Feb 22, 2014

ವಿಶೇಷಗಳಿಲ್ಲದ ನಿರಾಸದಾಯಕವೂ ಅಲ್ಲದ ಕರ್ನಾಟಕ ಬಜೆಟ್.

ಡಾ ಅಶೋಕ್ ಕೆ ಆರ್

            ಮತ್ತೊಂದು ಬಜೆಟ್ಟಿನ ಸಮಯ. ಕಳೆದ ವರುಷ ಚುನಾಯಿತವಾದ ಕಾಂಗ್ರೆಸ್ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಮತ್ತೊಂದು ಬಜೆಟ್ ಮಂಡಿಸಿದೆ. ದಾಖಲೆಯ ಒಂಭತ್ತನೆಯ ಬಾರಿಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ 2014 – 2015ರ ಸಾಲಿನ ಬಜೆಟ್ಟಿನ ಮೇಲೆ ಯಾರಿಗೂ ಅತಿಯಾದ ನಿರೀಕ್ಷೆಗಳೇನಿರಲಿಲ್ಲ. ಇದು ಲೋಕಸಭಾ ಚುನಾವಣೆ ಇರುವ ವರುಷವಾದ್ದರಿಂದ ತೆರಿಗೆಯನ್ನು ಮತ್ತಷ್ಟು ಹೊರೆಯಾಗಿಸುವ ಸಾಧ್ಯತೆ ಕಡಿಮೆಯೆಂಬುದು ಎಲ್ಲರ ಭಾವನೆಯಾಗಿತ್ತು. ಒಂದಷ್ಟು ತೆರಿಗೆ ಕಡಿತ ಮಾಡಿ ಮುಂದಿನ ಚುನಾವಣೆಯಲ್ಲಿ ಒಂದಷ್ಟು ಮತ ಹೆಚ್ಚಿಸಿಕೊಳ್ಳಬಹುದೆಂಬ ಭಾವನೆಯೂ ಇತ್ತು. ಇಡೀ ದೇಶದ ಆರ್ಥಿಕತೆಯೇ ಒಂದಷ್ಟು ಕುಂಟುತ್ತ ತೆವಳುತ್ತ ಸಾಗುತ್ತಿರುವಾಗ ಕರ್ನಾಟಕ ಬಜೆಟ್ಟಿನಲ್ಲಿ ದೂರದೃಷ್ಟಿಯ ಬೃಹತ್ ವ್ಯಾಪ್ತಿಯ ಯೋಜನೆಗಳನ್ನು ನಿರೀಕ್ಷಿಸುವುದು ತಪ್ಪಾದೀತು. ಆದರೂ ಉತ್ತಮ ಹಣಕಾಸು ಸಚಿವರಾಗಿ ಹೆಸರು ಮಾಡಿರುವ ಸಿದ್ಧರಾಮಯ್ಯ ಆರ್ಥಿಕ ಶಿಸ್ತನ್ನು ತಂದು ಒಂದಷ್ಟು ದೂರದೃಷ್ಟಿಯ ಯೋಜನೆಗಳನ್ನು ಘೋಷಿಸಬಹುದೇನೋ ಎಂಬುದು ಕೆಲವರ ನಿರೀಕ್ಷೆಯಾಗಿತ್ತು. ಅತ್ತ ಪರಿಪೂರ್ಣವೂ ಅಲ್ಲದ ಇತ್ತ ಚುನಾವಣೆಯನ್ನಷ್ಟೇ ಗುರಿಯಾಗಿಸಿಕೊಂಡು ತಯಾರಿಸಿರದ ಆಯವ್ಯಯವನ್ನು ಸಿದ್ಧರಾಮಯ್ಯನವರು ಮಂಡಿಸಿದ್ದಾರೆ. ಒಂದಷ್ಟು ಉತ್ತಮ ಯೋಜನೆಗಳು ಇರುವುದಾದರೂ ಸಿದ್ಧರಾಮಯ್ಯನವರಿಂದ ಮತ್ತಷ್ಟು ಮಗದಷ್ಟು ನಿರೀಕ್ಷೆ ಮಾಡಿದ್ದರೆ ತಪ್ಪಲ್ಲ.

          ಇತ್ತೀಚೆಗಿನ ವರುಷಗಳಲ್ಲಿ ಕೇಂದ್ರವಿರಲಿ ರಾಜ್ಯವಿರಲಿ ಎರಡರ ಆಯವ್ಯಯಗಳೂ ದಿಡೀರ್ ಜನಪ್ರಿಯತೆ ತಂದುಕೊಡುವ ಯೋಜನೆಗಳಿಗೆ ಹೆಚ್ಚು ಆದ್ಯತೆ ಕೊಡುತ್ತಿದೆಯೇ ಹೊರತು ದೂರಗಾಮಿಯಲ್ಲಿ ಇಡೀ ಸಮಾಜದ ಸ್ವಾಸ್ಥ್ಯಕ್ಕೆ ಚೈತನ್ಯ ತುಂಬಬಲ್ಲಿ ಯೋಜನೆ – ಯೋಚನೆಗಳು ಕಡಿಮೆ. ಈ ಬಾರಿಯ ಕರ್ನಾಟಕದ ಬಜೆಟ್ಟು ಕೂಡ ಇದಕ್ಕೆ ಹೊರತಲ್ಲ. ಒಂದು ಲಕ್ಷದ ಮೂವತ್ತೆಂಟು ಸಾವಿರದ ಎಂಟು ರುಪಾಯಿಯ ಬಜೆಟ್ಟಿನಲ್ಲಿ ಬಹಳಷ್ಟು ಸಾಲ ಮನ್ನಾ, ಸ್ಮಾರಕ ನಿರ್ಮಾಣ, ಭವನಗಳ ನಿರ್ಮಾಣಕ್ಕೆ ಮೀಸಲಿರಿಸಿರುವುದು ತಮ್ಮ ಆಡಳಿತಾವಧಿಯಲ್ಲಿ ಆದಷ್ಟು ಕಟ್ಟಡಗಳ ಮೇಲೆ ತಮ್ಮ ಹೆಸರು ಅಚ್ಚಾಗಿಸಿ ಹೋಗಿಬಿಡಬೇಕೆಂಬ ಆಸೆ ಅಡಗಿದೆ. ಕಳೆದ ಬಾರಿ ಮುಖ್ಯಮಂತ್ರಿಯಾಗಿ ಚುನಾಯಿತರಾದ ಮೇಲೆ 1,21,611 ಕೋಟಿ ರುಪಾಯಿಯ ಬಜೆಟ್ ಮಂಡಿಸಿದ್ದ ಸಿದ್ಧರಾಮಯ್ಯ ಈ ಬಾರಿ ಅದಕ್ಕಿಂತಲೂ ಹೆಚ್ಚಿನ ವೆಚ್ಚ ಮಾಡಿದ್ದಾರೆ. ಕಳೆದ ವರುಷ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿದ್ದಂತೆ ಒಂದು ರುಪಾಯಿಗೆ ಅಕ್ಕಿಯನ್ನು ಕೊಡಲಾರಂಭಿಸಿ ‘ಅನ್ನ ಭಾಗ್ಯ’ ಯೋಜನೆಯ ಮುಖಾಂತರ ಒಂದು ಕೋಟಿ ಜನರಿಗೆ ತಲುಪಿಸಲಾಗಿದೆ. ನ್ಯಾಯ ಬೆಲೆ ಅಂಗಡಿಯ ಮೂಲಕ ಬಿಪಿಎಲ್ ಕಾರ್ಡುದಾರರಿಗೆ ನೀಡಿದ ಈ ಅಕ್ಕಿ ಒಂದಷ್ಟು ಕಾಳಸಂತೆಯಲ್ಲಿ ಮಾರಾಟವಾಗಿ ಅಂಗಡಿಯ ಮಾಲೀಕರಿಗೆ ಮತ್ತು ಅಕ್ಕಿ ಮಾರಿಕೊಂಡ ಜನರಿಗೆ ಹಣ ಮಾಡುವ ದಾರಿಯಾಗಿರುವುದನ್ನು ಮರೆಮಾಚುವುದಕ್ಕಾಗದಿದ್ದರೂ ಕೋಟಿ ಜನರು ಅಕ್ಕಿ ಪಡೆದುಕೊಂಡಿರುವುದು ಈ ಯೋಜನೆಯ ಸಾಫಲ್ಯತೆಯನ್ನು ತೋರುತ್ತದೆ. ಲೋಪದೋಷಗಳನ್ನು ಸರಿಪಡಿಸುವ ಕೆಲಸ ಮತ್ತಷ್ಟು ನಡೆದರೆ ಒಂದು ರುಪಾಯಿ ಅಕ್ಕಿಯ ಯೋಜನೆ ಮತ್ತಷ್ಟು ನೈಜ ಫಲಾನುಭವಿಗಳಿಗೆ ತಲುಪುವುದರಲ್ಲಿ ಯಶ ಕಾಣುತ್ತದೆ. ಕಳೆದ ಸಾಲಿನಲ್ಲಿ ಕೃಷಿ ಬೆಲೆ ಆಯೋಗ ರಚಿಸಲಾಗುವುದೆಂದು ಬಜೆಟ್ಟಿನಲ್ಲಿ ಘೋಷಣೆಯಾಗಿತ್ತು. ಆಯೋಗ ರಚಿಸುವ ಕಾರ್ಯ ಇನ್ನೂ ಸಹಿತ ನಡೆದಿಲ್ಲವಾದರೂ ಕೃಷಿ ಬೆಲೆ ಆಯೋಗದ ರಚನೆಗೆ ಆದೇಶ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. 

          ನಾಡಿನ ಜನರ ಆರೋಗ್ಯ ಸುಸ್ಥಿರವಾಗಿರುವಂತೆ ನೋಡಿಕೊಳ್ಳುವುದು ಒಂದು ಪ್ರಜಾಪ್ರಭುತ್ವ ಸರಕಾರದ ಕರ್ತವ್ಯವೇ ಹೊರತು ಅದು ಸರಕಾರಗಳು ಜನತೆಗೆ ನೀಡುವ ಭಿಕ್ಷೆಯಲ್ಲ. ಸರಕಾರದ ಯೋಜನೆಗಳಿಗೆಲ್ಲ ‘ಭಾಗ್ಯ’ವೆಂಬ ಪದವನ್ನು ಬಳಸಲಾರಂಭಿಸಿರುವುದರ ಔಚಿತ್ಯವೇನು? ನೀವು (ಜನರು) ನಮ್ಮ ಮರ್ಜಿಯಲ್ಲಿದ್ದೀರಿ, ಪ್ರಜಾಪ್ರಭುತ್ವವಾದರೂ ಇದು ನಮ್ಮ ಪ್ರಭುತ್ವ ಎಂಬುದನ್ನು ಜನತೆಗೆ ಪದೇ ಪದೇ ತಿಳಿಸುವ ಹುನ್ನಾರವಿದು. ಉತ್ತಮ ಯೋಜನೆಗಳಿಗೆಲ್ಲ ‘ಭಾಗ್ಯ’ ಪದ ಸೇರಿಸುವ ಆತುರ ಹೆಚ್ಚಾಗುತ್ತಲೇ ಸಾಗುತ್ತಿದೆ. ಮಕ್ಕಳ ಪೌಷ್ಟಿಕ ಮಟ್ಟವನ್ನು ಉತ್ತಮಗೊಳಿಸಲು ಶಾಲೆಯ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಒಂದು ಕೋಟಿ ಮಕ್ಕಳಿಗೆ ತಲುಪಿರುವ ಈ ಯೋಜನೆಯ ಹೆಸರೂ ಕೂಡ ‘ಕ್ಷೀರ ಭಾಗ್ಯ’! ಕಳೆದ ವರುಷದ ಕ್ಷೀರ ಭಾಗ್ಯ ಯೋಜನೆ ಈ ಬಾರಿಯೂ ಮುಂದುವರೆಯುತ್ತಿದೆ. ಜೊತೆಗೆ ಕಳೆದ ಸಾಲಿನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಘೋಷಿಸಿದ್ದ ‘ವಿದ್ಯಾಸಿರಿ’ ಯೋಜನೆ, ಕಷ್ಟದಲ್ಲಿರುವ ಅವಿವಾಹಿತ ಮಹಿಳೆಗಾಗಿ ಶುರು ಮಾಡಿದ್ದ ‘ಮನಸ್ವಿಸಿ’ ಯೋಜನೆ, ಲಿಂಗ ಅಲ್ಪಸಂಖ್ಯಾತರಿಗಾಗಿ ರೂಪಿಸಲಾಗಿದ್ದ ‘ಮೈತ್ರಿ’ ಯೋಜನೆ ಈ ವರುಷವೂ ಮುಂದುವರೆಯುತ್ತಿದೆ. ಎಪಿಎಲ್ ಕಾರ್ಡುದಾರರಿಗಾಗಿ ‘ರಾಜೀವ್ ಗಾಂಧಿ ಆರೋಗ್ಯ ಶ್ರೀ’ ಯೋಜನೆಯೂ ಮುಂದುವರೆಯುತ್ತದೆ. (ಯೋಜನೆಗಳಿಗೆಲ್ಲ ನೆಹ್ರೂ ಕುಟುಂಬಸ್ಥರ ಹೆಸರನ್ನಿಡುವ ಕಾಂಗ್ರೆಸ್ಸಿನ ಈ ಮನಸ್ಥಿತಿ ಯಾವಾಗ ಕೊನೆಗೊಳ್ಳುತ್ತದೋ?)

          ‘ಕೃಷಿ ಭಾಗ್ಯ’ ಕಾಂಗ್ರೆಸ್ಸಿನ ‘ಭಾಗ್ಯ’ ಸರಣಿಯ ಮತ್ತೊಂದು ಯೋಜನೆ. 23 ಜಿಲ್ಲೆಗಳಲ್ಲಿ 45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಳೆ ನೀರಿನ ಸಂರಕ್ಷಣೆ, ಲಾಭದಾಯಕ ಬೆಳೆ, ತೋಟಗಾರಿಕೆ ಬೆಳೆಗಳ ಉತ್ತೇಜನ, ಪಶುಸಂಗೋಪನೆ, ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಯನ್ನು ಮಾಡಲುದ್ದೇಶಿಸಲಾಗಿದೆ. ಇದಕ್ಕಾಗಿ ಈ ಸಾಲಿನಲ್ಲಿ 500 ಕೋಟಿ ಮೀಸಲಿರಿಸಲಾಗಿದೆ. ಶೂನ್ಯ ಬಡ್ಡಿ ದರದ ಸಾಲದ ಮಿತಿಯನ್ನು ಮೂರು ಲಕ್ಷಕ್ಕೆ ಏರಿಸಲಾಗಿದೆ. ಮೂರರಿಂದ ಹತ್ತು ಲಕ್ಷದವರೆಗೆ ಶೇ 3ರ ಬಡ್ಡಿ ದರದಲ್ಲಿ ಸಾಲ ನೀಡಲು ನಿರ್ಧರಿಸಲಾಗಿದೆ. ಜಾನುವಾರುಗಳು ಅನೈಸರ್ಗಿಕವಾಗಿ ಅಥವಾ ವನ್ಯಜೀವಿಗಳ ದಾಳಿಯಿಂದ ಸತ್ತಾಗ ನೀಡುವ ಪರಿಹಾರವನ್ನು ಹೆಚ್ಚಿಸಲಾಗಿದೆ. ರೇಷ್ಮೆ ಸಾಕಣಿಕೆದಾರರು ಇಂಡೋ ಡಚ್ ಯೋಜನೆಯಡಿ ಮಾಡಿಕೊಂಡಿದ್ದ ಸಾಲವನ್ನು ಮನ್ನಾ ಮಾಡಲಾಗಿದೆ. ಸಾಲ ಮನ್ನಾದಂತಹ ವಿಷಯಗಳೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತ ನಿಜವಾದ ಅಭಿವೃದ್ಧಿಯ ಯೋಜನೆಗಳು ದೂರ ಸರಿಯುತ್ತಿವೆಯೆಂಬ ಭಾವ ಈ ಬಾರಿಯ ಕೃಷಿ ಬಜೆಟ್ಟಿನಲ್ಲೂ ಕಾಣಿಸಿದೆ. ರಾಸಾಯನಿಕ ಗೊಬ್ಬರಗಳಿಗೆ, ದೊಡ್ಡ ದೊಡ್ಡ ಕಂಪನಿಗಳಿಗೆ ಅನುಕೂಲವಾಗುವಂತಹ ಸಂಗತಿಗಳೇ ಹೆಚ್ಚಿವೆಯೇ ಹೊರತು ಸಾವಯವ, ನೈಸರ್ಗಿಕ ಕೃಷಿಗೆ ಕಡೇಪಕ್ಷ ಕನಿಷ್ಟ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳೂ ಇಲ್ಲವೇ ಇಲ್ಲ. ಬೀಜೋತ್ಪಾದನೆ ಕೈಗೊಳ್ಳುವ ರೈತರಿಗೆ ಬೀಜ ಪ್ರಮಾಣೀಕರಣ ಶುಲ್ಕದಲ್ಲಿ ರಿಯಾಯಿತಿ ಹಾಗೂ ಬೀಜ ಉತ್ಪಾದನೆಗೆ ಪ್ರೋತ್ಸಾಹಧನವನ್ನು ನೀಡುವ ಪ್ರಸ್ತಾಪ ಮಾಡಲಾಗಿದೆ. ನಿಜಕ್ಕೂ ಇದು ಜಾರಿಗೆ ಬಂದಲ್ಲಿ ಸುತ್ತಮುತ್ತಲಿನ ಊರುಗಳಿಗೆ ಬೇಕಾದ ವಿಧವಿಧದ ಬೀಜಗಳು ರೈತರಿಂದಲೇ ತಯಾರಾಗಿ ಕಂಪನಿಗಳ ಕಪಿಮುಷ್ಟಿಯಿಂದ ರೈತವರ್ಗ ಒಂದಷ್ಟಾದರೂ ಬಿಡುಗಡೆ ಕಾಣಬಹುದು. ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ನೀಡಲಾಗುವ ಮೀಸಲಾತಿಯನ್ನು ಶೇ 40ಕ್ಕೆ ಹೆಚ್ಚಿಸಿರುವುದು ಮತ್ತೊಂದು ಉತ್ತಮ ನಿರ್ಧಾರ. ತೋಟಗಾರಿಕೆಯಲ್ಲಿ ತಂತ್ರಜ್ಞಾನದ ಅಳವಡಿಕೆಗೆ ಮತ್ತು ಸೌರಶಕ್ತಿ ಆಧಾರಿತ ಪಂಪುಗಳಿಗೆ ಸಹಾಯಧನ ನೀಡಲು ಹಣ ಮೀಸಲಿರಿಸಲಾಗಿದೆ. ಪಶುವೈದ್ಯರ ನೇಮಕ ಮತ್ತು ಪಶು ಆಸ್ಪತ್ರೆಗಳ ಸ್ಥಾಪನೆ ಹಾಗೂ ಮೇಲ್ದರ್ಜೆಗೇರಿಸುವ ಪ್ರಸ್ತಾಪವಿದೆ.   ಆನೆ ‘ಹಾವಳಿ’ಯನ್ನು ತಡೆಯಲು ಹಳೆಯ ರೈಲ್ವೆ ಹಳಿಗಳನ್ನು ಬಳಸಿ ಬ್ಯಾರಿಕೇಡ್ ನಿರ್ಮಿಸುವ ಉದ್ದೇಶವಿದೆ. ಕಾಡು ಪ್ರದೇಶವನ್ನು ದಿನೇ ದಿನೇ ನಾಶ ಮಾಡುತ್ತಿರುವ ಮನುಷ್ಯನ ವಿನಾಶ ಕಾರ್ಯಗಳು ನಿಲ್ಲುವವರೆಗೆ ನಾಡಿನತ್ತ ತೆರಳುವ ಆನೆಗಳನ್ನು ತಡೆಯುವುದು ಯಾವ ಬ್ಯಾರಿಕೇಡಿಗೂ ಸಾಧ್ಯವಾಗುವುದಿಲ್ಲ. ಸಾವಿರಾರು ಜನರಿಗೆ ಉಪಯುಕ್ತವಾಗಿರುವ ಯಶಸ್ವಿನಿ ಯೋಜನೆಯನ್ನು ನಗರಪ್ರದೇಶಕ್ಕೂ ವಿಸ್ತರಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಇದೇ ಸಂದರ್ಭದಲ್ಲಿ ನಗರಗಳ ಅನೇಕ ಖಾಸಗಿ ಆಸ್ಪತ್ರೆಗಳು ಯಶಸ್ವಿನಿ ಯೋಜನೆಯ ಹೆಸರಿನಲ್ಲಿ ನಕಲಿ ಆಪರೇಷನ್ನುಗಳ ಪಟ್ಟಿ ತಯಾರಿಸಿ ಹಣ ದೋಚುತ್ತಿರುವುದರ ಕಡೆಗೂ ಸರಕಾರ ಗಮನ ಕೊಡಬೇಕು. ಕೃಷಿ – ಕೃಷಿ ಮಾರುಕಟ್ಟೆಯ ವಿಷಯ ಬಂದಾಗ ರೈತರ ಬಗೆಗೆ ನಡೆದಷ್ಟು ಚರ್ಚೆಗಳು ಕೃಷಿ ಕಾರ್ಮಿಕರ, ಮಾರುಕಟ್ಟೆಯ ಹಮಾಲಿಗಳ ವಿಷಯವಾಗಿ ನಡೆಯುವುದಿಲ್ಲ. ಸಮಾಜವಾದದ ಹಿನ್ನೆಲೆಯಿಂದ ಬಂದಿರುವುದಕ್ಕೋ ಏನೋ ಸಿದ್ಧರಾಮಯ್ಯ ಹಮಾಲಿಗಳನ್ನು ಮರೆತಿಲ್ಲದಿರುವುದು ಸಂತಸದ ಸಂಗತಿ. ಹಮಾಲಿಗಳ ಕಲ್ಯಾಣಕ್ಕಾಗಿ ಒಂದು ಕೋಟಿ ಕಾಯಕ ನಿಧಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಒಂದಷ್ಟು ಉತ್ತಮ ಯೋಜನೆಗಳು ಇರುವುದಾದರೂ ಸಿದ್ಧರಾಮಯ್ಯನವರು ಕೃಷಿಗೆ ಸಂಬಂಧಪಟ್ಟ ಆಯವ್ಯಯವನ್ನು ಮತ್ತಷ್ಟು ಚೆಂದಗೊಳಿಸಬಹುದಿತ್ತು.
ಬಜೆಟ್ 2014

          ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿಗೆ 11,349 ಕೋಟಿ ರುಪಾಯಿಗಳನ್ನು ಮೀಸಲಿರಿಸಲಾಗಿದೆ. ಹೆಚ್ಚಿನ ಯೋಜನೆಗಳು ಉತ್ತರ ಕರ್ನಾಟಕ ಭಾಗದವು ಎಂಬುದು ಪ್ರಶಂಸಾರ್ಹ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉತ್ತರ ಕರ್ನಾಟಕದ ನದಿಗಳಿಗಡ್ಡಲಾಗಿ ಸೇತುವೆ ಕಟ್ಟಿಸುವ ಕಾರ್ಯವನ್ನು ಘೋಷಿಸಲಾಗಿದೆ. ಚನ್ನಗಿರಿ ಕಸಬಾ ಕೆರೆ, ಸೂಳೆಕೆರೆ, ಸಂತೆಬೆನ್ನೂರು ಕೆರೆಗಳನ್ನು ನೀರಾವರಿಯ ನೀರಿನ ಮೂಲಕ ತುಂಬಿಸುವ ನಿರ್ಧಾರ ತೆಗೆದುಕೊಂಡಿರುವುದು ಉತ್ತಮ ಬೆಳವಣಿಗೆ. ಇತ್ತೀಚಿನ ದಿನಗಳಲ್ಲಿ ಕೆರೆಗಳನ್ನು ಅಂದಗಾಣಿಸುವುದರೆಡೆಗೆ ಹೆಚ್ಚಿನ ಆಸಕ್ತಿ ತೋರಲಾಗುತ್ತಿದೆಯೇ ಹೊರತು ಅವುಗಳಲ್ಲಿ ನೀರು ತುಂಬಿಸುವುದು ಕಡೆಗಣನೆಗೆ ಒಳಗಾಗಿದೆ. ನಾಡಿನಾದ್ಯಂತವಿರುವ ಅಸಂಖ್ಯಾತ ಕೆರೆಗಳು ಮುಚ್ಚಿಹೋಗದೆ ನೀರು ತುಂಬುವಂತೆ ಮಾಡಬೇಕಿರುವುದು ಇಂದಿನ ಆದ್ಯತೆಯಾಗಬೇಕು. ಈ ಬಜೆಟ್ಟಿನಲ್ಲಿ ಅದು ಸಣ್ಣ ಪ್ರಮಾಣದಲ್ಲಿ ಆರಂಭವಾಗಿದೆಯಷ್ಟೇ. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಮತ್ತು ಹಾಸನ, ಮೈಸೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸೌರಶಕ್ತಿ ಚಾಲಿತ ಪಂಪುಗಳ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ. ಈ ಸೌರಶಕ್ತಿಯ ಯೋಜನೆ ಸರಿಯಾದ ರೀತಿಯಲ್ಲಿ ಅನುಷ್ಟಾನಗೊಂಡರೆ ಇಂಧನ ಇಲಾಖೆ ಮತ್ತು ಪರಿಸರದ ಮೇಲಾಗುವ ಒತ್ತಡವನ್ನು ಬಹುತೇಕ ಕಡಿಮೆಗೊಳಿಸಬಹುದು.
            ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತರುವಂತಹ ಯಾವುದೇ ಯೋಜನೆಗಳೂ ಸರಕಾರದ ಬಳಿಯಿಲ್ಲ. ವಿದ್ಯಾರ್ಥಿಗಳಿಲ್ಲದ ಶಾಲೆಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿದ್ದ ಸರಕಾರ ಈ ಬಾರಿ ಮತ್ತಷ್ಟು ಪ್ರೌಢಶಾಲೆಗಳನ್ನು ತೆರೆಯುವ ಪ್ರಸ್ತಾಪವಿರಿಸಿದೆ! ರಾಜ್ಯದಲ್ಲಿ 9405 ಪ್ರಾಥಮಿಕ ಶಿಕ್ಷಕರ ಹುದ್ದೆ, 1137 ಪ್ರೌಢ ಶಿಕ್ಷಕರ ಹುದ್ದೆ ಮತ್ತು 1130 ಪದವಿ ಪೂರ್ವ ಉಪನ್ಯಾಸಕರ ಹುದ್ದೆ ಖಾಲಿ ಬಿದ್ದಿರುವುದು ಸರಕಾರಗಳು ಶಿಕ್ಷಣದೆಡೆಗೆ ತೋರುವ ಅನಾದಾರದ ಪ್ರತೀಕ. ದೂರಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಉತ್ತಮಗೊಳಿಸಲು ಕರ್ನಾಟಕ ವರ್ಚುಯೆಲ್ ಯುನಿವರ್ಸಿಟಿಯ ಸ್ಥಾಪನೆ, ಸದಾಕಾಲ ನಿರ್ಲಕ್ಷ್ಯಕ್ಕೆ ಗುರಿಯಾಗುವ ಕಾರವಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಉದ್ಘಾಟನೆಗೆ ಮನಸ್ಸು ಮಾಡಿರುವುದು ಒಳ್ಳೆಯ ಬೆಳವಣಿಗೆ. ಎಲ್ಲಕ್ಕಿಂತ ಉತ್ತಮವೆಂದರೆ ಹೈದರಾಬಾದ್ ಕರ್ನಾಟಕ ಭಾಗದ ಇನ್ನೂರೈವತ್ತು ಗ್ರಾಮ ಪಂಚಾಯ್ತಿಗಳಲ್ಲಿ ಗೃಂಥಾಲಯ ಕಟ್ಟಡ ನಿರ್ಮಿಸುವ ಕೆಲಸ. ಊರಿನಲ್ಲೊಂದು ಉತ್ತಮ ಗೃಂಥಾಲಯವಿದ್ದರೆ ಜನರ ಓದುವ, ಯೋಚಿಸುವ, ವಿಶ್ಲೇಷಿಸುವ ಶಕ್ತಿ ಬೆಳೆಯುವುದು ಖಂಡಿತ. ಪ್ರತಿಯೊಂದು ಜಿಲ್ಲೆಯಲ್ಲೂ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಉದ್ದೇಶ ಸರಕಾರಕ್ಕಿದೆ. 2014 – 15ರ ಸಾಲಿನಲ್ಲಿ ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಹಾವೇರಿ ಮತ್ತು ವರುಷಗಳಿಂದಷ್ಟೇ ರಚನೆಯಾಗಿರುವ ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಹೇಳಲಾಗಿದೆ. ಈಗಿರುವ ಅನೇಕ ಸರಕಾರಿ ಕಾಲೇಜುಗಳು ಪ್ರತಿ ವರುಷ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ನಡೆಯುವ ಪರಿಶೀಲನೆಯ ಸಂದರ್ಭದಲ್ಲಿ ಕೊರತೆಗಳಿಗಾಗಿ ಛೀಮಾರಿಗೆ ಒಳಗಾಗುತ್ತಿರುವಾಗ ವರುಷಕ್ಕೆ ಆರಾರು ವೈದ್ಯಕೀಯ ಕಾಲೇಜುಗಳನ್ನು ಅತ್ಯಾತುರದಲ್ಲಿ ಸ್ಥಾಪಿಸುವ ಅಗತ್ಯವೇನಿದೆಯೋ ತಿಳಿಯುವುದಿಲ್ಲ. ಒಂದೆರಡು ವರುಷ ತಡವಾದರೂ ಉತ್ತಮ ಸೌಕರ್ಯಗಳಿರುವ ಕಾಲೇಜುಗಳನ್ನು ಪ್ರಾರಂಭಿಸುವುದು ಒಳ್ಳೆಯದಲ್ಲವೇ. 

          ಸೆರಿಬ್ರಲ್ ಪಾಲ್ಸಿ, ಆಟಿಸಂ ಮತ್ತು ಇನ್ನೂ ಅನೇಕ ಕಾರಣಗಳಿಂದ ಬುದ್ಧಿಮಾಂದ್ಯಕ್ಕೆ ಒಳಗಾಗಿರುವ ಬಿಪಿಎಲ್ ಕಾರ್ಡುದಾರರಿಗೆ ಒಂದು ಲಕ್ಷದವರೆಗಿನ ವಿಮಾ ಯೋಜನೆ ಘೋಷಿಸಲಾಗಿದೆ. ಬಿಪಿಎಲ್ ಕಾರ್ಡುದಾರರು ಈ ಸೌಲಭ್ಯ ಪಡೆಯಲು ಇನ್ನೂರೈವತ್ತು ರುಪಾಯಿಗಳನ್ನು ಕಟ್ಟಬೇಕಷ್ಟೇ. ನಿರುದ್ಯೋಗಿ ವಿಕಲಚೇತನರಿಗೆ ಭತ್ಯೆ, ವಾಹನ ಖರೀದಿಸಲು ಸಹಾಯಧನ ನೀಡುವುದರ ಜೊತೆಜೊತೆಗೆ ವಿಕಲಚೇತನ ತಡೆಗೆ ಆದ್ಯತೆ ನೀಡಬೇಕೆಂದು ಒತ್ತಿ ಹೇಳಲಾಗಿದೆಯಾದರೂ ವಿಕಲಚೇತನ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಒಂದು ಉತ್ತಮ ನಿದರ್ಶನವಾಗಬಹುದಾದ ಯೋಜನೆಯೆಂದರೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಯನ್ನು ಆಸ್ಪತ್ರೆ, ಪೋಲೀಸ್ ಠಾಣೆ ಎಂದು ಅಲೆಸದೆ ಒಂದೇ ಸೂರಿನಡಿ ಸಕಲ ಸೌಲಭ್ಯವನ್ನು ಸಿಗುವಂತೆ ಮಾಡುವ ಯೋಜನೆ. ಬೆಂಗಳೂರಿನ ಐದು ಸೇರಿದಂತೆ ರಾಜ್ಯದಾದ್ಯಂತ ಎಲ್ಲ ಮೂವತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಸ್ಥಾಪಿಸಲಾಗುತ್ತದೆ. ಈ ಯೋಜನೆ ಸರಿಯಾಗಿ ಜಾರಿಯಾದಲ್ಲಿ ವೈದ್ಯಕೀಯ ಚಿಕಿತ್ಸೆ, ಪೋಲೀಸ್ – ಕಾನೂನು ನೆರವು ಹಾಗೂ ಮಾನಸಿಕ ಸ್ಥೈರ್ಯ ತುಂಬಲು ಸಮಾಲೋಚನೆಗಳೆಲ್ಲವೂ ಒಂದೇ ಸ್ಥಳದಲ್ಲಿ ಲಭ್ಯವಾಗುತ್ತದೆ. 50 ತಾಲ್ಲೂಕುಗಳಲ್ಲಿ ಸ್ತ್ರೀ ಶಕ್ತಿ ಗುಂಪಿನ ಮೂಲಕ ಸ್ಯಾನಿಟರಿ ನ್ಯಾಪ್ ಕಿನ್ ತಯಾರಿಕ ಘಟಕದ ಸ್ಥಾಪನೆಗೆ 3 ಕೋಟಿ ಮೀಸಲಿರಿಸಲಾಗಿದೆ. ಸರಿಯಾಗಿ ಅನುಷ್ಟಾನಗೊಂಡಲ್ಲಿ ಸಾಯುತ್ತಿರುವ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವಂತಾಗುತ್ತದೆಯಲ್ಲದೇ ಒಂದಷ್ಟು ಮಟ್ಟಿಗೆ ನಗರಗಳಿಗೆ ವಲಸೆ ಬರುವುದನ್ನೂ ತಡೆಗಟ್ಟಬಹುದು. 

          ಈ ಬಾರಿಯ ಬಜೆಟ್ಟಿನಲ್ಲಿ ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಳ್ಳಿಸುವ ಪ್ರಯತ್ನ ಕಾಣುತ್ತದೆ. ಕಳೆದ ಬಾರಿಯ ಬಜೆಟ್ಟು ‘ಅಹಿಂದ’ ಬಜೆಟ್, ಸಿದ್ಧರಾಮಯ್ಯ ಕೇವಲ ‘ಅಹಿಂದ’ ನಾಯಕ ಎಂಬ ಅಪವಾದಗಳನ್ನು ತೊಡೆದುಕೊಳ್ಳಲು ಸಿದ್ಧರಾಮಯ್ಯ ಶ್ರಮಪಟ್ಟಿದ್ದಾರೆ. ಹಾಗಂತ ‘ಅಹಿಂದ’ ವರ್ಗವನ್ನು ಕಡೆಗಣಿಸಿಯೂ ಇಲ್ಲ. ವಿದ್ಯಾಸಿರಿ ಯೋಜನೆಯನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ವಿಸ್ತರಿಸುವ, ಹೋಬಳಿ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ 100 ವಸತಿ ಶಾಲೆ, ಮ್ಯಾನುಯೆಲ್ ಸ್ಕ್ಯಾವೆಂಜರ್ ಗಳ ಪುನರ್ವಸತಿ ಮತ್ತು ಪರ್ಯಾಯ ಉದ್ಯೋಗಕ್ಕಾಗಿ ಯೋಜನೆಗಳನ್ನು ಘೋಷಿಸಲಾಗಿದೆ. ಲ್ಯಾಪ್ ಟಾಪ್ ಹಂಚಿಕೆಯೂ ಪ್ರಸ್ತಾಪದಲ್ಲಿದೆ, ಲ್ಯಾಪ್ ಟಾಪ್ ಹಂಚುವುದು ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿಬಿಟ್ಟಿದೆ. ನಿಜಕ್ಕೂ ಎಷ್ಟರಮಟ್ಟಿಗೆ ಓದುವ ಸಂದರ್ಭದಲ್ಲಿ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪಿನ ಅವಶ್ಯಕತೆಯಿದೆ ಎಂಬುದರ ಸಮೀಕ್ಷೆಯಾದರೆ ಒಳ್ಳೆಯದು! ಇನ್ನು ದಿ. ಬಿ. ಕೃಷ್ಣಪ್ಪ, ಕುದ್ಮಲ್ ರಂಗರಾವ್, ದೇವರಾಜು ಅರಸರ, ಎಲ್ಲವನ್ನೂ ಪ್ರಶ್ನಿಸುತ್ತಿದ್ದ ಡಾ ಹೆಚ್ ನರಸಿಂಹಯ್ಯನವರ ಹೆಸರಿನಲ್ಲಿ ಸ್ಮಾರಕ ಮತ್ತು ಭವನಗಳನ್ನು ನಿರ್ಮಿಸು ಹಣ ಎತ್ತಿಟ್ಟಿರುವುದು ಮತಗಳನ್ನು ಸೆಳೆಯುವುದಕ್ಕಾಗಿ ಮಾತ್ರ. ಧಾರ್ಮಿಕ ಸಮುದಾಯ ಭವನಗಳಿಗೆ, ದೇವಸ್ಥಾನದ ಜೀರ್ಣೋದ್ದಾರ ಕಾರ್ಯಗಳಿಗೆ, ದತ್ತಿ ಸಂಸ್ಥೆಗಳಿಗೆ ಬಿಜೆಪಿ ಸರಕಾರ ನೀಡಿದಷ್ಟು ಹಣ ಸುರಿದಿಲ್ಲವಾದರೂ ಇನ್ನೂರು ಕೋಟಿಯಷ್ಟು ಹಣ ಮೀಸಲಿರಿಸಲಾಗಿದೆ. ಮಠ ಮಾನ್ಯಗಳಿಗೆ ನೀಡುವ ಹಣದ ಪ್ರಸ್ತಾಪವಿಲ್ಲದಿರುವುದು ಒಳ್ಳೆಯ ಬೆಳವಣಿಗೆ. ಅಲ್ಪಸಂಖ್ಯಾತರ ಕಲ್ಯಾಣಕ್ಕೆ ತೆಗೆದಿರಿಸಿರುವ 800 ಕೋಟಿ ರೂಗಳಲ್ಲಿ ಯಾವುದೇ ವಿಶೇಷತೆಯಿಲ್ಲ. ಹಣವನ್ನು ಹಂಚಲಾಗಿದೆ ಅಷ್ಟೇ. 

          ಪ್ರತಿ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಜನತಾಚಿತ್ರಮಂದಿರ ತೆರೆಯುವವರಿಗೆ ಉತ್ತೇಜನ ಮತ್ತು ಪ್ರೋತ್ಸಾಹಧನ ಕೊಡುವ ಯೋಜನೆ, ವೃದ್ಧಾಶ್ರಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ನಿರ್ಧಾರ, ಪ್ರತಿ ಜಿಲ್ಲಾರಂಗಮಂದಿರದಲ್ಲಿ ಪುಸ್ತಕ ಮಳಿಗೆ ನಿರ್ಮಿಸುವ ವಿಚಾರ ಸಣ್ಣ ಪುಟ್ಟವೆನ್ನಿಸಬಹುದಾದರೂ ಯಶಸ್ವಿಯಾಗಿ ಜಾರಿಯಾದಲ್ಲಿ ಒಂದು ಊರನ್ನು ಸಾಂಸ್ಕೃತಿಕವಾಗಿ ಮತ್ತು ವೈಚಾರಿಕವಾಗಿ ಬೆಳೆಯುವಂತೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುವುದರಲ್ಲಂತೂ ಸಂಶಯವಿಲ್ಲ. ಒಟ್ಟಂದದಲ್ಲಿ ಸಿದ್ಧರಾಮಯ್ಯನವರು ಮಂಡಿಸಿರುವ 2014 – 2015ರ ಸಾಲಿನ ಬಜೆಟ್ಟು ಅತ್ಯುತ್ತಮ ಎನ್ನಲಾಗದಿದ್ದರೂ ಉತ್ತಮವಾಗಿಯಂತೂ ಇದೆ. ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿರುವುದು ಬಜೆಟ್ಟಿನಲ್ಲಿ ಕಂಡುಬರುತ್ತದೆ. ಯೋಜನೆಗಳ ಅನುಷ್ಟಾವಾಗುವ ಸಮಯದಲ್ಲೂ ಈ ಪ್ರಾಮುಖ್ಯತೆ ಮುಂದುವರೆದರೆ ಹಿಂದುಳಿದ ಪಟ್ಟಿಯಿಂದ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳು ಹೊರಬರುತ್ತವೆ.  ಚುನಾವಣೆಯ ಒತ್ತಡದಿಂದ ಒಂದಷ್ಟು ತೆರಿಗೆ ಹೊರೆ ಜನತೆಯ ಮೇಲೆ ಬೀಳುವುದು ತಪ್ಪಿದೆ. ಕೈಗಾರಿಕೆಗಳಿಗೆ ನೀಡಿರುವ ಮಹತ್ವ ಕಡಿಮೆಯಾಗಿದೆ ಎಂದೆನಿಸುತ್ತದೆ. ಜಾಗತಿಕವಾಗಿರುವ ಆರ್ಥಿಕ ಹಿಂಜರಿತ ಮತ್ತದು ಭಾರತವನ್ನೂ ಪ್ರಭಾವಿಸಿರುವ ಕಾರಣವೋ ಏನೋ ದೂರಗಾಮಿ ಅಭಿವೃದ್ಧಿಯ ಬೃಹತ್ ಯೋಜನೆಗಳ ಘೋಷಣೆಗಳಾಗಿಲ್ಲ. ಲೋಕಸಭಾ ಚುನಾವಣೆಯ ಹತ್ತಿರದಲ್ಲಿಲ್ಲದಿದ್ದರೆ ಬಹುಶಃ ಆರ್ಥಿಕ ಶಿಸ್ತು ಹೆಚ್ಚಿರುವ ಬಜೆಟ್ಟನ್ನು ಸಿದ್ಧರಾಮಯ್ಯನವರಿಂದ ನಿರೀಕ್ಷಿಸಬಹುದಿತ್ತು, ಈಗ ಮಂಡಿಸಿರುವುದು ಎಲ್ಲರನ್ನೂ ತೃಪ್ತಿಪಡಿಸಲು ಯತ್ನಿಸಿರುವ ಬಜೆಟ್ಟು.
ಪ್ರಜಾಸಮರಕ್ಕೆ ಬರೆದ ಲೇಖನ

No comments:

Post a Comment