Mar 19, 2013

ನವಸಮಾಜವಾದದ ಹರಿಕಾರ ಹ್ಯುಗೋ ಷಾವೇಜ್!



ಡಾ ಅಶೋಕ್ ಕೆ ಆರ್

ಹ್ಯುಗೋ ಷಾವೆಜ್! ಇಪ್ಪತ್ತೊಂದನೇ ಶತಮಾನದ ಸಮಾಜವಾದಿ ನಾಯಕ, ಲ್ಯಾಟಿನ್ ಅಮೆರಿಕಾದಲ್ಲಿ ಸಮಾಜವಾದದ ಉದಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವ, ಸಮಾಜವಾದದ ಹೆಸರಿನಲ್ಲಿ ಡಿಕ್ಟೇಟರ್ ಆಗಲು ಹೊರಟವ, ಪ್ರತಿಯೊಂದೂ ತನ್ನ ಆಣತಿಯಂತೆಯೇ ನಡೆಯಬೇಕು ಎಂಬ ಹಟದವ...... ಹ್ಯುಗೋ ಷಾವೆಜ್ ಬಗೆಗೆ ತಿಳಿಯಲು ಪುಸ್ತಕಗಳನ್ನೋ ಅಂತರ್ಜಾಲವನ್ನೋ ತೆರೆದು ಕುಳಿತರೆ ವಿವಿಧ ರೀತಿಯ ವ್ಯಕ್ತಿಕ್ವ ವರ್ಣನೆ ನಮ್ಮನ್ನು ತಬ್ಬಿಬ್ಬುಗೊಳಿಸುವುದು ಸಹಜ! ಉಳಿದ ದೇಶದವರ ಮಾತು ಬಿಡಿ ವೆನೆಜುವೆಲಾದ ನಾಗರೀಕರೇ ಅಂತರ್ಜಾಲದಲ್ಲಿ ಅಗಲಿದ ತಮ್ಮ ನಾಯಕನ ಬಗ್ಗೆ ವಿಷ ಕಾರಿದ್ದಾರೆ! ಹಾಗಿದ್ದರೆ ಹ್ಯುಗೋ ಷಾವೆಜ್ ಕೇವಲ ಸರ್ವಾಧಿಕಾರಿಯಾ? ವೆನೆಜುವೆಲಾಗೆ ಏನು ಕೊಡುಗೆಯನ್ನೇ ನೀಡಲಿಲ್ಲವಾ? ತನ್ನ ಅಹಂ ತೃಪ್ತಿಪಡಿಸಿಕೊಳ್ಳಲಷ್ಟೇ ಸಮಾಜವಾದದ ಹೆಸರು ಉಪಯೋಗಿಸಿಕೊಂಡ ನಾಯಕನಾ?!


ಜುಲೈ 28, 1954ರಲ್ಲಿ ಕೆಳ ಮಧ್ಯಮ ವರ್ಗದ ಶಿಕ್ಷಕರ ಮಗನಾಗಿ ಹುಟ್ಟಿದ ಷಾವೆಜ್ ಮನೆಯಲ್ಲಿದ್ದ ಬಡತನದ ಕಾರಣದಿಂದ ತನ್ನ ಅಜ್ಜಿಯೊಡನೆ ಬೆಳೆಯುತ್ತಾನೆ. ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಮುಗಿಸಿ ತನ್ನ ಹದಿನೇಳನೇ ವಯಸ್ಸಿನಲ್ಲಿ ವೆನೆಜುವೆಲಾದ ರಾಜಧಾನಿ ಕ್ಯಾರಾಕಾಸ್ ನಲ್ಲಿ ಮಿಲಿಟರಿ ಅಕಾಡೆಮಿ ಸೇರುತ್ತಾನೆ. ಕ್ಯಾರಾಕಾಸ್ ನ ಬದುಕು ಷಾವೆಜ್ ನಿಗೆ ಅಲ್ಲಿನ ಕಾರ್ಮಿಕರ ನಡುವೆ ವ್ಯಾಪಕವಾಗಿದ್ದ ಕಡುಬಡತನದ ಪರಿಚಯ ಮಾಡಿಸುತ್ತದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಹ್ಯುಗೋನಲ್ಲಿ ಮೂಡಲು ಬಾಲ್ಯದ ಬಡತನ ಮತ್ತು ಕ್ಯಾರಾಕಾಸ್ ನಲ್ಲಿ ಕಂಡ ಬಡಕಾರ್ಮಿಕರ ಜೀವನ ಪ್ರಮುಖವಾದುದು. ಬೇಸ್ ಬಾಲ್ ಆಡುತ್ತ, ಕವನ, ಕಥೆ, ನಾಟಕಗಳನ್ನು ರಚಿಸುತ್ತ ಸಾಗಿದ ಹ್ಯುಗೋನ ಯೌವನದ ದಿನಗಳು ಬಹಳವಾಗಿ ಪ್ರಭಾವಿತವಾದದ್ದು ಹತ್ತೊಂಬತ್ತನೇ ಶತಮಾನದ ದಕ್ಷಿಣ ಅಮೆರಿಕಾದ ಕ್ರಾಂತಿಕಾರಿ ಸಿಮೋನ್ ಬೊಲಿವರ್ ಮತ್ತು ಚೆ ಗುವಾರಾನ ಜೀವನದಿಂದ. ಮಿಲಿಟರಿ ಅಕಾಡೆಮಿಯಲ್ಲಿನ ಶಿಕ್ಷಣ ಮುಗಿದ ನಂತರ ಸಾಮಾಜಿಕ ನ್ಯಾಯಕ್ಕಾಗಿ ಶಸ್ತ್ರಸಹಿತ ಪಥ ತುಳಿದಿದ್ದ ಎಡಪಂಥೀಯ ‘ಉಗ್ರರನ್ನು’ ಹತ್ತಿಕ್ಕುವ ಕೆಲಸಕ್ಕೆ ನಿಯೋಜಿಸಲ್ಪಡುತ್ತಾನೆ ಹ್ಯುಗೋ! ಶಸ್ತ್ರಕ್ರಾಂತಿ ಅದಾಗಲೇ ಹೆಚ್ಚು ಕಡಿಮೆ ನಾಮಾವಶೇಷವಾಗಿದ್ದ ಕಾರಣ ಹ್ಯುಗೋಗೆ ವಿರಾಮದ ಸಮಯ ಹೆಚ್ಚೆನ್ನಿಸುವಷ್ಟೇ ಸಿಗುತ್ತದೆ. ವಿರಾಮದಲ್ಲಿ ಅಡ್ಡಾಡುವಾಗ ಎಡಪಂಥೀಯ ‘ಉಗ್ರರಿಗೆ’ ಸೇರಿದ ಹಳೆಯ ವಾಹನವೊಂದು ಸಿಕ್ಕು ಅದರೊಳಗೆ ಎಡಪಂಥೀಯ ವಿಚಾರಧಾರೆಗಳ ಪುಸ್ತಕಗಳು ದೊರೆತು ಎಡಪಂಥೀಯರನ್ನು ಹತ್ತಿಕ್ಕಲು ಬಂದ ಹ್ಯುಗೋ ಎಡಪಂಥೀಯ ಸಿದ್ಧಾಂತದೆಡೆಗೆ ಆಕರ್ಷಿತನಾಗಿಬಿಡುತ್ತಾನೆ! ಸೆರೆಸಿಕ್ಕ ಎಡಪಂಥೀಯರಿಗೆ ಸೈನಿಕರು ನೀಡುವ ಚಿತ್ರಹಿಂಸೆಯನ್ನು ವಿರೋಧಿಸುತ್ತಾನೆ. ದೇಶದಲ್ಲಿ ಯಥೇಚ್ಛವಾಗಿರುವ ಪೆಟ್ರೋಲಿಯಮ್ ಉತ್ಪನ್ನಗಳಿಂದ ದೊರೆಯುವ ಆದಾಯ ಮೇಲ್ಪದರದ ಜನರಿಗಷ್ಟೇ ತಲುಪಿ ಕೆಳವರ್ಗದ ಜನರಲ್ಲಿ ‘ಸಮಾಜದಿಂದ ಹೊರಗಾದ’ ಭಾವನೆ ಮೂಡಿಸುತ್ತಿದ್ದ ಅಂದಿನ ಸಾಮಾಜಿಕ ಪರಿಸ್ಥಿತಿಯನ್ನು ಬದಲಿಸಲು ಹವಣಿಸುತ್ತಿದ್ದ ಎಡಪಂಥೀಯ ವಿಚಾರಧಾರೆಯನ್ನು ಬೆಂಬಲಿಸುತ್ತನಾದರೂ ಅವರ ಶಸ್ತ್ರಸಹಿತ ಕ್ರಾಂತಿಯ ಬಗ್ಗೆ ಹ್ಯುಗೋನಿಗೆ ಸಂಪೂರ್ಣ ವಿಶ್ವಾಸ ಬೆಳೆಯುವುದಿಲ್ಲ.

ಹೆಚ್ಚುತ್ತಿದ್ದ ಸಾಮಾಜಿಕ ಅಸಮಾನತೆ ಎಡಪಂಥೀಯ ವಿಚಾರಧಾರೆಗಳ ಪ್ರಭಾವ ಹ್ಯುಗೋನಿಗೆ 1977ರಲ್ಲಿ ಸೈನ್ಯದೊಳಗೇ ಕ್ರಾಂತಿಕಾರಿಗಳ ಭೂಗತ ಗುಂಪೊಂದನ್ನು ಕಟ್ಟಲು ಪ್ರೇರೇಪಿಸುತ್ತದೆ! ಬದಲಾವಣೆ ಬೇಕು ಆದರೆ ಹೇಗೆ ಎಂಬುದರ ಅರಿವಿಲ್ಲದೆ ಶುರುವಾದ ಈ ಕ್ರಾಂತಿಕಾರಿ ಗುಂಪಿನಿಂದ ಹೆಚ್ಚೇನೂ ಪ್ರಯೋಜನವಾಗುವುದಿಲ್ಲ! ಐದು ವರ್ಷದ ತರುವಾಯ ಸೈನ್ಯದೊಳಗೇ ಬೊಲಿವೇರಿಯನ್ ಕ್ರಾಂತಿಕಾರಿ ಸೈನ್ಯ [Bolivarian revolutionary army – 200]ದ ಸ್ಥಾಪನೆ ಮಾಡುತ್ತಾನೆ ಹ್ಯುಗೋ ಷಾವೆಜ್! ಹ್ಯುಗೋ ಬಹಳವಾಗಿ ಆದರಿಸುತ್ತಿದ್ದ ಝಮೋರಾ, ಸಿಮೋನ್ ಬೊಲಿವರ್ ಮತ್ತು ಸಿಮೋನ್ ರೋಡ್ರಿಗ್ವೆಜ್ ನಿಂದ ಪ್ರಭಾವಿತವಾಗಿದ್ದ ಈ ಕ್ರಾಂತಿಕಾರಿ ಸೈನ್ಯಕ್ಕೆ ಹ್ಯುಗೋ ಹೇಳುವ ಹಾಗೆ ಯಾವುದೇ ರಾಜಕೀಯ ಆಕಾಂಕ್ಷೆಗಳಿರಲಿಲ್ಲ. ವೆನೆಜುವೆಲಾದ ಸೈನಿಕ ಇತಿಹಾಸವನ್ನು ತಿಳಿಯುವುದೇ ಆ ಗುಂಪಿನ ಮುಖ್ಯ ಉದ್ದೇಶವಾಗಿತ್ತು. ಈ ಕ್ರಾಂತಿಕಾರಿ ಸೈನ್ಯಕ್ಕೆ ಹೊಸಬರನ್ನು ಸೇರಿಸಿಕೊಳ್ಳುವ ಹ್ಯುಗೋನ ಉದ್ದೇಶಕ್ಕೆ ಸಹಾಯಕವಾಗಿ 1981ರಲ್ಲಿ ಷಾವೇಜ್ ಮಿಲಿಟರಿ ಅಕಾಡೆಮಿಯಲ್ಲಿ ಶಿಕ್ಷಕನಾಗಿ ನೇಮಿಸಲ್ಪಡುತ್ತಾನೆ. ಬೊಲಿವೆರಿಯನ್ ಉದ್ದೇಶಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುತ್ತಾ ಕ್ರಾಂತಿಕಾರಿ ಸೈನಿಕರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸಫಲನಾಗುತ್ತಾನೆ ಹ್ಯುಗೋ. ಹ್ಯುಗೋನ ಚಲನವಲನಗಳ ಬಗ್ಗೆ ಸೈನ್ಯದ ಉನ್ನತಾಧಿಕಾರಿಗಳಿಗೆ ಸಂಶಯ ಮೂಡುತ್ತಾದರೂ ಸಾಕ್ಷಿಗಳ ಕೊರತೆಯಿಂದ ಯಾವೊಂದೂ ಶಿಸ್ತು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಶಿಕ್ಷಕನ ವೃತ್ತಿಯಿಂದ ದೂರದ ಊರೊಂದಕ್ಕೆ ಕಳುಹಿಸಿಬಿಡುತ್ತಾರೆ. ಆದಿವಾಸಿಗಳೇ ಹೆಚ್ಚಿದ್ದ ಆ ಪ್ರದೇಶದಲ್ಲಿ ಹ್ಯುಗೋ ಪಡೆದ ಅನುಭವಗಳು ನಂತರದ ದಿನಗಳಲ್ಲಿ ಆದಿವಾಸಿ ಪರ ನಿರ್ಣಯಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಿದ್ದು ಸತ್ಯ.

ಸೋಲಿನಲ್ಲಿ ಗೆಲುವು ಪಡೆದ ಆಪರೇಷನ್ ಝಮೋರಾ! - 

ಪೆರೇಜ್ ಆಡಳಿತದಲ್ಲಿದ್ದ ಅವಧಿಯಲ್ಲಿ ವ್ಯಾಪಾಕವಾಗಿದ್ದ ಭ್ರಷ್ಟಾಚಾರ, ಅಮೆರಿಕಾಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ತೆಗೆದುಕೊಂಡ ನಿರ್ಧಾರಗಳು ಹ್ಯುಗೋನನ್ನು ದಂಗೆಯೇಳಲು ಪ್ರೇರೇಪಿಸುತ್ತದೆ. ಈ ಸೈನಿಕ ದಂಗೆಗಿದ್ದ ಹೆಸರು ಆಪರೇಷನ್ ಝಮೋರಾ. ಪೆರೇಜ್ ನನ್ನು ಬಂಧಿಸಿ ದೇಶದ ಆಡಳಿತ ಚುಕ್ಕಾಣಿಯನ್ನು ಸೈನಿಕ ದಂಗೆಯ ಮೂಲಕ ಪಡೆಯಲುದ್ದೇಶಿಸಿದ ಹ್ಯುಗೋನ ನಿರ್ಧಾರ ಸೈನ್ಯದೊಳಗಿನ ಬಿರುಕುಗಳಿಂದ, ಅತಿ ಕಡಿಮೆಯಿದ್ದ ಬೆಂಬಲ, ಅಸರ್ಮಪಕ ಯೋಜನೆಗಳ ಕಾರಣದಿಂದ ದಂಗೆ ಸಫಲವಾಗುವುದಿಲ್ಲ. ಒಂದರ್ಥದಲ್ಲಿ ಇದು ಒಳ್ಳೆಯದೇ ಆಯಿತು, ಮಿಲಿಟರಿ ಸರ್ವಾಧಿಕಾರಿ ಎಂಬ ಆರೋಪಪಟ್ಟಿಯಿಂದ ಷಾವೇಜ್ ಪಾರಾಗಿಬಿಟ್ಟರು! ತನ್ನ ಕ್ರಾಂತಿಕಾರಿ ಸೈನ್ಯದ ಬಹುತೇಕರು ಬಂಧನಕ್ಕೊಳಗಾಗುತ್ತಲೋ ಅಥವಾ ಎದುರಾಳಿಗಳ ಗುಂಡೇಟಿಗೆ ಎದೆಯೊಡ್ಡಿ ಸಾಯುತ್ತಲೋ ಇರುವಾಗ ಶರಣಾಗತನಾಗಲು ಹ್ಯುಗೋ ನಿರ್ಧರಿಸುತ್ತಾನೆ; ಅದನ್ನೊರತುಪಡಿಸಿ ಬೇರೆ ದಾರಿಯೂ ಇರುವುದಿಲ್ಲ. ತನ್ನ ಸೈನಿಕರು ದಂಗೆಯನ್ನು ಕೊನೆಗೊಳಿಸುತ್ತಾರೆ, ಆದರೆ ನನಗೆ ದೂರದರ್ಶನದಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿ ವೆನೆಜುವೆಲಾದ ವಿವಿಧ ಪ್ರದೇಶಗಳಲ್ಲಿ ಚದುರಿಹೋಗಿರುವ ತನ್ನ ಸೈನಿಕರನ್ನು ಕುರಿತು ಮಾತನಾಡಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಳ್ಳುತ್ತಾನೆ! “ಕಾಮ್ರೇಡ್ಸ್, ದುರದೃಷ್ಟವಶಾತ್, ಸದ್ಯಕ್ಕೆ, ನಾವು ಅಂದುಕೊಂಡ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರವನ್ನು ಪಡೆದುಕೊಳ್ಳುವ ನಮ್ಮ ಉದ್ದೇಶ ಸದ್ಯಕ್ಕೆ ವಿಫಲಗೊಂಡಿದೆ. ನೀವೆಲ್ಲರೂ ದೇಶದ ವಿವಿಧ ಭಾಗಗಳಲ್ಲಿ ನಿಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ. ಸದ್ಯಕ್ಕೆ ಪರಿಸ್ಥಿತಿ ನಮಗೆ ಪೂರಕವಾಗಿರದ ಕಾರಣ ನಮ್ಮ ಕಾರ್ಯಗಳನ್ನು ವಿಮರ್ಶಿಸೋಣ. ಹೊಸ ಅವಕಾಶಗಳು ಖಂಡಿತ ದೊರೆಯುತ್ತವೆ ಮತ್ತು ದೇಶ ಉತ್ತಮ ಭವಿಷ್ಯದೆಡೆಗೆ ಸಾಗುವುದು ನಿಶ್ಚಿತ” ಎಂದು ಹ್ಯುಗೋ ಮಾಡಿದ ಭಾಷಣ ದೇಶವಾಸಿಗಳಲ್ಲಿ ಅದರಲ್ಲೂ ಬಡವರ್ಗದ ಜನತೆಯಲ್ಲಿ ಹೊಸ ಆಶಾಕಿರಣ ಮೂಡಿಸಿದ್ದು ಸುಳ್ಳಲ್ಲ. ಹ್ಯುಗೋನ ಬಂಧನವಾಗುತ್ತದೆ. ಜೈಲಿನಿಂದ ಬಿಡುಗಡೆಗೊಂಡ ನಂತರ ಲ್ಯಾಟಿನ್ ಅಮೆರಿಕಾದ ಇತರೆ ದೇಶಗಳಿಂದ ಬೊಲಿವೆರಿಯೆನ್ ಚಳುವಳಿಗೆ ಬೆಂಬಲ ಪಡೆಯುವ ಸಲುವಾಗಿ ಅರ್ಜೆಂಟೀನಾ, ಉರುಗ್ವೆ, ಚಿಲಿ, ಕೊಲಂಬಿಯಾಗೆ ಭೇಟಿ ನೀಡುತ್ತಾನೆ. ಕ್ಯುಬಾದಲ್ಲಿ ಫಿಡೆಲ್ ಕ್ಯಾಸ್ಟ್ರೋನನ್ನು ಕಾಣುತ್ತಾನೆ, ಕ್ಯಾಸ್ಟ್ರೋ ನನ್ನ ತಂದೆಯಿದ್ದಂತೆ ಎನ್ನುತ್ತಾನೆ ಹ್ಯುಗೋ. ವೆನೆಜುವೆಲಾಗೆ ಹಿಂದಿರುಗಿದ ನಂತರ ಮುಖ್ಯವಾಹಿನಿ ಮಾಧ್ಯಮವನ್ನು ಆಕರ್ಷಿಸಲು ವಿಫಲನಾದರೂ ಸ್ಥಳೀಯ ಸಣ್ಣ ಮಟ್ಟದ ಪತ್ರಿಕೆಗಳ ಬೆಂಬಲ ಗಳಿಸುತ್ತಾನೆ. 

ನವಬಂಡವಾಳತ್ವಕ್ಕೆ ತೆರೆದುಕೊಂಡಿದ್ದ ಅಗಾಧ ತೈಲ ಸಂಪತ್ತಿನ ವೆನೆಜುವೆಲಾದ ಆರ್ಥಿಕ ಸಾಮಾಜಿಕ ಪರಿಸ್ಥಿತಿ ದುರ್ಭರವಾಗಿತ್ತು 1997ರ ಸುಮಾರಿಗೆ. ಯು ಎನ್ ನ ವರದಿಗಳ ಪ್ರಕಾರವೇ ವೆನೆಜುವೆಲಾ ನಾಗರೀಕರ ಆದಾಯದಲ್ಲಿ ಇಳಿತವಾಗಿತ್ತು, ಬಡತನ ಪ್ರಮಾಣದಲ್ಲಿ ಏರಿಕೆಯಾಗಿತ್ತು, ಕೊಲೆ ಸುಲಿಗೆಗಳು ಹೆಚ್ಚಾಗುತ್ತ ಸಾಗಿದ್ದವು. ಹ್ಯುಗೋನ ನಿರೀಕ್ಷೆಯಂತೆ ಕ್ರಾಂತಿಗೆ ವೇದಿಕೆ ಸಿದ್ಧವಾಗಿತ್ತು. ಅಧಿಕಾರವನ್ನು ಬಂದೂಕಿನ ಮೊನೆಯ ಮುಖಾಂತರ ಪಡೆಯಬೇಕೋ ಅಥವಾ ಮತಪೆಟ್ಟಿಗೆಯ ಮೂಲಕವೋ ಎಂಬ ಜಿಜ್ಞಾಸೆ ನಡೆದಿತ್ತು ಬೊಲಿವೆರಿಯನ್ ಚಳುವಳಿಯಲ್ಲಿ. ಮೊದಮೊದಲು ಹ್ಯುಗೋ ಬಂದೂಕು ಕ್ರಾಂತಿಗೆ ಒಲವು ವ್ಯಕ್ತಪಡಿಸಿದ್ದನಾದರೂ ಸಹ ಕಾಮ್ರೇಡ್ ಕಾರ್ಡಿನಾಸ್ ಝೂಲಿಯಾ ರಾಜ್ಯದ ಗವರ್ನರ್ ಆಗಿ ಆಯ್ಕೆಯಾದ ನಂತರ ಹೊಸ ರಾಜಕೀಯ ಪಕ್ಷ ಕಟ್ಟಿ ಜನರ ಬಳಿಗೆ ತೆರಳಿದರು. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯೇ ಗುರಿಯಾಗಿಸಿಕೊಂಡಿದ್ದ ಹ್ಯುಗೋನ ಪಕ್ಷವನ್ನು ಬಡಜನತೆ ಮತ್ತು ಕೆಳಮಧ್ಯಮವರ್ಗದವರು ಬಹುವಾಗಿ ಬೆಂಬಲಿಸಿದರು. 1999ರಲ್ಲಿ ವೆನೆಜುವೆಲಾದ ಅಧ್ಯಕ್ಷರಾದರು ಷಾವೇಜ್. 

ಅಧಿಕಾರಾವಧಿಯಲ್ಲಿ -

1999ರ ನಂತರ ಯಾವ ಚುನಾವಣೆಯಲ್ಲೂ ಷಾವೇಜ್ ಸೋಲು ಕಾಣಲಿಲ್ಲ. ಕೊನೆಗೆ ಷಾವೇಜ್ನನ್ನು ಸೋಲಿಸಿದ್ದು ಮಾರಣಾಂತಿಕ ಕ್ಯಾನ್ಸರ್ ಮಾತ್ರ. ಆದರೆ ಅಧಿಕಾರದ ಗದ್ದುಗೆ ಸುಲಭದ್ದಾಗಿರಲಿಲ್ಲ. 2002ರಲ್ಲಿ ಷಾವೇಜ್ ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಷಾವೇಜ್ ನನ್ನು ಕೆಲದಿನದ ಮಟ್ಟಿಗೆ ಅಧ್ಯಕ್ಷ ಸ್ಥಾನದಿಂದ ದೂರವೂ ಇಟ್ಟಿತ್ತು! ಜನರಿಂದಲೇ ಆಯ್ಕೆಗೊಂಡಾಗಲೂ ಈ ರೀತಿಯ ಪ್ರತಿಭಟನೆಗಳು ನಡೆದಿದ್ಯಾಕೆ? ಇಷ್ಟು ಪ್ರತಿಭಟನೆಗಳು ನಡೆದ ನಂತರವೂ ಯಾವೊಂದೂ ಚುನಾವಣೆಯಲ್ಲೂ ಸೋಲದಿದ್ದುದ್ಹೇಗೆ? ಇವಕ್ಕೆಲ್ಲ ಉತ್ತರ ಬಹುಶಃ ತೈಲ ಸಂಪತ್ತಿನ ಹಂಚಿಕೆಯಲ್ಲಿದೆ. ಪ್ರಪಂಚದ ಅತಿ ಹೆಚ್ಚು ಪೆಟ್ರೋಲಿಯಮ್ ಉತ್ಪನ್ನಗಳನ್ನು ಉತ್ಪಾದಿಸುವ ಮೊದಲ ಹತ್ತು ರಾಷ್ಟ್ರಗಳಲ್ಲಿ ವೆನೆಜುವೆಲಾ ಕೂಡ ಒಂದು. ತೈಲೋತ್ಪನ್ನವಿದ್ದಾಗ್ಯೂ ಬಡತನದಿಂದ ಬಳಲುತ್ತಿದುದಕ್ಕೆ ಬಹುಮುಖ್ಯ ಕಾರಣ ತೈಲ ಸಂಪತ್ತಿನ ನಿರ್ವಹಣೆ ಸರಕಾರದ್ದಾಗಿರದೆ ಖಾಸಗಿ ಕಂಪನಿಗಳದ್ದಾಗಿತ್ತು. ಹಂತಹಂತವಾಗಿ ಹ್ಯುಗೋ ಮಾಡಿದ ಮೊದಲ ಕೆಲಸವೆಂದರೆ ತೈಲ ಕಂಪನಿಗಳ ರಾಷ್ಟ್ರೀಕರಣ. ಖಾಸಗಿ ಕಂಪನಿಗಳವರು ತಮ್ಮ ಸ್ವತ್ತೆಂದುಕೊಂಡಿದ್ದನ್ನು ರಾಷ್ಟ್ರದ ಆಸ್ತಿಯನ್ನಾಗಿ ಹ್ಯುಗೋ ಪರಿವರ್ತಿಸಿದ್ದು ಆ ವಲಯದಲ್ಲಿ ಅಶಾಂತಿಯುಂಟುಮಾಡಿತ್ತು. ಇದರೊಟ್ಟಿಗೆ 2001ರ ಸುಮಾರಿಗೆ ಶಿಕ್ಷಣದಲ್ಲಿ ಮೂಲಭೂತ ಬದಲಾವಣೆ ತರಬೇಕೆಂದಿದ್ದ ಹ್ಯುಗೋಗೆ ಮಧ್ಯಮ ವರ್ಗದ ಪೋಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಶಿಕ್ಷಣವನ್ನು ಬೊಲಿವೆರಿಯನ್ ಸಿದ್ಧಾಂತಗನುಗುಣವಾಗಿ ಬದಲಿಸಲು ಹೊರಡುವುದು ಸರಿಯಲ್ಲ ಎಂಬುದವರ ವಾದವಾಗಿತ್ತು. ಪ್ರತಿಭಟನೆಗಳು ಹೆಚ್ಚಾಗುತ್ತ ಸಾಗಿ ಕೊನೆಗೆ ಷಾವೇಜ್ ನಿಂದ ಅಧ್ಯಕ್ಷ ಪದವಿಯನ್ನು ಬಲವಂತವಾಗಿ ಕಿತ್ತುಕೊಳ್ಳಲಾಯಿತಾದರೂ ಕೆಲವೇ ದಿನಗಳಲ್ಲಿ ಅಧಿಕಾರಕ್ಕೆ ಮರಳಿ ಬರುವಲ್ಲಿ ಸಫಲರಾದರು. ಈ ಅಶಾಂತಿಯ ಹಿಂದೆ ಅಮೆರಿಕಾದ ಕೈವಾಡವೂ ಇರಬಹುದೆಂಬ ಶಂಕೆ ವ್ಯಕ್ತವಾಯಿತು. ಕಾರಣ, ತೈಲ ಸಂಪತ್ತಿನ ನಿರ್ವಹಣೆಯಲ್ಲಿ ಅಮೆರಿಕಾದ ಮಾತಿಗೆ ಬೆಲೆ ಕೊಡದಿದ್ದುದು, ಲ್ಯಾಟಿನ್ ಅಮೆರಿಕಾದಲ್ಲಿ ಸಮಾಜವಾದದ ಬೆಳವಣಿಗೆ ಹ್ಯುಗೋ ಆಡಳಿತ ಮಾಡುತ್ತಿದ್ದ ಸಹಾಯ ಮತ್ತು ಅಮೆರಿಕಾದ ವಿದೇಶಾಂಗ ನೀತಿಗಳನ್ನು ಬಹಿರಂಗವಾಗಿ ಹ್ಯುಗೋ ಷಾವೇಜ್ ಟೀಕಿಸುತ್ತಿದ್ದ ರೀತಿ.

ಅಮೆರಿಕಾದ ವಿರೋಧ, ದೇಶದೊಳಗೇ ಮಧ್ಯಮ ಮೇಲ್ಮಧ್ಯಮ ವರ್ಗದ ವಿರೋಧ, ಮುಖ್ಯವಾಹಿನಿ ಮಾಧ್ಯಮಗಳ ವಿರೋಧಗಳ ನಡುವೆಯೂ ಇಪ್ಪತ್ತೊಂದನೆಯ ಶತಮಾನದ ಸಮಾಜವಾದದ ಹರಿಕಾರನಾಗಿ ಹ್ಯುಗೋ ರೂಪುಗೊಂಡಿದ್ದಾದರೂ ಹೇಗೆ? ಬಹುಶಃ ಆರ್ಥಿಕ ಅಂಕಿ ಸಂಖ್ಯೆಗಳೇ ಹ್ಯುಗೋನ ಯಶಸ್ಸನ್ನು ಮತ್ತು ಬಡಜನರ ಬೆಂಬಲ ಗಳಿಸಿದ ಕಾರಣವನ್ನು ತಿಳಿಸುತ್ತದೆ. 

Ø  1996ರಲ್ಲಿ 71ರಷ್ಟಿದ್ದ ಬಡವರ ಪ್ರಮಾಣ 2012ರಲ್ಲಿ 21ರಷ್ಟಿದೆ. ಕಡುಬಡವರ ಪ್ರಮಾಣ 40ರಿಂದ 7.3ಕ್ಕೆ ಇಳಿದಿದೆ.
Ø  ಮೂರರಲ್ಲಿ ಒಬ್ಬ ಪ್ರಜೆಗೆ ಉನ್ನತ ವ್ಯಾಸಂಗದವರೆಗೂ ಉಚಿತ ಶಿಕ್ಷಣ.
Ø  ಹತ್ತು ವರ್ಷದ ಅವಧಿಯಲ್ಲಿ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುವ ಹಣದಲ್ಲಿ ಶೇಕಡಾ 60ರಷ್ಟು ಹೆಚ್ಚಳ.
Ø  ಅಮೆರಿಕಾದಿಂದ ನಾನಾ ರೀತಿಯ ನಿರ್ಬಂಧಗಳಿಗೊಳಗಾಗಿದ್ದ ಕ್ಯುಬಾಗೆ ತೈಲೋತ್ಪನ್ನಗಳನ್ನು ನೀಡಿ ಬದಲಿಗೆ ಕ್ಯುಬಾದ ವೈದ್ಯರ ಸೇವೆಯನ್ನು ಪಡೆಯುವಲ್ಲಿ ಯಶಸ್ವಿ. ಇದರಿಂದ ದೇಶವಾಸಿಗಳ ಆರೋಗ್ಯದಲ್ಲಿ ಸುಧಾರಣೆ.
Ø  ಹೊರದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಆಹಾರ ಉತ್ಪನ್ನಗಳ ಪ್ರಮಾಣ 90 ರಿಂದ ಮೂವತ್ತಕ್ಕೆ ಇಳಿಕೆ.
Ø  ಮಕ್ಕಳ ಅಪೌಷ್ಟಿಕತೆಯ ಪ್ರಮಾಣ 7.7ರಿಂದ ಐದಕ್ಕೆ ಇಳಿಕೆ.
Ø  ಮಕ್ಕಳ ಸಾವಿನ ಪ್ರಮಾಣ ಸಾವಿರಕ್ಕೆ ಇಪ್ಪತ್ತೈದಿದ್ದಿದ್ದು ಈಗ ಹದಿಮೂರು.
Ø  1996ರಲ್ಲಿ ಹತ್ತು ಸಾವಿರ ಜನರಿಗೆ ಹದಿನೆಂಟು ಮಂದಿ ವೈದ್ಯರಿದ್ದರು, ಈಗ ಹತ್ತುಸಾವಿರಕ್ಕೆ ಐವತ್ತೆಂಟು ಮಂದಿ ವೈದ್ಯರಿದ್ದಾರೆ!

ಹ್ಯುಗೋ ಷಾವೇಜ್ ಸಾಧಿಸಿದ್ದು ಬಹಳಷ್ಟು, ಇಪ್ಪತ್ತೊಂದನೆಯ ಶತಮಾನಕ್ಕೆ ಸರಿಹೋಗುವಂತೆ ಸಮಾಜವಾದವನ್ನು ಮಾರ್ಪಡಿಸಿದ್ದೂ ಪ್ರಚುರಪಡಿಸಿದ್ದೂ ಹ್ಯುಗೋನ ಬಹುಮುಖ್ಯ ಸಾಧನೆಯೇ ಸರಿ. ಇನ್ನು ಬಹಳಷ್ಟನ್ನು ಸಾಧಿಸುತ್ತಿದ್ದ ಹ್ಯುಗೋನ ಬದುಕು ಮಾರಣಾಂತಿಕ ಕ್ಯಾನ್ಸರ್ನಿಂದ ಬಹುಬೇಗನೆ ಅಂತ್ಯಗೊಂಡಿದೆ. ನವಯುಗದ ಸಮಾಜವಾದದ ಪರಿಯನ್ನು ವೀಕ್ಷಿಸಲು ಅಥವಾ ಕೊನೇ ಪಕ್ಷ ಹ್ಯುಗೋನ ವಿರೋಧಿಗಳು “ಷಾವೇಜ್ ಸರ್ವಾಧಿಕಾರಿಯಾಗುತ್ತಿದ್ದಾನೆ” ಎಂದು ಹರಡುತ್ತಿದ್ದ ಹುಯಿಲು ನಿಜವಾಗುತ್ತಿತ್ತೋ ಇಲ್ಲವೋ ಎಂಬುದನ್ನು ಗಮನಿಸಲಾದರೂ ಹ್ಯುಗೋ ಮತ್ತಷ್ಟು ಬದುಕಬೇಕಿತ್ತು. ನೂರಾರು ಬಗೆಯ ವಿರೋಧದ ನಡುವೆಯೂ ಜನರ ನಡುವಿನಿಂದ ಬೇರೆಯಾಗದ ತನ್ನದೇ ಜನಪರ ಪಥ ನಿರ್ಮಿಸಿ ಸಾಧಿಸಿ ತೋರಿಸಿದ ಹ್ಯುಗೋ ಷಾವೇಜ್ ಗೊಂದು ಲಾಲ್ ಸಲಾಮ್!
ರಾಯಚೂರಿನ 'ಪ್ರಜಾಸಮರ' ಪತ್ರಿಕೆಗೆ ಬರೆದಿದ್ದ ಲೇಖನ
photo source -  toledoblade

No comments:

Post a Comment