Mar 13, 2013

ಭಾರತದ ಮಾಣಿಕ್ಯ – ಮಾಣಿಕ್ ಸರ್ಕಾರ್.



ಡಾ ಅಶೋಕ್ ಕೆ ಆರ್

ಭಾರತ ಬಡದೇಶವೇ? ನಮ್ಮ ರಾಜಕಾರಣಿಗಳು ಅಧಿಕೃತವಾಗಿಯೇ ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು ನೋಡಿದರೆ ಭಾರತದಲ್ಲಿ ಬಡವರ ಅಸ್ತಿತ್ವವೇ ಇಲ್ಲವೇನೋ ಎಂಬ ಭಾವನೆ ಮೂಡಿದರೆ ತಪ್ಪಲ್ಲ. ಎಲ್ಲೋ ಕೆಲವರನ್ನು ಹೊರತುಪಡಿಸಿ ನಮ್ಮ ಸಂಸದರು ಸಚಿವರು ಶಾಸಕರು ಮುಖ್ಯಮಂತ್ರಿಗಳೆಲ್ಲ ಕೋಟಿಗೂ ಅಧಿಕ ಬೆಲೆಬಾಳುವವರೇ! ಶಾಸನಸಭೆಯಲ್ಲಿ ಯಾರದೂ ವಿರೋಧವಿಲ್ಲದೆ ಅಂಗೀಕೃತವಾಗುವ ಮಸೂದೆ “ಶಾಸಕ – ಸಚಿವರ” ವೇತನ ಹೆಚ್ಚಳ ಮಾತ್ರ! ರಾಜಕಾರಣಿಗಳ ಬಗ್ಗೆ ರಾಜಕೀಯದ ಬಗ್ಗೆ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿರುವ ಸಿನಿಕತೆಯ ನಡುವೆ ರಾಜಕಾರಣವೆಂದರೆ ಕೇವಲ ಹಣ ಮಾಡುವ, ಅನೈತಿಕ ರೀತಿಯಲ್ಲಿ ಜನರ ಮಧ್ಯೆಯೇ ವಿರೋಧ ಬೆಳೆಸುವ ದಂಧೆಯಲ್ಲ ಎಂಬುದನ್ನು ನಿರೂಪಿಸುವ ರಾಜಕಾರಣಿಗಳೂ ಇದ್ದಾರೆ ಎಂದರೆ ನಂಬುವುದು ಕೊಂಚ ಕಷ್ಟದ ಕೆಲಸವೇ ಸರಿ! ಅದರಲ್ಲೂ ಕರ್ನಾಟಕದ ರಾಜಕಾರಣ ಹಿಂದೆಂದೂ ಕಾಣದ ರೀತಿಯಲ್ಲಿ ಅಧಃಪತನಕ್ಕೊಳಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರನ್ನು ಅಪಹಾಸ್ಯದ ಸರಕನ್ನಾಗಿಸಿರುವುದು ಸುಳ್ಳಲ್ಲ.  ಈ ವಿಷಮ ಪರಿಸ್ಥಿತಿಯಲ್ಲಿ ರಾಜಕಾರಣವೆಂದರೆ ಪ್ರಚಾರಕ್ಕಾಗಿ ಹಪಹಪಿಸುವುದಲ್ಲ, ವೋಟಿಗಾಗಿ ನೈತಿಕತೆ ತೊರೆಯುವುದಲ್ಲ, ಇವೆಲ್ಲಕ್ಕಿಂತ ಹೆಚ್ಚಾಗಿ ತನ್ನತನ ಕಳೆದುಕೊಳ್ಳುವುದಲ್ಲ ಎಂಬುದನ್ನು ನಿರೂಪಿಸುತ್ತ ತನ್ನ ಸಾಮರ್ಥ್ಯದ ಮಟ್ಟಿಗೆ ಜನರಿಗೆ ಅನುಕೂಲವನ್ನು ಮಾಡಿಕೊಡುತ್ತಿರುವ ಮಾಣಿಕ್ ಸರ್ಕಾರ್ ಬಗ್ಗೆ ತಿಳಿದುಕೊಳ್ಳುವುದು ರಾಜಕಾರಣಿಗಳಿಗೆ ಮತ್ತವರಿಗೆ ಮತ ನೀಡುವ ಜನರಿಗೂ ಅವಶ್ಯಕ.

“ಸೆವೆನ್ ಸಿಸ್ಟರ್ಸ್” ಎಂದೇ ಹೆಸರಾಗಿರುವ ಭಾರತದ ಈಶಾನ್ಯ ರಾಜ್ಯಗಳ ಪೈಕಿ ಅತ್ಯಂತ ಪುಟ್ಟ ಮತ್ತು ಕೊನೆಯ ರಾಜ್ಯ ತ್ರಿಪುರ. ತ್ರಿಪುರದಲ್ಲಿ 1998ರಿಂದಲೂ ಮುಖ್ಯಮಂತ್ರಿಯಾಗಿರುವವರು ಮಾಣಿಕ್ ಸರ್ಕಾರ್! ಜನವರಿ 22 1949ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಾಣಿಕ್ ಸರ್ಕಾರ್ ವಿಧ್ಯಾರ್ಥಿ ದೆಸೆಯಲ್ಲಿದ್ದಾಗ ನಕ್ಸಲ್ ವಿಚಾರಧಾರೆಗಳಿಗೆ ಆಕರ್ಷಿತರಾಗಿ ಕಮ್ಯುನಿಷ್ಟ್ ಪಕ್ಷ ಸೇರಿದರು. ಎಸ್ ಎಫ್ ಐನ ಪ್ರತಿನಿಧಿಯಾಗಿ, ಎಸ್ ಎಫ್ ಐನ ರಾಜ್ಯ ಕಾರ್ಯದರ್ಶಿಯಾಗಿ, ಅದೇ ಎಸ್ ಎಫ್ ಐನ ಅಖಿಲ ಭಾರತ ಸಮಿತಿಗೆ ಉಪಾಧ್ಯಕ್ಷನಾಗಿ ತಮ್ಮ ಹೋರಾಟದ ಹಾದಿಯನ್ನು ಮುಂದುವರೆಸಿದ ಮಾಣಿಕ್ 1972ರಲ್ಲಿ ಸಿ ಪಿ ಐ (ಎಂ)ನ ರಾಜ್ಯ ಕಮಿಟಿಯ ಸದಸ್ಯನಾಗಿ ಆಯ್ಕೆಯಾಗುತ್ತಾರೆ. 1978ರಲ್ಲಿ ಸಿ ಪಿ ಐ (ಎಂ)ನ ರಾಜ್ಯ ಕಾರ್ಯದರ್ಶಿಯಾಗುತ್ತಾರೆ. ಅದೇ ವರ್ಷ ಎಡರಂಗ ಮೊದಲ ಬಾರಿಗೆ ಅಧಿಕಾರಕ್ಕೆ ಬರುತ್ತದೆ. 1985ರಲ್ಲಿ ಮಾಣಿಕ್ ಸರ್ಕಾರ್ ಪಕ್ಷದ ಸೆಂಟ್ರಲ್ ಕಮಿಟಿಯ ಸದಸ್ಯರಾಗುತ್ತಾರೆ.

ರಾಜಕೀಯದಲ್ಲಿ ಹೋರಾಟದ ಹಾದಿ ಮುಂದುವರೆಸಿದ ಮಾಣಿಕ್ ಸರ್ಕಾರ್ 1998ರಲ್ಲಿ ಮುಖ್ಯಮಂತ್ರಿಯಾಗುತ್ತಾರೆ. ತ್ರಿಪುರಾದ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ಸ್ವಾತಂತ್ರ್ಯ ಕಾಲದಲ್ಲಿ ಆದಿವಾಸಿಗಳೇ ಹೆಚ್ಚಿದ ಪ್ರದೇಶವಾಗಿತ್ತು ತ್ರಿಪುರಾ. ದೇಶ ಇಬ್ಭಾಗವಾದ ಸಮಯದಲ್ಲಿ ನಡೆದ ವಲಸೆಯಿಂದ ಆದಿವಾಸಿಗಳೇ ಅಲ್ಪಸಂಖ್ಯಾತರಾಗಿಬಿಟ್ಟಿದ್ದರು. ಮೂಲನಿವಾಸಿ ಮತ್ತು ವಲಸೆಗಾರರ ನಡುವಿನ ಕಲಹಗಳು ಯುದ್ಧೋನ್ಮಾದ ಸ್ಥಿತಿಗೆ ತಲುಪಿತ್ತು. ಕೊಲೆ ಸುಲಿಗೆ ವ್ಯಾಪಕವಾಗಿತ್ತು. ಭೌಗೋಳಿಕವಾಗಿ ತ್ರಿಪುರ ದೇಶದ ರಾಜಧಾನಿಯಿಂದ ಬಹಳವೇ ದೂರವಿದ್ದ ನೆರೆಯ ದೇಶಗಳೊಂದಿಗೆ ಗಡಿ ಹಂಚಿಕೊಂಡ ಒಂದು ಪುಟ್ಟ ಪ್ರದೇಶ. ಸ್ಥಳೀಯ ರಾಜಕಾರಣಿಗಳ ಬೇಜವಾಬುದಾರಿತನ, ರಾಷ್ಟ್ರ ರಾಜಕಾರಣಿಗಳ ಅಸಡ್ಡೆಯ ನಡುವೆ ನಲುಗಿದ ತ್ರಿಪುರ ಯಾವುದೇ ಅಭಿವೃದ್ಧಿ ಕಂಡಿರಲಿಲ್ಲ. ಆಧುನಿಕ ಅಭಿವೃದ್ಧಿಯ ವಿಚಾರವನ್ನು ಬದಿಗೆ ಸರಿಸಿದರೂ ಅಂತಃಕಲಹದಿಂದ ನಲುಗಿಹೋಗಿದ್ದ ರಾಜ್ಯವದು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಅಧಿಕಾರಕ್ಕೆ ಬಂದ ಮಾಣಿಕ್ ಸರ್ಕಾರ್ ಮುಂದಿನ ಹಾದಿ ಸುಗಮವಾದದ್ದಾಗಿರಲಿಲ್ಲ. ನೈಸರ್ಗಿಕ ಸಂಪನ್ಮೂಲಗಳ ಕೊರತೆ, ದೇಶದ ಒಟ್ಟು ಶೇಕಡವಾರುಗಿಂತ ಕಡಿಮೆಯಿದ್ದ ಸಾಕ್ಷರತೆಯ ಪ್ರಮಾಣ, ಅತ್ಯಂತ ಕೆಟ್ಟ ರಸ್ತೆಗಳು, ಹಿಂಸೆಗೆ ಓಗೊಡುತ್ತಿದ್ದ ಯುವಜನತೆ. ಇಷ್ಟೆಲ್ಲ ಸಮಸ್ಯೆಗಳನ್ನು ಏಕಕಾಲಕ್ಕೆ ಒಂದೇ ಏಟಿಗೆ ಬಗೆಹರಿಸಲು ಸಾಧ್ಯವಿರಲಿಲ್ಲ. ಪ್ರಥಮ ಅವಧಿಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡುವತ್ತ ಗಮನ ಕೊಟ್ಟು ಜೊತೆಗೆ ರಸ್ತೆಗಳ ಅಭಿವೃದ್ಧಿ, ಸ್ವ ಉದ್ಯೋಗಕ್ಕೆ ಪ್ರೋತ್ಸಾಹ, ಆದಿವಾಸಿಗಳಿಗೆ ಸ್ವಾಯತ್ತತೆ ನೀಡುವಲ್ಲಿ ಸಫಲವಾದ ಮಾಣಿಕ್ ಸರ್ಕಾರ ತನ್ನ ಮೊದಲ ಅವಧಿಯ ಕೊನೆಯಲ್ಲಿ ತ್ರಿಪುರಾದ ಹಿಂಸಾಚಾರವನ್ನು ಕಡಿಮೆ ಮಾಡುವಲ್ಲಿ ಯಶ ಕಂಡಿತ್ತು. ನಂತರ ಮಾಣಿಕ್ ಸರ್ಕಾರ್ ಹಿಂದಿರುಗಿ ನೋಡುವ ಪ್ರಮೇಯ ಬಂದಿಲ್ಲ. 1998ರಿಂದಲೂ ತ್ರಿಪುರಾದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ತ್ರಿಪುರಾದ 60ಸ್ಥಾನಗಳಲ್ಲಿ 50ನ್ನು ಎಡರಂಗ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗೆಲುವಿನ ಬಗ್ಗೆ ಮಾತನಾಡುತ್ತ “ಈ ಜನಾದೇಶ ನನಗೆ ಅಚ್ಚರಿಯುಂಟುಮಾಡಿಲ್ಲ. ನಿರೀಕ್ಷೆಯ ಫಲಿತಾಂಶವಿದು. ಇದು ನನ್ನೊಬ್ಬನದೇ ಗೆಲುವಲ್ಲ. ನನ್ನ ವ್ಯಕ್ತಿತ್ವದ ಗೆಲುವೂ ಅಲ್ಲ. ನಾವೆಲ್ಲರೂ ಸೇರಿ ಮಾಡಿದ ಕಾರ್ಯಗಳ ಗೆಲುವಿದು. ಈ ಚುನಾವಣೆ ನನ್ನ ಮೇಲೆಯೇ ಕೇಂದ್ರೀಕೃತವಾಗಿತ್ತೆಂಬ ಭಾವನೆ ನಿಮ್ಮದಾಗಿರಬಹುದು, ಆದರದು ನನಗೆ ಸಮ್ಮತವಲ್ಲ” ಎಂದು ನುಡಿದಿದ್ದಾರೆ. “ಪಕ್ಷ ಗೆಲ್ಲಿಸಿದ್ದು ನಾನು, ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾನು ಇವರನ್ನು ಮುಖ್ಯಮಂತ್ರಿ ಮಾಡಿದ್ದು ನಾನು” ಎಂಬ ವಾಕ್ಯಗಳನ್ನೇ ಕಳೆದೈದು ವರುಷದಿಂದ ಕೇಳುತ್ತಿರುವ ಕನ್ನಡಿಗರಿಗೆ ಮಾಣಿಕ್ ಸರ್ಕಾರ್ ಮಾತುಗಳು ಬೆಚ್ಚಿಬೀಳಿಸಿದರೆ ಅಚ್ಚರಿಯಿಲ್ಲ!

ಮಾಣಿಕ್ ಸರ್ಕಾರ್ ರವರ ವೈಯಕ್ತಿಕ ಜೀವನವನ್ನು ನೋಡಿದರೆ ಮತ್ತಷ್ಟು ಅಚ್ಚರಿಗೊಳಗಾಗುತ್ತೇವೆ! ಭಾರತದ ಪರಿಶುದ್ಧ ಮತ್ತು ಅತಿ ಬಡ ಮುಖ್ಯಮಂತ್ರಿ (ಬಹುಶಃ ಬಡ ರಾಜಕಾರಣಿ!) ಮಾಣಿಕ್ ಸರ್ಕಾರ್! ಅವರು ಘೋಷಿಸಿಕೊಂಡಿರುವ ಆಸ್ತಿಯ ಒಟ್ಟು ಮೌಲ್ಯ ಎರಡೂವರೆ ಲಕ್ಷಕ್ಕಿಂತಲೂ ಕಡಿಮೆ; ಅದರಲ್ಲಿ ಅವರ ತಾಯಿಯಿಂದ ಬಂದ ಒಂದು ಮನೆ ಕೂಡ ಸೇರಿದೆ! 2013ರ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ಅವರ ಬಳಿಇದ್ದ ಹಣ 1080 ಮಾತ್ರ, ಬ್ಯಾಂಕಿನಲ್ಲಿದ್ದ ಠೇವಣಿ 9720/-! ದೇಶದಲ್ಲಿ ಅತಿ ಕಡಿಮೆ ಸಂಬಳ (9200/-) ಪಡೆಯುತ್ತಿರುವ ಮಾಣಿಕ್ ಸರ್ಕಾರ್ ಆ ಸಂಬಳವನ್ನೂ ಪಕ್ಷಕ್ಕೆ ನೀಡಿ ಪಕ್ಷದ ಇತರೆ ಕಾರ್ಯಕರ್ತರಂತೆ ಐದು ಸಾವಿರ ರುಪಾಯಿಗಳನ್ನು ಪಡೆಯುತ್ತಿದ್ದಾರೆ! ಇನ್ನು ಮುಖ್ಯಮಂತ್ರಿಯ ಜೀವನ ನಿರ್ವಹಣೆ ನಡೆಯುತ್ತಿರುವುದು ಸರಕಾರಿ ಕೆಲಸದಲ್ಲಿದ್ದ ಅವರ ಮಡದಿ ನಿವೃತ್ತರಾದಾಗ ಬಂದ ಪಿಎಫ್ ಮತ್ತಿತರ ಹಣವನ್ನು (24 ಲಕ್ಷ) ಬ್ಯಾಂಕಿನಲ್ಲಿ ಠೇವಣಿರೂಪದಲ್ಲಿಟ್ಟು ಅದರಿಂದ ಬರುವ ಬಡ್ಡಿಯಿಂದ!

ತ್ರಿಪುರ ರಾಜ್ಯವನ್ನು ಮಾಣಿಕ್ ಸರ್ಕಾರ್ ಭೂಲೋಕದ ಸ್ವರ್ಗವನ್ನಾಗೇನೂ ರೂಪಿಸಿಲ್ಲ. ಅಲ್ಲೂ ಸಮಸ್ಯೆಗಳಿವೆ. ಆದರೆ ತಮ್ಮ ಅಧಿಕಾರಾವಧಿಯಲ್ಲಿ ಹಿಂಸಾಚಾರವನ್ನು ಕಡಿಮೆಗೊಳಿಸುವಲ್ಲಿ ಸಫಲರಾಗಿದ್ದಾರೆ, ತ್ರಿಪುರದಲ್ಲೀಗ ಶಾಂತಿಯಿದೆ. 2008ರಿಂದ ಒಂದೂ ಭಯೋತ್ಪಾದಕ ಕೃತ್ಯ ನಡೆದಿಲ್ಲ. ಸಾಕ್ಷರತೆಯ ಪ್ರಮಾಣ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ! ರಸ್ತೆ ಮತ್ತು ರೈಲು ಸಂಪರ್ಕ ಉತ್ತಮಗೊಂಡಿವೆ. ವಿದ್ಯುತ್ ಕಡಿತ ಮುಂಚಿನಷ್ಟಿಲ್ಲ. ಇಲ್ಲಿಯವರೆಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲು ನಮಗೆ ಮತ್ತೊಂದು ಅವಕಾಶ ನೀಡಿ ಎಂದೇ ಚುನಾವಣೆಗೆ ಹೊರಟಿದ್ದ ಸಿ ಪಿ ಐ(ಎಂ) ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ವಿಶ್ವಾಸಕ್ಕೆ ಕುಂದುಬರದ ರೀತಿಯಲ್ಲಿ ಮತ್ತಷ್ಟು ಉತ್ತಮ ಆಡಳಿತ ನೀಡುವ ಬೃಹತ್ ಜವಾಬುದಾರಿಯೂ ಮಾಣಿಕ್ ಸರ್ಕಾರ್ ನೇತೃತ್ವದ ಎಡರಂಗ ಸರಕಾರಕ್ಕಿದೆ.
         
 ಯಾವೊಂದು ಜವಾಬ್ದಾರಿಯನ್ನೂ ಇದುವರೆಗು ನಿರ್ವಹಿಸದ ರಾಹುಲ್ ಗಾಂಧಿ ಮತ್ತು ಸರಕಾರಿ ಕೃಪಾಪೋಷಿತ ಕೋಮುಗಲಭೆ ನಡೆದಾಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮಾತ್ರ ಪ್ರಧಾನಿ ಸ್ಥಾನಕ್ಕೆ ಅರ್ಹರು ಎಂಬಂತೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಪ್ರಚುರಪಡಿಸುತ್ತಿರುವ ಮಾಧ್ಯಮಗಳಿಗೆ, ಜನರಿಗೆ ಮಾಣಿಕ್ ಸರ್ಕಾರರಂತಹವರು ಯಾಕೆ ಪ್ರಧಾನಿ ಸ್ಥಾನಕ್ಕೆ ಬೇರೆಯವರಿಗಿಂತ ಹೆಚ್ಚಾಗಿಯೇ ಅರ್ಹರು ಎಂದು ಹೇಳಬೇಕೆನಿಸುವುದಿಲ್ಲ? “ಮುಖ್ಯಭಾರತದ” ಹೊರಗಿರುವ ರಾಜ್ಯದ ಮುಖ್ಯಮಂತ್ರಿ ಎಂಬ ಅಸಡ್ಡೆಯಾ? ಹೆಚ್ಚು ಲೋಕಸಭಾ ಸೀಟುಗಳಿರದ ರಾಜ್ಯವೆಂಬ ತಿರಸ್ಕಾರವಾ? ಅಥವಾ ಪ್ರಧಾನಿ ಹುದ್ದೆಯ ರೇಸಿಗೆ ಬರಲು ಧರ್ಮದ ಹೆಸರಿನಲ್ಲಿ ಮಾರಣಹೋಮ ನಡೆಸಿರಬೇಕಾ? ಅಥವಾ ರಾಜಕಾರಣಿಯ ಕುಟುಂಬಕ್ಕೇ ಸೇರಿದವರಾಗಿರಬೇಕಾ?!
ಮೊದಲು ಪ್ರಜಾಸಮರ ಮತ್ತು ನಂತರ ನಿಲುಮೆಯಲ್ಲಿ ಪ್ರಕಟವಾಗಿದ್ದ ನನ್ನದೊಂದು ಲೇಖನ

photo source - topnews.in

No comments:

Post a Comment