Jan 28, 2014

‘ಧರ್ಮ’ ಸಂಕಟಕ್ಕೆ ಒಳಗಾಗುವ ಚುನಾವಣೆಯ ಕಾಲವಿದು….



ಡಾ ಅಶೋಕ್ ಕೆ ಆರ್.
ಧಾರವಾಡ, ಹುಮನಾಬಾದ್ ಮತ್ತಿವೆಲ್ಲವಕ್ಕೂ ಕಳಶವಿಟ್ಟಂತೆ ದಕ್ಷಿಣ ಕನ್ನಡದ ನಾನಾ ಭಾಗಗಳಲ್ಲಿ ಕಳೆದೆರಡು ತಿಂಗಳುಗಳಿಂದ ಒಂದರಹಿಂದೊಂದರಂತೆ ಕೋಮುಗಲಭೆಗಳು ವರದಿಯಾಗುತ್ತಿವೆ. ಅಪರಾಧ ಪ್ರಕರಣಗಳು, ವೈಯಕ್ತಿಕ ಸಂಗತಿಗಳು, ಉದ್ದೇಶಪೂರ್ವಕವೆಂಬಂತೆ ತೋರುವ ಘಟನೆಗಳೆಲ್ಲ ದೊಡ್ಡ ಕೋಮು ಗಲಭೆಗಳಾಗಿ ಮಾರ್ಪಡುತ್ತಿರುವುದು ಏನನ್ನು ಸೂಚಿಸುತ್ತಿದೆ? ಮತ್ತೇನಿಲ್ಲ ಚುನಾವಣೆ ಸಮೀಪಿಸುತ್ತಿದೆ. ಅತಿದೊಡ್ಡ ಪ್ರಜಾಪ್ರಭುತ್ವದ ಬಹುದೊಡ್ಡ ಲೋಕಸಭಾ ಚುನಾವಣೆಗೆ ಸರ್ವಪಕ್ಷಗಳೂ ಸಿದ್ಧಗೊಳ್ಳುತ್ತಿವೆ, ಸಿದ್ಧತೆಯ ಮಾದರಿ ಸಮಾಜದ ಆರೋಗ್ಯಕ್ಕೆ ಮತ್ತು ತತ್ಪರಿಣಾಮವಾಗಿ ವ್ಯಕ್ತಿಯ ವಿಕಸನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.

ಬುದ್ಧಿವಂತರ ಜಿಲ್ಲೆ, ವ್ಯಾಪಾರಿ ಮನೋಭಾವದ, ಯಾವ ಮೂಲೆಗೆ ಹೋದರೂ ಬದುಕು ಕಂಡುಕೊಳ್ಳುವ ಛಾತಿಯಿರುವ ಜನರ ದಕ್ಷಿಣ ಕನ್ನಡ ಪತ್ರಿಕೆಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದಿದ್ದು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯ ಫಲಿತಾಂಶ ಪ್ರಕಟವಾದಾಗ. ಮೊದಲ ಸ್ಥಾನಗಳಲ್ಲಿ ಹೆಚ್ಚಿನವು ದಕ್ಷಿಣ ಕನ್ನಡದ ಪಾಲಾಗಿರುತ್ತಿತ್ತು. ಇನ್ನುಳಿದಂತೆ ಟ್ಯಾಬೋಲಾಯ್ಡ್ ಪತ್ರಿಕೆಗಳಲ್ಲಿ ದಕ್ಷಿಣ ಕನ್ನಡದಿಂದ ಉದ್ಭವವಾದ ಭೂಗತಲೋಕದ ‘ಡಾನ್’ಗಳ ರೋಚಕ ಕಥೆಗಳಿರುತ್ತಿತ್ತು. ಮಂಗಳೂರಿನಿಂದ ಮುಂಬೈಗೆ ಹೋಗಿ ಮುಂಬೈ ದಾದಾಗಳನ್ನೇ ಮೂಲೆಗುಂಪು ಮಾಡಿ ಕೆಲವು ದಿನ ಮೆರೆದು ಹತರಾಗಿಯೋ ‘ನಿವೃತ್ತ’ರಾಗಿಯೋ ನೇಪಥ್ಯಕ್ಕೆ ಸೇರಿ ಹೋಗುತ್ತಿದ್ದವರ ಕಥೆಗಳವು. ದುಬೈ, ಸೌದಿಗೆ ದುಡಿಯಲು ಹೋಗುವವರೂ ಈ ಜಿಲ್ಲೆಗಳಿಂದಲೇ ಹೆಚ್ಚು. ಹಳೆ ಮೈಸೂರು ಭಾಗದಲ್ಲಿ ಮಂಗಳೂರಿಗರನ್ನು ‘ಸ್ವಲ್ಪ ಸ್ವಾರ್ಥಿಗಳು ಕಣ್ರೀ’ ಎಂದು ಹೀಗಳೆಯುವುದೂ ಉಂಟು. ದಕ್ಷಿಣ ಕನ್ನಡದಲ್ಲಿ ಎರಡು ವರುಷಗಳ ಕಾಲ ಇದ್ದ ಅನುಭವದಲ್ಲಿ ಅದು ಸ್ವಾರ್ಥವಲ್ಲ ಬೇರೆಯವರ ವಿಷಯಕ್ಕೆ ತಲೆಹಾಕದ, ತಮ್ಮ ಪಾಡು ತಾವು ನೋಡಿಕೊಳ್ಳುವ ಅವರ ಮನಸ್ಥಿತಿ ಎಂಬುದು ಅರಿವಿಗೆ ಬಂದಿತ್ತು. ಧರ್ಮಸ್ಥಳ, ಸುಬ್ರಮಣ್ಯ ತರಹದ ಪ್ರಖ್ಯಾತ ದೇವಸ್ಥಾನಗಳು, ಜೈನ ಬಸದಿಗಳು, ಮತ್ತಿವೆಲ್ಲಕ್ಕಿಂತ ಮಿಗಿಲಾಗಿ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಕಾಣಸಿಗದ ಅಪಾರ ಪ್ರಮಾಣದ ಪ್ರಕೃತಿ ಸೌಂದರ್ಯ ದಕ್ಷಿಣ ಕನ್ನಡಕ್ಕೆ ಪ್ರವಾಸಿಗರು ಭೇಟಿ ನೀಡುವ ವಿಷಯದಲ್ಲೂ ಪ್ರಖ್ಯಾತಿ ಪಡೆದಿರುವ ಜಿಲ್ಲೆ. ಇಂಥಹ ಜಿಲ್ಲೆ ಕೆಲವು ವರುಷಗಳಿಂದ ಅನಗತ್ಯ ವಿಷಯಗಳಿಂದ ಪ್ರಚುರಕ್ಕೊಳಪಡುತ್ತಾ ದಕ್ಷಿಣ ಕನ್ನಡದಲ್ಲಿ ವಾಸವಿರದವರಿಗೆ ದೂರದೂರಿನವರಿಗೆ ದಕ್ಷಿಣ ಕನ್ನಡವೆಂದರೆ ಕೋಮುವಾದಿಗಳೇ ತುಂಬಿರುವ ಊರು ಎಂಬ ಭಾವನೆ ಮೂಡಲಾರಂಭಿಸಿದೆ. ರಾಜಕೀಯ ಪ್ರೇರಿತ ಘಟನಾವಳಿಗಳು ದಕ್ಷಿಣ ಕನ್ನಡ ಜಿಲ್ಲೆಯ ಜನರ (ಎಲ್ಲರದಲ್ಲ) ಮನಸ್ಸಿನಾಳಕ್ಕೂ ನಾಟಿ ಹೋಗಿ ಒಂದು ರೀತಿಯ ಅಪನಂಬಿಕೆಯ, ಭಯ ಭೀತಿಯ ವಾತಾವರಣ ನಿರ್ಮಾಣವಾಗಿದೆ ಎಂದರೆ ತಪ್ಪಲ್ಲ. ಬಿಜೆಪಿ, ಕಾಂಗ್ರೆಸ್, ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳೆಲ್ಲ ಈ ವಾತಾವರಣದ ನಿರ್ಮಾಣಕ್ಕೆ ನೇರ ಕಾರಣ; ಅರಿವಿದ್ದೋ ಇಲ್ಲದೆಯೋ ಇಂತಹ ಸಂಘಟನೆಗಳಿಗೆ ಆಗೀಗ ಬೆಂಬಲ ಕೊಟ್ಟ ಜನರ ತಪ್ಪೂ ಸಮನಾಗಿದೆ. ದಕ್ಷಿಣ ಕನ್ನಡದಲ್ಲಿ ಎರಡು ವರುಷಗಳ ಕಾಲ ಬದುಕಿ ಅಲ್ಲಿನ ಎಡಪಂಥೀಯ, ಬಲಪಂಥೀಯ, ಅಪಂಥೀಯ ಜನರ ಜೊತೆ ನಡೆಸಿದ ಚರ್ಚೆಗಳು, ಜನಸಾಮಾನ್ಯರೊಡನೆ ನಡೆಸಿದ ಒಡನಾಟ, ನೇರವಾಗಿ ಗಲಭೆಗಳಲ್ಲಿ ಭಾಗವಹಿಸಿದ ಜನರ ಜೊತೆಗಿನ ಮಾತುಕತೆ ಮತ್ತು ಕೆಲವೊಂದು ಕೋಮು ಗಲಭೆಗಳನ್ನು ನಂಜುಭರಿತ ಭಾಷಣಗಳನ್ನು ಸ್ವತಃ ಕೇಳಿ ಪಡೆದುಕೊಂಡ ಅನುಭವಗಳಿಲ್ಲದಿದ್ದಲ್ಲಿ ಈ ಲೇಖನ ಬರೆಯುತ್ತಿರಲಿಲ್ಲವೇನೋ. ಸಾಂಸ್ಕೃತಿವಾಗಿ ಉನ್ನತಿಯಲ್ಲಿರುವ ದಕ್ಷಿಣ ಕನ್ನಡ ಹಿಂದೂ ಪ್ರಯೋಗಶಾಲೆಯಾಗದಿರಲಿ, ಮುಸ್ಲಿಂ ಮೂಲಭೂತವಾದಿಗಳ ನೆಲೆಯಾಗದಿರಲಿ ಎಂಬುದಷ್ಟೇ ಈ ಲೇಖನದ ಉದ್ದೇಶ.

ಕರಾವಳಿ ಅಲೆ ಪತ್ರಿಕೆಯ ವಿಟ್ಲದ ಪತ್ರಕರ್ತ ಪ್ರಸಾದರ ಮೇಲೆ ನವೆಂಬರ್ 27, 2013ರಂದು ನಡೆದ ಮಾರಣಾಂತಿಕ ಹಲ್ಲೆ ಈ ಬಾರಿಯ ಕೋಮುಸಂಬಂಧಿ ಘಟನೆಗಳ ಮುನ್ನುಡಿಯೆಂದು ಕರೆಯಬಹುದು. ಕೆ.ಎಫ್.ಡಿ ಎಂಬ ಮುಸ್ಲಿಂ ಮೂಲಭೂತವಾದಿ ಸಂಘಟನೆಗೆ ಸೇರಿದ ಗುಂಪೊಂದು ‘ಮುಸ್ಲಿಂ’ ಮಹಿಳೆಗೆ ಸಹಾಯ ಮಾಡಿದ ಆರೋಪದ ಮೇಲೆ ಪ್ರಸಾದರ ಮೇಲೆ ಹಲ್ಲೆ ನಡೆಸುತ್ತದೆ. ದಕ್ಷಿಣ ಕನ್ನಡದಲ್ಲಿ ಪ್ರತಿಯೊಂದು ಕೋಮುಸಂಬಂಧಿ ಪ್ರಕರಣದಲ್ಲಿರುವಂತೆ ಈ ಪ್ರಕರಣಕ್ಕೂ ಎರಡು ಬೇರೆ ಮುಖಗಳಿವೆ. ಯಾವ ಮುಖವಾಣಿಯ ಮಾತನ್ನು ನೀವು ಕೇಳುತ್ತೀರಿ ಎಂಬುದಷ್ಟೇ ಮುಖ್ಯವಿಲ್ಲ. ಮುಸ್ಲಿಂ ಮಹಿಳೆಗೆ ಸಹಾಯ ಮಾಡಿದ್ದಕ್ಕೆ ವಿನಾಕಾರಣ ಕೆ.ಎಫ್.ಡಿ ಹಲ್ಲೆ ನಡೆಸಿತು ಎಂಬುದು ಒಂದು ದೃಷ್ಟಿಕೋನವಾದರೆ, ಸಹಾಯ ಮಾಡುವ ನೆಪದಲ್ಲಿ ಆ ಮಹಿಳೆಯೊಂದಿಗೆ ಅಕ್ರಮ ಸಂಬಂಧಕ್ಕೆ ಪ್ರಯತ್ನಿಸಿದ ಕಾರಣಕ್ಕೆ ‘ಮುಸ್ಲಿಂ ಸಹೋದರಿಯ’(?!) ಮಾನರಕ್ಷಣೆಯ ಸಲುವಾಗಿ ಕೆ.ಎಫ್.ಡಿ ಹಲ್ಲೆ ನಡೆಸಿತು ಎಂಬುದು ಮತ್ತೊಂದು ದೃಷ್ಟಿಕೋನ. ಮುಸ್ಲಿಂ ಸಹೋದರಿಯ ಮನೆಯ ಮಾಡು ಬಿದ್ದು ಸಂಕಷ್ಟದಲ್ಲಿದ್ದಾಗ ಕೆ.ಎಫ್.ಡಿಗೆ ಮಾನರಕ್ಷಿಸಬೇಕೆಂದೆನಿಸಲಿಲ್ಲ ಎಂಬುದು ದಕ್ಷಿಣ ಕನ್ನಡದಲ್ಲಿ ನಿರ್ಲ್ಯಕ್ಷಿಸಬೇಕಾದ ಸಂಗತಿ. ಹಲ್ಲೆ ನಡೆಸಿದ್ದು ಕೆ.ಎಫ್.ಡಿ ಎಂಬ ಮುಸ್ಲಿಂ ಸಂಘಟನೆ, ಹಲ್ಲೆ ಮಾಡಿದ್ದು ‘ಹಿಂದೂ’ವಿನ ಮೇಲೆ ಎಂಬ ಸಂಗತಿ ದಕ್ಷಿಣ ಕನ್ನಡದ ಸರ್ವ ಹಿಂದೂ ಸಂಘಟನೆಗಳನ್ನೂ ಬಡಿದೆಬ್ಬಿಸಬೇಕಿತ್ತು, ಪ್ರತಿಭಟನೆ, ಪ್ರತಿ – ಪ್ರತಿಭಟನೆಗಳೆಲ್ಲ  ನಡೆದು ಮೂಲಅಪರಾಧವೇ ಮರೆತು ಹೋಗಿ ಎಲ್ಲವೂ ಗೋಜಲುಗೋಜಲಾಗಬೇಕಿತ್ತು – ಬಹುತೇಕ ಪ್ರಕರಣಗಳಲ್ಲಿ ಆಗುತ್ತಿರುವಂತೆ! ಆದರೆ ಹಲ್ಲೆಗೊಳಗಾದ ಪ್ರಸಾದ್ ಕರಾವಳಿ ಅಲೆ ಎಂಬ ಮೂಲಭೂತ ಹಿಂದುತ್ವ ವಿರೋಧಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಹಿಂದೂ ಸಂಘಟನೆಗಳೆಲ್ಲವೂ ಬಹುತೇಕ ಮೌನಕ್ಕೆ ಶರಣಾಗಿದ್ದವು. ಕೆಲವರಂತೂ ‘ನೋಡಿ ನೋಡಿ ಆ ಬ್ಯಾರಿಗಳಿಗೆ ಸಪೋರ್ಟ್ ಮಾಡಿದ್ದಕ್ಕೆ ಹೆಂಗೆ ಅನುಭವಿಸ್ತಿದ್ದಾರೆ!’ ಎಂದು ಹಂಗಿಸುತ್ತಾ ಖುಷಿಪಟ್ಟಿದ್ದೂ ಆಯಿತು.
      
    ಡಿಸೆಂಬರಿನಲ್ಲಿ ಕೇದಿಲಾ ಬಳಿ ಮುಸ್ಲಿಂ ಯುವತಿಯೊಬ್ಬಳೊಡನೆ ಮಾತನಾಡುತ್ತಿದ್ದ ಬಂಟ್ವಾಳದ ಜಯರಾಂ ಪೂಜಾರಿ ಎಂಬುವವರ ಮೇಲೆ ಮುಸ್ಲಿಂ ಮೂಲಭೂತವಾದಿಗಳು ಹಲ್ಲೆ ನಡೆಸಿದರು. ಮತೀಯ ಅಸಹನೆ ಮಿತಿಮೀರಿರುವ ಇಂತಹ ಅನೇಕ ಘಟನೆಗಳು ದಕ್ಷಿಣ ಕನ್ನಡದಲ್ಲಿ ಪದೇ ಪದೇ ಮರುಕಳಿಸುತ್ತಿವೆ. ಹಿಂದೂಗಳು ತಮ್ಮ ಧರ್ಮದಲ್ಲೇ ಮುಸಲ್ಮಾನರು ತಮ್ಮ ಧರ್ಮದಲ್ಲೇ ಸ್ನೇಹ, ಗೆಳೆತನ ಬೆಳೆಸಿಕೊಳ್ಳಬೇಕು ಎಂಬ ಅನಧಿಕೃತ ಫತ್ವಾ ಇಡೀ ದಕ್ಷಿಣ ಕನ್ನಡದಲ್ಲಿ ಜಾರಿಯಲ್ಲಿದೆ. ಅದರಲ್ಲೂ ನೀವು ಪರಧರ್ಮಕ್ಕೆ ಸೇರಿದ ಹುಡುಗಿಯೊಂದಿಗೆ ಸ್ನೇಹ ಪ್ರೀತಿ ಅತ್ಲಾಗಿರಲಿ ದಾರಿಯಲ್ಲಿ ಸುಮ್ಮನೆ ನಿಂತು ಮಾತನಾಡುತ್ತಿದ್ದರೂ ನಾಲ್ಕೈದು ನಿಮಿಷದಲ್ಲಿ ಕೇಸರಿ ಧ್ವಜದವರೋ ಹಸಿರು ಧ್ವಜದವರೋ ನಾಲ್ಕು ತದುಕಿದರೆ ಆಶ್ಚರ್ಯ ಪಡಬೇಕಿಲ್ಲ. ಕೋಮುವಾದಿ ಸಂಘಟನೆಗಳ ಜಾಲವಿಲ್ಲಿ ಅಷ್ಟು ಪ್ರಬಲವಾಗಿದೆ. ತಿಂಗಳಲ್ಲಿ ಇಪ್ಪತ್ತು ದಿನ ಗಡ್ಡಧಾರಿಯಾದ ನಾನು ಹೀಗೆ ಗೆಳೆಯರೊಟ್ಟಿಗೆ ಹರಟುವಾಗ ‘ದಕ್ಷಿಣ ಕನ್ನಡದಲ್ಲಿ ರಸ್ತೆಯಲ್ಲಿ ನನ್ನ ವಿದ್ಯಾರ್ಥಿನಿಯೊಬ್ಬಳು ಸಿಕ್ಕಿ ಮಾತನಾಡುವ ಸಂದರ್ಭ ಬಂದರೆ ಹುಷಾರಾಗಿರಬೇಕು! ಗಡ್ಡ ಬಿಟ್ಟಾಗ ಹಿಂದೂ ವಿದ್ಯಾರ್ಥಿನಿಯೊಟ್ಟಿಗೆ ಮಾತನಾಡಿದರೆ ಹಿಂದೂ ‘ರಕ್ಷಕ’ರಿಂದ, ಗಡ್ಡವಿಲ್ಲದಾಗ ಮುಸ್ಲಿಂ ವಿದ್ಯಾರ್ಥಿನಿಯೊಟ್ಟಿಗೆ ಮಾತನಾಡಿದರೆ ಇಸ್ಲಾಂ ‘ರಕ್ಷಕ’ರಿಂದ ಒದೆ ತಿನ್ನಬೇಕಾಗುತ್ತದೇನೋ’ ಎಂದು ಹೇಳುತ್ತಿದ್ದೆ. ನಾನು ಹೇಳುತ್ತಿದ್ದುದು ಕೊಂಚ ಉತ್ಪ್ರೇಕ್ಷೆ ಎನ್ನಿಸಬಹುದಾದರೂ ಕೆಲವೊಂದು ಘಟನೆಗಳು ‘ಹೀಗೂ ಆಗುವುದಕ್ಕೆ ಸಾಧ್ಯ’ ಎಂಬ ಭಾವನೆಯನ್ನು ಗಟ್ಟಿಗೊಳಿಸುತ್ತದೆ. ನಿನ್ನೆ ಕೂಡ ಬೀಚೊಂದರ ಬಳಿ ಹರಟುತ್ತಿದ್ದ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ಮೇಲೆ ಸುರತ್ಕಲ್ಲಿನಲ್ಲಿ ಹಿಂದೂ ಮೂಲಭೂತವಾದಿಗಳು ಹಲ್ಲೆ ನಡೆಸಿದ್ದಾರೆ. ಹಿಂದೂ ಯುವತಿ ಬಿಜೆಪಿ ಪಕ್ಷದ ವ್ಯಕ್ತಿಯೊಬ್ಬರ ಸಂಬಂಧಿಕಳು ಎಂಬುದು ತಿಳಿಯುತ್ತಿದ್ದಂತೆ ಪ್ರಕರಣ ತಣ್ಣಗಾಗಿದೆ. ‘ನಿನಗೆ ಆ ಧರ್ಮದವನದೇ ಬೇಕಾ? ನಮ್ಮ ಧರ್ಮದವರು ಸಾಕಾಗೋದಿಲ್ಲವಾ?’ ಎಂಬ ಅಸಹ್ಯಕರ ಮಾತುಗಳು ಪುಂಖಾನುಪುಂಖವಾಗಿ ಧರ್ಮರಕ್ಷಕರ ಬಾಯಿಂದ ಹೊರಬೀಳುತ್ತದೆ.
     
     ಹೇಗೆ ಒಂದು ಅಪರಾಧಿ ಘಟನೆ ಕೂಡ ಕೋಮುವಾದಿ ಪಕ್ಷಗಳ, ಸಂಘಟನೆಗಳ ಶಕ್ತಿವರ್ಧಕವಾಗಿ ಬಳಕೆಯಾಗುತ್ತದೆ ಎಂಬುದಕ್ಕೆ ದೇರಳಕಟ್ಟೆ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ಉತ್ತಮ ಉದಾಹರಣೆ. ಎಂಟು ಜನ ನೀಚರು ಕಾಲೇಜು ವಿದ್ಯಾರ್ಥಿನಿ ಮತ್ತಾಕೆಯ ಸ್ನೇಹಿತನನ್ನು ಅಪಹರಿಸುತ್ತಾರೆ. ಬೆದರಿಸಿ ಹೆದರಿಸಿ ಹಿಂಸಿಸಿ ಅವರೀರ್ವರನ್ನು ಬೆತ್ತಲಾಗಿಸಿ ವಿಡಿಯೋ ಮಾಡಿಕೊಂಡು ಹಣಕ್ಕಾಗಿ ಪೀಡಿಸಲಾರಂಭಿಸುತ್ತಾರೆ. ಹಣ ತರಲು ಹೊರಟ ಹುಡುಗಿ ಧೈರ್ಯ ತೋರಿ ಅಖಿಲ ಭಾರತ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕರನ್ನು ದೂರವಾಣಿಯ ಮೂಲಕ ಸಂಪರ್ಕಿಸುತ್ತಾಳೆ. ನರೇಂದ್ರ ನಾಯಕರು ಉಡುಪಿಯಲ್ಲಿದ್ದ ಕಾರಣ ತಮ್ಮ ಪತ್ನಿ ವಕೀಲೆ ಹಾಗು ದಕ್ಷಿಣ ಕನ್ನಡ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಆಶಾ ನಾಯಕರಿಗೆ ವಿಷಯ ತಿಳಿಸಿ ಹುಡುಗಿಗೆ ಸಹಾಯ ಮಾಡುತ್ತಾರೆ. ಹಲ್ಲೆಗೊಳಗಾದ ಆಕೆಯ ಸ್ನೇಹಿತನನ್ನು ಪೋಲೀಸರು ರಕ್ಷಿಸುತ್ತಾರೆ. ನಂತರದಲ್ಲಿ ಎಂಟೂ ಮಂದಿ ಅಪರಾಧಿಗಳನ್ನು ಬಂಧಿಸಲಾಗುತ್ತದೆ. ಒಂದು ಕಟ್ಟಾ ಅಪರಾಧಿ ಕೃತ್ಯ, ಕೃತ್ಯಕ್ಕೆ ಕಾರಣರಾದವರ ಶೀಘ್ರ ಬಂಧನದ ನಂತರವೂ ಈ ಪ್ರಕರಣಕ್ಕೆ ಕೋಮುಬಣ್ಣ ಬಂದಿದ್ದಾದರೂ ಏಕೆ ಎಂಬುದನ್ನು ಗಮನಿಸಿದರೆ ಇಲ್ಲಿನ ರಾಜಕೀಯ ನೇತಾರರ ಆಣತಿಯಂತೆ ಕೋಮುದ್ವೇಷದ ಸೈನಿಕರ ಹೀನ ವರ್ತನೆಗಳ ದರ್ಶನವಾಗುತ್ತದೆ. ಈ ಪ್ರಕರಣದ ಯುವತಿ ಹಿಂದೂ ಧರ್ಮದವಳು, ಅಪಹರಿಸಿದವರು ಮುಸ್ಲಿಂ ಧರ್ಮದವರು, ಯುವತಿಯ ಸ್ನೇಹಿತ ಮುಸ್ಲಿಂ ಧರ್ಮಕ್ಕೆ ಸೇರಿದವನು. ಅಪರಾಧಿ ವರ್ಗದ ಕೃತ್ಯವೊಂದನ್ನು ಇಡೀ ಮುಸ್ಲಿಂ ಸಮುದಾಯದ ತಲೆಗೆ ಕಟ್ಟುವ ಕೆಲಸ ಪ್ರಾರಂಭವಾಯಿತು. ಅಪಹರಣಕಾರರಿಂದ ಹಲ್ಲೆಗೊಳಗಾದ ಮುಸ್ಲಿಂ ಯುವಕ ಹೂಡಿರುವ ಸಂಚಿದು. ಇಡೀ ಮುಸ್ಲಿಂ ಸಮುದಾಯ ಹಿಂದೂ ಹುಡುಗಿಯರನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿವೆ ಎಂದು ಹಿಂದೂ ‘ರಕ್ಷಕರು’ ಬೊಬ್ಬಿರಿದರು. ‘ಎಲ್ಲಿ ಹೋದರು ಬುದ್ಧಿಜೀವಿಗಳು, ಸೆಕ್ಯುಲರ್ಗಳು’ ಎಂದು ಹೀಯಾಳಿಸಿದವರಿಗೆ ಈ ಸಂತ್ರಸ್ತೆಯ ಧರ್ಮದ ಬಗ್ಗೆ ಯೋಚಿಸದೇ ಮಾನವೀಯ ದೃಷ್ಟಿಯಿಂದ ಆಕೆಯ ಸಹಾಯಕ್ಕೆ ಬಂದ ನರೇಂದ್ರ ನಾಯಕ್ ಕೂಡ ವಿಚಾರವಾದಿ ಗುಂಪಿನವರೇ ಎಂದು ತಿಳಿಯದೆ ಹೋಯಿತು. ದೇರಳಕಟ್ಟೆ ಪ್ರಕರಣದಲ್ಲೂ ಪ್ರತಿಭಟನೆ ನಡೆಸಿದ್ದ ಡಿ.ಎಫ್.ವೈ.ಐ ಸಂಘಟನೆಯ ವಿರುದ್ಧವೂ ವ್ಯವಸ್ಥಿತ ಅಪಪ್ರಚಾರ ನಡೆಸಲಾರಂಭಿಸದರು. ಸೌಜನ್ಯ ಅತ್ಯಾಚಾರ ಪ್ರಕರಣದ ಪ್ರತಿಭಟನಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಹೆಸರು ಮಾಡುತ್ತಿದ್ದ ಕಮ್ಯುನಿಷ್ಟ್ ಸಂಘಟನೆಗೆ ಮಸಿ ಬಳಿಯುವ ಪ್ರಯತ್ನ ಕೂಡ ನಡೆಯಿತು. ‘ನೋಡಿ ಹಿಂದೂಗಳು ಅಪರಾಧ ಮಾಡಿದರೆ ಮಾತ್ರ ಅವರು ಪ್ರತಿಭಟನೆ ಮಾಡುತ್ತಾರೆ. ಮುಸ್ಲಿಮರು ಮಾಡಿದರೆ ತೆಪ್ಪಗಿರುತ್ತಾರೆ’ ಎಂದು ಫೇಸ್ ಬುಕ್ ಮೆಸೇಜುಗಳು ಹರಿದಾಡಿದವು. ವಿಟ್ಲದ ಪ್ರಸಾದರ ಮೇಲೆ ನಡೆದ ಹಲ್ಲೆ, ಬಂಟ್ವಾಳದ ಜಯರಾಂ ಪೂಜಾರಿ ಮೇಲೆ ನಡೆದ ಹಲ್ಲೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಹೋರಾಟ ನಡೆಸಿದ ಡಿ.ಎಫ್.ವೈ.ಐ ಮೇಲೆ ಯಾಕೆ ಈ ರೀತಿಯ ಅಪವಾದ ಹೊರಿಸಲು ಹವಣಿಸುತ್ತಿದ್ದರೆಂದರೆ ಆ ಸಂಘಟನೆಯ ಮಂಗಳೂರಿನ ನೇತೃತ್ವ ವಹಿಸಿರುವುದು ಮುನೀರ್ ಕಾಟಿಪಾಳ್ಳ ಎಂಬ ಮುಸ್ಲಿಂ! (ಎರಡು ಮೂರು ಬಾರಿ ಮುನೀರರೊಡನೆ ಒಡನಾಡಿದ್ದೇನೆ. ಅವರು ಮನುಷ್ಯರಾಗಿ ಗೋಚರಿಸಿದರೆ ವಿನಃ ಹಿಂದೂವಾಗೋ ಮುಸ್ಲಿಮನಾಗೋ ಕಾಣಿಸಲಿಲ್ಲ! ಬಹುಶಃ ನನ್ನ ಕಣ್ಣಿನಲ್ಲೆ ದೋಷವಿದೆಯೇನೋ ಬಿಡಿ!!) ಧರ್ಮರಕ್ಷಕರು ಸೃಷ್ಟಿಸುವ ಗೊಂದಲದ ಪರಿ ಹೇಗಿರುತ್ತದೆಯೆಂಬುದಕ್ಕೆ ದೇರಳಕಟ್ಟೆ ಪ್ರಕರಣದಲ್ಲಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ಹಿಂದೂ ಸಂಘಟನೆಗಳ ನೇತೃತ್ವದಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಕೈಗೆ ಕೊಟ್ಟಿದ್ದ ಬ್ಯಾನರ್ರುಗಳೇ ಉದಾಹರಣೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರೆ ಒಪ್ಪಬಹುದು, ಅದರ ಜೊತೆಜೊತೆಗೆ ‘ಸನಾತನ ಹಿಂದೂ ಧರ್ಮ ಕೀ ಜೈ’ ‘Long live Sanatana Hindu dharma’ ಎಂಬ ಹೇಳಿಕೆಗಳು ಈ ಪ್ರತಿಭಟನೆಯ ಆಯೋಜಕರ ನೈಜ ಉದ್ದೇಶವನ್ನು ಮುಚ್ಚುಮರೆಯಿಲ್ಲದಂತೆ ತೋರ್ಪಡಿಸುತ್ತದೆ. ಈ ಎಲ್ಲ ಗೊಂದಲಗಳನ್ನು ನೋಡಿ ಅಚ್ಚರಿಗೊಳಗಾಗಿದ್ದು ಸಂತ್ರಸ್ತರಿಗೆ ಸಹಾಯ ಮಾಡಿದ ನರೇಂದ್ರ ನಾಯಕ್! ಪತ್ರಿಕಾಗೋಷ್ಟಿ ಕರೆದು ಅಂದು ನಡೆದ ಘಟನೆಗಳನ್ನೆಲ್ಲಾ ಹೇಳಿ ‘ಪ್ರಕರಣದ ಬಗ್ಗೆ ಏನೂ ಅರಿಯದವರು ತಮಗೆ ತೋಚಿದಂತೆ ಗುಲ್ಲೆಬ್ಬಿಸಿರುವುದು ಖಂಡನೀಯ, ಮಾತ್ರವಲ್ಲದೆ ಬುದ್ಧಿಜೀವಿಗಳೆಂದು ಹೇಳಿಕೊಳ್ಳುವವರು ಈಗೆಲ್ಲಿದ್ದಾರೆ ಎಂದು ಪ್ರಶ್ನಿಸುತ್ತಿರುವವರಿಗೆ ಉತ್ತರವಾಗಿ, ಬುದ್ಧಿಜೀವಿಗಳೇ ಅಂದು ಆ ಇಬ್ಬರು ಸಂತ್ರಸ್ತರ ರಕ್ಷಣೆ ನಡೆಸಿರುವುದು’ ಎಂದು ತಿಳಿಸಿದರು. ಅಪಹರಣಕಾರರಿಂದ ಹಲ್ಲೆಗೊಳಗಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಜರ್ಝರಿತವಾದ ಸ್ಥಿತಿಯಲ್ಲಿದ್ದ ಯುವಕನನ್ನು ಕೇವಲ ಧರ್ಮದ ಕಾರಣದಿಂದ ಆರೋಪಿಗಳ ಜೊತೆಗಾರ ಎಂದು ಆಧಾರರಹಿತ ಆರೋಪಕ್ಕೂ ದಂಪತಿಗಳು ಬೇಸರಿಸಿ ಆ ಯುವಕನ ಸಹಾಯದಿಂದಲೇ ಈ ಪ್ರಕರಣದ ಆರೋಪಿಗಳು ಬಂಧಿಸಲ್ಪಟ್ಟಿದ್ದಾರೆ, ಹುಡುಗಿ ಅಪಾಯದಲ್ಲಿದ್ದಾಗ ಆಕೆಯನ್ನು ರಕ್ಷಿಸಿದ್ದು ಕೂಡ ಒಂದು ಮುಸ್ಲಿಂ ಕುಟುಂಬ ಎಂಬ ಸಂಗತಿಯನ್ನು ತಿಳಿಸಿದ್ದಾರೆ. ಇಷ್ಟೆಲ್ಲವಾದರೂ ಇನ್ನೂ ಈ ಪ್ರಕರಣದ ಧರ್ಮವಾಸನೆ ಹೋಗುತ್ತಿಲ್ಲ. ಈ ಧರ್ಮ’ರಕ್ಷಕರಿಗೆ’ ಅನುವಾಗುವಂತೆ ಮೊಹಮ್ಮದ್ ಯಾಸಿರ್ ಎಂಬ ವಿಕೃತನ ಮತ್ತೊಂದು ಪ್ರಕರಣವಾಗಿದೆ. ತನ್ನ ಗೆಳತಿಯೊಟ್ಟಿಗೆ ಕಳೆದ ಖಾಸಗಿ ಕ್ಷಣಗಳನ್ನು ಫೇಸ್ ಬುಕ್ಕಿಗೆ ಹಾಕಿ ಮತ್ತಷ್ಟು ಕೋಮುಗಲಭೆಗೆ ಕಾರಣಕರ್ತನಾಗಿದ್ದಾನೆ. ಮೊಬೈಲು ಇಂಟರ್ನೆಟ್ಟು ಬಂದ ನಂತರ ಇಂತಹ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆಯಾದರೂ ಈ ಪ್ರಕರಣ ಪ್ರಮುಖವೆನ್ನಿಸುವುದಕ್ಕೆ ದಕ್ಷಿಣ ಕನ್ನಡ ಹಿಂದೂ ಹುಡುಗಿ ಮುಸ್ಲಿಂ ಹುಡುಗ ಎಂಬ ಕಾರಣಗಳು ಸಾಕು. ದೆಹಲಿಯ ನಿರ್ಭಯಾ ಪ್ರಕರಣದಲ್ಲಿ, ಇದೇ ದಕ್ಷಿಣ ಕನ್ನಡದ ಸೈನೈಡ್ ಕಿಲ್ಲರ್ ಪ್ರಕರಣದಲ್ಲಿ, ಇಂಟರ್ನೆಟ್ಟಿಗೆ ಸೋರಿಕೆಯಾದ ಅನೇಕ ಅಶ್ಲೀಲ ವೀಡಿಯೋದ ಪ್ರಕರಣದಲ್ಲಿ ಮುಖ್ಯವಾಗಿ ಪರಿಗಣಿಸಲ್ಪಡದ ಧರ್ಮ ಇಂದ್ಯಾಕೆ ದಕ್ಷಿಣ ಕನ್ನಡದಲ್ಲಿ ಇಷ್ಟರ ಮಟ್ಟಿಗೆ ಪ್ರಚುರಗೊಳ್ಳುತ್ತಿವೆ?
       
   ಈ ಘಟನೆಗಳ ಮಧ್ಯೆಯೇ ಕಲ್ಲಡ್ಕ ಪ್ರಭಾಕರ ಭಟ್ಟ ತಮ್ಮ ಎಂದಿನ ವಿಷಕಾರಿ ಭಾಷಣ ಮಾಡಿದ್ದಾರೆ. ಮೂರು ವರುಷದ ಮುಂಚೆ ಸುಳ್ಯದಲ್ಲಿ ಅವರ ಭಾಷಣ ಕೇಳುವ ಸುಯೋಗ ಒದಗಿತ್ತು. ಪತ್ರಿಕೆಯನ್ನು ದಿನನಿತ್ಯ ಓದುವವರಿಗೆ ಒಂದು ವಿಷಯವಂತೂ ವೇದ್ಯವಾಗುತ್ತದೆ, ಕೋಮುಗಲಭೆ ನಡೆದು ಎರಡು ದಿನದ ನಂತರ ಅಥವಾ ಕೋಮುಗಲಭೆ ನಡೆಯುವ ಎರಡು ದಿನದ ಮುಂಚೆ ಕಲ್ಲಡ್ಕ ಪ್ರಭಾಕರ ಭಟ್ಟರ ಭಾಷಣವೇರ್ಪಟ್ಟಿರುತ್ತದೆ. ಇದೇನು ನನ್ನ ಕಣ್ಣಿಗೆ ಮಾತ್ರ ಕಾಣಿಸಿದ ಕಾಕತಾಳೀಯ ಸಂಗತಿಯೋ ಅಥವಾ ನಿಜಕ್ಕೂ ಎರಡಕ್ಕೂ ನಂಟುಂಟೋ ಅಭ್ಯಸಿಸಬೇಕು! ದಕ್ಷಿಣ ಕನ್ನಡದ ಭಾಷಣಕಾರರಲ್ಲಿ ಒಂಚೂರೂ ಬದಲಾಗದ ವ್ಯಕ್ತಿಯೆಂದರೆ ಕಲ್ಲಡ್ಕ ಪ್ರಭಾಕರ ಭಟ್ಟರೇ ಇರಬೇಕು! ಆಗಲೂ ‘ಲವ್ ಜಿಹಾದ್’ ‘ಹಿಂದೂ ಹೆಣ್ಣುಮಕ್ಕಳೇ ಎಚ್ಚರ’ ಎಂದು ಬೊಬ್ಬರಿಯುತ್ತಿದ್ದರು ಈಗಲೂ ಅದೇ ಮಾತುಗಳನ್ನಾಡುತ್ತಿದ್ದಾರೆ. ಐದು ವರುಷ ಇವರ ಮಾತನ್ನು ಚಾಚೂ ತಪ್ಪದೇ ಪಾಲಿಸುವ ಬಿಜೆಪಿ ಸರಕಾರವಿತ್ತು, ಆಗಲಾದರೂ ‘ಲವ್ ಜಿಹಾದ್’ ನಿಜಕ್ಕೂ ಎಷ್ಟು ಪ್ರಕರಣಗಳಲ್ಲಿ ನಡೆದಿದೆ ಎಂಬ ತನಿಖೆ ನಡೆಸಿ ಧರ್ಮಪ್ರಸರಣವನ್ನು ಪ್ರೇಮದ ನಾಟಕವಾಡುವ ಮೂಲಕ ನಡೆಸುವ ಹೀನ ವ್ಯಕ್ತಿಗಳು ನಿಜಕ್ಕೂ ಇದ್ದರೆ ಅವರಿಗೆ ಶಿಕ್ಷೆಯಾಗುವಂತೆ ಶ್ರಮಿಸಬೇಕಿತ್ತು. ಆ ರೀತಿ ಮಾಡಿಬಿಟ್ಟರೆ ಮುಂದೆ ಓಟು ಕೇಳುವುದಕ್ಕಿರುವ ಸಂಗತಿಯಾವುದು ಎಂಬ ಚಿಂತೆಯಾಗಿರಬೇಕು. ದಕ್ಷಿಣ ಕನ್ನಡದಲ್ಲಿ ಸುಳ್ಯದಲ್ಲಿ ಬಿಟ್ಟು ಮತ್ತೆಲ್ಲೆಡೆಯೂ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಾಣಲಿಲ್ಲ. ಬಿಜೆಪಿಯ ದುರಾಡಳಿತ ಸ್ಥಳೀಯವಾಗಿ ಬಿಜೆಪಿಯ ಕಟ್ಟರ್ ಹಿಂದುತ್ವಕ್ಕೂ ಕಾಂಗ್ರೆಸ್ಸಿನ ಮೃದು ಹಿಂದುತ್ವಕ್ಕೂ ಮುಸ್ಲಿಂ ತುಚ್ಛೀಕರಣಕ್ಕೂ ಅಂಥಹ ವ್ಯತ್ಯಾಸ ಕಾಣದ ಮತದಾರ ಬಿಜೆಪಿಯನ್ನು ತಿರಸ್ಕರಿಸಿದ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿ ಪಟ್ಟಕ್ಕೇರಿಸುವುದಕ್ಕೆ ಹಾತೊರೆಯುತ್ತಿರುವ ಬಿಜೆಪಿಗೆ ಮುಂಚೆ ತಾನು ಪ್ರಬಲವಾಗಿದ್ದ ಪ್ರದೇಶಗಳಲ್ಲೆಲ್ಲ ಗೆಲುವು ಕಾಣಲೇಬೇಕಾದ ಅವಶ್ಯಕತೆಯಿದೆ. ಈ ರಾಜಕೀಯ ಲೆಕ್ಕಾಚಾರಗಳೂ ಕೂಡ ದಕ್ಷಿಣ ಕನ್ನಡದಲ್ಲಿನ ಇತ್ತೀಚಿನ ಕೋಮು ಸಂಬಂಧಿ ಬೆಳವಣಿಗೆಗಳ ಹಿಂದಿರುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗದು. ಕೋಮು ಸೌಹಾರ್ದತೆ ಕರಗಿ ವಿವಿಧ ಧರ್ಮಗಳ ಮನಗಳ ನಡುವೆ ಅಸಹನೆ ಅನುಮಾನ ಮೂಡಿ ದೂರವಾದಂತೆಲ್ಲ ಕೋಮುಮೂಲಭೂತವಾದದ ಮೇಲೆ ಕಟ್ಟಿರುವ ಸಂಘಟನೆಗಳು ಬಲಗೊಳ್ಳುತ್ತಲೇ ಸಾಗುತ್ತವೆ. ಹಿಂದೂ ಮೂಲಭೂತವಾದ ಮುಸ್ಲಿಂ ಮೂಲಭೂತವಾದವನ್ನು ಮುಸ್ಲಿಂ ಮೂಲಭೂತವಾದ ಹಿಂದೂ ಮೂಲಭೂತವಾದವನ್ನು ಪರಸ್ಪರ ಬೆಳೆಸುವುದು ಸುಳ್ಳಲ್ಲ.
       
   ದಕ್ಷಿಣ ಕನ್ನಡ ದಿನವಹಿ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಇತರ ಅನೇಕಾನೇಕ ಗುಣಗಳಿವೆ. ಆ ಗುಣಗಳು ಮುಂಚೂಣಿಗೆ ಬಂದು ಕೋಮು ಸಂಬಂಧಿ ಗಲಭೆಗಳಲ್ಲಿ ದಕ್ಷಿಣ ಕನ್ನಡದ ಹೆಸರು ಪುನಃ ಪುನಃ ಕಾಣಿಸುವುದು ತಪ್ಪಲಿ. ಆದರಾ ದಿನಗಳು ಹತ್ತಿರದಲ್ಲಿಲ್ಲ, ದೂರದಲ್ಲಾದರೂ?

ಪ್ರಜಾಸಮರಕ್ಕೆ ಬರೆದ ಲೇಖನ

No comments:

Post a Comment