Jan 13, 2015

ದುಸ್ಥಿತಿಯಲ್ಲೂ ಗಮನ ಸೆಳೆಯುವ ಮಂಜರಾಬಾದ್ ಕೋಟೆ

manjarabad fort panorama
ಮಂಜರಾಬಾದ್ ಕೋಟೆ, ಸಕಲೇಶಪುರ
ತನ್ನ ವಿಶಿಷ್ಟ ರೀತಿಯ ವಾಸ್ತುವಿನಿಂದ, ಹಿಂದಿನ ಕಾಲದವರ ಬುದ್ಧಿವಂತಿಕೆಯ ಸಾಕ್ಷಿಯಾಗಿ ಇನ್ನೂರು ವರುಷಗಳಿಂದ ಅಚಲವಾಗಿ ನಿಂತಿರುವುದು ಮಂಜರಾಬಾದ್ ಕೋಟೆ. ಈಗಿನ ಜನರ ಮತ್ತು ಆಡಳಿತಗಾರರ ದುರ್ ದೃಷ್ಟಿಗೆ ಬಿದ್ದು ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತ ಸಾಗಿದೆ. ಐತಿಹಾಸಿಕ ತಾಣಗಳನ್ನು ಅತ್ಯುತ್ತಮ ಪ್ರವಾಸಿ ತಾಣಗಳನ್ನಾಗಿ ಮಾರ್ಪಡಿಸುವ ಕಲೆ ನಮಗಿನ್ನೂ ಸಿದ್ಧಿಸಿಲ್ಲವೇನೋ. ಅಂದಹಾಗೆ ಈ ಮಂಜರಾಬಾದ್ ಕೋಟೆ ಇರುವುದು ಸಕಲೇಶಪುರ ತಾಲ್ಲೂಕಿನಲ್ಲಿ.
manjarabad fort, sakleshapura
ಕೋಟೆಯ ಹಾದಿ

1780ರ ಆಸುಪಾಸಿನಲ್ಲಿ ರಕ್ಷಣೆಯ ಉದ್ದೇಶದಿಂದ ಟಿಪ್ಪು ಸುಲ್ತಾನ್ ಕಟ್ಟಿಸಿರುವ ಕೋಟೆಯಿದು. ಉಳಿದ ಅನೇಕ ಕೋಟೆಗಳಂತೆ ಇದು ಜನರು ವಾಸಮಾಡುವುದಕ್ಕೆ, ರಾಜನನ್ನು ಮತ್ತಾತನ ಪರಿವಾರವನ್ನು ರಕ್ಷಿಸಲು ಕಟ್ಟಿರುವ ಕೋಟೆಯಾಗಿರದೆ ಇಡೀ ರಾಜ್ಯದ ರಕ್ಷಣೆಗಾಗಿ ಕಟ್ಟಿರುವ ಪಹರೆಯ ಕೋಟೆಯಾಗಿದೆ.
manjarabad fort entrance
ಕೋಟೆ ಬಾಗ್ಲು
ಅಷ್ಟ ದಿಕ್ಕುಗಳನ್ನು ವೀಕ್ಷಿಸಲನುವಾಗುವಂತೆ ಎಂಟು ಮೂಲೆಯ ನಕ್ಷತ್ರಾಕಾರದಲ್ಲಿ ಕೋಟೆಯನ್ನು ಕಟ್ಟಲಾಗಿದೆ. (ನಕ್ಷತ್ರಾಕಾರ ಕಾಣಲು ಪಕ್ಷಿಯಾಗಬೇಕು ಇಲ್ಲ ವಿಮಾನವೇರಬೇಕು!) ಎಂಟು ಮೂಲೆಗಳಲ್ಲಿ ಇಟ್ಟಿಗೆ ಮತ್ತು ಸುಣ್ಣವನ್ನುಪಯೋಗಿಸಿ ಪುಟ್ಟ ಪುಟ್ಟ ಕಿಂಡಿಗಳಿರುವ ಗುಮ್ಮಟಗಳಿವೆ. ಪಹರೆಯ ಸೈನಿಕರು ಇದರೊಳಗೆ ನಿಂತು ಸುತ್ತಲಿನ ದಟ್ಟ ಕಾಡನ್ನು ವೀಕ್ಷಿಸುತ್ತ ವೈರಿಗಳ ಬರುವಿಕೆಯನ್ನು ಗಮನಿಸುತ್ತಿದ್ದರು.

manjarabad fort, sakleshpur
ಕೋಟೆಯ ಮಧ್ಯದಲ್ಲಿರುವ ಬಾವಿ
ಪಹರೆ ಕಾಯುವ ಸೈನಿಕರು ಉಳಿದುಕೊಳ್ಳಲು, ಅಡುಗೆ ತಯಾರಿಸಲು ಒಂದಷ್ಟು ಕೊಠಡಿಗಳಿವೆ. ಮದ್ದುಗುಂಡುಗಳನ್ನು ಸಂಗ್ರಹಿಸಿಡಲೊಂದಷ್ಟು ಕೊಠಡಿಗಳಿವೆ. ಕೆಲವು ಪುಟ್ಟ ಕೋಣೆಗಳಲ್ಲಿ ಸುರಂಗಗಳಿವೆ. ಇದರಲ್ಲೊಂದು ಸುರಂಗ ಶ್ರೀರಂಗಪಟ್ಟಣದವರೆಗೆ ಹೋಗುತ್ತದೆ ಎಂಬ ಪ್ರತೀತಿಯಿದೆ. ಅದು ಕೇವಲ ಪ್ರತೀತಿಯೋ ಸತ್ಯವೋ ಎಂಬುದನ್ನು ಯಾರೂ ಪರೀಕ್ಷಿಸಿಲ್ಲ! ಕೋಟೆಯಲ್ಲಿರುವವರಿಗೆ ಕುಡಿಯುವ ನೀರಿನ ಸಲುವಾಗಿ ಪ್ಲಸ್ ಆಕಾರದ ಒಂದು ಬಾವಿಯಿದೆ. ಅಲ್ಲೀಗ ನೀರಿಲ್ಲವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!
ಕೊಠಡಿಗಳು
ಇಷ್ಟೆಲ್ಲಾ ಇತಿಹಾಸದ ಪ್ರಾಕೃತಿಕ ಸೌಂದರ್ಯದ ನಡುವಿನಲ್ಲಿರುವ ಮಂಜರಾಬಾದ್ ಕೋಟೆಯ ಇವತ್ತಿನ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ನಿಧಾನಕ್ಕೆ ಗುಮ್ಮಟಗಳು ಪಾಳು ಬೀಳುತ್ತಿವೆ, ಕೋಟೆಯ ಒಳಗೆಲ್ಲಾ ಕಳೆ ತುಂಬಿಕೊಂಡಿದೆ. ಕೋಟೆಯ ಮೇಲೆಲ್ಲಾ ‘ಗೋಡೆ ಕಲಾವಿದರ’ ಚಿತ್ತಾರ! ಅಷ್ಟಕ್ಕೂ ಈ ಕೋಟೆಯೆಲ್ಲೋ ರಸ್ತೆಗಳಿಲ್ಲದ ದೂರದ ಕುಗ್ರಾಮ ಪ್ರದೇಶದಲ್ಲಿದೆಯಾ ಎಂದರೆ ಅದೂ ಇಲ್ಲ.
Badly maintained manjarabad fort
ದುಸ್ಥಿತಿ
ಸಕಲೇಶಪುರದಿಂದ ಮಂಗಳೂರಿಗೆ ಹೋಗುವ ರಸ್ತೆಯಲ್ಲಿ ಐದು ಕಿಮಿ ಕ್ರಮಿಸಿದರೆ ಒಂದಷ್ಟು ಟೀ ಅಂಗಡಿ, ಸಣ್ಣ ಪುಟ್ಟ ಹೋಟಲ್ಲುಗಳು ಮತ್ತವುಗಳ ಬಳಿ ಒಂದಷ್ಟು ಲಾರಿಗಳು ನಿಂತಿರುವ ಜಾಗ ಸಿಗುತ್ತದೆ. ಅಲ್ಲಿಂದ ಎಡಕ್ಕೆ ಕಾಲುದಾರಿಯಲ್ಲಿ ಮನುಷ್ಯ ಮಲದ ಸುವಾಸನೆ ಸವಿಯುತ್ತಾ ಸಾಗಿದರೆ ಮಂಜರಾಬಾದ್ ಕೋಟೆ ತಲುಪಲು ಹಾಕಿರುವ ಮೆಟ್ಟಿಲುಗಳು ಸಿಗುತ್ತವೆ. ಹತ್ತು ನಿಮಿಷ ಮೆಟ್ಟಿಲು ಹತ್ತಿದರೆ ಕೋಟೆಯ ದರ್ಶನ. ಸಕಲೇಶಪುರ ನಗರಕ್ಕೆ ಹೊಂದಿಕೊಂಡಂತೆಯೇ ಇರುವ ಕೋಟೆಯದ್ದೇ ಈ ದುಸ್ಥಿತಿ! 

No comments:

Post a Comment