Jun 26, 2013

ಧರ್ಮದ ಮಧ್ಯೆ ಕಮರಿ ಹೋದ ಮನಸ್ಸುಗಳು

ಮೊಹಮದ್ ಇರ್ಷಾದ್
ಅದು ಸಂಜೆಯ ವೇಳೆ. ಸ್ವಲ್ಪ ಬಿಡುವಿದ್ದ ಕಾರಣಕ್ಕಾಗಿ ಸಂಗೀತ ಕೇಳುತ್ತಾ ಕುಳಿತಿದ್ದೆ. ಅಷ್ಟೊತ್ತಿಗೆ ನನ್ನ ಪೋನ್ ರಿಂಗ್ ಆಯಿತು. ನಾನು ಹಲೋ ಅಂದ ಕೂಡಲೇ ಆ ಕಡೆಯಿಂದ ಹೆಣ್ಣು ಧ್ವನಿವೊಂದು ಕೇಳಿಸಿತು. ಅದು ಆತಂಕದಿಂದ ಕೂಡಿದ ಏನೋ ನಡೆದಿದೆ ಎಂಬ ಅಸ್ಪಷ್ಟ ಧ್ವನಿಯಾಗಿತ್ತು. ಹೇಳ ಬೇಕೋ, ಬೇಡವೋ ಎಂಬವಂತ್ತಿತ್ತು ಆಕೆಯ ಮಾತು. ಯಾರು ಅಂತ ವಿಚಾರಿಸಿದಾಗ ಕರೆ ಮಾಡಿದ ಹೆಣ್ಣು ಮಗಳು ತನ್ನ ಪರಿಚಯ ಹೇಳಿದಳು. 

ನಾವು ಬಹಳ ಮುಜುಗರದ, ತಲೆತಗ್ಗಿಸುವಂತಹಾ, ಅವಮಾನಕಾರಿಯಾದಂತಹಾ,ಸಮಾಜದಲ್ಲಿ ತಲೆ ಎತ್ತಿ ನಡೆಯದಂತಹಾ ಸಂಕಷ್ಟದಲ್ಲಿ ಸಿಲುಕಿದ್ದೀವಿ ಅಂತ ಎಂದಳಾಕೆ. ಅಂತದ್ದು ಏನಾಯ್ತು ಎಂದು ವಿಚಾರಿಸಿದಾಗ , ಅಳುಮಿಶ್ರಿತ ಧ್ವನಿಯಲ್ಲಿ ತನ್ನ ಸಹೋದರಿ ಒಬ್ಬ ಹಿಂದೂ ಯುವಕನ ಜೊತೆ ಮದುವೆಯಾಗಲು ಮುಂದಾಗಿದ್ದಾಳೆ ಎಂದು ಮಾತು ನಿಲ್ಲಿಸಿದಳು. ಮತ್ತೆ ಕೀಳು ಧ್ವನಿಯಲ್ಲಿ ಮಾತನಾಡಲು ಆರಂಭಿಸಿದ ಆ ಹೆಣ್ಣು ಮಗಳು. ಸಮಾಜದಲ್ಲಿ ಮಾನ ಮರ್ಯಾದೆಗೆ ಅಂಜಿ ಯಾರ ಹತ್ತಿರಾನೂ ಈ ವಿಷಯ ಹೇಳಲಾಗದೆ ನಿಮ್ಮ ಹತ್ತಿರ ಹೇಳುತ್ತಿದ್ದೇನೆ, ದಯಮಾಡಿ ನನಗೆ ಸಹಕಾರ ಮಾಡಿ. ಆಕೆಯನ್ನು ಹೇಗಾದರೂ ಮಾಡಿ ಆ ಕಾಫಿರ್ ಕೈಯಿಂದ ಕಾಪಾಡಿ , ಬೇರೆ ನೀಚ ಮುಸಲ್ಮಾನನ ಕೈ ಹಿಡಿದರೂ ಪರವಾಗಿರಲಿಲ್ಲ ಆದರೆ ಧರ್ಮ ಬಾಹಿರವಾಗಿ ಹಿಂದು ಜೊತೆ ಬದುಕಲು ಬಿಡದಂತ್ತೆ ಸಹಕರಿಸಿ. ಇದು ನನ್ನ ಹಾಗೂ ತನ್ನ ಕುಟುಂಬದ ಮಾರ್ಯಾದೆಯ ಪ್ರೆಶ್ನೆ ಎಂದು ಮಾತು ನಿಲ್ಲಿಸಿದಳು ಆಕೆ.

ತಕ್ಷಣ ನನಗೇನು ಪ್ರತ್ಯುತ್ತರ ನೀಡಬೇಕೆಂದು ತೋಚಲಿಲ್ಲ. ಎಲ್ಲಾ ಸರಿಹೋಗುತ್ತೆ ದುಖಿಃಸಬೇಡಿ ಎಂದು ಸಂತೈಸಿ ನಾನು ಸುಮ್ಮನಾದೆ. ಕಣ್ಣುಗಳನ್ನು ಮುಚ್ಚಿಕೊಂಡು ಸ್ವಲ್ಪ ಹೊತ್ತು ಹಾಗೇ ಯೋಚಿಸುತ್ತಿದ್ದಾಗ ಅದೆಷ್ಟೋ ಇಂಥಹಾ ಘಟನೆಗಳು ಕಣ್ಣ ಮುಂದೆ ಹಾಗೇ ಬಂದು ಹೋದವು. ಅಂತರ್ಜಾತಿ ಪ್ರೇಮ ಸಂಬಂಧಕ್ಕಾಗಿ ನಡೆದ ಮರ್ಯಾದಾ ಹತ್ಯೆಗಳು ನೆನಪಾದವು. ತಮ್ಮ ನಡುವಿನ ಸಬಂಧ ಸಮಾಜಕ್ಕೆ ಗೊತ್ತಾದಾಗ ಭಯಪಟ್ಟು ಆತ್ಮಹತ್ಯೆಗೆ ಶರಣಾದ ಘಟನೆಗಳು ನೆನಪಾದವು.
ಇದು ಈಕೆಯೊಬ್ಬಳ ಉದಾಹರಣೆಯಷ್ಟೇ ..... ಇಂಥಹಾ ವಿವಿಧ ಮತ ಧರ್ಮದ ಪ್ರೇಮಿಗಳು ಒಂದಾಗುವ ಸಂಧರ್ಭದಲ್ಲಿ ಮನೆಯವರ , ಪೋಷಕರ, ಸಮಾಜದ ವಿರೋಧವನ್ನು ಕಟ್ಟಿಕೊಳ್ಳಬೇಕಾಗಿ ಬರುತ್ತದೆ. ಸ್ವಜಾತಿಯ ನೀಚನೇ ಆಗಲಿ ಪರವಾಗಿಲ್ಲ ಪರಜಾತಿಯ ಸೊಭಗ ಮಾತ್ರ ಬೇಡ ಎಂಬುವ ಮನೋಭಾವ ನಮ್ಮ ಸಮಾಜದಲ್ಲಿದೆ. ಇದು ಸಹಜವೂ ಕೂಡಾ. ಯಾರಿಗೂ ಜಾತಿ ಧರ್ಮ ನೋಡಿ ಪ್ರೀತಿ ಪ್ರೇಮ ಕಾಮ ಮನಸ್ಸಿನಲ್ಲಿ ಹುಟ್ಟುವುದಿಲ್ಲ. ಇದೆಲ್ಲವೂ ಆಕಸ್ಮಿಕ ಎಂಬುವುದು ಒಪ್ಪಿಕೊಳ್ಳಲೇ ಬೇಕಾದ ವಿಚಾರ. ಆದರೆ ಧರ್ಮ ವಿಚಾರಕ್ಕೆ ಬಂದಾಗ ಹೆಂಡತಿ ಗಂಡ ,ಮಕ್ಕಳು ಎಲ್ಲರೂ ಬಲು ದೂರವಾಗುತ್ತಾರೆ. ಪ್ರೀತಿಯಿಂದ ಸಾಕಿ ಸಲುಹಿದ ಮುದ್ದಿನ ಮಗಳು ಅಂತರ್ಜಾತಿ ವಿವಾಹವಾಗಲು ಮುಂದಾದರೆ ಸಾಕು ಹೆತ್ತು , ಹೊತ್ತು ಸಾಕಿ ಸಲುಹಿದ ತಂದೆ ತಾಯಿಯ ಪ್ರೀತಿ ಅಲ್ಲಿಯೇ ಕಮರಿ ಹೋಗುತ್ತೆ. ಸಮಾಜಕ್ಕೆ ಆ ಹೆಣ್ಣು ಮಗಳು ಒಂದೇ ದಿನದಲ್ಲಿ ಶತ್ರುವಾಗುತ್ತಾಳೆ.
 
ಪ್ರೀತಿಸಿದವನ ಬಿಡಲೊಲ್ಲದೆ ಆತನ ಜೊತೆ ಬಾಳು ಕಂಡುಕೊಳ್ಳಲು ಹೊರಟ ಮಗಳ ಬಗ್ಗೆ ಪ್ರೀತಿ ಇದ್ದರೂ ಸಮಾಜಕ್ಕೆ ಹೆದರಿ ಮಗಳ ಮುಖ ನೋಡಲು ಮುಂದಾಗದ ಪೋಷಕರೂ ಇದ್ದಾರೆ. ಅಂತರ್ಜಾತಿ , ಅಂತಧರ್ಮ ಪ್ರೇಮ ಸಂಬಂಧಗಳು ಅದೆಷ್ಟೋ ಕುಟುಂಬಗಳನ್ನು ಗಾಢ ಸಂಬಂಧಗಳಿಂದಲೂ ದೂರ ಮಾಡುತ್ತಿವೆ . ಪ್ರೀತಿಯ ಬದಲಾಗಿ ಶತ್ರುತ್ವ ಬೆಳೆಯುವಂತೆ  ಮಾಡುತ್ತಿದೆ. ನನ್ನ ಗೆಳತಿಯ ಕಥೇನೂ ಇದೇ ಆಗಿದೆ. ಆಕೆಯ ಸುಖ ಸಂತೋಷ ಕುಟುಂಬಕ್ಕೆ ಮುಖ್ಯವಲ್ಲ, ಆಕೆಯ ಕುಟುಂಬದವರಿಗೆ ಧರ್ಮ ಅದನ್ನೆಲ್ಲಾ ಕಸಿದುಕೊಳ್ಳಲು ಪ್ರೇರೇಪಿಸುವಂತ್ತಾಗುತ್ತಿದೆ. ಧರ್ಮದಲ್ಲಿ ಯಾವುದೂ ಬಲವಂತವಿಲ್ಲ ಎಂಬ ಧರ್ಮಗ್ರಂಥಗಳ ವಾಕ್ಯಗಳು , ಶ್ಲೋಕಗಳು ಇಲ್ಲಿ ಯಾರಿಗೂ ನೆನಪಿಗೆ ಬರುವುದಿಲ್ಲ. ಧರ್ಮದ ಬಗ್ಗೆ ಇಷ್ಟೊಂದು ಗಾಢತೆ ಇರುವ ನಮ್ಮ ಸಮಾಜದಲ್ಲಿ ಮನೆ ಹುಡುಗ ಅಂತರ್ಜಾತಿಯ ವಿವಾಹ ವಾದರೆ ಅದು ದೊಡ್ಡ ತಪ್ಪಲ್ಲ . ಸಮಾಜಕ್ಕೂ ಹುಡುಗನ ಮನೆಯವರಿಗೂ ಅದು ದೊಡ್ಡ ತಪ್ಪೆಂದು ಅನಿಸೋದಿಲ್ಲ. ಆತನಿಗೆ ಅಥವಾ ಆತನ ಕುಟುಂಬಕ್ಕೆ ಸಮಾಜ ಬಹಿಷ್ಕಾರ ಹಾಕೋದಿಲ್ಲ. ಆದ್ರೆ ಮನೆ ಹೆಣ್ಣುಮಗಳು ಬೇರೆ ಜಾತಿಯ ಹುಡುಗನೊಂದಿಗೆ ವಿವಾಹವಾಗಲು ಮುಂದಾದಲ್ಲಿ ಧರ್ಮ ಜಾಗೃತಿ ಮೂಡಲು ಶುರುವಾಗುತ್ತದೆ. ಮನೆಯ ಗಂಡು ಮಗ ಅಂತರ್ಜಾತಿ ವಿವಾಹವಾದಾಗ ಆಡಿಕೊಳ್ಳದ ಸಮಾಜ ಹೆಣ್ಣು ಮಗಳು ಇದಕ್ಕೆ ಮುಂದಾದಲ್ಲಿ ಮನಸೋ ಇಚ್ಚೆ ಆಡಿಕೊಳ್ಳಲು ಶುರುಮಾಡುತ್ತದೆ. ಈ ಸಂಕೋಲೆಯಲ್ಲಿ ಸಿಲುಕಿಹಾಕಿದ ಅದೆಷ್ಟೋ ಮನಸ್ಸುಗಳು ಒಂದಾಗದೆ ಮುದುಡಿ ಹೋಗಿವೆ. ಇನ್ನು ಕೆಲವು ಸಮಾಜದ ಕೆಂಗಣ್ಣಿಗೆ ಗುರಿಯಾಗಿ ಜೀವಕಳೆದುಕೊಂಡಿವೆ.. ಹೀಗೆ ಕಮರಿ ಹೋದ ಅದೆಷ್ಟೋ ಮನಸ್ಸುಗಳು ಇಂದಲ್ಲ ನಾಳೆ ಬದಲಾಗುವುದು ಈ ಜನಾ ಮನ ಓ ನನ್ನ ಸಂಗಾತಿಯೇ, ಎಂಬ ನಿರೀಕ್ಷೆಯೊಂದಿಗಿದ್ದಾರೆ ........

No comments:

Post a Comment