Aug 23, 2015

ಅಂಬೇಡ್ಕರ್ ಎಂಬ ವಿದ್ರೋಹಿ!

ambedkar 22 vows
"ಪ್ರೈಮರಿ ಶಾಲೆಯ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವಂತಹ ಕೆಲವು ಸಂಗತಿಗಳನ್ನು ಪ್ರಕಾಶಕರು ಪುಸ್ತಕದಲ್ಲಿ ಸೇರಿಸಿದ್ದರು. ಅಂಬೇಡ್ಕರರ 22 ಪ್ರತಿಜ್ಞಾ ವಿಧಿಗಳು ಮತಾಂತರದಂತಹ ಸೂಕ್ಷ್ಮ ವಿಚಾರಗಳಿಗೆ ಸಂಬಂಧಪಟ್ಟಿವೆ, ಅವುಗಳನ್ನು ಪುಸ್ತಕದಲ್ಲಿ ಸೇರಿಸುವುದರಿಂದ ದೇಶದ ಏಕತೆಗೆ ದಕ್ಕೆಯಾಗುತ್ತದೆಂಬ ಕಾರಣಕ್ಕೆ ಪುಸ್ತಕವನ್ನು ವಾಪಸ್ಸು ಪಡೆಯಲು ನಿರ್ಧರಿಸಲಾಗಿದೆ" ಎಂದು ಹೇಳಿರುವುದು ಗುಜರಾತಿನ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಡಿ.ಕಪಾಡಿಯ!
ಗುಜರಾತಿನಲ್ಲಿ ಅಂಬೇಡ್ಕರರ 125ನೇ ವರ್ಷಾಚರಣೆಯ ಸಲುವಾಗಿ ಆರರಿಂದ ಎಂಟರ ನಡುವಿನ ವಿದ್ಯಾರ್ಥಿಗಳಿಗೆ "ರಾಷ್ಟ್ರೀಯ ಮಹಾಪುರುಷ ಭಾರತ ರತ್ನ ಡಾ.ಬಾಬಾ ಸಾಹೇಬ ಅಂಬೇಡ್ಕರ್" ಹೆಸರಿನ ಪುಸ್ತಕವನ್ನು ನೀಡಲು ನಿರ್ಧರಿಸಲಾಗುತ್ತದೆ. ನಾಲ್ಕು ಲಕ್ಷದಷ್ಟು ಪುಸ್ತಕಗಳು ಮುದ್ರಣಗೊಳ್ಳುತ್ತವೆ. ಮುದ್ರಣಗೊಂಡ ಪುಸ್ತಕಗಳನ್ನು ಮಕ್ಕಳಿಗೆ ಹಂಚುವುದೂ ಪ್ರಾರಂಭವಾಗುತ್ತದೆ. ದುತ್ತನೆ ಹಿಂದೂ ಧರ್ಮ ಪ್ರೇಮಿಯೊಬ್ಬನಿಗೆ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಸಂದರ್ಭದಲ್ಲಿ ತೆಗೆದುಕೊಂಡ ಪ್ರತಿಜ್ಞಾವಿಧಿ 'ಹಿಂದೂ ಧರ್ಮ' ವಿರೋಧದಂತೆ ಭಾಸವಾಗಿ 'ದೇಶದ ಏಕತೆ'ಗೆ ದಕ್ಕೆ ತರುವ ಕೆಲಸದಂತೆ ಕಾಣಿಸುತ್ತದೆ! ಎಲ್ಲಾ ಪುಸ್ತಕಗಳನ್ನು ವಾಪಸ್ಸು ಪಡೆದುಕೊಳ್ಳುವ ಆದೇಶ ಹೊರಬೀಳುತ್ತದೆ. ಅಂಬೇಡ್ಕರ್‍ರವರು ದಲಿತರಾಗಿ ಹಿಂದೂ ಧರ್ಮದಲ್ಲಿ ಹುಟ್ಟಿದ್ದು ಎಷ್ಟು ಸತ್ಯವೋ ಆ ಹಿಂದೂ ಧರ್ಮದ ರೀತಿ ರಿವಾಜುಗಳನ್ನು ವಿರೋಧಿಸಿ, ಹಿಂದೂ ಧರ್ಮ ತೊರೆಯುವವರೆಗೂ ದಲಿತರಿಗೆ, ಅಸ್ಪ್ರಶ್ಯರಿಗೆ ಅವಮಾನಗಳಿಂದ ಮುಕ್ತಿ ದೊರೆಯುವುದಿಲ್ಲ ಎಂದಿದ್ದರು. ಅಂಬೇಡ್ಕರ್ ಹಿಂದೂ ಧರ್ಮದ ವಿರುದ್ಧ ಗುಡುಗಿದ್ಯಾಕೆ, ಆ 22 ಪ್ರತಿಜ್ಞೆಗಳಲ್ಲಿ ಹಿಂದೂ ಧರ್ಮವನ್ನು ಟೀಕಿಸಿದ್ಯಾಕೆ, ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ಯಾಕೆ ಎಂಬುದು ಚರ್ಚೆಯ ಸಂಗತಿಯಾಗಬೇಕಿತ್ತು, ಹಿಂದೂ ಧರ್ಮದ 'ಶುದ್ಧೀಕರಣಕ್ಕೆ' ಕಾರಣವಾಗಬೇಕಿತ್ತು. ಧರ್ಮದ ಶುದ್ಧೀಕರಣದ ಕಠಿಣ ಹಾದಿಯನ್ನು ಬಿಟ್ಟು 'ನಿಷೇಧ'ದ ಸುಲಭ ಹಾದಿಗೆ ಗುಜರಾತಿನ ಸರಕಾರ ಹೊರಳಿಬಿಟ್ಟಿದೆ. ಒಟ್ಟಿನಲ್ಲಿ ಭಾರತವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಂಬೇಡ್ಕರರ ಮಾತುಗಳೀಗ ದೇಶದ ಏಕತೆಗೆ ಭಂಗ ತರುವ ಸಾಧ್ಯತೆಯಿದೆ. ಮುಂದೊಂದು ದಿನ ಹಿಂದೂ ಧರ್ಮ ತ್ಯಜಿಸಿದ ಅಂಬೇಡ್ಕರ್ ವಿದ್ರೋಹಿಯಾಗಿ ಚಿತ್ರಿತವಾದರೂ ಅಚ್ಚರಿ ಪಡಬೇಕಾಗಿಲ್ಲ.

ಇಷ್ಟಕ್ಕೂ ಆ 22 ಪ್ರತಿಜ್ಞೆಗಳಲ್ಲೇನಿದೆ?

1. ಬ್ರಹ್ಮ, ವಿಷ್ಣು, ಮಹೇಶ್ವರನಲ್ಲಿ ನನಗೆ ನಂಬಿಕೆಯಿಲ್ಲ, ಅವರನ್ನು ನಾನು ಪೂಜಿಸುವುದಿಲ್ಲ.
2. ದೇವರ ರೂಪವೆಂದು ಪರಿಗಣಿತವಾದ ರಾಮ ಮತ್ತು ಕೃಷ್ಣನಲ್ಲಿ ನನಗೆ ನಂಬಿಕೆಯಿಲ್ಲ, ಪೂಜಿಸುವುದಿಲ್ಲ.
3. ಗೌರಿ, ಗಣಪತಿ ಮತ್ತಿತರ ಹಿಂದೂ ದೇವ - ದೇವತೆಗಳಲ್ಲಿ ನನಗೆ ನಂಬಿಕೆಯಿಲ್ಲ, ನಾನವರನ್ನು ಪೂಜಿಸುವುದಿಲ್ಲ.
4. ದೇವರ ಅವತಾರಗಳಲ್ಲಿ ನನಗೆ ನಂಬಿಕೆಯಿಲ್ಲ. 
5. ಬುದ್ಧ ವಿಷ್ಣುವಿನ ಅವತಾರವೆಂಬುದನ್ನು ನಾನು ನಂಬುವುದಿಲ್ಲ. ಅದು ತಪ್ಪು ಮತ್ತು ಹುಚ್ಚುತನದ ಪ್ರಚಾರ.
6. ಶ್ರಾದ್ಧದಂತಹ ಆಚರಣೆಗಳನ್ನು ನಾನು ಮಾಡುವುದಿಲ್ಲ.
7. ಬುದ್ಧನ ನೀತಿ ಮತ್ತು ಪಾಠಗಳಿಗೆ ಧಕ್ಕೆ ತರುವಂತಹ ಕೆಲಸಗಳನ್ನು ನಾನು ಮಾಡುವುದಿಲ್ಲ.
8. ಸಮಾರಂಭಗಳನ್ನು ಬ್ರಾಹ್ಮಣರು ನೆರವೇರಿಸುವುದಕ್ಕೆ ನಾನು ಬಿಡುವುದಿಲ್ಲ.
9. ಮನುಷ್ಯರು ಸಮಾನರು ಎನ್ನುವುದನ್ನು ನಾನು ನಂಬುತ್ತೇನೆ.
10. ಸಮಾನತೆಗಾಗಿ ಹೋರಾಡುತ್ತೇನೆ.
11. ಬುದ್ಧನ ಎಂಟು ದಮ್ಮಗಳನ್ನು ನಾನು ಪಾಲಿಸುತ್ತೇನೆ.
12. ಬುದ್ಧನ 'ಪರಮಿತ'ವನ್ನು ನಾನು ಪಾಲಿಸುತ್ತೇನೆ.
13. ಎಲ್ಲಾ ಜೀವಿಗಳ ಬಗೆಗೂ ಪ್ರೀತಿ ಮತ್ತು ಅನುಕಂಪವನ್ನು ತೋರಿಸುತ್ತೇನೆ, ಅವರ ರಕ್ಷಣೆ ಮಾಡುತ್ತೇನೆ.
14. ನಾನು ಕದಿಯುವುದಿಲ್ಲ.
15. ನಾನು ಸುಳ್ಳು ಹೇಳುವುದಿಲ್ಲ.
16. ನಾನು ಪಾಪವನ್ನು ಮಾಡುವುದಿಲ್ಲ. 
17. ಮದ್ಯಪಾನವನ್ನಾಗಲೀ, ಡ್ರಗ್ಸ್ ತೆಗೆದುಕೊಳ್ಳುವುದನ್ನಾಗಲೀ ನಾನು ಮಾಡುವುದಿಲ್ಲ.
18. ದಮ್ಮವನ್ನು ಪಾಲಿಸುತ್ತಾ ಪ್ರೀತಿಯಿಂದ ಪ್ರತಿ ದಿನವನ್ನು ಕಳೆಯಬಯಸುತ್ತೇನೆ.
19. ಹಿಂದೂ ಧರ್ಮ ಮಾನವೀಯತೆಯ ವಿರೋಧಿ. ಅದು ಮಾನವೀಯತೆಯ ಬೆಳವಣಿಗೆಯನ್ನೂ ಸಹಿಸುವುದಿಲ್ಲ. ಕಾರಣ ಹಿಂದೂ ಧರ್ಮ ಅಸಹಾಯಕತೆಯ ಸೌಧದ ಮೇಲೆ ನಿಂತಿದೆ. ಹಾಗಾಗಿ ನಾನು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದೇನೆ.
20. ಬುದ್ಧನ ಧಮ್ಮವೇ ನಿಜವಾದ ಧರ್ಮವೆಂದು ನಾನು ನಂಬುತ್ತೇನೆ.
21. ಇದು ನನ್ನ ಪುನರ್ಜನ್ಮವೆಂದೇ ನನ್ನ ನಂಬುಗೆ.
22. ನನ್ನಿಡೀ ಜೀವನವನ್ನು ಬುದ್ಧನ ತತ್ವಾದರ್ಶಗಳಿಗೆ ಅನುಗುಣವಾಗಿ ಜೀವಿಸುತ್ತೇನೆಂದು ಈ ಮೂಲಕ ನಾನು ಘೋಷಿಸುತ್ತೇನೆ.
ಆಕರ: 

3 comments:

 1. ಅಂಬೇಡ್ಕರ್ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸೇರಿದಾಗ ಕೈಗೊಂಡ ಈ ೨೨ ಪ್ರತಿಜ್ಞೆಗಳು ಗೊತ್ತೇ ಇರಲಿಲ್ಲ. ಈ ಪ್ರತಿಜ್ಞೆಗಳನ್ನು ಮಾಧ್ಯಮಗಳು ದೇಶದ ಜನರ ಮುಂದೆ ಇಡುವುದು ಅಗತ್ಯ. ಆದರೆ ಮಾಧ್ಯಮಗಳು ಈ ವಿಷಯವನ್ನು ಜನರ ಮುಂದೆ ಇಡುತ್ತಲೇ ಇಲ್ಲ. ನಮ್ಮ ದೇಶವು ಸುಧಾರಣೆ ಆಗಬೇಕಾದರೆ ಅಂಬೇಡ್ಕರ್ ಅವರ ಈ ಪ್ರತಿಜ್ಞೆಗಳ ಬಗ್ಗೆ ಇಡೀ ದೇಶದ ಜನ ಚಿಂತಿಸುವಂತೆ ಆಗಬೇಕು.

  ReplyDelete
  Replies
  1. ಹೌದು ಆದರೆ ದೇಶದ ಜನರ ಚಿಂತನಾ ಕ್ರಿಯೆ ಸ್ವಯಂರತಿಯತ್ತ ಸಾಗಿಬಿಡುತ್ತಿದೆ ಅಲ್ಲವೇ?

   Delete
 2. ಹೌದು ಇದು ಸತ್ಯಯಾವ ದಿನ ದಲಿತರು ಹಿಂದುಳಿದ ವರ್ಗದವರು ಅಂಬೇಡ್ಕರ್ ನೀಡಿದ 22 ಪ್ರತಿಜ್ಞಾ ವಿಧಿಗಳು ಪಾಲಿಸುವರೋ ಆ ದಿನ ಹಿಂದೂ ಧರ್ಮದ ಹಲವು ಜಾತಿ ತಾರತಮ್ಯ ಮೌಡ್ಯತೆಗಳಿಗೆ ಬ್ರೇಕ್ ಬೀಳುತ್ತೆ ಆವರೆಗೂ ಅವರು ನಮ್ಮನ್ನು ತುಳಿಯುತ್ತಲೇ ಇರುತ್ತಾರೆ

  ReplyDelete