Jan 9, 2014

ಮಂಗಳೂರಿನ ಬೀದಿಗಳಲ್ಲಿ ಮತ್ತೆ ಧರ್ಮ ಯುದ್ಧದ ರಣೋತ್ಸಾಹ

Muneer Katipalla
“ ಧರ್ಮ ರಕ್ಷಕರ ನಾಡು” ಮಂಗಳೂರಿನಲ್ಲಿ ಮತ್ತೆ ಧರ್ಮ ರಕ್ಷಣೆಯ ಅತ್ಯುತ್ಸಾಹ ಕಂಡುಬರುತ್ತಿದೆ. ಒಂದೆರಡು ತಿಂಗಳ ಹಿಂದೆ ಮುಸ್ಲಿಂ ಧರ್ಮ ರಕ್ಷಕರು ವಿಟ್ಲದ ಪತ್ರಕರ್ತ ವಿಟಿ ಪ್ರಸಾದ್ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಆರಂಭವಾದ ಈ ಸುತ್ತಿನ ಧರ್ಮದಾಟ ಈಗ ಕ್ಲೈಮಾಕ್ಸ್ ಹಂತಕ್ಕೆ ತಲುಪುತಿದೆ. ವಿಟ್ಲ ಘಟನೆ, ಬಂಟ್ವಾಳದ ಜಯರಾಮ್ ಮೇಲಿನ ಹಲ್ಲೆ , ದೇರಳ ಕಟ್ಟೆಯಲ್ಲಿ ಮುಸ್ಲಿಂ ನಾಮಧಾರಿ ಹೀನ ಜಂತುಗಳು ನಡೆಸಿದ ಹೇಯ ಕೃತ್ಯ , ನಗರದ ಹೃದಯ ಭಾಗದಲ್ಲಿ ಮುಸ್ಲಿಂ ನೈತಿಕ ಪೊಲೀಸರು ಕೇರಳದ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆ ( ಮಧ್ಯೆ ಮಧ್ಯೆ ಹಿಂದುತ್ವವಾದಿಗಳ ನೈತಿಕ ಪೊಲೀಸ್ ಗಿರಿ ಯಥಾಪ್ರಕಾರ ನಡೆಯುತಿತ್ತು ಬಿಡಿ) ಇವುಗಳನ್ನು ಬಳಸಿಕೊಂಡು ಹಿಂದೂಗಳ ರಕ್ಷಣೆಯ ಗುತ್ತಿಗೆ ಪಡೆದಿರುವ ಸಂಘಟನೆಗಳು ರಕ್ತಪಾತದ ಘೋಷಣೆಯೊಂದಿಗೆ ಬೀದಿಗಿಳಿದು ವಾರ ಕಳೆದಿದೆ.
ಬಿದ್ದು ಹೋಗಿರುವ ತಮ್ಮ ಹಿಂದೂ ಧರ್ಮ ರಕ್ಷಣೆಯ ಪ್ರಭಾವವನ್ನು ಮರಳಿ ಗಳಿಸಲು ಮುಸ್ಲಿಂ ಧರ್ಮ ರಕ್ಷಕರ ಕೃತ್ಯಗಳು ಪರಿವಾರದ ಸಂಘಟನೆಗಳಿಗೆ ಊರುಗೋಲಾಗುತಿದೆ. ಹಿಂದೂ ಧರ್ಮ ರಕ್ಷಣೆಯ ರಣೋತ್ಸಾಹದಲ್ಲಿ ಕಲ್ಲಡ್ಕದ ಭಟ್ಟರು ಮಾಡಿದ “ ಅಮೋಘ ಭಾಷಣ” ಈಗ ಜಿಲ್ಲೆಯನ್ನು ಧರ್ಮ ಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ. ಹಿಂದೂ ಧರ್ಮ ರಕ್ಷಕರಿಗೆ ಎದ್ದು ನಿಲ್ಲಲು ಮುಸ್ಲಿಂ ಧರ್ಮ ರಕ್ಷಕರ, ಮುಸ್ಲಿಂ ಕ್ರಿಮಿನಲ್ ಗುಂಪುಗಳ ಕೃತ್ಯಗಳು ಸಹಾಯಕವಾದರೆ, ಪರಿವಾರದ ನಾಯಕರ ಉದ್ರೇಕಕಾರಿ, ಅವಹೇಳನಕಾರಿ ಭಾಷಣ, ಘೋಷಣೆಗಳು ಮುಸ್ಲಿಂ ಧರ್ಮ ರಕ್ಷಕರಿಗೆ ವೇದಿಕೆಯನ್ನು ನಿರ್ಮಿಸಿಕೊಡುತ್ತಿದೆ. ಭಟ್ಟರ ಭಾಷಣದಿಂದ ಸಿಟ್ಟುಗೊಂಡಿರುವ ಮುಸ್ಲಿಂ ಯುವಕರನ್ನ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಬೃಹತ್ ಸಂಖ್ಯೆಯಲ್ಲಿ ಬೀದಿಗಿಳಿಸಿದೆ. ಭಾಷಣ , ಘೋಷಣೆಗಳಲ್ಲಿ ನೇರ ಸವಾಲಿನ ಝೇಂಕಾರ, ಧರ್ಮ ರಕ್ಷಣೆಯ ಉನ್ಮಾದ , ನಮ್ಮ ಸೈನಿಕರು ಯುದ್ಧಕ್ಕೆ ರೆಡಿ ಎಂಬ ರಣಕಹಳೆ. ಮುಂದಿನ ಸರದಿ ಹಿಂದೂ ಧರ್ಮ ರಕ್ಷಕರದ್ದು. ಮುಸ್ಲಿ ಧರ್ಮಯೋಧರ ಸವಾಲು ಸ್ವೀಕರಿಸುವ ಉತ್ಸಾಹದಿಂದಲೇ ಬೀದಿಗಿಳಿಯುವ ಹುಮ್ಮಸ್ಸು ಎಲ್ಲೆಲ್ಲೂ ಕಂಡುಬರುತ್ತಿದೆ. ಮುಂದೆ ನಡೆಯುವುದು ಧರ್ಮಯುದ್ದವಾ? ಧರ್ಮ ರಕ್ಷಣೆಗಾಗಿ ಒಂದಿಷ್ಟು ಅಮಾಯಕರ ರಕ್ತಪಾತವಾ? ನಿರ್ಜನ ಬೀದಿಗಳಲ್ಲಿ ಹಸಿವಿನಿಂದ ಕಂಗೆಟ್ಟ ಬಡವರ( ಇವರು ಧರ್ಮಾತೀತರು ಬಿಡಿ) ಆಕ್ರಂದನವಾ? ಉತ್ತರ ಹೇಳಬೇಕಾದದ್ದು ಯಾರು? ನಿಜವಾದ ಧರ್ಮವನ್ನು ಎತ್ತಿಹಿಡಿಯಬೇಕಾದದ್ದು ಯಾರು?..............

No comments:

Post a Comment