Jan 2, 2013

ಅಪರಾಧ ಮತ್ತು ಸ್ಥಳದ ಮಹಿಮೆ.

ಡಾ ಅಶೋಕ್ ಕೆ ಆರ್
ಆ ದೌರ್ಭಾಗ್ಯೆಯ ಹೆಸರು ಸೋನಿ ಸೋರಿ. ಛತ್ತೀಸಗಢದ ಆದಿವಾಸಿ ಹಳ್ಳಿಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆದಿವಾಸಿ ಮಹಿಳೆ. ಪಾಠ ಹೇಳಿಕೊಡುವುದಕ್ಕಷ್ಟೇ ಮೀಸಲಾಗದೆ ಆದಿವಾಸಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾಕೆ. ಆಕೆಯ ಬಂಧನವಾಗುತ್ತದೆ. ನಕ್ಸಲರಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆಂಬ ಆರೋಪ. ಛತ್ತೀಸಗಢದ ಆದಿವಾಸಿ, ಮೇಲಾಗಿ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದವಳು ಎಂದ ಮೇಲೆ ನಕ್ಸಲಳೇ ಇರಬಹುದೆಂದು ಸರಕಾರದ ಅಂದಾಜು! ಕ್ರೂರ ವ್ಯಂಗ್ಯವೆಂದರೆ ಆಕೆಯ ತಂದೆಯ ಮೇಲೆ ಪೋಲೀಸ್ ಮಾಹಿತಿದಾರನೆಂಬ ಶಂಕೆಯಿಂದ ನಕ್ಸಲರು ಗುಂಡು ಹಾರಿಸಿದ್ದರು!
ಕಾಲಿಗೆ ತಗುಲಿದ ಗುಂಡು ಶಾಶ್ವತ ಅಂಗವಿಕಲತೆಯನ್ನುಂಟುಮಾಡಿದೆ. ಇಷ್ಟೇ ಆಗಿದ್ದರೆ ನಕ್ಸಲರ ಹತ್ತಿಕ್ಕುವನೆಪದಲ್ಲಿ ನಡೆದ ಮತ್ತೊಂದು ಬಂಧನ ಎಂದು ‘ಮೌನ’ವಹಿಸಬಹುದಿತ್ತೇನೋ? ಆಕೆಗೆ ಪೋಲೀಸ್ ಬಂಧನದಲ್ಲಿ ನೀಡಿದ ಹಿಂಸೆ ‘ನಾಗರೀಕ’ ಸಮಾಜದ ನಿಲುಕಿಗೆ ದಕ್ಕದ್ದು. ಬೆತ್ತಲುಗೊಳಿಸಿ ಅತ್ಯಾಚಾರವೆಸಗಿ, ಅದೂ ಸಾಲದೆಂಬಂತೆ ಜನನಾಂಗ, ಗುದದ್ವಾರದಲ್ಲಿ ಕಲ್ಲು ತೂರಿದ್ದರು ದುರುಳ ಪೋಲೀಸರು. ಸುಪ್ರೀಂಕೋರ್ಟ್ ನಿರ್ದೇಶನದಂತೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲೂ ಇದು ದೃಡಪಟ್ಟಿತ್ತು. ಸೋನಿ ಸೋರಿ ನೀಡಿರುವ ಹೇಳಿಕೆಯಂತೆ ಆ ಹಿಂಸಾಚಾರ ನಡೆದ ಸಮಯದಲ್ಲಿ ಅಲ್ಲಿನ ಎಸ್ ಪಿ ಅಂಕಿತ್ ಗರ್ಗ್ ಕೂಡ ಹಾಜರಿದ್ದ. ನಂತರದಲ್ಲಿ ಅಂಕಿತ್ ಗರ್ಗನಿಗೆ ರಾಷ್ಟ್ರಪತಿ ಗೌರವವೂ ದೊರೆತಿದೆ! ಈ ಘಟನೆಯಾಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲಿಲ್ಲ? ಜನಮಾನಸದ ಮನವನ್ನು ಕಲಕಿ ಪ್ರತಿಭಟನೆಗೆ ಇಳಿಯುವಂತೆ ಪ್ರೇರೇಪಿಸಲಿಲ್ಲ?ಛತ್ತೀಸಗಢ ದೂರದ ಊರಾಯಿತು ಎಂದರೆ ನಮ್ಮದೇ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ರೇಪ್ ಅಂಡ್ ಮರ್ಡರ್ ವಿಷಯ ನಮ್ಮಲ್ಲಿ ಎಷ್ಟು ಜನರಿಗೆ ತಿಳಿದಿದೆ? ಶಾಲೆ ಮುಗಿಸಿ ಮನೆಯೆಡೆಗೆ ಹೊರಟಿದ್ದ ಸೌಜನ್ಯಳನ್ನು ಹೊತ್ತೊಯ್ದ ದುರುಳರು ಅತ್ಯಾಚಾರವೆಸಗಿ ಕೊಂದು ಕಾಡ ನಡುವೆ ಆಕೆಯ ದೇಹವನ್ನು ಬಿಸಾಡಿ ಹೋದ ಸಂಗತಿ ‘ಬ್ರೇಕಿಂಗ್ ನ್ಯೂಸ್’ ಆಗದೆ ಕ್ರೈಂ ಸ್ಟೋರಿಯ ಒಂದು ಎಪಿಸೋಡಿಗೆ ಸೀಮಿತವಾಗುತ್ತದಲ್ಲ ಯಾಕೆ? ಅತ್ಯಾಚಾರ, ಕೊಲೆ, ದರೋಡೆಗಳಂಥ ಕೃತ್ಯಗಳು ಎಲ್ಲಿ ನಡೆದರೂ ಖಂಡನಾರ್ಹವೇ ಅಲ್ಲವೇ? ರಾಜಧಾನಿಯಲ್ಲಿ ನಡೆಯುವ ಅಪರಾಧ ಕೃತ್ಯಗಳಿಗಷ್ಟೇ ನಮ್ಮ ಆಕ್ರೋಶ ಸೀಮಿತವಾಗಬೇಕಾ?

ಪ್ರತಿಭಟನೆಯ ಶಕ್ತಿಯನ್ನೇ ಕಳೆದುಕೊಂಡಂತಿದ್ದ ಯುವಸಮೂಹ ದೆಹಲಿಯ ಯುವತಿಯ ಸಾಮೂಹಿಕ ಅತ್ಯಾಚಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ದನಿಯೆತ್ತಿದ್ದು ಉತ್ತಮ ಬೆಳವಣಿಗೆಯೇ ಹೌದು. ಬಡವರ ಮೇಲಾಗುವ ಶೋಷಣೆಗೆ ಬಡವರ ಪ್ರತಿಭಟನೆ ಎಷ್ಟು ಸಹಜವೋ ಮಧ್ಯಮ ವರ್ಗದ ನಗರವಾಸಿ ಯುವತಿಯ ಮೇಲೆ ನಡೆದ ಅಮಾನುಷ ದೌರ್ಜನ್ಯದ ವಿರುದ್ಧ ನಗರವಾಸಿಗಳು ಬೀದಿಗಿಳಿಯುವುದು ಅಷ್ಟೇ ಸಹಜ, ನ್ಯಾಯಯುತವಾದುದು. ಆದರೆ ನಮ್ಮ ಸರಕಾರಗಳು, ಮಾಧ್ಯಮಗಳು, ಪೋಲೀಸರು ಈ ಘಟನೆಗಳಿಗೆ ಕೊಡುವ ಪ್ರಾಮುಖ್ಯತೆಯಲ್ಲಿ ವ್ಯತ್ಯಾಸ ತೋರುವುದು ಸರಿಯೇ? ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಯಾವ ಊರಿನವಳೇ ಆಗಿದ್ದರೂ ಯಾವ ವರ್ಗಕ್ಕೇ ಸೇರಿದ್ದರೂ ಅವರ ಕ್ರಿಯೆ – ಪ್ರತಿಕ್ರಿಯೆ ಒಂದೇ ಆಗಬೇಕಿತ್ತಲ್ಲವೇ? ಕೊನೇಪಕ್ಷ infotainment ಮಾಧ್ಯಮಕ್ಕೆ ‘ಟಿ.ಆರ್.ಪಿ’ಯ ನೆಪವಿದೆ. ಹೆಚ್ಚು ಆದಾಯ ಸೃಷ್ಟಿಸಬಲ್ಲ ಬಿಕರಿಯಾಗುವ ಸುದ್ದಿಗಳಿಗಷ್ಟೇ ಅವರ ಪ್ರಾಶಸ್ತ್ಯ. ಆದರೆ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಬೇಕಾದ ಸರಕಾರ ಮತ್ತು ಕೆಲವೊಮ್ಮೆ ನ್ಯಾಯಾಂಗ ಕೂಡ ‘ಜನಪ್ರಿಯ’ವಾಗುವ ಅಪರಾಧಗಳೆಡೆಗಷ್ಟೇ ಆಸಕ್ತಿ ತೋರಿಸಿ ರಾಜಧಾನಿಯಿಂದ ನಗರಗಳಿಂದ ದೂರ ನಡೆಯುವ ಅಪರಾಧಗಳ ಅಸ್ತಿತ್ವವನ್ನೂ ಮರೆತುಬಿಟ್ಟರೆ ವಿವಿಧ ಆರ್ಥಿಕ ವರ್ಗಗಳ ನಡುವೆ ಈಗಾಗಲೇ ಅಪಾಯಕಾರಿ ರೀತಿಯಲ್ಲಿ ಹೆಚ್ಚುತ್ತಿರುವ ಮಾನಸಿಕ ಅಂತರವನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗುತ್ತದೆಯಲ್ಲವೇ?


ಇಂದಿನ ಉದಯವಾಣಿ ಪತ್ರಿಕೆಯಲ್ಲಿ ವರದಿಯಾದಂತೆ ದೆಹಲಿಯ ಯುವತಿಯ ಸಾವಿಗೆ ಸಂತಾಪ ಸೂಚಿಸುವ ಸಲುವಾಗಿ ಭಾರತೀಯ ರಕ್ಷಣಾ ಸಚಿವಾಲಯ ಮತ್ತು ಅದರ ಮೂರು ಸೇನಾ ಪಡೆಗಳಾದ ಭೂಸೇನೆ, ವಾಯುಸೇನೆ, ನೌಕಾ ಪಡೆಗಳು ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸದಿರಲು ತೀರ್ಮಾನಿಸಿದೆ. ಕೆಲವು ವರ್ಷದ ಹಿಂದಿನ ಮಾತು. ಇದೇ ಸೇನೆಯ ವಿರುದ್ಧ ಪ್ರತಿಭಟನೆಗಿಳಿದಿದ್ದ ಮಣಿಪುರದ ತಾಯಂದಿರು ಸಂಪೂರ್ಣ ಬೆತ್ತಲಾಗಿ “Indian army rape us” ಎಂಬ ಫಲಕವಿಡಿದು ರಸ್ತೆಗಿಳಿದಿದ್ದರು! ಸರಕಾರ, ಸೇನೆ, ಮಾಧ್ಯಮ ಮೌನ ವಹಿಸಿದ್ದವು. ನಾವೂ ಅಷ್ಟೇ; ದಿವ್ಯಮೌನದಲ್ಲಿದ್ದೆವು. ಚರ್ಚೆಯ ಸಂದರ್ಭವೊಂದರಲ್ಲಿ ಗೆಳೆಯ ಅಭಿ ಹನಕೆರೆ ಹೇಳಿದ್ದ ಮಾತು – ‘ಇಲ್ಲಿ ಯಾರೂ ಸಮಾನರಲ್ಲ. ಆದರೆ ವ್ಯವಸ್ಥೆ ಎಲ್ಲರಿಗೂ ಸಮಾನವಾಗಿರಬೇಕು’. ವ್ಯವಸ್ಥೆ ಎಲ್ಲರಿಗೂ ಸಮಾನವಾಗಿದೆಯಾ?
ಚಿತ್ರಕೃಪೆ – ಅಂತರ್ಜಾಲ

1 comment:

  1. It’s usually enough a glance at|to take a look at} the bonus quantity, match percentage, and wagering requirements when evaluating on line casino bonuses. European roulette is positioned under the desk games section, whereas the American and French variants are hidden under the specialties class. First 소울카지노 depositors can get 350% additional as much as} $2,500 when depositing with Bitcoin.

    ReplyDelete