Dec 4, 2014

ಹಿಂದಿ ಹೇರಿಕೆಯ ವಿವಿಧ ಹಂತಗಳು

santemavattur
ಹಿಂದಿ ಹೇರಿಕೆ
Dr Ashok K R
ತಾತ ತೀರಿಹೋಗಿದ್ದ ಕಾರಣ ಕುಣಿಗಲ್ ಸಮೀಪದ ಊರಿಗೆ ತೆರಳಿದ್ದೆ. ಮೇನ್ ರೋಡಿನಿಂದ ಕೊಂಚ ದೂರದಲ್ಲಿದ್ದ ಊರಾದ ಕಾರಣ ಸಾವಿಗೆ ಬಂದಿದ್ದ ಸಂಬಂಧಿಕರೊಬ್ಬರನ್ನು ಕರೆತರಲು ರೇಷ್ಮೆ ಮಾರುಕಟ್ಟೆಗೆ ಹೆಸರುವಾಸಿಯಾದ ಸಂತೆಮಾವತ್ತೂರಿಗೆ ಹೋಗಿ ಬಸ್ಸು ನಿಲ್ಲುವ ಜಾಗದಲ್ಲಿ ಬೈಕು ನಿಲ್ಲಿಸಿಕೊಂಡು ಕಾಯುತ್ತಿದ್ದೆ. ಎದುರಿಗೊಂದು ಮುರಿದು ಬಿದ್ದಂತಿದ್ದ ಮನೆ ಕಾಣಿಸಿತು. ಮತ್ತೊಮ್ಮೆ ಆ ಮನೆಯತ್ತ ಕಣ್ಣಾಡಿಸಿದಾಗ ಮನೆಯ ಒಂದು ಪಾರ್ಶ್ವ ಸಂಪೂರ್ಣ ಪಾಳು ಬಿದ್ದಿದ್ದರೆ ಮತ್ತೊಂದು ಬದಿಯಲ್ಲಿ ಅಂಚೆ ಕಛೇರಿಯಿತ್ತು. ಇದೇನು ಅಂಚೆ ಕಛೇರಿಯ ಹಳೆಯ ಕಟ್ಟಡವೋ ಈಗಲೂ ಕಾರ್ಯನಿರ್ವಹಿಸುತ್ತಿದೆಯೋ ಎಂದು ಅಲ್ಲೇ ರಸ್ತೆ ಬದಿಯಲ್ಲಿ ಒಣಗಿಸಿ ಸುತ್ತಿದ ತಂಬಾಕು ಎಲೆಗಳು, ಅಡಿಕೆ, ವೀಳ್ಯದೆಲೆ ಮಾರುತ್ತಿದ್ದ ಹೆಂಗಸನ್ನು ಕೇಳಿದಾಗ ‘ಅದೇ ಆಪೀಸು. ಮಧ್ಯಾಹ್ನ ಅಲ್ವಾ ಊಟಕ್ಕೆ ಹೋಗಿರ್ತಾರೆ’ ಎಂದ್ಹೇಳಿ ಅಂಚೆ ಕಛೇರಿಯ ಆಧುನೀಕರಣದ ಮತ್ತೊಂದು ಮಜಲನ್ನು ತೋರಿಸಿದರು.

ಬಸ್ಸಿನ್ನೂ ಬಂದಿರಲಿಲ್ಲ. ಮತ್ತೊಮ್ಮೆ ಅಂಚೆ ಕಛೇರಿಯ ಮುರಿದ ಸೌಂದರ್ಯವನ್ನು ಆಸ್ವಾದಿಸಲಾರಂಭಿಸಿದಾಗ ಕೇಂದ್ರ ಸರಕಾರ ಹಿಂದಿಯನ್ನು ರಾಷ್ಟ್ರದ ಹಿಂದಿಯೇತರ ರಾಜ್ಯಗಳ ಮೇಲೆ ಬಲವಂತವಾಗಿ ಹೇರುವ ವಿವಿಧ ಹಂತಗಳ ಪರಿಚಯವಾಯಿತು. ಸೋಮಾರಿತನಕ್ಕೋ ‘ಓಲ್ಡ್ ಈಸ್ ಗೋಲ್ಡ್’ ಎಂಬ ಅಭಿಮಾನಕ್ಕೋ ಏನೋ ಅಂಚೆ ಕಛೇರಿಯ ಆಪೀಸರ್ಗಳು ಹಳೆಯ ಬೋರ್ಡಿನಿಂದಿಡಿದು ಹೊಸ ಫ್ಲೆಕ್ಸಿನವರೆಗೆ ಎಲ್ಲವನ್ನೂ ಒಂದರ ಪಕ್ಕ ಒಂದು ನೇತು ಹಾಕಿದ್ದರು. ಕಾರ್ಬನ್ ಡೇಟಿಂಗ್ ಮಾಡಿದರೆ ಸ್ವಾತಂತ್ರ್ಯೋತ್ಸವದ ಸುತ್ತಮುತ್ತಲಿನದಂತೆ ಕಾಣುವ ಹಳೆಯ ಬೋರ್ಡಿನಲ್ಲಿ ಮೇಲೆ ಅಂಚೆ ಕಛೇರಿ ಎಂದು ಬರೆದು ಕೆಳಗೆ post office ಎಂದಷ್ಟೇ ಬರೆಯಲಾಗಿತ್ತು. ಹಿಂದಿಯ ಲವಲೇಷವೂ ಇರಲಿಲ್ಲ. ಪಕ್ಕದಲ್ಲಿದ್ದ ಇನ್ನೊಂದು ಬೋರ್ಡಿನಲ್ಲಿ ಹಿಂದಿಯಲ್ಲಿ ‘ಢಾಕ್ ಘರ್’ ಎಂದು ಬರೆದು ಕೆಳಗೆ ಸಣ್ಣ ಅಕ್ಷರಗಳಲ್ಲಿ post office, ಮತ್ತದರ ಪಕ್ಕದಲ್ಲಿ ಟಪ್ಪಾಲು……. ಎಂದು ಬರೆದಿತ್ತು. ಅಲ್ಲಿಗೆ ಹಿಂದಿ ಪ್ರಾಮುಖ್ಯತೆ ಪಡೆದು ಆಂಗ್ಲಕ್ಕೆ ಎರಡನೆಯ ಸ್ಥಾನ ಸಿಕ್ಕಿ ಕನ್ನಡ ‘ಅಂಚೆ’ಯಿಂದ ‘ಟಪ್ಪಾಲಿಗೆ’ ಹಿಂಬಡ್ತಿ ಪಡೆದಿತ್ತು. ಕನ್ನಡದ ಬಹುತೇಕ ಅಕ್ಷರಗಳನ್ನು ಹೊಸ ಲಾಂಛನದ ಹೊಸ ಬೋರ್ಡು ನುಂಗಿ ಹಾಕಿದ್ದನ್ನೂ ಗಮನಿಸಬಹುದು. ಹೊಸ ಬೋರ್ಡಿನಲ್ಲಿದ್ದಿದ್ದು ಎರಡೇ ಭಾಷೆ. ಹಿಂದಿಯಲ್ಲಿ ‘ಭಾರತೀಯ ಡಾಕ್’ ಎಂದು ಬರೆದು ಕೆಳಗೆ India post, ಕನ್ನಡ ಸಂಪೂರ್ಣ ಮಾಯವಾಗಿಬಿಟ್ಟಿದೆ. ಪುಣ್ಯಕ್ಕೆ ಸಂತೇಮಾವತ್ತೂರು ಎಂದು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯಲಾಗಿದೆ. ಬಹುಷಃ ಮುಂದಿನ ಬೋರ್ಡಿನಲ್ಲಿ ಅದೂ ಮಾಯವಾಗಿರುತ್ತದೆ.

“ದುಷ್ಮನ್ ಕಿದರ್ ಹೇ ಅಂದ್ರೆ ಬಗಲ್ ಮೇ” ಎಂಬೋ ಹಿಂದಿ ಗಾದೆಯ ಅರ್ಥ ಈಗ ಅರಿವಾಗುತ್ತಿದೆ.

No comments:

Post a Comment