Sep 24, 2012

ಬರಹಗಾರನ ಭಾಷೆ ಮತ್ತು ಸ್ಮಾರಕ


R K Narayan's house in Mysore
ಡಾ ಅಶೋಕ್ ಕೆ. ಆರ್.
ಆರ್. ಕೆ. ನಾರಯಣ್ ಯಾರಿಗೆ ಸೇರಿದವರು? ಅವರು ಮೂಲತಃ ತಮಿಳಿಗ, ಕರ್ನಾಟಕದ ಮೈಸೂರಿನಲ್ಲೂ ವಾಸಿಸಿದ್ದರು. ಬರೆದಿದ್ದು ತಮಿಳಿನಲ್ಲೂ ಅಲ್ಲ, ಕನ್ನಡದಲ್ಲೂ ಅಲ್ಲ; ನಮ್ಮ ದೇಶದ್ದೇ ಅಲ್ಲದ ಆಂಗ್ಲ ಭಾಷೆಯಲ್ಲಿ. ಇದೊಂದೇ ಕಾರಣಕ್ಕೆ ಅವರನ್ನು ಕನ್ನಡಿಗರೂ ಅಲ್ಲ, ತಮಿಳರೂ ಅಲ್ಲ ಕೊನೆಗೆ ಭಾರತದವರೇ ಅಲ್ಲ ಎನ್ನಲಾದೀತೆ? ಬರಹಗಳು ಒಂದು ಭಾಷೆ, ರಾಜ್ಯ, ರಾಷ್ಟ್ರಕ್ಕಷ್ಟೇ ಸೀಮಿತವಾದ ಸಂಗತಿಯೇ? ಮನದ ಭಾವನೆ ತುಮುಲಗಳನ್ನು, ಸಮಾಜದ ಜೀವನ ವಿಧಾನವನ್ನು ಬರಹರೂಪದಲ್ಲಿ ಕಟ್ಟಬಯಸುವ ಲೇಖಕನಿಗೆ ತನಗೆ ಹಿಡಿತವಿರುವ ಭಾಷೆಯಲ್ಲಿ ಬರೆಯುವ ಸ್ವಾತಂತ್ರ್ಯವಿದ್ದೇ ಇದೆ. ಪ್ರಾದೇಶಿಕ ಭಾಷೆಗಳ ಪುಸ್ತಕಗಳು ಮೇಲ್ನೋಟಕ್ಕೆ ಆ ಭಾಷಿಗರಿಗಷ್ಟೇ ಸೀಮಿತವೆಂಬಂತೆ ತೋರಿದರೂ ಅನುವಾದಗಳ ಮುಖಾಂತರ ಅನ್ಯಭಾಷಿಗರನ್ನೂ ತಲುಪುತ್ತದೆ. ರಷಿಯನ್ ಭಾಷೆಯಲ್ಲಿ ಬರೆದ ಲಿಯೋ ಟಾಲ್ ಸ್ಟಾಯ್, ದಸ್ತೋವಸ್ಕಿ ಪ್ರಪಂಚವನ್ನೆಲ್ಲ ತಲುಪಲು ಸಾಧ್ಯಾವಾಗಿದ್ದು ಅನುವಾದದಿಂದ. ತೆಲುಗಿನ ಯಂಡಮೂರಿ ವಿರೇಂದ್ರನಾಥ್ ನಮ್ಮವನೆನಿಸಿದ್ದು ಅನುವಾದದಿಂದ. ಭಾಷೆಗಿಂತ ಬರಹಗಳಲ್ಲಿನ ಮಾನವೀಯತೆ, ಸಾರ್ವತ್ರಿಕತೆಯಷ್ಟೇ ಕೊನೆಗೆ ಮುಖ್ಯವಾಗುಳಿಯುವುದು. ಆರ್. ಕೆ. ನಾರಾಯಣ್ ರ ಬಹುತೇಕ ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರನ್ನೂ ತಲುಪಿದೆ. ಓದಲು ಬಾರದವರಿಗೆ, ಓದಲು ಇಚ್ಛಿಸದವರಿಗೆ ಶಂಕರ್ ನಾಗ್ ರ ಸಮರ್ಥ ನಿರ್ದೇಶನದಲ್ಲಿ ಮೂಡಿಬಂದ ಮಾಲ್ಗುಡಿ ಡೇಸ್ ಧಾರಾವಾಹಿಯ ಮುಖಾಂತರ ಹಿಂದಿ ಅರ್ಥೈಸಿಕೊಳ್ಳುವ ಜನರಿಗೂ ತಲುಪಿದೆ. ಎಲ್ಲರ ಮನಸ್ಸು ತಟ್ಟುವ ನಮ್ಮದೇ ಜೀವನದ ತುಣುಕುಗಳಂತೆ ಕಾಣುವ ನಾರಾಯಣ್ ರ ಕಥೆಗಳು ಭಾಷೆಯನ್ನು ಮೀರಿ ನಮ್ಮನ್ನು ತಲುಪುತ್ತದೆ.

Kuvempu's house, Kuppalli
          ಮೈಸೂರಿನಲ್ಲಿ ಆರ್. ಕೆ. ನಾರಾಯಣ್ ವಾಸವಿದ್ದ ಮನೆಯನ್ನು ಸ್ಮಾರಕವಾಗಿಸಬೇಕೆಂಬ ಸರಕಾರದ ಉದ್ದೇಶವನ್ನು ಕನ್ನಡದ ಕೆಲವು ಲೇಖಕರು ವಿರೋಧಿಸಿದ್ದಾರೆ. ‘ಕನ್ನಡಕ್ಕೆ ಆರ್. ಕೆ. ನಾರಾಯಣರ ಕೊಡುಗೆ ಏನು?’ ಎಂದು ಪ್ರಶ್ನಿಸಿದ್ದಾರೆ. ಆರ್. ಕೆ. ನಾರಾಯಣ್ ಕನ್ನಡಿಗರೂ ಅಲ್ಲ, ತಮಿಳರೂ ಅಲ್ಲ, ಭಾರತೀಯರೂ ಅಲ್ಲವೆಂಬ ಭಾವನೆ ಅವರ ಬರಹದ ಭಾಷೆಯ ಚೌಕಟ್ಟಿನಿಂದಾಗಿ ಉದ್ಭವವಾಗುವುದಾದರೆ ಆರ್. ಕೆ. ನಾರಾಯಣ್ ಒಬ್ಬ ಶ್ರೇಷ್ಠ ಸಾಹಿತಿ ಎಂಬ ದೃಷ್ಟಿಕೋನವಾದರೂ ಇರಬೇಕಲ್ಲವೇ? ಇಂಥ ಒಬ್ಬ ಸಾಹಿತಿ ವಾಸವಿದ್ದ, ಬರವಣಿಗೆ ನಡೆಸಿದ ಮನೆಯನ್ನು ಸ್ಮಾರಕ ಮಾಡುವುದನ್ನು ವಿರೋಧಿಸುವುದಕ್ಕೆ ಭಾಷೆಯೊಂದೇ ಕಾರಣವಾಗುವುದು ಸರಿಯಲ್ಲ. ಆರ್. ಕೆ. ನಾರಾಯಣ್ ರ ಸಾಹಿತ್ಯಿಕ ಕೊಡುಗೆಯನ್ನು ಗಮನಿಸುವಾಗ ಭಾಷೆ ಗೌಣವಾಗಬೇಕು. ನಾರಾಯಣ್ ರ ಮನೆಯವರು ಅವರು ವಾಸವಿದ್ದ ಮನೆಯನ್ನು ಸರಕಾರಕ್ಕೆ ‘ಮಾರಿದ್ದಾರೆ’ ಎಂಬ ಆರೋಪವೂ ಇದೆ. ಅದು ಅವರ ಮನೆಯವರ ಅನಿವಾರ್ಯತೆಯೇನೋ? ಖಾಸಗಿ ವ್ಯಕ್ತಿ ಖರೀದಿಸಿ ವಾಸ್ತುವಿನ ಹೆಸರಲ್ಲೋ, ನವೀಕರಣದ ಹೆಸರಲ್ಲೋ ಮನೆಯನ್ನು ಕೆಡವಿ ಕೆಡಿಸುವುದಕ್ಕಿಂತ ಸರಕಾರ ಖರೀದಿಸುವುದೇ ಸೂಕ್ತವಲ್ಲವೇ?

Shivaram Karanth Balavana, Puttur


          ಇನ್ನು ಲೇಖಕರ ಮನೆಯನ್ನು ಸ್ಮಾರಕವನ್ನಾಗಿಸಿ ಪ್ರವಾಸಿ ತಾಣದಂತೆ ಮಾರ್ಪಡಿಸುವುದು ಎಷ್ಟರಮಟ್ಟಿಗೆ ಸಾಹಿತ್ಯಕ್ಕೆ ಉಪಯೋಗಕಾರಿ? ಸ್ಮಾರಕಗಳಿಗೆ ವೆಚ್ಚ ಮಾಡುವ ಹಣವನ್ನು ಸಾಹಿತಿಯ ಪುಸ್ತಕಗಳನ್ನು ಮುದ್ರಿಸಿ ಜನರಿಗೆ ತಲುಪಿಸುವುದು ಹೆಚ್ಚು ಸೂಕ್ತವೆಂಬ ವಾದವೂ ಇದೆ. ಪ್ರತಿಮೆಗಳಿಗೆ ವೆಚ್ಚ ಮಾಡುವುದನ್ನು ವಿರೋಧಿಸುವುದು ಅರ್ಥಪೂರ್ಣ. ಆದರೆ ಸ್ಮಾರಕಗಳಿಂದ ಸಾಹಿತ್ಯಿಕ ಉಪಯೋಗವಿಲ್ಲ ಎಂಬುದನ್ನು ಸಂಪೂರ್ಣವಾಗಿ ಒಪ್ಪುವುದು ಕಷ್ಟ. ಮೋಜಿಗಾಗಿ, ಪ್ರವಾಸಕ್ಕಾಗಿ ಇಂಥ ಸ್ಮಾರಕಗಳಿಗೆ ಭೇಟಿ ನೀಡುವವರು ಇದ್ದಾರಾದರೂ ಸಾಹಿತಿಯ ಬರಹಗಳನ್ನು ಓದಿದ ಓದುಗನಿಗೆ ಆ ಸಾಹಿತಿ ಓಡಾಡಿದ, ಆ ಸಾಹಿತ್ಯ ಪಡಿಮೂಡಿದ ಜಾಗವನ್ನು ನೋಡುವ ಕುತೂಹಲವೂ ಇರುತ್ತದೆ. ಪುತ್ತೂರಿನ ಶಿವರಾಮ ಕಾರಂತ ಬಾಲವನ, ಕುವೆಂಪುರವರ ಕುಪ್ಪಳ್ಳಿಗೆ ಭೇಟಿ ನೀಡಿದಾಗ ಓದುಗರಿಗೆ ಸಿಗುವ ಉಲ್ಲಾಸ, ‘ನಾನೂ ಬರೆಯಬೇಕೆಂದು’ ಕೊಂಡವರಿಗೆ ಸಿಗುವ ಉತ್ಸಾಹ – ಪ್ರೇರಣೆಯನ್ನು ಕಡೆಗಣಿಸಲಾದೀತೆ? ಪುಸ್ತಕಗಳನ್ನು ಜನರಿಗೆ ತಲುಪಿಸುವುದು ಸಾಹಿತಿಗೆ ತೋರುವ ಶ್ರೇಷ್ಠ ಗೌರವವೆಂಬುದು ಸತ್ಯ, ಇದರೊಟ್ಟಿಗೆ ಸಾಹಿತಿಗಳ ಮನೆಯನ್ನು ಸ್ಮಾರಕವಾಗಿಸುವುದು ಕೂಡ ಅವರನ್ನು ಮತ್ತಷ್ಟು ಅರಿಯಲು, ಮಗದಷ್ಟು ಓದಲು ಸಹಾಯಕ.

article published in nilume
-    

No comments:

Post a Comment