Sep 5, 2015

ಸಂಶೋಧಕನ ಹತ್ಯೆ ಕಾಣಿಸಿದ ಸತ್ಯಗಳು

Dr Ashok K R
ಸಂಶೋಧಕ ಎಂ.ಎಂ.ಕಲ್ಬುರ್ಗಿಯವರ ಹತ್ಯೆ ತಲ್ಲಣ ಮೂಡಿಸಿದೆ ಜೊತೆಜೊತೆಗೆ ಅನೇಕ ಗೊಂದಲಗಳನ್ನೂ ಸೃಷ್ಟಿಸಿಬಿಟ್ಟಿದೆ. ಜನ, ಮಾಧ್ಯಮ ಒಟ್ಟಾರೆಯಾಗಿ ಇಡೀ ಸಮಾಜ ಕಲಬುರ್ಗಿಯವರ ಹತ್ಯೆಗೆ ಪ್ರತಿಕ್ರಿಯಿಸಿದ ರೀತಿ ನಿರಾಶೆಯನ್ನು ಮೂಡಿಸುತ್ತದೆ. ಕಲಬುರ್ಗಿಯವರ ಸಾವು ಮನಕಲಕಲು ಒಂದು ಹಿರಿಯ ಜೀವಿಯ ಹತ್ಯೆ ಎಂಬ ಕಾರಣವೇ ಸಾಕಿತ್ತು. ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು, ತಾತ್ವಿಕ ವಿರೋಧಗಳು ಸಾವನ್ನೂ ಸಂಭ್ರಮಿಸುವ ಸರಕಾಗಿಸಿಬಿಟ್ಟಿದೆ. ಅನಂತಮೂರ್ತಿಯವರ ಸಾವಿನ ಸಮಯದಲ್ಲಿ ಪಟಾಕಿ ಹೊಡೆದು ಸಂಭ್ರಮಿಸಿದ ಮನಸ್ಥಿತಿ ಮತ್ತಷ್ಟು ಹೆಚ್ಚಾಗುತ್ತಿದೆ. ವಿರೋಧಗಳಿಲ್ಲದೆ ಯಾವ ಧರ್ಮ ತಾನೇ ಉತ್ತಮಗೊಂಡಿದೆ? ಯಥಾಸ್ಥಿತಿವಾದಿಗಳಷ್ಟೇ ಪ್ರತಿರೋಧವನ್ನು ವಿರೋಧಿಸುತ್ತಾರೆ. ಇದರ ನಡುವೆ ಅರ್ಧ ಸತ್ಯವನ್ನಾಡುವವರು ಸಮಾಜದ ಬಗ್ಗೆಯೇ ರೇಜಿಗೆ ಹುಟ್ಟಿಸುವಂತೆ ಮಾಡುತ್ತಾರೆ.

ಒಂದು ಹತ್ಯೆ ನಡೆದ ತಕ್ಷಣ ಅದು ಇಂತವರದ್ದೇ ಕೃತ್ಯ ಎಂದು ಇದಮಿತ್ಥಂ ಹೇಳಿಬಿಡುವುದು ತನಿಖೆಯ ದಾರಿ ತಪ್ಪಿಸುವುದರ ಜೊತೆಗೆ ಜನರನ್ನೂ ತಪ್ಪು ದಾರಿಗೆ ಎಳೆದುಬಿಡುತ್ತದೆ. ಡಾ.ಎಂ.ಎಂ.ಕಲಬುರ್ಗಿಯವರಿಗಿದ್ದ ಜೀವ ಬೆದರಿಕೆಗಳು, ಅವರ ಮೇಲಾಗಿದ್ದ ಕಲ್ಲು ತೂರಾಟಗಳನ್ನೆಲ್ಲಾ ಗಮನಿಸಿದ್ದ ಕೆಲವು ಪ್ರಗತಿಪರರು ಅವರು ಹತರಾದ ದಿನ ಇದು ಬಲಪಂಥೀಯರದೇ ಕೃತ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ, ಕೆಲವು ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ಟುಬಿಟ್ಟರು. ಬಹುತೇಕ ಪ್ರಗತಿಪರರೇ ಅದನ್ನು ವಿರೋಧಿಸಿ ಒಂದೆರಡು ದಿನ ತಾಳ್ಮೆಯಿಂದ ಕಾಯುವ ಕೆಲಸವಾಗಬೇಕೀಗ, ಆತುರದ ತೀರ್ಮಾನಗಳೇಕೆ ಎಂದು ಪ್ರಶ್ನಿಸಿದರು. ನನ್ನದೂ ವೈಯಕ್ತಿಕವಾಗಿ ಅದೇ ಅಭಿಪ್ರಾಯವಾಗಿತ್ತು. ಬಲಪಂಥೀಯರಾಗಲೇ ಕೆಲವು ಪ್ರಗತಿಪರರ ಹೇಳಿಕೆಗಳನ್ನಿಡಿದುಕೊಂಡು ‘ನೋಡಿ ನೋಡಿ. ಹಿಂದೂ ಸಂಘಟನೆಯ ಮೇಲೆ ಗೂಬೆ ಕೂರಿಸಿಬಿಡ್ತಾರೆ’ ಎಂದು ಹೇಳುವುದೂ ಪ್ರಾರಂಭವಾಯಿತು. ಹಿರಿಯ ಸಾಹಿತಿ – ಸಂಶೋಧಕರೊಬ್ಬರ ಹತ್ಯೆ ಇತರೆ ಸಾಹಿತಿ ಸಂಶೋಧಕರಿಗೆ ಭಯ ಮೂಡಿಸಿದರೆ ಅದು ಸಹಜ. ಆ ರೀತಿಯೆಲ್ಲ ಭಯಪಡಬೇಡಿ ಎಂದು ಹೇಳಬೇಕಾದ ಸಮಾಜ, ಆ ಭಯ ವ್ಯಕ್ತಪಡಿಸಿದವರನ್ನೇ ಗೇಲಿ ಮಾಡುವ ಮಟ್ಟಕ್ಕೆ ಇಳಿದುಬಿಟ್ಟಿರುವುದು ಬೇಸರ ಮೂಡಿಸುತ್ತದೆ. 

ಅವರ ಹತ್ಯೆಯಾದ ದಿನ ರಾಜ್ಯದ ವಿವಿದೆಡೆ ಚಿಕ್ಕ ಪುಟ್ಟ ಸಂತಾಪ ಸಭೆಗಳು, ಕೊಲೆಗಾರರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸುವ ಪ್ರತಿಭಟನೆಗಳು ನಡೆದವು. ಬೆಂಗಳೂರಿನಲ್ಲೂ ಟೌನ್ ಹಾಲ್ ಎದುರಿಗೆ ಅಂತಹುದೊಂದು ಸಭೆ ನಡೆಯಿತು. ಆ ಸಭೆಯನ್ನು ಬಲಪಂಥೀಯರಿಂದ ಹಿಡಿದು ಪ್ರಗತಿಪರರೆನ್ನಿಸಿಕೊಂಡ ಕೆಲವರೂ ಆಡಿಕೊಂಡರು. ಅವರ ಪ್ರಕಾರ ಅದು ಕಲಬುರ್ಗಿಯವರ ಹತ್ಯೆಯನ್ನು ಬಲಪಂಥೀಯರ ತಲೆಗೆ ವಿನಾಕಾರಣ ಕಟ್ಟುವ ಪ್ರಯತ್ನವಾಗಿತ್ತಂತೆ! ಸಿಂಪಥಿ ಬರಲೆಂಬ ಕಾರಣಕ್ಕೆ ಪ್ರಗತಿಪರರೇ ಯಾಕೆ ಈ ಕೊಲೆ ಮಾಡಿಸಿರಬಾರದು ಎಂದು ಕಥೆ ಹೆಣೆಯುವುದರಲ್ಲೂ ಅನೇಕರು ಬ್ಯುಸಿಯಾಗಿಬಿಟ್ಟರು! ನಿಲುಮೆಯೆಂಬ ವೆಬ್ ಪುಟದಲ್ಲಿ, ಅಗ್ನಿ ಪತ್ರಿಕೆಯ ಸಂಪಾದಕೀಯದಲ್ಲಿ ಅಂದು ಸೇರಿದ್ದ ಜನರನ್ನೇ ಹೀಗಳೆಯುವ ಕೆಲಸ ನಡೆದಿದೆ. ಅವರುಗಳು ಬರೆದಿರುವುದರಲ್ಲಿ ಬಹುತೇಕ ಸುಳ್ಳೇ ಸೇರಿದೆ! ಅನೇಕರು ಬರೆದಂತೆ ಅದು ಪ್ರತಿಭಟನಾ ಸಭೆಯೇನು ಆಗಿರಲಿಲ್ಲ. ನಾಲ್ಕೂ ಮೂವತ್ತರ ಸಮಯಕ್ಕೆ ನಿಗದಿಯಾಗಿದ್ದ ಸಭೆಗೆ ನಾಲ್ಕು ಘಂಟೆಯಿಂದಲೇ ಜನರು ಬರಲಾರಂಭಿಸಿದ್ದರು. ಅದು ಯಾವ ಸಂಘಟನೆಯೂ ಸೇರಿಸಿದ ಸಭೆಯಾಗಿರಲಿಲ್ಲ. ವಾಟ್ಸಪ್ಪಿನಲ್ಲಿ, ಫೇಸ್ ಬುಕ್ಕಿನಲ್ಲಿ ನಾಲ್ಕೂವರೆಗೆ ಟೌನ್ ಹಾಲ್ ಬಳಿ ಹೀಗೊಂದು ಸಂತಾಪ ಸೂಚಕ ಸಭೆ ನಡೆಸೋಣ ಎಂಬ ಮೆಸೇಜು ಹರಿದಾಡಿ ಇನ್ನೂರೈವತ್ತು ಮುನ್ನೂರು ಜನರು ಅಲ್ಲಿ ನೆರೆದಿದ್ದರು. ಬರಗೂರು, ಸುರೇಂದ್ರನಾಥ್, ಜಿ.ರಾಮಕೃಷ್ಣ, ಬೋಳುವಾರು, ಗೌರಿ ಲಂಕೇಶ್, ವಡ್ಡಗೆರೆ ನಾಗರಾಜಯ್ಯ, ಗಿರೀಶ್ ಕಾರ್ನಾಡ್, ಅನಂತ ನಾಯಕ್, ಕುಮಾರ ರೈತ ಹೀಗೆ ಅನೇಕರು ಅಲ್ಲಿ ಸೇರಿದ್ದರು. ವಿವಿಧ ಸಂಘಟನೆಗಳಿಗೆ ಸೇರಿದವರೂ ನೆರೆದಿದ್ದರು, ಯಾವ ಸಂಘಟನೆಗೂ ಸೇರದ ನನ್ನಂತವರ ಸಂಖೈ ಅಲ್ಲಿ ಜಾಸ್ತಿ ಇತ್ತು. ತಾಂತ್ರಿಕವಾಗಿ ಸರಕಾರದ ಭಾಗವೇ ಆಗಿರುವ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಕೂಡ ಆ ಸಭೆಯಲ್ಲಿ ಭಾಗವಹಿಸಿದ್ದರು. ಅದು ಸಂತಾಪ ಸೂಚಕ ಸಭೆಯೆಂದು ಭಾಗವಹಿಸಿದವರ ಸಂಖೈ ಹೆಚ್ಚಿತ್ತೇ ಹೊರತು ಅದು ಪ್ರತಿಭಟನೆಯ ಸಭೆಯೆಂದಲ್ಲ. ಹಂತಕರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿದ್ದು ತಪ್ಪೇ?. ಹಿರಿಯರೊಬ್ಬರ ಸಾವಿಗೆ ಸಂಭ್ರಮ ಸೂಚಿಸುವ, ಪಟಾಕಿ ಹೊಡೆಯುವ ಮನಸ್ಥಿತಿ ಇರುವವರ ಸಂಖೈ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಂತಾಪ ಸೂಚಿಸುವವರೇ ಅಪರಾಧಿಗಳೇನೋ?

ಕಲಬುರ್ಗಿಯವರ ಹತ್ಯೆ ನಡೆದ ನಂತರ ಟ್ವಿಟರಿನಲ್ಲಿ ಭುವಿತ್ ಶೆಟ್ಟಿ ಎಂಬ ಯುವಕ ಆಗ ಅನಂತಮೂರ್ತಿ ಈಗ ಕಲಬುರ್ಗಿ ಕೆ.ಎಸ್.ಭಗವಾನ್ ಮುಂದಿನ ಸರದಿ ನಿನ್ನದು ಎಂಬ ದಾಟಿಯ ಬೆದರಿಕೆ ಒಡ್ಡುತ್ತಾನೆ. ಆತನ ಮೇಲೆ ಪೋಲೀಸರು ಕೇಸು ದಾಖಲಿಸಿಕೊಂಡು ಬಂಧಿಸುತ್ತಾರೆ. ನಂತರ ಏನು ನಡೆಯುತ್ತದೆ ಎನ್ನುವುದು ಸಮಾಜ ಸಾಗುತ್ತಿರುವ ಹಾದಿಯ ಸ್ಪಷ್ಟ ಚಿತ್ರಣ ನೀಡುತ್ತದೆ. ಹೆಚ್ಚೇನಿಲ್ಲ ಕಳೆದ ಡಿಸೆಂಬರಿನಲ್ಲಿ ಪೋಲೀಸರು ಮೆಹದಿಯೆಂಬ ವ್ಯಕ್ತಿಯನ್ನು ಬಂಧಿಸುತ್ತಾರೆ. ಕಾರಣ? ಆತ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಪರವಾಗಿ ಟ್ವೀಟುಗಳನ್ನು ಮಾಡುತ್ತಿದ್ದ. ಅವರ ಉಗ್ರಗಾಮಿತವನ್ನು ಬೆಂಬಲಿಸುತ್ತಿದ್ದ. ನೇರವಾಗಿ ಆತನೇನೂ ಇಸ್ಲಾಮಿಕ್ ಸ್ಟೇಟ್ ಜೊತೆಗೆ ಕಾರ್ಯನಿರ್ವಹಿಸುತ್ತಿರಲಿಲ್ಲ ಆದರೆ ಅವರ ತತ್ವ ಸಿದ್ಧಾಂತಗಳನ್ನು ಬೆಂಬಲಿಸುತ್ತಿದ್ದ. ಬೆಂಬಲದ ಟ್ವೀಟುಗಳನ್ನು ಹಂಚಿಕೊಳ್ಳುತ್ತಿದ್ದ, ಜನರನ್ನು ಆ ತತ್ವ ಸಿದ್ಧಾಂತಗಳೆಡೆಗೆ ಆಕರ್ಷಿತರಾಗುವಂತೆ ಮಾಡುತ್ತಿದ್ದ. ಅವನನ್ನು ಬಂಧಿಸಿದ ಪೋಲೀಸರು ‘Waging war against Asiatic Powers’ – ‘ಏಷಿಯಾ ದೇಶಗಳ ವಿರುದ್ಧ ಯುದ್ಧ ಸಾರಿದಾತ’ ಎಂಬ ಆರೋಪ ಹೊರಿಸುತ್ತದೆ. ಹತ್ತು ತಿಂಗಳ ನಂತರವೂ ಆತ ಜೈಲಿನಲ್ಲಿದ್ದಾನೆ. ಈಗ ಮತ್ತೆ ಭುವಿತ್ ಶೆಟ್ಟಿಯ ಪ್ರಕರಣ ಗಮನಿಸಿದರೆ ಆತನೇನು ಅನಂತಮೂರ್ತಿಯವರ ಸ್ವಾಭಾವಿಕ ಮೃತ್ಯುವಿಗೆ ಕಾರಣಕರ್ತನಲ್ಲ, ಕಲಬುರ್ಗಿಯವರನ್ನು ಕೊಂದವನೂ ಅಲ್ಲ; ಆದರೆ ಆ ಕೊಲ್ಲುವ ಉಗ್ರ ಸಿದ್ಧಾಂತದ ಸಮರ್ಥಕ, ಆ ಕೊಲ್ಲುವಿಕೆಯ ಸಮರ್ಥಕ, ಮುಂದೆ ಇತರರನ್ನೂ ಕೊಲ್ಲುವುದಕ್ಕೆ ಪ್ರೇರೇಪಿಸುವಂತಹ ಟ್ವೀಟುಗಳನ್ನು ಹಾಕಿದಾತ. ತಾಂತ್ರಿಕವಾಗಿ ನೋಡಿದರೆ ಭುವಿತ್ ಶೆಟ್ಟಿಯ ಮೇಲೂ ಕಠಿಣ ಕಾಯ್ದೆಗಳನ್ನು ಹಾಕಬೇಕಿತ್ತು, ಆತ ಇನ್ನೂ ಜೈಲಿನಲ್ಲಿರಬೇಕಿತ್ತು. ಕ್ಷಮಿಸಿ, ಆತ ಮುಸ್ಲಿಮನಲ್ಲ; ದಿನದೊಳಗೇ ಜಾಮೀನು ಪಡೆದು ಹಿಂದಿರುಗಿದ್ದಾನೆ. ಸದ್ಯದ ಭವಿಷ್ಯದಲ್ಲಿ ಮಂಗಳೂರಿನ ಹಿಂದೂ ಸಂಘಟನೆಗಳು ಆತನಿಗೆ ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ. ಜೈಭಜರಂಗಿ ಹೆಸರಿನಲ್ಲಿ ಉಗ್ರ ಹೇಳಿಕೆಗಳನ್ನು ಕೊಟ್ಟ, ಅನೇಕ ಕೇಸುಗಳಲ್ಲಿ ಆರೋಪಿಯಾಗಿರುವ ಪ್ರಸಾದ್ ಅತ್ತಾವರನನ್ನು ಕಲಬುರ್ಗಿಯವರ ಹತ್ಯೆ ಸಂಬಂಧ ವಿಚಾರಣೆಗಾಗಿ ಬಂಧಿಸುತ್ತಾರೆ. ಆತನೂ ಜಾಮೀನಿನ ಮೇಲೆ ಹೊರಬರುತ್ತಾನೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಹೆಸರಿಸಲಾಗದ ಮೂಲಗಳಿಂದ ಒಂದು ಸುದ್ದಿ ಪ್ರಕಟಿಸುತ್ತಾರೆ. ಪ್ರಸಾದ್ ಅತ್ತಾವರನ ಬಂಧನದಿಂದ ಪೋಲೀಸರಿಗೆ ಹೊಸ ವಿಷಯ ತಿಳಿದಿದೆ. ಕೆ.ಎಸ್.ಭಗವಾನರನ್ನು ಹತ್ಯೆ ಮಾಡಲು ಇಬ್ಬರು ಮೈಸೂರಿಗೆ ಬಂದಿದ್ದರು, ಆದರೆ ವಿವಿಧ ಕಾರಣಗಳಿಂದ ಅವರು ವಾಪಸ್ಸಾದರು ಎಂದು. ಟೈಮ್ಸ್ ಬಿಟ್ಟು ಬೇರೆ ಯಾವ ಪತ್ರಿಕೆಯಲ್ಲೂ ಈ ಸುದ್ದಿ ಬರುವುದಿಲ್ಲ. ಸುಮ್ಮನೆ ಯೋಚಿಸಿ, ಮುಸ್ಲಿಂ ಸಾಹಿತಿಯೊಬ್ಬ ಹತನಾಗಿ ಮುಸ್ಲಿಂ ಮೂಲಭೂತವಾದಿಯೊಬ್ಬ ಈ ರೀತಿಯಾಗಿ ಟ್ವೀಟಿಸಿದ್ದರೆ ಪೋಲೀಸರ ಸಮಾಜದ ಮಾಧ್ಯಮಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು? ಇದೊಂದೇ ಪ್ರಕರಣವಲ್ಲ, ಧರ್ಮಾಧಾರಿತವಾಗಿ ಪೋಲೀಸರು ಕಾರ್ಯನಿರ್ವಹಿಸುವ ಅನೇಕ ಸಂದರ್ಭಗಳನ್ನು ಪದೇ ಪದೇ ಕಾಣುತ್ತೇವೆ. ಕಳೆದ ದಸರೆಯ ಸಮಯದಲ್ಲಿ ಮೈಸೂರು ಪೋಲೀಸರಿಗೆ ಕರೆ ಮಾಡಿ ಅರಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ, ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದವನೆಂದು ಹೇಳಿಕೊಂಡಿದ್ದ. ಮೈಸೂರಿನ ಮೇಲೆ ಉಗ್ರರ ದಾಳಿ ಎಂದೇ ಸುದ್ದಿ ಬಿತ್ತರವಾಗಿತ್ತು. ಮೈಸೂರು ಪೋಲೀಸರ ಶೀಘ್ರ ಕಾರ್ಯಾಚರಣೆಯಿಂದ ಕರೆ ಮಾಡಿದ್ದವನ ಬಂಧನವೂ ಆಯಿತು. ‘ಉಗ್ರನ ಬಂಧನ’ ಎಂದು ದೊಡ್ಡ ಸುದ್ದಿಯಾಯಿತಾ? ದಿನಗಟ್ಟಲೇ ಚರ್ಚೆ ನಡೆಯಿತಾ? ಪತ್ರಿಕೆಗಳು ಮುಖಪುಟದಲ್ಲಿ ಆ ಸುದ್ದಿ ಪ್ರಕಟಿಸಿದವಾ? ಸಾಮಾಜಿಕ ಜಾಲತಾಣಗಳಲ್ಲಿ ಆ ‘ಉಗ್ರನನ್ನು’ ಹೀನಾಮಾನ ಟೀಕಿಸಲಾಯಿತಾ? ಇಲ್ಲ. ಯಾಕೆಂದರೆ ಕರೆ ಮಾಡಿ ಬೆದರಿಸಿದ್ದು ಮುಸ್ಲಿಮನಾಗದೇ ಹಿಂದೂ ಆಗಿದ್ದ! ಹಿಂದೂವೊಬ್ಬ ಉಗ್ರನಾಗಲು ಹೇಗೆ ಸಾಧ್ಯ?! ಮಾನಸಿಕ ಸ್ಥಿಮಿತವಿಲ್ಲದ ಬಾಲಕನಾಗಿ ಆ ಹಿಂದೂ ವರದಿಯಾಗಿದ್ದ! ಅದೂ ನಿಜವೇ ಇರಬಹುದು. ಆದರೆ ಮಾನಸಿಕ ಸ್ಥಿಮಿತವಿಲ್ಲದ ಮುಸ್ಲಿಂ ಹುಡುಗನೊಬ್ಬ ಇದೇ ರೀತಿ ಮಾಡಿದ್ದರೂ ಸಮಾಜ ಹೀಗೆಯೇ ಪ್ರತಿಕ್ರಿಯಿಸುತ್ತಿತ್ತಾ? ಉತ್ತರ ನಿಮ್ಮಲ್ಲೇ ಇದೆ.

ಒಂದು ವಾರ ಕಳೆದಿದೆ ಕಲಬುರ್ಗಿಯವರ ಹತ್ಯೆಯಾಗಿ. ಹೆಚ್ಚಿನ ಸುಳಿವುಗಳೇನೂ ದಕ್ಕಿಲ್ಲ. ಪತ್ರಿಕಾ ವರದಿಗಳ ಪ್ರಕಾರ ಪೋಲೀಸರೇನೋ ವಿವಿಧ ದಿಕ್ಕುಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆಸ್ತಿ ವಿಚಾರವಾಗಿ ಗಲಾಟೆಗಳಿತ್ತಾ, ವೈಯಕ್ತಿಕ ಜೀವನದಲ್ಲಿ ತೊಂದರೆಗಳಿತ್ತಾ, ಇವತ್ತಿನ ವರದಿಯಂತೆ ಬಸವರಾಜ ಕಟ್ಟೀಮನಿ ಪ್ರತಿಷ್ಟಾಪನೆಯ ಸಂಬಂಧ ತೊಂದರೆಯಿತ್ತಾ, ಹಿಂದೂ ಬಲಪಂಥೀಯರ ಕೃತ್ಯವಾ ಇದು, ಲಿಂಗಾಯತ ಮೂಲಭೂತವಾದಿಗಳ ಕೃತ್ಯವಾ ಇದು ಎಂದು ಅನೇಕ ದಿಕ್ಕುಗಳಲ್ಲಿ ತನಿಖೆ ಸಾಗುತ್ತಿದೆ. ರಾಜ್ಯ ಸರಕಾರ ಈಗಾಗಲೇ ಪ್ರಕರಣವನ್ನು ಸಿಬಿಐಗೆ ವಹಿಸಲು ಸಿದ್ಧತೆ ಮಾಡಿಕೊಂಡಿದೆ. ನಿಜವಾದ ಕಾರಣ ಏನೂ ಇರಬಹುದು, ಆದರೆ ಆ ಕಾರಣ ತಿಳಿಯುತ್ತದಾ ಎಂದು ಗಮನಿಸಿದಾಗ ಒಂದಷ್ಟು ಬೇಸರವಾಗುತ್ತದೆ, ಜೊತೆಗೊಂದಷ್ಟು ಭಯವೂ. ಇದೇ ರೀತಿ ಹತ್ಯೆಯಾದ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್, ಕಮ್ಯುನಿಷ್ಟ್ ಮುಖಂಡ ಗೋವಿಂದ ಪನ್ಸಾರೆಯ ಹಂತಕರು ಇದುವರೆಗೆ ಪತ್ತೆಯಾಗಿಲ್ಲ. ಅವರನ್ನು ಸಾಯಿಸಿದ ರೀತಿಗೂ ಕಲಬುರ್ಗಿಯವರನ್ನು ಸಾಯಿಸಿದ ರೀತಿಗೂ ತುಂಬಾ ಸಾಮ್ಯತೆಯಿದೆ. ದಾಬೋಲ್ಕರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ, ಪ್ರಕರಣದ ತನಿಖೆ ಅಷ್ಟೇನೂ ವೇಗದಲ್ಲಿ ನಡೆಯದಿರುವುದಕ್ಕೆ ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿದೆ. ಅವರ ಸಾಲಿಗೇ ಕಲಬುರ್ಗಿಯವರ ಹತ್ಯೆಯೂ ಸೇರಿಹೋಗುತ್ತದಾ ಎಂಬ ಭೀತಿ ಕಾಡಿದರದು ತಪ್ಪೇ?

ಕಲಬುರ್ಗಿಯವರು ಸಾವಿನಲ್ಲಿ ನಿಜಕ್ಕೂ ಅನಾಥರಾಗಿಬಿಟ್ಟರು ಎಂದರೆ ತಪ್ಪಲ್ಲ. ಅವರನ್ನು ಬೆಂಬಲಿಸಿ ಮಾತನಾಡಿದವರ ಪ್ರಗತಿಪರರ ಸಂಖೈ ಎಷ್ಟಿತ್ತೋ, ಯಾರು ಸಾಯಿಸಿದರೋ ಏತಕ್ಕೆ ಸಾಯಿಸಿದರೋ ಸುಖಾಸುಮ್ಮನೆ ಅವರನ್ನು ಬೆಂಬಲಿಸಿ ಸಮಾಜದ ಪ್ರಮುಖ ವಾಹಿನಿಯ ವಿರೋಧವನ್ನು ಯಾಕೆ ಕಟ್ಟಿಕೊಳ್ಳಬೇಕು ಎಂದು ಮೌನ ವಹಿಸಿದ ಪ್ರಗತಿಪರರ ಸಂಖೈಯೂ ಹೆಚ್ಚಿದೆ. ಇಂತಹ ಅಪಾಯಗಳನ್ನು ಎದುರಿಸಲು ಒಂದು ಸ್ಟ್ರ್ಯಾಟಜಿ ಇರಬೇಕು ಎಂದ ಮಾತುಗಳನ್ನು ತಿರುಚಿ ‘ಸಾವಿನಲ್ಲೂ ಸ್ಟ್ರ್ಯಾಟಜಿ’ ಹುಡುಕುವವರು ಎಂದು ನಟರಾಜ್ ಹುಳಿಯಾರರಂತವರೂ ಬರೆದುಬಿಡುತ್ತಾರೆ! ಅರ್ಧ ಸತ್ಯಗಳಿಗೆ ಅವರೂ ತಲೆದೂಗಲಾರಂಭಿಸುತ್ತಾರೆ! ಕಲಬುರ್ಗಿಯವರು ಹಿಂದೂ ಧರ್ಮದ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕೆ ಹಿಂದೂ ಬಲಪಂಥೀಯ ಸಂಘಟನೆಯವರು ಅವರ ಹತ್ಯೆಯನ್ನು ಖಂಡಿಸುವುದಿಲ್ಲ, ಬದಲಿಗೆ ಸಂಭ್ರಮಿಸುತ್ತಾರೆ. ಲಿಂಗಾಯತವೆಂಬುದು ಪ್ರತ್ಯೇಕ ಧರ್ಮ, ಹಿಂದೂ ಧರ್ಮದ ಭಾಗವಲ್ಲ ಅದು ಎಂಬುದು ಕಲಬುರ್ಗಿಯವರ ನಿಲುವಾಗಿತ್ತು. ಹಿಂದೂ ಧರ್ಮಪದ್ಧತಿಯಲ್ಲಿದ್ದ ಅನಾಚಾರಗಳನ್ನು ವಿರೋಧಿಸಿ ಮೂಡಿದ್ದೇ ಲಿಂಗಾಯತ ಧರ್ಮವಲ್ಲವೇ? ಇದೇ ರೀತಿ ಹಿಂದೂ ಧರ್ಮದಿಂದ ಸಿಡಿದೆದ್ದ ಬುದ್ಧನ ಹಾದಿ ಬೌದ್ಧ ಧರ್ಮದ ಹುಟ್ಟಿಗೆ ಕಾರಣವಾಗಿರಬೇಕಾದರೆ, ಬಸವಣ್ಣನ ಹಾದಿ ಲಿಂಗಾಯತ ಧರ್ಮದ ಹುಟ್ಟಿಗೆ ಕಾರಣವೆಂದು ಅವರು ಹೇಳಿದ್ದು ಸರಿ ಅಲ್ಲವೇ. ಲಿಂಗಾಯತ ಧರ್ಮದೊಳಗಿನ ವೈದಿಕ ಪರಂಪರೆಯನ್ನು ವಿರೋಧಿಸಿದ ಕಾರಣಕ್ಕೆ ಲಿಂಗಾಯತರ ಬೆಂಬಲವೂ ಅವರಿಗಿರಲಿಲ್ಲ. ಒಟ್ಟಿನಲ್ಲಿ ಅವರ ಸಾವಿಗೆ ನ್ಯಾಯ ಸಿಗಬೇಕೆಂದು ವಾದಿಸುವವರ ಸಂಖೈ ಕ್ಷೀಣವಾಗಿದೆ. ಪ್ರವಾಹದ ವಿರುದ್ಧ ಈಜುವವರಲ್ಲಿ ಸತ್ಯವಿದ್ದರೂ ಆ ಸತ್ಯವನ್ನು ಸಮಾಜ ಒಪ್ಪುವುದಿಲ್ಲವೆನ್ನುವುದು ಕಲಬುರ್ಗಿಯವರ ವಿಷಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. 

ಹಿಂದೂ ಎಂಬುದು ಧರ್ಮವೇ ಅಲ್ಲ ಎನ್ನುವ ಕಲಬುರ್ಗಿ, ಭಗವಾನರ ಮಾತುಗಳು ಎಷ್ಟು ಸರಿ, ಒಂದು ಬಹುಸಂಖ್ಯಾತ ಮನಸ್ಥಿತಿಯನ್ನು ಟೀಕಿಸಿ ನೋಯಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತಿರುತ್ತದೆ. ಬಹುತೇಕ ಪತ್ರಿಕೆಗಳೂ ಅದೇ ದಾಟಿಯಲ್ಲಿ ಬರೆಯುತ್ತವೆ. ನೀವು ನಂಬದಿದ್ದರೆ ಬೇಡ, ಹೀಗಳೆಯುವುದ್ಯಾಕೆ ಎಂದು ಪ್ರಶ್ನಿಸುವವರು ಯಥಾಸ್ಥಿತಿವಾದಿಗಳು. ಧರ್ಮ ಹೇಗಿದೆಯೋ ಹಾಗೆಯೇ ಇರಲಿ, ಸಾಧ್ಯವಾದರೆ ಉತ್ತಾಮ ಉತ್ತಮ ಸನಾತನ ಧರ್ಮಕ್ಕೆ ಹೋಗೋಣ, ಧರ್ಮಾಚರಣೆಗಳನ್ನು ಪ್ರಶ್ನಿಸದಿರೋಣ ಎನ್ನುವ ಅಭಿಪ್ರಾಯ ಹೆಚ್ಚುತ್ತಿದೆ. ಒಂದು ಧರ್ಮದೊಳಗೆ ಪ್ರಶ್ನೆಗಳೇಳದಿದ್ದರೆ ಆ ಧರ್ಮ ಸತ್ತಂತಾಗುತ್ತದೆ. ಗಾಂಧೀಜಿ, ಅಂಬೇಡ್ಕರ್ ಹಿಂದೂ ಧರ್ಮದ ಆಚರಣೆಗಳ, ಅವಮಾನಕರ ಶ್ರೇಣೀಕೃತ ಪದ್ಧತಿಯ ವಿರುದ್ಧ ದನಿಯೆತ್ತದಿದ್ದರೆ, ನೆನಪಿರಲಿ ಇವತ್ತು ಯಾವ ಸಮುದಾಯಗಳು ‘ಹಿಂದೂ’ ಧರ್ಮದ ಪರ ಪುಂಖಾನುಪುಂಖವಾಗಿ ಬರೆಯುತ್ತಿವೆಯೋ ಅವುಗಳಲ್ಲನೇಕ ಸಮುದಾಯಗಳಿಗೆ ಶಿಕ್ಷಣದ ಹಕ್ಕೂ ಸಿಗುತ್ತಿರಲಿಲ್ಲ. ಹಿಂದೂ ಧರ್ಮವನ್ನು ಉಗ್ರವಾಗಿ ಟೀಕಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅಂಬೇಡ್ಕರ್ ಕೂಡ ಇವತ್ತಿನ ಮನಸ್ಥಿತಿಯ ಪ್ರಕಾರ ಹತ್ಯೆಗೊಳಗಾಗಲು ಅರ್ಹರು. ಧರ್ಮದ ಯಥಾಸ್ಥಿತಿಯನ್ನೇ ಕಾದುಕೊಳ್ಳಬೇಕೆಂದು ಕೊಳ್ಳುವವರ ಪ್ರಕಾರ ಸತಿ ಪದ್ಧತಿಯನ್ನು ವಿರೋಧಿಸಿದ, ದೇವದಾಸಿ ಪದ್ಧತಿಯನ್ನು ವಿರೋಧಿಸಿದವರೆಲ್ಲರ ಸಾವಿಗೂ ಸಂಭ್ರಮ ಪಡಬೇಕು! ಟೀಕೆಯನ್ನೊಪ್ಪಿಕೊಳ್ಳದ ಧರ್ಮ ಮುಂದೆ ಸಾಗಲಾರದು. ಈ ಅನಂತಮೂರ್ತಿ, ಭಗವಾನ್, ಕಲಬುರ್ಗಿಯವರ ಮೇಲೆ ದ್ವೇಷ ಹೆಚ್ಚಿಸುವುದರಲ್ಲಿ ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿದೆ. ಇಡೀ ಭಾಷಣದಲ್ಲಿ ಬರುವ ಒಂದೋ ಎರಡೋ ಸಾಲುಗಳನ್ನಿಟ್ಟುಕೊಂಡು ಅದನ್ನೇ ಪ್ರಮಖವಾಗಿಸಿ ಉದ್ವಿಗ್ನ ಭಾವನೆಗಳನ್ನು ಪ್ರೇರೇಪಿಸುತ್ತವೆ. ಕಲಬುರ್ಗಿಯವರು ಅನಂತಮೂರ್ತಿಯವರ ವಿರುದ್ಧ ಮಾತನಾಡುತ್ತಾ ದೈವದ ಮೂರ್ತಿಗೆ ಉಚ್ಛೆ ಹುಯ್ದಿದ್ದ ಎಂದಿದ್ದರು. ಅದು ಅನೇಕ ದಿನಗಳ ಕಾಲ ಚರ್ಚೆಯ ವಿಷಯವಾಗಿತ್ತು. ಅನಂತಮೂರ್ತಿಯವರು ಪುಸ್ತಕವೊಂದರಲ್ಲಿ ದೆವ್ವ ಬಂದಾಗ ಸುತ್ತಲೂ ಉಚ್ಛೆ ಹುಯ್ದರೆ ದೆವ್ವ ಹತ್ತಿರ ಸುಳಿಯುವುದಿಲ್ಲ ಎಂದು ಬರೆದಿದ್ದರು. ಅದನ್ನು ಯಾವ ಮಾಧ್ಯಮದವರೂ ಸುದ್ದಿ ಮಾಡಲಿಲ್ಲ. ಅವರಿಗೆ ಸೆನ್ಶೇಷನ್ ಮೂಡಿಸುವುದು ಬೇಕಾಗಿತ್ತು. ಅದನ್ನವರು ಮಾಡಿದರು. ನಿಜ ವಿಷಯವನ್ನು ತಿಳಿಸದೆ ದ್ವೇಷದ ಭಾವನೆಯನ್ನು ಬೆಳೆಸುವಲ್ಲಿ ಸಹಕರಿಸಿದರು. ಕಲಬುರ್ಗಿಯವರು ಸತ್ತಾಗ ಫೇಸ್ ಬುಕ್ಕಿನ ಪೇಜೊಂದರಲ್ಲಿ ಅವರೇ ದೇವರ ಮೂರ್ತಿಯ ಮೇಲೆ ಉಚ್ಛೆ ಹುಯ್ದಿದ್ದರು ಎಂಬ ಸಾಲುಗಳು ಕಾಣಿಸಿದವು. ಅದನ್ನು ನೂರಾರು ಜನ ಲೈಕ್ ಮಾಡಿ ನೂರಾರು ಜನ ಶೇರ್ ಮಾಡಿದ್ದರು. ಮತ್ತೊಂದು ಸುಳ್ಳು ಸತ್ತ ಕಲಬುರ್ಗಿಯ ಮೇಲೆ ದ್ವೇಷ ಸಾಧಿಸಲು ನೆರವಾದವು. ಸುಳ್ಳಿನ ಜಾತ್ರೆಯಲ್ಲಿ ಸತ್ಯದ ಮೆರವಣಿಗೆ ಮಾಡುವುದೇ ತಪ್ಪೇನೋ?

ದಿನೇಶ್ ಅಮೀನ್ ಮಟ್ಟು ವಿವಿಧ ಜಾಲತಾಣಗಳಲ್ಲಿ ಬಂದ ಬೆದರಿಕೆಯ ಸಂದೇಶಗಳನ್ನು ಪರಿಗಣಿಸಿ ನನ್ನ ಹೆಸರೂ ಲಿಸ್ಟಿನಲ್ಲಿದೆ ಎಂದು ಹೇಳಿಕೊಂಡಿದ್ದೂ ಅಪಹಾಸ್ಯದ ವಿಷಯವಾಯಿತು. ನಮ್ಮ ದೇಶದ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ, ಈ ರೀತಿಯ ಹತ್ಯೆಗಳು ಪದೇ ಪದೇ ನಡೆಯುವುದಿಲ್ಲ ಎಂದು ನಂಬಬಯಸಿದರೂ ಹತ್ಯೆಯನ್ನು ಸಂಭ್ರಮಿಸುವ ಜನರಿರುವಾಗ ಏನೂ ಕೂಡ ಇಲ್ಲಿ ಸಾಧ್ಯ ಎನ್ನುವುದು ಸತ್ಯ. ದಿನೇಶ್ ಅಮೀನರಿಗೆ ಬೆದರಿಕೆಯ ಕರೆಗಳು ಪುಂಖಾನುಪುಂಖವಾಗಿ ಬರುತ್ತಿದ್ದುದು ಸುಳ್ಳಲ್ಲವಲ್ಲ. ಬೆದರಿಕೆಯ ಕರೆಗಳನ್ನು ಉಪೇಕ್ಷಿಸಿ, ಇದ್ದ ಪೋಲೀಸ್ ಬೆಂಗಾವಲನ್ನು ವಾಪಸ್ಸು ಕಳುಹಿಸಿದ ಕಾರಣಕ್ಕೇ ತಾನೇ ಕಲಬುರ್ಗಿಯವರ ಹತ್ಯೆಯಾಗಿರುವುದು. ಪೋಲೀಸ್ ಬೆಂಗಾವಲು ಇದ್ದಿದ್ದರೆ ಹತ್ಯೆ (ಮಾಡಿದವರ್ಯಾರೇ ಇರಲಿ) ನಡೆಯುತ್ತಿರಲಿಲ್ಲ. ದಿನೇಶ್ ಅಮೀನ್ ಪ್ರಗತಿಪರರೋ ವಿಚಾರವಂತರೋ ಮತ್ತೊಂದೋ ಮಗದೊಂದೋ ಮೊದಲಿಗೆ ಅವರೂ ಮನುಷ್ಯ, ಮನುಷ್ಯನಲ್ಲಿ ಸಹಜವಾಗಿರುವ ಭಯದ ಯೋಚನೆ ಅವರಲ್ಲೂ ಇದೆ. ಬೆದರಿಕೆಯ ಕರೆ ಸ್ವೀಕರಿಸುತ್ತಿದ್ದ, ಹಲ್ಲೆ ಎದುರಿಸಿದ್ದ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಅದೇ ರೀತಿಯ ಬೆದರಿಕೆಗಳನ್ನು, ಹಲ್ಲೆಯನ್ನು ಎದುರಿಸಿದ ದಿನೇಶ್ ಅಮೀನ್ ಮಟ್ಟುರವರಿಗೆ ನಾನು ಇದೇ ರೀತಿ ಹತ್ಯೆಯಾಗಿಬಿಡಬಹುದಾ ಎಂಬ ಯೋಚನೆ ಬಂದರೆ ಅದು ಯಾರ ತಪ್ಪು? ಆ ಯೋಚನೆಯನ್ನೂ ಅಪಹಾಸ್ಯ ಮಾಡಬೇಕೆ?

ದೂರದ ಬಾಂಗ್ಲಾದೇಶದಲ್ಲಿ ನಡೆದ ಪ್ರಗತಿಪರ ಬ್ಲಾಗರುಗಳನ್ನು ಮುಸ್ಲಿಂ ಮೂಲಭೂತವಾದಿಗಳು ಸಾಯಿಸುತ್ತಿದ್ದಾರೆ, ಆ ಹತ್ಯೆಗಳು ನಮ್ಮನ್ನು ವಿಚಲಿತಗೊಳಿಸುವುದಿಲ್ಲ, ಪಕ್ಕದ ಮಹಾರಾಷ್ಟ್ರದಲ್ಲಿ ವಿಚಾರವಾದಿಯ ಹತ್ಯೆಯಾಗುತ್ತದೆ, ಎರಡು ವರುಷವಾದರೂ ಕೊಲೆಗಾರರ ಸುಳಿವು ಸಿಗುವುದಿಲ್ಲ. ಅದೂ ನಮ್ಮನ್ನು ವಿಚಲಿತಗೊಳಿಸುವುದಿಲ್ಲ. ನಮ್ಮ ಪಕ್ಕದ ಊರಿನ ವಿಚಾರವಾದಿಯ ಕೊಲೆಯೂ ನಮ್ಮನ್ನು ವಿಚಲಿತಗೊಳಿಸುವುದಿಲ್ಲ ಎಂದರೆ ನಮ್ಮನ್ನು ವಿಚಲಿತಗೊಳಿಸುವ ಸಂಗತಿ ಯಾವುದು? ನಮ್ಮ ವಿಚಾರಗಳನ್ನು ಒಪ್ಪದ ವ್ಯಕ್ತಿ ಮನೆಗೆ ನುಗ್ಗಿ ನಮ್ಮ ಹಣೆಗೇ ಗುರಿಯಿಟ್ಟಾಗಲಾದರೂ ನಾವು ವಿಚಲಿತಗೊಳ್ಳುತ್ತೇವಾ? ಸಮಾಜದ ಆತ್ಮಸಾಕ್ಷಿಯನ್ನು ಪ್ರತಿದಿನ ಕೊಲೆ ಮಾಡಲಾಗುತ್ತಿದೆ.……

2 comments:

 1. ಸಂಶೋಧಕ ಕಲಬುರ್ಗಿಯವರ ಕಗ್ಗೊಲೆ ನಡೆದಾಗ ರಾಜ್ಯದ ಪ್ರಗತಿಪರ ಗುಂಪುಗಳು ಧಾರ್ಮಿಕ ಸಂಘಟನೆಯ ಗುಚ್ಛವೊಂದರ ಕಡೆ ಬೊಟ್ಟು ಮಾಡಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಅಸಹಜವೇನೂ ಅಲ್ಲ ಎಂದು ನನಗನಿಸುತ್ತದೆ ಏಕೆಂದರೆ ಆ ಧಾರ್ಮಿಕ ಸಂಘಟನೆಯ ವಿವಿಧ ಅಂಗಸಂಸ್ಥೆಗಳು ದೇಶಕ್ಕೆ ಸ್ವಾತಂತ್ರ್ಯ ದೊರೆತ ಲಾಗಾಯ್ತು ಪ್ರತಿಗಾಮಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಲೇ ಬಂದಿವೆ ಹಾಗೂ ವಿಚಾರಗಳನ್ನು ವಿಚಾರಗಳಿಂದ ಎದುರಿಸದೆ ವಿಚಾರವನ್ನು ಹಿಂಸಾತ್ಮಕ ಪ್ರತಿಭಟನೆಯ ಮೂಲಕ ಪ್ರತಿಭಟಿಸುವ ಚಾಳಿಯನ್ನು ಬೆಳೆಸಿಕೊಂಡಿವೆ. ಹೀಗಾಗಿ ಇಂಥ ಘಟನೆಗಳು ನಡೆದಾಗ ಸಂಶಯದ ತೋರುಬೆರಳು ಆ ಸಂಘಟನೆಯ ಅಂಗಸಂಸ್ಥೆಗಳ ಕಡೆಗೇ ಹೋಗುವುದು ಸಹಜ. ಹೀಗಾಗಿ ಆ ಸಂಘಟನೆಗಳು ವಿಚಾರವನ್ನು ವಿಚಾರದಿಂದಲೇ ಎದುರಿಸುವ ಆರೋಗ್ಯಕರ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

  ಕಲಬುರ್ಗಿಯವರ ಕೊಲೆ ಹಾಡಹಗಲೇ ನಡೆದು ಆಗಲೇ ಐದಾರು ದಿನಗಳು ಗತಿಸಿವೆ. ಹತ್ಯೆಗೆ ವೈಯಕ್ತಿಕ, ಕೌಟುಂಬಿಕ, ಆಸ್ತಿ ಸಂಬಂಧಿತ ವಿವಾದಗಳು ಇದ್ದಿದ್ದರೆ ಅದರ ಸುಳಿವು ಪೊಲೀಸರಿಗೆ ದೊರಕಲು ಇಷ್ಟು ಸಮಯ ಸಾಕು ಎಂದು ನನ್ನ ಅನಿಸಿಕೆ. ಪೋಲೀಸರ ಇದುವರೆಗಿನ ತನಿಖೆ ನೋಡಿದರೆ ಪೊಲೀಸರಿಗೆ ಏನೊಂದೂ ಸುಳಿವು ದೊರೆತಿಲ್ಲ. ವಾಸ್ತವವಾಗಿ ಕಲಬುರ್ಗಿಯಂಥ ಸಾತ್ವಿಕ ಚಿಂತಕ, ಸಂಶೋಧಕ, ಲೇಖಕ ಆಸ್ತಿ ಕಲಹಗಳಂಥ ದ್ವೇಷದ ಜಾಲದಲ್ಲಿ ಸಿಕ್ಕುವ ಸಾಧ್ಯತೆ ಇಲ್ಲ. ಕಲಬುರ್ಗಿ ಎಂದಲ್ಲ ಚಿಂತಕರು, ವಿಜ್ಞಾನಿಗಳು ಮೊದಲಾದ ಬುದ್ಧಿಜೀವಿಗಳು ಹಣಕ್ಕೆ ಹೆಚ್ಚಿನ ಮಾನ್ಯತೆ ನೀಡುವುದಿಲ್ಲ. ಕಲಬುರ್ಗಿಯವರಾದರೋ ಪರರ ಹಣಕ್ಕೆ ಎಂದೂ ಆಸೆಪಟ್ಟವರಲ್ಲ. ಅವರ ಬಗೆಗಿನ ಒಡನಾಡಿಗಳ ಲೇಖನ ನೋಡಿದರೆ ಅವರು ಆಸ್ತಿ ವಿವಾದ ಅದೂ ಕೊಲ್ಲುವಷ್ಟು ದ್ವೇಷ ಬೆಳೆಯಲು ಕಾರಣವಾಗುವ ವಿವಾದಗಳಿಗೆ ಸಿಲುಕುವ ಸಂಭವ ಇಲ್ಲ. ಹೀಗಾಗಿ ಇದು ಅವರ ವಿಚಾರಗಳ ಮೇಲಿನ ದ್ವೇಷದಿಂದ ನಡೆದ ದಾಳಿಯಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಮಹಾರಾಷ್ಟ್ರದ ದಾಬೋಲ್ಕರ್, ಪನ್ಸಾರೆ ಯವರ ಕೊಲೆಗಳು ಕೂಡ ಅವರ ವಿಚಾರ ಹಾಗೂ ಪ್ರಗತಿಪರ ಚಟುವಟಿಕೆಗಳ ಕಾರಣದಿಂದ ನಡೆದವುಗಳು ಎಂಬುದರಲ್ಲಿ ಸಂದೇಹ ಇಲ್ಲ, ಅವರ ಹತ್ಯೆಯ ರೂವಾರಿಗಳು ಇನ್ನೂ ಸಿಗದಿದ್ದರೂ ನಾವು ಇಂಥ ನಿರ್ಧಾರಕ್ಕೆ ಬರಬೇಕಾಗುತ್ತದೆ ಏಕೆಂದರೆ ಅವರನ್ನು ಕೊಲ್ಲಲು ಬೇರೆ ಕಾರಣಗಳು ಕಂಡುಬರುತ್ತಿಲ್ಲ.

  ಭಗವಾನರ ವಿಚಾರಗಳು ಗಾಢವಾದ ಚಿಂತನೆಗೆ ಅರ್ಹವಾದವುಗಳು. ಅವರನ್ನು ದ್ವೇಷಪೂರಿತವಾಗಿ ಹಂಗಿಸಲು ಕಾರಣಗಳು ಇಲ್ಲ. ಅವರ ಶಂಕರಾಚಾರ್ಯ ಹಾಗೂ ಪ್ರತಿಗಾಮಿತನ ಎಂಬ ಕೃತಿಯನ್ನು ಕುವೆಂಪುರಂಥ ಮೇರು ಲೇಖಕ ಮೆಚ್ಚಿಕೊಂಡು ಬೆಂಬಲಿಸಿದ್ದಾರೆ. ಇದರ ತಿಳುವಳಿಕೆ ಇಲ್ಲದೆ ಅಥವಾ ಅವರ ಕೃತಿಗಳನ್ನು ಅಧ್ಯಯನ ಮಾಡದ ಅರೆಬೆಂದ ಯುವಕರು ದ್ವೇಷಪೂರಿತ ಪ್ರಚಾರ ಮಾಡುತ್ತಾರೆ. ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ ಎಂಬ ಅವರ ಕೃತಿಯು ಕೂಡ ವೈಜ್ಞಾನಿಕ ನೋಟವನ್ನೊಳಗೊಂಡಿದ್ದು ಅಧ್ಯಯನಕ್ಕೆ ಯೋಗ್ಯವಾಗಿದೆ. ಇಂಥ ಚಿಂತಕ ಹಾಗೂ ಲೇಖಕನ ಮೇಲೆ ದ್ವೇಷ ಕಾರುವುದು ಸೂಕ್ತವಲ್ಲ ಏಕೆಂದರೆ ಇಂಥವರು ನಾಡಿನ ಆಸ್ತಿ.

  ದೇಜಗೌ ಅವರು ಹಿಂದೂ ಧರ್ಮದ ಅಸಮಾನತೆಯಿಂದ ರೋಸಿಹೋಗಿ ಏಸುವಿನ ಬಗ್ಗೆ ಮೆಚ್ಚುಗೆಯ ಮಾತಾಡಿದ್ದನ್ನು ಕೂಡ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ. ಅವರಂಥ ಜ್ಞಾನವೃದ್ಧರು, ಹಿರಿಯರು ಹೀಗೆ ಹೇಳಲು ಏನು ಕಾರಣ ಎಂದು ನಮ್ಮ ಪ್ರತಿಗಾಮಿಗಳು ಯೋಚಿಸದೆ ಅವರ ಮೇಲೆ ನಂಜು ಕಾರುವುದು ಕಂಡು ನಮ್ಮ ಸಮಾಜದ ಅವಸ್ಥೆ ಕಂಡು ಬೇಸರವಾಗುತ್ತದೆ.

  ReplyDelete
  Replies
  1. ಧರ್ಮದ ಬಗೆಗಿನ ಟೀಕೆಯನ್ನು ಧರ್ಮದೊಳಗಿನ ತಪ್ಪುಗಳನ್ನು ಸರಿಪಡಿಸಿಕೊಳ್ಳುವವರ ಸಂಖೈ ಕ್ಷೀಣಿಸುತ್ತ 'ಧರ್ಮನಿಂದಕರು' ಸಾವಿಗೆ ಅರ್ಹರು ಎಂದಬ್ಬರಿಸುವವರ ಸಂಖೈ ವೇಗವಾಗಿ ಬೆಳೆಯುತ್ತಿದೆ.

   Delete