Mar 19, 2014

ಈ ಅಭ್ಯರ್ಥಿಯ ಒಟ್ಟು ಆಸ್ತಿ ರೂ 750 ಮಾತ್ರ!

ಮುನೀರ್ ಕಾಟಿಪಳ್ಳ
ದೇಶಾದ್ಯಂತ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಭ್ರಷ್ಟಾಚಾರ ವಿರೋಧಿ , ಪ್ರಾಮಾಣಿಕತೆ , ಸರಳತೆ ಮುಂತಾದ ವಿಷಯಗಳು ಗಂಭೀರ ರಾಜಕೀಯ ಚರ್ಚೆಯ ವಿಷಯವಾಗಿದೆ. ಕಳೆದ ಲೋಕಸಭೆಯಲ್ಲಿ ಕೋಟ್ಯಾಧೀಶರುಗಳ ಸಂಖ್ಯೆ ಗಣನೀಯವಾಗಿತ್ತು. ಎಲ್ಲಾ ರಾಜ್ಯಗಳಲ್ಲಿ ವಿಧಾನಸಭೆಗೆ ಆರಿಸಿ ಬರುವವರು ಬಹುಕೋಟಿಯ ಒಡೆಯರು ಆಗಿರುವುದು ಈಗ ಒಂದು ಪದ್ದತಿಯಾಗಿದೆ.
ಹೀಗಿರುವಾಗ ರಾಜಕೀಯದಲ್ಲಿ ಜನ ಸಾಮಾನ್ಯ ( ಆಮ್ ಆದ್ಮಿ ) ಪಾಲ್ಗೊಳ್ಳುವುದು ಹೇಗೆ ಗೆದ್ದು ಬರುವುದು ಸಾಧ್ಯವೇ ? ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ. ಬಹುತೇಕ ಮಾಧ್ಯಮಗಳು ಸೇರಿದಂತೆ ಒಟ್ಟಾರೆ ಅಭಿಪ್ರಾಯವಿರುವುದು ಹಣದ ಗಂಟು ಇಲ್ಲದವರು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದಾಗಿದೆ. ಇವತ್ತಿನ ಪತ್ರಿಕೆಯೊಂದರಲ್ಲಿ ಬಂದಿರುವ ವರದಿಯ ಪ್ರಕಾರ ಕೇರಳದ ಕಮ್ಯುನಿಷ್ಟ್ ಪಕ್ಷದ ಅಭ್ಯರ್ಥಿಯ ( ಹಾಲಿ ಎಂ.ಪಿ ) ಒಟ್ಟು ಆಸ್ತಿ ಕೇವಲ 750 ರೂಪಾಯಿ. ಇನ್ನೊಬ್ಬ ಅಭ್ಯರ್ಥಿಯ ಆಸ್ತಿ ಮೌಲ್ಯ ಹಳೆದ ಮೋಟಾರು ಬೈಕ್ ಸೇರಿದಂತೆ 28,000. ಇದು ಹಲವರಿಗೆ ಅಚ್ಚರಿ ಅನ್ನಿಸಬಹುದು. ಕಮ್ಯುನಿಷ್ಟ್ ಚಳುವಳಿಯ ಒಳಗಿರುವವರಿಗೆ ಮತ್ತು ಅವರನ್ನು ಹತ್ತಿರದಿಂದ ಗಮನಿಸುವವರಿಗೆ ಇದರಲ್ಲಿ ವಿಶೇಷ ಏನೂ ಇಲ್ಲ. ಕಳೆದ ಬಾರಿ ಲೋಕಸಭೆಗೆ ಆರಿಸಿ ಬಂದ ಎಡಪಕ್ಷಗಳ ಸದಸ್ಯರಲ್ಲಿ ಕೋಟ್ಯಾಧೀಶರು ಒಬ್ಬರೂ ಇದ್ದಿರಲಿಲ್ಲ. ಕೇರಳದ ಹಾಲಿ 70 ರಷ್ಟು ಕಮ್ಯುನಿಷ್ಟ್ ಶಾಸಕರಲ್ಲಿ ಹುಡುಕಿದರೂ ಒಬ್ಬ ಕೋಟ್ಯಾಧೀಶ ಸಿಗುವುದಿಲ್ಲ. ತಮಗೆ ಸರ್ಕಾರದಿಂದ ಸಿಗುವ ಎಲ್ಲಾ ವಿಧದ ವೇತನಗಳನ್ನು ಪಕ್ಷಕ್ಕೆ ನೀಡುವುದು, ಪಕ್ಷ ತಮಗೆ ನೀಡುವ ಕನಿಷ್ಟ ಭತ್ತೆಯಲ್ಲಿ ಜೀವನ ಸಾಗಿಸುವುದು ಕಮ್ಯುನಿಷ್ಟ್ ಪಕ್ಷಗಳ ಕ್ರಮ. ಇಂಥಹಾ ಸರಳತೆಗಳಿಗೆ ಇ.ಎಮ್.ಎಸ್ ನಂಬೂದರಿ ಪಾಡ್ , ನಾಯನಾರ್ , ಅಚ್ಚುತ್ತಾನಂದನ್ ಮುಂತಾದ ಕೇರಳದ ಮುಖ್ಯಮಂತ್ರಿಗಳು ಮಾಣಿಕ್ ಸರ್ಕಾರ್ , ಜ್ಯೋತಿಬಸು ಮುಂತಾದ ತ್ರಿಪುರಾ, ಬಂಗಾಳದ ಮುಖ್ಯಮಂತ್ರಿಗಳು ಉದಾಹರಣೆಗಳಷ್ಟೆ. ಕಮ್ಯುನಿಷ್ಟ್ ಪಕ್ಷದ ಈಗಿನ ರಾಷ್ಟ್ರ ನಾಯಕರುಗಳಾದ ಬೃಂದಾ , ಪ್ರಕಾಶ್ ಕಾರಟ್ , ಸೀತರಾಮ್ ಯಚೂರಿ ಬದುಕುವುದು ತೀರಾ ಸರಳವಾಗಿ. ಹೀಗೆ ಕಮ್ಯುನಿಷ್ಟ್ ಪಕ್ಷಗಳು ಇಡಿಯಾಗಿ ಪ್ರಾಮಾಣಿಕತೆಯನ್ನೇ ( ಅಪವಾದಗಳು ತೀರಾ ಹುಡುಕಿದರೆ ಒಂದೆರಡು ಸಿಗಬಹುದಷ್ಟೇ) ಉಸಿರಾಗಿಸಿಕೊಂಡು ತನ್ನ ಪಕ್ಷವನ್ನು ಕಟ್ಟಿ ನಿಲ್ಲಿಸಿದೆ. ಆದರೆ ಬಂಡವಾಳ ಶಾಹಿ ವ್ಯವಸ್ಥೆ ಮತ್ತವರ ತುತ್ತೂರಿ ಮಾಧ್ಯಮಗಳು ಎಲ್ಲವೂ ಎಲ್ಲರೂ ಭ್ರಷ್ಟರಾಗಿದ್ದಾರೆ , ಚುನಾವಣೆಯಲ್ಲಿ ಬಹು ಕೋಟ್ಯಾಧೀಶರುಗಳಿಗಷ್ಟೇ ಟಿಕೆಟ್ ಗಳನ್ನ ನೀಡಲಾಗುತ್ತಿದೆ ಎಂದು ಬೊಬ್ಬೆ ಹೊಡೆಯುವಾಗ ಉದ್ದೇಶ ಪೂರ್ವಕವಾಗಿ ಕಮ್ಯುನಿಷ್ಟ್ ಪಕ್ಷಗಳ ಜನಪ್ರತಿನಿಧಿಗಳ ಪ್ರಾಮಾಣಿಕತೆ , ಸರಳತೆ , ಬಡತನದ ಹಿನ್ನೆಲೆಯನ್ನು ಮರೆಮಾಚುತ್ತದೆ. ಆಮ್ ಆದ್ಮಿ , ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗೆ ಜೈ ಅನ್ನುವವರೂ, ಪರ್ಯಾಯ ಬೇಕನ್ನುವವರೂ ಇಂಥಹಾ ಸಂಧರ್ಭದಲ್ಲಿ ಕಮ್ಯುನಿಷ್ಟ್ ಪಕ್ಷಗಳನ್ನು ಪರಿಗಣಿಸದಿರುವುದು ಅಚ್ಚರಿ ಅನಿಸಿದರೂ ಮರೆಮಾಚುವಲ್ಲಿ ವ್ಯವಸ್ಥಿತ ಪಿತೂರಿ ಇರುವುದಂತೂ ಸುಳ್ಳಲ್ಲ.

No comments:

Post a Comment