Jul 27, 2013

ಪ್ರಣಾಳಿಕೆ ರೂಪದ ಜನಪ್ರಿಯ ಬಜೆಟ್ಟು



budget 2013-14

ಡಾ ಅಶೋಕ್ ಕೆ ಆರ್
ವಿಧಾನಸಭೆ ಚುನಾವಣೆ ನಡೆದು 2013ರಲ್ಲಿ ಎರಡು ಸರಕಾರವನ್ನು ಕರ್ನಾಟಕ ಕಂಡ ಕಾರಣ ಹೊಸ  ಸರಕಾರದ ಹೊಸ ಬಜೆಟ್ ಮಂಡನೆಯಾಗಿದೆ. ಇತ್ತಿಚಿನ ವರುಷಗಳಲ್ಲಿ ಬಜೆಟ್ ಎಂಬುದು ಕೂಡ ಚುನಾವಣಾ ಪೂರ್ವದ ಪ್ರಣಾಳಿಕೆಗಳ ರೂಪದಲ್ಲೇ ಹೊರಬರುತ್ತಿರುವುದಕ್ಕೆ ರಾಜಕಾರಣಿಗಳ ದೂರದರ್ಶತ್ವದ ಕೊರತೆ, ಹತ್ತಿರದ ಚುನಾವಣೆಗಳ ಮೇಲಿನ ದೃಷ್ಟಿ ಕಾರಣ. ಹಾಗಾಗಿ ದೂರಗಾಮಿಯಾಗಿ ಸಮಾಜದ ದೇಶದ ಏಳಿಗೆಯ ಮೇಲೆ ಪ್ರಭಾವವುಂಟುಮಾಡುವ ಯೋಜನೆಗಳಿಗಿಂತ ತತ್ ಕ್ಷಣದಲ್ಲಿ ಜನರಿಗೆ ನೇರವಾಗಿ ಹಣ ತಲುಪಿಸುವ ಹೆಚ್ಚೆಚ್ಚು ಜನಪ್ರಿಯತೆ ತಂದುಕೊಡುವ ಯೋಜನೆಗಳ ಮೇಲೆಯೇ ಹೆಚ್ಚು ಪ್ರೀತಿ. ಹಿಂದಿನ ಬಜೆಟ್ಟಿಗಿಂತ ಹೆಚ್ಚು ವೆಚ್ಚದ ಬಜೆಟ್ ಮಂಡಿಸಬೇಕು ಎಂಬ ಆತುರವೂ ಇತ್ತೀಚಿನ ವರುಷಗಳಲ್ಲಿ ಕಾಣುತ್ತಿದೆ. ಹಿಂದಿನ ಬಜೆಟ್ಟಿನಲ್ಲಿ ಮೀಸಲಿರಿಸಲಾದ ಹಣದ ಎಷ್ಟು ಅಂಶ ವಿನಿಯೋಗವಾಗಿದೆ ಎಂಬುದನ್ನು ಗಮನಿಸಿದರೆ ಬಹುತೇಕ ಕ್ಷೇತ್ರಗಳಲ್ಲಿ ನಿರಾಶಾದಾಯಕ ವಾತಾವರಣವೇ ಇದೆ. ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ 1,17,005 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದರೆ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ 1,21,611 ಕೋಟಿಯ ಬಜೆಟ್ ಮಂಡಿಸಿದ್ದಾರೆ. ಅಲ್ಲಿಗೆ ಕಾಗದದ ಮೇಲಿನ ಹಣದ ರೂಪದಲ್ಲಂತೂ ಹಿಂದಿನ ಸರಕಾರದ “ಸಾಧನೆ”ಯನ್ನು ಮುರಿದಿದ್ದಾರೆ! ಆದರೆ ಬಜೆಟ್ಟಿನ ಆಶಯಗಳು ಆಶೋತ್ತರಗಳು ಹಿಂದಿನ ಸರಕಾರಕ್ಕಿಂತ ಉತ್ತಮವಾಗಿದೆಯಾ??

ಕ್ಷೇತ್ರವಾರು ಹಣದ ವಿಂಗಡನೆ
ಕ್ಷೇತ್ರ
ಹಣ (ಕೋಟಿ ರೂಗಳಲ್ಲಿ)
ಶಿಕ್ಷಣ
18923
ಇಂಧನ
10312
ಜಲಸಂಪನ್ಮೂಲ
9363
ನಗರಾಭಿವೃದ್ಧಿ
9286
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
8218
ಲೋಕೋಪಯೋಗಿ ಇಲಾಖೆ
5862
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
5421
ಒಳಾಡಳಿತ ಮತ್ತು ಸಾರಿಗೆ
5315
ಸಮಾಜ ಕಲ್ಯಾಣ
5046
ಕೃಷಿ ಮತ್ತು ತೋಟಗಾರಿಕೆ
4378
ಕಂದಾಯ
3797
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
3466
ಪಶುಸಂಗೋಪನೆ ಮತ್ತು ಮೀನುಗಾರಿಕೆ
1903
ವಸತಿ
1365
ವಾಣಿಜ್ಯ ಮತ್ತು ಕೈಗಾರಿಕೆ
885

ಅಹಿಂದ ವರ್ಗದ ನೇತಾರನಾಗಿ ಗುರುತಿಸಲ್ಪಟ್ಟಿರುವ ಸಿದ್ಧರಾಮಯ್ಯನವರು ಅಹಿಂದ ವರ್ಗಗಳಿಗೆ ಭರಪೂರ ಘೋಷಣೆಗಳನ್ನು ಮಾಡಲಿರುವರೆಂದು ನಿರೀಕ್ಷಿಸಲಾಗಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ 5046 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಕಳೆದ ಬಜೆಟ್ಟಿನಲ್ಲಿ ಇದಕ್ಕೆ ಮೀಸಲಾಗಿದ್ದ ಹಣ 4698 ಕೋಟಿ ಎಂಬುದನ್ನು ಗಮನಿಸಿದಾಗ ಹೆಚ್ಚಿನ ಬದಲಾವಣೆಯೇನೂ ಕಾಣುವುದಿಲ್ಲ. ಯೋಜನೆಗಳ ಅನುಷ್ಠಾನ ಯಾವ ರೀತಿ ಆಗುತ್ತದೆ ಎಂಬುದರ ಮೇಲೆ ಅಹಿಂದ ವರ್ಗಕ್ಕೆ ಈ ಬಜೆಟ್ಟಿನಿಂದ ಆಗುವ ಉಪಯೋಗಗಳನ್ನು ಪರಿಶೀಲಿಸಬಹುದು.

ನೀರಾವರಿಗೆ 9812 ಕೋಟಿ ರೂಪಾಯಿ ನೀಡಲಾಗಿದೆ. ಕುಡಿಯುವ ನೀರು ಪೂರೈಸಲು ಎತ್ತಿನಹೊಳೆ ಯೋಜನೆಗೆ 1000 ಕೋಟಿ ಮೀಸಲಿರಿಸಲಾಗಿದೆ. ಇನ್ನುಳಿದಂತೆ ಕೃಷ್ಠಾ ಮತ್ತು ಕಾವೇರಿ ನದಿಗಳ ರಾಜ್ಯದ ಪಾಲಿನ ನೀರನ್ನು ಸಮರ್ಪಕವಾಗಿ ಉಪಯೋಗಿಸಲು ವಿವಿಧ ಯೋಜನೆಗಳು, ಚಿಕ್ಕಪಡಸಲಗಿ ಬ್ಯಾರೇಜನ್ನು ಎತ್ತರಿಸಲು 10 ಕೋಟಿ, ಕೆರೆಗಳ ಪುನಶ್ಚೇತನಕ್ಕಾಗಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ರಚನೆ. ಈ ವರ್ಷ ನೀರಾವರಿಗೆಂದು ನೀಡಿರುವ ಹಣ ಹಿಂದಿನ ಯಾವುದೇ ವರ್ಷಕ್ಕಿಂತ ಹೆಚ್ಚು. ಕೃಷಿಗೆ ಮತ್ತು ಕುಡಿಯುವ ನೀರಿಗೆ ನೀರಾವರಿ ಯೋಜನೆಗಳು ಅತ್ಯವಶ್ಯ. 2012 -13ರಲ್ಲಿ ನೀರಾವರಿಗೆ ಒದಗಿಸಿದ್ದು 8099 ಕೋಟಿ ರುಪಾಯಿಗಳು. ಆದರೆ ಅದರಲ್ಲಿ ವೆಚ್ಚವಾಗಿದ್ದು ಮಾತ್ರ ಕೇವಲ 5041 ಕೋಟಿ! ರಾಜಕಾರಣಿಗಳ ಅಧಿಕಾರಿಗಳ ನಿರ್ಲ್ಯಕ್ಷದಿಂದ ನೀಡಲಾದ ಹಣವನ್ನೂ ಸಮರ್ಪಕವಾಗಿ ವಿನಿಯೋಗಿಸಲಾಗದಿದ್ದರೆ ಬಜೆಟ್ಟಿನಲ್ಲಿ ಕೋಟಿ ಕೋಟಿಗಳ ಲೆಕ್ಕದಲ್ಲಿ ಘೋಷಣೆಗಳನ್ನು ಮಾಡುವುದರ ಉಪಯುಕ್ತತೆಯೇನು?

ಕೃಷಿಗಾಗಿ ಹಿಂದಿನ ಬಿಜೆಪಿ ಸರಕಾರದಂತೆ ಪ್ರತ್ಯೇಕ ಬಜೆಟ್ ಮಂಡಿಸುವ ಕಾರ್ಯಕ್ಕೆ ಕೈ ಹಾಕದ ಸಿದ್ಧರಾಮಯ್ಯ ಮೇಲ್ನೋಟಕ್ಕೆ ತಮ್ಮ ಬಜೆಟ್ಟಿನಲ್ಲಿ ಕೃಷಿಯನ್ನು ಕಡೆಗಣಿಸಿದಂತೇನೂ ಕಾಣುವುದಿಲ್ಲ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸಹಕಾರಿ ಸಂಸ್ಥೆಗಳ ಮೂಲಕ ರೈತರಿಗೆ ಎರಡು ಲಕ್ಷದವರೆಗೆ ಬಡ್ಡಿರಹಿತ ಸಾಲ ಮತ್ತು ಎರಡರಿಂದ ಮೂರು ಲಕ್ಷದವರೆಗೆ ಶೇಕಡಾ ಒಂದರ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಘೋಷಿಸಿದ್ದಾರೆ. ಕುರಿ ಸಾಕಾಣಿಕೆಗಾಗಿ ಸಾಲ ನೀಡುವಿಕೆ, ವಿಮೆಗೆ ಒಳಪಡದ ಕುರಿ ಮೇಕೆ ಸತ್ತಾಗಲೂ ಪರಿಹಾರ ನೀಡುವಿಕೆ, ನೇಕಾರರ ಸಾಲ ಮನ್ನಾ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ಹನಿ ನೀರಾವರಿಗೆ ಮತ್ತಷ್ಟು ಸಬ್ಸಿಡಿ ಕೃಷಿಗೆ ಮೀಸಲಿರಿಸಿರುವ ಮತ್ತಷ್ಟು ಮುಖ್ಯ ಅಂಶಗಳು. ಇತ್ತೀಚಿನ ವರುಷಗಳಲ್ಲಿ ಕಂಡುಬರುತ್ತಿರುವಂತೆ ಕೃಷಿಯ ಆಯವ್ಯಯದಲ್ಲಿ ಸಾಲ ನೀಡುವಿಕೆ, ಸಾಲ ಮನ್ನಾದ ವಿಷಯಗಳೇ ಹೆಚ್ಚೆಚ್ಚು ಕೇಳಿ ಬರುತ್ತದೆ. ಬೆಲೆಯ ನಿರ್ಧಾರವನ್ನು ರೈತರಿಗೆ ಬಿಡಬೇಕು ಇಲ್ಲವೇ ವೈಜ್ಞಾನಿಕ ರೀತಿಯಲ್ಲಿ ಬೆಲೆ ನಿರ್ಧರಿಸಬೇಕು ಎಂಬ ಒತ್ತಾಯಗಳಿಗೆ ಅಷ್ಟಾಗಿ ಯಾವ ಪ್ರತಿಕ್ರಿಯೆಯೂ ಸಿಗುತ್ತಿರಲಿಲ್ಲ. ಕಾರಣ ಸಾಲ ನೀಡುವಿಕೆ ಸಾಲ ಮನ್ನಾದಂತ ತತ್ ಕ್ಷಣದ ಜನಪ್ರಿಯತೆ ತಂದುಕೊಡುವ ವಿಷಯಗಳಿಗೇ ರಾಜಕಾರಣಿಗಳು ನೀಡುತ್ತಿರುವ ಪ್ರಾಮುಖ್ಯತೆ. ಸಿದ್ಧರಾಮಯ್ಯನವರು ಕೂಡ ಇದಕ್ಕೆ ಹೊರತಾಗಿಲ್ಲವಾದರೂ ಎಲ್ಲೋ ಒಂದು ಭರವಸೆಯಂತೆ ಕಾಣುತ್ತಿರುವುದು ಅವರು ಘೋಷಿಸಿರುವ ಕೃಷಿ ಬೆಲೆ ಆಯೋಗ ರಚನೆ ಮತ್ತು ವಿಕೋಪ ಉಪಶಮನ ನಿಧಿಯಂತಹ ಸುಧಾರಣಾ ಕ್ರಮಗಳು.

ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚು 18923 ಕೋಟಿ ರುಪಾಯಿ ಮೀಸಲಿರಿಸಲಾಗಿದೆ. ಬೈಸಿಕಲ್ ವಿತರಿಸುವ ಮೂಲಕ ವಿಧ್ಯಾರ್ಥಿಗಳನ್ನು ಶಾಲೆಗೆ ಕರೆತರುವ ಹಿಂದಿನ ಸರಕಾರದ ಯೋಜನೆಯನ್ನು ಮುಂದುವರಿಸಿರುವ ಈಗಿನ ಸರಕಾರ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸರಕಾರಿ ಶಾಲೆಗಳಿಗೆ ಸೇರುವ ಒಂದನೇ ತರಗತಿಯ ಹೆಣ್ಣು ಮಕ್ಕಳಿಗೆ ಪ್ರತಿದಿನದ ಹಾಜರಾತಿಗೆ ಎರಡು ರುಪಾಯಿ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದ್ದಾರೆ! ಮಕ್ಕಳನ್ನು ಶಾಲೆಗೆ ಸೆಳೆಯಲು ಈ ರೀತಿಯ ಆಮಿಷಗಳನ್ನೊಡ್ಡುತ್ತ ಹಣ ಉಡುಗೊರೆ ನೀಡದೆ ಯಾವ ಕೆಲಸವನ್ನೂ ನಾವು ಮಾಡುವುದಿಲ್ಲ ಎಂಬ ಮನಸ್ಥಿತಿಯನ್ನು ಬೆಳೆಸಿಬಿಡುತ್ತಿದ್ದೀವಾ? ಕಾಲವೇ ಉತ್ತರಿಸಬೇಕು. ಹೋಗಲಿ ಈ ಆಮಿಷಗಳಿಂದ, ಪ್ರೋತ್ಸಾಹದಿಂದ ಹೆಚ್ಚೆಚ್ಚು ವಿದ್ಯಾರ್ಥಿಗಳು ಶಾಲೆಗಳೆಡೆಗೆ ಆಕರ್ಷಿತರಾಗುತ್ತಿದ್ದಾರಾ? ಅಧ್ಯಯನವಶ್ಯಕವಾದ ಸಂಗತಿಯಿದು. ಹೊಸ ಹೊಸ ಕಾಲೇಜುಗಳ ಸ್ಥಾಪನೆಯ ಘೋಷಣೆಯಾಗಿದೆ. ಇರುವ ಸರಕಾರಿ ಶಾಲಾ ಕಾಲೇಜುಗಳೇ ಬಹುತೇಕ ಕಡೆ ಸಂಕಷ್ಟದಲ್ಲಿರುವಾಗ ಮತ್ತೆ ಮತ್ತೆ ಹೊಸ ಹೊಸ ಕಾಲೇಜುಗಳ ಘೋಷಣೆಯ ಅವಶ್ಯಕತೆಯಿತ್ತೆ?

ಎಂದಿನಂತೆ ಆರೋಗ್ಯಕ್ಕೆ ಮೀಸಲಾಗಿರಿಸಿರುವುದು ಕೇವಲ 5421 ಕೋಟಿ. ಇಂಧನ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿಯ ನಂತರದ ಸ್ಥಾನ ಆರೋಗ್ಯಕ್ಕೆ! ಬೆಂಗಳೂರೊಂದರ ಅಭಿವೃದ್ಧಿಗೆ 2100 ಕೋಟಿ ಮೀಸಲಿರಿಸಿರುವುದನ್ನು ಗಮನಿಸಿದಾಗ ಆರೋಗ್ಯ ಇಲಾಖೆಗೆ ಮತ್ತಷ್ಟು ವ್ಯಯಿಸಬೇಕಿತ್ತು ಎನ್ನಿಸುವುದು ಸುಳ್ಳಲ್ಲ.

ಮುಂದಿನ ವರುಷ ಲೋಕಸಭಾ ಚುನಾವಣೆ. ಒಂಬತ್ತು ವರುಷದಿಂದ ಆಡಳಿತದಿಂದಿರುವ ಕಾಂಗ್ರೆಸ್ ನೇತ್ರತ್ವದ ಯು.ಪಿ.ಎ ಸರಕಾರ ತನ್ನ ಎರಡನೇ ಆಡಳಿತಾವಧಿಯಲ್ಲಿ ಸಾಲು ಸಾಲು ಭ್ರಷ್ಟಾಚಾರದ ಹಗರಣಗಳು, ಕುಸಿಯುತ್ತಿರುವ ರುಪಾಯಿ ಮೌಲ್ಯ, ಹಣದುಬ್ಬರಗಳಿಂದ ತತ್ತರಿಸಿದೆ. ಜನಸಾಮಾನ್ಯರಿಂದ ದೂರವಾಗಿ ಮುಂದಿನ ಚುನಾವಣೆಯಲ್ಲಿ ಅಧಿಕಾರದ ಸಮೀಪ ಬರುವುದೇ ಕಷ್ಟವೆನಿಸುವ ಸ್ಥಿತಿಯಲ್ಲಿದೆ. ಕರ್ನಾಟಕದಲ್ಲಿ ವರುಷಗಳ ನಂತರ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕರ್ನಾಟಕದಿಂದ ಅತಿಹೆಚ್ಚು ಸಂಸದರನ್ನು ಗೆಲ್ಲಿಸಿಕೊಡುವ ನಿರೀಕ್ಷೆಯಿದೆ. ಆ ನಿರೀಕ್ಷೆಗನುಗುಣವಾಗಿಯೇ ಈ ಸಾಲಿನ ಬಜೆಟ್ ಸಿದ್ಧಪಡಿಸಲಾಗಿದೆಯಷ್ಟೇ. ಇಲ್ಲವಾದಲ್ಲಿ ಈಗಾಗಲೇ ಏಳು ಬಾರಿ ಬಜೆಟ್ ಮಂಡಿಸಿದ್ದ ಸಿದ್ಧರಾಮಯ್ಯನವರಿಂದ ಇಷ್ಟು ನೀರಸ ಬಜೆಟ್ ಹೊರಬರುತ್ತಿರಲಿಲ್ಲ. ಪ್ರಮಾಣವಚನ ಸ್ವೀಕರಿಸಿದ ದಿನವೇ ಒಂದು ರುಪಾಯಿಗೆ ಅಕ್ಕಿ ನೀಡುವಂತಹ ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸಿಬಿಟ್ಟ ಕಾರಣ ಹಣದ ಕೊರತೆಯಿಂದಾಗಿ ಮತ್ತುಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ಬಜೆಟ್ಟಿನಲ್ಲಿ ಘೋಷಿಸಲು ಸಾಧ್ಯವಾಗಲಿಲ್ಲ. ಈ ಜನಪ್ರಿಯ ಘೋಷಣೆಗಳು ದೂರಗಾಮಿ ಉಪಯುಕ್ತತೆಯ ಯೋಜನೆಗಳ ಮೇಲೆ ಪರಿಣಾಮ ಬೀರುವುದನ್ನು ಗಮನಿಸಬಹುದು. ಹಿಂದಿನ ಸರಕಾರ ಮಠ ಮಾನ್ಯಗಳಿಗೆ ಅವುಗಳು ಮಾಡುವ ಸೇವೆಯ ಮುಂದುವರಿಕೆಗಾಗಿ ಹಣವನ್ನು ಅನುದಾನದ ರೂಪದಲ್ಲಿ ನೀಡಿದ್ದವು. ಆ ಸಂಪ್ರದಾಯಕ್ಕೆ ಸಿದ್ಧರಾಮಯ್ಯ ತಿಲಾಂಜಲಿ ಇಟ್ಟಂತೆ ಮೇಲ್ನೋಟಕ್ಕೆ ಭಾಸವಾಗುತ್ತದಾದರೂ ಕೆಲ ನಿರ್ದಿಷ್ಟ ಟ್ರಸ್ಟ್ ಗಳಿಗೆ ಅನುದಾನ ನೀಡಿರುವುದು ಮತ್ತದೇ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸರಕಾರವಿರುವುದು ಅನುದಾನದ ಹೆಸರಿನಲ್ಲಿ ಸಾರ್ವಜನಿಕರ ದುಡ್ಡಿನಲ್ಲಿ ‘ದಾನ – ಧರ್ಮ’ ಮಾಡುವುದಕ್ಕಾ? ಹಿಂದಿನ ಸರಕಾರ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ವಿಫಲವಾಗಿದೆ ಎಂದು ಬಜೆಟ್ ಮಂಡನೆಯ ವೇಳೆ ಹೇಳಿದ ಸಿದ್ಧರಾಮಯ್ಯ ಅದರಿಂದಾಗಿಯೇ ಬಹಳಷ್ಟು ಯೋಜನೆಗಳನ್ನು ಘೋಷಿಸಲಾಗುತ್ತಿಲ್ಲ ಎಂದು ತಿಳಿಸಿದರು. ಆದರೆ ಈ ಬಜೆಟ್ಟಿನಲ್ಲೂ ಕೂಡ ಸಂಪನ್ಮೂಲ ಕ್ರೋಡಿಕರಣಕ್ಕೆ ಹೆಚ್ಚು ಒತ್ತು ಕೊಟ್ಟಂತೇನೂ ಕಾಣುವುದಿಲ್ಲ. ಅಬಕಾರಿ ಸುಂಕ ಹೆಚ್ಚಿಸಿರುವುದನ್ನು ಬಿಟ್ಟರೆ ಉಳಿದ ತೆರಿಗೆಗಳಲ್ಲೇನೂ ಏರಿಕೆಯಾಗಿಲ್ಲ. ಇದು ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂಬ ಸದುದ್ದೇಶಕ್ಕಿಂತಲೂ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಕ್ರಮವಷ್ಟೇ. ಸಿದ್ಧರಾಮಯ್ಯನವರ ಬಜೆಟ್ಟಿನಿಂದ ನಾವು ನಿರೀಕ್ಷಿಸಿದ್ದು ಹೆಚ್ಚಿತ್ತಾ? ಉತ್ತಮ ಹಣಕಾಸು ಸಚಿವರಾಗಿ ಹೆಸರು ಮಾಡಿದ್ದ ಸಿದ್ಧರಾಮಯ್ಯನವರಿಂದ ಮತ್ತಷ್ಟು ಉತ್ತಮ ಬಜೆಟ್ಟಿನ ನಿರೀಕ್ಷೆಯಿದ್ದದ್ದು ಸುಳ್ಳಲ್ಲ. ಜನಪ್ರಿಯ ಕಾರ್ಯಕ್ರಮಗಳ ಒತ್ತಡ, ಮುಂದಿನ ವರುಷದ ಲೋಕಸಭಾ ಚುನಾವಣೆಯ ಕಾರಣದಿಂದ ಹೆಚ್ಚು ಕಡಿಮೆ ಬಿಜೆಪಿ ಸರಕಾರದಂತೆಯೇ ಮತ್ತೊಂದು ಲಕ್ಷದ ಬಜೆಟ್ ಬಂದಿದೆಯಷ್ಟೇ. ಮುಂದಿನ ವರುಷವಾದರೂ ಯಾವುದೇ ಒತ್ತಡಗಳಿಲ್ಲದೇ ರಾಜ್ಯವನ್ನು ಆರ್ಥಿಕ ಸುವ್ಯವಸ್ಥೆಯತ್ತ ಕೊಂಡೊಯ್ಯುವ ನಿರೀಕ್ಷೆಯಷ್ಟೇ ನಾವೀಗ ಮಾಡಬಹುದಾಗಿರುವುದು.


photo source - DNA india

No comments:

Post a Comment