Aug 6, 2012

ಆದರ್ಶವೇ ಬೆನ್ನು ಹತ್ತಿ.... ಭಾಗ 1


ದಾರಿ ಹುಡುಕುತ್ತ....
ವೈದ್ಯಕೀಯ ಓದುತ್ತಿದ್ದಾಗ ಕೊನೆಯ ವರ್ಷ ಕಾಲೇಜಿಗೆ ಹೋಗುವುದನ್ನೂ ಮರೆತು ಬರೆದ ಕಾದಂಬರಿಯಿದು! ಆಗ ಈ ಕಾದಂಬರಿಯ ಕೆಲವು ಭಾಗಗಳು 'ಮಾರ್ಗದರ್ಶಿ' ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನನ್ನ ಕಾದಂಬರಿ ಕಾಲಿಟ್ಟ ಘಳಿಗೆಯೋ ಏನೋ ಕೆಲವೇ ತಿಂಗಳಲ್ಲಿ ಆ ಪತ್ರಿಕೆಯೇ ಮುಚ್ಚಿಹೋಯಿತು!! ನಂತರದ ದಿನಗಳಲ್ಲಿ ಕಾದಂಬರಿಯನ್ನು ಪುನಃ ಓದಿದಾಗ ಎಳಸೆಳಸು ಬರಹ ಎಂಬ ಭಾವನೆ ಬಂತು[ಇವತ್ತಿಗೂ ಅದೇ ಭಾವನೆಯಿದೆ!]. ಒಂದಷ್ಟು ಬದಲಾವಣೆಗಳೊಂದಿಗೆ ಇಲ್ಲಿ ಪ್ರಕಟಿಸುತ್ತಿದ್ದೀನಿ, ಓದುವ ಕಷ್ಟ ನಿಮ್ಮದಾಗಲಿ! - ಡಾ ಅಶೋಕ್. ಕೆ. ಆರ್.
ಜಿ. ರಾಮಕೃಷ್ಣ ಬರೆದಿರುವ ‘ಭಗತ್ ಸಿಂಗ್’ ಪುಸ್ತಕವನ್ನು ಲೋಕಿ ಓದಿ ಮುಗಿಸಿದಾಗ ಮುಂಜಾನೆ ಎರಡು ಘಂಟೆಯಾಗಿತ್ತು. ನಂತರ ಗಾಂಧೀಜಿಯ ಆತ್ಮಕತೆಯನ್ನೂ ಒಂದೇ ಗುಕ್ಕಿಗೆ ಓದಿಮುಗಿಸಬೇಕೆಂದುಕೊಂಡವನಿಗೆ ಎಂಟು ಘಂಟೆಯ ಕ್ಲಾಸಿಗೆ ಹೋಗಬೇಕೆಂಬುದು ನೆನಪಾಗಿ ಮಲಗಿದ, ನಿದ್ರೆ ಬರಲಿಲ್ಲ. ಜೀರೋ ಕ್ಯಾಂಡಲ್ ಬಲ್ಬಿನ ಮಂದ ಬೆಳಕಿನಲ್ಲಿ ಎದುರಿನ ಗೋಡೆಯ ಮೇಲಿದ್ದ ತಾತನ ಪೋಟೊ ಕಂಡಿತು. ಭಗತ್ ಸಿಂಗ್, ರಾಜಗುರು, ಸುಖದೇವ್ ಬದುಕಿದ್ದರೆ ನನ್ನ ತಾತನಷ್ಟೇ ವಯಸ್ಸಾಗಿರುತ್ತಿತ್ತಲ್ಲವಾ? ಈ ವಿಷಯದ ಬಗ್ಗೆ ನಾಳೆ ಪೂರ್ಣಿಯೊಡನೆ ಚರ್ಚಿಸಬೇಕೆಂದುಕೊಂಡ.

‘ಭಗತ್ ಸಿಂಗ್’ ಪುಸ್ತಕದ ಬಗ್ಗೆ ಚಿಂತಿಸಿದಂತೆಲ್ಲ ಚಂದ್ರಶೇಖರ್ ಆಜಾದ್ ಮತ್ತು ರಾಜಗುರು ನಡುವೆ ನಡೆದ ಒಂದು ಸನ್ನಿವೇಶವೇ ನೆನಪಿಗೆ ಬರುತ್ತಿತ್ತು. ಅವರು ಅಡಗಿದ್ದ ಮನೆಯಲ್ಲಿ ರಾಜಗುರು ತಂದು ಹಾಕಿದ್ದ ಕ್ಯಾಲೆಂಡರ್ ಒಂದಿತ್ತು. ಅದರಲ್ಲಿ ಸುಂದರ ಕನ್ಯೆಯೊಬ್ಬಳ ಚಿತ್ರವಿತ್ತು. ಅದನ್ನು ನೋಡಿ ಕೋಪಗೊಂಡ ಆಜಾದ್ ‘ಇಂತಹ ಫೋಟೋಗಳೆಲ್ಲ ಮನಸ್ಸಿನ ಸ್ಥಿಮಿತವನ್ನು ಹಾಳು ಮಾಡುತ್ತವೆ’ ಎಂದ್ಹೇಳಿ ಅದನ್ನು ಹರಿದುಹಾಕಿದ. ಆಗ ರಾಜಗುರು ಮೆಲ್ಲನೆ ‘ಸುಂದರವಾದುದನ್ನು ಸೃಷ್ಟಿಸಬೇಕೆಂದು ಹೊರಟಿದ್ದೇವೆ. ಸುಂದರವಾದುದನ್ನು ನಾಶ ಮಾಡುತ್ತ ಹೋದಲ್ಲಿ ಸುಂದರವಾಗಿರೋದು ಹುಟ್ಟೋದಾದರೂ ಹೇಗೆ?’ ಎಂದು ಕೇಳಿದ. ರಾಜಗುರು ಹೇಳಿದ್ದರಲ್ಲಿ ಎಷ್ಟು ಅರ್ಥವಿದೆಯಲ್ಲ ಎಂದು ಯೋಚಿಸುತ್ತಾ ಲೋಕಿ ನಿದ್ರೆಗೆ ಶರಣಾದ.
* * *
“ಅಣ್ಣ ಬೇಗ ಎದ್ದೇಳೋ, ಆಗಲೇ ಏಳು ಘಂಟೆಯಾಯ್ತು. ಅಪ್ಪ ಕರೀತಿದ್ದಾರೆ” ಸ್ನೇಹ ಲೋಕಿಯ ಭುಜ ಹಿಡಿದು ಅಲುಗಿಸುತ್ತಿದ್ದಳು.

“ಏ ಹೋಗೆ. ರಾತ್ರಿ ಮಲಗಿದಾಗ ಮೂರು ಘಂಟೆ. ಇನ್ನೊಂದರ್ಧ ಘಂಟೆ ಬಿಟ್ಟು ಏಳಿಸು.”

“ನನಗೇನ್ ಹೋಗು. ಅಪ್ಪನಿಗೆ ಹೋಗಿ ಹೇಳ್ತೀನಿ”

ಎರಡು ನಿಮಿಷದ ನಂತರ “ಲೋಕಿ ಬಾ ಇಲ್ಲಿ” ಎಂದು ತಂದೆ ಕರೆದಾಗ ತಟ್ಟನೆ ಎದ್ದು “ಬಂದೆ ಅಣ್ಣ” ಎಂದ್ಹೇಳಿ ಹೊರಗೆ ಬಂದ.

“ನೋಡು ಲೋಕಿ, ವಿಜಿಯ ಸ್ಕೂಲಿನವರು ಫೋನ್ ಮಾಡಿದ್ದರು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅಲ್ಲಿರಬೇಕಂತೆ. ಬೇಗ ತಯಾರಾಗು. ವಿಜಿಗೆ ಏನಾಗಿದೆಯೋ ಏನೋ?”

“ಹುಷಾರಿಲ್ವಂತ?”

“ಅದೇನೋ ಗೊತ್ತಿಲ್ಲಪ್ಪ. ಇಲ್ಲೇ ಬನ್ನಿ ಹೇಳ್ತೀವಿ. ತೀರ ಗಾಬರಿ ಪಡುವಂತಹದ್ದೇನೂ ಇಲ್ಲ ಎಂದ್ಹೇಳಿದರು”

ಮೈಸೂರಿನಿಂದ ಮಂಡ್ಯಕ್ಕೆ ಹೋಗುವಾಗ ಸಿಗುವ ಕಳಸ್ತವಾಡಿಯನ್ನು ದಾಟಿದ ನಂತರ ಒಂದು ಡಾಬಾ ಸಿಗುತ್ತದೆ. ಡಾಬಾ ಮತ್ತದರ ಪಕ್ಕದ ಕಟ್ಟಡ ‘ಜೇವಿಯರ್ ಸದನ’ದ ನಡುವೆ ಇರುವ ಟಾರು ರಸ್ತೆಯಲ್ಲಿ ಅರ್ಧ ಕಿಮಿಯಷ್ಟು ಕ್ರಮಿಸಿದರೆ ರಸ್ತೆಯ ಬಲಭಾಗದಲ್ಲಿ ‘ನೆಹರೂ ವಿದ್ಯಾ ಸಂಸ್ಥೆ’ ಇದೆ. ಆಳೆತ್ತರದ ಗೇಟು ದಾಟಿ ಒಳನಡೆದರೆ ಸಿಮೆಂಟಿನಲ್ಲಿ ಮಾಡಿದ ರಸ್ತೆ ಕಾಣುತ್ತದೆ. ಅದೇ ರಸ್ತೆಯಲ್ಲಿ ನೇರ ಸಾಗಿದರೆ ರಸ್ತೆ ಕವಲೊಡೆಯುವ ಜಾಗದಲ್ಲಿ ಕಾರಂಜಿಯಿದೆ. ಬಲಭಾಗದ ರಸ್ತೆ ಹಾಸ್ಟೆಲ್ ನೆಡೆಗೆ ಸಾಗಿದರೆ ಎಡಗಡೆಯ ರಸ್ತೆ ಶಾಲಾ ಕಟ್ಟಡವನ್ನು ಸೇರುತ್ತದೆ.

ಲೋಕಿ ಮತ್ತವನ ತಂದೆ ಶಿವಶಂಕರ್ ಸಂಸ್ಥೆಗೆ ಬರುವ ವೇಳೆಗೆ ಎಂಟೂವರೆಯಾಗಿತ್ತು. ಪ್ರಿನ್ಸಿಪಾಲರ ಕೊಠಡಿಯ ಬಳಿ ನಿಂತಿದ್ದ ಪೋಲೀಸ್ ಜೀಪ್ ನೋಡಿ ‘ಏನು ಅನಾಹುತವಾಗಿದೆಯಪ್ಪ’ ಎಂದು ಗಾಬರಿಗೊಳಪಡುತ್ತ ಪ್ರಿನ್ಸಿಪಾಲರ ಕೊಠಡಿಯೊಳಕ್ಕೆ ಧಾವಿಸಿದರು.

“ಸರ್ ನನ್ನ ಮಗನಿಗೆ ಏನಾಗಿದೆ”

“ವಿಜಯ್ ಗೆ ತೀರ ಗಾಬರಿಪಡುವಂತಹದ್ದೇನೂ ಆಗಿಲ್ಲ. ಬನ್ನಿ ಕುಳಿತುಕೊಳ್ಳಿ. ಅಂದಹಾಗೆ ಇವರು ಇನ್ಸ್ ಪೆಕ್ಟರ್ ವಿಕ್ರಮ್ ಅಂತ” ಎಂದ್ಹೇಳಿ ತಮ್ಮ ಎದುರಿಗಿದ್ದ ವ್ಯಕ್ತಿಯ ಕಡೆ ಕೈ ತೋರಿಸಿದರು.

ಇಬ್ಬರೂ ಒಬ್ಬರಿಗೊಬ್ಬರು ನಮಸ್ಕರಿಸಿದರು. ಲೋಕಿ ವಿಕ್ರಮ್ ಕಡೆ ನೋಡುತ್ತಾ ‘ಇವರ ಪರಿಚಯ ನನಗೆ ಇರೋ ಹಾಗಿದೆಯಲ್ಲ’ ಎಂದು ಯೋಚಿಸುತ್ತಿದ್ದ. ವಿಕ್ರಮನಿಗೆ ಲೋಕಿಯ ಗುರುತುಹತ್ತಿತು. ಪ್ರಿನ್ಸಿಪಾಲರ ಬಳಿ ಬಾಗಿ ಮೆಲ್ಲಗೆ “ಸರ್, ಈ ಹುಡುಗ ಇದ್ದರೆ ನಿಮ್ಮ ಕೆಲಸ ಅಷ್ಟು ಸಲೀಸಲ್ಲ. ಅವನನ್ನು ಹೊರಗೆ ಕಳುಹಿಸಿ ಮಾತನಾಡೋದು ಉತ್ತಮ” ಎಂದನು. ಆಯ್ತೆಂಬಂತೆ ತಲೆಯಾಡಿಸಿ ಲೋಕಿಯ ಕಡೆ ತಿರುಗಿ “ನೀವು ಸ್ವಲ್ಪ ಹೊರಗಿರ್ತೀರ. ನಿಮ್ಮ ತಂದೆಯವರೊಡನೆ ಸ್ವಲ್ಪ ಮಾತನಾಡಬೇಕಿದೆ”. ಲೋಕಿ ವಿಕ್ರಮ್ ಕಡೆಗೆ ನೋಡುತ್ತಾ ‘ಎಲ್ಲಿ ಭೇಟಿಯಾಗಿದ್ದೆ ಇವರನ್ನು’ ಎಂದು ಯೋಚಿಸುತ್ತಾ ಹೊರಗೆ ಬಂದ. ಅರೆ ನನ್ನನ್ನು ಯಾಕೆ ಹೊರಗೆ ಕಳುಹಿಸಿದರು! ನಾನೇನು ಅಷ್ಟು ಚಿಕ್ಕ ಹುಡುಗನಾ?! ಆ ಇನ್ಸ್ ಪೆಕ್ಟರ್ ಏನೋ ಹೇಳಿದ ಮೇಲೆ ನನ್ನನ್ನು ಹೊರಗೆ ಕಳುಹಿಸಿದರಲ್ಲ....ವಿಕ್ರಮ್...ಹ್ಞಾ! ಈಗ ನೆನಪಿಗೆ ಬಂತು. ಪ್ರಥಮ ವರ್ಷದ ಬಿ.ಎ.ನಲ್ಲಿದ್ದಾಗ ಅವರನ್ನು ಭೇಟಿಯಾಗಿದ್ದೆ. ಇಷ್ಟು ಬೇಗ ಅವರನ್ನು ಹೇಗೆ ಮರೆತುಬಿಟ್ಟೆ. ನನ್ನ ಮರೆವಿಗೆ ಇಷ್ಟು.....
 * * *

ಬಿ ಎಗೆ ಸೇರಿದ ಎರಡು ತಿಂಗಳಲ್ಲಿ ತೃತೀಯ ವರ್ಷದ ವಿದ್ಯಾರ್ಥಿ ಸಯ್ಯದ್ ನಲ್ಲಿ ಸ್ನೇಹ ಬೆಳೆದಿತ್ತು. ಆತನಿಗೂ ಜೀವನದಲ್ಲಿ ನನ್ನ ಹಾಗೆ ಆದರ್ಶಗಳಿವೆ ಅನ್ನೋದು ಒಂದು ಕಾರಣವಾದರೆ ನನ್ನಂತೆ ಆತನೂ ನಾಸ್ತಿಕ ಅನ್ನೋದು ಮುಖ್ಯ ಕಾರಣವಾಗಿತ್ತು. ಪೂರ್ಣಿಯ ಪರಿಚಯವಾಗುವುದಕ್ಕೆ ಮೊದಲು ದಿನಕ್ಕೆ ಕನಿಷ್ಟ ಒಂದು ಘಂಟೆ ಹರಟೆ ಹೊಡೆಯುತ್ತಿದ್ದೆವು. ಈ ಈರ್ವರು ನಾಸ್ತಿಕರ ಭೇಟಿಯಾಗಿದ್ದು ಗಣೇಶ ಚತುರ್ಥಿಯ ದಿನ. ಅಂದು ಸಯ್ಯದ್ ಗಣೇಶನ ಮಹಿಮೆಗಳ ಬಗ್ಗೆ ಸಂಸ್ಕೃತದ ಶ್ಲೋಕಗಳನ್ನು ಉದಾಹರಿಸುತ್ತಾ ಅರ್ಧ ಘಂಟೆ ನಿರರ್ಗಳವಾಗಿ ಮಾತನಾಡಿದ್ದನ್ನು ನೋಡಿ ಲೋಕಿ ಅಚ್ಚರಿಪಟ್ಟಿದ್ದ. ಕಾರ್ಯಕ್ರಮ ಮುಗಿದ ಮೇಲೆ ಸಯ್ಯದನ ಬಳಿ ಹೋಗಿ “ಒಬ್ಬ ಮುಸಲ್ಮಾನನಾಗಿ ಹಿಂದೂ ದೇವರ ಬಗ್ಗೆ, ಸಂಸ್ಕೃತದ ಬಗ್ಗೆ ಇಷ್ಟೊಂದು ತಿಳಿದುಕೊಂಡಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಹಿಂದು ಧರ್ಮದ ಬಗ್ಗೆ ಆಸಕ್ತಿಯಿದ್ದು ಇದನ್ನೆಲ್ಲಾ ಕಲಿಯುತ್ತಿದ್ದೀರಾ?” ಎಂದು ಕೇಳಿದ.

“ಹಬ್ಬದ ದಿನ ಏನೇನೋ ಹೇಳಿ ನಿನ್ನ ಮನಸ್ಸಿಗೆ ಬೇಸರ ಉಂಟುಮಾಡುವ ಇಚ್ಛೆ ನನಗಿಲ್ಲ. ಮತ್ತೊಮ್ಮೆ ಹೇಳ್ತೀನಿ” ನಗುತ್ತಾ ಉತ್ತರಿಸಿ ಹೊರಟುಹೋದ.
 ಮುಂದುವರಿಯುವುದು.....

No comments:

Post a Comment