Apr 12, 2012

ಬರ ಬಿದ್ದ ನಾಡಿನಲ್ಲಿ ವಿವೇಕಕ್ಕೂ ಅಭಾವ


          ಇಡೀ ಕರ್ನಾಟಕ ಬರ ಪರಿಸ್ಥತಿಯನ್ನೆದುರಿಸುತ್ತಿರುವ ಸಂದರ್ಭದಲ್ಲಿ ಒಂದು ಚಿತ್ರದ ಮೂಲದ ಬಗ್ಗೆ ಶುರುವಾದ ವಿವಾದ ಪಡೆಯುತ್ತಿರುವ ಅಸಹ್ಯಕರ ತಿರುವುಗಳು ಮಾಧ್ಯಮದ ಮೇಲೆ ನಂಬುಗೆಯಿಟ್ಟ ಜನರನ್ನೆಲ್ಲ ತಲೆತಗ್ಗಿಸುವ ಹಾಗೆ ಮಾಡಿದೆ. ಪತ್ರಿಕೆಗಳಿಗಿಂತ ಹೆಚ್ಚು ಜನರನ್ನು ತಲುಪಲು ಶಕ್ತವಾಗಿರುವ ದೃಶ್ಯಮಾಧ್ಯಮಗಳು ತಮ್ಮ ವೈಯಕ್ತಿಕ ದ್ವೇಷ ಸಾಧನೆಗೆ ಮಾಧ್ಯಮದ ವೇದಿಕೆಯನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
          ಚಂದಪ್ಪ ಹರಿಜನನೆಂಬ ಫ್ಯಾಕ್ಷನ್ ಲೀಡರ್ ನ ಜೀವನವನ್ನಾಧರಿಸಿದ ಚಿತ್ರ ‘ಭೀಮಾ ತೀರದಲ್ಲಿ’ ಬಿಡುಗಡೆಯ ನಂತರ ಈ ವಿವಾದ ಹೊತ್ತಿಕೊಂಡಿದೆ. ಉತ್ತರ ಕರ್ನಾಟಕದಲ್ಲಿ ನೆತ್ತರ ಕೋಡಿಯನ್ನೇ ಹರಿಸಿದ ಫ್ಯಾಕ್ಷನಿಸಂನ ಮೂಲಕಾರಣಗಳನ್ನು ಶೋಧಿಸಿ ವರದಿ ಮಾಡಿದ್ದರೆ ದೃಶ್ಯಮಾಧ್ಯಮಗಳ ಬಗ್ಗೆ ಗೌರವ ಮೂಡುತ್ತಿತ್ತೇನೋ. ಒಂದು ವರ್ಷದಿಂದಲೂ ಚಿತ್ರದ ಬಗ್ಗೆ ಪತ್ರಿಕೆಗಳಲ್ಲಿ ಬರುತ್ತಿದ್ದಾಗ್ಯೂ ಅದರ ಬಗ್ಗೆ ಚಕಾರವೆತ್ತದ ರವಿ ಬೆಳಗೆರೆ ಚಿತ್ರ ಬಿಡುಗಡೆಯಾಗುವ ಹೊತ್ತಿನಲ್ಲಿ ‘ಭೀಮಾ ತೀರದ ಹಂತಕರು’ ಪುಸ್ತಕ ಬರೆದು ಅವರನ್ನು ಇಡೀ ‘ಕರ್ನಾಟಕಕ್ಕೆ’ (?) ಪರಿಚಯಿಸಿದ್ದೇ ನಾನು, ನನ್ನನ್ನು ಕೇಳದೇ ಚಿತ್ರ ಮಾಡಿದ್ದಾದರೂ ಹೇಗೆ? ಎಂಬ ಪ್ರಶ್ನೆ ಎತ್ತಿದ್ದಾರೆ. ಅವರ ಪುಸ್ತಕ ಸ್ವಂತವಾಗಿ ಅವರದೇ ಕಲ್ಪನೆಯಲ್ಲಿ ಮೂಡಿದ ಕಥೆಯಾಗಲೀ ಕಾದಂಬರಿಯಾಗಲೀ ಅಲ್ಲ. ನೈಜ ಘಟನೆಗಳನ್ನಾಧರಿಸಿದ ಒಂದು ಸವಿಸ್ತಾರ ವರದಿಯಷ್ಟೇ. ನೈಜ ಘಟನೆಗಳ ಬಗ್ಗೆ, ಆ ಘಟನೆಗಳಲ್ಲಿ ಭಾಗಿಯಾದ ವ್ಯಕ್ತಿಗಳ ಬಗ್ಗೆ ಹಕ್ಕುಸ್ವಾಮ್ಯ ಸಾಧಿಸಲು ಸಾಧ್ಯವಿಲ್ಲವೆಂದು ಅರಿತ ರವಿ ಬೆಳಗೆರೆ ಪ್ರಚಾರಕ್ಕೋ, ಒಣ ಪ್ರತಿಷ್ಠೆಗೋ ಟಿ.ವಿ ಮಾಧ್ಯಮಕ್ಕೆ ಬಂದು ಅಪಹಾಸ್ಯಕ್ಕೀಡಾಗಿದ್ದಾರೆ. ಅವರ ವಿರುದ್ಧವಾಗಿ ಮಾತನಾಡುತ್ತಿರುವವರು ಕೂಡಾ ತಮ್ಮ ನಿಜ ಬಣ್ಣ ಬಯಲು ಮಾಡಿಕೊಂಡಿದ್ದಾರೆ.
          ಮೊದಲು ಚರ್ಚೆ ಶುರುವಾಗಿದ್ದು ಟಿ.ವಿ9ನಲ್ಲಿ. ಹಕ್ಕುಸ್ವಾಮ್ಯದ ಬಗ್ಗೆ ಮಾತನಾಡಲಾಗದ ರವಿ ಬೆಳಗೆರೆ, ಕಥೆಗಳನ್ನು ಕದೀತೀನಿ ಎಂದು ‘ಹೆಮ್ಮೆಯಿಂದ’ ಹೇಳಿಕೊಳ್ಳುವ ನಿರ್ದೇಶಕ ಓಂ ಪ್ರಕಾಶ್ ರಾವ್, ವಿಜಯ್, ಅಣಜಿ ನಾಗರಾಜ್ ಎಲ್ಲರೂ ಸೇರಿ ಚರ್ಚೆಯನ್ನು ದಿಕ್ಕುಗೆಡಿಸಿದರು. “ಇದು ನೈಜ ಘಟನೆಗಳಿಂದ ಸ್ಪೂರ್ತಿ ಪಡೆದು ಚಿತ್ರ. ನಿಮ್ಮ ಪುಸ್ತಕವನ್ನು ಆಧಾರ ಮಾಡಿಕೊಂಡಿದ್ದರೆ ನಿಮ್ಮನ್ನೂ ಕೇಳದೇ ಮಾಡುವುದು ತಪ್ಪಾಗುತ್ತಿತ್ತು” ಎಂದು ಚಿತ್ರತಂಡದವರು ಸ್ಪಷ್ಟೀಕರಣ ಕೊಟ್ಟು ಅರ್ಧ ಘಂಟೆಯಲ್ಲಿ ಚರ್ಚೆ ಮುಗಿಯಬೇಕಿತ್ತು. ಆದರೆ ಇಪ್ಪತ್ನಾಲ್ಕು ತಾಸಿನ ಟಿವಿಯವರಿಗೆ ಪ್ರಸಾರ ಮಾಡಲು ಏನಾದರೂ ವಿಷಯ ಬೇಕಲ್ಲ! ಚಿತ್ರಕ್ಕಾಗಲೀ, ಪುಸ್ತಕಕ್ಕಾಗಲೀ, ನೈಜ ಘಟನೆಗಳಿಗಾಗಲೀ ಸಂಬಂಧವೇ ಇರದ ದರ್ಶನ್, ಸುದೀಪ್, ಮಂಜು, ಮುನಿರತ್ನರನ್ನೆಲ್ಲ ಮಾತನಾಡಿಸಿದರು. ದರ್ಶನ್ ಹೆಂಡತಿ, ವಿಜಿ – ಶುಭಾ ಪೂಂಜಾ, ರವಿ ಬೆಳಗೆರೆಯ ಮತ್ತೊಂದು ಸಂಸಾರವೆಲ್ಲ ವಿನಾಕಾರಣ ಚರ್ಚೆಯ ವಸ್ತುವಾದರು. ‘ಚಿತ್ರದ ಪ್ರಚಾರಕ್ಕೆ ಯಾವಳನ್ನಾದರೂ ಕರೆಸಿ ಕುಣಿಸಿ’ ಎಂದು ಹೇಳುತ್ತಾ ಹೆಣ್ಣುಮಕ್ಕಳ ಬಗ್ಗೆ ತುಂಬು ಗೌರವದಿಂದ [?] ಲೇಖನಗಳನ್ನು ಬರೆಯುವ ರವಿ ಬೆಳಗೆರೆ ತಮ್ಮ ಅಸಲಿಯತ್ತು ತೋರಿಸಿದರು. ನಾಲ್ಕು ಘಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ಯಾವುದರ ಬಗ್ಗೆ ಎಂದು ಕೇಳಿದರೆ ಉತ್ತರ ನೀಡುವುದು ಕಷ್ಟ ಕಷ್ಟ!
          ಟಿ.ವಿ9 ಈ ರೀತಿಯ ಕಾರ್ಯಕ್ರಮ ಮಾಡಿ ಟಿ.ಆರ್.ಪಿ ಏರಿಸಿಕೊಂಡ ಮೇಲೆ ಸುವರ್ಣ ವಾಹಿನಿಯವರು ಸುಮ್ಮನಿರಲು ಸಾಧ್ಯವೇ? ಅದರಲ್ಲೂ ರವಿಯ ಹೊಸ ವೈರಿ ವಿಶ್ವೇಶ್ವರ ಭಟ್ ಮತ್ತು ಹಳೆಯ ದುಷ್ಮನ್ ಪ್ರತಾಪಸಿಂಹ ವಾಹಿವಿಯಲ್ಲಿರುವಾಗ?! ಮುಖಗಿಖ ತೊಳೆದುಕೊಂಡು ವಿಜಿ, ಅಣಜಿ ನಾಗರಾಜ್, ಓಂ ಪ್ರಕಾಶ್ ರಾವ್ ಸುವರ್ಣದ ಅಂಗಳಕ್ಕೆ ಬಂದರು. ಪ್ರತಾಪಸಿಂಹ ಶಸ್ತ್ರಾಸ್ತ್ರಗಳ ಸಮೇತ ತಯ್ಯಾರಾಗಿ ಕುಳಿತಿದ್ದರು. ಚಿತ್ರದ ಬಗ್ಗೆ ಚರ್ಚೆ ನಡೆಯಲಿಲ್ಲ. ಚರ್ಚೆ ನಡೆದಿದ್ದು ರವಿ ಬೆಳಗೆರೆ ಎಂಬ ಮನುಷ್ಯನ ನೈತಿಕತೆಯ ಬಗ್ಗೆ. ರವಿ ಬೆಳಗೆರೆಗೆ ಹೆಣ್ಣು ಮಕ್ಕಳ ಬಗ್ಗೆ ಕಿಂಚಿತ್ತೂ ಗೌರವವಿಲ್ಲ, ಅವರ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ಲೇಖನಗಳನ್ನು ಬರೆಯುತ್ತಾನೆ, ಕೆಟ್ಟದಾಗಿ ವರ್ತಿಸುತ್ತಾನೆ ಎಂದೆಲ್ಲ ಹೇಳಿದ ಮಾನ್ಯ ಪ್ರತಾಪಸಿಂಹರವರು ಕೊನೆಗೆ ‘ಅಷ್ಟಕ್ಕೂ ಈ ರವಿ ಬೆಳಗೆರೆಯ ಅಪ್ಪ ಯಾರು?’ ಎಂಬ ಪ್ರಶ್ನೆ ಕೇಳುತ್ತಾರೆ. ‘ಹೌದು ಸರ್. ನನಗೂ ಗೊತ್ತಿಲ್ಲ. ಯಾರು ಅವರ ಅಪ್ಪ?’ ಎಂದು ವಿಜಿಯೂ ತಾಳ ಹಾಕುತ್ತಾನೆ. ಇಂಥ ಪ್ರಶ್ನೆ ಕೇಳುತ್ತ ‘ನೀನಿರೋ ಕೊಚ್ಚೆಯಲ್ಲೇ ನಾವೂ ಇದ್ದೀವಿ ಗುರು’ ಎಂದು ರವಿಗೆ ಪರೋಕ್ಷವಾಗಿ ತಿಳಿಸುತ್ತಾರೆ!! ಪಬ್ಲಿಕ್ ಟಿವಿ ಕೂಡ ರವಿ  ಬೆಳಗೆರೆಯನ್ನು ಕರೆಸಿ ಮಾತನಾಡಿಸುತ್ತಾರೆ. ಭೀಮಾ ತೀರದ ಬಗ್ಗೆ ಒಂದು ವರದಿ ಕೊಟ್ಟಿದ್ದಷ್ಟೇ ಅವರ ವಿಶೇಷತೆ.
          ರವಿಬೆಳಗೆರೆಯ ನೈತಿಕತೆಯ ಮಟ್ಟ ಯಾವುದು, ಅವರ ಬರವಣಿಗೆಗೂ ಅವರ ನಡುವಳಿಕೆಗೂ ಇರುವ ವ್ಯತ್ಯಾಸಗಳೇನು ಎಂಬುದು ಅವರೊಡನೆ ಕೆಲಸ ಮಾಡಿ ಬಿಟ್ಟವರಿಗೆ, ಪತ್ರಿಕೋದ್ಯಮದವರಿಗೆ ತಿಳಿಯದ ವಿಷಯವೇನಲ್ಲ. ಇಂಥ ವ್ಯಕ್ತಿಗೆ ಶಿಕ್ಷೆಯಾಗಬೇಕು ಎಂಬುದೇ ಅವನ ವಿರೋಧಿಗಳಾದ ಪ್ರತಾಪಸಿಂಹರಂಥವರ ಉದ್ದಿಶ್ಯವಾಗಿದ್ದರೆ ಟಿವಿಗೆ ಫೋನ್ ಮಾಡಿ ರವಿಯ ವಿರುದ್ಧ ದೂರು ಕೊಡಿ ಎಂದು ಹಾರಾಡುವ ಬದಲು ಆ ದೂರುಗಳನ್ನೆಲ್ಲ ಕ್ರೋಡೀಕರಿಸಿ ಸಾಕ್ಷ್ಯ ಸಂಗ್ರಹಿಸಿ ಕಾನೂನು ರೀತ್ಯ ಹೋರಾಡಬಹುದಿತ್ತಲ್ಲವೇ? ಆ ರೀತಿ ಮಾಡದೆ ಸುಮ್ಮನೆ ಕಾಲಹರಣ ಮಾಡುತ್ತ ಟಿ ಆರ್ ಪಿ ಹೆಚ್ಚಿಸಿಕೊಳ್ಳುತ್ತಿರುವುದನ್ನು ನೋಡಿದರೆ ಇವರುಗಳಲ್ಲೂ ಹುಳುಕುಗಳಿವೆ ಎಂಬುದರ ಸಾಕ್ಷಿಯಲ್ಲವೇ? ತಮ್ಮ ತಮ್ಮ ವೈಯಕ್ತಿಕ ತೆವಲುಗಳಿಗೆ ಮಾಧ್ಯಮವನ್ನು ಉಪಯೋಗಿಸಿಕೊಳ್ಳುತ್ತಿರುವುದು ಯಾವ ನೈತಿಕತೆ? ಈ ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಬ್ಯಾರಿ ಭಾಷೆಯ ಚಿತ್ರ ನಾನು ಬರೆದ ಕಥೆ ಕದ್ದು ಮಾಡಿದ್ದು ಎಂದು ಸ್ವತಃ ಸಾರಾ ಅಬೂಬಕ್ಕರ್ ಗೌರಿ ‘ಲಂಕೇಶ್’ ಪತ್ರಿಕೆಯಲ್ಲಿ ಬರೆದಿದ್ದರು. ಅದರ ಬಗ್ಗೆ ಯಾವ ವಾಹಿನಿಯಲ್ಲೂ ಚರ್ಚೆಯಾಗಿದ್ದು ಕಾಣೆ. ಬೆಂಗಳೂರಿಗರ ಬಗ್ಗೆ ಚರ್ಚಿಸುವುದಕ್ಕಷ್ಟೇ ನಮ್ಮ ವಾಹಿನಿಗಳು ಸೀಮಿತವಾಗಿದೆಯೇ?
ಕೊನೆಯದಾಗಿ: -
          ಕನ್ನಡ ಚಿತ್ರಗಳನ್ನು ನಮ್ಮ ಜನ ನೋಡುವುದೇ ಇಲ್ಲ ಅಂತ ಬಾಯಿ ಬಡ್ಕೋತಾರೆ ಚಿತ್ರರಂಗದವರು. ಅಲ್ಲ ಸ್ವಾಮಿ! ಕರ್ನಾಟಕದ ರಾಜಕಾರಣಿಗಳು, ಚಿತ್ರೋದ್ಯಮದವರು, ಮಾಧ್ಯಮದವರು ತಮ್ಮ ತಮ್ಮ ಕೆಲಸಗಳನ್ನು ನಿಷ್ಠೆಯಿಂದ ಮಾಡುವುದನ್ನು ಬಿಟ್ಟು ಈ ರೀತಿ ‘ಪುಕ್ಕಟೆ’ ಮನೋರಂಜನೆ ಕೊಡುತ್ತಿರಬೇಕಾದರೆ ನಾವು ದುಡ್ಡು ಖರ್ಚು ಮಾಡಿಕೊಂಡು ಚಿತ್ರಮಂದಿರಗಳಿಗ್ಯಾಕೆ ಹೋಗಬೇಕು?!!

1 comment:

  1. ಸದ್ಯ current ಇರ್ಲಿಲ್ಲಾ ನಮ್ಮನೇಲಿ ಆ programmes ಬರೋವಾಗ..
    waste of time..

    ReplyDelete