Aug 19, 2012

ಆದರ್ಶವೇ ಬೆನ್ನು ಹತ್ತಿ . . . ಭಾಗ 3


ಮಹಾರಾಜ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಬ್ಯಾಸ್ಕೆಟ್ ಬಾಲ್ ಮೈದಾನದಲ್ಲಿ ಸಂಜೆಯ ವೇಳೆ ಹತ್ತಾರು ಚಿಕ್ಕ ಚಿಕ್ಕ ಮಕ್ಕಳು ಸ್ಕೇಟಿಂಗ್ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. ಜೊತೆಯಲ್ಲಿ ಅವರ ಮನೆಯ ಹಿರಿಯರೊಬ್ಬರು. ಲೋಕಿಗೆ ಬೇಸರವಾದಾಗಲೆಲ್ಲ ಇಲ್ಲಿಗೆ ಬಂದು ಕಲ್ಲು ಬೆಂಚಿನ ಮೇಲೆ ಕೂರುತ್ತಿದ್ದ. ಹೊಸಬರು ಸ್ಕೇಟಿಂಗ್ ಕಲಿಯುವ ರೀತಿ, ಹಳಬರು ಹೊಸ ಹುಡುಗರ ಮುಂದೆ ತಮಗೆ ಎಲ್ಲಾ ಗೊತ್ತು ಎಂಬಂತೆ ಮಾಡುತ್ತಿದ್ದ ಮುಖಭಾವವನ್ನು ನೋಡಿದರೆ ಮನಸ್ಸಿಗೆಷ್ಟೋ ಸಮಾಧಾನವಾಗುತ್ತಿತ್ತು. ಅಂದು ಕೂಡ ಲೋಕಿ ಅಲ್ಲಿ ಬಂದು ಕುಳಿತಿದ್ದ. ಸಯ್ಯದ್ ಈತನನ್ನು ಕಂಡು ಬಳಿಗೆ ಬಂದ.
“ಏನ್ ಲೋಕೇಶ್ ಇಲ್ಲಿ ಬಂದು ಕುಳಿತ್ತಿದ್ದೀರಾ? ಅದೂ ಒಬ್ಬರೇ?”

“ಏನಿಲ್ಲ ಸಯ್ಯದ್. ಮನಸ್ಸಿಗೆ ಬೇಸರವಾದಾಗಲೆಲ್ಲ ಇಲ್ಲಿ ಬಂದು ಕೂರೋದು ನನ್ನ ಹಳೇ ಚಟ. ಈ ಮಕ್ಕಳನ್ನು ನೋಡುತ್ತಾ ಇದ್ದರೆ ಏನೋ ಸಮಾಧಾನ”

“ಅದೂ ನಿಜಾ ಅನ್ನಿ. ಬನ್ನಿ ಕಾಫಿ ಕುಡಿದು ಬರೋಣ”

“ಕ್ಯಾಂಟೀನ್ ಮುಚ್ಚಿದೆ. ಇಲ್ಲಿ ಬೇರಿನ್ಯಾವ ಹೋಟೆಲ್ಲಿದೆ?”

“ಹ್ಞಾ! ಹೋಟೆಲ್ ಅಂದ ಕ್ಷಣ ನೆನಪಾಯಿತು. ಮೊನ್ನೆ ನಿಮ್ಮನ್ನು ಇಂದ್ರಭವನ್ ಹೋಟೆಲಿನಲ್ಲಿ ನೋಡಿದೆ. ನೀವು ಮಾತನಾಡಿದ್ದನ್ನು ಕದ್ದು ಕೇಳಿಸಿಕೊಂಡೆ” ಎಂದು ಮುಗುಳ್ನಗುತ್ತಾ ಹೇಳಿದ. ಲೋಕಿ ಸಂಕೋಚದಿಂದ “ಹೌದಾ! ನಾನು ಗಮನಿಸಲೇ ಇಲ್ಲ”

“ಅಲ್ಲೇ ನಿಮ್ಮ ಹಿಂದೆ ರೂಪಾಳೊಡನೆ ಕುಳಿತಿದ್ದೆ ನಾನು”

‘ರೂಪ ಯಾರು?’ ಎಂಬ ಪ್ರಶ್ನೆ ನಾಲಿಗೆಯ ತುದಿಗೆ ಬಂತಾದರೂ ಮೊದಲ ಭೇಟಿಯಲ್ಲೇ ವೈಯಕ್ತಿಕ ವಿಷಯಗಳ್ಯಾಕೆ ಎಂದು ಕೊಂಡು ಸುಮ್ಮನಾದ. ಸಯ್ಯದನೇ ಮಾತು ಮುಂದುವರಿಸಿದ “ಅವತ್ತು ಗಣೇಶ ಹಬ್ಬದ ದಿನ ನೀನು ನನ್ನನ್ನು ಕೇಳಿದ ಪ್ರಶ್ನೆಗಳನ್ನು ನೋಡಿ, ನನ್ನನ್ನು ಮತಾಂತರ ಮಾಡಿಸೋದಿಕ್ಕೆ ಕೇಳ್ತಿದ್ದೀಯೇನೋ ಅಂದುಕೊಂಡೆ”

“ಯಾಕೆ? ಒಬ್ಬ ಮುಸ್ಲಿಮ್ ಹಿಂದೂ ದೇವರ ಬಗ್ಗೆ ಅಷ್ಟೊಂದು ತಿಳಿದುಕೊಂಡಿರೋದು ಯಾರಿಗಾದರೂ ಅಚ್ಚರಿ ಹುಟ್ಟಿಸುತ್ತಲ್ವ? ಆ ಸಹಜ ಕುತೂಹಲದಿಂದಷ್ಟೇ ಕೇಳಿದ್ದು.

“ಅದೇನೋ ಸರಿ. ಆದರೆ ನಾನಾರೀತಿ ಭಾವಿಸಿದ್ದಕ್ಕೂ ಕಾರಣವಿದೆ. ಮುಂಚೆ ಒಬ್ಬ ನಿನ್ನ ರೀತಿಯೇ ಕೇಳಿ ಕೊನೆಗೆ ಮತಾಂತರದ ಮಾತನಾಡಿದ್ದ. ಒಬ್ಬ ವ್ಯಕ್ತಿ ಅನ್ಯಧರ್ಮದ ಬಗ್ಗೆ ತಿಳಿದುಕೊಳ್ಳಬಾರದೂಂತ ಯಾವ ಧರ್ಮಗೃಂಥದಲ್ಲೂ ಹೇಳಿದ ಹಾಗಿಲ್ಲ”

“ಹ್ಞೂ. ನನಗೂ ಕುರಾನ್ ಓದಬೇಕು ಅಂತ ಆಸೆ ಇದೆ. ಕಳೆದ ವಾರ ನವಕರ್ನಾಟಕದಲ್ಲಿ ಕನ್ನಡದ ಒಂದು ಕುರಾನ್ ನೋಡಿದೆ, ಬೆಲೆ ಸ್ವಲ್ಪ ಹೆಚ್ಚಿತ್ತು ಜೇಬಿನಲ್ಲಿ ಅಷ್ಟು ದುಡ್ಡೂ ಇರಲಿಲ್ಲ. ಸುಮ್ಮನಾದೆ”

“ಅರೆ! ನೀನು ಧರ್ಮಗೃಂಥಗಳನ್ನೆಲ್ಲ ಓದ್ತೀಯಾ?! ನೀನವತ್ತು ಮಾತನಾಡಿದ್ದನ್ನು ಕೇಳಿ ನೀನೂ ನನ್ನಂತೆ ನಾಸ್ತಿಕ ಅಂದುಕೊಂಡಿದ್ದೆ”

“ಇವತ್ತಿನವರೆಗಂತೂ ನಾನು ನಾಸ್ತಿಕನೇ. ನಾಸ್ತಿಕನಾದವನು ಧರ್ಮಗೃಂಥಗಳನ್ನು ಓದಬಾರದು ಅಂತೇನೂ ಇಲ್ಲವಲ್ಲ. ಒಳ್ಳೆ ಸಂಗತಿಗಳು ಎಲ್ಲಿದ್ದರೂ ಬಿಡಬಾರದು”

“ನನ್ನ ನಿನ್ನ ಯೋಚನೆಗಳೆಲ್ಲ ಒಂದೇ ರೀತಿ ಇರೋ ಹಾಗಿದೆ. ನಮ್ಮ ನೆಂಟರ ಬಳಿ ಒಂದು ಕನ್ನಡದ ಕುರಾನ್ ಇರಬೇಕು. ಸಿಕ್ಕಿದ್ರೆ ಕೊಡ್ತೀನಿ”

“ಥ್ಯಾಂಕ್ಸ್. ಅಂದಹಾಗೆ ಕಾಫಿಗೆ ಹೋಗೋಣ ಅಂತ ಕೇಳಿದ್ದು ಮರೆತುಬಿಟ್ಟೆಯಾ?!”

“ಮಾತು ಶುರು ಮಾಡೋದಿಕ್ಕೆ ಒಂದು ನೆಪ ಬೇಕಿತ್ತು ಅಷ್ಟೇ! ಇನ್ನು ಮೇಲೆ ಅಂಥ ನೆಪಗಳ ಅವಶ್ಯಕತೆ ಇಲ್ಲವೆಂದು ಭಾವಿಸುವೆ. ಸರಿ ಲೋಕಿ, ಆಗಲೇ ಏಳು ಘಂಟೆ ಆಗ್ತಾ ಬಂತು. ಇನ್ನೊಂದ್ಸಲ ಇಬ್ಬರೂ ಕಾಫಿಗೆ ಹೋಗೋಣ. ರೂಪಾಳನ್ನೂ ಪರಿಚಯ ಮಾಡಿಸ್ತೀನಿ. ನಿನ್ನಂತವರು ಅವಳಿಗೆ ತುಂಬಾ ಇಷ್ಟ ಆಗ್ತಾರೆ”

‘ರೂಪಾ ಯಾರು?’ ಪ್ರಶ್ನೆ ಮತ್ತೆ ಗಂಟಲಲ್ಲೇ ಉಳಿಯಿತು. ಸ್ಕೇಟಿಂಗಿಗೆಂದು ಬಂದಿದ್ದ ಮಕ್ಕಳೆಲ್ಲ ಹೊರಟುಹೋಗಿದ್ದರು. ರೂಪ ಯಾರಿರಬಹುದು, ಗೆಳತಿಯಾ? ಪ್ರೇಯಸಿಯಾ? ಅವತ್ತು ಹೋಟೆಲಿನಲ್ಲಿ ಇನ್ಯಾರಿದ್ದರು. ನಾವು ಹೋಗುವುದಕ್ಕೆ ಮುಂಚೆ ಒಬ್ಬಳು ಹುಡುಗಿ ನಮ್ಮೆಡೆ ಕೀಳು ಭಾವನೆಯಿಂದ ನೋಡಿದವಳು. ನನ್ನಂತಹ ಕ್ಯಾರೆಕ್ಟಿನವರು ರೂಪಾಳಿಗೆ ಇಷ್ಟವಾಗುತ್ತಾರಂತೆ. ಬಹುಶಃ ಆ ಹುಡುಗಿಯಲ್ಲವೆನಿಸುತ್ತೆ. ನಾವು ತಿಂಡಿ ತಿನ್ನಲಾರಂಭಿಸಿದ ಮೇಲೆ ಸಯ್ಯದನೊಂದಿಗೆ ಬಂದಿರಬೇಕು.

ನನಗ್ಯಾವ ಹುಡುಗಿಯ ಪರಿಚಯಾನೂ ಇಲ್ಲವಲ್ಲ. ನನಗೂ ಒಬ್ಬಳು ಗೆಳತಿ ಅಥವಾ ಪ್ರೇಯಸಿ ಇದ್ದಿದ್ದರೆ ದಿನಾ ಒಂದು ಗಂಟೆ ಮಾತನಾಡಬಹುದಿತ್ತು. ನನ್ನ ಮನದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಂತವಳಾದರೆ ಯಾರಲ್ಲೂ ಹೇಳಿಕೊಳ್ಳಲಾಗದ ವಿಷಯಗಳನ್ನು ಆಕೆಯೊಡನೆ ಚರ್ಚಿಸಬಹುದಿತ್ತು. ಛೆ!! ನಾನ್ಯಾಕೆ ನನ್ನ ವಯಸ್ಸಿನ ಇತರರಂತೆ ಪ್ರೀತಿ ಪ್ರೇಮ ಅಂತ ತಲೆಕೆಡಿಸಿಕೊಳ್ಳದೆ ಆದರ್ಶದ ಬೆನ್ನು ಹತ್ತಿದ್ದೀನಿ. ಈ ಆದರ್ಶಗಳಿಂದ ಏನನ್ನಾದರು ಸಾಧಿಸಬಲ್ಲೆನಾ? ಕೊನೆಯವರೆಗೂ ಕಡೆಪಕ್ಷ ನಾನಾದರೂ ನನ್ನ ಆದರ್ಶಗಳನ್ನು ಪಾಲಿಸುತ್ತೀನಾ ಅಥವಾ ಕಾಲ ಸವೆದ ಹಾಗೆ ವ್ಯವಸ್ಥೆಯೊಳಗೊಂದಾಗಿಬಿಡುತ್ತೀನಾ? ಮನೆಯಲ್ಲಿ ಎಲ್ಲರೂ ಹೇಳ್ತಾರೆ ‘ನಿನ್ನ ಕ್ಯಾರೆಕ್ಟರ್ ನ ಅರ್ಥ ಮಾಡಿಕೊಳ್ಳೋಕೆ ಆಗೋದಿಲ್ಲ’ ಅಂತ. ನನಗಾದರೂ ನನ್ನ ಮನಸ್ಸು ಅರ್ಥವಾಗಿದೆಯಾ? ವಾರದಲ್ಲಿ ಮೂರು ದಿನ ಆದರ್ಶದ ವಿಚಾರಗಳು ತುಂಬಿದ್ದರೆ ಇನ್ನುಳಿದ ದಿನ ಹುಡುಗಿಯರ ಬಗೆಗಿನ ಯೋಚನೆ. ಮನಸ್ಸಿನ ಸ್ಥಿಮಿತ ಕಳೆದುಹೋಗೋದೆಷ್ಟು ಬಾರಿಯೋ? ಮನದಲ್ಲಿ ಹುಚ್ಚುಕುದುರೆ ನಾಗಾಲೋಟದಿಂದ ಓಡುತ್ತೆ. ಹುಡುಗಿಯರ ವಿಷಯವಾಗಿ ಬೇರೆಯವರ ಮಾತನಾಡಲೂ ಸಂಕೋಚ. ‘ಹುಡುಗಿಯರ ಬಗ್ಗೆ ಈತನಿಗೆ ಕೊಂಚವೂ ಆಸಕ್ತಿಯಿಲ್ಲ’ ಎಂದೊಂದು ಇಮೇಜ್ ದಯಪಾಲಿಸಿಬಿಟ್ಟಿದ್ದಾರೆ. ಆ ಇಮೇಜಿನ ಚೌಕಟ್ಟಿನಿಂದ ಹೊರಬರಬಾರದೆಂಬ ಕಾರಣದಿಂದಲೇ ನಾನು ಹುಡುಗಿಯರೊಟ್ಟಿಗೆ ಮಾತನಾಡಲು ಸಂವಹಿಸಲು ಹಿಂದೇಟು ಹಾಕುತ್ತೀನಾ? ನನ್ನ ತರಗತಿಯವರ ದೃಷ್ಟಿಯಲ್ಲಿ ನಾನೊಬ್ಬ ‘ಮೊಳಕೆಯೊಡೆಯುತ್ತಿರುವ ಕ್ರಾಂತಿಕಾರಿ’ ಆ ಹೆಸರಿಗೋಸ್ಕರ ಕೆಲವು ಆದರ್ಶಗಳನ್ನು ಪಾಲಿಸುವವನಂತೆ ನಟಿಸುತ್ತೀನಿ ಎಂದು ಬಹಳಷ್ಟು ಸಲ ಅನ್ನಿಸುತ್ತದೆ. ಹುಡುಗಿಯರ ಜೊತೆ ಅಪರೂಪಕ್ಕೊಮ್ಮೆ ಮಾತನಾಡುವಾಗ ನನಗೇ ಅರಿವಾಗದಂತೆ ಧ್ವನಿ ಗಡುಸಾಗುತ್ತದೆ. ‘ಕ್ರಾಂತಿಕಾರಿ’ಗಳ ದನಿ ಗಡುಸಾಗಿರಬೇಕೆಂಬ ಭ್ರಮೆ ನನಗೆ. ದೊಡ್ಡದಿರಲಿ ಇನ್ನೂ ಸಣ್ಣ ಮಟ್ಟದಲ್ಲೂ ಕ್ರಾಂತಿ ಮಾಡದವನಿಗ್ಯಾಕೆ ಈ ‘ಕ್ರಾಂತಿಕಾರಿ’ ಅನ್ನೋ ಪಟ್ಟ? ಪರರ ಮನಸ್ಸಿನಲ್ಲಿ ಮೂಡಿರುವ ನನ್ನ ಬಿಂಬದುಳಿವಿಗಾಗಿ ನನ್ನತನ ಕಳೆದುಹೋಗುತ್ತದೆಯಾ? ಉತ್ತರ ಸಿಗದ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಮನೆಯ ದಾರಿ ಹಿಡಿದ.

* * *

ಲೋಕಿ ಅಂದು ಮಧ್ಯಾಹ್ನ ಕ್ಯಾಂಟೀನಿನಲ್ಲಿ ಊಟ ಮಾಡುತ್ತಿದ್ದ. ಸಯ್ಯದ್ ರೂಪಾಳೊಂದಿಗೆ ಲೋಕಿಯನ್ನು ಹುಡುಕಿಕೊಂಡು ಬಂದ. ಸಯ್ಯದನ ಹಿಂದೆ ಬರುತ್ತಿದ್ದ ಹುಡುಗಿಯನ್ನು ನೋಡಿ ‘ಅಂದು ಹೋಟೆಲಿನಲ್ಲಿ ನಮ್ಮೆಡೆಗೆ ಕೀಳಾಗಿ ನೋಡಿದವಳು ಇವಳೇ ಅಲ್ಲವೇ?! ಆದರೆ ಸಯ್ಯದ್....’ ಲೋಕಿಯ ಆಲೋಚನೆ ಮುಂದುವರಿಯುತ್ತಿದ್ದಂತೆ ಸಯ್ಯದ್ ರೂಪಾಳೊಂದಿಗೆ ಬಂದು ಲೋಕಿಯ ಎದುರಿಗೆ ಕುಳಿತ. “ಹಾಯ್ ಲೋಕಿ. ಅವತ್ತು ಹೇಳಿದ್ದೆನಲ್ಲ ರೂಪ ಅಂತ, ಇವಳೇ ರೂಪ.....ನಿನಗೆ ನೆನಪಿದೆಯಲ್ಲ ರೂಪ ಅವತ್ತು ಹೋಟಿಲಿನಲ್ಲಿ ನೋಡಿದೆವಲ್ಲ ಲೋಕಿ, ಇವನೇ”

“ನಮಸ್ಕಾರ”

“ನಮಸ್ತೆ” ರೂಪಾಳಿಗೆ ಲೋಕಿಯ ಮುಖವನ್ನು ದಿಟ್ಟಿಸಿ ನೋಡಲು ಧೈರ್ಯ ಬರಲಿಲ್ಲ. ಕಾರಣ ಅವಳಿಗೆ ಗೊತ್ತಿತ್ತು. ಸಯ್ಯದ್ ಲೋಕಿಯನ್ನು ಭೇಟಿ ಮಾಡಿಸುತ್ತೀನಿ ಎಂದು ಹೇಳುತ್ತಿದ್ದಾಗಲೆಲ್ಲ ಏನಾದರೂ ಒಂದು ನೆಪ ಮಾಡಿ ತಪ್ಪಿಸಿಕೊಳ್ಳುತ್ತಿದ್ದಳು. ‘ಯಾವ ನೆಪವನ್ನೂ ನಾನು ಕೇಳುವುದಿಲ್ಲ ಇವತ್ತು’ ಎಂದ್ಹೇಳಿ ಕರೆದುಕೊಂಡು ಬಂದಿದ್ದ ಇವತ್ತು. “ಇಬ್ಬರೂ ಏನು ತೆಗೆದುಕೊಳ್ತೀರಿ” ಲೋಕಿ ಕೂಡ ಆದಷ್ಟು ರೂಪಾಳ ಕಡೆ ನೋಡದೆಯೇ ಮಾತನಾಡುತ್ತಿದ್ದ. ಅವಳಿಗೆ ಮುಜುಗರವಾಗಬಹುದು ಎಂಬುದೊಂದು ಕಾರಣವಾದರೆ ಎದುರಿಗಿನ ಹುಡುಗಿ ಮನಸ್ಸಿಗೆ ಇಷ್ಟವಾದರೂ ನೋಡುವುದು ಸಭ್ಯತೆಯಲ್ಲ ಎಂಬ ‘ಆದರ್ಶ’ವೂ ಮತ್ತೊಂದು ಕಾರಣ.

“ರೂಪಾಗೆ ಡೈನಮಿಕ್ ಕ್ಯಾರೆಕ್ಟರ್ ಇರೋ ನಿನ್ನನ್ನು ಪರಿಚಯ ಮಾಡಿಸಿದ್ದೀನಿ. ಇವತ್ತು ಅವಳೇ ಪಾರ್ಟಿ ಕೊಡಿಸ್ತಾಳೆ. ಏನ್ ರೂಪಾ?” “ಸರಿ” ಎಂದು ಮಾಣಿಯನ್ನು ಕರೆಯಲನುವಾದಳು. “ಸುಮ್ನೆ ಹೇಳಿದೆ ಮೇಡಮ್. ನಾನಿರಬೇಕಾದರೆ ನೀನ್ಯಾಕೆ ಕೊಡಿಸಬೇಕು” ಎಂದ್ಹೇಳಿ ಅವಳ ಕೈಹಿಡಿದು ತಡೆದ ಸಯ್ಯದ್. ಲೋಕಿಯ ಮನದಲ್ಲಿ ‘ಹುಚ್ಚು ಕುದುರೆ’ ನನ್ನ ಕೈ ಬರೀ ಈ ಅನ್ನ, ಪುಸ್ತಕ ಹಿಡಿಯೋದಿಕ್ಕೆ ಮಾತ್ರ ಲಾಯಕ್ಕಿರಬೇಕು. ನಾನ್ಯಾವಾಗ ಹೀಗೊಂದು ಹುಡುಗಿಯ ಕೈ....ಛೆ ಎದುರಿಗೆ ಬೇರೆಯವರು ಕುಳಿತಿದ್ದಾಗ ಇದೇನಿದು ನನ್ನೀ ಯೋಚನೆ? ಮೇಲಾಗಿ ಡೈನಮಿಕ್ ಕ್ಯಾರೆಕ್ಟರ್ ಅಂತೆ ನನ್ನದು. ಈ ರೀತಿಯೆಲ್ಲ ಯೋಚಿಸಬಾರದು ಡೈನಮಿಕ್ ಕ್ಯಾರೆಕ್ಟರಿನವರು. ಇಬ್ಬರಲ್ಲಿ ಒಬ್ಬರಿಗೆ ಮುಖಭಾವವನ್ನರಿಯುವ ಫೇಸ್ ರೀಡಿಂಗ್ ಗೊತ್ತಿದ್ದರೆ? ಅವರಿಬ್ಬರ ಕಡೆ ನೋಡಿದ. ಇಬ್ಬರೂ ಏನೋ ಮಾತನಾಡುತ್ತಿದ್ದರು. ಸದ್ಯ ನನ್ನ ಕಡೆ ನೋಡಲಿಲ್ಲವಲ್ಲ ಎಂದು ಸಮಾಧಾನಪಟ್ಟುಕೊಂಡ.

“ಸಯ್ಯದ್” ಕ್ಯಾಂಟೀನ್ ಬಾಗಿಲಿನ ಬಳಿ ನಿಂತ ಗೆಳೆಯನೊಬ್ಬ ಕೂಗಿದ. “ನೀವು ಆರ್ಡರ್ ಮಾಡಿರಿ. ನಾನೊಂದು ನಿಮಿಷದಲ್ಲಿ ಬರುತ್ತೀನಿ” ಎಂದ್ಹೇಳಿ ಸಯ್ಯದ್ ಹೊರಗ್ಹೋದ.  ‘ಸಯ್ಯದ್ ಬೇರೆ ಹೊರಟುಹೋದ. ಲೋಕಿ ಏನಾದರೂ ಅವತ್ತಿನ ಬಗ್ಗೆ ಕೇಳಿದರೆ ಏನು ಹೇಳೋದು. ಆವಾಗಿನಿಂದ ಗಮನಿಸುತ್ತಿದ್ದೀನಿ. ನನ್ನ ಕಡೆಗೆ ಒಮ್ಮೆಯೂ ನೋಡಲಿಲ್ಲ. ಶೂನ್ಯದೆದುರು ಕುಳಿತಿರುವವನಂತೆ ಮುಖಭಾವ. ಇಲ್ಲಿ ನನ್ನ ಅಸ್ತಿತ್ವವೇ ಇಲ್ಲದವನಂತೆ ವರ್ತಿಸುತ್ತಿದ್ದಾನೆ. ನನ್ನ ಬಗ್ಗೆ ಬಹಳ ತಿರಸ್ಕಾರ ಭಾವನೆ ಇರಬೇಕು. ಹೋಟೆಲ್ಲಿನ ವಿಷಯ ಸಯ್ಯದ್ ಗೆ ಹೇಳಿಬಿಟ್ಟರೆ? ನಾನು ಪ್ರೀತಿಸುತ್ತಿರುವುದು ಅವನ ಜೀವನ ಶೈಲಿ, ಆದರ್ಶಗಳಿಗೆ ಎಂದು ಸಯ್ಯದ್ ನಂಬಿದ್ದಾನೆ. ನನ್ನ ನಿಜ ನಡವಳಿಕೆಯನ್ನು ಲೋಕಿ ಗಮನಿಸಿದ್ದಾನೆ, ಪೂರ್ಣವಾಗಲ್ಲದಿದ್ದರೂ. ಅದನ್ನಾತ ಸಯ್ಯದ್ ಗೆ ತಿಳಿಸಿಬಿಟ್ಟರೆ?. . .ಅರೆ ನಾನ್ಯಾಕೆ ಈ ವಿಷಯದ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತಿದ್ದೀನಿ. ಅವತ್ತೇನು ನಾನು ಲೋಕಿಗೆ ನೀವಿಲ್ಲಿ ಕೂರಬೇಡಿ ಎಂದು ಹೇಳಲಿಲ್ಲವಲ್ಲ. ‘ನಾನು ಸುಮ್ಮನೆ ಬ್ಯಾಗನ್ನು ಎದುರಿಗಿಟ್ಟೆ. ಅದನ್ನೇ ನೋಡಿ ಆತ ಏನೇನೋ ತಿಳಿದುಕೊಂಡರೆ ನಾನೇನು ಮಾಡಲಿ’ ಎಂದು ಹೇಳಿಬಿಟ್ಟರಾಯಿತು. ಸಯ್ಯದ್ ಖಂಡಿತ ನಂಬುತ್ತಾನೆ. ನಂಬುತ್ತಾನಾ? ಅಥವಾ ನೇರವಾಗಿ ಲೋಕಿಗೆ ‘ಅವತ್ತು ನನ್ನ ಮೂಡ್ ಅಷ್ಟು ಸರಿಯಿರಲಿಲ್ಲ. ಅದಿಕ್ಕೆ ಆ ರೀತಿ ಮಾಡಿಬಿಟ್ಟೆ. ಈ ವಿಷಯಾನ ಸಯ್ಯದ್ ಗೆ ಹೇಳಬೇಡ’ ಎಂದು ಬಿಟ್ಟರೆ? ಹೇಳೇಬಿಡೋಣ ಎಂದುಕೊಂಡು ಲೋಕಿಯ ಕಡೆಗೆ ತಿರುಗಿದಳು.
ಮುಂದುವರಿಯುವುದು....

No comments:

Post a Comment