Sep 11, 2012

ಆದರ್ಶವೇ ಬೆನ್ನು ಹತ್ತಿ . . . ಭಾಗ 6


“ಥ್ಯಾಂಕ್ಸ್ ಸರ್” ಎಂದು ಹೇಳಿ ಇಬ್ಬರೂ ಹೊರಬಂದರು.

“ನಿನಗೇನನ್ನಿಸುತ್ತೆ ಸಯ್ಯದ್”

“ಇವರ ಮಾತು, ಅವರ ಮುಖದಲ್ಲಿನ ಭಾವ ನೋಡಿದರೆ ಅಲ್ಲೇನೂ ನಡೆದೇ ಇಲ್ಲ ಅನ್ನಿಸುತ್ತೆ”

“ಪ್ರಾಮಾಣಿಕರ ಮುಖದಲ್ಲಿ ಮಾತ್ರ ಅಂತಹ ಭಾವ ಇರುತ್ತದೆ. ಮನಸ್ಸಿನಾಳದಲ್ಲಿ ಕ್ರೌರ್ಯ ತುಂಬಿಕೊಂಡವರ ಮುಖದಲ್ಲೂ ಕೆಲವೊಮ್ಮೆ ಆ ಪ್ರಶಾಂತತೆ ಇರುತ್ತದೇನೋ? ಹೆಂಡತಿ ಬೇರೆ ಇಲ್ಲ. ಕಾಮ ಅನ್ನೋದು ಮನುಷ್ಯನ ಕೈಲಿ ಏನು ಬೇಕಾದರೂ ಮಾಡಿಸುತ್ತೆ. ಅವರೇ ಹೇಳಿದಂತೆ ಸ್ಟ್ರೈಕ್ ಮಾಡೋಣ. ಸತ್ಯಕ್ಕೇ ಜಯ ಸಿಗಲಿ”

ಕಾಲೇಜಿನ ಮುಂದೆ ನೆರೆದಿದ್ದ ವಿದ್ಯಾರ್ಥಿ ಸಮೂಹದ ಬಳಿ ಅವರು ಬಂದರು. ಸಯ್ಯದ್ ಪ್ರಿನ್ಸಿಪಾಲ್ ಮತ್ತು ಕಾಂತರಾಜ್ ರವರ ಕೊಠಡಿಯಲ್ಲಿ ನಡೆದಿದ್ದನ್ನು ವಿವರಿಸಿ “ಕಾಂತರಾಜ್ ಸರ್ ಅಮಾನತ್ತು ಆಗುವವರೆಗೂ ನಾವು ತರಗತಿಗಳನ್ನು ಬಹಿಷ್ಕರಿಸೋಣ” ಎಂದ. ಎಲ್ಲರೂ ಅವನನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಿದರು. ಸತ್ಯಕ್ಕಾಗಿ ಬೆಂಬಲಿಸಿದರೋ ಒಂದಷ್ಟು ದಿನ ಕಾಲೇಜು ತಪ್ಪಿಸಿಕೊಳ್ಳುವ ಸುಖಕ್ಕಾಗಿ ಬೆಂಬಲಿಸಿದರೋ ಹೇಳುವುದು ಕಷ್ಟ ಕಷ್ಟ. ‘ಕಾಂತರಾಜ್ ಡೌನ್ ಡೌನ್’ ‘ಕಾಮುಕ ಕಾಂತರಾಜ್ ಗೆ ಧಿಕ್ಕಾರ’ ‘ಪ್ರಿನ್ಸಿಪಾಲರಿಗೆ ಧಿಕ್ಕಾರ’ ಇವೇ ಮೊದಲಾದ ಘೋಷಣೆಗಳು ಆವರಣದಲ್ಲಿ ಪ್ರತಿಧ್ವನಿಸಲಾರಂಭಿಸಿತು. ಸಿಗರೇಟು ಸುಟ್ಟೂ ಸುಟ್ಟು ಬೇಸರಗೊಂಡಿದ್ದವರು ಕಾಂತರಾಜರ ಪ್ರತಿಕೃತಿಯನ್ನು ಹುಲ್ಲಿನಿಂದ ತಯಾರಿಸಲಾರಂಭಿಸಿದರು. ಪತ್ರಿಕೆಗಳಲ್ಲಿ ಫೋಟೋ ಸಹಿತ ವರದಿ ಬರಬೇಕೆಂದರೆ ಏನು ಮಾಡಬೇಕೆಂದು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಚೆನ್ನಾಗಿಯೇ ತಿಳಿದಿತ್ತು.

          ಆವಾಗ ಬಂದಿದ್ದರು ಇನ್ಸ್ ಪೆಕ್ಟರ್ ವಿಕ್ರಮ್! ವಿಕ್ರಮ್ ಪ್ರಿನ್ಸಿಪಾಲರ ರೂಮಿಗೆ ಹೋಗಿ ಗಲಾಟೆಯ ಕಾರಣವನ್ನು ತಿಳಿದುಕೊಂಡರು. ನಂತರ ಪ್ರಿನ್ಸಿಪಾಲರೊಡನೆ ವಿದ್ಯಾರ್ಥಿಗಳ ಬಳಿಗೆ ಬಂದರು. “ಹಲೋ. ನಾನು ಇನ್ಸ್ ಪೆಕ್ಟರ್ ವಿಕ್ರಮ್” ಸಯ್ಯದ್ ನೆಡೆಗೆ ಕೈ ಚಾಚಿದ.

“ನಾನು ಸಯ್ಯದ್. ಪ್ರಿನ್ಸಿಪಾಲ್...”ಎಂದ್ಹೇಳಿ ಗೆಳೆಯರೆಡೆಗೆ ನೋಡಿದ. “ಡೌನ್ ಡೌನ್”

          “ನೋಡಿ ಸಯ್ಯದ್. ಇಲ್ಲಿ ನಿಂತು ಅರಚುವುದರಿಂದ ಯಾರಿಗೂ ನ್ಯಾಯ ಸಿಗೋದಿಲ್ಲ. ಫಾತಿಮಾಳಿಂದ ಕಂಪ್ಲೇಟ್ ಬರೆಸಿಕೊಡಿ. ಏನೇ ತಪ್ಪಾಗಿದ್ದರೂ ನಾವು ಸರಿ ಮಾಡ್ತೀವಿ”

ಲೋಕಿ “ಸ್ನೇಹಿತರೇ, ನಮ್ಮ ಇನ್ಸ್ ಪೆಕ್ಟರ್ ಸಾಹೇಬರು ನಮಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡುತ್ತಿದ್ದಾರೆ. ನಮ್ಮ ದೇಶದ ಪೋಲೀಸರು ನಾವು ಹೋಗಿ ಕೇಳಿದರೇ ನ್ಯಾಯ ಕೊಡಿಸೋದು ಕಷ್ಟ. ಅಂತಹದ್ರಲ್ಲಿ ಇವರು ತಾವಾಗೇ ನ್ಯಾಯ ಕೊಡಿಸುವುದಾಗಿ ಬಂದಿದ್ದಾರೆ. ಅದೇನು ಕೊಡಿಸ್ತಾರೋ ನೋಡೋಣ” ವ್ಯಂಗ್ಯ ಮಿಶ್ರಿತ ದನಿಯಲ್ಲಿ ಹೇಳಿದ. ‘ಹೋ’ ಎಂದು ಕೂಗಿತು ವಿದ್ಯಾರ್ಥಿ ಸಮೂಹ.

ವಿಕ್ರಮ್ ಪ್ರತಿಕ್ರಿಯಿಸಲಿಲ್ಲ. ಸಯ್ಯದ್ ನನ್ನು ವಿಚಾರಿಸಿ ಫಾತಿಮಾಳಿದ್ದ ಕೋಣೆಯೆಡೆಗೆ ನಡೆಯಲಾರಂಭಿಸಿದರು. ಸಯ್ಯದ್ ಲೋಕಿಯೊಡನೆ ಅತ್ತ ಹೆಜ್ಜೆ ಹಾಕಿದ. 

“ನೋಡಿ ಮಿಸ್ಟರ್...” ವಿಕ್ರಮ್ ಲೋಕಿಯ ಕಡೆ ನೋಡಿದ.

“ಲೋಕಿ”

“ನೋಡಿ ಲೋಕಿ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಚಟ ಒಳ್ಳೆಯದಲ್ಲ. ಒಬ್ಬ ವ್ಯಕ್ತಿ ಬಗ್ಗೆ ಏನೂ ಗೊತ್ತಿಲ್ಲದೆ ಮಾತನಾಡಬಾರದು” ಒಬ್ಬ ಪ್ರಾಮಾಣಿಕನಲ್ಲಿರುವ ಆವೇಶ ಕಾಣಿಸಿತು ಲೋಕಿಗೆ. ಎಲ್ಲರೂ ತರಗತಿಯೊಳಗೆ ಹೋದರು. ಸಯ್ಯದ್ ವಿಕ್ರಮ್ ಗೆ ಅವರಿಬ್ಬರನ್ನೂ ಪರಿಚಯಿಸಿದ. 

“ನೋಡಿ ಮಿಸ್ ಫಾತಿಮಾ. ಕಾಂತರಾಜ್ ಮೇಲೆ ನೀವೊಂದು ಕಂಪ್ಲೇಂಟ್ ಬರೆದುಕೊಟ್ಟರೆ ಮಾತ್ರ ನಾವು ಕ್ರಮ ಜರುಗಿಸಬಹದು”

“ಸರಿ ಸರ್”

“ನಿನ್ನೆ ಏನೇನು ನಡೆಯಿತು ಅಂತ ವಿವರವಾಗಿ ಹೇಳಿ”

“ಹಿಸ್ಟರಿ ನೋಟ್ಸ್ ತೆಗೆದುಕೊಳ್ಳಲೆಂದು ನಿನ್ನೆ ರಾತ್ರಿ ಏಳು ಮೂವತ್ತರ ಸುಮಾರಿಗೆ ಅವರ ಮನೆಗೆ ಹೋಗಿದ್ದೆ. ನೋಟ್ಸ್ ತೆಗೆದುಕೊಂಡು ಪಾಠದ ವಿಷಯವಾಗಿ ಅವರೊಡನೆ ಸ್ವಲ್ಪ ಚರ್ಚಿಸಿ ನಾನು ಹೊರಡಲು ಸಿದ್ಧಳಾದಾಗ ‘ಸ್ವಲ್ಪ ಕಾಫಿ ಕುಡಿದು ಹೋಗು’ ಎಂದರು. ‘ಕಾಫಿ ಕುಡಿತೀನಿ. ಆದರೆ ಒಂದು ಷರತ್ತು. ಇವತ್ತು ನಾನೇ ಕಾಫಿ ಮಾಡ್ತೀನಿ’ ಎಂದ್ಹೇಳಿ ಅವರ ಅಡುಗೆ ಮನೆಗೆ ಹೋದೆ”

“ಮಾಸ್ತರ ಮನೆಯ ಅಡುಗೆ ಮಾಡುವ ಪ್ರಮೇಯವೇನಿತ್ತು ನಿಮಗೆ?” ಅವರ ದನಿಯಲ್ಲಿನ ವ್ಯಂಗ್ಯದ ಮೊನಚಿಗೆ ಫಾತಿಮಾ ಕೊಂಚ ಕೋಪಗೊಂಡಳು. “ನಮ್ಮ ಮನೆಯವರಿಗೂ ಅವರಿಗೂ ಮುಂಚಿನಿಂದ ಪರಿಚಯ. ಆ ಸಲುಗೆಯಿಂದ ಅವರಿಗೆ ಕಾಫಿ ಮಾಡಿಕೊಡಲು ಹೋದೆನೆ ಹೊರತು ಇನ್ಯಾತಕ್ಕೂ ಅಲ್ಲ”

          “ಸರಿ. ಮುಂದಕ್ಕೆ ಹೇಳಿ”

“ಅವತ್ತವರಿಗೇನಾಗಿತ್ತೋ ಏನೋ...ಇದ್ದಕ್ಕಿದ್ದಂತೆ . . .ಅಡುಗೆ. . ಮ. .ನೆ. .ಗೆ ಬಂದು . .” ಫಾತಿಮಾ ಅಳಲಾರಂಭಿಸಿದಳು.

“ಸಮಾಧಾನ ಮಾಡ್ಕೋ ಫಾತಿ. ಅಳೋದ್ರಿಂದ ಏನೂ ಪ್ರಯೋಜನವಿಲ್ಲ” ರೂಪಾ ಸಮಾಧಾನಿಸಲೆತ್ನಿಸಿದಳು. ಕೆಲಕ್ಷಣದ ನಂತರ ಮತ್ತೆ ಹೇಳಲಾರಂಭಿಸಿದಳು. “ಇದ್ದಕ್ಕಿದ್ದಂತೆ ಅಡುಗೆ ಮನೆಗೆ ಬಂದು ಬಾಗಿಲ ಬಳಿ ನಿಂತು ನನ್ನನ್ನೇ ನೋಡಲಾರಂಭಿಸಿದರು. ‘ಏನಾಯ್ತು ಸರ್?’ ಎಂದೆ. ಏನಿಲ್ಲ ಎಂಬಂತೆ ತಲೆಕೊಡವಿ ಮತ್ತೆ ನನ್ನನ್ನೇ ಎವೆಯಿಕ್ಕದೆ ನೋಡಿದರು. ‘ಯಾಕ್ ಸರ್. ಹೀಗೆ ನೋಡ್ತಾ ಇದ್ದೀರ?’ ಎಂದೆ. ನನಗೆ ಗಾಬರಿಯಾಗಲು ಶುರುವಾಗಿತ್ತು. ‘ಇವತ್ತು ನೀನು ತುಂಬಾ ಚೆನ್ನಾಗಿ ಕಾಣ್ತಿದ್ದೀಯ’ ಎಂದರು. ಏನೂ ಉತ್ತರಿಸದೆ ಕಾಫಿ ಪುಡಿಯನ್ನು ಹಾಲಿಗೆ ಹಾಕಿದೆ. ‘ನೀನೇನೂ ತಿಳಿದುಕೊಳ್ಳದಿದ್ದರೆ ಒಂದು ಮಾತು?’ ನಾನು ಉತ್ತರಿಸಲಿಲ್ಲ. ‘ನಿನ್ನ ಮುಖವೇ ಇಷ್ಟು ಬೆಳ್ಳಗಿದೆಯಲ್ಲ. . ಇನ್ನೂ. .’ಎಂದ್ಹೇಳಿ ನನ್ನ ಬಳಿಗೆ ಎರಡೆಜ್ಜೆ ಹಾಕಿದರು. ಅವರತ್ತ ನೋಡಿದೆ. ಅವರ ಕಣ್ಣುಗಳಲ್ಲಿದ್ದ ಆಸೆ ನನಗೆ ಭಯ ಹುಟ್ಟಿಸಿತು. ಅವರನ್ನು ತಳ್ಳಿ ನೋಟ್ಸ್ ತೆಗೆದುಕೊಳ್ಳುವುದನ್ನೂ ಮರೆತು ಮನೆಗೆ ಓಡಿ ಹೋದೆ”

“ನೀವು ಹೇಳಿದ್ದನ್ನೆಲ್ಲಾ ಇದರಲ್ಲಿ ಬರೆದಿದ್ದೇವೆ. ಒಂದು ಬಾರಿ ಓದಿ ಸಹಿ ಮಾಡಿ” ಫಾತಿಮಾಳ ಮುಂದೆ ಹಾಳೆಯೊಂದನ್ನು ಇಟ್ಟ ವಿಕ್ರಮ್. ಫಾತಿಮಾ ಅದರ ಮೇಲೆ ಒಮ್ಮೆ ಕಣ್ಣಾಡಿಸಿ ಸಹಿ ಮಾಡಿದಳು. ವಿಕ್ರಮ್ ಲೋಕಿಯೆಡೆಗೆ ತಿರುಗೆ “ಕಾಂತರಾಜ್ ಎಲ್ಲಿದ್ದಾರೆ?” ಎಂದು ಕೇಳಿದರು. “ತಮ್ಮ ಛೇಂಬರಿನಲ್ಲಿ”. ಅವರನ್ನು ಕರೆದುಕೊಂಡು ಬರುವಂತೆ ಲೋಕಿಗೆ ತಿಳಿಸಿ ಒಬ್ಬ ಪೇದೆಯನ್ನು ಲೋಕಿಯೊಡನೆ ಕಳುಹಿಸಿದರು. ಮೂರು ನಿಮಿಷದ ನಂತರ ಕಾಂತರಾಜ್ ಬಂದರು. ಮುಖದಲ್ಲಿ ಅದೇ ಪ್ರಶಾಂತ ಭಾವ. ‘ಇವರು ತಪ್ಪು ಮಾಡಿದ್ರಾ?’ ವಿಕ್ರಮನಿಗೆ ಅನುಮಾನ ಬಂತು. ಫಾತಿಮಾಳನ್ನು ರೂಪಾಳೊಡನೆ ಪಕ್ಕದ ರೂಮಿಗೆ ಕಳುಹಿಸಿ ವಿಚಾರಣೆ ಪ್ರಾರಂಭಿಸಿದರು.

“ಈ ಗಲಾಟೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?” 

          “ಈ ಗಲಾಟೆಗೂ ನನಗೂ ಯಾವುದೇ ಸಂಬಂಧವಿಲ್ಲಾ. .”

“ಸಂಬಂಧ ಇಲ್ಲ?! ಆಕೆ ನಿಮ್ಮ ಮೇಲೇ ದೂರು ನೀಡಿರೋದು”

“ಇರಬಹುದು. ಆದರಾಕೆ ನನ್ನ ಮೇಲೆ ಈ ರೀತಿಯಾಗಿ ಯಾಕೆ ದೂರು ನೀಡಿದ್ದಾಳೋ ನನಗೆ ತಿಳಿಯದು”

“ತಪ್ಪು ಮಾಡಿದವರೆಲ್ಲ ಹೀಗೇ ಹೇಳೋದು. ಅದು ಬಿಡಿ. ನಿನ್ನೆ ಫಾತಿಮಾ ನಿಮ್ಮ ಮನೆಗೆ ಬಂದಿದ್ದಳಾ?”

“ಹ್ಞೂ”

          “ಎಷ್ಟೊತ್ತಿಗೆ?”

“ಏಳೂವರೆ”

“ಅಲ್ಲೇನಾಯಿತು?”

“ಆಕೆ ಬಂದು ನೋಟ್ಸ್ ತೆಗೆದುಕೊಂಡಳು. ಕಾಫಿ ಕುಡಿ ಎಂದೆ. ಇಲ್ಲ ಸರ್ ಮತ್ತೊಮ್ಮೆ ಬರ್ತೀನಿ ಎಂದು ಹೋದಳು”

“ಅವರ ಮನೆಯವರು ನಿಮಗೆ ಗೊತ್ತಾ?”

“ಹ್ಞು. ಚೆನ್ನಾಗೇ ಪರಿಚಯ”

“ಅಲ್ರೀ ಅಷ್ಟು ಪರಿಚಯವಿರೋ ಹುಡುಗಿ ಜೊತೆ ಕೆಟ್ಟದಾಗಿ ವರ್ತಿಸೋಕೆ ನಿಮಗೆ ನಾಚಿಕೆ ಆಗಲಿಲ್ವ?”

“ಅಂದ್ರೆ ನಿಮ್ಮ ಮಾತಿನ ಪ್ರಕಾರ ಪರಿಚಯವಿಲ್ಲದಿದ್ದರೆ ಕೆಟ್ಟದಾಗಿ ವರ್ತಿಸಬಹುದು ಅಂತಾನಾ?” ತಮ್ಮ ಜೋಕಿಗೆ ತಾವೇ ನಕ್ಕು “ನೋಡಿ ಸರ್, ಏನೂ ತಪ್ಪೇ ಮಾಡಿಲ್ಲ ಅಂದ ಮೇಲೆ ನನಗ್ಯಾಕೆ ನಾಚಿಕೆ ಆಗಬೇಕು? ನನ್ನ ಮೇಲೆ ಸುಳ್ಳು ಸುಳ್ಳು ಆರೋಪ ಮಾಡಿರೋ ಆ ಲೌ...ಅವಳಿಗೆ ನಾಚಿಕೆಯಾಗಬೇಕು”

“ಮಾತು ಹಿಡಿತದಲ್ಲಿರಲಿ ಕಾಂತರಾಜ್. ನಮ್ಮ ಸಮಾಜ ತಪ್ಪಾಗಿ ನಡೆದುಕೊಂಡಿರೋ ನಿಮ್ಮಂಥವರನ್ನು ಒಪ್ಪಿಕೊಂಡು ಧೈರ್ಯವಾಗಿ ಕಂಪ್ಲೇಂಟ್ ಕೊಟ್ಟಿರೋ ಫಾತಿಮಾಳೇ ‘ಸರಿಯಿಲ್ಲವೇನೋ’ ಎಂಬ ದೃಷ್ಟಿಯಿಂದ ನೋಡುತ್ತೆ. ಇದೆಲ್ಲ ಗೊತ್ತಿದ್ದೂ ಆಕೆ ಕಂಪ್ಲೇಂಟ್ ಕೊಟ್ಟಿದ್ದಾಳೆ ಅಂದ್ರೆ. .”

“ಅಂದ್ರೆ. .”

“ನಿಮ್ಮ ಹೆಂಡತಿ ಸತ್ತು ಹೋಗಿ ಬಹಳ ವರುಷಗಳಾದವಂತೆ. ಮತ್ತೆ ಯಾಕೆ ಮದುವೆ ಮಾಡಿಕೊಳ್ಳಲಿಲ್ಲ”

“ನೋಡಿ ಇನ್ಸ್ ಪೆಕ್ಟರ್ ನನ್ನ ಸ್ವಂತ ವಿಷಯದ ಬಗ್ಗೆ ವಿಚಾರಿಸೋದಿಕ್ಕೆ ನಿಮಗ್ಯಾವ ಅಧಿಕಾರಾನೂ ಇಲ್ಲ. ನಾನು ತಪ್ಪು ಮಾಡಿಲ್ಲ ಅಂತ ನನಗೆ ಗೊತ್ತು. ನನ್ನನ್ನು ಅಮಾನತ್ತು ಮಾಡಿಸ್ತೀರೋ, ಜೈಲಿಗೆ ತಳ್ತೀರೋ ಅಥವಾ ನಿರಪರಾಧಿ ಅಂತ ತೀರ್ಮಾನ ಮಾಡ್ತೀರೋ ನಿಮಗೆ ಸೇರಿದ್ದು. ನನಗೆಷ್ಟು ಗೊತ್ತೋ ಅಷ್ಟನ್ನೂ ಹೇಳಿಯಾಯಿತು”

“ಅತ್ಯಾಚಾರ ಪ್ರಯತ್ನಕ್ಕೆ ಎಷ್ಟು ವರ್ಷ ಶಿಕ್ಷೆ ಆಗುತ್ತೆ ಗೊತ್ತಿರಬೇಕು ತಮಗೆ” ಸಯ್ಯದ್ ಕೇಳಿದ. ಒಂದು ನಗೆ ನಕ್ಕು “ನನ್ನ ಮೇಲೆ ಅತ್ಯಾಚಾರದ ಯತ್ನ ಅನ್ನೋ ಕೇಸ್ ಹಾಕೋದಿಕ್ಕಾಗೋಲ್ಲ. ಐ ಪಿ ಸಿ ಸೆಕ್ಷನ್ 509ರ ಪ್ರಕಾರ ಗರಿಷ್ಟ ಅಂದ್ರೂ ಒಂದು ವರ್ಷ ಶಿಕ್ಷೆ ಆಗುತ್ತೆ ಅಷ್ಟೇ. ಅಲ್ವ ಇನ್ಸ್ ಪೆಕ್ಟರ್ ಸಾಹೇಬ್ರೇ” ಎಂದು ವಿಕ್ರಮ್ ಕಡೆಗೊಮ್ಮೆ ನೋಡಿ ಹೊರನಡೆದರು ಕಾಂತರಾಜ್. ಸಯ್ಯದ್ ವಿಕ್ರಮ್ ಕಡೆಗೆ ನೋಡಿದ.

“ಹ್ಞೂ. 509ರ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ತನ್ನ ಮಾತಿನಿಂದ ಅಥವಾ ನಡವಳಿಕೆಯಿಂದ ಒಂದು ಹೆಂಗಸನ್ನು ಅವಮರ್ಯಾದೆ ಮಾಡೋ ರೀತಿಯಲ್ಲಿ ನಡೆದುಕೊಂಡರೆ ಆತನಿಗೆ ಒಂದು ವರ್ಷದ ಸಾದಾ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು”

“ಅತ್ಯಾಚಾರಕ್ಕೆ ಪ್ರಯತ್ನಿಸಿದರೂ ಅಂತ. . .”

“ಸಾಕ್ಷಿ?”

“ಸಾಕ್ಷಿ ಇಲ್ಲಾಂದ್ರೆ ನಾವು ಯಾವುದೇ ರೀತಿಯ ಅಪರಾಧ ಮಾಡಬಹುದಾ?” ಲೋಕಿ ಕೋಪದಿಂದ ಕೇಳಿದ.

“ಇಲ್ಲಿ ಹೇಳೋದು ಸುಲಭ. ಸಾಕ್ಷಿಗಳಿಲ್ಲದಿದ್ದರೆ ಕೋರ್ಟಿನಲ್ಲಿ ಕೇಸು ಬಿದ್ದುಹೋಗುತ್ತೆ.”

“ಈ ಕೇಸಿನಲ್ಲೂ ಸಾಕ್ಷಿಗಳಿಲ್ಲ. ನಾಲ್ಕು ಗೋಡೆಯ ನಡುವೆ ನಡೆಯುವ ಅನಾಚಾರಕ್ಕೆ ಸಾಕ್ಷಿ ಎಲ್ಲಿ ಸಿಗುತ್ತೆ? ಈ ಕೇಸೂ ಬಿದ್ದು ಹೋಗುತ್ತೇನೋ ಅಲ್ವ ಸಾಹೇಬರೇ” ವ್ಯಂಗ್ಯದಿಂದ ಕೇಳಿದ.

“ಲೋಕೇಶ್. ಇನ್ಸ್ ಪೆಕ್ಟರ್ ಹತ್ತಿರ ಈ ರೀತಿಯೆಲ್ಲ ಮಾತನಾಡಬಾರದು. ಅದೂ ಅಲ್ಲದೆ ವಿಕ್ರಮ್ ಅಂದ್ರೆ ಪ್ರಾಮಾಣಿಕತೆಗೆ ಮತ್ತೊಂದು ಹೆಸರು. ನೀವಿಬ್ಬರೂ ಹೊರಗೆ ಹೋಗಿ” ಎಂದು ಪ್ರಿನ್ಸಿಪಾಲ್ ಇಬ್ಬರನ್ನೂ ಹೊರಗೆ ಕಳುಹಿಸಿದರು.

“ಸಾರಿ ವಿಕ್ರಮ್. ನಮ್ಮ ಹುಡುಗರ ಪರವಾಗಿ ನಾನು ಕ್ಷಮೆ ಕೇಳ್ತೀನಿ”

“ಇರ್ಲಿ ಬಿಡಿ ಸರ್. ನಾನೂ ಹೀಗೆ ಇದ್ದೆ ವಿದ್ಯಾರ್ಥಿಯಾಗಿದ್ದಾಗ. ಈಗ ಕಾಂತರಾಜ್ ವಿಷಯ ಏನು ಮಾಡ್ತೀರ ಹೇಳಿ. ಅವರನ್ನು ಆದಷ್ಟು ಬೇಗ ಅಮಾನತ್ತು ಮಾಡೋದೆ ಸರಿ ಅನ್ಸುತ್ತೆ”

“ಅಂಥ ಒಳ್ಳೆ ವ್ಯಕ್ತಿಯನ್ನು ಒಂದು ಕಂಪ್ಲೇಂಟ್ ಆಧಾರದಿಂದ ಅಮಾನತ್ತು ಮಾಡೋದು ಅಂದ್ರೆ. . .”

‘ಇನ್ಸ್ ಪೆಕ್ಟರ್ ವಿಕ್ರಮ್ ಡೌನ್ ಡೌನ್’ ‘ಕಾಮುಕ ಕಾಂತರಾಜ್ಗೆ ಧಿಕ್ಕಾರ’ ಘೋಷಣೆಗಳು ಮತ್ತೆ ಮಾರ್ದನಿಸಲಾರಂಭಿಸಿತು.

“ಇದು ಒಂದು ಕಂಪ್ಲೇಂಟ್ ವಿಷಯ ಅಲ್ಲ ಸರ್. ಇಷ್ಟು ಜನ ವಿದ್ಯಾರ್ಥಿಗಳ ಪ್ರತಿರೋಧ ಎದುರಿಸೋದಕ್ಕಿಂತ ಅವರನ್ನು ಅಮಾನತ್ತು ಮಾಡೋದೆ ಸರಿ. ಅವರು ಸಾಚಾನೋ ಅಲ್ವೋ ಅಂಥ ಕೋರ್ಟು ನಿರ್ಧರಿಸುತ್ತೆ. ಅವರು ತಪ್ಪು ಮಾಡಿಲ್ಲದಿದ್ದರೆ ಪುನಃ ಸೇರಿಸಿಕೊಂಡರಾಯಿತು” ಸರಿಯೆಂಬಂತೆ ತಲೆಯಾಡಿಸಿದರು ಪ್ರಿನ್ಸಿಪಾಲ್. ಇಬ್ಬರೂ ಹೊರಗೆ ಬಂದರು. ಅವರು ಹೊರಬರುತ್ತಿದ್ದ ಹಾಗಿ ವಿದ್ಯಾರ್ಥಿಗಳ ಘೋಷಣೆಯೂ ತಾರಕ ಸ್ವರಕ್ಕೇರಿತು. ಅವರ ಕೂಗಾಟ ಕಡಿಮೆಯಾದ ಮೇಲೆ “ವಿದ್ಯಾರ್ಥಿಗಳೇ ಕಾಂತರಾಜ್ ಮೇಲೆ ಎಂಥ ಆಪಾದನೆ ಬಂದಿದೆ ಅನ್ನೋದು ನಿಮಗೆಲ್ಲ ತಿಳಿದಿದೆ. ಅವರ ಮೇಲಿರೋ ಆಪಾದನೆಯಿಂದ ಅವರು ಮುಕ್ತರಾಗೋವರೆಗೂ ಅವರನ್ನು ಅಮಾನತ್ತಿನಲ್ಲಿಡಬೇಕೆಂದು ತೀರ್ಮಾನಿಸಿದ್ದೇವೆ”

“ಅವರು ಆಪಾದನೆಯಿಂದ ಹೊರಬರ್ತಾರೆ ಅಂತ ನೀವೆ ನಿರ್ಧರಿಸಿರೋ ಹಾಗಿದೆ” ಲೋಕಿ ಮಾತಿಗೆ ಚಪ್ಪಾಳೆ ತಟ್ಟುವ ಮೂಲಕ ಗೆಳೆಯರು ಅವನನ್ನು ಬೆಂಬಲಿಸಿದರು.

“ರೀ ಲೋಕಿ ಸುಮ್ನೆ ನಿಂತುಕೊಳ್ರೀ. ನಾನೂ ಬೆಳಿಗ್ಗೆಯಿಂದ ನಿಮ್ಮನ್ನು ಗಮನಿಸುತ್ತಿದ್ದೀನಿ. ಪೋಲೀಸರ ಬಗ್ಗೆ ಬಾಯಿಗೆ ಬಂದಂತೆ ಮಾತಾಡ್ತೀರಲ್ಲ. ಕಾಂತರಾಜ್ ಸರ್ ನ ಅಮಾನತ್ತು ಮಾಡಿದ್ದಾಯ್ತಲ್ಲ. ಇನ್ನು ನೀವೆಲ್ಲ ಹೋಗಬಹುದು” ತಾಳ್ಮೆ ಕಳೆದುಕೊಂಡ ವಿಕ್ರಮ್. ‘ಏಯ್ . . .’ ನೀನ್ಯಾರೋ ನಮಗೆ ಹೇಳೋದಿಕ್ಕೆ ಎಂಬಂತೆ ಇಡೀ ವಿದ್ಯಾರ್ಥಿ ಸಮೂಹ ಒಕ್ಕೊರಲಿನಿಂದ ಕಿರುಚಿತು. ಪರಿಸ್ಥಿತಿ ಯಾಕೋ ಕೈಮೀರುತ್ತಿದೆಯೆನ್ನುವುದನ್ನು ಅರಿತ ಸಯ್ಯದ್ ಮುಂದೆ ಬಂದು “ಫ್ರೆಂಡ್ಸ್ ಕಾಂತರಾಜ್ ಸರ್ ನ ಅಮಾನತ್ತು ಮಾಡ್ಬೇಕು ಅನ್ನೋ ನಮ್ಮ ಬೇಡಿಕೆ ಈಡೇರಿದೆ. ನ್ಯಾಯಕ್ಕೆ ಜಯ ಸಿಗಲಿ ಎಂಬ ಭರವಸೆಯೊಂದಿಗೆ ನಾವೆಲ್ಲ ಹೊರಡೋಣ” ಎಂದು ಹೇಳಿ ತಾನೇ ಮುಂದಾಗಿ ಎಲ್ಲರನ್ನೂ ಚದುರಿಸಿದ.

“ನೀನು ಸುಮ್ನೆ ಇರಬೇಕಿತ್ತು ಸಯ್ಯದ್. ಆ ವಿಕ್ರಮನಿಗೆ ಇನ್ನಷ್ಟು ಬೆವರಿಳಿಸಬಹುದಿತ್ತು”

“ಸುಮ್ನಿರು ಲೋಕಿ. ಅಂಥ ಅಧಿಕಾರಿಯ ಹತ್ತಿರ ನೀನಾರೀತಿ ಮಾತನಾಡಿದ್ದು ನನಗಂತೂ ಸರಿಬರಲಿಲ್ಲ” ಕೋಪ ಬೇಸರದಿಂದ ಹೇಳಿದ. ಲೋಕಿ ಮತ್ತೆ ಮಾತನಾಡಲಿಲ್ಲ.

ತಮ್ಮನ್ನು ಅಮಾನತ್ತು ಮಾಡುವ ವಿಷಯ ತಿಳಿಯುತ್ತಿದ್ದಂತೆ ಕಾಂತರಾಜ್ ಕೂಡ ಮನೆಗೆ ಹೊರಟುನಿಂತರು. ಮುಖದಲ್ಲೀಗಲೂ ಅದೇ ಪ್ರಶಾಂತ ಭಾವ!!
ಮುಂದುವರೆಯುವುದು....

No comments:

Post a Comment