Sep 10, 2011

ಅಮ್ಮಂದಿರ ಮರೆತ ‘ರಾಮ’ಭಕ್ತರ ನಾಡಿನಲ್ಲಿ. . .


           ಸೆಪ್ಟೆಂಬರ್ 3, 2006: - ಕರ್ನಾಟಕ – ಆಂಧ್ರಪ್ರದೇಶ ಗಡಿಯಲ್ಲಿನ ಬಳ್ಳಾರಿಯ ಹಳ್ಳಿಯೊಂದರಲ್ಲಿದ್ದ 200 ವರ್ಷಗಳಷ್ಟು ಹಳೆಯದಾದ ಸುಗ್ಗಾಲಮ್ಮ ದೇವಾಲಯವನ್ನು ರೆಡ್ಡಿ ಬೆಂಬಲಿತ ವ್ಯಕ್ತಿಗಳು ದ್ವಂಸ ಮಾಡಿದರು, ಹಳ್ಳಿಯವರ ವಿರೋಧದ ನಡುವೆ. ಕಾರಣ? ಅಮ್ಮನ ಪಾದದಡಿಯಲ್ಲಿ ಕಬ್ಬಿಣದ ಅದಿರಿತ್ತು! ಪೂಜಾರಿಗಳನ್ನು ಕರೆಯಿಸಿ ಹೋಮ – ಹವನ – ಶಾಂತಿ ವಗೈರೆ ವಗೈರೆ ಮಾಡಿಸಿ ದೇವಾಲಯವನ್ನು ಕೆಡವಿದ್ದರಾದರೂ ಊರ ಜನರ ಕೋಪ ಶಮನವಾಗಿರಲಿಲ್ಲ. ಪೋಲೀಸ್ ಕೇಸ್ ಮಾಡಿದರು. ಅದೂ ಕೂಡ ಈಗ ರೆಡ್ಡಿಯ ವಿರುದ್ಧವಿದೆ.

          ಸೆಪ್ಟೆಂಬರ್ 3, 2011: - ಮೇಲಿನ ಘಟನೆ ನಡೆದು ಬರೋಬ್ಬರಿ ಐದು ವರ್ಷಗಳ ನಂತರ ಗಾಲಿ ಜನಾರ್ಧನ ರೆಡ್ಡಿ ಬಂಧಿತರಾಗಿದ್ದಾರೆ. ಇದು ಸುಗ್ಗಾಲಮ್ಮನದೇ ಶಾಪ ಎಂಬುದು ಭಕ್ತರ ಗಾಢ ನಂಬುಗೆ.

          ನಗರಗಳಲ್ಲಿ ಅನಧಿಕೃತ ದೇವಾಲಯಗಳನ್ನು ನೆಲಸಮಗೊಳಿಸಬೇಕಾದಾಗಲೆಲ್ಲ ಹಿಂದುತ್ವದ ರಕ್ಷಣೆಯ ಜವಾಬುದಾರಿಯನ್ನು ಹೊತ್ತ ‘ರಾಮ ಭಕ್ತರ’ (?) ಸಂಘಟನೆಗಳು ಪ್ರತಿಭಟಿಸುತ್ತ ಬೀದಿಗಿಳಿಯುತ್ತವೆ. ಇತಿಹಾಸದಲ್ಲಿ ಅಯೋಧ್ಯೆಯಲ್ಲಿ ರಾಮನು ಹುಟ್ಟಿದ ಜಾಗ ಎಂಬ ನೆಪ ಒಡ್ಡಿ ಬಾಬರಿ ಮಸೀದಿಯನ್ನು ನೆಲಸಮಗೊಳಿಸುತ್ತಾರೆ. ರಾಮನಿಗೆ ದೇವಾಲಯ ಕಟ್ಟೇ ತೀರುತ್ತೇವೆಂಬ ಆಶ್ವಾಸನೆಯನ್ನೀಯುತ್ತ ಅಧಿಕಾರಕ್ಕೆ ಬಂದ ಬಿ.ಜೆ.ಪಿ ಪಕ್ಷದ ಪ್ರಮುಖ ವ್ಯಕ್ತಿಯೇ ವ್ಯಾಪಾರದ ಉದ್ದೇಶದಿಂದ ದೇವಾಲಯವೊಂದನ್ನು ಉರುಳಿಸಿದಾಗ ಈ ಸಂಘಟನೆಗಳ್ಯಾಕೆ ಪ್ರತಿಭಟಿಸಲಿಲ್ಲ. ನಮ್ಮ ಮನೆಯನ್ನು ಬೇರೆಯವರು ಹಾಳು ಮಾಡಿದರೆ ತಪ್ಪು, ನಾವೇ ಹಾಳು ಮಾಡಿದರೆ ತಪ್ಪಲ್ಲವೇನೋ?!

 ದೇವರ ಜಾಗತೀಕರಣದಿಂದ ಅನಾಥವಾದ ಅಮ್ಮಂದಿರು
        ವಿಶ್ವಕ್ಕೆಲ್ಲ ಅಲ್ಲಾ, ಯೇಸು ಮಾತ್ರ ದೇವರಾಗಿರಬೇಕೆಂದು ಬಯಸುವ ಮತಾಂಧ ಮುಸ್ಲಿಮರು, ಕ್ರೈಸ್ತರು ಎಷ್ಟು ಅಪಾಯಕಾರಿಗಳೋ ಭಾರತಕ್ಕೆಲ್ಲ ರಾಮನೇ ಆರಾಧ್ಯದೈವವಾಗಿರಬೇಕೆಂದ್ಹೇಳುವ ಮತಾಂಧ ಹಿಂದುಗಳೂ ಕೂಡ ಅಷ್ಟೇ ಅಪಾಯಕಾರಿ. ರಾಮನವಮಿ, ಕೃಷ್ಣಜನ್ಮಾಷ್ಟಮಿಗಳ ಬಗ್ಗೆ ಕೆಲವು ವರ್ಷಗಳ ಹಿಂದಿನವರೆಗೂ ನಮಗೆ ಸರಿಯಾಗಿ ತಿಳಿದೇ ಇರುತ್ತಿರಲಿಲ್ಲ. ಈಗ ಅವೇ ದೊಡ್ಡ ಹಬ್ಬಗಳಾಗುತ್ತಿವೆ.

          ಈ ಗಂಡು ದೇವರುಗಳ ಹಾವಳಿಯಿಂದಾಗಿ ನಮ್ಮ ಹಳ್ಳಿಗಳಲ್ಲಿ ಜನರ ಬದುಕಿನ ಭಾಗವಾಗಿ ಏಕವಚನಾಂಕಿತರಾಗಿದ್ದ ಬಹುರಂಜನೀಯ ದೇವರುಗಳಾದ ಮಾರಿಯಮ್ಮ, ಕ್ಯಾತಮ್ಮ, ಕೋಡಿಯಮ್ಮರೆಲ್ಲ ಹೊಳಪು ಕಳೆದುಕೊಂಡು ಡಲ್ ಹೊಡೆಯತೊಡಗಿದ್ದಾರೆ. ಅವರ ಹೆಸರಿನಲ್ಲಿ ಜಾತ್ರೆ ನಡೆಸಿ ಹೊಂಡ ಹಾಯುವವರು, ಅಮ್ಮನನ್ನು ಮೈಮೇಲೆ ಆಹ್ವಾನಿಸಿಕೊಂಡು ಊರ ನೀತಿ ನಿಯಮ ನಿರ್ಧರಿಸುವವರು, ಕೋಳಿ – ಕುರಿ – ಕೋಣ ಕಡಿದು ನಾಲ್ಕೈದು ಮನೆಗಳಲ್ಲಿ ಗಡದ್ದಾಗಿ ಉಂಡು ತೇಗುತ್ತಿದ್ದವರೆಲ್ಲ ಈಗ ಪಾನಕ – ಮಜ್ಜಿಗೆ ಕುಡಿಯುತ್ತ, ಮಕ್ಕಳಿದ್ದರೆ ಕೃಷ್ಣನ ಡ್ರೆಸ್ ಹಾಕಿಸುವುದರಲ್ಲೇ ತೃಪ್ತರಾಗುತ್ತಿದ್ದಾರೆ.
          
        ಅಲ್ಲಾ, ಯೇಸು, ರಾಮ, ಕೃಷ್ಣನ educated ಭಕ್ತರು ಮಾಡುವ ಅನಾಚಾರಗಳನ್ನು, ದಾಂಧಲೆ – ಹಿಂಸೆಗಳನ್ನು ನೋಡಿದಾಗ ವರ್ಷಕ್ಕೋ ಎರಡು ವರ್ಷಕ್ಕೋ ಪ್ರಾಣಿ ಬಲಿ ಕೇಳುತ್ತಿದ್ದ ಈ ಅಮ್ಮಂದಿರ ಭಕ್ತರೇ ಸಾವಿರ ಪಾಲು ಉತ್ತಮವಿದ್ದರೇನೋ? ಪ್ರಾಣಿ ಬಲಿಯನ್ನು ವಿರೋಧಿಸಿ, ಹೊಂಡ ಹಾಯುವುದು, ಬೆನ್ನು ನಾಲಿಗೆಯ ಮೇಲೆ ಮೊಳೆ ಸಿಕ್ಕಿಸಿಕೊಳ್ಳುವುದು, ದೇವರನ್ನು ಮೈಮೇಲೆ ಬರಿಸಿಕೊಳ್ಳುವುದರ ಹಿಂದಿನ ವೈಜ್ಞಾನಿಕ ಸಂಗತಿಗಳನ್ನೆಲ್ಲ ಸದುದ್ದೇಶದಿಂದ ವಿವರಿಸಿದ ವೈಚಾರಿಕರು ಕೂಡ ಈ ‘ಗಂಡು’ ದೇವರ ಭಕ್ತರ ಹಾವಳಿಗಳನ್ನು ನೋಡಿ ಕೈಕೈಹಿಸುಕಿಕೊಳ್ಳುತ್ತಿರಬೇಕು!!

ಹಿಂಗ್ಯಾಕೆ? – ಜ್ಞಾನಾರ್ಜನೆ, ಸಾಕ್ಷರತೆ ನಮ್ಮ ಹಿಂದಿನವರಲ್ಲಿದ್ದ ಮೂಢನಂಬಿಕೆಯನ್ನು ತೊಡೆಯುತ್ತವೆಂದು ಆಶಿಸಲಾಗಿತ್ತು. ಆದರೆ ಹಿಂದಿನವರ ಆಚರಣೆಗಳನ್ನೆಲ್ಲ ಮೂಢನಂಬಿಕೆಯೆಂದು ಜರಿಯುತ್ತಾ sophisticated ಮೂಢನಂಬಿಕೆಗಳೆಡೆಗೆ 
 ಸಾಗುತ್ತಿರುವೆವಲ್ಲಾ ಹಿಂಗ್ಯಾಕೋ?!
-      ಅಶೋಕ್. ಕೆ. ಆರ್.

No comments:

Post a Comment