Aug 31, 2013

“ಆಹಾರ ಭದ್ರ”ವಾಗಲು ಭ್ರಷ್ಟರ ಹಸಿವು ನಿಲ್ಲಬೇಕು!ಡಾ ಅಶೋಕ್ ಕೆ ಆರ್
ಪ್ರತಿಯೊಬ್ಬ ಪ್ರಜೆಗೂ ಆಹಾರವೆಂಬುದು ಹಕ್ಕಾಗಬೇಕೆಂಬ ಸದುದ್ದೇಶದಿಂದ ಆಹಾರ ಭದ್ರತಾ ಮಸೂದೆ ಕೊನೆಗೂ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದ ಮೇಲೆ ಜಾರಿಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಯಾವ ಪಕ್ಷದ ವಿರೋಧವೂ ಇಲ್ಲದೆ (ಸಂಸದರ ವೇತನ ಹೆಚ್ಚಳಗಳನ್ನು ಹೊರತುಪಡಿಸಿ) ಜಾರಿಯಾದ ಮಸೂದೆಯಿದು. ಕೆಲವೊಂದು ರಾಜಕೀಯ ಪಕ್ಷಗಳ ವಿರೋಧವಿದ್ದಿದ್ದೂ ಸತ್ಯವಾದರೂ ಆ ವಿರೋಧ ಮಸೂದೆಯಲ್ಲಿನ ಕೆಲವು ಅಂಶಗಳ ಮಾರ್ಪಾಟಿಗೆ ಮತ್ತು ಕೆಲ ಉತ್ತಮಪಡಿಸುವಿಕೆಗಾಗಿಯ ಬದಲಾವಣೆಗೆ ಹೊರತು ಸಂಪೂರ್ಣ ಮಸೂದೆಯ ವಿರುದ್ಧವಲ್ಲ ಎಂಬುದು ಗಮನಾರ್ಹ.
ಆಹಾರ ಭದ್ರತಾ ಮಸೂದೆ ಜಾರಿಯಾದ ಮಾರನೆಯ ದಿನವೇ ರುಪಾಯಿ ಹಿಂದೆಂದೂ ಕಾಣದಷ್ಟು ಅಪಮೌಲ್ಯಕ್ಕೊಳಗಾಗಿದೆ. ರುಪಾಯಿಯ ಅಪಮೌಲ್ಯಕ್ಕೆ ಇನ್ನಿತರ ಜಾಗತಿಕ ಕಾರಣಗಳ ಜೊತೆಗೆ ಆಹಾರ ಭದ್ರತಾ ಮಸೂದೆಯಿಂದ ಉಂಟಾಗುವ ವಿತ್ತೀಯ ಕೊರತೆಯ ಭೀತಿಯೂ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಎಂದಿನಂತೆ ಬಡವರಿಗೆ ಮತ್ತು ಕಡುಬಡವರಿಗೆ ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ನೀಡುವ ಸವಲತ್ತುಗಳನ್ನು ವಿರೋಧಿಸುವ ಒಂದು ವರ್ಗದ ಜನತೆ “ನಮ್ಮ ತೆರಿಗೆಯಿಂದ ಬಡವರಿಗೆ ಇಷ್ಟೆಲ್ಲ ನೀಡುವುದು ಯಾವ ನ್ಯಾಯ? ಕಡಿಮೆ ಬೆಲೆಗೆ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಸರಕಾರಗಳು ಜನರನ್ನು ಮತ್ತಷ್ಟು ಸೋಮಾರಿಗಳನ್ನಾಗಿ ಮಾಡಿ ದೈನೇಸಿ ಸ್ಥಿತಿಗೆ ತಳ್ಳುತ್ತಿದ್ದಾರೆ” ಎಂದು ಆರೋಪ ಮಾಡುತ್ತಿದ್ದಾರೆ.


ಏನಿದು ಆಹಾರ ಭದ್ರತಾ ಮಸೂದೆ?

ಸ್ವಾತಂತ್ರ್ಯ ಬಂದು ಅರವತ್ತಾರು ವರುಷಗಳು ಕಳೆದರೂ ದೇಶದಲ್ಲಿ ನಲವತ್ತೈದು ಪ್ರತಿಶತಕ್ಕೂ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿರುವುದು ಏಷ್ಯಾ ಖಂಡದ ಸೂಪರ್ ಪವರ್ ಪಟ್ಟಕ್ಕೇರಬಯಸಿರುವ ಭಾರತದ ಉದ್ದಿಶ್ಯವನ್ನೇ ಅಣಕಿಸುವಂಥದು. ಅಪೌಷ್ಟಿಕತೆಗೆ ಹೆಚ್ಚುತ್ತಲೇ ಸಾಗಿರುವ ಜನಸಂಖೈ, ಹಣದುಬ್ಬರ, ಸರಕಾರದ ನಿಷ್ಕ್ರಿಯತೆಗಳು ಎಷ್ಟು ಕಾರಣವೋ ಉತ್ಪತ್ತಿಯಾಗುವ ಆಹಾರ ಪದಾರ್ಥಗಳ ಅಸಮರ್ಪಕ ವಿತರಣೆಯೂ ಅಷ್ಟೇ ಪ್ರಮುಖ ಕಾರಣ. ಒಂದೆಡೆ ಗೋದಾಮುಗಳಲ್ಲಿ ಕೊಳೆಯುವ ಟನ್ನುಗಟ್ಟಲೇ ದವಸ ಧಾನ್ಯ ಮತ್ತೊಂದೆಡೆ ತಿನ್ನಲು ಆಹಾರ ಪದಾರ್ಥವಿಲ್ಲದೆ ಹಸಿವಿನಿಂದ ಕಂಗೆಡುವ ಜನತೆ, ಇವೆರಡೂ ವೈರುಧ್ಯಗಳು ಜೊತೆಜೊತೆಯಲ್ಲೇ ಸಾಗುತ್ತಿದೆ. ನಮ್ಮ ದೇಶದ ಜನಸಂಖೈಗೆ ಬೇಕಿರುವಷ್ಟು ದವಸ ಧಾನ್ಯವನ್ನು ಬೆಳೆಯುತ್ತೇವಾದರೂ ಪ್ರಪಂಚದ ಬಡಜನರ ಸಂಖೈಯಲ್ಲಿ ಇಪ್ಪತ್ತೈದು ಪ್ರತಿಶತಃ ಜನರು ಭಾರತದಲ್ಲೇ ಇದ್ದಾರೆ. ಮರಣಕ್ಕೆ ಅದರಲ್ಲೂ ಮಕ್ಕಳ ಅಕಾಲಿಕ ಮರಣಕ್ಕೆ ಹಸಿವನ್ನು ಮತ್ತು ನಿರಂತರವಾದ ಹಸಿವು ಸೃಷ್ಟಿಸುವ ಅಪೌಷ್ಟಿಕತೆ, ಆ ಅಪೌಷ್ಟಿಕತೆ ಸೃಷ್ಟಿಸುವ ನಾನಾ ರೀತಿಯ ಖಾಯಿಲೆಗಳು ಕಾರಣವಾಗುತ್ತಿರುವುದನ್ನು ಅಲ್ಲಗೆಳೆಯಲಾಗದು. 79 ದೇಶಗಳ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಅರವತ್ತೈದು! ಶ್ರೀಲಂಕಾ ಮೂವತ್ತೇಳನೇ ಸ್ಥಾನದಲ್ಲಿ ಮತ್ತು ಪಾಕಿಸ್ಥಾನ ಐವತ್ತೇಳನೇ ಸ್ಥಾನದಲ್ಲಿದ್ದು ಭಾರತದ ಹಸಿವನ್ನು ಹಂಗಿಸುತ್ತಿದೆ. ಆಹಾರದ ಅಲಭ್ಯತೆಯಿಂದ ಹಸಿವಿನಿಂದ ಕಂಗೆಟ್ಟಿರುವ ಜನತೆಗೆ ಕೊಂಚ ಮಟ್ಟಿಗಾದರೂ ನೆಮ್ಮದಿ ನೀಡುವ ಉದ್ದೇಶ ಈ ಆಹಾರ ಭದ್ರತಾ ಮಸೂದೆಯದ್ದು.

ಆಹಾರ ಭದ್ರತಾ ಮಸೂದೆಯಲ್ಲಿ ದೇಶದ ಅರವತ್ತೇಳು ಪ್ರತಿಶತಃ ಜನರನ್ನು ಹಸಿವಿನಿಂದ ಹೊರತರುವ ಉದ್ದೇಶವಿದೆ. ಗ್ರಾಮೀಣ ಭಾರತದ 75% ಜನರು ಮತ್ತು ನಗರ ಭಾಗದ 50% ಜನರು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳಿಗೆ ಐದು ಕೆಜಿ ಅಕ್ಕಿ(ಕೆಜಿಗೆ ಮೂರು ರುಪಾಯಿಯಂತೆ), ಐದು ಕೆಜಿ ಗೋದಿ(ಕೆ.ಜಿ.ಗೆ ಎರಡು ರುಪಾಯಿಯಂತೆ) ಮತ್ತು ಐದು ಕೆಜಿ ಬೇಳೆ – ಕಾಳು (ಕೆ.ಜಿ.ಗೆ ಒಂದು ರುಪಾಯಿಯಂತೆ) ನೀಡುವ ಉದ್ದೇಶವಿದೆ. ಈ ಉದ್ದೇಶವೀಡೇರಲು ವರುಷಕ್ಕೆ 62 ಮಿಲಿಯನ್ ಟನ್ನಿನಷ್ಟು ಆಹಾರ ಪದಾರ್ಥ ಅಗತ್ಯವಿದೆ. ರೈತರಿಂದ ಖರೀದಿಸಿ ಈ ಆಹಾರ ಭದ್ರತಾ ಮಸೂದೆಯ ಮೂಲಕ ಹಂಚಬೇಕಿರುವುದರಿಂದ ಸರಕಾರಕ್ಕೆ ವರುಷಕ್ಕೆ 1,30,000 ಕೋಟಿ ರುಪಾಯಿಯ ಅವಶ್ಯಕತೆಯಿದೆಂದು ಅಂದಾಜಿಸಲಾಗಿದೆ. ವರುಷದಿಂದ ವರುಷಕ್ಕೆ ಈ ಹಣದ ಬಾಬ್ತು ಹೆಚ್ಚುತ್ತದೆಯೆಂಬುದೂ ಸತ್ಯ. ಈಗಾಗಲೇ ಕಡುಬಡವರಿಗಾಗಿ ಜಾರಿಯಲ್ಲಿರುವ ಅಂತ್ಯೋದಯ ಅನ್ನ ಯೋಜನೆಯಡಿಯಲ್ಲಿ ಆಹಾರ ಧಾನ್ಯ ಪಡೆಯುತ್ತಿರುವ ಕುಟುಂಬಗಳಿಗೆ ತಿಂಗಳಿಗೆ 35 ಕೆ.ಜಿಯಷ್ಟು ಆಹಾರ ಸಾಮಗ್ರಿ ಪೂರೈಕೆ. ಮತ್ತು ಇದೇ ಯೋಜನೆಯಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಮತ್ತು ಹೆರಿಗೆಯಾದ ಆರು ತಿಂಗಳವರೆಗೆ ಸ್ಥಳೀಯ ಅಂಗನವಾಡಿಯ ಮುಖಾಂತರ ಉಚಿತ ಆಹಾರ ನೀಡುವಿಕೆ. ಆಹಾರ ಭದ್ರತೆಯ ಜೊತೆಗೆ ಸ್ತ್ರೀ ಶಕ್ತಿ ಸಂವರ್ಧನೆಗೂ ಗಮನಹರಿಸಿರುವ ಮಸೂದೆ ಪಡಿತರ ಚೀಟಿ ವಿತರಿಸುವಾಗ ಕುಟುಂಬದ ಹಿರಿಯ ಹೆಣ್ಣುಮಗಳಿಗೆ ಯಜಮಾನಿಕೆಯ ಸ್ಥಾನಮಾನ ನೀಡುತ್ತದೆ. ವಾಸ್ತವದಲ್ಲಿ ಬಹಳಷ್ಟು ಮನೆಗಳಲ್ಲಿ ಈ ಯಜಮಾನಿಕೆ ಇಲ್ಲವಾದರೂ ಕೊನೇ ಪಕ್ಷ ಇನ್ನು ಮುಂದೆ ಪಡಿತರ ಚೀಟಿಯಲ್ಲಾದರೂ ಹೆಣ್ಣುಮಗಳೇ ಮನೆಯ ಯಜಮಾನಿ!

ಈ ಮಸೂದೆಗೆ ವಿರೋಧವೇಕೆ?

ಬಹುತೇಕ ವಿರೋಧ ಪಕ್ಷಗಳು ಈ ಮಸೂದೆಯನ್ನು ಒಪ್ಪಿಕೊಂಡಿವೆ, ಕೆಲವೊಂದು ಪಕ್ಷಗಳು ವಿರೋಧ ವ್ಯಕ್ತಪಡಿಸಿವೆಯಾದರೂ ಅವುಗಳ ವಿರೋಧ ಈ ಮಸೂದೆಯನ್ನು ಮತ್ತಷ್ಟು ಮಾರ್ಪಡಿಸಿ ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದಷ್ಟೇ. ತಮಿಳುನಾಡು, ಛತ್ತೀಸ್ ಗಡ, ರಾಜಸ್ತಾನ, ಒಡಿಸ್ಸಾ, ಆಂಧ್ರ, ಹಿಮಾಚಲ ಪ್ರದೇಶ, ಮತ್ತು ಇತ್ತೀಚೆಗೆ ಕರ್ನಾಟಕದಲ್ಲೂ ಕೂಡ ಈ ರೀತಿಯ ಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಹಾಗಾಗಿ ಮತ್ತಷ್ಟು ಉತ್ತಮವಾದ ಮಸೂದೆಯನ್ನು ಮಂಡಿಸಬೇಕಾಗಿತ್ತೆನ್ನುವುದು ಬಹಳಷ್ಟು ವಿರೋಧ ಪಕ್ಷಗಳ ಆಗ್ರಹ. ಈ ಮಸೂದೆಯಡಿ ಯಾರಿಗೆ ಆಹಾರ ಪದಾರ್ಥಗಳು ತಲುಪಬೇಕು ಎಂಬುದನ್ನು ನಿರ್ಧರಿಸುವ ಹಕ್ಕನ್ನು ರಾಜ್ಯಗಳಿಗೇ ನೀಡಲಾಗಿದೆ, ಇದು ಕೂಡ ಸರ್ವಸಮ್ಮತವಾಗಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಬಡಜನರ ಗುರುತಿಸುವಿಕೆಯ ಮಾನದಂಡಗಳಲ್ಲಿ ವ್ಯತ್ಯಯವಾಗುತ್ತದೆಯಾದ್ದರಿಂದ ಬಹಳಷ್ಟು ಜನರು ಈ ಮಸೂದೆಯ ಪ್ರಯೋಜನ ಪಡೆಯಲಾಗದೆ ಹೋಗುವ ಸಾಧ್ಯತೆಯಿದೆ.


ಇನ್ನು ಈ ಮಸೂದೆಯನ್ನು ವಿರೋಧಿಸುವ ಮಾತನಾಡುತ್ತಿರುವ ಕಾರ್ಪೋರೇಟ್ ವಲಯಕ್ಕೆ ಆಹಾರದ ಸಬ್ಸಿಡಿಗೆ ಇಷ್ಟೊಂದು ಅಪಾರ ಪ್ರಮಾಣದ ಹಣವನ್ನು “ವ್ಯಯ” ಮಾಡಿಬಿಟ್ಟರೆ ದೇಶದ ಅರ್ಥ ವ್ಯವಸ್ಥೆಗೆ ಬಹುದೊಡ್ಡ ಹೊಡೆತ ಬೀಳುತ್ತದೆಂಬ ಅಂಜಿಕೆಯಿದೆ. ಈ ಕಾರ್ಪೋರೇಟ್ ವಲಯದ ಅಂಜಿಕೆಯ ಕಾರಣದಿಂದಾಗಿ ಆಹಾರ ಭದ್ರತಾ ಮಸೂದೆ ಮಂಡನೆಯಾದ ಮರುದಿನವೇ ಭಾರತದ ಶೇರುಪೇಟೆಯಲ್ಲಿ ಅಲ್ಲೋಲಕಲ್ಲೋಲವಾಗಿ ರುಪಾಯಿಯ ಮೌಲ್ಯ ಹಿಂದೆಂದೂ ಕಾಣದಷ್ಟು ಅಪಮೌಲ್ಯಗೊಂಡಿದೆ. ಆಹಾರ ಭದ್ರತಾ ಮಸೂದೆಗಿಂತ ಹೆಚ್ಚಾಗಿ ಅನೇಕ ಅಂತರರಾಷ್ಟ್ರೀಯ ಕಾರಣಗಳು ಕೂಡ ಈ ಅಪಮೌಲ್ಯಕ್ಕೆ ಕಾರಣವೆಂಬುದನ್ನು ನಾವು ಮರೆಯಬಾರದು. ನಮ್ಮ ವೈಯಕ್ತಿಕ ವಾಹನಗಳ ದೆಸೆಯಿಂದ ದಿನೇ ದಿನೇ ಹೆಚ್ಚುತ್ತಿರುವ ತೈಲದ ಬೇಡಿಕೆ, ಚಿನ್ನದ ಬೇಡಿಕೆ ಕೂಡ ರುಪಾಯಿ ಅಪಮೌಲ್ಯಗೊಳ್ಳಲು ಕಾರಣವಾಗುತ್ತಿದೆ ಎಂಬುದನ್ನು ಮರೆಮಾಚುವ ಈ ವರ್ಗದ ಜನ ಬಡವರ ಹಸಿವನ್ನಿಂಗಿಸುವ ಯೋಜನೆಯೊಂದರ ಮೇಲಷ್ಟೇ ದೋಷಾರೋಪಣೆ ಮಾಡುತ್ತಿರುವುದು ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆಯಲ್ಲ. ಈಗಾಗಲೇ ವಿವಿಧ ಯೋಜನೆಗಳಡಿಯಲ್ಲಿ 90,000 ಕೋಟಿಯಷ್ಟು ಹಣವನ್ನು ಹಸಿವು, ಬಡತನ ನಿರ್ಮೂಲನೆಗಾಗಿ ಬಳಸಲಾಗುತ್ತಿದೆ, ಈಗ ಮತ್ತೊಂದಷ್ಟು ಕೋಟಿ ಹೆಚ್ಚಿಗೆ ವೆಚ್ಚ ಮಾಡುವುದರಿಂದ ದೇಶದ ಆರ್ಥಿಕತೆಯ ಮೇಲೆ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ ಎಂಬುದು ಮಸೂದೆಯ ಸಮರ್ಥಕರ ವಾದ. ಸಬ್ಸಿಡಿಗಳಿಂದ ರುಪಾಯಿಯ ಅಪಮೌಲ್ಯವಾಗುವುದೇ ಸತ್ಯವಾದರೆ ಮೊದಲಿಗೆ ಜನರ ವೈಯಕ್ತಿಕ ವಾಹನಗಳಿಗೆ ಉಪಯೋಗಿಸುವ ತೈಲಕ್ಕೆ ನೀಡುವ ಅಗಾಧ ಪ್ರಮಾಣದ ಸಬ್ಸಿಡಿಯನ್ನು ನಿಲ್ಲಿಸಬೇಕಲ್ಲವೇ? ಎಲ್ ಪಿ ಜಿಯ ಸಬ್ಸಿಡಿಯನ್ನೂ ನಿಲ್ಲಿಸಬೇಕಲ್ಲವೇ?

ಈ ಮಸೂದೆಯನ್ನು ವಿರೋಧಿಸುವ ಮತ್ತೊಂದು ವರ್ಗ ಮಧ್ಯಮವರ್ಗ! ಸರಕಾರಕ್ಕೆ ತೆರಿಗೆ ಕಟ್ಟುವ ಈ ವರ್ಗಕ್ಕೆ ತಮ್ಮ ತೆರಿಗೆ ಹಣದಿಂದ ಸರಕಾರ ದಾನದತ್ತಿ ಸಂಸ್ಥೆಯ ರೀತಿ ತೆರಿಗೆ ಕಟ್ಟದ ಬಡಜನರಿಗೆ ಅನುಕೂಲ ಮಾಡಿಕೊಡುತ್ತಿದೆಯೆಂಬ ಸಿಟ್ಟು! ಐವತ್ತು ರುಪಾಯಿಗೆ ಕೆ.ಜಿ ಅಕ್ಕಿ ಕೊಳ್ಳುವ ಸಮಯದಲ್ಲಿ ಅತಿ ಕಡಿಮೆ ದರಕ್ಕೆ ಅಕ್ಕಿ ಕೊಳ್ಳುವ ಜನರನ್ನು ನೆನಪಿಸಿಕೊಂಡು ಲೊಚಗುಟ್ಟುವುದು ಸಾಮಾನ್ಯವಾಗಿಬಿಟ್ಟಿದೆ! ಮಧ್ಯಮವರ್ಗದ ಜನರ ದೃಷ್ಟಿಯಿಂದ ಅವರುಗಳೇಳುವ ಮಾತುಗಳು ಸತ್ಯವೆಂದು ಮೊದಲ ನೋಟಕ್ಕೆ ತೋಚಿಬಿಡುತ್ತದಾದರೂ ಮಧ್ಯಮ ಮತ್ತು ಶ್ರೀಮಂತ ವರ್ಗ ತೆರಿಗೆ ಕಟ್ಟಿದ ನಂತರವೂ ಇನ್ನುಳಿದ ರೀತಿಯಲ್ಲಿ ಪಡೆಯುವ ಅನೇಕಾನೇಕ ಸಬ್ಸಿಡಿಗಳನ್ನು ಏಕಾಏಕಿ ನಿಲ್ಲಿಸಿಬಿಟ್ಟರೆ ಈ ವರ್ಗದ ಜನತೆ ಸುಮ್ಮನಿರುತ್ತಾರೆಯೇ? ಕೆಲವರ ಪ್ರಕಾರ ಯಾವೊಂದೂ ಸಬ್ಸಿಡಿಯನ್ನೂ ನೀಡಬಾರದು, ಹೌದು ಒಂದು ರೀತಿಯಲ್ಲಿ ಅದು ಸತ್ಯವೇ ಆದರೂ ವಾಸ್ತವಿಕವಾಗಿ ಜಾರಿಗೆ ತರುವುದು ಕಷ್ಟದ ಕೆಲಸ. ಆಹಾರ ಭದ್ರತಾ ಮಸೂದೆಯ ಮೂಲಕ ಜನರಿಗೆ ತಲುಪಿಸುತ್ತಿರುವ ಆಹಾರ ಧಾನ್ಯಗಳು, ಅವುಗಳಿಗಾಗುವ ವೆಚ್ಚ ಮಾನವ ಶ್ರಮಕ್ಕಾಗಿ ಹೂಡುತ್ತಿರುವ ಬಂಡವಾಳವೆಂಬ ದೃಷ್ಟಿಕೋನದಿಂದ ನೋಡಿದಾಗ ಸರಕಾರ ದಾನದತ್ತಿ ಸಂಸ್ಥೆಯಲ್ಲ ಎಂಬುದು ವೇದ್ಯವಾಗುತ್ತದೆ. ಅಪೌಷ್ಟಿಕತೆಯಿಂದ ನರಳುವ ವ್ಯಕ್ತಿ ಎಷ್ಟರಮಟ್ಟಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಬಲ್ಲ? ಪೌಷ್ಟಿಕ ವ್ಯಕ್ತಿಯ ಸಮರ್ಪಕ ಕಾರ್ಯದಿಂದಲೇ ಅಲ್ಲವೇ ದೇಶದ ಆರ್ಥಿಕತೆ ವೃದ್ಧಿಯಾಗುವುದು? ಆಹಾರ ಭದ್ರತಾ ಮಸೂದೆಯಡಿಯಲ್ಲಿ ಎಲ್ಲ ವರ್ಗದವರನ್ನೂ ಸೇರಿಸಿದರೆ ಆಹಾರ ಭದ್ರತಾ ಮಸೂದೆಯ ವ್ಯಾಪ್ತಿ ಹೆಚ್ಚುತ್ತ ಹೆಚ್ಚು ಸಫಲವೂ ಆಗುತ್ತದೆ ಎಂಬುದು ಕೆಲ ವಿಶ್ಲೇಷಕರ ಅಭಿಪ್ರಾಯ.

ಆಹಾರ ಮಸೂದೆಯ ಸದುದ್ದೇಶವನ್ನು ಬೆಂಬಲಿಸಿಯೂ ಅದನ್ನು ವಿರೋಧಿಸುವವರೂ ಇದ್ದಾರೆ! ಮತ್ತಾ ವಿರೋಧ ಸಮರ್ಥನೀಯ! ಕೂಲಿಗಾಗಿ ಕಾಳು ಯೋಜನೆ ಇನ್ನು ಹತ್ತು ಹಲವಾರು ಯೋಜನೆಗಳು ತನ್ನೆಲ್ಲಾ ಸದುದ್ದೇಶಗಳನ್ನು ಒಳಗೊಂಡ ಮೇಲೆಯೂ ನಿರೀಕ್ಷೆಗೆ ತಕ್ಕಷ್ಟು ಯಶ ಪಡೆಯಲಿಲ್ಲ. ಕಾರಣ ಅವುಗಳ ಅಸಮರ್ಪಕ ಜಾರಿ, ಮತ್ತು ಅಧಿಕಾರಶಾಹಿ – ರಾಜಕಾರಣಿಗಳ ಮುಗಿಯದ ಭ್ರಷ್ಟಾಚಾರದ ಹಸಿವು. ಪಡಿತರ ವ್ಯವಸ್ಥೆ ಅವ್ಯವಸ್ಥೆಗಳನ್ನು ನೋಡಿದ ನಂತರ ಯಾವ ಮಸೂದೆ ಬಂದರೂ ಅದಕ್ಕಾಗಿ ಲಕ್ಷ ಲಕ್ಷ ಕೋಟಿ ಖರ್ಚು ಮಾಡಿದರೂ ಅದು ಕೊನೆಗೆ ಅಧಿಕಾರಿಗಳಿಗೆ – ರಾಜಕಾರಣಿಗಳಿಗೆ ದುಡ್ಡು ಮಾಡುವ ದಂಧೆಯಾಗಷ್ಟೇ ಮಾರ್ಪಡುತ್ತದೆ ಎಂಬ ಸಿನಿಕತೆಯಿದೆ. ಅಧಿಕಾರಿ, ರಾಜಕಾರಣಿಗಳ ಮಾತು ಬಿಡಿ ಪಡಿತರ ಚೀಟಿ ಅಂಗಡಿ ನಡೆಸುವವರು, ಪಡಿತರ ಚೀಟಿ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುವ ಕೆಳಹಂತದ ನೌಕರರು ಮಾಡಿಕೊಂಡಿರುವ ಆಸ್ತಿ ಪಾಸ್ತಿಯನ್ನು ಗಮನಿಸಿದಾಗ ಅನೇಕಾನೇಕ ಯೋಜನೆಗಳ ತರುವಾಯವೂ ದೇಶದಲ್ಯಾಕೆ ಇಷ್ಟೊಂದು ಸಂಖೈಯ ಬಡವರಿದ್ದಾರೆ ಎಂಬುದರ ಅರಿವಾಗುತ್ತದೆ. ಕಳಪೆ ಮಾಲುಗಳ ಪೂರೈಕೆ, ಅರ್ಹರಿಗೆ ಸೇರಬೇಕಾದ ದವಸ ಧಾನ್ಯಗಳನ್ನು ಕಾಳಸಂತೆಯ ಮುಖಾಂತರ ಮುಕ್ತ ಮಾರುಕಟ್ಟೆಗೆ ತಲುಪುವಂತೆ ಮಾಡುವ ಚಾಣಾಕ್ಷತನ ಪಡಿತರ ವ್ಯವಸ್ಥೆಯನ್ನೇ ದುರ್ಬಲಗೊಳಿಸಿದೆ, ಇವುಗಳನ್ನು ನಿಯಂತ್ರಣದಲ್ಲಿಡದಿದ್ದರೆ ಆಹಾರ ಭದ್ರತಾ ಮಸೂದೆ ಕೂಡ ಬಡತನ ನಿವಾರಣೆಯ ಮತ್ತೊಂದು ವಿಫಲ ಯತ್ನವಾಗುತ್ತದೆಯಷ್ಟೇ. 2002 ರಿಂದ 2005 ರವರೆಗೆ ಕೇರಳದಲ್ಲಿ ಪಡಿತರ ಚೀಟಿ ಹೊಂದಿದ ಜನರಲ್ಲಿ ಕೇವಲ 2%ಜನ ಪಡಿತರ ಪಡೆಯಲು ಬರುತ್ತಿದ್ದರು. ಕಾರಣ? ಕಳಪೆ ಸಾಮಗ್ರಿ. ಸಾಮಗ್ರಿಗಳ ಗುಣಮಟ್ಟದಲ್ಲಿ ಸುಧಾರಣೆ ತಂದ ಮೇಲೆ ಈಗ ಪಡಿತರ ಅಂಗಡಿಗೆ ಬರುವವರ ಸಂಖೈ 55 ರಿಂದ 60 % ಗೆ ಏರಿಕೆಯಾಗಿದೆ. ಲಕ್ಷ ಕೋಟಿಗಳ ಘೋಷಣೆಯಷ್ಟೇ ಸಾಲದು, ಅವುಗಳ ಸಮರ್ಪಕ ಅನುಷ್ಠಾನ ಕೂಡ ಅಷ್ಟೇ ಪ್ರಮುಖವಾದುದು.

ಈ ಆಹಾರ ಭದ್ರತಾ ಮಸೂದೆಯಲ್ಲಿ ಬಹಳಷ್ಟು ಲೋಪದೋಷಗಳಿದ್ದಾವೆ. ಆಹಾರ ಸಚಿವ ಕೆ.ವಿ.ಥಾಮಸ್ ಒಪ್ಪಿಕೊಂಡಂತೆ ಈ ಮಸೂದೆ ಪರಿಪೂರ್ಣವಾಗಿಲ್ಲ, ಅನುಷ್ಠಾನಗೊಳ್ಳುವ ಸಮಯದಲ್ಲಿ ಕಂಡುಬರುವ ಲೋಪದೋಷಗಳನ್ನು ಸರಿಪಡಿಸುತ್ತ ಸಾಗಬೇಕು. ಈ ಮಸೂದೆಯ ಬಹುದೊಡ್ಡ ಲೋಪವೆಂದರೆ ಇದಕ್ಕೆ ಯಾವುದೇ ನಿರ್ದಿಷ್ಟ ಗುರಿಯಿಲ್ಲ. “ಅಪೌಷ್ಟಿಕತೆ ನಿವಾರಣೆ”ಯೆಂಬುದು ಘೋಷಣೆಯ ರೀತಿ ಕೇಳಿಸುತ್ತದೆಯೇ ಹೊರತು ಗುರಿಯ ರೀತಿಯಲ್ಲ. ಬ್ರಿಕ್ ಸಮೂಹದ ದೇಶವಾದ ಬ್ರೆಜಿಲ್ 2001ರ ನಂತರ ಆರಂಭಿಸಿದ zero hunger programme ನಮ್ಮ ಆಹಾರ ಭದ್ರತಾ ಮಸೂದೆಗೆ ಸ್ಪೂರ್ತಿಯಾಗಬೇಕಿತ್ತೇನೋ? ಆರ್ಥಿಕ ಬೆಳವಣಿಗೆಯಿಂದ ಮಾತ್ರ ಬಡತನದ ನಿವಾರಣೆ ಸಾಧ್ಯ, ಈ ರೀತಿಯ ಸಬ್ಸಿಡಿಗಳಿಂದಲ್ಲ ಎಂದು ವಾದಿಸುವವರು ಕೂಡ ಬ್ರೆಜಿಲ್ ಕಡೆಗೊಮ್ಮೆ ಕಣ್ಣಾಡಿಸಬೇಕು. ಭಾರತ ಮತ್ತು ಚೀನಾ ಆರ್ಥಿಕ ವೃದ್ಧಿಯಲ್ಲಿ ಬ್ರೆಜಿಲ್ ಗಿಂತ ಗಾವುದ ಮುಂದಿದ್ದರೂ ಬಡತನದ ನಿವಾರಣೆಯಲ್ಲಿ ಬ್ರೆಜಿಲ್ ಈ ಎರಡೂ ದೇಶವನ್ನು ಹಿಂದಿಕ್ಕಿದೆ. ಆಹಾರ ಭದ್ರತೆ ಕಾರ್ಯಕ್ರಮವನ್ನು ಜಾರಿಗೊಳಿಸಿದ ಬ್ರೆಜಿಲ್ 2015ರ ಹೊತ್ತಿಗೆ ದೇಶದಲ್ಯಾರೂ ಹಸಿವಿನಿಂದ ಬಳಲಬಾರದು ಎಂಬ ಗುರಿ ಇಟ್ಟುಕೊಂಡಿತು. ಈಗಾಗಲೇ 30ರಿಂದ 40 ಮಿಲಿಯನ್ ಜನರನ್ನು ಬಡತನದ ಬೇಗೆಯಿಂದ ಹೊರಗೆಳೆದಿದೆ ಅಲ್ಲಿನ ಆಹಾರ ಭದ್ರತಾ ಮಸೂದೆ. ಆದರೆ ಅವರ ಮಸೂದೆ ಕೇವಲ ಆಹಾರವನ್ನಂಚುವುದಕ್ಕೆ ಮಾತ್ರ ಸೀಮಿತವಾಗಿರದೆ ಆಹಾರ ಮಸೂದೆಗೆ ಪೂರಕವಾಗಿ ಕೃಷಿ ಕ್ಷೇತ್ರದಲ್ಲಿ ಮಾರ್ಪಾಡುಗಳು, ಕೆಲಸದ ಸೃಷ್ಟಿ ಮತ್ತು ಕನಿಷ್ಟ ವೇತನದ ಹೆಚ್ಚಳ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲೂ ಬದಲಾವಣೆಗಳನ್ನು ಮಾಡುವುದರೆಡೆಗೂ ಕಾರ್ಯಶೀಲವಾಗಿತ್ತು. ಭಾರತದ ಮಸೂದೆಯಲ್ಲಿ ಇವೆಲ್ಲ ಅಂಶಗಳೂ ಮಾಯವಾಗಿದೆ. ಇವೆಲ್ಲ ಕಾರಣಗಳಿಂದಾಗಿ ಕಾಂಗ್ರೆಸ್ ನೇತ್ರತ್ವದ ಯು.ಪಿ.ಎ ಮಂಡಿಸಿರುವ ಆಹಾರ ಭದ್ರತಾ ಮಸೂದೆ ಕೇವಲ ಮುಂದಿನ ವರುಷ ನಡೆಯಲಿರುವ ಚುನಾವಣೆಯಲ್ಲಿ ಮತಗಳನ್ನು ಸೆಳೆಯುವುದಕ್ಕೆ ಮಾತ್ರ ಎಂಬ ಆಪಾದನೆಯಿದೆ. ವೋಟು ಸೆಳೆಯುವುದಕ್ಕಾಗಿ ಜಾತಿ – ಧರ್ಮ – ಜಾತ್ಯತೀತತೆಯ ಮುಖವಾಡ – ಕೋಮುವಾದ ಉಪಯೋಗಿಸುವುದಕ್ಕಿಂತ ಈ ರೀತಿಯ ಮಸೂದೆಯನ್ನು ಉಪಯೋಗಿಸುವುದೇ ಮೇಲಲ್ಲವೇ? ಭಾರತದ ಆಹಾರ ಭದ್ರತಾ ಮಸೂದೆ ಇನ್ನೂ ಶೈಶಾವಸ್ಥೆಯಲ್ಲಿದೆ, ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ದೇಶದ ಅಸಂಖ್ಯಾತ ಜನರು ಅಪೌಷ್ಟಿಕತೆಯ ಕಾರಣದಿಂದ ಸಾವನ್ನಪ್ಪುವುದನ್ನು ತಪ್ಪಿಸಬಹುದು. ಇಲ್ಲವಾದರೆ “ಗರೀಬಿ ಹಠಾವೋ” ಘೋಷಣೆ ಮತ್ತಷ್ಟು ದಶಕಗಳು ಮುಂದುವರೆಯುವುದರಲ್ಲಿ ಅನುಮಾನವಿಲ್ಲ.

ಪ್ರಜಾಸಮರದಲ್ಲಿ ಪ್ರಕಟವಾಗಿದ್ದ ಲೇಖನ . 

image source - internet

No comments:

Post a Comment