Aug 10, 2012

ಬ್ರಹ್ಮಚಾರಿ


ಡಾ ಅಶೋಕ್. ಕೆ. ಆರ್.
ಕಥೆಯ ಆರಂಭಕ್ಕೂ ಮುಂಚೆ ಒಂದು Disclaimer! – ಈ ಕಥೆಯಲ್ಲಿ ಉಪಯೋಗಿಸಿರುವ ಜಾತಿ ಧರ್ಮದ ಹೆಸರುಗಳು ಕೇವಲ ಸಾಂಕೇತಿಕ. ಒಂದು ಜಾತಿಯ ಬದಲಿಗೆ ಮತ್ತೊಂದು ಜಾತಿಯ ಹೆಸರು ಬರೆದಾಗ್ಯೂ ಈ ಕಥೆಯ ಪ್ರಸ್ತುತತೆಗೆ ಧಕ್ಕೆಯಾಗುವುದಿಲ್ಲವೆಂಬುದು ನಮ್ಮ ಇವತ್ತಿನ ಸಮಾಜದ ದುರಂತ ಮತ್ತು ನಮ್ಮೆಲ್ಲರ ವೈಯಕ್ತಿಕ ವೈಫಲ್ಯ. ಈ ಕೆಳಗೆ ಹೆಸರಿಸಿರುವ ಯಾವುದಾದರೂ ಜಾತಿ ಧರ್ಮದವರು ನೀವಾಗಿದ್ದ ಪಕ್ಷದಲ್ಲಿ ಕಥೆ ಓದಿ ಮುಗಿಸಿದ ನಂತರ ನಿಮ್ಮಲ್ಲಿ ಖುಷಿ ಅಥವಾ ಕೋಪದ ಭಾವನೆ ಮೂಡಿದರೆ ಅದು ನಿಮ್ಮ ಕಲ್ಮಶ ಮನಸ್ಸಿನ ಸಂಕೇತ!

ಪದವಿಯ ಕೊನೆಯ ವರುಷದಲ್ಲಿ ಓದುತ್ತಿದ್ದ ಮಗ ಸಂಜೆಯ ಕಾಫಿಯೊಂದಿಗೆ ಅಪ್ಪನೊಂದಿಗೆ ಹರಟುತ್ತಿದ್ದ.
“ಇನ್ನೇನೋ. ಪದವಿ ಮುಗೀತು. ಕೆಲಸ ಸಿಗೋದು ಇದ್ದಿದ್ದೇ. ಮದುವೆಗೆ ಹೆಣ್ಣು ನೋಡಲು ಶುರು ಮಾಡ್ಲಾ?”
“ಮ್. ಅಪ್ಪ ಒಂದು ವಿಷಯ”
“ಹೇಳು”
“ನನಗೇನೋ ದೊಡ್ಡೋರು ನೋಡಿ ಒಪ್ಪಿದವಳ ಜೊತೆ ಐದು ನಿಮಿಷ ಮಾತನಾಡಿ ನಾನು ಹುಡುಗಿಯನ್ನು ಅರ್ಥ ಮಾಡಿಕೊಂಡಂತೆ, ಅವಳು ನನ್ನನ್ನು ಅರ್ಥ ಮಾಡಿಕೊಂಡಂತೆ ನಟಿಸಿ ಮದುವೆಯಾಗುವುದು ಸರಿ ಬರುವುದಿಲ್ಲ. ನನ್ನ ಜೀವನ ಸಂಗಾತಿಯನ್ನು ನಾನೇ ಆರಿಸಿಕೊಳ್ಳಬೇಕು ಅನ್ಸುತ್ತೆ”
“ಭೇಷ್! ಭೇಷ್ ಮಗನೇ! ನನ್ನದೂ ಅದೇ ಅಭಿಪ್ರಾಯ. ನೀನು ಯಾರನ್ನಾದ್ರೂ ಇಷ್ಟಪಟ್ಟಿದ್ದೀಯ?”
“ಓದೋ ಸಂಭ್ರಮದಲ್ಲಿ ಅದರ ಕಡೆಗೆ ಗಮನ ಕೊಡಲಿಲ್ಲ”
“ಸರಿ, ಇನ್ನು ಮುಂದೆ ಗಮನಹರಿಸು. ಯಾರಾದ್ರೂ ಇಷ್ಟವಾದರೆ ಆ ಹುಡುಗಿಗೆ ಹೇಳುವ ಮೊದಲು ನನಗೆ ತಿಳಿಸು. ಆಯ್ತಾ?”
“ಹ್ಞೂ ಅಪ್ಪ. ನೀವಿಷ್ಟೊಂದು ಸ್ವಾತಂತ್ರ್ಯ ಕೊಡುತ್ತೀರೆಂದ ಮೇಲೆ ಮೊದಲು ನಿಮಗೇ ತಿಳಿಸುತ್ತೇನೆ”
ಎರಡು ತಿಂಗಳ ನಂತರ ಹುಡುಗಿಯೋರ್ವಳ ಫೋಟೋದೊಂದಿಗೆ ಅಪ್ಪನ ಬಳಿಗೆ ಬಂದ.
“ಇವಳು ಇಷ್ಟವಾಗಿದ್ದಾಳೆ ಅಪ್ಪ”
“ಅಲೆಲೇ! ಏನ್ ಚೆನ್ನಾಗಿದ್ದಾಳೋ ಹುಡುಗಿ. ಮೆಚ್ಚಿದೆ ನಿನ್ನ ಆಯ್ಕೆಯನ್ನು. ಏನಿವಳ ಹೆಸರು?”
“ಫಾತಿಮಾ”
“ಫಾತಿಮಾ?! ಥೂ ಥೂ ಹಿಂದೂ ಆಗಿದ್ದುಕೊಂಡು ದನ ತಿನ್ನೋ ಸಾಬರ ಹುಡುಗಿಯನ್ನು ಮದುವೆಯಾಗ್ತೀಯ. ಸಲ್ಲದು ಸಲ್ಲದು”
ಫಾತಿಮಾಳ ಫೋಟೋವನ್ನು ದೂರವೆಸೆದು ಬಂದ. ಮತ್ತೆರಡು ತಿಂಗಳು ಕಳೆಯಿತು.
“ಅಪ್ಪ ಈ ಹುಡುಗಿ ನನಗೆ ಒಳ್ಳೆ ಜೋಡಿಯೆನ್ನಿಸುತ್ತೆ” ಫೋಟೋ ಮುಂದೆ ಮಾಡಿದ.
“ಫೋಟೋ ಇರಲಿ. ಸಾಬರವಳಾ?”
“ಅಲ್ಲ”
“ಕ್ರಿಷ್ಚಿಯನ್ನೋ?”
“ಅಲ್ಲ. ಹಿಂದೂನೇ”
ಫೋಟೋ ತೆಗೆದುಕೊಂಡ.  ನೋಡಿ ನಕ್ಕ.
“ಯಾವ ಜಾತಿ?”
“ಬ್ರಾಹ್ಮಣಳೋ ಲಿಂಗಾಯಿತಳೋ ಇರಬೇಕು ಸರಿ ಗೊತ್ತಿಲ್ಲ. ಮಾಂಸ ತಿನ್ನಲ್ಲ ಅಂತಷ್ಟೇ ಗೊತ್ತು”
“ಛೇ ಛೇ! ಪುಳಿಚಾರ್ ಊಟ ಮಾಡೋರನ್ನು ಕಟ್ಕೊಂಡು ಏನ್ ತಿನ್ತೀಯೋ. ತೆಗಿ ತೆಗಿ. ಇವಳು ಸರಿ ಹೋಗಲ್ಲ”
ಮತ್ತೆ ಸುಮ್ಮನಾದ. ಫೋಟೋ ಎಸೆದ. ಕಾಲೇಜು ಮುಗಿದು ಸರಕಾರಿ ಕೆಲಸಕ್ಕೆ ಸೇರಿದ. ಸಹೋದ್ಯೋಗಿಯೊಬ್ಬಳು ಇಷ್ಟವಾದಳು. ಮೊಬೈಲಿನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಮನೆಗೆ ಹೋದ.
“ಇವಳು ಹಿಂದು. ಮಾಂಸಾನೂ ತಿಂತಾಳೆ” ನಕ್ಕ. ನಗುತ್ತ ಅಪ್ಪ ಮೊಬೈಲು ನೋಡಿದ.
“ಯಾವ ಜಾತಿ?”
“ಗೊತ್ತಿಲ್ಲ. ಕೆಟಗರಿ ಮೇಲೆ ಕೆಲಸ ಸಿಕ್ಕಿರೋದು. ಎಸ್ಸೀನೋ ಎಸ್ಟೀನೋ 2ಎನೋ ಇರಬೇಕು”
“ಅಯ್ಯೋ ನಿನ್ನ. ಗೌಡನಾಗಿ ಹುಟ್ಟಿ ಆ ಜಾತಿಯವರನ್ನು ಮದುವೆ ಮಾಡಿಕೊಳ್ಳುತ್ತೀಯ? ಸಮಾಜ ಏನನ್ನಲ್ಲ?”
ಫೋಟೋ ಡಿಲೀಟ್ ಮಾಡಿದ.
ದಿನ ಬಸ್ಸಿನಲ್ಲಿ ಹೋಗುವಾಗ ಪರಿಚಿತಳಾದವಳೊಬ್ಬಳು ಮೆಚ್ಚುಗೆಯಾದಳು. ಅಪ್ಪನ ಬಳಿ ಬರುವ ಮುಂಚೆ ಧರ್ಮ ಜಾತಿ ಗೋತ್ರಗಳನ್ನೆಲ್ಲ ತಿಳಿದುಕೊಂಡ. ಖುಷಿಯಾಯ್ತು. ಫೋಟೋ ಇಲ್ಲದೆ ಬಂದ.
“ಯಾವ ಜಾತಿ?”
“ಅದೆಲ್ಲ ಕೇಳಿದ್ದೀನಿ. ನಮ್ಮದೇ ಜಾತಿ. ಗೌಡರ ಹುಡುಗಿ. ಕೊನೆ ವರ್ಷದ ಬಿಎಸ್ಸಿ”
“ಒಳ್ಳೇದು ಒಳ್ಳೇದು. ಗಂಗಟಕಾರರೇ ಅಂಥ?”
“ಅಂದ್ರೆ!?!”
“ವಕ್ಕಲಿಗ ಜಾತಿಯ ಒಳಪಂಗಡ ಕಣೋ ಬೆಪ್ಪೆ”
“ಓ ಅದಾ! ದಾಸ ಒಕ್ಕಲಿಗರಂತೆ”
“ಹೋಗ್ಹೋಗು ಕೆಲಸ ನೋಡು. ಗಂಗಟಕಾರರಾಗಿ ದಾಸ ಒಕ್ಕಲಿಗರ ಜೊತೆ ಸಂಬಂಧ ಬೆಳೆಸೋದಾ?!”
          ವಿವಾಹಾನಂತರದ ಕಷ್ಟಗಳ ಸುಖವನ್ನು ಅನುಭವಿಸಲು ಹಾತೊರೆಯುತ್ತಿದ್ದ ಮಗ ಮದುವೆ ಮರೆತು ಬ್ರಹ್ಮಚಾರಿಯಾದ!


photosource - zawaj

5 comments:

 1. ಕಥೆ ಚೆನ್ನಾಗಿದೆ. ಆದರೆ ಕಥೆಗಾರರಿಗೆ ನನ್ನದೊಂದು ಪ್ರಶ್ನೆ. ನೀವು ಜಾತಿಯನ್ನು ತ್ಯಜಿಸಿದ್ದೀರಾ ? ನಿಮ್ಮ ಮಕ್ಕಳ ದಾಖಲಾತಿಯಲ್ಲಿ ಜಾತಿಯನ್ನು ಪ್ರಸ್ತಾಪಿಸಿಲ್ಲವೇ ?

  ReplyDelete
 2. ಶ್ರೀಪತಿ ಗೋಗಡಿಗೆ,
  ಲೇಖನದ ಮೊದಲ ಸಾಲುಗಳಿವು "ಒಂದು ಜಾತಿಯ ಬದಲಿಗೆ ಮತ್ತೊಂದು ಜಾತಿಯ ಹೆಸರು ಬರೆದಾಗ್ಯೂ ಈ ಕಥೆಯ ಪ್ರಸ್ತುತತೆಗೆ ಧಕ್ಕೆಯಾಗುವುದಿಲ್ಲವೆಂಬುದು ನಮ್ಮ ಇವತ್ತಿನ ಸಮಾಜದ ದುರಂತ ಮತ್ತು ನಮ್ಮೆಲ್ಲರ ವೈಯಕ್ತಿಕ ವೈಫಲ್ಯ." ನಮ್ಮೆಲ್ಲರಲ್ಲಿ ನಾನೂ ಸೇರಿದ್ದೇನೆ.
  ಜಾತಿಯನ್ನು ತ್ಯಜಿಸಿದ್ದೀರ ಎಂದು ಕೇಳಿದ್ದೀರಿ. ಬಹುಶಃ ತ್ಯಜಿಸಿಲ್ಲವೇನೋ?! ಇನ್ನೂ ಗೊತ್ತಿಲ್ಲ!
  ಇನ್ನು ಮಕ್ಕಳ ವಿಷಯ!! ನನಗಿನ್ನೂ ಮದುವೆಯಾಗಿಲ್ಲ ಸರ್! ಹಾಗಾಗಿ ಮಕ್ಕಳೂ ಇಲ್ಲ.
  ಪ್ರೀತಿ ಪ್ರೇಮ ಬೇರೆ ಜಾತಿಯ ಹುಡುಗಿಯೊಂದಿಗೆ ಆಗಿದ್ದರೆ ಸಂಪೂರ್ಣ ಜಾತ್ಯತೀತನಾಗಲು ಸಾಧ್ಯವಾಗುತ್ತಿತ್ತೇನೋ! ಆದರೆ ಏನು ಮಾಡ್ತೀರಿ ಕೊನೆಗೆ ಯಾವ ಜಾತಿಯ ಹುಡುಗಿಯನ್ನೂ ಪ್ರೀತಿಸಲು ಸಮಯ ಸಿಕ್ಕಿಲ್ಲ!!
  ಮನೆಯವರು ಮದುವೆ ಮಾಡ್ತಾರೆ. ಅದು ಖಂಡಿತವಾಗಿ ಜಾತಿಯೊಳಗೇ ಆಗುತ್ತೆ! ಮಕ್ಕಳಾಗಿ ಅವರನ್ನು ಶಾಲೆಗೆ ದಾಖಲಾತಿ ಮಾಡುವ ಸಮಯದಲ್ಲಿ ಖಂಡಿತ ನಿಮ್ಮ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಇನ್ನು ಎರಡು ಮೂರು ವರುಷವಾಗಬಹುದೋ ಏನೋ!
  ಇಂತಿ
  ಡಾ ಅಶೋಕ್. ಕೆ. ಆರ್

  ReplyDelete
 3. ಈ ಕಥೆಯನ್ನು ಮೆಚ್ಚುವ ಮೊದಲು ನೀವು ನಿಮ್ಮ ಮಕ್ತಳು ಜಾತಿ ತ್ಯಜಿಸಿದಿರಾ ತಾನೆ?
  ಅದಕ್ಕೂ ಮೊದಲು ನೀವು ಜಾತಿಯನ್ನು ಆಯ್ಕೆಮಾಡಿಕೊಂಡಿದ್ದಿರಾ? ಎಂದು ಕೇಳುವ ಅಗತ್ಯವಿದೆಯೆ?

  ReplyDelete
 4. ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯ ಬಗ್ಗೆಯೂ ಬರೆಯಿರಿ ಸರ್…ಚೆನ್ನಾಗಿರುತ್ತದೆ…

  ReplyDelete