Dec 10, 2013

ಕಲ್ಪನಾತ್ಮಕ ಭ್ರಮೆಗಳೆಲ್ಲ ವಾಸ್ತವವಾಗುವ ವಿಷಮ ಘಳಿಗೆ...



ಡಾ ಅಶೋಕ್ ಕೆ ಆರ್
‘Twenty thousand leagues under sea’ – ನಾನು ಓದಿದ ಪ್ರಥಮ ಪಠ್ಯೇತರ ಪುಸ್ತಕ. ಜೂಲಿಸ್ ವರ್ನೆ ರಚನೆಯ ಈ ಫ್ರೆಂಚ್ ಕೃತಿಯಲ್ಲಿ ನಾಟಿಲಸ್ ಎಂಬ ಬೃಹತ್ ಗಾತ್ರದ ಸಮುದ್ರದ ಎಲ್ಲ ಭಾಗಗಳಲ್ಲೂ ಚಲಿಸುವ ಸಾಮರ್ಥ್ಯವಿರುವ ಸಬ್ ಮೆರೀನ್ ಇದೆ; ಸಬ್ ಮೆರೀನ್ ಮೂಲಕ ಸಮುದ್ರದಾಳದ ಚಿತ್ರ ವಿಚಿತ್ರ ವಿಸ್ಮಯಕಾರಿ ಜೀವಿಗಳ ಪರಿಚಯ ಮಾಡಿಸುತ್ತಾನೆ ಲೇಖಕ. ಪುಸ್ತಕ ಓದಿ ಮುಗಿಸುವಷ್ಟರಲ್ಲಿ ಖುದ್ದು ನಾವೇ ಸಮುದ್ರದೊಳಗೆ ಈಜಾಡಿ ಬಂದಂತಹ ಅನುಭವವಾಗುತ್ತದೆ. ಪುಸ್ತಕವನ್ನು ಓದಿ ಮುಗಿಸಿದ ಎಷ್ಟೋ ದಿನಗಳ ಮೇಲೆ ಆ ಇಡೀ ಪುಸ್ತಕ ಕಲ್ಪನೆಯಿಂದ ಮೂಡಿದ್ದು ಎಂಬ ಸತ್ಯ ತಿಳಿಯಿತು!! 1870ರಲ್ಲಿ ಜೂಲಿಸ್ ವರ್ನೆ ಆ ಪುಸ್ತಕ ರಚಿಸಿದಾಗ ‘ನಾಟಿಲಸ್’ ಸಾಮರ್ಥ್ಯದ ಸಬ್ ಮೆರೀನ್ ಇರಲೇ ಇಲ್ಲ! ಪುಸ್ತಕದಲ್ಲಿದ್ದ ಕಲ್ಪಿತ ತಾಂತ್ರಿಕ ವಿವರಗಳನ್ನು ಕಾಲಾಂತರದಲ್ಲಿ ನಿಜಕ್ಕೂ ಅಳವಡಿಸಿಕೊಳ್ಳಲಾಯಿತು! ನ್ಯೂಕ್ಲಿಯರ್ ಇಂಧನ ಮೂಲದಿಂದ ಚಲಿಸಬಲ್ಲ ತನ್ನ ಪ್ರಥಮ ಸಬ್ ಮೆರೀನಿಗೆ ಅಮೆರಿಕ ‘ನಾಟಿಲಸ್’ ಎಂದೇ ನಾಮಕರಣ ಮಾಡಿತು! ಇಷ್ಟೇ ಅಲ್ಲದೆ ಲೇಖಕನ ಕಲ್ಪನೆಯಲ್ಲಿ ಸೃಷ್ಟಿಯಾದ ಅನೇಕ ಜೀವಿಗಳನ್ನು ಹೋಲುವಂತಹ ಸಮುದ್ರಜೀವಿಗಳನ್ನೂ ನಂತರದಲ್ಲಿ ಪತ್ತೆ ಹಚ್ಚಲಾಯಿತು!

‘ನಾಟಿಲಸ್’ ಘಟನೆ ಕಲಾವಿದನ ಸ್ಪಷ್ಟ ಕಲ್ಪನೆ ಹೇಗೆ ವಿಜ್ಞಾನಕ್ಕೆ ಸ್ಪೂರ್ತಿಯಾಗಿ ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾಗಿ ಸಹಕರಿಸಿತು ಎಂಬುದರ ಬಗ್ಗೆಯಾದರೆ ನೇತ್ಯಾತ್ಮಕ ಕಲ್ಪನೆಗಳೂ ಸಹಿತ ವಾಸ್ತವವಾಗಿ ಬಿಡುವ ಅನೇಕ ಉದಾಹರಣೆಗಳು ಸಿಗುತ್ತವೆ. ಅಮೆರಿಕದ ವರ್ಲ್ಟ್ ಟ್ರೇಡ್ ಸೆಂಟರಿನ ಮೇಲೆ ಭಯೋತ್ಪಾದಕರು ನಡೆಸಿದ ವೈಮಾನಿಕ ದಾಳಿಯನ್ನು ಹೋಲುವಂತಹುದೇ ಘಟನೆ ಹಿಂದೆ ಪ್ರಕಟವಾಗಿದ್ದ ಒಂದು ಕಾದಂಬರಿಯಲ್ಲಿತ್ತಂತೆ. ಪುಸ್ತಕ, ಸಿನಿಮಾಗಳ ದೃಶ್ಯಗಳಿಂದ ಪ್ರಭಾವಿತರಾಗಿ ಅದೇ ರೀತಿಯ ಅಪರಾಧಗಳನ್ನು ಮಾಡಲೆತ್ನಿಸುವವರ ಬಗ್ಗೆಯೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಸ್ಪೈಡರ್ ಮ್ಯಾನ್, ಶಕ್ತಿಮಾನನನ್ನು ಅನುಕರಿಸಲು ಹೋಗಿ ಮೃತಪಟ್ಟ ಮಕ್ಕಳ ಬಗ್ಗೆಯೂ ಓದಿದ್ದೇವೆ. ಕಲ್ಪನೆಗಳಲ್ಲಿ ಪಡಿಮೂಡಿದ ಪಾತ್ರಗಳು ನಿಜವ್ಯಕ್ತಿಗಳ ಮೇಲೆ ಇಷ್ಟೊಂದು ಪ್ರಭಾವ ಬೀರಬಲ್ಲವೇ? ಇವತ್ತಿನ ಕಲ್ಪನೆಗಳು ಮುಂದಿನ ದಿನಗಳ ಭವಿಷ್ಯ ಸೂಚಕವೂ ಆಗಬಲ್ಲದೇ?

ಇದು ರಿಯಾಲಿಟಿ ಶೋಗಳ ಕಾಲ. ಹಳ್ಳಿಯವರನ್ನು ಪೇಟೆಗೆ ಓಡಿಸಿ, ಪೇಟೆಯವರನ್ನು ಹಳ್ಳಿಗೆ ಕಳಿಸಿ ಚಿತ್ರವಿಚಿತ್ರ ಪ್ರಯೋಗಗಳ ಮೂಲಕ ಜನರನ್ನು ರಂಜಿಸಬಲ್ಲವೆಂಬ ಅಹಂಕಾರಿಗಳ ಕಾಲ. ಆಂಗ್ಲದಲ್ಲಿ Hunter Games ಮತ್ತು Death Race ಎಂಬೆರಡು ಚಿತ್ರಗಳಿವೆ. ರಿಯಾಲಿಟಿ ಶೋಗಳು ಮುಂದೊಂದು ದಿನ ತಳೆಯಬಹುದಾದ ಅಪಾಯಕಾರಿ ನಿಲುವನ್ನು ವಿವರಿಸುವಂತಹ ಚಿತ್ರಗಳವು. ಎರಡೂ ಚಿತ್ರಗಳಲ್ಲಿ ಒಂದಷ್ಟು ಅಮಾಯಕರನ್ನು ಬಲವಂತದಿಂದ ಚಾತುರ್ಯದಿಂದ ಪ್ರಾಣಕ್ಕೆ ಎರವಾಗುವಂತಹ ಆಟಗಳಿಗೆ ಮಾನಸಿಕವಾಗಿ ಸಿದ್ಧ ಮಾಡಲಾಗುತ್ತದೆ. ಮೊದಮೊದಲು ಇಚ್ಛೆ ಇರದ ಸ್ಪರ್ಧಿಗಳು ಕೂಡ ಪ್ರಾಣಹರಣದ ಆಟಗಳಿಗೆ ಮನಸೋಲುವಂತೆ ಮಾಡಿ ಎದುರಾಳಿಯ ಜೀವ ತೆಗೆಯಲು ಉತ್ಸುಕರನ್ನಾಗಿ ಮಾಡಿಬಿಡುತ್ತವೆ ಇಂಥ ರಿಯಾಲಿಟಿ ಶೋಗಳನ್ನು ನಡೆಸುವ ಸಿಬ್ಬಂದಿ ವರ್ಗ. ಆಟದ ಪ್ರಾರಂಭದಿಂದ ಅಂತ್ಯದವರೆಗೂ ಎದುರಾಳಿಗಳನ್ನು ನಾನಾ ರೀತಿಯ ಮೂಲಕ ಸಾಯಿಸುತ್ತಾ ಅವರ ಹೆಣದ ರಾಶಿಯ ಮೇಲೆ ತೆವಳುತ್ತ ಗೆಲುವಿನ ಶಿಖರವೇರುವುದು ಪ್ರತಿ ಅಭ್ಯರ್ಥಿಯ ಗುರಿಯಾಗಿಬಿಡುತ್ತದೆ! ಇಂಥ ಮಾನವತೆ ವಿರೋಧಿ ಆಟವನ್ನೂ ನೋಡುವವರಿದ್ದಾರೆಯೇ? ಚಿತ್ರದಲ್ಲಿ ಈ ಕಾರ್ಯಕ್ರಮಕ್ಕೆ ಅತ್ಯಂತ ಹೆಚ್ಚಿನ ವೀಕ್ಷಕ ವರ್ಗ ಸೃಷ್ಟಿಯಾಗುತ್ತೆ. ಹತ್ಯೆಯ ಸಂಕೀರ್ಣತೆ ಹೆಚ್ಚಿದಷ್ಟೂ ನೋಡುಗರ ಸಂಖೈಯಲ್ಲೂ ಹೆಚ್ಚಳ! ‘ಛೇ ಛೇ.... ಅದು ಬರೀ ಸಿನಿಮಾ ಕಣ್ರೀ. ನಿಜ ಜೀವನದಲ್ಲಿ ಇಂಥವೆಲ್ಲ ನಡೆಯಲು ಸಾಧ್ಯವೇ?’ ಎಂದು ಪ್ರಶ್ನಿಸುತ್ತೀರೇನೋ?!

ದೂರದರ್ಶನವೊಂದೇ ಕನ್ನಡ ವಾಹಿನಿಯಾಗಿದ್ದಾಗ ಮತ್ತು ಖಾಸಗಿ ವಾಹಿನಿಗಳು ಶುರುವಾದ ಹೊಸತರಲ್ಲೂ ಕೆಲವೊಂದು ‘ಒನ್ ಮಿನಿಟ್’ ನಂತಹ ನಿರುಪದ್ರವಿ ರಿಯಾಲಿಟಿ ಶೋಗಳಿದ್ದವು; ನಮ್ಮ ಶಾಲಾ ಕಾಲೇಜುಗಳಲ್ಲಿ ನಡೆಸುವ ಮನರಂಜನಾತ್ಮಕ ಸ್ಪರ್ಧೆಗಳ ರೂಪದ ರಿಯಾಲಿಟಿ ಶೋಗಳವು. ಆ ಕಾಲಘಟ್ಟದಲ್ಲಿ ಕಾಡಿನ ಮಕ್ಕಳನ್ನು ಪೇಟೆಗೆ ಓಡಿಸಿ ಪೇಟೆಯವರ ಹುಚ್ಚಾಟದ ಮೂಲಕ ಕಾಡಿನವರನ್ನು ಪೇಚಾಡಿಸುವುದೇ ಮುಂದೊಂದು ದಿನ ರಂಜನೀಯ ಸರಕಾಗುತ್ತದೆ ಎಂದಿದ್ದರೆ ನಾವದನ್ನು ನಂಬುತ್ತಿದ್ದೆವೇ? ನಕ್ಕು ಸುಮ್ಮನಾಗುತ್ತಿದ್ದೆವಷ್ಟೇ. ಒಂದು ದಶಕದ ಅವಧಿಯಲ್ಲಿ ಅಂತಹ ಹತ್ತಾರು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಿವೆ. ಭಾವನೆಗಳ ಜತೆ ಚೆಲ್ಲಾಟವಾಡುವ, ಒಬ್ಬರಿಗೆ ನೀಡುವ ಮಾನಸಿಕ ಹಿಂಸೆಯನ್ನೇ ಮನರಂಜನೆಯಂತೆ ಬಿಂಬಿಸುವ ಅಸಂಖ್ಯ ಕಾರ್ಯಕ್ರಮಗಳಿವೆ. ದುರದೃಷ್ಟವಶಾತ್ ಇಂತಹ ಕಾರ್ಯಕ್ರಮಗಳು ನಗರ – ಪಟ್ಟಣ – ಹಳ್ಳಿಗಳಲ್ಲೆಲ್ಲ ದಿನೇ ದಿನೇ ಟಿ.ಆರ್.ಪಿ ಏರಿಸಿಕೊಳ್ಳುತ್ತಲೇ ಸಾಗಿವೆ. ಒಂದು ಹಿಂಸಾ ಕಾರ್ಯಕ್ರಮದ ಟಿ.ಆರ್.ಪಿ ಮತ್ತಷ್ಟು ಮಗದಷ್ಟು ಹಿಂಸಾ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆಯುತ್ತಿವೆ. ದಶಕದ ಹಿಂದೆ ಅಸಾಧ್ಯವೆಂದೇ ತೋರುತ್ತಿದ್ದ ಕಾರ್ಯಕ್ರಮಗಳು ಇಂದು ವಾಸ್ತವವಾಗಿವೆ. ಹಿಂಸೆಯ ಕೀರ್ತಿ ಶಿಖರವೆಂಬಂತೆ ಇಂಥ ರಿಯಾಲಿಟಿ ಶೋಗಳ ಮೂಲಕವೇ ಪ್ರಸಿದ್ಧಿಗೆ ಬಂದ ರಾಜೇಶ್ ಎಂಬ ಕಾಡು ಹುಡುಗನ ಮರಣವಾಗಿದೆ. ಅದು ಆತ್ಮಹತ್ಯೆಯೋ ಅಜಾಗರೂಕತೆಯಿಂದ ಸಂಭವಿಸಿದ ಸಾವೋ ನಿರ್ಧರಿತವಾಗಿಲ್ಲ. ಕಾಡಿನಲ್ಲಿದ್ದವನನ್ನು ಹೀನ ಅಭಿರುಚಿಯ ಕಾರ್ಯಕ್ರಮವೊಂದಕ್ಕೆ ಕರೆತಂದ ಕಿರುತೆರೆಯವರು, ಕಿರುತೆರೆಯಲ್ಲಿ ಆ ಕಾರ್ಯಕ್ರಮವನ್ನು ನೋಡಿ ನೋಡಿ ಪ್ರೋತ್ಸಾಹಿಸಿದ ಜನತೆ, ಆ ಪ್ರೋತ್ಸಾಹದಿಂದ ಖ್ಯಾತಿ ಪಡೆದ ರಾಜೇಶನನ್ನು ಚಲನಚಿತ್ರ ನಾಯಕನನ್ನಾಗಿಸಿ ಅವನ ಖ್ಯಾತಿಯ ಮೂಲಕ ಲಾಭ ಪಡೆಯಲೆತ್ನಿಸಿದ ಚಿತ್ರತಂಡದವರೆಲ್ಲರೂ ರಾಜೇಶನ ಸಾವಿಗೆ ಹೊಣೆಗಾರರು. ಪರೋಕ್ಷವಾಗಿ ರಿಯಾಲಿಟಿ ಶೋ ಒಬ್ಬನ ಪ್ರಾಣಹರಣ ಮಾಡಿದೆ; ವಾಹಿನಿಗಳ ಟಿ.ಆರ್.ಪಿ ಹುಚ್ಚು, ಜನರಲ್ಲಿನ ಅಭಿರುಚಿಯ ಅಧಃಪತನ ಮುಂದೊಂದು ದಿನ Hunter Games ಮತ್ತು Death Race ತರಹದ ರಿಯಾಲಿಟಿ ಶೋಗಳ ನಿರ್ಮಾಣಕ್ಕೆ ಕಾರಣವಾಗುವುದಿಲ್ಲವೆಂದು ಹೇಗೆ ನಂಬುವುದು? ಇಂದು ಪರೋಕ್ಷ ಹತ್ಯೆಯನ್ನು ಸಹಜವೆಂಬಂತೆ ಒಪ್ಪಿಕೊಂಡಿದ್ದೀವಿ. ಮುಂದೆ ಪ್ರತ್ಯಕ್ಷ ಹತ್ಯೆಯನ್ನು ಸಹಜವೆಂಬಂತೆ ಸ್ವೀಕರಿಸಿಯೇ ತೀರುತ್ತೀವಿ.

ಯಾಕೆ ಜನರ – ತಯಾರಕರ ಮತ್ತು ನೋಡುಗರ – ಮನಸ್ಥಿತಿ ಈ ರೀತಿಯಾಗಿ ಮಾರ್ಪಡುತ್ತಿದೆ? ದೇಶದಲ್ಲಾಗುತ್ತಿರುವ ಹೊಸತೊಂದು ‘ಸಂಸ್ಕೃತಿಯ ಜನನ’ ಈ ಮಾರ್ಪಾಟಿಗೆ ಕಾರಣ. ಇದು ಹಿಂದು – ಕ್ರೈಸ್ತ – ಜೈನ – ಮುಸಲ್ಮಾನ – ಬೌದ್ಧ ಸಂಸ್ಕೃತಿಯಲ್ಲ, ರಾಷ್ಟ್ರೀಯತೆಯ ಸಂಸ್ಕೃತಿಯಲ್ಲ, ತತ್ವ ಸಿದ್ಧಾಂತಗಳ ಸಂಸ್ಕೃತಿಯಲ್ಲ; ಜಾಗತೀಕರಣದ ಫಲವಾಗಿ ದೇಶವಾಸಿಗಳ ಮನೆ ಮನಗಳಲ್ಲಿ ನಿಧಾನ ವಿಷದಂತೆ ಏರಲಾರಂಭಿಸಿರುವ ‘ಸರಕು ಸಂಸ್ಕೃತಿ’. ಜಾಗತೀಕರಣ ಮತ್ತದರ ಅಸ್ತಿವಾರದಂತಿರುವ ಬಂಡವಾಳಶಾಹಿಯ ಮೊದಲ ಗುರಿ ಉತ್ಪಾದಕ ವಸ್ತುಗಳನ್ನು ಜನರು ಕೊಳ್ಳುವಂತೆ ಮಾಡುವುದು. ಇಂತಹ ವಸ್ತುವಿಲ್ಲದಿದ್ದರೆ ನೀವು ಬದುಕಿದ್ದೂ ಸತ್ತಂತೆ ಎಂಬ ಭಾವನೆಯನ್ನು ಲಭ್ಯವಿರುವ ಎಲ್ಲ ವಾಹಿನಿಗಳ ಮುಖಾಂತರ ಅತಿ ಖರ್ಚಿನ ಜಾಹೀರಾತುಗಳ ಮೂಲಕ ಜನತೆಯಲ್ಲಿ ಬಿತ್ತುವುದು. ಅವಶ್ಯವಲ್ಲದ ಐಷಾರಾಮಿ ವಸ್ತುಗಳು, ಅನಗತ್ಯ ವಸ್ತುಗಳು ಅನಿವಾರ್ಯವೆಂಬಂತಹ ಭಾವನೆ ಕೊಳ್ಳುಗನ ಮನದಲ್ಲಿ ಮೂಡಿದ ದಿನ ಬಂಡವಾಳಶಾಹಿಯ ಜಾಗತೀಕರಣದ ಮೊದಲ ಗುರಿ ಅಂತಿಮ ಹಂತ ತಲುಪಿದಂತೆ. ಒಮ್ಮೆ ಉಪಯೋಗಿಸಿದ ವಸ್ತುಗಳನ್ನು ಮತ್ತೆ ಕೊಳ್ಳದಿದ್ದರೆ? ಅದು ಸಾಧ್ಯವಾಗದಿರಲೆಂಬಂತೆ ಮಾಧ್ಯಮಗಳನ್ನು ಉಪಯೋಗಿಸಿಕೊಳ್ಳುತ್ತಾರೆ, ‘ಮಾಲುಗಳ’ ಸೃಷ್ಟಿಯಾಗುತ್ತದೆ, ಬೆಲೆ ಹೆಚ್ಚಿಸಿ ‘ಡಿಸ್ಕೌಂಟು’ಗಳನ್ನು ಘೋಷಿಸಲಾಗುತ್ತದೆ, ಝಗಮಗ ಬೆಳಕಿನಡಿಯಲ್ಲಿ ಸರಕು ಹೊಳೆಯುವಂತೆ ಮಾಡಲಾಗುತ್ತದೆ. ಮೊದಲ ದಿನಗಳಲ್ಲಿ ‘ಇದು ನಿಜವಾಗಿಯೂ ನನಗೆ ಬೇಕಾ?’ ಎಂಬ ಪ್ರಶ್ನೆಯಾದರೂ ಮೂಡಿರುತ್ತದೆ ಗ್ರಾಹಕನ ಮನದಲ್ಲಿ. ದಿನಗಳು ಕಳೆದಂತೆ ಆ ಪ್ರಶ್ನೆಗಳೆಲ್ಲಾ ಮನದ ಮೂಲೆ ಸೇರಿ ಚಿಂತಿಸುವ ಯೋಚಿಸುವ ಮನಸ್ಥಿತಿಯೇ ನಾಶವಾಗಿ ‘ಕೊಳ್ಳುಬಾಕ ಸಂಸ್ಕೃತಿ’ ಸ್ಥಾಪಿತವಾಗುತ್ತದೆ. ಈ ‘ಕೊಳ್ಳುಬಾಕ ಸಂಸ್ಕೃತಿ’ಯ ನಂತರದ ರೂಪ ‘ಸರಕು ಸಂಸ್ಕೃತಿ’! ಭೌತಿಕ ವಸ್ತುಗಳಷ್ಟೇ ಅಲ್ಲದೆ ವ್ಯಕ್ತಿ, ವ್ಯಕ್ತಿಯ ವ್ಯಕ್ತಿತ್ವ ಭಾವನೆಗಳೆಲ್ಲ ಇಲ್ಲಿ ಬಿಕರಿಗಿರುವ, ಅತಿ ಹೆಚ್ಚು ಬಿಕರಿಯಾಗುವ ‘ಸರಕು’. ಇಂಥದೊಂದು ‘ಸರಕು ಸಂಸ್ಕೃತಿ’ ಭಾರತದಲ್ಲೀಗ ಬಾಲ್ಯಾವಸ್ಥೆಯಲ್ಲಿದೆ.

ಭಾರತದ ವಾಹಿನಿಗಳ, ಜನರ, ಸಮಾಜದ ಮುಂದಿನ ದಿನಗಳು ಹೇಗಿರಬಹುದು? ದೇಶದಲ್ಲಿ ಧಾರ್ಮಿಕ ಮೂಲಭೂತವಾದದ ಹೆಚ್ಚಳದ ಜೊತೆಜೊತೆಗೆ ಅಮೇರಿಕದ ಹಿಂಬಾಲಕನಾಗುವ ಮನಸ್ಥಿತಿ ಹೆಚ್ಚುತ್ತಿದೆ. ಅಮೆರಿಕದಲ್ಲಿ ಮೂವತ್ತು ನಲವತ್ತು ವರುಷಗಳ ಹಿಂದೆ ನಡೆದಂತಹ, ಸಿನಿಮಾ – ಸಾಕ್ಷ್ಯಚಿತ್ರಗಳಲ್ಲಿ ದಾಖಲಾಗಿರುವಂತಹ ಸಂಗತಿಗಳು ಭಾರತದಲ್ಲಿ ಈಗ ಜರುಗುತ್ತಿವೆ ಎಂದರೆ ಅದರಲ್ಲಿ ಉತ್ರ್ಪೇಕ್ಷೆಯೇನಿಲ್ಲ. 1976ರಲ್ಲಿ ತೆರೆಕಂಡ The Network ಎಂಬ ಹಾಲಿವುಡ್ ಸಿನಿಮಾ ಅವತ್ತಿನ ಅಮೆರಿಕಾ ಸಮಾಜದಲ್ಲಿದ್ದ ಖಾಸಗಿ ಸುದ್ದಿ ವಾಹಿನಿಗಳು ಹೇಗೆ ಸುದ್ದಿಯನ್ನು ತಮ್ಮ ಅನುಕೂಲಕ್ಕೆ ತಿರುಚುತ್ತಿದ್ದವು, ಸುದ್ದಿಯ ಪ್ರಸಾರಕ್ಕೆ ಸೀಮಿತವಾಗದೆ ಸುದ್ದಿಯ ಸೃಷ್ಟಿಕರ್ತರೂ ಆಗಿಬಿಡುತ್ತಿದ್ದ ಅವಾಂತರದ ಬಗ್ಗೆ ತಿಳಿಸುತ್ತದೆ ಚಿತ್ರ. ಭಾರತದಲ್ಲಿ ಆಗ ಖಾಸಗಿ ಸುದ್ದಿ ವಾಹಿನಿಗಳು ಇರಲೇ ಇಲ್ಲವೇನೋ. ಆ ಚಿತ್ರ ನೋಡಿ ನಮ್ಮ ಇಂದಿನ ಸುದ್ದಿ ವಾಹಿನಿಗಳನ್ನು ನೋಡಿದರೆ ಆ ಚಿತ್ರಕ್ಕೂ ನಮ್ಮ ವಾಹಿನಿಗಳಿಗೂ ಇರುವ ಅಸಂಖ್ಯ ಹೋಲಿಕೆಗಳು ಗೋಚರಿಸುತ್ತವೆ. ಆ ದಿನಮಾನಗಳಲ್ಲಿ ಅಮೆರಿಕದ ಸೂಪರ್ ಮಾರ್ಕೆಟ್ಟುಗಳ ಬಗೆಗಿನ ಸಾಕ್ಷ್ಯಚಿತ್ರಗಳನ್ನು ಗಮನಿಸಿದರೆ ನಮ್ಮ ದೇಶದ ಇಂದಿನ ಕಥೆ-ವ್ಯಥೆಗಳನ್ನು ಅಮೆರಿಕದಲ್ಲಿ ಚಿತ್ರಿಸಿದ್ದಾರೆ ಎನ್ನಿಸುತ್ತದೆ! ಇವುಗಳೊಟ್ಟಿಗೆ ಕಲ್ಪನಾತ್ಮಕ ಬೀಭತ್ಸ ಚಿತ್ರಗಳು ಮುಂದೊಂದು ದಿನ ವಾಸ್ತವದ ರೂಪದಲ್ಲಿ, ಮನರಂಜನೆಯ ಪೋಷಾಕಿನಲ್ಲಿ ನಮ್ಮನ್ನು ‘ರಂಜಿಸಲು’ ಬರಬಹುದು. ಈ ಬೆಳವಣಿಗೆಗಳಿಗೆಲ್ಲ ಪರಿಹಾರವೇ ಇಲ್ಲವೇ? ವಾಹಿನಿಗಳ ಮೇಲಿನ ಹತೋಟಿ, ಕಾನೂನು ಪ್ರಕಾರ ತಡೆಗಟ್ಟುವುದು ತತ್ ಕ್ಷಣಕ್ಕೆ ಪರಿಹಾರವೆಂಬಂತೆ ಗೋಚರಿಸುತ್ತೆ. ಕಾನೂನಿನ ಜೊತೆಜೊತೆಗೆ ಚಿಂತಿಸುಸ, ಯೋಚಿಸುವ ಪ್ರಶ್ನಿಸುವ ಸ್ವಸ್ಥ ಮನಸ್ಸುಗಳು ಹೆಚ್ಚುವಂತೆ ಮಾಡುವ ಕೆಲಸವೂ ಸಾಗಬೇಕು. ಆದರೆ ಇವೆಲ್ಲಾ ಆಗುತ್ತದಾ?

ಮಾಡರ್ನ್ ಟೈಮ್ಸ್ ಸಿನಿಮಾದ ಮೊದಲ ದೃಶ್ಯದಲ್ಲಿ ಒಂದು ದೊಡ್ಡ ಕುರಿ ಮಂದೆ ತೋರಿಸಿ ನಿಧಾನಕ್ಕೆ ಆ ಕುರಿ ಮಂದೆಯ ಜಾಗದಲ್ಲಿ ಮನುಷ್ಯರನ್ನು ತೋರಿಸುತ್ತಾನೆ ಚಾರ್ಲಿ ಚಾಪ್ಲಿನ್. ನಮ್ಮಲ್ಲಿನ ಬಹುತೇಕರು ಪ್ರಶ್ನಿಸುವ ಮನೋಭಾವವನ್ನೇ ಮರೆತು ಮಾಡರ್ನ್ ಟೈಮ್ಸಿನ ಕುರಿಮಂದೆಯಾಗುತ್ತಿದ್ದೆವೆಯೇ?
 ಪ್ರಜಾ ಸಮರಕ್ಕೆ ಬರೆದ ಲೇಖನ

No comments:

Post a Comment