Dec 1, 2013

6-5=2 ಚಿತ್ರ ವಿಮರ್ಶೆ

ಡಾ ಅಶೋಕ್ ಕೆ ಆರ್

ಎರಡು ವಾರದ ಮುಂಚೆ 6-5=2 ಎಂಬ ವಿಚಿತ್ರ ಹೆಸರಿನ ಚಿತ್ರದ ಪೋಸ್ಟರನ್ನು ಪತ್ರಿಕೆಗಳಲ್ಲಿ ನೋಡಿ ನಕ್ಕುಬಿಟ್ಟಿದ್ದೆ! ‘ಏನ್ ಕರ್ಮಾರೀ ಏನೇನೋ ಹೆಸರಿಟ್ಟು ಫಿಲ್ಮ್ ತೆಗೀತಾರೆ’ ಎಂದು ನಗಾಡಿದ್ದೆ! ನಾಲ್ಕು ದಿನದ ಹಿಂದೆ ಮತ್ತೆ ಅದೇ ಚಿತ್ರದ ಜಾಹೀರಾತನ್ನು ಪತ್ರಿಕೆಯಲ್ಲಿ ನೋಡಿದಾಗ ಗಮನಿಸಿದೆ, ಸ್ವರ್ಣಲತಾ ಪ್ರೊಡಕ್ಷನ್ಸ್ ಮತ್ತು A video shot by Late Ramesh ಎಂಬೆರಡು ವಾಕ್ಯಗಳನ್ನು ಬಿಟ್ಟರೆ ಜಾಹೀರಾತಿನಲ್ಲಿ ಮತ್ತೇನೂ ಇರಲಿಲ್ಲ! ಅಲಲಾ! ಇದೇನೋ ಹೊಸ ಗಿಮಿಕ್ ಮಾಡ್ತಿದ್ದಾರಲ್ಲ ಈ ಫಿಲಮ್ನೋರು ಎಂಬ ಸಣ್ಣ ಕುತೂಹಲ ಹುಟ್ಟಿತು. ನಿರ್ದೇಶಕರ ಹೆಸರಿಲ್ಲ, ತಂತ್ರಜ್ಞರ ಹೆಸರಿಲ್ಲ, ಕಲಾವಿದರ ಹೆಸರಿಲ್ಲ, ನೈಜ ವೀಡೀಯೋವೊಂದು ದೊರಕಿದ್ದು ಅದನ್ನೇ ಚಿತ್ರಮಂದಿರದಲ್ಲಿ ಪ್ರದರ್ಶಿಸುತ್ತಿದ್ದೇವೆ ಎಂಬ ಸಾಲುಗಳು ಬೇರೆ. ಮ್… ಇವರು ಮಾಡಿರೋ ಗಿಮಿಕ್ಕಿಗಾದರೂ ಚಿತ್ರವನ್ನೊಮ್ಮೆ ನೋಡಬೇಕು ಎಂದು ನಿರ್ಧರಿಸಿದೆ.

ಎರಡು ಘಂಟೆಯ 6-5=2 ಚಿತ್ರ ಪ್ರೀತಿ ಪ್ರೇಮದ ಚಿತ್ರಗಳ ಗುಂಗಿನಲ್ಲಿ ಕಳೆದುಹೋದ ಪ್ರೇಕ್ಷಕರನ್ನು ಖಂಡಿತ ಹೊಡೆದೆಬ್ಬಿಸುತ್ತದೆ! ಬಹುಶಃ ಉಪೇಂದ್ರ ನಿರ್ದೇಶನದ ಶ್ ಚಿತ್ರದ ನಂತರ ಕನ್ನಡದಲ್ಲಿ ಬಂದ ಪರಿಣಾಮಕಾರಿ ‘ದೆವ್ವದ’ ಚಿತ್ರ ಎಂದರೆ ತಪ್ಪಲ್ಲ. ಕೊನೇಪಕ್ಷ ಶ್  ಸಿನಿಮಾದಲ್ಲೂ ಪ್ರೀತಿ ಪ್ರೇಮ ಕಾಮ ಹಾಡು ಫೈಟುಗಳಿದ್ದವು. ಈ ಚಿತ್ರದಲ್ಲಿ ಅದೂ ಇಲ್ಲ. ಆರು ಮಂದಿ ಟ್ರೆಕ್ಕಿಂಗಿಗೆಂದು ಹೋಗುತ್ತಾರೆ, ಕಾಡಿನ ಪರಿಸರ ಗಮನಿಸಿದರೆ ಗುಂಡ್ಯ, ಬಿಸಿಲೆ, ಕುಮಾರಪರ್ವತವಿರಬೇಕು. ಆ ಆರು ಜನರಲ್ಲಿ ಒಬ್ಬ ಸಿನಿಮಾದಲ್ಲಿ ಕ್ಯಾಮೆರಾಮೆನ್ ಆಗಬೇಕೆಂಬ ಕನಸನ್ನೊತ್ತವನು. ತನ್ನ ಗುರುವಿನಿಂದ ಒಂದು ಕ್ಯಾಮೆರಾ ತರುತ್ತಾನೆ ಟ್ರೆಕ್ಕಿಂಗಿನ ಪ್ರತಿ ಘಟ್ಟವನ್ನು ಚಿತ್ರಿಸಬೇಕೆಂಬ ಆಸೆಯೊಂದಿಗೆ. ಇಡೀ ಚಿತ್ರ ಆ ಕ್ಯಾಮೆರಾದಲ್ಲಿ ಚಿತ್ರಿತವಾದ ‘ನೈಜ’ ದೃಶ್ಯಗಳಷ್ಟೇ! ಟ್ರೆಕ್ಕಿಂಗಿನ ಸಮಯದಲ್ಲಿ ನಡೆದ ತಮಾಷೆ ಸಿಟ್ಟು ಸೆಡವು ದುರ್ಘಟನೆಗಳು ಅಲ್ಲಿನ ರಮ್ಯ ಪರಿಸರವೆಲ್ಲ ಲೇಟ್ ರಮೇಶನ ಕ್ಯಾಮೆರಾದಲ್ಲಿ ಹಸಿಹಸಿಯಾಗಿ ಬಂಧಿಯಾಗಿದೆ. ಚಾರಣಕ್ಕೆಂದು ಬಂದವರ ಮೇಲೆ ಆ ಪರಿಸರದಲ್ಲಿನ ಕ್ರುದ್ಧ ಶಕ್ತಿಗಳು ಆಕ್ರಮಣ ಮಾಡುತ್ತವೆ. ಬದುಕುವರ್ಯಾರು, ಸಾಯುವವರ್ಯಾರು, ಕಾಣೆಯಾಗುವವರ್ಯಾರು ಎಂಬುದೇ ಚಿತ್ರದ ಹೂರಣ. ಕ್ರುದ್ಧ ಶಕ್ತಿಗಳು ಆಕ್ರಮಣ ಮಾಡಲು ಕಾರಣವೇನು ಎಂಬುದರ ವಿವರವಿಲ್ಲ, ಮನದಲ್ಲಿ ಮೂಡುವ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವ ಯಾವ ವಿವರಗಳೂ ಚಿತ್ರದಲ್ಲಿಲ್ಲ! ಯಾಕೆಂದರೆ ಸ್ವರ್ಣಲತಾ ಪ್ರೊಡಕ್ಷನ್ನಿನ ಜಾಹೀರಾತು ತಿಳಿಸುವಂತೆ ಇದು ಚಲನಚಿತ್ರವಲ್ಲ! ನೈಜ ವಿಡಿಯೋ ಅಷ್ಟೇ!!

ಈ ಚಿತ್ರದ ನಿರ್ದೇಶಕರು (ಅಶೋಕ್ ಎಂದು ಒಂದು ವೆಬ್ ಪುಟದಲ್ಲಿ ಓದಿದ ನೆನಪು) ಚಿತ್ರ ಮುಗಿದ ನಂತರವೂ ಇದು ನೈಜ ವಿಡೀಯೋವೆಂಬ ಭಾವನೆಯೇ ಉಳಿಯಲೆಂಬಂತೆ ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ. ಕೊನೆಗೆ ತಮ್ಮ, ತಮ್ಮ ತಂತ್ರಜ್ಞರ, ಕಲಾವಿದರ ಹೆಸರುಗಳ್ಯಾವುವನ್ನೂ ಚಿತ್ರದ ಆರಂಭದಲ್ಲಾಗಲೀ ಅಂತ್ಯದಲ್ಲಾಗಲೀ ತೋರಿಸೇ ಇಲ್ಲ! ಕೆಟ್ಟ ಚಿತ್ರಗಳಲ್ಲೂ ತಮ್ಮ ಹೆಸರು ಮಿಂಚುತ್ತಲೇ ಇರಬೇಕು ಎಂದು ಬಯಸುವ ಅನೇಕರ ನಡುವೆ ಈ ಸಿನಿಮಾದವರ ಸಿನಿಮಾ ಪ್ರೀತಿಗೆ ಮೆಚ್ಚುಗೆ ಸೂಚಿಸಲೇ ಬೇಕು. ಇಲ್ಲಿ ಗೆಲ್ಲುವುದು ಸಿನಿಮಾ, ಅದರ ಚಿತ್ರಕಥೆ, ಛಾಯಾಗ್ರಹಣ, ಅದ್ಭುತ ಧ್ವನಿಗ್ರಹಣ. ತಿಗಣೆ, ಜೊಲ್ಲು ಪ್ರಕಾಶ, ಬೋಟಿ ರಮೇಶ, ನವೀನ, ದೀಪಾ, ಸೌಮ್ಯ ಪಾತ್ರದಲ್ಲಿ ಪ್ರತಿಯೊಬ್ಬರು ನೈಜತೆಗೆ ಹತ್ತಿರವಾಗಿ ಅಭಿನಯಿಸಿದ್ದಾರೆ. ಜೊಲ್ಲು ಪ್ರಕಾಶ ಮತ್ತು ತಿಗಣೆಯ ಪಾತ್ರಧಾರಿಗಳು ಅತಿ ಹೆಚ್ಚು ಹತ್ತಿರವಾಗುತ್ತಾರೆ, ಮುಂದೆ ಅನೇಕ ಚಿತ್ರಗಳಲ್ಲಿ ಇವರನ್ನು ಕಾಣಲಾರಂಭಿಸಿದರೆ ಅಚ್ಚರಿಯೇನಿಲ್ಲ. ಭಯಹುಟ್ಟಿಸುವ ದೃಶ್ಯಗಳು, ಬೆಚ್ಚಿಬೀಳಿಸುವ ಅನೇಕ ದೃಶ್ಯಗಳಿವೆ ಚಿತ್ರದಲ್ಲಿ. ‘ಆssss’ ಎಂದು ಪ್ರೇಕ್ಷಕರು ಅಲ್ಲಲ್ಲಿ ಗಾಬರಿಯಿಂದ ಕಿರುಚುವುದು ಚಿತ್ರದ ಪ್ರಯತ್ನಕ್ಕೆ ಸಂದ ಜಯ. ಇದರ ಜೊತೆಯಲ್ಲಿ ನಗಿಸುವ ‘ಹಾರರ್ ದೃಶ್ಯಗಳೂ’ ಇವೆ! ಮುಖ್ಯವಾಗಿ ದೆವ್ವ/ಮೋಹಿನಿ ರಾಗವಾಗಿ ಇವರ ಹೆಸರು ಹಿಡಿದು ಕೂಗುವುದು ಮತ್ತು ಕೊನೆಯಲ್ಲಿ ಮೂಡಿಬರುವ ದೆವ್ವ! ಇವೆರಡು ದೃಶ್ಯಗಳ ಜಾಗದಲ್ಲಿ ಮತ್ತಷ್ಟು ಭೀತಿ ಹುಟ್ಟಿಸುವ ಧ್ವನಿಗ್ರಹಣಕ್ಕೆ ಒತ್ತು ಕೊಟ್ಟಿದ್ದರೆ ಸಿನಿಮಾ ನೈಜ ಘಟನೆಯೆಂದು ಭಾವಿಸುವವರ ಸಂಖೈ ಹೆಚ್ಚುತ್ತಿತ್ತು! ಅದೇನೇ ಇರಲಿ ಈ ಚಿತ್ರ ನೋಡಿದವರ್ಯಾರಾದರೂ ಚಾರಣಕ್ಕೆ ಹೋದರೆ ಈ ಚಿತ್ರದ ದೃಶ್ಯಗಳು ನೆನಪಾಗುವುದು ಖಂಡಿತ!

ಈ ಚಿತ್ರ ಸಂಪೂರ್ಣವಾಗಿ ಕನ್ನಡದದ್ದೆಂದು ಹೇಳುವುದು ಕಷ್ಟ. 1999ರಲ್ಲಿ ತೆರೆಕಂಡ ಆಂಗ್ಲ ಚಿತ್ರ Blair Witch Hunt ಚಿತ್ರದಿಂದ ಸ್ಪೂರ್ತಿಗೊಂಡಿರುವ ಚಿತ್ರವಿದು. ಚಿತ್ರದಲ್ಲಿ ಸಂಪೂರ್ಣ ಕನ್ನಡದ ಸೊಗಡು, ಕರ್ನಾಟಕದ ಚಾರಣಪ್ರಿಯ ಸ್ಥಳಗಳು, ಮೂಲ ಚಿತ್ರಕ್ಕಿಂತ ಭಿನ್ನವಾದ ಬಹುತೇಕ ದೃಶ್ಯಗಳು ಇರುವುದರಿಂದ ರಿಮೇಕ್ ಎನ್ನಲಾಗದೇನೋ?! ಒಟ್ಟಿನಲ್ಲಿ ಹೆಚ್ಚಿನ ಪ್ರಚಾರವೂ ಇಲ್ಲದೆ ಯಾವುದೇ ‘ಸ್ಟಾರ್ ಕಾಸ್ಟ್’ ಇಲ್ಲದ ಈ ಚಿತ್ರ ಬಹಳಷ್ಟು ಜನರನ್ನು ಚಿತ್ರಮಂದಿರದೆಡೆಗೆ ಸೆಳೆಯುತ್ತಿದೆ. ಅಷ್ಟರಮಟ್ಟಿಗೆ ಚಿತ್ರ ಯಶ ಕಂಡಿದೆ. ‘ಸ್ಪೂರ್ತಿ’ ಪಡೆಯುವುದನ್ನೂ ನಿಲ್ಲಿಸಿ ಮತ್ತಷ್ಟು ಹೊಸ ಚಿಂತನೆಯ ಸಿನಿಮಾಗಳು ಈ ಚಿತ್ರತಂಡದಿಂದ ಮೂಡಿ ಬರಲಿ.

ಅಂದಹಾಗೆ ಏನಿದು 6-5=2 ಅಂದರೆ? ನನಗಂತೂ ತಿಳಿಯಿತು, ಸಿನಿಮಾ ನೋಡಿ ನೀವೂ ಅರಿತುಕೊಳ್ಳಿ……

No comments:

Post a Comment