಾಡಿದ್ರೆ ಗ್ಯಾಂಗ್ ರೇಪ್ ಅಲ್ಲ ಕಣ್ರೀ’ ಎಂದು ಅಸಂಬದ್ಧವಾಗಿ ಮಾತನಾಡುತ್ತಾರೆ. ಇದನ್ನು ನಖಶಿಖಾಂತ ವಿರೋಧಿಸಬೇಕಾದ ವಿರೋಧ ಪಕ್ಷದ ಮುಖಂಡ ಈಶ್ವರಪ್ಪ ‘ನಿನ್ನನ್ನು ಹೊತ್ಕೊಂಡು ಹೋಗಿ ರೇಪ್ ಮಾಡುದ್ರೆ ನಾವೇನ್ ಮಾಡೋಕಾಗುತ್ತಮ್ಮ’ ಎಂದು ನುಡಿಮುತ್ತು ಉದುರಿಸುತ್ತಾರೆ. ಕಲಬುರ್ಗಿ ಹತ್ಯೆಯ ಬಗ್ಗೆ ಮಾತೇ ಆಡದ ಬಿಜೆಪಿಯವರು ತಮಗೆ ಅನುಕೂಲವೆನ್ನಿಸುವ ಪ್ರಶಾಂತ್ ಪೂಜಾರಿಯ ಬಗ್ಗೆ ಬೊಬ್ಬೆ ಹೊಡೆಯುತ್ತಾರೆ. ಇನ್ನು ನಾಡಿನ ಅಹಿಂದೋದ್ಧಾರಕ ಸಿದ್ಧರಾಮಯ್ಯ ‘ಕೆಲ್ಸ ಮಾಡ್ರೀ ಕೆಲ್ಸ ಮಾಡ್ರೀ’ ಎನ್ನುತ್ತಲೇ ತಮ್ಮ ಶಕ್ತಿ ವ್ಯಯಿಸುತ್ತಾರೆ. ಒಟ್ಟಿನಲ್ಲಿ ಕರ್ನಾಟಕ ಉದ್ಧಾರ.

No comments:

Post a Comment