Oct 9, 2014

ಬೆಂಕಿ ಹಚ್ಚಲು ಪೊಟ್ಣ ಬರ್ತಿದೆ!


hingyake
ಬೆಂಕಿಪಟ್ಣ

Dr Ashok K R
ದಯಾನಂದ ಟಿ.ಕೆ ನಿರ್ದೇಶನದ ಸ್ಟೀವ್ ಕೌಶಿಕ್ ಸಂಗೀತ ನೀಡಿರುವ ‘ಬೆಂಕಿಪಟ್ಣ’ ಚಿತ್ರದ ಹಾಡುಗಳು ಬಿಡುಗಡೆಗೊಂಡಿವೆ. ದಯಾನಂದರನ್ನು ಮೊದಲು ಕಂಡಿದ್ದು ಕುಪ್ಪಳ್ಳಿಯ ‘ನಾವು ನಮ್ಮಲ್ಲಿ’ ಕಾರ್ಯಕ್ರಮದಲ್ಲಿ. ಅವರ ಪುಸ್ತಕ ‘ರಸ್ತೆ ನಕ್ಷತ್ರ’ ಬಿಡುಗಡೆಯಾಗಿತ್ತು. ನಿಜವೆನ್ನಿಸದ ನೈಜ ಕಥಾನಕಗಳ ಗುಚ್ಛವದು. ಅದ್ಭುತ ಶೈಲಿಯ ನಿರೂಪಣೆಯಿಂದ ಗಮನ ಸೆಳೆದಿತ್ತು. ಅದೇ ಶೈಲಿಯ ಕಂಡರೂ ಕಾಣದೇ ಹೋಗುವ ಜನರ ಕಥಾನಕಗಳು ಈಗ ವಿವಿಧ ದಿನಪತ್ರಿಕೆಗಳಲ್ಲೂ ನಿಯಮಿತವಾಗಿ ಬರುತ್ತಿವೆಯೆನ್ನುವುದು ದಯಾನಂದರ ಶೈಲಿಯ ಪ್ರಭಾವವನ್ನು ತಿಳಿಸುತ್ತದೆ. ಇಂಥ ಅದ್ಭುತ ಕಥೆಗಾರರೊಬ್ಬರು ಇದ್ದಕ್ಕಿದ್ದಂತೆ ಸಿನಿಮಾ ತೆಗೆಯುತ್ತೇನೆಂದು ಘೋಷಿಸಿದಾಗ ಅರೆರೇ! ಎಂದು ಅಚ್ಚರಿಯಾದರೂ ಅವರಲ್ಲಿರುವ ಕಥೆಗಾರನ ಮೇಲಿರುವ ನಂಬುಗೆಯಿಂದ ಚಿತ್ರದ ಬಗೆಗಿನ ನಿರೀಕ್ಷೆಯೂ ಹೆಚ್ಚಿದೆ.
Also read
ಗೆಳೆಯರ ಪರಿಚಿತರ ಚಿತ್ರದ ಹಾಡುಗಳ ಬಗ್ಗೆ ಅವರೇ ನೇರವಾಗಿ ಕೇಳಿ ಅಭಿಪ್ರಾಯ ಹೇಳಿ ಎಂದು ಹೇಳಿದಾಗ ಕೇಳುಗ ಏನೆಂದು ಪ್ರತಿಕ್ರಿಯಿಸಬೇಕು? ಬೆಂಕಿಪಟ್ಣದ ಫೇಸ್ ಬುಕ್ ಪುಟಗಳಲ್ಲಿ, ದಯಾನಂದ, ದಿನೇಶ್ ಕುಮಾರರ ಪ್ರೊಫೈಲುಗಳಲ್ಲಿ ‘ವಾವ್’ ‘ಅದ್ಭುತ’ ‘ಸೂಪರ್’ ‘ಇಂತಹ ಹಾಡುಗಳನ್ನೇ ಇತ್ತೀಚೆಗೆ ಕೇಳಿಲ್ಲ’ ಎಂಬರ್ಥದ ಕಮೆಂಟುಗಳೇ ತುಂಬಿ ಹೋಗಿದ್ದವು. ಅಂತರ್ಜಾಲದ ತೊಂದರೆಯಿಂದ ಕೇಳುವುದೊಂದಷ್ಟು ತಡವಾಯಿತು. ಕೇಳಿದ ನಂತರ ಫೇಸ್ ಬುಕ್ಕಿನಲ್ಲಿ ಕಮೆಂಟಿಸಿದವರೆಲ್ಲ ಗೆಳೆತನಕ್ಕೋ ಪರಿಚಯಕ್ಕೋ ಕಟ್ಟು ಬಿದ್ದಿದ್ದೂ ತಿಳಿದುಬಂತು. ದಯಾನಂದರು ಅಂತಹ ಕಮೆಂಟುಗಳಿಗೆಲ್ಲ ಉಬ್ಬಿ ಹೋಗುವುದಿಲ್ಲ ಎಂದು ನಂಬಿದ್ದೇನೆ.
ಕೆಲವು ಹಾಡುಗಳು ಸಿನಿಮಾದ ಹೆಸರು ಗೊತ್ತಿಲ್ಲದಿದ್ದಾಗ್ಯೂ ಕೇಳಿದ ಮೊದಲೇಟಿಗೇ ಮೆಚ್ಚುಗೆಯಾಗಿಬಿಡುತ್ತದೆ. ಇನ್ನು ಕೆಲವು ಕೇಳುವಾಗ ಸಪ್ಪೆ ಎನ್ನಿಸಿದರೂ ವಿಷುಯಲ್ನೊಂದಿಗೆ ಇಷ್ಟವಾಗುತ್ತದೆ. ಒಂದಷ್ಟು ಹಾಡುಗಳು ಹತ್ತಾರು ಬಾರಿ ಕೇಳಿದ ನಂತರ ಯಾವುದೋ ಒಂದು ಸಾಲು ಕಾಡಲಾರಂಭಿಸಿ ಒಟ್ಟಾರೆ ಹಾಡು ಪಸಂದೆನ್ನಿಸುತ್ತದೆ. ಇನ್ನು ಕೊನೆಯ ವಿಭಾಗದ ಹಾಡುಗಳು ಕೇಳಲಸಾಧ್ಯವಾದವು! ಹೆಚ್ಚು ಕಡಿಮೆ ಬೆಂಕಿಪಟ್ಣದಲ್ಲಿ ಮೇಲಿನ ಎಲ್ಲ ವಿಭಾಗಕ್ಕೂ ಸೇರಿದ ಹಾಡುಗಳಿವೆ. ‘ಬೊಗಸೆಯಲ್ಲಿ ಮಳೆ ಹಿಡಿದಂತೆ’ ತನ್ನ ನವಿರುತನದಿಂದ ಪ್ರೇಮಗೀತೆ ಮೆಚ್ಚುವವರಿಗೆ ಖಂಡಿತವಾಗಿ ಇಷ್ಟವಾಗುತ್ತದೆ. ‘ಹುಟ್ಟೋದ್ ಯಾಕೆ’ ಮಧ್ಯೆ ಮಧ್ಯೆ ಬೆಚ್ಚಿ ಬೀಳಿಸುವ ತತ್ವಭರಿತ ಸಾಲುಗಳಿಂದ ತುಂಬಿದೆ (ಥೇಟ್ ದಯಾನಂದರ ಕಥೆಗಳಂತೆ!). ‘ಇರಲಿ ಹೀಗೆ ನೀನಿರದೇನೆ’ ಕೆಲವೊಂದೆಡೆ ಇರುವ ಉತ್ತಮ ಸಾಹಿತ್ಯದ ನಡುವೆಯೂ ಸುಮಾರಾಗಿದೆ. ಪದೇ ಪದೇ ಕೇಳಿದರೆ ಮೆಚ್ಚುಗೆಯಾಗಬಹುದು. ಇನ್ನು ‘ಚಿಂತೇನೋ’ ಹಾಡಿನ ಬಗ್ಗೆ ಹೇಳದಿರುವುದೇ ವಾಸಿ. ಯೋಗರಾಜ್ ಭಟ್ರ ಶೈಲಿಯ ಒಂದಾದರೂ ಹಾಡು ಚಿತ್ರದಲ್ಲಿರಲೇಬೇಕೆಂಬ ಒತ್ತಡ (ಆಂತರಿಕವೋ ಬಾಹ್ಯವೋ?) ಅನೇಕ ನಿರ್ದೇಶಕರಿಗಿರುವಂತಿದೆ. ಈ ಒತ್ತಡ ಯೋಗರಾಜ್ ಭಟ್ಟರ ಗೆಲುವೂ ಹೌದು ನಿರ್ದೇಶಕರ ಸೋಲೂ ಹೌದು.
‘ಹಾಡುಗಳನ್ನು ಕೇಳಿ ಅಭಿಪ್ರಾಯ ತಿಳಿಸಿ’ ಎಂದು ದಯಾನಂದ ಹೇಳಿದಾಗ ‘ಸುಮಾರಾಗಿದೆ ಅನ್ನಿಸಿದ್ರೆ ಫೇಸ್ಬುಕ್ಕಲ್ಲಷ್ಟೇ ಶೇರ್ ಮಾಡ್ತೀನಿ, ಚೆನ್ನಾಗಿದೆ ಅನ್ನಿಸಿದ್ರೆ ಹಿಂಗ್ಯಾಕೆಯಲ್ಲಿ ಹಾಕ್ತೀನಿ’ ಎಂದಿದ್ದೆ. ಮೇಲಿನ ನಾಲ್ಕು ಹಾಡುಗಳಷ್ಟೇ ಚಿತ್ರದಲ್ಲಿದ್ದಿದ್ದರೆ ಪರಿಚಯಕ್ಕೆ ‘ಕಟ್ಟುಬಿದ್ದು’ ಫೇಸ್ ಬುಕ್ಕಿನಲ್ಲಿ ಶೇರ್ ಮಾಡುತ್ತಿದ್ದೆ! ಆದರೆ ‘ವೀರ ಹನುಮಂತ ದೂರಿ ದೂರಿ….ನಮ್ ಶೂರ ಹನುಮಂತ ದೂರಿ ದೂರಿ……’ ಹಾಡು ಕೇಳಿದ ನಂತರ ‘ಹಿಂಗ್ಯಾಕೆ’ಯಲ್ಲಿ ಬರೆದು ಕೊಟ್ಟ ಮಾತು ಉಳಿಸಿಕೊಳ್ಳಲೇಬೇಕಾದ ಪರಿಸ್ಥಿತಿ!. ಸಾಹಿತ್ಯ ಮತ್ತು ಸಂಗೀತದ ನವೀನತೆ ಕಾಣುವುದು ಈ ಹಾಡಿನಲ್ಲಿ. “ಮಾಯದ ಕೊಂಬೆ ಮೇಲೆ ಹೂವೂ ಚಿಗುರಿ ಘಮವು ಚೆಲ್ಲಿ ………… ಮೋಡವು ಹನಿಯ ಹೆರುವಾಗ” ಎಂಬ ಸಾಲುಗಳನ್ನು ಮೆಚ್ಚದಿರಲು ಹೇಗೆ ಸಾಧ್ಯ. ಇದೊಂದು ಹಾಡು ಕೇಳಲಾದರೂ ನೀವು ಈ ಯೂಟ್ಯೂಬ್ ಲಿಂಕನ್ನು ಕ್ಲಿಕ್ಕಿಸಲೇಬೇಕು. 
‘ಚಿಂತೇನೋ’ ಹಾಡು ಹೊರತುಪಡಿಸಿ ಉಳಿದ ಹಾಡುಗಳಲ್ಲಿ ಸಾಹಿತ್ಯ ಚೆನ್ನಾಗಿದೆಯೆನ್ನಿಸಿದರೂ ಸಂಗೀತವಷ್ಟು ಪರಿಣಾಮಕಾರಿಯಾಗಿ ಬಂದಿಲ್ಲ. ಹಾಡುಗಳು ಸಿನಿಮಾ ಬಿಡುಗಡೆಗೊಡೆಗೊಂಡ ಮೊದಲ ದಿನಗಳಲ್ಲಿ ಜನರನ್ನು ಥಿಯೇಟರ್ ಕಡೆಗೆ ಕರೆದುಕೊಂಡು ಬಂದರೆ ಸಿನಿಮಾದ ಕಥೆ – ಚಿತ್ರಕಥೆ – ನಿರ್ದೇಶನ ಜನರು ಮತ್ತೆ ಮತ್ತೆ ಬರುವಂತೆ ಮಾಡುತ್ತದೆ. ‘ದೂರಿ ದೂರಿ’ ಹಾಡು ಜನರು ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವಂತೆ ಮಾಡುತ್ತದೆ. ದಯಾನಂದರೊಳಗಿರುವ ಕಥೆಗಾರ ಮೂರು ದಿನದ ನಂತರ ಜನರನ್ನು ಸೆಳೆಯುತ್ತಾರೆ ಎಂಬ ನಿರೀಕ್ಷೆ ನನಗಿದೆ.

No comments:

Post a Comment