Sep 29, 2012

ಮನುಷ್ಯ ಧರ್ಮದ ‘ಅಂಗೈಯಲ್ಲೇ ಆಕಾಶ’
ಡಾ. ಅಶೋಕ್. ಕೆ. ಆರ್

ಹತ್ತದಿನೈದು ಸಾಲಿನಲ್ಲೇ ಮುಗಿದುಹೋಗುವ ಸಣ್ಣ ಸಣ್ಣ ಕಥೆಗಳು ಮನಸ್ಸನ್ನು ತಟ್ಟುವಷ್ಟು ದೊಡ್ಡ ಕತೆಗಳು ತಲುಪುವುದು ಕಷ್ಟ. ಹನಿಗಥೆಗಳ ಪ್ರಭಾವದ ಅರಿವಾಗಿದ್ದು ಸದತ್ ಹಸನ್ ಮಾಂಟೋ ಭಾರತ ವಿಭಜನೆಯ ಸಂದರ್ಭದಲ್ಲಿ ಬರೆದ ಕಥೆಗಳನ್ನು ಓದಿದಾಗ. ಕೆಲವೇ ಕೆಲವು ಸಾಲುಗಳಲ್ಲಿ ಜೀವನ ದರ್ಶನದ ಅನುಭವ ಮಾಡಿಸುವುದು ಕಷ್ಟವೇ ಸರಿ. ಆದರೂ ಓದಿ ಮುಗಿಸಿದ ಕೆಲವು ವರುಷಗಳ ನಂತರವೂ ನೆನಪಿನಲ್ಲುಳಿಯುವುದು ದೊಡ್ಡ ಕತೆಗಳೇ! ದೊಡ್ಡ ಕತೆಗಳು ಕಟ್ಟಿಕೊಡುವ ವ್ಯಕ್ತಿ – ಪ್ರದೇಶ – ವಿಷಯದ ವಿವರಗಳೇ ಆ ಕಥೆಗಳನ್ನು ಬಹುಕಾಲ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತದೆ. ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿರುವ ಬಿ. ಎಂ. ಬಶೀರರ ಹನಿ ಹನಿ ಕತೆಗಳ ಸಂಕಲನ ‘ಅಂಗೈಯಲ್ಲೇ ಆಕಾಶ’ ಸಣ್ಣ ಕತೆಗಳ ಮಿತಿಗಳನ್ನೂ ದಾಟಿ ಬಹುದಿನಗಳವರೆಗೆ ಕಾಡುವುದು ಆ ಕತೆಗಳಲ್ಲಿನ ವಿಷಯ ವೈವಿಧ್ಯದಿಂದ; ಇಂದಿಗೂ ಮತ್ತು ಮುಂದಿಗೂ ಪ್ರಸ್ತುತವಾಗಿ ಉಳಿಯುವ ಸಂಗತಿಗಳಿಂದ.

          ನೀಳ್ಗಥೆಯಷ್ಟೇ ಅಲ್ಲದೆ ದೊಡ್ಡ ಕ್ಯಾನ್ವಾಸಿನ ಕಾದಂಬರಿಗೂ ವಸ್ತುವಾಗಬಹುದಾದ ಘಟನೆಗಳನ್ನು ನಾಲ್ಕೈದು ಸಾಲಿನಲ್ಲೇ ಬೆಚ್ಚಿಬೀಳಿಸುವಂತೆ ಬರೆದಿರುವುದು ಬಿ. ಎಂ. ಬಶೀರರ ಹೆಗ್ಗಳಿಕೆ. ಧರ್ಮ – ಜಾತಿಯ ತುಮುಲಗಳು, ಬಡವ ಬಲ್ಲಿದರ ಬದುಕು, ಮೂಲಭೂತವಾದಿತನ, ರಾಜಕಾರಣಿಗಳ ಪತ್ರಕರ್ತರ ಸೋಗಲಾಡಿತನ, ಆಧ್ಯಾತ್ಮ ಚಿಂತನೆ, ಜಾಗತೀಕರಣ – ಹೀಗೆ ವಾಸ್ತವ ಬದುಕಿನ ಹಲವಾರು ಚಿತ್ರಗಳನ್ನು ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ, ಜೊತೆಯಲ್ಲೇ ಮನುಷ್ಯ ಸಂಬಂಧಗಳ ಮನಕಲುಕುವ ಕತೆಗಳೂ ಇವೆ. ಪತ್ರಕರ್ತ ಕತೆಗಾರನೂ ಆಗಿದ್ದಲ್ಲಿ ದಿನನಿತ್ಯದ ಘಟನೆಗಳು ಆತನಿಗೆ ಯಾವ ರೀತಿ ಮುಟ್ಟಬಲ್ಲದು ಎಂಬುದನ್ನು ಅರಿಯುವುದಕ್ಕೂ ಈ ಕಥೆಗಳು ಸಹಾಯ ಮಾಡುತ್ತವೆ.

ಒಂದಷ್ಟು ಆಕಾಶದ ಹನಿಗಳು – 

          ಶುಚಿ
          ದಲಿತನೊಬ್ಬ ದೇವಸ್ಥಾನದ ಆವರಣವನ್ನು ಪ್ರವೇಶಿಸುತ್ತಿದ್ದ.
ಪುರೋಹಿತ ಆತನನ್ನು ತಡೆದ “ನಿಲ್ಲು. ನೀನು ಪ್ರವೇಶಿಸುವಂತಿಲ್ಲ. ಅಪವಿತ್ರವಾಗುತ್ತದೆ”
ದಲಿತ ವನೀತನಾಗಿ ನುಡಿದ “ನಾನು ದೇವಸ್ಥಾನದ ಆವರಣವನ್ನು ಶುಚಿಗೊಳಿಸುವುದಕ್ಕೆ ಬಂದಿದ್ದೇನೆ...”
“ಓಹೋ...ಶುಚಿಗೊಳಿಸುವುದಕ್ಕೆ ಬಂದಿದ್ದೀಯ? ಹಾಗಾದರೆ ಹೋಗು.....ಬೇಗ ಕೆಲಸ ಮುಗಿಸು....”

ಭಯ
ಒಬ್ಬ ಭಯೋತ್ಪಾದಕ.
ಆತ್ಮಾಹುತಿಗೆ ಸಿದ್ಧನಾಗುತ್ತಿದ್ದ.
ಮೈ ತುಂಬಾ ಬಾಂಬುಗಳು.
ಅವನ ಪಕ್ಕದಲ್ಲಿ ಪುಟಾಣಿ ಮಗುವೊಂದು ಆಡುತ್ತಿತ್ತು.
ಮಗು ಇದ್ದಕ್ಕಿದ್ದಂತೆ ಅವನತ್ತ ನೋಡಿತು.
ಕಣ್ಣಿಗೆ ಕಣ್ಣು ಸೇರಿಯೇ ಬಿಟ್ಟಿತು.
ಆತ ಭಯದಿಂದ ಸಣ್ಣಗೆ ನಡುಗಿಬಿಟ್ಟ.

ವರದಿ
“ನಗರದಲ್ಲಿ ಕೋಮುಗಲಭೆ, ಇಬ್ಬರ ಬರ್ಬರ ಕೊಲೆ”
ವರದಿಗಾರ ಸುದ್ದಿ ಮಾಡುತ್ತಿದ್ದ.
ಇನ್ನೊಬ್ಬ ಕೇಳಿದ “ಅಂತದ್ದು ಯಾವುದೂ ನಡೆದಿಲ್ಲವಲ್ಲ?”
“ಇದು ಪ್ರಕಟವಾದ ಬಳಿಕ ನಡೆಯುತ್ತೆ. ಸುಮ್ಮನೆ ತಲೆಕೆಡಿಸಿಕೊಳ್ಳಬೇಡ” ವರದಿಗಾರ ಉತ್ತರಿಸಿದ.
ಮಗು

ಅವನು ಸಂತನ ಬಳಿ ಬಂದು ನುಡಿದ
“ಗುರುಗಳೇ, ನನ್ನ ಮಗನನ್ನು ಹೇಗೆ ಬೆಳೆಸಬೇಕೆಂದೇ ನನಗೆ ತಿಳಿಯುತ್ತಿಲ್ಲ. ನಾನು ಹೇಳಿದ ಹಾಗೆ ಅವನು ಕೇಳುತ್ತಿಲ್ಲ”
ಸಂತ ನಕ್ಕು ನುಡಿದ “ಮಗುವನ್ನು ನಾನು ಬೆಳೆಸುತ್ತಿದ್ದೇನೆ ಎಂಬ ದುರಹಂಕಾರ ಬಿಡು. ಮಗು ಹುಟ್ಟಿರುವುದು ನಿನ್ನನ್ನು ಬೆಳೆಸುವುದಕ್ಕೆ. ಮೊದಲು ಮಗುವಿನ ಮೂಲಕ ನೀನು ಬೆಳೆ”

          ಬಿ.ಎಂ. ಬಶೀರರು ಪತ್ರಕರ್ತ ವೃತ್ತಿ ಸೃಷ್ಟಿಸುವ ಸಮಯದ ಅಭಾವದ ಕಾರಣದಿಂದ ಸಣ್ಣ ಕಥೆಗಳ ರಚನೆಯಲ್ಲಿ ತೊಡಗಿಕೊಂಡರಾ? ಅಥವಾ ಈ ಮಾಧ್ಯಮವೇ ಅವರ ಅಭಿವ್ಯಕ್ತಿಗೆ ಸರಿಯೆನ್ನಿಸಿದೆಯೋ ತಿಳಿಯದು. ಈ ಹನಿಗಥೆಗಳಲ್ಲಿನ ವಿಷಯವನ್ನೇ ಉಪಯೋಗಿಸಿ ದೊಡ್ಡ ಕತೆಗಳನ್ನೂ ಬರೆಯಲಿ ಎಂದು ಆಶಿಸೋಣ.

ಬಿ ಎಂ ಬಶೀರ್-
ಅಂಗೈಯಲ್ಲೇ ಆಕಾಶ
ಪ್ರಕಾಶಕರು – ಅಹಿರ್ನಿಶಿ ಪ್ರಕಾಶನ
ಬೆಲೆ – 75ರೂ

No comments:

Post a Comment