Apr 4, 2014

ವೊಡಾಫೋನ್ ಒದ್ದೋಡಿಸಿ.....

ಡಾ. ಅಶೋಕ್ ಕೆ ಆರ್. 
ಫೇಸ್ ಬುಕ್ಕಿನಲ್ಲಿ #vodafone_insults_kannada ದಿನೇ ದಿನೇ ಹಬ್ಬುತ್ತಲೇ ಇದೆ. ವೊಡಾಫೋನಿನ ಕನ್ನಡ ವಿರೋಧಿ ನೀತಿಯನ್ನು ಪ್ರತಿಭಟಿಸಿ ವೊಡಾಫೋನಿನಿಂದ ಬೇರೆ ಸಂಪರ್ಕಕ್ಕೆ ಪೋರ್ಟ್ ಮಾಡಿಸಿಕೊಳ್ಳುವಂತೆ ವಿನಂತಿಸಲಾಗುತ್ತಿದೆ ಮತ್ತು ಫೇಸ್ ಬುಕ್ಕಿನಲ್ಲಿ ಹೇಳಿಕೊಂಡಷ್ಟೂ ಜನ ಪೋರ್ಟ್ ಮಾಡಲು ಕೇಳಿಕೊಂಡಿದ್ದರೆ ನೂರಾರು ಮಂದಿ ಗ್ರಾಹಕರನ್ನು ವೊಡಾಫೋನ್ ಕಳೆದುಕೊಳ್ಳಬೇಕಾಗುತ್ತದೆ.
ಅಷ್ಟರ ಮಟ್ಟಿಗೆ ಕನ್ನಡಕ್ಕೆ ಬೆಲೆ ಕೊಡದ ವ್ಯಾಪಾರಿಯೊಬ್ಬನಿಗೆ ಬಿಸಿ ಮುಟ್ಟಿಸಲಾಗುತ್ತಿದೆ.
ಬ್ರಿಟೀಷರಿಂದ ಬಳುವಳಿಯಾಗಿ ಬಂದ ಆಂಗ್ಲ ಭಾಷೆ ಮತ್ತು ನಮ್ಮದೇ ಭಾರತದ so called ರಾಷ್ಟ್ರೀಯ ಹಿಂದಿ ಭಾಷೆ ಕಾಲಕ್ರಮೇಣ ಕನ್ನಡ ಭಾಷೆಗೆ ಮುಳ್ಳಾಗುತ್ತಿದೆ. ಅಂಚೆ ಕಛೇರಿ, ಬ್ಯಾಂಕುಗಳಲ್ಲಿ ಹೇಗೆ ಕನ್ನಡ ಮಾಯವಾಗುತ್ತಿದೆ ಎಂಬುದನ್ನು ಗಮನಿಸಿದ್ದರೆ ಇದರ ಅರಿವಾಗುತ್ತದೆ. ಮುಂಚಿನ ದಿನಗಳಲ್ಲಿ ಅಂಚೆ ಕಛೇರಿ, ಬ್ಯಾಂಕುಗಳ ಅರ್ಜಿಗಳಲ್ಲಿ ಕನ್ನಡ, ಇಂಗ್ಲೀಷ್ ಮತ್ತು ಅವಶ್ಯಕತೆಯಿಲ್ಲದಿದ್ದರೂ ಹಿಂದಿಯನ್ನೂ ತೂರಲಾಗಿತ್ತು. ಹಿಂದಿ ಬಲ್ಲ ಕನ್ನಡಿಗರು ಎಷ್ಟಿದ್ದಾರೆ? ಈಗ ಅನೇಕ ಬ್ಯಾಂಕುಗಳಲ್ಲಿ, ಅಂಚೆ ಕಛೇರಿಯಲ್ಲಿ ಹಿಂದಿ ಇದೆ, ಇಂಗ್ಲೀಷ್ ಇದೆ ಆದರೆ ಕನ್ನಡ ಮಂಗಮಾಯವಾಗಿದೆ! ಕೆಲವು ರೈಲು ನಿಲ್ದಾಣಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸೂಚನೆಗಳನ್ನು ನೀಡುತ್ತಾರೆಯೇ ಹೊರತು ಕರ್ನಾಟಕದಲ್ಲಿದ್ದರೂ ಕನ್ನಡದಲ್ಲಿ ಸೂಚನೆ ನೀಡುವುದಿಲ್ಲ.
ತಾಂತ್ರಿಕ ಭಾಷೆಯಾಗಿಯೋ, ಓದುವ ಕೆಲಸ ಕೊಡಿಸುವ ಭಾಷೆಯಾಗಿಯೋ ಇಂಗ್ಲೀಷನ್ನು ಬಿಗಿದಪ್ಪಿಬಿಟ್ಟಿದ್ದೇವೆ. ಅದರರ್ಥ ಕರ್ನಾಟಕ ಪೂರ ಇಂಗ್ಲೀಷ್ ಮಯವಾಗಿಬಿಡಬೇಕೆಂದೇನೂ ಅಲ್ಲವಲ್ಲ. ಬಳಸುವ ಆಡು ಭಾಷೆಯಾಗಿ ಕನ್ನಡವೇ ಕರ್ನಾಟಕದಲ್ಲಿ ಅಧಿಕವಿರುವಾಗ ಕರ್ನಾಟಕ ಸರಕಾರ ನಮ್ಮ ರಾಜ್ಯದಲ್ಲಿ ಕಾರ್ಯನಿರ್ಹಿಸುವ ಕಂಪನಿಗಳು ಇಂಗ್ಲೀಷ್ ನಾಮಫಲಕ ಹಾಕಿದರೆ ತೊಂದರೆಯಿಲ್ಲ ಆದರೆ ದೊಡ್ಡ ಅಕ್ಷರಗಳಲ್ಲಿ ಕನ್ನಡ ನಾಮಫಲಕವನ್ನೂ ಹಾಕಲೇಬೇಕು ಎಂಬ ನಿಯಮ ರೂಪಿಸಿದ್ದರೆ ಇದು ಭಾರತದ ಸಂವಿಧಾನದ ವಿರುದ್ಧ, ನಮ್ಮ ವ್ಯಾಪಾರಕ್ಕೆ ಅಡೆತಡೆಯುಂಟುಮಾಡುವ ನಿಯಮ ಎಂದು ಆರೋಪಿಸಿ ವೊಡಾಫೋನ್ ಸಂಸ್ಥೆ 2009ರಲ್ಲಿ ಕರ್ನಾಟಕ ಹೈಕೋರ್ಟಿನಲ್ಲಿ ಈ ನಿಯಮವನ್ನು ಮಾನ್ಯ ಮಾಡಬಾರದೆಂದು ವಿನಂತಿಸಿಕೊಳ್ಳುತ್ತದೆ. ಈಗಾಗಲೇ ಬಹಳಷ್ಟು ಹಣವನ್ನು ನಾಮಫಲಕಕ್ಕೆ ವಿನಿಯೋಗಿಸಿರುವ ಕಾರಣದಿಂದ ಮತ್ತೆ ಕನ್ನಡ ನಾಮಫಲಕಕ್ಕೆ ಖರ್ಚು ಮಾಡಿದರೆ ಅದು ವ್ಯಾವಾಹಾರಿಕವಾಗಿ ನಮಗೆ ನಷ್ಟ ಎಂಬುದು ವೊಡಾಫೋನಿನ ವಾದ. ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಮ್ ಕಾರ್ಡುಗಳನ್ನು ಹಂಚಿ ಕೋಟ್ಯಾಂತರ ರುಪಾಯಿಗಳ ವಹಿವಾಟು ನಡೆಸಿ ಲಾಭ ಮಾಡುತ್ತಿರುವ ಸಂಸ್ಥೆಯೊಂದು ಕನ್ನಡ ನಾಮಫಲಕ ಹಾಕಲು ಹಿಂದೇಟು ಹಾಕಿದರೆ ಅದು ಸಮರ್ಥನೀಯವೇ? ವಿಪರ್ಯಾಸವೆಂದರೆ ಹೈಕೋರ್ಟ್ ಕೂಡ ವೊಡಾಫೋನಿನ ವಾದವನ್ನು ಮಾನ್ಯ ಮಾಡಿ 'ನೀವೀರೀತಿಯೆಲ್ಲ ನಿಯಮ ರೂಪಿಸುವ ಹಾಗಿಲ್ಲ ಕಣ್ರೀ' ಎಂದು ಸರಕಾರಕ್ಕೆ ತಿಳಿಸಿದೆ.
ಕರ್ನಾಟಕ ರಾಜ್ಯ ಭಾರತದಲ್ಲಿದೆ ಸರಿ, ಹಾಗೆಂದ ಮಾತ್ರಕ್ಕೆ ಕನ್ನಡಕ್ಕೆ 'ಭಾರತ' ದೇಶದ ಭಾಗವಾಗಿರುವ ಕಾರಣದಿಂದ ತೊಂದರೆಯಾದರೆ ಅದನ್ನೂ ಒಪ್ಪಿಕೊಳ್ಳಬೇಕೆ? ಹಿಂದಿ ಹೇರಿಕೆ, ಹಿಂದಿ ದಿವಸ್ ಆಚರಣೆ ಮತ್ತಷ್ಟು ಮಗದಷ್ಟು ಹೆಚ್ಚಿದಷ್ಟೂ ಅನುಮಾನವೇ ಬೇಡ ಮುಂದಿನ ದಿನಗಳಲ್ಲಿ ಭಾಷಾಧಾರಿತವಾಗಿ ಪ್ರತ್ಯೇಕ ದೇಶವಾಗಬೇಕೆಂದು ಒತ್ತಾಯಿಸುವ ಪ್ರತಿಭಟಿಸುವ ದಿನಗಳನ್ನೂ ಕಾಣಬಹುದು.
ಸದ್ಯಕ್ಕೆ ವೊಡಾಫೋನ್ ಸಿಮ್ ನಿಮ್ಮದಾಗಿದ್ದರೆ ದಯವಿಟ್ಟು ಪೋರ್ಟ್ ಮಾಡಿಸಿ. ನನ್ನದೂ ಒಂದು ವೊಡಾಫೋನ್ ಸಿಮ್ಮಿದೆ. ಈಗಲೇ ಪೋರ್ಟ್ ಮಾಡಿಸೋಣ ಎಂದುಕೊಂಡೆ, ಇನ್ನೂ ಬಹಳಷ್ಟು ದುಡ್ಡಿದೆ ಅದರಲ್ಲಿ! ವೊಡಾಫೋನಿನವರಿಗ್ಯಾಕೆ ಆ ದುಡ್ಡು ಬಿಟ್ಟಿ ಕೊಡಬೇಕು! ದುಡ್ಡು ಖಾಲಿ ಮಾಡಿ ವೊಡಾಫೋನಿಗೊಂದು ವಿದಾಯ ಹೇಳ್ತೀನಿ.....

No comments:

Post a Comment