Sep 13, 2012

ವಿದ್ಯುತ್ ಅನಿವಾರ್ಯ ... ಆದರೆ?

ಚಿತ್ರ ಕೃಪೆ - firstpost
ಡಾ ಅಶೋಕ್ ಕೆ ಆರ್
ಕೂಡುಂಕುಳಂ ಅಣುಸ್ಥಾವರದಲ್ಲಿ ನಿನ್ನೆ [10/09/1012] ಯುರೇನಿಯಂ ಇಂಧನವನ್ನು ತುಂಬುವುದರ ವಿರುದ್ಧ ನಡೆದ ಪ್ರತಿಭಟನೆ ಅಂತೋನಿ  ಜಾನ್ ಎಂಬ ಮೀನುಗಾರನ ಹತ್ಯೆಯಿಂದ ಹೊಸ ಮಜಲು ಪಡೆದಿದೆ. ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ತೂತ್ತುಕುಡಿಯಲ್ಲಿ ಪೋಲೀಸ್ ಠಾಣೆ ಮತ್ತು ಚೆಕ್ ಪೋಸ್ಟ್ ಮೇಲೆ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಪೋಲೀಸರು ಗುಂಡು ಹಾರಿಸಿದ್ದಾರೆ ಎಂಬುದು ಅಲ್ಲಿನ ಹಿರಿಯ ಪೋಲೀಸ್ ಅಧಿಕಾರಿಗಳ ಹೇಳಿಕೆ; ಮೀನುಗಾರನ ಹತ್ಯೆಗೆ ಅವರು ಕೊಟ್ಟ ಸಮರ್ಥನೆ! ಪ್ರತಿಭಟನಾಕಾರರನ್ನು ದಾಳಿಗೆ ಪ್ರಚೋದಿಸಿದ ಕಾರಣಗಳು?!

ಮಾರ್ಚ್ 2011ರಲ್ಲಿ ಸುನಾಮಿ ಹೊಡೆತಕ್ಕೆ ತತ್ತರಿಸಿದ ಜಪಾನಿನಲ್ಲಿ ಫುಕುಶಿಮಾ ಅಣುಸ್ಥಾವರದ ದುರಂತವೂ ಸೇರಿಹೋಯಿತು. ಉತ್ಕೃಷ್ಟ ತಂತ್ರಜ್ಞಾನ, ಯಾವ ಭೂಕಂಪಕ್ಕೂ ಜಗ್ಗಲಾರದೆಂದೇ ನಂಬಲಾಗಿದ್ದ ಅಲ್ಲಿನ ಅಣುಸ್ಥಾವರ ವಿಜ್ಞಾನಿಗಳ ನಂಬುಗೆಯನ್ನು ತಲೆಕೆಳಗು ಮಾಡಿ ಸುನಾಮಿಯ ಹೊಡೆತಕ್ಕೀಡಾಗಿ ಪರಿಸರಕ್ಕೆ ವಿಷಾಣುಗಳನ್ನು ಬಿಡುಗಡೆ ಮಾಡಿ ವಿಶ್ವದೆಲ್ಲೆಡೆ ಅಣುಸ್ಥಾವರಗಳ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ನೀಡಿತು. ಬಹುತೇಕ ವಿದ್ಯುತ್ತನ್ನು ಅಣುಸ್ಥಾವರಗಳಿಂದಲೇ ಉತ್ಪಾದಿಸುವ ಜರ್ಮನಿಯಂಥ ದೇಶಗಳೂ ಸಹ ‘ಇನ್ನು ಮುಂದೆ ಹೊಸ ಅಣುಸ್ಥಾವರಗಳನ್ನು ನಿರ್ಮಿಸುವುದಿಲ್ಲ. ಬದಲಿ ಇಂಧನ ಮೂಲಗಳು ಅವಶ್ಯವಿರುವ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿದ್ದ ಹಾಗೆ ಈಗ ಚಾಲ್ತಿಯಲ್ಲಿರುವ ಅಣುಸ್ಥಾವರಗಳನ್ನೂ ಸ್ಥಗಿತಗೊಳಿಸಲಾಗುವುದು’ ಎಂದು ಘೋಷಿಸುವ ಹಾಗೆ ಮಾಡಿದ್ದು ಫುಕುಶಿಮಾ ದುರಂತ. ಈ ಮಧ್ಯೆ ಸಮುದ್ರ ತೀರದಲ್ಲೇ ನಿರ್ಮಿಸಲಾಗುತ್ತಿದ್ದ ಕೂಡುಂಕುಳಂ ಸ್ಥಾವರದ ವಿರುದ್ಧವೂ ಪ್ರತಿಭಟನೆ ಹೆಚ್ಚಾಗುತ್ತ ಸಾಗಿತು. ಅಣುಸ್ಥಾವರದ ವಿರುದ್ಧ ಈ ಮಟ್ಟಿಗಿನ ಭಯ ಅವಶ್ಯಕವೇ? ಅಭಿವೃದ್ಧಿ ಹೊಂದಿದ ದೇಶಗಳೆಲ್ಲ ಅಣುಸ್ಥಾವರ ವಿದ್ಯುತ್ತನ್ನೇ ನೆಚ್ಚಿಕೊಂಡಿರುವಾಗ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಅಣುಸ್ಥಾವರ ವಿರೋಧಿಸುವುದು ಸರಿಯೇ?

ವಿದ್ಯುಚ್ಛಕ್ತಿ ಇಂದಿನ ಅನಿವಾರ್ಯತೆ. ನಾನಿದನ್ನು ಟೈಪಿಸುವುದಕ್ಕೂ ನೀವಿದನ್ನು ಓದುವುದಕ್ಕೂ ವಿದ್ಯುತ್ ಬೇಕೇ ಬೇಕು. ಭಾರತದಲ್ಲಿಂದು ವಿದ್ಯುತ್ ನ ಪ್ರಮುಖ ಮೂಲ ಕಲ್ಲಿದ್ದಲು ಆಧಾರಿತ ಥರ್ಮಲ್ ಪ್ಲ್ಯಾಂಟ್ ಗಳು ಮತ್ತು ಹೈಡ್ರೋ ಪವರ್ ಪ್ರಾಜೆಕ್ಟುಗಳು. ಮೊದಲನೆಯದು ಇವತ್ತಲ್ಲ ನಾಳೆ ಖಾಲಿಯಾಗುವ ಇಂಧನ ಮೂಲ, ಎರಡನೆಯದು ಮಳೆಯಾಧಾರಿತ. ಸೋಲಾರ್ ಮತ್ತು ವಾಯು ವಿದ್ಯುತ್ ಉತ್ಪಾದನಾ ಘಟಕಗಳು ಇನ್ನೂ ಶೈಶಾವಸ್ಥೆಯಲ್ಲಿವೆ ಮತ್ತು ಇವತ್ತಿಗೆ ಭಾರತದಲ್ಲಿ ಲಭ್ಯವಿರುವ ತಂತ್ರಜ್ಞಾನದಲ್ಲಿ ದುಬಾರಿಯೂ ಹೌದು. ಮೇಲಿನ ಅನಿಶ್ಚಿತ ಘಟಕಗಳಿಗೆ ಹೋಲಿಸಿದರೆ ವರ್ಷದ ಎಲ್ಲ ದಿನವೂ ಅನಿಯಮಿತವಾಗಿ ವಿದ್ಯುತ್ ಉತ್ಪಾದಿಸಿ ಕೊಡಬಲ್ಲ ಅಣುಸ್ಥಾವರಗಳು ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಕಾಣುವುದು ಸತ್ಯ. ಅಣೆಕಟ್ಟೆ ಕಟ್ಟಿ ಊರು ಮುಳುಗಿಸುವ ಅವಶ್ಯಕತೆಯಿಲ್ಲ, ಕಲ್ಲಿದ್ದಲು ಸ್ಥಾವರಗಳಿಂದ ಟನ್ನುಗಟ್ಟಲೆ ಹೊರಬಂದು ಗಾಳಿ – ನೀರನ್ನು ಕಲುಷಿತಗೊಳಿಸುವ ಹಾರುಬೂದಿಯ ಸಮಸ್ಯೆಯೂ ಇಲ್ಲ. ಅಣುಸ್ಥಾವರದ ಬೆಂಬಲಿಗರು ಹೇಳುವಂತೆ ಅಣು ವಿದ್ಯುತ್ ‘ಕಡಿಮೆ ದರದ ಸ್ವಚ್ಛ ವಿದ್ಯುತ್’. ಇದಷ್ಟೇ ಸತ್ಯವಾಗಿದ್ದರೆ ಇಷ್ಟರಮಟ್ಟಿಗಿನ ಪ್ರತಿಭಟನೆ ವಿಶ್ವವ್ಯಾಪಿಯಾಗಿ  ನಡೆಯುತ್ತಿರಲಿಲ್ಲ. ಅಣುಸ್ಥಾವರದ ಬಗೆಗಿನ ಮೂಲಭಯ ಅಣು ವಿಕಿರಣದ್ದು. ಅಣು ವಿಕಿರಣಗಳು ಹೆಚ್ಚೆಚ್ಚು ವಾತಾವರಣಕ್ಕೆ ಸೇರಿದಲ್ಲಿ ಆಗುವ ಅನಾಹುತಗಳಿಗೆ ನಾಗಾಸಾಕಿ ಮತ್ತು ಹಿರೋಷಿಮಾದ ಉದಾಹರಣೆ ಸಾಕೇನೋ? ಸಣ್ಣಪುಟ್ಟ ಚರ್ಮದ ಸಮಸ್ಯೆ, ಕ್ಯಾನ್ಸರಿನಿಂದ ಹಿಡಿದು ಮನುಷ್ಯ, ಪ್ರಾಣಿ – ಪಕ್ಷಿಗಳ ವಂಶವಾಹಿನಿಯನ್ನೇ ಬದಲಿಸಿಬಿಡುವ ಶಕ್ತಿ ಈ ಅಣು ವಿಕಿರಣಗಳಿಗಿದೆ. 1979 ರಲ್ಲಿ ಪೆನಿಸಿಲ್ವೇನಿಯಾದ ಥ್ರೀ ಮೈಲ್ ದ್ವೀಪದಲ್ಲಿ, ಉಕ್ರೇನಿನ ಚರ್ನೋಬೈಲಿನಲ್ಲಿ 1986ರಲ್ಲಿ ನಡೆದ ಅಣುಸ್ಥಾವರ ದುರಂತಕ್ಕೆ ಅಂದಿನ ಕಳಪೆ ತಂತ್ರಜ್ಞಾನವನ್ನು ದೂರಲಾಯಿತು. ಆದರೆ ಜಪಾನಿನಲ್ಲಿ ನಡೆದಿದ್ದು? ಇಲ್ಲಿಯವರೆಗೂ ಅಣುಸ್ಥಾವರ ದುರಂತಗಳು ಎಂದು ಕರೆಯಬಹುದಾದ ಘಟನೆಗಳು ಮೂರೇ ಮೂರುದಾರೂ ಒಂದೊಮ್ಮೆ ಇಂಥ ದುರಂತ ನಡೆದುಹೋದರೆ ಎಂಬ ಭೀತಿ ಅಣುಸ್ಥಾವರ ವಿರೋಧಿಗಳದ್ದು. ಅಣುಸ್ಥಾವರಕ್ಕಿಂತ ಹೆಚ್ಚಾಗಿ ಸ್ಥಾವರದಿಂದ ಉತ್ಪತ್ತಿಯಾಗುವ ತ್ಯಾಜ್ಯದ ವಿಲೇವಾರಿಗೆ ಇನ್ನೂ ಸರಿಯಾದ ಪರಿಹಾರ ಕಂಡುಹಿಡಿಯಲಾಗಿಲ್ಲ. ಇದೇ ರೀತಿಯ ಭಯ ಕೂಡುಂಕುಳಂನ ಜನರನ್ನೂ ಕಾಡಿದ್ದರೆ ಅದನ್ನು ತಪ್ಪೆನ್ನಲಾದೀತೆ? ಮೇಲಾಗಿ ಸ್ಥಾವರದಿಂದ ಸಮುದ್ರಕ್ಕೆ ಸೇರುವ ಬಿಸಿ ನೀರಿನಿಂದ ಜಲಚರಗಳು ಸಾವನ್ನಪ್ಪಿ ತಮ್ಮ ಜೀವನದಾದಾಯವೂ ಕೈತಪ್ಪುವುದೆಂಬ ಭಯ ಅಲ್ಲಿನ ಮೀನುಗಾರರಿಗೆ.

ಕೂಡುಂಕುಳಂನಲ್ಲಿ ಸ್ಥಾವರ ವಿರೋಧಿ ಚಳುವಳಿ ಇವತ್ತು ನಿನ್ನೆ ಹುಟ್ಟಿದಲ್ಲ. ವರುಷಗಳ ಹಿಂದೆ ಆರಂಭವಾದ ಚಳುವಳಿ ಹೆಚ್ಚು ಪ್ರಖರವಾಗಿದ್ದು ಜಪಾನ್ ಅಣು ದುರಂತದ ನಂತರ. ಜನರ ಭೀತಿಯನ್ನು ಹೋಗಲಾಡಿಸಲು ವಿಫಲವಾದ ಸರಕಾರಗಳು ಗೋಲಿಬಾರಿನಿಂದ ಚಳುವಳಿಯನ್ನು ಹತ್ತಿಕ್ಕಲು ಹೊರಟಿದೆ. ಅಣುಸ್ಥಾವರವೊಂದೇ ಅಲ್ಲ, ದೇಶದ ಯಾವ ಮೂಲೆಯಲ್ಲೂ ದೊಡ್ಡ ವಿದ್ಯುತ್ ಸ್ಥಾವರ, ದೊಡ್ಡ ಅಣೆಕಟ್ಟೆಗಳನ್ನು ಕಟ್ಟುವಾಗಲೂ ಕೂಡ ಜನರ ವಿರೋಧ ಪ್ರಬಲವಾಗೇ ಕಂಡುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಹಿಂದಿನ ಬೃಹತ್ ಯೋಜನೆಗಳಲ್ಲಿ ಆ ಯೋಜನಾಸ್ಥಳದ ಸುತ್ತಮುತ್ತಲಿನ ಜನರಿಗಾದ ಅನ್ಯಾಯಗಳು. ಸರಿಯಾದ ಪುನರ್ವಸತಿ ಕಲ್ಪಿಸುವಲ್ಲಿ ವಿಫಲಗೊಳ್ಳುವ, ಯೋಜನೆಗಳಿಂದ ಸುತ್ತಮುತ್ತಲಿನ ಪರಿಸರದ ಮೇಲಾಗುವ ದುಷ್ಟರಿಣಾಮಗಳ ಬಗ್ಗೆ ನಿರ್ಲಕ್ಷ್ಯ ತೋರುವ ಸರಕಾರಗಳನ್ನು ಜನರು ನಂಬುವುದಾದರೂ ಹೇಗೆ? ಅಣುಸ್ಥಾವರಗಳ ವಿಷಯದಲ್ಲಿ ಅವಶ್ಯಕತೆಗಿಂತಲೂ ಹೆಚ್ಚಿನ ನಿಗೂಢತೆ ಕಾಯ್ದುಕೊಳ್ಳುವ ಸರಕಾರದ ನೀತಿ ಕೂಡ ಜನರಲ್ಲಿ ಭೀತಿಯುಂಟುಮಾಡುತ್ತದೆ.

ಸುಳ್ಯದಿಂದ ಮೂವತ್ತು ಕಿಮಿ ದೂರದಲ್ಲಿರುವ ಉರುಳುಗುಂಡಿ ಜಲಪಾತಕ್ಕೆ ಭೇಟಿನೀಡಿದ್ದಾಗ ಜಲಪಾತದ ಮೇಲ್ಬಾಗದಿಂದ ಪೈಪುಗಳನ್ನೆಳೆದು ಮನೆಗಳ ಬಳಿಯೇ ವರುಷದ ಎಲ್ಲ ಕಾಲದಲ್ಲೂ ವಿದ್ಯುತ್ ಉತ್ಪಾದಿಸಿ ನಾಲ್ಕಾರು ಮನೆಗಳಿಗೆ ಬಳಸಿಕೊಳ್ಳುವ ವಿಧಾನವನ್ನು ಕಂಡಿದ್ದೆ. ಅರ್ಧ ಹಣವನ್ನು ಸರಕಾರದಿಂದ ಸಹಾಯಧನವಾಗಿ ಪಡೆದು ಅಲ್ಲಿನ ಜನರೇ ಅಳವಡಿಸಿಕೊಂಡ ವಿಧಾನವದು. ಹೆಚ್ಚೇನೂ ಖರ್ಚಾಗದ, ಪರಿಸರಕ್ಕೆ ಯಾವ ರೀತಿಯಿಂದಲೂ ಹಾನಿಯುಂಟುಮಾಡದ ಇಂಥ ಸರಳ ಯೋಜನೆಗಳ್ಯಾಕೆ ಹೆಚ್ಚಿನ ಅಧಿಕಾರಸ್ಥರಲ್ಲಿ ಆಸ್ಥೆ ಮೂಡಿಸುವುದಿಲ್ಲ? ಮಲೆನಾಡಿನ ಇಂಥ ಜಲಪಾತಗಳು, ಉತ್ತರ ಕರ್ನಾಟಕದ ಯಥೇಚ್ಛ ಬಿಸಿಲ್ಯಾಕೆ ಶಕ್ತಿ ಮೂಲದಂತೆ ಕಾಣುವುದಿಲ್ಲ? ಹತ್ತಿರದಲ್ಲೋ ದೂರದಲ್ಲೋ ಪರಿಸರಕ್ಕೆ ಮಾರಕವಾಗಿ ಪರಿಣಮಿಸುವ ಕೋಟ್ಯಾಂತರ ರುಪಾಯಿ ಬೇಡುವ ಬೃಹತ್ ಯೋಜನೆಗಳೆಡೆಗೆ ತೋರಿಸುವ ಆಸಕ್ತಯ ಕೊಂಚ ಪಾಲು ಬದಲಿ ವಿದ್ಯುತ್ ತಂತ್ರಜ್ಞಾನದ ಅಭಿವೃದ್ಧಿಗೂ ತೋರಿಸಿದರೆ ಆ್ಯಂಟನಿಯಂಥ ಅಮಾಯಕರ ಹತ್ಯೆಯನ್ನಾದರೂ ತಪ್ಪಿಸಬಹುದಲ್ಲವೇ? ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಕೂಡುಂಕುಳಂ ಗಲಭೆಯ ಬಗ್ಗೆ ಪ್ರತಿಕ್ರಯಿಸುತ್ತ ‘ಈ ಪ್ರತಿಭಟನೆ ವಿದೇಶಿ ಎನ್ ಜಿ ಒ.ಗಳ ಕೈವಾಡ’ ಎಂದು ಹೇಳಿದ್ದಾರೆ! ತಿಂಗಳುಗಳ ಹಿಂದೆ ಪ್ರಧಾನಿಯವರೂ ಇದೇ ತೆರನಾದ ಹೇಳಿಕೆ ಕೊಟ್ಟಿದ್ದರು. ಅಣುಸ್ಥಾವರಕ್ಕೆ ಸರಬರಾಜಾಗುವ ಯುರೇನಿಯಂ ಕೂಡ ವಿದೇಶದ್ದೇ ಅಲ್ಲವೇ?! ಪ್ರತಿಭಟನೆಯ ಹಿಂದೆ ವಿದೇಶಿ ಕೈವಾಡವಿರುವುದು ನಿಜವೇ ಆದಲ್ಲಿ ವಿದೇಶಿ ಶಕ್ತಿಗಳು ‘ಕೈ’ಯಾಡಿಸುವುದಕ್ಕೆ ಅವಕಾಶ ಮಾಡಿಕೊಟ್ಟವರ್ಯಾರು? ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಲಾಠಿ ಏಟು, ಗುಂಡಿನೇಟು ತಿಂದವರು ನಮ್ಮ ದೇಶದವರೇ ಅಲ್ಲವೇ? ಮೀನುಗಾರನ ಹತ್ಯೆಯಿಂದ ಪ್ರತಿಭಟನೆ ಹೆಚ್ಚಾದಲ್ಲಿ ‘ಇದರ ಹಿಂದೆ ಮಾವೋವಾದಿಗಳ ಕೈವಾಡವಿದೆ’ ಎಂದು ಹೇಳಲೂ ಇವರು ಹಿಂಜರಿಯಲಾರರು. ಪೋಲೀಸರ ಜಾಗದಲ್ಲಿ ಅರೆಸೇನಾ ಪಡೆಗಳನ್ನು ಕರೆಸಿ ‘ದೇಶರಕ್ಷಣೆಯ’ ಹೆಸರಿನಲ್ಲಿ ಮೀನುಗಾರರನ್ನು ‘ಮಾವೋವಾದಿಗಳೆಂದು’ ಹತ್ಯೆಗೈದು ಅಣುಸ್ಥಾವರ ನಿರ್ಮಿಸಲು ಆಗ ಸುಲಭವಾಗುತ್ತದೆಯಷ್ಟೇ!

ವರ್ತಮಾನದಲ್ಲಿ ಪ್ರಕಟವಾಗಿದ್ದ ಲೇಖನ 

No comments:

Post a Comment