Apr 18, 2015

ಅಸಹಾಯಕ ಆತ್ಮಗಳು - ನಾಶವಾದ ಆತ್ಮದೊಡನೆ..!

asahayaka aatmagalu
ಕು.ಸ. ಮಧುಸೂದನ್
ಅವನ ಜೊತೆ ಓಡಿ ಹೋದಾಗ ನನಗಿನ್ನು ಹದಿನೈದು ವರ್ಷ. ಅವನೇನು ಮಹಾ ದೊಡ್ಡವನೇನಲ್ಲ. ಅವನಿಗೂ ಹದಿನಾರೊ ಹದಿನೇಳು. ಪ್ರೀತಿಯೆಂದರೆ ಸೆಕ್ಸ್ ಅನ್ನೋದು ಸಹ ನಮಗೆ ಗೊತ್ತಿರಲಿಲ್ಲ. ಯಾವಾಗಲು, ಯಾರ ಹೆದರಿಕೇನೂ ಇರದಂತೆ ಒಟ್ಟಿಗೆ ಕೂತು ಮಾತಾಡ್ತಾ ಇರಬೇಕು ಅನ್ನೊದಷ್ಟೆ ನಮ್ಮ ಪ್ರೀತಿಯ ಕಲ್ಪನೆಯಾಗಿತ್ತು. ಆ ಸಣ್ಣ ಊರಲ್ಲಿದ್ದ ಸರಕಾರಿ ಸ್ಕೂಲಲ್ಲಿ ಒಂಭತ್ತನೇ ಕ್ಲಾಸ್ ಓದ್ತಾ ಇದ್ದಾಗ ಅವನ ಪರಿಚಯ ಆಗಿತ್ತು. ಅವನು ಬಾಳೆಮಂಡೀಲಿ ಕೆಲಸ ಮಾಡ್ತಾ ಇದ್ದ. ನಾನು ಸ್ಕೂಲಿಗೆ ಹೋಗೋ ದಾರೀಲೆ ಅವನ ಮಂಡಿಯಿತ್ತು. ನೋಡ್ತಾ ನೋಡ್ತಾ ಪ್ರೀತಿಯಾಗಿ ಬಿಡ್ತು. ಸಾಯಂಕಾಲ ಸ್ಕೂಲು ಬಿಟ್ಟ ಮೇಲೆ ನಾನು ನೇರವಾಗಿ ಮನೆಗೆ ಬರದೆ, ಊರಾಚೆಯ ರೈಲ್ವೇ ಸ್ಟೇಷನ್ ಹತ್ತಿರ ಹೋಗ್ತಿದ್ದೆ. ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅವನು ಸೈಕಲ್ ತಗೊಂಡು ಅಲ್ಲಿಗೇ ಬರೋನು. ಸಾಯಂಕಾಲ ನಮ್ಮೂರಿಗೆ ಯಾವ ರೈಲೂ ಬರ್ತಾ ಇರಲಿಲ್ಲ. ಹಾಗಾಗಿ ಖಾಲಿಯಿರುತ್ತಿದ್ದ ಸ್ಟೇಷನ್ ಒಳಗೆ ಒಂದು ಮೂಲೆಯಲ್ಲಿ ಕೂತು ಮಾತಡ್ತಾ ಇದ್ವೀ. ಹೀಗೇ ಒಂದಾರು ತಿಂಗಳು ಕಳೆದವು. ಅದೆನು ಮಾತಾಡ್ತಾ ಇದ್ದೆವೋ ಈಗಂತು ನೆನಪೂ ಆಗ್ತಿಲ್ಲ. ಒಟ್ಟಿನಲ್ಲಿ ಯಾವಾಗಲು ಜೊತೆಗಿದ್ದು ಮಾತಾಡ್ತಾನೇ ಇರಬೇಕು ಅನ್ನೊ ಆಸೆ ಆ ವಯಸ್ಸಲ್ಲಿ. 

ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗಿ ಬರ್ತಾ ಇದ್ದದ್ದೇ ಕತ್ತಲಾದ ಮೇಲೆ. ಹಾಗಾಗಿ ಅವರು ಬರುವಷ್ಟರಲ್ಲಿ ಮನೆ ಸೇರಿರ್ತಾ ಇದ್ದೆ. ಒಬ್ಬಳೇ ಮಗಳಾಗಿದ್ದರಿಂದ ಅವರು ಬಡತನದಲ್ಲೂ ಚೆನ್ನಾಗಿ ನೋಡಿಕೊಳ್ತಾ ಇದ್ದರು. ಯಾವುದೂ ಅರ್ಥವಾಗದ ಆ ವಯಸ್ಸಲ್ಲಿ ಅವನು ಬಿಟ್ಟರೆ ಬೇರೇನು ನನಗೆ ಇಷ್ಟವಾಗ್ತಿರಲಿಲ್ಲ.

ಒಂದು ದಿನ ನಾನು ಸ್ಕೂಲಿಂದ ಬರೋವಷ್ಟರಲ್ಲಿ ಮನೆ ಮುಂದೆ ಅಪ್ಪನ ಹೆಣ ಇಟ್ಟುಕೊಂಡು ಅಮ್ಮ ಅಳ್ತಾ ಇದ್ದಳು. ರೈಸ್ ಮಿಲ್ಲಲ್ಲಿ ಕೆಲಸ ಮಾಡ್ತಿದ್ದ ಅಪ್ಪ ಬತ್ತ ಲೋಡ್ ಮಾಡುವಾಗ ಲಾರಿಯಿಂದ ಆಯಾ ತಪ್ಪಿ ಬಿದ್ದು ಅಲ್ಲೇ ಸತ್ತು ಹೋಗಿದ್ದ. ಅಮ್ಮನ ಜೊತೆ ಸೇರಿ ನಾನೂ ಅತ್ತೆ. ಅವನ ತಿಥಿ ಇತ್ಯಾದಿಯೆಲ್ಲ ಮುಗಿದು ನೆಂಟರಿಷ್ಟರೆಲ್ಲ ಊರಿಗೆ ಹೋದಮೇಲೆ ಮನೇಲಿ ಉಳಿದದ್ದು ನಾನು,ಅಮ್ಮ ಮತ್ತು ಅಮ್ಮನ ತಮ್ಮ ಅಂದರೆ ನನ್ನ ಸೋದರ ಮಾವ ಮಾತ್ರ. ಅವನು ಅದ್ಯಾವುದೋ ಸರಕಾರಿ ಆಸ್ಪತ್ರೆಲಿ ಅಟೆಂಡರ್ ಕೆಲಸ ಮಾಡ್ತಾ ಇದ್ದ. ನನ್ನ ಅವನಿಗೇ ಕೊಟ್ಟು ಮದುವೆ ಮಾಡಬೇಕು ಅಂತ ಅಪ್ಪ ಇದ್ದಾಗಲೇ ಮಾತಾಡಿಕೊಳ್ತಾ ಇದ್ದಿದ್ದು ನನಗೆ ಗೊತ್ತಿತ್ತು. ಆದರೆ ಆ ಹುಡುಗನ ಪ್ರೀತಿಯಲ್ಲಿ ಬಿದ್ದಿದ್ದ ನನಗೆ ಅದರ ಬಗ್ಗೆ ಸೀರಿಯಸ್ ಆಗಿ ಯೋಚನೆ ಮಾಡೋ ಅಗತ್ಯ ಕಂಡಿರಲಿಲ್ಲ. ತಿಥಿ ಮುಗಿದ ಮಾರನೆ ದಿನ ಸ್ಕೂಲಿಗೆ ಹೊರಡೋಕೆ ರೆಡಿಯಾಗ್ತ ಇದ್ದರೆ ಅಮ್ಮ ತಡೆದು ಇವತ್ತಿಂದ ನೀನು ಸ್ಕೂಲಿಗೇನು ಹೋಗೋದು ಬೇಡ. ನಾವೆಲ್ಲ ನಿಮ್ಮ ಮಾವನ ಊರಿಗೆ ಹೋಗಿ ಅಲ್ಲೇ ಇರೋದು ಅಂತ ತೀರ್ಮಾನ ಮಾಡಿದೀವಿ. ನಿನ್ನ ಮಾವ ಸ್ಕೂಲಿಗೆ ಹೋಗಿ ಟಿ.ಸಿ.ತರ್ತಾನೆ. ಅಲ್ಲೆ ಓದೋವಂತೆ. ಒಂದು ಎಸ್.ಎಸ್.ಎಲ್.ಸಿ ಮುಗಿಸೋವಂತೆ ಆಮೇಲೆ ಮಾವನಿಗೆ ನಿನ್ನ ಮದುವೆ ಮಾಡಿ ನಾನು ಕೈ ತೊಳ್ಕೊಳ್ತೀನಿ ಅಂದಳು. ಇದನ್ನೆಲ್ಲ ಯೋಚನೆ ಮಾಡಿರದ ನನಗೆ ಎದೆ ಒಡೆದ ಹಾಗಾಯ್ತು. ಅಮ್ಮ, ಮಾವ ಬಂದು ಟಿ.ಸಿ. ತಗೊಳ್ಳಲಿ ಪರವಾಗಿಲ್ಲ ನಾನು ಸ್ಕೂಲಿಗೆ ಹೋಗಿ ಟೀಚರ್‍ಗಳಿಗೆ ಫ್ರೆಂಡ್ಸ್‍ಗೆ ಹೇಳಿಬರ್ತೀನಿ ಅಂತ ಹಟ ಮಾಡಿ ಮನೆಯಿಂದ ಹೊರಟೆ. ಸೀದಾ ಅವನು ಕೆಲಸ ಮಾಡ್ತಾ ಇದ್ದ ಮಂಡಿಗೆ ಹೋಗಿ ಅವನನ್ನು ಕರೆದುಕೊಂಡು ರೈಲ್ವೇ ಸ್ಟೇಷನ್ನಿಗೆ ಹೋದೆ. ಅಲ್ಲಿ ಅವನಿಗೆ ಎಲ್ಲ ವಿಷಯ ಹೇಳಿ ಈಗೆನು ಮಾಡೋದು ಅಂತ ಕೇಳಿದೆ. ಅವನಿಗೂ ಏನು ಮಾಡೋದು ಅಂತ ಗೊತ್ತಾಗದೆ ಯೋಚನೆ ಮಾಡ್ತಾಇದ್ದಾಗ ನಾನೇ ಎಲ್ಲಾದರು ದೂರ ಓಡಿಹೋಗಿ ಮದುವೆ ಆಗಿಬಿಡೋಣವಾ ಅಂದೆ. ಹತ್ತೇ ನಿಮಿಷದಲ್ಲಿ ನಮ್ಮ ಭವಿಷ್ಯಗಳನ್ನು ನಾವೇ ತೀರ್ಮಾನ ಮಾಡಿಕೊಂಡು ಬಿಟ್ಟಿದ್ದೋ.

ಸರಿ ಮಾತಾಡಿಕೊಂಡಂತೆ ಅವತ್ತೆ ಮದ್ಯಾಹ್ನ ಬಟ್ಟೆ ಬರೇ ಏನೂ ತಗೊಳ್ಳದೆ ಸಿಟಿ ಬಸ್ಸು ಹತ್ತಿಬಿಟ್ಟಿವಿ. ನಾವು ಸಿಟಿ ತಲುಪಿದಾಗ ರಾತ್ರಿ ಎಂಟು ಗಂಟೆಯಾಗಿತ್ತು.ನನ್ನ ಕೈಲಿ ಒಂದು ರೂಪಾಯಿ ಇರಲಿಲ್ಲ. ಅವನು ಮಾತ್ರ ಮಂಡಿ ಸಾಹುಕಾರರಿಗೆ ಏನೋ ಸುಳ್ಳು ಹೇಳಿ ಒಂದಷ್ಟು ದುಡ್ಡು ತಂದಿದ್ದ. ಆ ರಾತ್ರಿ ಎಲ್ಲಿಗೆ ಹೋಗಬೇಕು ಏನು ಮಾಡಬೇಕು ಅನ್ನೋದೇನು ಗೊತ್ತಿರದೆ ಬಸ್ ಇಳಿದು ಬಸ್‍ಸ್ಟ್ಯಾಂಡಲ್ಲಿ ಕೂತು ಬಿಟ್ಟೆವು ರಾತ್ರಿ ಹತ್ತು ಗಂಟೆಯವರೆಗು ಕೂತಿದ್ದ ನಮಗೆ ಆ ಡಿಸೆಂಬರ್ ತಿಂಗಳ ಚಳಿ ತಡೆಯಲಾಗಲಿಲ್ಲ. ಆಗವನು ಲಾಡ್ಜಲ್ಲಿ ರೂಂ ಮಾಡೋಣ, ನಡಿ ಅಂತ ಬಸ್‍ಸ್ಟ್ಯಾಂಡಿಂದ ಹೊರಬಂದು ಅಲ್ಲೇ ಹತ್ತಿರದಲ್ಲಿ ಸಿಕ್ಕ ಸಣ್ಣ ಲಾಡ್ಜಿಗೆ ಹೋದ್ವಿ. ನಮ್ಮನ್ನು ನೋಡಿದ ಮ್ಯಾನೇಜರ್ ನೂರೆಂಟು ಪ್ರಶ್ನೆ ಕೇಳಿ ಕೊನೆಗೊಂದು ರೂಮ್ ಕೊಟ್ಟ.  ನಾನು ರೂಮಲ್ಲಿ ಮುಖ ತೊಳೆಯುವಷ್ಟರಲ್ಲಿ ಅವನು ಹೊರಗೆ ಹೋಗಿ ಊಟದ ಪ್ಯಾಕೇಟ್ ತಂದ. ಇಬ್ಬರೂ ತಿಂದು ಇನ್ನೇನು ಕೈ ತೊಳೆಯಬೇಕು ಅನ್ನುವಷ್ಟರಲ್ಲಿ ಬಾಗಿಲು ಬಡಿದಂತಾಯಿತು. ತೆಗೆದರೆ ಮೂರುಜನ ಪೋಲಿಸರು ಬಾಗಿಲು ತೆಗೆದವವನನ್ನೇ ದಬ್ಬಿಕೊಂಡು ಒಳಗೆ ಬಂದು ನಮ್ಮ ಊರು ಕೇರಿಯೆಲ್ಲ ವಿಚಾರಿಸಿದರು. ನಾವು ಹೆದರಿಕೆಯಿಂದ ಎಲ್ಲ ಹೇಳಿದೆವು. ಆದರದನ್ನು ಕೇಳದ ಪೋಲಿಸಿನವರು. ಅವನಿಗೆ ಲೇಯ್ ಸೂಳೆ ಮಗನೆ ಸಣ್ಣ ಹುಡುಗೀನಾ ಕಿಡ್ನಾಪ್ ಮಾಡಿದೀಯಾ ಬಾ ಸ್ಟೇಷನ್ನಿಗೆ ಅಂತ ನಮ್ಮಿಬ್ಬರನ್ನೂ ಕರೆದುಕೊಂಡು ಹೋದರು. ಲಾಡ್ಜಿನ ಮ್ಯಾನೇಜರ್ ಇವರ ಬಗ್ಗೆ ಅನುಮಾನ ಆಗೀನೆ ಸರ್ ನಾನು ನಿಮಗೆ ಪೋನ್ ಮಾಡಿದ್ದು ಅಂದಾಗ ಅವನೇ ಅವರಿಗೆ ವಿಷಯ ತಿಳಿಸಿದ್ದು ಅಂತ ಗೊತ್ತಾಯಿತು.

ಸರಿ ಇಬ್ಬರನ್ನು ಸ್ಟೇಷನ್ನಿಗೆ ಅಂತ ಕರೆದುಕೊಂಡು ಹೋದ ಪೋಲಿಸರು ಸ್ಟೇಷನ್ನಿನ ಒಳಗೆ ಕರೆದುಕೊಂಡು ಹೋಗದೆ ಅದರ ಹಿಂದಿದ್ದ ಒಂದು ಕ್ವಾಟ್ರಸ್ಸಿಗೆ ಕರೆದುಕೊಂಡು ಹೋಗಿ ಕೂರಿಸಿದರು. ಅವನಿಗೆ ಸೂಳೆ ಮಗನೆ ಅವಳಿಗೆ ಎಲ್ಲ ಮುಗಿಸಿಬಿಟ್ಟೇನೊ ಅಂತ ಕೇಳಿದಾಗ ಅವನು ಇಲ್ಲ ಅನ್ನುವಂತೆ ತಲೆಯಾಡಿಸಿದ. ಅದಕ್ಕೊಬ್ಬ ಪೋಲಿಸನವನು ಹಾಗಾದ್ರೆ ಇವತ್ತು ನಾವು ಅವಳನ್ನು ನೋಡಿಕೊಳ್ಳ್ತೀವಿ ನಾಳೆಯಿಂದ ನೀನೆ ನೋಡಿಕೊ ಅಂತ ಒಬ್ಬೊಬ್ಬರಾಗಿ ಮೂರು ಜನವೂ ಅವನ ಕಣ್ಣೆದುರಲ್ಲೆ ನನ್ನ ಅತ್ಯಾಚಾರ ಮಾಡಿದರು. ನಾನು ಕೂಗಿಕೊಂಡರೆ ಅವನನ್ನು ಸಾಯಿಸಿ ಬಿಡೋದಾಗಿ ಇಲ್ಲ ಅಂದ್ರೆ ಜೈಲಿಗೆ ಹಾಕಿಸೋದಾಗಿ ಹೆದರಿಸಿ ಆ ರಾತ್ರಿ ನನ್ನ ಕಿತ್ತು ತಿಂದು ಬಿಟ್ಟರು.ಇನ್ನೂ ಹದಿನೈದು ವರ್ಷದ ಸಣ್ಣ ಹುಡುಗಿಯ ಮೇಲೆ ಮೂರೂ ಜನ ನಡೆಸಿದ ದಬ್ಬಾಳಿಕೆಗೆ ನಾನು ಪ್ರಜ್ಞೆ ತಪ್ಪಿಬಿಟ್ಟೆ. ಎಚ್ಚರವಾದಾಗ ಬೆಳಿಗ್ಗೆ ಸೂರ್ಯ ಹುಟ್ತಾ ಇದ್ದ. ಕಣ್ಬಿಟ್ಟು ಸುತ್ತ ನೋಡಿದರೆ ಅವನು ಕಾಣಲಿಲ್ಲ. ನನಗೆ ಎಲ್ಲಿವರು ಅವನನ್ನ ಸಾಯಿಸೇ ಬಿಟ್ಟರೊ ಅಂತ ಭಯವಾಯಿತು. ಅಲ್ಲೇ ಬಿದುಕೊಂಡಿದ್ದ ಆ ಮೂರೂ ಜನ ಕಿರಾತಕರನ್ನ ಎಬ್ಬಿಸಿ ಕೇಳಿದರೆ ಅವನಾ ನಿನ್ನ ನಾವು ಮಜಾ ಮಾಡೋದು ನೋಡಿ ನಾನು ಊರಿಗೆ ಹೋಗ್ತೀನಿ ಅಂತ ಆಗಲೇ ಎದ್ದುಹೋದ. ಬೇಕಾದರ ನೀನೂ ಅವನ ಹಿಂದೇನೆ ಹೋಗು. ಆದರೆ ಇಲ್ಲಿ ನಡೆದ ವಿಚಾರವನ್ನು ಬೇರೆ ಯಾವನಿಗಾದರು ಹೇಳಿದರೆ ನಿಮ್ಮನ್ನು ಹುಡುಕಿ ಶೂಟ್ ಮಾಡಿ ಸಾಯಿಸಿ ಬಿಡ್ತೀವಿ ಅಂತ ಕೈಲಿದ್ದ ಬಂದೂಕು ತೋರಿಸಿ ಹೆದರಿಸಿ ಕಳಿಸಿದರು. ಕೆದರಿದ್ದ ತಲೆ ಬಟ್ಟೆ ಸರಿಮಾಡಿಕೊಂಡು ಓಡೋಡಿ ಬಸ್‍ಸ್ಟ್ಯಾಂಡಿಗೆ ಬಂದು ಹುಡುಕಿದರೆ ಅವನೆಲ್ಲೂ ಕಾಣಲಿಲ್ಲ. ನಡು ನೀರಲ್ಲಿ ನನ್ನ ಕೈಬಿಟ್ಟು ಅವನು ಓಡಿ ಹೋಗಿದ್ದ. ಏನಾದರು ಆಗಲಿ ಅಂತ ಬೆಳಿಗ್ಗೆ ಹತ್ತುಗಂಟೆ ತನಕ ಅವನು ಇಲ್ಲೇ ಎಲ್ಲಾದರು ಇರಬಹುದೇನೊ ಅನ್ನೊ ನಂಬಿಕೆಯಲ್ಲಿ ಬಸ್ ಸ್ಟ್ಯಾಂಡಿನಲ್ಲೇ ಕಾದೆ. ಇನ್ನವನು ಬರುವುದಿಲ್ಲವೆಂಬುದು ಯಾವಾಗ ಗ್ಯಾರಂಟಿಯಾಯಿತೊ ಮುಂದೇನು ಅನ್ನುವ ಚಿಂತೆ ಶುರುವಾಯಿತು. ವಾಪಾಸು ಮನೆಗೆ ಹೋಗುವಂತಿರಲಿಲ್ಲ. ಸಿಟೀಲಿ ಯಾರೂ ಗೊತ್ತಿರಲಿಲ್ಲ. ರಾತ್ರಿ ಆ ಲೌಡಿ ಮಕ್ಕಳು ಕೊಟ್ಟ ಹಿಂಸೆಗೆ ಮೈಕೈಯೆಲ್ಲ ನೋವಾಗ್ತಾ ಇತ್ತು. ಕೊನೆಗೆ ಆ ಪೋಲಿಸರಿಗೇ ಕೇಳಿದರೆ ಅವನು ಎಲ್ಲಿ ಹೋದ ಅನ್ನುವುದರ ಬಗ್ಗೆ ಏನಾದರು ಹೇಳಬಹುದೇನೋ ಅನ್ನೋ ಆಸೆಯಿಂದ ಮತ್ತೆ ಪೋಲಿಸ್ ಸ್ಟೇಷನ್ನಿನ ಹಿಂದಿದ್ದ ಆ ಕ್ವಾಟ್ರಸ್‍ಗೆ ಹೋಗಿ ಬೀಗ ಹಾಕಿದ್ದ ಬಾಗಿಲ ಮುಂದೆ ಕೂತು ಕಾಯತೊಡಗಿದೆ. ಎಷ್ಟೊ ಹೊತ್ತಾದ ಮೇಲೆ ಯಾರೋ ಒಬ್ಬ ಬೇರೆ ಪೋಲಿಸಿನವನು ಬಂದು ಯಾರು ನೀನು ? ಇಲ್ಯಾಕೆ ಕೂತಿದಿಯಾ ಅಂತ ಜೋರು ಮಾಡಿಕೇಳಿದಾಗ ಅಳಲು ಶುರು ಮಾಡಿದೆ. ಅಷ್ಟು ಹೊತ್ತು ತಡೆದುಕೊಂಡಿದ್ದ ದು:ಖ ಒಂದೇ ಸಾರಿಗೆ ಹೊರಬಂದಿತ್ತು. ರಾತ್ರಿಯಿಂದ ನಡೆದದ್ದನ್ನೆಲ್ಲ ಅವನಿಗೆ ಹೇಳಿ ಬಿಟ್ಟೆ.. ಓ ಅವರು ಮೂರೂ ಜನ ರಾತ್ರಿ ಬೀಟಿನವರು ಈಗ ಮನೆಲಿ ಮಲಗಿರ್ತಾರೆ. ಮತ್ತವರ ಕೈಲಿ ಸಿಕ್ಕರೆ ನಿನ್ನ ಬಿಡಲ್ಲ. ಸುಮ್ಮನೇ ಊರಿಗೆ ವಾಪಾಸು ಹೋಗಿಬಿಡು ಅಂದ. ಅವನ ಮಾತು ಕೇಳಿದ್ದರೆ ಚೆನ್ನಾಗಿತ್ತೆನೊ. ಆದರೆ ಯಾಕೋ ಊರಿಗೆ ಹೋಗೊ ಮನಸ್ಸಾಗಲಿಲ್ಲ. ನಾನು ವಾಪಾಸು ಊರಿಗೆಹೋಗಲ್ಲ ಅಂದೆ. ಅದಕ್ಕವನು ಏನು ಮಾಡ್ತೀಯಾ ಇಲ್ಲಿದ್ದು ಅಂದ. ಸತ್ತೋಗ್ತೀನಿ ಅಂದೆ. ಸಿಟ್ಟುಬಂದ ಅವನು ಹಾಳಾಗಿ ಹೋಗು! ನೀನಿಲ್ಲಿ ಕೂತಿರೋದನ್ನ ಸಾಹೇಬರು ನೋಡಿದರೆ ಜೈಲಿಗೆ ಹಾಕ್ತಾರೆ. ಮೊದಲು ಇಲ್ಲಿಂದ ಹೋಗು ಅಂದ.

ಅಲ್ಲಿಂದ ಬಂದವಳಿಗೆ ಬಸ್ ಸ್ಟ್ತಾಂಡು ಬಿಟ್ಟರೆ ಬೇರೇನು ಗೊತ್ತಿರಲಿಲ್ಲ. ಮತ್ತೆ ಅಲ್ಲಿಗೇ ಬಂದು ಸಾಯಂಕಾಲದವರೆಗೂ ಅಲ್ಲೆ ಒಂದು ಕಡೆ ಕೂತು ಬಿಟ್ಟೆ. ಸಾಯಂಕಾಲ ಕತ್ತಲಾಗೊ ಸಮಯದಲ್ಲಿ ಸುಮಾರು ಮುವತ್ತು ವರ್ಷದ ಒಬ್ಬ ಬಂದು ಏಯ್ ಹುಡುಗಿ ಮದ್ಯಾಹ್ನದಿಂದ ನೋಡ್ತಾ ಇದೀನಿ ಇಲ್ಲೇ ಕೂತಿದಿಯಲ್ಲ ಯಾವ ಊರಿಗೆ ಹೋಗಬೇಕು? ಅಂದ ನಾನು ಎಲ್ಲಿಗೂ ಹೋಗಬೇಕಾಗಿಲ್ಲ. ಅಂತ ಹೇಳಿ ಸುಮ್ಮನೇ ಕೂತೆ. ಅಷ್ಟರಲ್ಲಿ ಒಬ್ಬ ಹೆಂಗಸು ಬಂದು ಏನು ರಾಮಣ್ಣ ಯಾರಿದು ಏನಂತೆ ಅಂದಳು. ಆಗ ಅವರಿಗೆ ರಾತ್ರಿ ಪೋಲಿಸಿನರು ಮಾಡಿದ ಅತ್ಯಾಚಾರವೊಂದನ್ನು ಬಿಟ್ಟು ಉಳಿದೆಲ್ಲವನ್ನೂ ಹೇಳಿಬಿಟ್ಟೆ. ಅದಕ್ಕವಳು ಈಗ ಬಾ ನಮ್ಮ ಮನೆಗೆ ಹೋಗೋಣ. ಅಲ್ಲಿ ಇವತ್ತು ರಾತ್ರಿ ಇದ್ದು ನಾಳೆ ನಿನಗೆ ಹೇಗನಿಸುತ್ತೊ ಹಾಗೆ ಮಾಡುವಂತೆ ಅಂದಳು. ಬೇರೇ ದಾರಿಯಿರದೆ ಅವರ ಹಿಂದೆ ಹೋದೆ.

ಆಮೇಲೇನು ಹೇಳಲಿ? ರಾತ್ರಿಯ ಮಟ್ಟಿಗೆ ಅಂತ ಹೋದವಳು ಬೇರೆಲ್ಲೂ ಹೋಗಲು ಗೊತ್ತಿರದೆ ಅಲ್ಲೇ ಇದ್ದು ಬಿಟ್ಟೆ. ಅವಳು ಕಸುಬು ಮಾಡುವ ಹೆಂಗಸು. ನಿಧಾನಕ್ಕೆ ನನ್ನ ಪಳಗಿಸಿದಳು ಅನ್ನುವುದಕ್ಕಿಂತ ಪರಿಸ್ಥಿತಿ ಪಳಗುವಂತೆ ಮಾಡಿತು.ಅವಳು ಮನೇಲಿ ದಂಧೆ ಮಾಡ್ತಾ ಇರಲಿಲ್ಲ. ಗಿರಾಕಿಗಳು ಹೇಳಿದ ಕಡೆಗೆ ಹುಡುಗೀರನ್ನ ಕಳಿಸೋಳು.ಮನೆಲಿ ನಾವೊಂದಿಬ್ಬರು ದಿಕ್ಕಿಲ್ಲದ ಹುಡುಗೀರನ್ನ ಬಿಟ್ರೆ ಉಳಿದವರು ಮದುವೆಯಾಗಿ ಸಂಸಾರ ನಡೆಸೋ ಹೆಂಗಸರನ್ನ ಸಂಪರ್ಕದಲ್ಲಿಟ್ಟುಕೊಂಡಿದ್ದಳು. ಅವರಿಗೆ ದುಡ್ಡಿನ ಅಗತ್ಯ ಬಿದ್ದಾಗ ಇವಳು ಅವರಿಗೆ ಗಿರಾಕಿಗಳನ್ನು ಹುಡುಕಿ ಕೊಡೋಳು. ಅಂತ ಸಂಸಾರಸ್ಥ ಹೆಂಗಸರನ್ನು ಗಿರಾಕಿಗಳು ಯಾರಿಗೂ ಗೊತ್ತಾಗದ ಹಾಗೆ ಬೇರೆ ಊರಿಗೆ ಕರೆದುಕೊಂಡು ಹೋಗೋರು. ಇವಳು ಕೂತ ಕಡೇಲೆ ಕಮಿಷನ್ ತಗೊಳ್ತಾ ಇದ್ದಳು. ಮೊದಲು ಒಂದಷ್ಟು ದಿನ ನನ್ನ ಹೊರಗೆಲ್ಲೂ ಕಳಿಸ್ತ ಇರಲಿಲ್ಲ. ಅವಳ ಮನೆಗೆ ಬರ್ತಾ ಇದ್ದ ಒಂದಿಬ್ಬರು ಮಾಮೂಲಿ ಗಿರಾಕಿಗಳಿಗೆ ಮನೆಯಲ್ಲೇ ನನ್ನ ವ್ಯವಸ್ಥೆ ಮಾಡೋಳು. ಒಂದಾರು ತಿಂಗಳಾದ ಮೇಲೆ ಹೊರಗೆ ಕಳಸೋಕೆ ಶುರು ಮಾಡಿದಳು. ಹೀಗೆ ಸುಮಾರು ಎರಡು ವರ್ಷಗಳ ಕಾಲ ಅವಳ ಮನೆಯಲ್ಲೇ ಜೀವನ ಮಾಡಿದೆ. ಆ ಎರಡು ವರ್ಷದಲ್ಲಿ ನನಗೆ ಅಂತ ಒಂದಷ್ಟು ಬಟ್ಟೆಗಳನ್ನು ಕೊಡಿಸಿದ್ದು ಬಿಟ್ಟರೆ ಅವಳು ಒಂದು ರೂಪಾಯಿನೂ ಕೊಡಲಿಲ್ಲ. ಅಷ್ಟೇ ಅಲ್ಲದೆ ಅವಳಿಗೆ ಬೇರೆ ಬೇರೆ ನಗರಗಳಲ್ಲೂ ಇವಳಂತಹ ಕಸುಬು ಮಾಡೊ ಹೆಂಗಸರು ಪರಿಚಯವಿದ್ದರು. ಇವರುಗಳೆಲ್ಲ ಸೇರಿ ಹುಡುಗಿಯರನ್ನು ಎಕ್ಸಚೇಂಜ್ ಮಾಡಿಕೊಳ್ತಾ ಇದ್ದರು. ಇಂತಹ ಎಕ್ಸಚೇಂಜ್ ಮಾಡುವಾಗ ನಾನು ಸಹ ಬೇರೆ ಬೇರೆ ನಗರಗಳನ್ನು ನೋಡಿಬಂದೆ.

ಎರಡು ವರ್ಷವಾದ ಮೇಲೆ ನನಗೊಬ್ಬ ಗಿರಾಕಿ ಪರಿಚಯವಾದ. ಅವನು ಇಲ್ಯಾಕಿರ್ತೀಯಾ ನನ್ನ ಜೊತೆ ಬಾ ನಿನಗೆ ಒಳ್ಳೆ ದುಡ್ಡು ಸಿಗೋ ಕಡೆ ಬಿಡ್ತೀನಿ ಅಂತ ಆಸೆ ಹುಟ್ಟಿಸಿದ. ಆಗ ನಾನು ಅವಳಿಗೆ ನಾನು ಇಷ್ಟು ವರ್ಷ ದುಡಿದ ದುಡ್ಡು ಕೊಡು ಅಂತ ಜಗಳವಾಡಿದೆ. ಕೊನೆಗವಳು ಸತಾಯಿಸಿ ಸತಾಯಿಸಿ ಐದು ಸಾವಿರ ಅಷ್ಟೆ ಕೊಟ್ಟಳು. ಕೊನೆಗೊಂದು ದಿನ ಆ ಗಿರಾಕಿಯೊಂದಿಗೆ ಯಾರಿಗೂ ಹೇಳದೆ ಕೇಳದೆ ಈ ನಗರಕ್ಕೆ ಬಂದು ತಲುಪಿದೆ. ನನಗೆ ಆಸೆ ಹುಟ್ಟಿಸಿ ಕರೆತಂದವನು ಇಲ್ಲಿ ಯಾವಳೋ ಒಬ್ಬ ಕಸುಬು ಮಾಡೊ ಹೈಟೆಕ್ ಹೆಂಗಸಿಗೆ ನನಗೇ ಗೊತ್ತಿಲ್ಲದಂತೆ ನನ್ನ ಮಾರಿ ಹೊರಟು ಹೋದ. ಇಲ್ಲಿ ಬಂದ ಮೇಲೆ ವ್ಯತ್ಯಾಸವೇನು ಆಗಲಿಲ್ಲ. ಅಲ್ಲಿ ಸಾಮಾನ್ಯ ಲಾಡ್ಜುಗಳಲ್ಲಿ ಮಾಮೂಲಿ ಮದ್ಯಮವರ್ಗದ ಗಿರಾಕಿಗಳ ಜೊತೆ ಮಲಗ್ತಾ ಇದ್ದವಳು ಇಲ್ಲಿ ಎಸಿ ರೂಮುಗಳಲ್ಲಿ, ಶ್ರೀಮಂತರ ಜೊತೆ ಮಲಗ್ತಾ ಇದ್ದೆ. ಆದರೆ ದುಡ್ಡಿಗೇನೂ ಮೋಸ ಇರಲಿಲ್ಲ ತುಂಬಾ ದುಡ್ಡು ಸಿಕ್ತಾ ಇತ್ತು. ಇಪ್ಪತ್ತು ವರ್ಷ ಅಂದರೆ ಕಡಿಮೇನಾ ಸರ್? ದುಡೀತಾ ಹೋದೆ. ಈ ನಗರದಲ್ಲಿನ ಅಂಡರ್‍ವಲ್ರ್ಡ ಜನಗಳು ಪರಿಚಯವಾದರು. ಅವರುಗಳಲ್ಲಿದ್ದ ಗುಂಪುಗಾರಿಕೆ ನಮ್ಮ ವ್ಯವಹಾರಕ್ಕು ತಟ್ತಾ ಇತ್ತು. ಡಿಪಾರ್ಟಮೆಂಟಿಗಷ್ಟೇ ಅಲ್ಲದೆ ಅಂಡರ್‍ವಲ್ರ್ಡ ಮುಖಂಡುರುಗಳಿಗೂ ಮಾಮೂಲಿ ಕೊಡಬೇಕಾಗಿತ್ತು. ಜೊತೆಗೆ ಅವರು ಆಗಾಗ ಹೇಳ್ತಾ ಇದ್ದವರ ಜೊತೆಗೂ ಮಲಗಬೇಕಾಗಿತ್ತು. ಅಂತ ಗ್ಯಾಂಗಿನ ಒಬ್ಬ ಲೀಡರ್‍ಗೆ ನಾನು ತುಂಬಾ ಹತ್ತಿರದವಳಾಗಿಬಿಟ್ಟಿದ್ದೆ. ಕೊನೆಗೊಂದು ದಿನ ಅವನು ನೀನೇ ಯಾಕೆ ಸ್ವತಂತ್ರವಾಗಿ ಕಸುಬು ನಡೆಸಬಾರದು ಅಂತ ಹೇಳಿ ಒಂದು ದೊಡ್ಡಮನೆಯ ವ್ಯವಸ್ಥೆ ಮಾಡಿದ,ಸ್ವಲ್ಪ ದುಡ್ಡನ್ನೂ ಕೊಟ್ಟ. ಹಳೆಯ ಮನೆಯಲ್ಲಿದ್ದ ಕೆಲವರು ಹುಡುಗಿಯರು ನನ್ನ ಜೊತೆ ಬಂದರು. ಹುಡುಗಿಯರನ್ನು ಕರೆದುಕೊಂಡು ಬಂದು ಸೇರಿಸ್ತಾ ಇದ್ದ ಏಜೆಂಟರುಗಳು ಸಹ ಒಂದಷ್ಟು ಹುಡುಗಿಯರನ್ನು ಕರೆದುಕೊಂಡು ಬಂದರು. ನೋಡ ನೋಡುತ್ತಲೆ ನಾನು ನಗರದ ನಂಬರ್ ಒನ್ ಆಗಿಬಿಟ್ಟೆ. ಒಂದು ಕಡೆ ಅಂಡರ್ ವಲ್ರ್ಟ ಇನ್ನೊಂದು ಕಡೆ ಅಧಿಕಾರದಲ್ಲಿದ್ದ ರಾಜಕಾರಣಿಗಳು ಮತ್ತೊಂದು ಕಡೆ ಸರಕಾರಿ ಅಧಿಕಾರಿಗಳ ಬೆಂಬಲದಿಂದ ನೋಡನೋಡುತ್ತಲೆ ಸಮಾಜದ ಶ್ರೀಮಂತರಲ್ಲಿ ಒಬ್ಬಳಾಗಿಬಿಟ್ಟಿದ್ದೆ. ಆಗಲೆ ನೋಡಿ ಸಮಾಜಸೇವೆಯ ಹುಚ್ಚು ಹುಟ್ಟಿಕೊಂಡಿದ್ದು. ಗಣಪತಿ ಕೂರಿಸೋದರಿಂದ ಹಿಡಿದು ನಗರದ ಯಾವುದೆ ಕಾರ್ಯಕ್ರಮಗಳಿಗಾಗಲಿ ಇಲ್ಲವೆನ್ನದೆ ದುಡ್ಡು ಕೊಡ್ತಾ ಹೋದೆ. ನಗರದ ಯಾವ ಬೀದಿಯ ಎಲ್ಲ ಕಾರ್ಯಕ್ರಮದ ಪೋಸ್ಟರ್-ಬ್ಯಾನರುಗಳಲ್ಲೂ ನಾನು ಮಿಂಚತೊಡಗಿದೆ.

ಈಗ ನಾನು ನೇರವಾಗಿ ಕಸುಬು ನಡೆಸಲ್ಲ. ಅದನ್ನು ನೋಡಿಕೊಳ್ಳೋಕೆ ಬೇರೆ ಬೇರೆ ಏರಿಯಾಗಳಲ್ಲಿ ಬೇರೇ ಹೆಂಗಸರಿದ್ದಾರೆ. ನಾನು ನಿಯಂತ್ರಕಿಯಷ್ಟೆ. ಇದೀಗ ನಾನು ಸಮಾಜಸೇವಕಿ. ಚುನಾವಣೆಗೆ ನಿಂತು ಗೆದ್ದು ಅಧಿಕಾರ ಪಡೆಯಬೇಕೆಂದೇನೂ ಇಲ್ಲ. ಎಲ್ಲ ರಾಜಕೀಯ ಪಕ್ಷಗಳ ನಾಯಕರುಗಳೂ ನನ್ನ ಮನೆ ಬಾಗಿಲನ್ನು ತಟ್ಟುತ್ತಾರೆ. ಒಂದು ಕಾಲದಲ್ಲಿ ನನ್ನನ್ನು ನಾಶಮಾಡಿದ ಪೋಲಿಸ್ ಇಲಾಖೆಯ ಬಗ್ಗೆ ನನಗಿವತ್ತು ಸಿಟ್ಟಿಲ್ಲ ಒಂದು ಕಾಲದಲ್ಲಿ ನನ್ನನ್ನು ನಾಶ ಮಾಡಿದ ಅದೆ ಪೋಲಿಸ್ ಇಲಾಖೆಯ ದೊಡ್ಡ ದೊಡ್ಡ ಅಧಿಕಾರಿಗಳು ನನಗಿವತ್ತು ಸೆಲ್ಯೂಟ್ ಹೊಡೆಯುತ್ತಾರೆ. ಹೋಗಲಿ ಬಿಡಿ, ಇಷ್ಟಾದ ಮೇಲೆ ಈ ಕಸುಬನ್ಯಾಕೆ ನಿಲ್ಲಿಸಿಲ್ಲ ಅಂತ ಕೇಳಿದರೆ ಏನು ಹೇಳೋದು ಸಾರ್. ಹೋಗಲಿ ನಾನು ನಿಲ್ಲಿಸಿದರೆ ನೀವು ಗಂಡಸರು ದಿಕ್ಕಿಲ್ಲದ ನೊಂದ ಹೆಂಗಸರಿಗೆ ಸಹಾಯ ಮಾಡ್ತೀರಾ? ಅವಳ ಮೈ ಸುಖ ಬಯಸದೇ? ಇಲ್ಲ. ನೀವುಗಳು ಪುಗಸಟ್ಟೆಯಾಗಿ ಅವಳಿಗೇನೂ ಕೊಡಲ್ಲ ಅಂದಮೇಲೆ. ಮೂರುಕಾಸಿಗಾಗಿ ಅವಳ್ಯಾಕೆ ನಿಮ್ಮ ಮುಂದೆ ಕೈ ಚಾಚಿ ನಿಲ್ಲಬೇಕು. ಅವಳೂ ದಂದೇನ ಒಂದು ಉದ್ಯೋಗ ಅಂತ ಮಾಡ್ತಾಳೆ. ತನ್ನ ಮೈಮಾರಿ ಜೀವನ ಮಾಡ್ತಾಳೆ. ಆತ್ಮಾನ ಮಾರಿಕೊಳ್ಳೋದಕ್ಕಿಂತ ಇದು ವಾಸಿಯಲ್ವಾ?. ಆದರೂ ನಾನು ಒಂದು ನಡೆಸಿಕೊಂಡು ಬರ್ತಾ ಇದೀನಿ. ಬಲವಂತದಿಂದ ಯಾವ ಹುಡುಗೀನೂ ಈ ದಂದೆಗೆ ಬರದ ಹಾಗೆ ಎಚ್ಚರಿಕೆ ವಹಿಸಿದೀನಿ. ನನ್ನ ಹತ್ತಿರ ಬಂದ ಬಹಳಷ್ಟು ಹೆಣ್ಣುಮಕ್ಕಳಿಗೆ ಬದುಕೊದಿಕ್ಕೆ ಸಾದ್ಯವಾದ ಮಟ್ಟಿಗೆ ಬೇರೆ ದಾರೀನು ತೋರಿಸಿದಿನಿ. ಅಷ್ಟರ ಮಟ್ಟಿಗೆ ನಾನು ಪಾಪಿಯಲ್ಲ.ಕಲಿಯೋದು ಎಲ್ಲಿಂದ ಸರ್? ಬದುಕು ಮಾತುಗಳನ್ನು ಕಲಿಸುತ್ತೆ. ಇನ್ನೇನು ಹೇಳಲಿ ಸರ್. ದಯವಿಟ್ಟು ನನ್ನ ಹೆಸರು, ಊರುಕೇರಿ ಎಲ್ಲೂ ಹಾಕಬೇಡಿ ಹಾಕಿದರೆ ಪರಿಣಾಮ ಚೆನ್ನಾಗಿರಲ್ಲ. ಹೆದರಬೇಡಿ,ಇದು ದಮಕಿಯಲ್ಲ. ಹೀಗೆ ಮಾತಾಡಿ ಅಭ್ಯಾಸ ಆಗೋಗಿದೆ. ಹೇಳಿದ್ದು ಮಾತ್ರ ನೆನಪಿರಲಿ.

ಇನ್ನು ನಿಮ್ಮನ್ನು ಇಲ್ಲಿಗೆ ಕಳಿಸಿ ಪರಿಚಯ ಮಾಡಿಸಿದ ಆ ನಟಿಗೆ ನಾನು ಥ್ಯಾಂಕ್ಸ್ ಹೇಳಬೆಕು. ಯಾಕೆಂದರೆ ಎಷ್ಟೊ ವರ್ಷಗಳಿಂದ ಒಳಗೇ ಇಟ್ಟುಕೊಂಡಿದ್ದ ವಿಚಾರಗಳನ್ನೆಲ್ಲ ಹೇಳಿ ಒಂದು ರೀತಿಯಲ್ಲಿ ಸಮಾಧಾನ ಆಗಿದೆ ಈಗ. ಅವಳಿಗೆ ಫೋನ್ ಮಾಡಿ ಮಾತಾಡ್ತೀನಿ ಬಿಡಿ. ಬರ್ತಾ ಆಟೋದಲ್ಲಿ ಬಂದರಾ. ತಡೀರಿ, ಈಗ ನಮ್ಮ ಹುಡುಗ ನಿಮ್ಮನ್ನು ಕಾರಲ್ಲಿ ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಡ್ರಾಪ್ ಮಾಡ್ತಾನೆ.

ಅವಳ ಒಂದು ಕೂಗಿಗೆ ಓಡಿಬಂದ ಇಪ್ಪತ್ತೈದರ ಹರಯದ ಒಬ್ಬ ಹುಡುಗ ಅವಳ ಮಾತಿಗೆ ಕಾದು ನಿಂತ. ಮುನ್ನಾ ಇವರನ್ನು ಹೇಳೋ ಜಾಗಕ್ಕೆ ಡ್ರಾಪ್ ಮಾಡಿ ಬಾ, ಹುಶಾರು. ಅಂದಳು. ಅವಳಿಗೆ ನಮಸ್ಕಾರ ಹೇಳಿ ಬಂಗಲೆಯಿಂದ ಹೊರಬಂದು ಕಾರನ್ನು ಹತ್ತಲು ಹೊರಟಾಗ ಆಳೊಬ್ಬ ಡಿಕ್ಕಿಯಲ್ಲಿ ಏನನ್ನೊ ಇಡುತ್ತಿದ್ದ. ಏನು ಅಂತ ಕೇಳಿದ್ದಕ್ಕೆ ನಮ್ಮ ತೋಟದಲ್ಲೇ ಬೆಳೆದ ಮಾವಿನ ಹಣ್ಣುಗಳು ಸಾರ್. ಅಮ್ಮಾವ್ರೆ ಇಡೋದಿಕ್ಕೆ ಹೇಳಿದಾರೆ ಅಂದಾಗ ಮನಸ್ಸಿಗೆ ಪಿಚ್ಚೆನ್ನಿಸಿತು. ಕಾರಿನ ಒಳಗೆ ಹತ್ತಿ ಕೂತೆ. ಅಷ್ಟು ದೊಡ್ಡ ವಿದೇಶಿ ಕಾರನ್ನು ನಾನೆಂದು ಹತ್ತಿರದಿಂದ ಸಹ ನೋಡಿರಲಿಲ್ಲ. ಡ್ರೈವರ್ ಸ್ಥಾನದಲ್ಲಿ ಕೂತ ಮುನ್ನಾ ತಿರುಗಿ ನೋಡಿ ಸಾರ್ ಎಲ್ಲಿಗೆ ಬಿಡಬೇಕು ಎಂದಾಗ ವಿಳಾಸ ಹೇಳಿ ಕಣ್ಮುಚ್ಚಿದೆ!

ನಾನು ಅವಳ ಕಥೆ ಕೇಳಿದೆನೊ ಇಲ್ಲ ಯಾವುದಾದರು ಸಿನಿಮಾ ನೋಡಿದೆನೊ ಎಂಬ ಅನುಮಾನ ಕಾಡತೊಡಗಿತು! ಇದನ್ನೊಂದು ಚಿತ್ರಕಥೆ ಮಾಡಿ ಸಿನಿಮಾ ಮಾಡೋಕ್ಯಾಕೆ ಪ್ರಯತ್ನಿಸಬಾರದೆಂಬ ಸಣ್ಣದೊಂದು ಸ್ವಾರ್ಥದ ಬಾವನೆ ನನ್ನೊಳಗೆ ಬಂದದ್ದು ಸುಳ್ಳಲ್ಲ.

No comments:

Post a Comment