Jul 28, 2014

ಪುಸ್ತಕ ನಿಷೇಧಿಸುವ 'ಘನಕಾರ್ಯ'

ಮತ್ತೊಂದು ಪುಸ್ತಕ ನಿಷೇಧಕ್ಕೊಳಗಾಗಿದೆ! ಪುಸ್ತಕ ನಿಷೇಧಿಸುವುದು ಕೂಡ ಪ್ರತಿಯೊಂದೂ ರಾಜಕೀಕರಣಗೊಳ್ಳುತ್ತಿರುವ ದಿನಗಳಲ್ಲಿ ವೋಟ್ ಬ್ಯಾಂಕ್ ಪಾಲಿಸಿಯಾಗಿಬಿಡುತ್ತಿರುವುದು ದುರಂತ. ಒಂದು ವರ್ಗದ ಜನಕ್ಕೆ, ಒಂದು ಧರ್ಮದ ಜನಕ್ಕೆ ಇಷ್ಟವಾಗದ ಅಂಶಗಳು ಪುಸ್ತಕದಲ್ಲಿವೆ ಎಂಬುದನ್ನೇ ನೆಪವಾಗಿಟ್ಟುಕೊಂಡು ಪುಸ್ತಕಗಳನ್ನು ನಿಷೇಧಿಸುತ್ತಾ ಸಾಗಿದರೆ ಕೊನೆಗೆ ಓದಲು ಯಾವೊಂದು ಪುಸ್ತಕವೂ ಇರುವುದಿಲ್ಲ.
ಡಾ. ಕೆ. ಎಸ್. ನಾರಾಯಣಾಚಾರ್ಯರು ಬರೆದಿರುವ ವಾಲ್ಮೀಕಿ ಯಾರು? ಎಂಬ ಪುಸ್ತಕವನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಒಂದು ಜನಾಂಗದ ಜನರಿಗೆ ಪುಸ್ತಕ ಅವಮಾನಿಸುತ್ತಿರುವ ಕಾರಣ ನಿಷೇಧಿಸುತ್ತಿರುವುದಾಗಿ ತಿಳಿಸಿದೆ. ವಿಧಾನಸಭೆಯಲ್ಲಿ ನಡೆದ ಚರ್ಚೆಯಂತೆ 'ವಾಲ್ಮೀಕಿ ಯಾರು?' ಪುಸ್ತಕದಲ್ಲಿ ಲೇಖಕರು ರಾಮಾಯಣ ಬರೆದ ವಾಲ್ಮೀಕಿ ಬೇಡ ಜನಾಂಗಕ್ಕೆ ಸೇರದೆ ಬ್ರಾಹ್ಮಣ ಜನಾಂಗಕ್ಕೆ ಸೇರಿದವನೆಂದು ಬರೆದಿದ್ದಾರಂತೆ. ಜೊತೆಜೊತೆಗೆ ಬ್ರಾಹ್ಮಣರನ್ನು ಕೋಗಿಲೆಗೆ ಹೋಲಿಸಿ ಬೇಡರನ್ನು ಕಾಗೆಗೆ ಹೋಲಿಸಿ, ಬೇಡ ಜನಾಂಗದವರನ್ನು ಮತ್ತು ಮಹಿಳೆಯರನ್ನು ಕೀಳಾಗಿಸುವ ಅನೇಕ ಅಂಶಗಳನ್ನು ಬರೆದಿದ್ದಾರಂತೆ.

ನಾರಾಯಣಾಚಾರ್ಯರ ಲೇಖನಿ ತಪ್ಪನ್ನೇ ಬರೆದಿರಬಹುದು, ಅಪಸವ್ಯವನ್ನೇ ಗೀಚಿರಬಹುದು, ಬೇಡರ ಜನಾಂಗದಲ್ಲಿ ಹುಟ್ಟಿದ ವ್ಯಕ್ತಿ ರಾಮಾಯಣದಂತಹ ಮೇರು ಕೃತಿಯನ್ನು ರಚಿಸಲು ಹೇಗೆ ಸಾಧ್ಯ ಎಂಬ ಪುರೋಹಿತಶಾಹಿ ಬೌದ್ಧಿಕ ಅಹಂಕಾರದಿಂದಲೇ ಬರೆದಿರಬಹುದು - ಆದರೆ ಇವಕ್ಕೆಲ್ಲ ಪುಸ್ತಕ ನಿಷೇಧಿಸುವುದು ಯಾವ ರೀತಿಯಲ್ಲಿ ಪರಿಹಾರೋಪಾಯವಾಗುತ್ತದೆ? 'ವಾಲ್ಮೀಕಿ ಯಾರು?' ಎಂಬ ಪುಸ್ತಕದ ಹೆಸರು ಇದು ಸಂಶೋಧನಾತ್ಮಕ ರೀತಿಯ ಪೌರಾಣಿಕ ಇತಿಹಾಸದ ಕೃತಿ ಎಂದು ತೋರುತ್ತದೆಯಾದರಿಂದ 'ಸರಿ ವಾಲ್ಮೀಕಿ ಬ್ರಾಹ್ಮಣ ಎನ್ನುವುದಕ್ಕೆ ನಿಮಗೆ ದಕ್ಕಿರುವ ಪುರಾವೆಗಳೇನು' ಎಂಬಿತ್ಯಾದಿಯಾಗಿ ಪ್ರಶ್ನೆಗಳನ್ನು ಕೇಳಿ ಪುಸ್ತಕವನ್ನು ಮತ್ತದರ ವಿಷಯವನ್ನು ಪ್ರಶ್ನಿಸಬೇಕೆ ಹೊರತು ನಿಷೇಧಿಸುವುದು ಸರಿಯೇ? ಮೌಲಿಕವಲ್ಲದ ಕೃತಿಯಾಗಿದ್ದರೆ ಅದು ಓದುಗರ ಗಮನಕ್ಕೂ ಬರುವುದಿಲ್ಲ ಅದರ ಬಗ್ಗೆ ಚರ್ಚೆಯಾಗಲೇ ಮತ್ತೊಂದಾಗಲೀ ನಡೆಯುವುದೂ ಇಲ್ಲ, ನಿಷೇಧವೇರುವ ಮೂಲಕ ಪುಸ್ತಕಕ್ಕೆ ಮತ್ತಷ್ಟು ಪ್ರಚಾರ ನೀಡುವಲ್ಲಿ ಅನುಕೂಲವಾಗುತ್ತದೆಯಷ್ಟೇ.
ಇನ್ನು ನಮ್ಮ ರಾಜಕೀಯ ಪಕ್ಷಗಳಾವೂ ಈ ನಿಷೇಧವನ್ನು ವಿರೋಧಿಸುವ ಮಾತನಾಡಿದ್ದು ವರದಿಯಾಗಿಲ್ಲ. ವಿಧಾನಸಭೆಯಲ್ಲೂ ನಿಷೇಧಕ್ಕೆ ವಿರೋಧ ವ್ಯಕ್ತವಾಗಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ನಾವ್ಯಾವುದಾದರೂ ಪುಸ್ತಕ ನಿಷೇಧಿಸದರೆ ನೀವು ತೆಪ್ಪಗಿರಬೇಕು ಎಂಬುದಿದರರ್ಥವೇ? ಇನ್ನು ಮುಂದೆ ಪುಸ್ತಕ ಬರೆಯಬೇಕೆಂದರೆ ಎಲ್ಲ ವರ್ಗದ ಜಾತಿಯ ಧರ್ಮದ ಸಂಘಟನೆಗಳಿಗೂ ಒಂದೊಂದು ಪತ್ರ ಬರೆದು ಅಭಿಪ್ರಾಯ ಕೇಳಬೇಕೇನೋ!
Summary - Karnataka Congress Government bans Dr. K. S. Narayanacharya's book 'Vaalmiki Yaaru?'. A book that supposedly roots the caste of Valmiki. According to the discussions in the assembly the book makes derogatory comments about people of  Valmiki (Beda) caste. Is it right to ban a book is the question we all should ask.

No comments:

Post a Comment