Mar 21, 2014

ಗಲಭಾ ರಾಜಕೀಯ!

ಕೆಲವೊಮ್ಮೆ ಏನೋ ಹೇಳಲು ಹೋಗಿ ಸತ್ಯವನ್ನು ಹೊರಹಾಕಿಬಿಡಲಾಗುತ್ತದೆ! ಇವತ್ತಿನ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಬಂದಿರುವ ಒಂದು ವರದಿ ಗಲಭೆಗಳ ಹಿಂದಿನ ರಾಜಕೀಯವನ್ನು ಬಯಲು ಮಾಡಿಬಿಡುವುದರ ಜೊತೆಜೊತೆಗೆ ಬಿಜೆಪಿ ರಾಜಕೀಯ ಪಕ್ಷವಾಗಿ ಬೆಳೆಯಲು ಏನು ಕಾರಣ ಎಂಬುದನ್ನೂ ಸೂಚ್ಯವಾಗಿ ತಿಳಿಸಿಬಿಟ್ಟಿದೆ.

ಬಿಜೆಪಿ ಬೆಳೆದಿದ್ದೇ ಗಲಭೆಗಳಿಂದ. ಯಾವುದೇ ಕಾರಣಕ್ಕೆ ನಡೆಯುವ ಕೋಮುಗಲಭೆಗಳನ್ನು ತನ್ನ ರಾಜಕೀಯ ಅನುಕೂಲಗಳಿಗೆ ತಕ್ಕಂತೆ ಬದಲಿಸಿಕೊಳ್ಳುವುದು ಎಲ್ಲಾ ರಾಜಕೀಯ ಪಕ್ಷಗಳ ತಂತ್ರವಾದರೂ ಬಿಜೆಪಿ ಅಧಿಕಾರದಾಹಕ್ಕೆ ಕೋಮುಗಲಭೆಗಳನ್ನು ಬಳಸಿಕೊಳ್ಳುವುದರಲ್ಲಿ ಎಲ್ಲಕ್ಕಿಂತ ಮುಂದು.
ವಿಜಯ ಕರ್ನಾಟಕದಿಂದ ಕನ್ನಡಪ್ರಭಕ್ಕೆ ದಾಳಿಯಿಟ್ಟ "ದೇಶಪ್ರೇಮಿ ಹಿಂದೂ ರಾಷ್ಟ್ರೀಯವಾದಿ" ಪತ್ರಕರ್ತರ ಸಹಯೋಗದಿಂದ ಕನ್ನಡಪ್ರಭ ಈಗ "ಹಿಂದೂ" ಸಮಾಜವನ್ನು ಕಟ್ಟಿಬೆಳೆಸುವ ಪ್ರಮುಖ ಪತ್ರಿಕೆಯಾಗಿ ಬಿಟ್ಟಿದೆ. ಮುಲಾಯಂಸಿಂಗ್ ಯಾದವ್, ಮೋದಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಕುರಿತು ಬರೆದಿರುವ ಲೇಖನದಲ್ಲಿ ಮುಜಾಫರನಗರ ಗಲಭೆ ಮತ್ತು ಮೋದಿ ವಾರಣಾಸಿಯಿಂದ ಸ್ಪರ್ಧಿಸುವುದೆರಡೂ ಒಂದೇ ರೀತಿಯ ರಾಜಕೀಯ ನಡೆಗಳು ಎಂದು ಬರೆಯಲಾಗಿದೆ. ಯಾವ ರೀತಿಯಾಗಿ ಮುಜಾಫರನಗರ ಗಲಭೆ ಪಶ್ಚಿಮ ಉತ್ತರಪ್ರದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಮತದಾರರ ನಡುವಿನ ಭಿನ್ನಮತಗಳನ್ನು ಹೆಚ್ಚಿಸಿ ಹಿಂದೂಗಳು ಬಿಜೆಪಿಯ ಬೆನ್ನಿಗೆ ನಿಲ್ಲುವಂತೆ ಮಾಡಿದೆಯೋ ಅದೇ ರೀತಿಯ ಪರಿಣಾಮ ಮೋದಿ ವಾರಣಾಸಿಯಿಂದ ಸ್ಪರ್ಧಿಸುವುದರಿಂದ ಉಂಟಾಗುತ್ತದಂತೆ ! ಬಿಎಸ್ಪಿ ಮತ್ತು ಎಸ್ಪಿ ಮುಸ್ಲಿಮರನ್ನು ಓಲೈಸುವ ಕಾರಣದಿಂದ ಹಿಂದೂಗಳು ಬಿಜೆಪಿಯ ಬೆನ್ನಿಗೆ ನಿಲ್ಲುತ್ತಾರೆ ಎಂಬುದು ಪತ್ರಿಕೆಯ ಅಭಿಮತ! ಮುಜಾಫರನಗರದಲ್ಲಿ ಹಿಂದೂ ಮತಗಳನ್ನು ಬಿಜೆಪಿಯತ್ತ ತಿರುಗಿಸುವುದಕ್ಕೆ ಗಲಭೆಯಿಂದ ಸಿಕ್ಕ ಅವಕಾಶಕ್ಕೆ ಪತ್ರಿಕೆ ನೀಡಿದ ಸುಂದರ ಪದ "ಪ್ರಚೋದನೆ"! ಪೂರ್ವದಲ್ಲಿ ಅಂತಹ ಪ್ರಚೋದನೆ ಸಿಕ್ಕುವುದು ಮೋದಿಯ ಪ್ರಚಾರದಿಂದ!
ಮೋದಿ ಗೆಲ್ಲಿಸಿ ಭಾರತ ಗೆಲ್ಲಿಸಿ ಎಂದೆಲ್ಲ ಹೇಳಿದ ಮಂದಿ ಪ್ರಚೋದನೆಯಿಂದ ಗೆಲುವು ದಕ್ಕಿಸಿಕೊಳ್ಳಬೇಕಾಗಿರುವ ಅನಿವಾರ್ಯತೆಗೆ ಸಿಲುಕಿರುವುದು ಮಂದಿಯ ಮಂಡೆ ಸಮ ಇಲ್ಲವೆಂಬುದನ್ನೇ ಸೂಚಿಸುತ್ತದೆಯಷ್ಟೇ!!

No comments:

Post a Comment