Aug 10, 2011

ವ್ವಕ್ತಿತ್ವ ಬದಲಾಗಬೇಕು ವ್ವಕ್ತಿಯಲ್ಲ

-->
ರಾಜಕೀಯ ಪ್ರಹಸನದ ಒಂದು ಅಂಕಕ್ಕೆ ತೆರೆ ಬಿದ್ದು ಮತ್ತೊಂದು ಅಂಕದ ಆರಂಭವಾಗಿದೆ. ಸಿಟ್ಟಿನ ಜಾಗಕ್ಕೆ ನಗು ಬಂದಿದೆ ಅರ್ಥಾತ್ ಮೂಗಿನ ತುದಿಯಲ್ಲೇ ಕೋಪ ಸಾಕಿಕೊಂಡಿದ್ದ ಯಡಿಯೂರಪ್ಪನವರ ಜಾಗದಲ್ಲಿ ತಮ್ಮ ದೇಹ ರಚನೆಯ ಕಾರಣದಿಂದಲೋ ಅಥವಾ ನಿಜಕ್ಕೂ ಖುಷಿಯ ಮನಸ್ಸಿನ ಕಾರಣದಿಂದಲೋ ಯಾವಾಗಲೂ ನಗುತ್ತಿರುವಂತೆ ತೋರುವ ಸದಾನಂದಗೌಡರು ಮುಖ್ಯಮಂತ್ರಿಯ ಸ್ಥಾನಕ್ಕೆ ಬಿ.ಜೆ.ಪಿ ಪಕ್ಷದ ವರಿಷ್ಠರ ಮಾತನ್ನು ನಂಬುವುದಾದರೆ “ಡೆಮಾಕ್ರೆಟಿಕ್” ರೀತಿಯಲ್ಲಿ ಆಯ್ಕೆಯಾಗಿದ್ದಾರೆ.
ಅಧಿಕಾರದ ಅಮಲು
ದಶಕಗಳಿಂದ ವಿರೋಧ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನಲಂಕರಿಸಿದ್ದ ಯಡಿಯೂರಪ್ಪನವರು ತಮ್ಮ ಹೋರಾಟ, ಪಕ್ಷ ಸಂಘಟನೆ ಮತ್ತು ಕೊನೆಯದಾಗಿ - ಪ್ರಮುಖವಾಗಿ ಕುಮಾರಸ್ವಾಮಿ ಮತ್ತವರ ಪಿತಾಶ್ರೀ ದೇವೇಗೌಡರ ‘ಮೋಸ’ದ ಫಲದಿಂದ ಹೆಚ್ಚು ಕಡಿಮೆ ಸಂಪೂರ್ಣ ಸ್ವಯಂಬಲದಿಂದ ಅಧಿಕಾರಕ್ಕೆ ಬಂದರು. ಎಲ್ಲ ಪಕ್ಷದವರೂ ಒಂದೇ ಎಂಬ ಅಭಿಪ್ರಾಯ ನಮ್ಮಲ್ಲಿತ್ತಾದರೂ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿ.ಜೆ.ಪಿ ಪಕ್ಷ ಅತ್ಯುತ್ತಮವಲ್ಲದಿದ್ದರೂ ಕೊನೆ ಪಕ್ಷ ಕೆಟ್ಟ ಆಡಳಿತ ನೀಡಲಾರದು ಎಂಬ ಸಣ್ಣ ಆಸೆಯಾದರೂ ಇತ್ತು. ಜನರಿಗಾಗಲ್ಲವಾದರೂ ಮುಂದಿನ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಮತ್ತು ದಕ್ಷಿಣದ ಇನ್ನಿತರ ರಾಜ್ಯಗಳಲ್ಲಿ ತಮ್ಮ ಖಾತೆ ತೆರೆಯಲೋಸುಗವಾದರೂ ಒಂದಷ್ಟು ಜನಪರ ಕಾರ್ಯಗಳನ್ನು ಕೈಗೊಳ್ಳುತ್ತಾರೆಂಬ ಭರವಸೆಯಿತ್ತು. ನಮ್ಮ ಮಾನ್ಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಆ ಭರವಸೆಯನ್ನು ಹುಸಿಗೊಳಿಸಲಿಲ್ಲ! ಸಂಪೂರ್ಣ ಜನಪರ ನಿಲುವುಗಳನ್ನೇ ತೆಗೆದುಕೊಂಡರಾದರೂ ಅದು ಕೇವಲ ತಮ್ಮ ಜನರ ಪರವಾಗಿತ್ತಷ್ಟೇ ಎಂಬುದು ಜನಸಾಮಾನ್ಯರದಷ್ಟೇ ಅಭಿಪ್ರಾಯವಲ್ಲ, ಬಿ.ಜೆ.ಪಿಯ ಕೆಲವು ನಾಯಕರ ಅಭಿಪ್ರಾಯವೂ ಹೌದು!
ಅಧಿಕಾರ, ಕುರ್ಚಿಯೇ ಹೀಗಾ? ಹೋರಾಟದಿಂದಲೇ ಬೆಳೆದ - ಆ ಹೋರಾಟಗಳು ಎಷ್ಟರ ಮಟ್ಟಿಗೆ ನಿಜವಾಗಿತ್ತೆಂಬುದರ ಬಗ್ಗೆ ಈಗ ಅನುಮಾನ ಮೂಡುತ್ತದೆ, ಇರಲಿ – ಒಬ್ಬ ವ್ಯಕ್ತಿ ಅಧಿಕಾರಕ್ಕೆ ಬರುತ್ತಿದ್ದಂತೆ ತಾನು ನಡೆದು ಬಂದ ಹಾದಿಯನ್ನೇ ಮರೆತು ಹಗಲು ದರೋಡೆಗೆ ನಿಂತುಬಿಟ್ಟರಲ್ಲ? ಆ ವ್ಯಕ್ತಿಯ ತಪ್ಪಾ ಅಥವಾ ಅಧಿಕಾರ ಮತ್ತು ವ್ಯವಸ್ಥೆಯ ತಪ್ಪಾ?
“ಅಯ್ಯಯ್ಯೋ , ನಾವು ಅಷ್ಟೆಲ್ಲ ವರ್ಷ ಕಷ್ಟಬಿದ್ದು, ಕಳ್ಳತನದಿಂದ, ಮರೆಯಲ್ಲಿ ಯಾರ ಕಣ್ಣಿಗೂ ಬೀಳದಂತೆ ಮಾಡುತ್ತಿದ್ದ ಅಕ್ರಮಗಳನ್ನು ಈ ಯಪ್ಪ ರಾಜರೋಷವಾಗಿ ಇಷ್ಟು ಕಡಿಮೆ ಅವಧಿಯಲ್ಲಿ ಮಾಡುತ್ತಿದ್ದಾನಲ್ಲ” ಎಂದು ಕಳವಳ ವ್ಯಕ್ತಪಡಿಸಿ ಕರುನಾಡ ರಾಜಕೀಯ ಪ್ರಹಸನದಲ್ಲಿ ಯಡಿಯೂರಪ್ಪ ಅಂಡ್ ಸನ್ಸ್ ಜೊತೆ ಅಭಿನಯಕ್ಕೆ ತೊಡಗಿದ ವಿರೋಧ ಪಕ್ಷದವರಿಂದ ಕರ್ನಾಟಕದ ರಾಜಕಾರಣ ರಾಷ್ಟ್ರಮಟ್ಟದಲ್ಲಿ ಅಪಹಾಸ್ಯಕ್ಕೀಡಾಯಿತು, ಅವಹೇಳನಕ್ಕೊಳಗಾಯಿತು. ರಾಜ್ಯದ ಹೆಸರು ಕೆಡಿಸಿದ ಈ ಪ್ರಕ್ರಿಯೆಯಲ್ಲಿ ರಾಜಕಾರಣಿಗಳ ಜೊತೆಗೆ ಮೂರು ವರ್ಷದಲ್ಲಿ ನಡೆದ ಉಪ – ಮುಖ್ಯ ಚುನಾವಣೆಗಳಲ್ಲಿ ಜಾತಿ, ಹಣಕ್ಕೆ ಬೆಲೆ ಕೊಟ್ಟು ಮತ ಚಲಾಯಿಸಿದ ನಮ್ಮ ಪಾತ್ರ ಕೂಡ ಹಿರಿದೇ ಹೌದು.
ವಿರೋಧ ಪಕ್ಷದ ಒತ್ತಡ, ಲೋಕಾಯುಕ್ತ ವರದಿ, ದಿಲ್ಲಿ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡಲು ಹೊರಡುವ ಮುನ್ನ ಬೇಕಿದ್ದ ನೈತಿಕತೆಯಿಂದಾಗಿ ಕೊನೆಗೂ ಬಲವಂತವಾಗಿ ಯಡಿಯೂರಪ್ಪನವರಿಂದ ಕುರ್ಚಿಯನ್ನು ‘ಕಿತ್ತುಕೊಳ್ಳಲಾಯಿತು’. ಆದರೆ ರಾಜ್ಯದ ಆಡಳಿತದ ವೈಖರಿ ಹೆಚ್ಚು ಬದಲಾದೀತೆಂಬ ಭರವಸೆ ಮಾತ್ರ ಇಲ್ಲ. ಸದಾನಂದಗೌಡರು ತಮ್ಮದೇ ವರ್ಚಸ್ಸು ಬೆಳೆಸಿಕೊಂಡು ಆಡಳಿತ ನಡೆಸಬಲ್ಲರಾ ಅಥವಾ ಯಡಿಯೂರಪ್ಪನವರ ಮುಖವಾಣಿಯಾಗಷ್ಟೇ ಉಳಿಯುತ್ತಾರಾ ಕಾದು ನೋಡಬೇಕು. ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಇಲ್ಲಿ ಬದಲಾಗಿರುವುದು ಕೇವಲ ಮುಖ್ಯಮಂತ್ರಿಯ ಸ್ಥಾನ, ಉಳಿದ ಬಹುತೇಕ ಮಂತ್ರಿ ವರ್ಗ ಹಳೆಯದೇ; ಎಷ್ಟರ ಮಟ್ಟಿಗೆ ಆಡಳಿತ “ಜನಪ್ರಿಯ ಮಾದರಿಯ ಹಾದಿಯನ್ನು ಬಿಟ್ಟು ಜನಪರ ಹಾದಿಯನ್ನು ತುಳಿಯುತ್ತದೋ ನೋಡಬೇಕು”.
ಹಿಂಗ್ಯಾಕೆ? – ಅವಶ್ಯಕ ಮತ್ತು ಅನಾವಶ್ಯಕ ಅಭಿವೃದ್ಧಿ ಕಾರ್ಯಗಳು ಇನ್ನು ಶಿವಮೊಗ್ಗ - ಶಿಕಾರಿಪುರದಿಂದ ಮಂಗಳೂರಿಗೆ ಸಂಪೂರ್ಣವಾಗಿ ಶಿಫ್ಟ್ ಆಗುತ್ತದೆ ಎಂದು ದಕ್ಷಿಣ ಕನ್ನಡದ ಮಂದಿ ಖುಷಿಯಲ್ಲಿದ್ದಾರೆ. ಮುಖ್ಯಮಂತ್ರಿ ಆಗೋದು ರಾಜ್ಯಕ್ಕೋ? ಜಿಲ್ಲೆಗೋ?!

2 comments:

  1. A thief gets his PG degree from his seniors in jail. Similarly, now Sadananda Gowda is expected to complete his dissertation work under the guidance of Yediyurappa without being caught in the exams like his master and come out with flying colors ( flying the money out of the country)

    ReplyDelete
  2. ha ha....... unfortunately ur comment is true.!Raj

    ReplyDelete