Sep 10, 2014

ಆರಂಭ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ


ಮಧುಗಿರಿಯಲ್ಲಿ ಸೇರಿದ್ದ ಜನಸ್ತೋಮ
ಚಿತ್ರವೊಂದರ ಹಾಡುಗಳು ಜನರನ್ನು ಚಿತ್ರಮಂದಿರದೆಡೆಗೆ ಸೆಳೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ನಂತರದಲ್ಲಿ ಆ ಹಾಡುಗಳು ಅನೇಕ ವರುಷಗಳ ಕಾಲ ಜನಮಾನಸದಲ್ಲಿ ಉಳಿಯಲು ಚಿತ್ರದ ಗುಣಮಟ್ಟ ಪಾತ್ರ ವಹಿಸುತ್ತದೆ. ಈ ಕಾರಣದಿಂದಾಗಿ ಚಿತ್ರದ ಹಾಡುಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರರಂಗ ಅನೇಕ ಯೋಜನೆಗಳನ್ನಾಕುತ್ತವೆ. ಅಂತರ್ಜಾಲದ ಲಭ್ಯತೆ ಹೆಚ್ಚುತ್ತಿದ್ದಂತೆ ಮತ್ತು ಬ್ಲೂಟೂಥ್ ಆಧಾರಿತ ಮೊಬೈಲ್ಗಳು ಹೆಚ್ಚಾದ ನಂತರ ಕ್ಯಾಸೆಟ್ಟುಗಳನ್ನಾಗಲೀ ಸಿಡಿಗಳನ್ನಾಗಲೀ ಕೊಳ್ಳುವವರು ಇಲ್ಲವೇ ಇಲ್ಲ ಎಂದು ಹೇಳಬಹುದು. ರೇಡಿಯೋ ಮುಖಾಂತರ, ಟಿ.ವಿ. ಮುಖಾಂತರ ಜನರಿಗೆ ತಲುಪಲು ಪ್ರಯತ್ನಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ನೇರವಾಗಿ ಜನರಿಗೇ ತಲುಪಿಸುವ ಹೊಸ ಪ್ರಯತ್ನ ಮಾಡುತ್ತ ನಿಧಾನವಾಗಿಯಾದರೂ ಗೆಲುವು ಕಾಣುತ್ತಿರುವುದು ‘ಆರಂಭ’ ಚಿತ್ರತಂಡ.
ಧ್ವನಿಸುರುಳಿ ಬಿಡುಗಡೆಗೊಳಿಸಿದ ಶ್ರೀನಗರ ಕಿಟ್ಟಿ
ಗೆಳೆಯ ಅಭಿ ಹನಕೆರೆ ನಿರ್ದೇಶನದ ಆರಂಭ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ಮೊದಲಿಗೆ ಚಿತ್ರದ ನಾಲ್ಕೂ ಹಾಡುಗಳನ್ನು ಅಂತರ್ಜಾಲದಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳುವಂತೆ ಮಾಡಲಾಯಿತು (ಹಾಡುಗಳನ್ನು ಡೌನ್ಲೋಡ್ ಮಾಡಲು ಇಲ್ಲಿಕ್ಲಿಕ್ಕಿಸಿ). ಗಣೇಶೋತ್ಸವದೊಡನೆ ಅನೇಕ ಕಡೆ, ಸಾಧ್ಯವಾದರೆ ಕರ್ನಾಟಕದ ಅಷ್ಟೂ ಜಿಲ್ಲೆಗಳಲ್ಲಿ ಧ್ವನಿಸುರುಳಿ ಬಿಡುಗಡೆಗೊಳಿಸಿ ನೇರವಾಗಿ ಜನರಿಗೆ ತಲುಪಿಸುವ ನಿರ್ಧಾರ ಮಾಡಿದ ಚಿತ್ರತಂಡ ಮೊದಲಿಗೆ ಮಧುಗಿರಿಯಲ್ಲಿ, ನಂತರ ಮೈಸೂರು, ಗಗನಚುಕ್ಕಿ, ಶಿವಮೊಗ್ಗದಲ್ಲಿ ಧ್ವನಿಸುರುಳಿ ಬಿಡುಗಡೆಗೊಳಿಸಿತು.
ಮಧುಗಿರಿ ಪ್ರಕಾಶರ ಮಗ ಪ್ರಮುಖ ಪಾತ್ರವಹಿಸಿರುವ ಆರಂಭ ಚಿತ್ರದ ಧ್ವನಿಸುರುಳಿ ಮೊದಲು ಬಿಡುಗಡೆಯಾಗಿದ್ದು ಮಧುಗಿರಿಯಲ್ಲಿ. ತಮ್ಮ ಊರಿನವರು ಮಾಡುತ್ತಿರುವ ಸಮಾರಂಭ ವೀಕ್ಷಿಸಲು ಅಪಾರ ಜನತೆ ನೆರೆದಿತ್ತು. ಅತಿಥಿಯಾಗಿ ಆಗಮಿಸುತ್ತಿರುವ ಶ್ರೀನಗರ ಕಿಟ್ಟಿಯನ್ನು ನೋಡುವ ಸಲುವಾಗಿ ಬಂದವರೂ ಅಧಿಕ! ಬಹುತೇಕ ಹೊಸಬರ ಆರಂಭವಾದ ಆರಂಭಕ್ಕೆ ಶುಭ ಕೋರುತ್ತ ಶ್ರೀನಗರ ಕಿಟ್ಟಿ ಧ್ವನಿಸುರುಳಿ ಬಿಡುಗಡೆಗೊಳಿಸಿದರು.
ಮೈಸೂರಿನಲ್ಲಿ
ಇನ್ನು ಮೈಸೂರಿನಲ್ಲಿ ವಿಶ್ವಮಾನವ ವೇದಿಕೆಯ ಸುರೇಶ್ ಗೌಡರು ಆಯೋಜಿಸಿದ್ದ ಸಾಂಸ್ಕೃತಿಕ ಹಬ್ಬದ ಕೊನೆಯ ದಿನದಂದು ನೆರೆದಿದ್ದ ಯುವಸಮೂಹದ ಮುಂದೆ ಧ್ವನಿಸುರುಳಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆ ಸಮಾರಂಭ ನಡೆಯುವ ಸಂದರ್ಭದಲ್ಲಿ ಎರಡು ಹಾಡುಗಳ ಕೆಲವು ಸಾಲುಗಳನ್ನು ಹಾಕಲಾಗಿತ್ತು. ಅದಷ್ಟನ್ನೇ ಕೇಳಿ ಚಿತ್ರತಂಡದ ಬಳಿಗೆ ಬಂದು ‘ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ’ ಎಂದ್ಹೇಳುತ್ತಾ ಬ್ಲೂಟೂಥಿನಲ್ಲಿ ಹಾಡುಗಳನ್ನು ಕಳುಹಿಸಿಕೊಂಡವರ ಸಂಖೈ ಕಡಿಮೆಯೇನಿರಲಿಲ್ಲ!
ಗಗನಚುಕ್ಕಿ ಜಲಪಾತದ ಮುಂದೆ
ಗಗನಚುಕ್ಕಿಯಲ್ಲಿ ನಡೆಯುತ್ತಿದ್ದ ಜಲಪಾತೋತ್ಸವದಲ್ಲಿ ಜನರ ಮಧ್ಯೆಯೇ ಧ್ವನಿಸುರುಳಿ ಬಿಡುಗಡೆಗೊಳಿಸಿ ಆಸಕ್ತರಿಗೆ ಸಿಡಿಗಳನ್ನು ನೀಡಲಾಯಿತು. ಬಿಜಾಪುರದ ಸಾಹಿತಿ ಬಸವರಾಜ್ ಚಡಚಣ ಧ್ವನಿಸುರುಳಿ ಬಿಡುಗಡೆಗೊಳಿಸಿದರು.
ಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆ ಬಹಳ ಜೋರಾಗಿ ನಡೆಯುತ್ತದೆ (ಅದಕ್ಕಿರುವ ಕಾರಣಗಳು ದೇವರ ಮೇಲಿನ ಅತಿಯಾದ ಪ್ರೀತಿಯಲ್ಲ!). ಆ ಸಂದರ್ಭದಲ್ಲಿ ಧ್ವನಿಸುರುಳಿ ಬಿಡುಗಡೆಗೊಳಿಸಿದ್ದು ಚನ್ನಬಸಪ್ಪ. ಒಟ್ಟಿನಲ್ಲಿ
ಶಿವಮೊಗ್ಗದಲ್ಲಿ
ಆರಂಭದ ವಿನೂತನ ಪ್ರಯತ್ನ ಮೆಚ್ಚುವಂಥದ್ದು, ಎಷ್ಟರಮಟ್ಟಿಗೆ ಈ ವಿನೂತನ ಪ್ರಯತ್ನ ಯಶ ಕಾಣುತ್ತದೆಂಬುದನ್ನು ನಿರೀಕ್ಷಿಸಿ ನೋಡಬೇಕು.

No comments:

Post a Comment