Aug 29, 2020

ಒಂದು ಬೊಗಸೆ ಪ್ರೀತಿ - 77

"ಯಾಕ್ ನಿಂಗೂ ಸೋನಿಯಾಗೂ ಏನಾದ್ರೂ ಜಗಳ ಆಯ್ತಾ ಅವಳು ಆಸ್ಪತ್ರೆಯಲ್ಲಿದ್ದಾಗ?" ಬೆಳಿಗ್ಗೆ ಶೇವ್ ಮಾಡಿಕೊಳ್ಳುವಾಗ ರಾಜೀವ್ ಕೇಳಿದ ಪ್ರಶ್ನೆ ಕೈಲ್ಲಿದ್ದ ಕಾಫಿ ಲೋಟ ಕೆಳಕ್ಕೆ ಬೀಳುವಂತೆ ಮಾಡಿತು. ಪುಣ್ಯಕ್ಕೆ ನಿನ್ನೆ ಸಂಜೆಯ ಪಾತ್ರೆಗಳನ್ನು ತೊಳೆದಿರದ ಕಾರಣ ಗಾಜಿನ ಲೋಟ ಸಿಂಕಿನಲ್ಲೇ ಇತ್ತು, ಕೈಯಲ್ಲಿದ್ದ ಸ್ಟೀಲಿನ ಲೋಟದ ಕಾಫಿ ಚೆಲ್ಲಿತಷ್ಟೆ. ʻಹೇಳೇಬಿಟ್ಟಳಾ ಸೋನಿಯಾ?' ಎಂಬ ಅನುಮಾನ ಮೂಡದೆ ಇರಲಿಲ್ಲ. ರಾಜೀವ ತುಂಬಾ ಸಹಜವಾಗಿ ಕೇಳಿದಂತಿತ್ತೇ ಹೊರತು ಅವರ ದನಿಯಲ್ಲಿ ಕೋಪ ಅಸಹನೆಗಳು ಕಾಣಲಿಲ್ಲ. ಯಾರಿಗೆ ಗೊತ್ತು ನಿಧಾನಕ್ಕೆ ತಮಾಷೆಯಾಗೇ ಕೇಳಿ ಜಗಳಕ್ಕೊಂದು ಬುನಾದಿ ಹಾಕುತ್ತಿದ್ದಾರೋ ಏನೋ? 

ʻಹಂಗೇನಿಲ್ಲವಲ್ಲ ಯಾಕೆ?' ಮನದ ಉದ್ವೇಗ ಆದಷ್ಟು ದನಿಯಲ್ಲಿ ಪ್ರತಿಫಲನಗೊಳ್ಳದಂತೆ ಪ್ರಯತ್ನಿಸಿದೆ. 

"ಓ ಓ! ಏನ್ ದಡ್ಡನ ತರ ಕಾಣಿಸ್ತೀನೇನು! ನನ್ ಕಣ್ಣಿಗ್ ಏನೂ ಗೊತ್ತಾಗೋದಿಲ್ಲ ಅಂತ ಎಣಿಸಿದ್ದೀಯೇನು?" 

ಕನ್ಫರ್ಮ್! ಹೇಳಿಬಿಟ್ಟಿದ್ದಾಳೆ ಸೋನಿಯಾ...ಅನುಮಾನವೇ ಇಲ್ಲ. 

ʻಅಂತದ್ದೇನ್‌ ಕಾಣಿಸ್ತು ನಿಮಗೆʼ ಆದಷ್ಟು ನಗುಮುಖವನ್ನು ಆರೋಪಿಸಿಕೊಳ್ಳುವ ಪ್ರಯತ್ನ ಮುಂದುವರೆದಿತ್ತು. 

"ಕಾಣೋದಿಲ್ಲೇನು! ನಾನೂ ನೋಡ್ತಾನೇ ಇದ್ದೀನಲ್ಲ ಕಳೆದ ಹದಿನೈದು ದಿನದಿಂದ. ಬೆಳಿಗ್ಗೆಯಿಂದ ನನ್ನ ಜೊತೆ, ರಾಧ ಜೊತೆ, ನಿಮ್ಮಮ್ಮನ ಜೊತೆ ಅಚ್ಚುಕಟ್ಟಾಗೇ ಮಾತಾಡಿಕೊಂಡು ಇರ್ತಾಳೆ. ನಿಮ್ಮಪ್ಪನ ಜೊತೆ ಮಾತು ಕಮ್ಮೀನೇ ಅನ್ನು. ಸಂಜೆ ನೀ ಬರ್ತಿದ್ದ ಹಾಗೆ ಮುಗುಮ್ಮಾಗಿಬಿಡ್ತಾಳೆ. ಅದೂ ನೀ ಅಲ್ಲೇ ಹಾಲಲ್ಲೇ ಕುಳಿತುಬಿಟ್ಟರಂತೂ ನಮ್ಮಗಳ ಜೊತೆಗೂ ಮಾತಾಡಲ್ಲಪ್ಪ" 

ಉಫ್‌! ಸೋನಿಯಾ ಇನ್ನೂ ಹೇಳಿಲ್ಲ ಅನ್ನೋದು ತಿಳಿದೇ ಅರ್ಧ ಜೀವ ವಾಪಸ್ಸಾದಂತಾಯ್ತು. 

ʻಹೌದಾ? ನನಗೇನು ಹಂಗ್‌ ಅನ್ನಿಸಿಲ್ಲಪ್ಪʼ 

"ನಿನಗ್‌ ಅನ್ನಿಸಿರೋಲ್ವ? ಮುಂಚೆಯಿಂದಾನೂ ಇಬ್ಬರ ನಡುವೆ ಮಾತು ಕಡಿಮೆ ಅಂದ್ರೆ ಬೇರೆ ಪ್ರಶ್ನೆ. ಮುಂಚೆ ತಲೆಚಿಟ್ಟಿಡಿಯುವಷ್ಟು ಮಾತನಾಡುತ್ತಿದ್ದವರು ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿಬಿಟ್ಟಂತೆ ಕಾಣಿಸ್ತದೆ ನಂಗೆ. ಅದೂ ಕರೆಕ್ಟಾಗಿ ಅವಳು ಆಸ್ಪತ್ರೆಯಲ್ಲಿ ಸೇರಿದ ಮೇಲೆ" 

ʻಹೌದಾ? ನನಗೇನು ಹಂಗ್‌ ಅನ್ನಿಸಿಲ್ಲಪ್ಪʼ 

"ಹೋಗ್ಲಿ ಬಿಡು. ನಿನಗ್‌ ಹೇಳೋಕ್‌ ಇಷ್ಟವಿಲ್ವೋ ಏನೋ" 

ಹೇಳೇಬಿಡ್ಲಾ? ಸೋನಿಯಾ ಹಿಂಗ್‌ ಏನೇನೋ ಗಾಸಿಪ್‌ ಕೇಳಿಸ್ಕೊಂಡು ನೋವಾಗ್ವಂಗೆ ಮಾತಾಡಿದ್ಲು ನೋಡಿ ಅಂತ. ಯಾಕೆ ಬೇಕು ಸುಮ್ಮನೆ ಇಲ್ಲಸಲ್ಲದ ಮಾತು. ಹದಿನೈದು ದಿನದಿಂದ ಅವಳೇನೂ ರಾಜೀವ್‌ ಹತ್ರ ಚಾಡಿ ಚುಚ್ಚಿಲ್ವಲ್ಲ? ಬಹುಶಃ ಅವಳಿಗೇ ತಪ್ಪು ಮಾಡಿದೆ ಅನ್ನಿಸಿರಬಹುದು. ಅಥವಾ ಅವಳ ಜೀವನ ಅವಳಿಗೆ, ನನಗ್ಯಾಕೆ ಗಂಡ ಹೆಂಡತಿ ಮಧ್ಯೆ ತಂದಿಡೋ ಬುದ್ಧಿ ಅಂತಲೂ ಸುಮ್ಮನಿರಬಹುದು. ನಾನಾಗೇ ರಾಜೀವ್‌ಗೆ ಏನೋ ಹೇಳಿ ಅವರು ಹೋಗಿ ಕೇಳಿ ಅದಕ್ಕವಳು ಮತ್ತೇನೋ ಬದಲು ಹೇಳಿ ವಿಷಯ ಎತ್ತೆತ್ತಗೋ ಹೋಗಿಬಿಟ್ಟರೆ? ಜೊತೆಗೆ ರಾಜೀವು ಸೋನಿಯಾ ಚೆನ್ನಾಗಿದ್ದಾರೆ. ಒಡಹುಟ್ಟಿದವರ ರೇಂಜಿಗೆ ಮಾತಾಡ್ಕಂಡಿದ್ದಾರೆ. ಅವರಿಬ್ಬರ ಮಧ್ಯೆ ತಂದಿಟ್ಟಂಗೂ ಆಗಿಬಿಡ್ತದಲ್ಲ? ರಾಜೀವನಿಗಂತೂ ಗೊತ್ತೇ ಇದೆ ನಂದೂ ರಾಮ್‌ದೂ ಅವರ ಕಡೆಯಿಂದ ಮೂಡಿರೋ ಸ್ನೇಹ ಅಂತ. ವಿಷಯ ಗೊತ್ತಾದರೆ ಸೋನಿಯಾಳ ಮೇಲೆ ಜೋರು ಮಾಡಬಹುದು, ಬಯ್ಯಬಹುದು. ಮಾತಿಗೆ ಮಾತು ಬೆಳೆಸಿ ಈಗಷ್ಟೇ ಒಂದು ಎಪಿಸೋಡು ಬ್ಲೀಡಿಂಗ್‌ ಇಂದ ತೊಂದರೆ ಅನುಭವಿಸ್ತಿರೋ ಸೋನಿಯಾಗೆ ಮತ್ತಷ್ಟು ಮಾನಸಿಕ ಹಿಂಸೆ ಆಗಿ ಅದರಿಂದಾಗಿ ಮತ್ತಷ್ಟು ಬ್ಲೀಡಿಂಗೋ ಮತ್ತೊಂದೋ ಅಗಿ ಹೊಟ್ಟೇಲಿರೋ ಮಗುವಿಗೆ ತೊಂದರೆ ಆಗಿ..... 

"ಹಲೋ ಮೇಡಂ ನಿಮಗೇ ಕೇಳಿದ್ದು ನಾನು.... ಎಲ್ಲಿ ಕಳೆದೋದ್ರಿ" 

ʻಅಂತದ್ದೇನಿಲ್ಲರೀ. ನೀವ್‌ ಹೇಳಿದ್‌ ನಿಜಾನೇ ಹೌದೋ ಅಲ್ವೋ ಅಂತ ಯೋಚನೆ ಮಾಡ್ತಿದ್ದೆ. ನೀವ್‌ ಹೇಳಿದ್‌ ಇದ್ರೂ ಇರಬಹುದೋ ಏನೋ ಅಲ್ವಾ? ನಾ ಕೆಲಸದ ಒತ್ತಡ, ಮುಂದಿನ ವಾರ ಇರೋ ಕ್ಲಿನಿಕ್ಸ್‌ ಬಗ್ಗೆ ಯೋಚಿಸ್ತಾ ಯೋಚಿಸ್ತಾ ಇದರ ಬಗ್ಗೆ ಗಮನ ಹರಿಸಲಿಲ್ವೋ ಏನೋʼ ಮಾತು ತೇಲಿಸಿದೆ. 

"ನಾನೇ ಕೇಳಿ ನೋಡ್ಲಾ..." 

ಅಯ್ಯಪ್ಪ! ʻನೀವ್ಯಾಕ್‌ ಕೇಳ್ತೀರಾ? ಬೇಡ ಬೇಡ. ನಾನೇ ಮಾತಾಡ್ತೀನಿ ಬಿಡಿ ಕ್ಲಿನಿಕ್ಸ್‌ ಮುಗಿದ ಮೇಲೆʼ 

"ಮ್.‌ ಸರಿ ಸರಿ. ಮತ್ತೆ ಓದ್ಕಂಡ್‌ ಆಯ್ತಾ ಕ್ಲಿನಿಕ್ಸ್‌ಗೆ" 

ನಿಜ್ಜ ರಾಜೀವನಿಗೆ ಏನೋ ಆಗೇ ಹೋಗಿದೆ ಅನ್ಸುತ್ತೆ. ನನ್ನ ಪರೀಕ್ಷೆ ಬಗ್ಗೆಯೆಲ್ಲ ವಿಚಾರಿಸುವಷ್ಟು ಒಳ್ಳೇತನ ಇವರಲ್ಲಿ ಮೂಡಿಬಿಟ್ಟಿದ್ದೇಗೆ? ಅಥವಾ ಇವರಿದ್ದಿದ್ದೇ ಹೀಗೇನೋ....ನಾನೇ ಗುರುತಿಡಿದಿರಲಿಲ್ಲವೋ ಏನೋ..... 

ʻಹು. ನಡೀತಿದೆ ಮಾಮೂಲಿ. ನೀವೇನ್‌ ಡಿಸೈಡ್‌ ಮಾಡಿದ್ರಿ. ಮೂರ್‌ ಜನಾನೂ ಹೋಗೋದೋ ಹೆಂಗೆ?ʼ ಥಿಯರಿ ಹೆಂಗೋ ಮೈಸೂರಲ್ಲೇ ಇತ್ತು, ಬಚಾವಾಗಿದ್ದೆ. ಆದರೆ ಕ್ಲಿನಿಕ್ಸ್‌ ಪರೀಕ್ಷೆ ಚೆನ್ನೈಯಲ್ಲಿ ಬಿದ್ದು ಬಿಟ್ಟಿತ್ತು. ಇರೋದ್ರಲ್ಲಿ ದಕ್ಷಿಣ ಭಾರತದಲ್ಲಿ ಬಿದ್ದಿರೋದೇ ಅದೃಷ್ಟ. ಸುಮಾರ್‌ ಸಲ ಉತ್ತರ ಪ್ರದೇಶದಲ್ಲೋ, ಪಶ್ಚಿಮ ಬಂಗಾಳದಲ್ಲೋ, ಗುಜರಾತಲ್ಲೋ ಬಿದ್ದುಬಿಡುತ್ತೆ ಕ್ಲಿನಿಕ್ಸ್‌ ಪರೀಕ್ಷೆ. ಅಲ್ಲಿನ ಭಾಷೆ ಬರದ ಪಜೀತಿ ಜೊತೆಗೆ ದಕ್ಷಿಣದವರು ಅಂದ್ರೆ ಖುಷಿಖುಷಿಯಾಗಿ ಫೇಲು ಮಾಡ್ತಾರವರು ಅನ್ನೋ ಸುದ್ದಿ ವಿಚಲಿತಗೊಳಿಸಿತ್ತು ನನ್ನನ್ನು. ಚೆನ್ನೈಯಲ್ಲಿ ಸಿಕ್ಕಿರೋದೇ ಪುಣ್ಯ. ಮುರುಕು ಪರಕು ತಮಿಳಿನಲ್ಲಿ ಹೆಂಗೋ ಒಂದಷ್ಟಾದರೂ ಮಾತಾಡಬಹುದು. ಪಾಸಾಗೋ ಸಾಧ್ಯತೆಯೂ ಹೆಚ್ಚು. ಒಟ್ಟು ಎರಡು ದಿನ ಪರೀಕ್ಷೆ. ಒಂದು ದಿನ ಮುಂಚಿತವಾಗಿ ಹೋಗಬೇಕು. ಅಂದ್ರೆ ಒಟ್ಟು ಮೂರು ಅಥವಾ ನಾಲ್ಕು ದಿನ ಇರಬೇಕಾಗ್ತದೆ. ಸುಮಾ ಥಿಯರಿಯಲ್ಲೇ ಫೇಲಾಗಿಬಿಟ್ಟಿದ್ದಳು. ಅಷ್ಟೇನೂ ಸೀರಿಯಸ್ಸಾಗಿ ಓದಿರಲಿಲ್ಲ ಅವಳೀ ಬಾರಿ. ಅವಳಿದ್ದಿದ್ದರೆ ಜೊತೆಯಾಗಿರುತ್ತಿದ್ದಳು. ನಂಗೇನೋ ಮನಸಲ್ಲಿ ಒಬ್ಬಳೇ ಹೋಗಿ ಪರೀಕ್ಷೆ ಮುಗಿಸಿಕೊಂಡು ಬಂದರೆ ಒಳ್ಳೇದು ಅಂತಲೇ ಇತ್ತು. ಮಗಳನ್ನು ಗಂಡನ್ನ ಕರ್ಕೊಂಡು ಹೋದರೆ ಓದೋದಕ್ಕಾದರೂ ಎಲ್ಲಾಗ್ತದೆ? ಬಾಯಿಬಿಟ್ಟು ಹೇಳೋದಿಕ್ಕಾಗಿರಲಿಲ್ಲ. 

ʻಬನ್ನಿ ಎಲ್ಲಾ ಹೋಗೋಣ. ಬೇಕಾದ್ರೆ ಅಮ್ಮನನ್ನೂ ಕರೆದುಕೊಂಡು ಹೋದರಾಯಿತುʼ ಅಂದಿದ್ದೆ. "ಅತ್ತೆ ಯಾಕೆ? ನಾವ್‌ ಮೂರ್‌ ಜನ ಹೋಗುವ. ಟ್ರಿಪ್ಪಾದರೂ ಆಗ್ತದೆ" ಎಂದಿದ್ದರು ಖುಷಿಯಾಗಿ. ಅರೆರೆ ಅಂದುಕೊಂಡು ʻರೀ ಟ್ರಿಪ್ಪಲ್ಲ ಅದು. ಪರೀಕ್ಷೆ! ನಾ ಬೆಳಿಗ್ಗೆಯಿಂದ ಸಂಜೆಯವರೆಗೆ ಆಸ್ಪತ್ರೆಯಲ್ಲೇ ಇರ್ತೀನಿ. ರಾತ್ರಿ ಆದರೂ ಅಚ್ಚರಿಯೇನಿರಲ್ಲʼ ಎಂದಿದ್ದಕ್ಕೆ "ಹೌದಾ... ಹಂಗಾರೆ ನೋಡುವ ಬಿಡು ಆಮೇಲೆ" ಎಂದಿದ್ದರು. ಸದ್ಯ ಅಡ್ಡಗೋಡೆಯ ಮೇಲಕ್ಕಾದರೂ ಬಂದರಲ್ಲ ಎಂದು ಸಮಾಧಾನವಾಗಿತ್ತವತ್ತು. ಇಂದು ಕೇಳಿದವಳ ಮನದಲ್ಲೂ ನೀ ಹೋಗ್‌ ಬಾ ಅನ್ನೋ ಮಾತುಗಳೇ ಧ್ವನಿಸುತ್ತಿದ್ದವು. 

"ನಾನೂ ಯೋಚನೆ ಮಾಡ್ದೆ. ಸುಮ್ನೆ ನಿಂಗೂ ಓದಿಕೊಳ್ಳೋಕೆ ತೊಂದರೆ. ಜೊತೆಗೆ ಮಗಳನ್ನು ಇಡೀ ದಿನ ನಾನೊಬ್ನೇ ನೋಡ್ಕೊಳ್ಳೋದೂ ಕಷ್ಟಾನೇ ಅಲ್ವೇ" 

ʻಅಲ್ಲ ಬೇಕಾದ್ರೆ ಅಮ್ಮನನ್ನೂ ಕರ್ಕೊಂಡು ಹೋಗುವʼ ಏಕಾಏಕಿ ಹು ಅನ್ನಲಾದೀತೇ.... ನೀವೆಲ್ಲ ಬರದೇ ಹೋದ್ರೆ ನನ್ನದೆಂಗೆ ಅಂತ ತೋರಿಸ್ಕೋಬೇಕಲ್ಲ. 

"ಚೆನ್ನಾಗ್‌ ಹೇಳ್ದೆ. ಅವರು ಸೋನಿಯಾಳನ್ನು ನೋಡಿಕೊಳ್ಳದೇ ಬಂದು ಬಿಡೋಕಾಗ್ತದಾ? ಏನೋ ಅವರಮ್ಮ ನೋಡ್ಕೋತಿದ್ರು ಅಂದ್ರೆ ಬೇರೆ ಪ್ರಶ್ನೆ. ಜೊತೆಗೆ ಸುಮ್ಮನೆ ರಾಧಳಿಗ್ಯಾಕೆ ಮೂರ್ನಾಲ್ಕು ದಿನ ಹೋಟೆಲ್‌ ತಿಂಡಿ ಊಟ ತಿನ್ಸೋದು. ಆರೋಗ್ಯ ಹೆಚ್ಚು ಕಮ್ಮಿ ಆದ್ರೆ" ಇವರ್ಯಾಕೋ ತೀರಾನೇ ಒಳ್ಳೆಯವರಾಗಿಬಿಟ್ಟರಲ್ಲ! 

ʻಹು. ನೀವೇಳೋದೂ ಸರಿ ಅನ್ನಿ. ಮೂರ್‌ ದಿನ ಅಲ್ವ. ಹೆಂಗೋ ಮುಗಿದೋಗ್ತದೆ. ಶತಾಬ್ದಿ ಬುಕ್‌ ಮಾಡಿಸಿಬಿಡಿ ಹಂಗಾದ್ರೆʼ 

"ಇನ್ನೊಂದ್‌ ವಾರಕ್ಕೆ ಶತಾಬ್ದಿ ಸಿಗ್ತದಾ ಗೊತ್ತಿಲ್ಲ. ತತ್ಕಾಲಲ್‌ ಮಾಡಿಸೋಕೆ ನೋಡ್ತೀನಿ. ಇಲ್ಲಾಂದ್ರೆ ಬಸ್ಸಲ್‌ ಹೋಗ್ಬೇಕಾಗ್ತದೆ ನೋಡು" 

ʻಹೆಂಗೋ ಹೋದರಾಯಿತು ಬಿಡಿʼ ನೀವೆಲ್ಲ ಬರದೇ ಇರೋದ್ರಿಂದ ನನಗೆಷ್ಟು ಬೇಸರವಾಗಿದೆ ಅಂತ ತೋರಿಸಿಕೊಳ್ಳುತ್ತಾ ನೆಲದಲ್ಲರಡಿದ್ದ ಕಾಫಿಯನ್ನು ಹಳೆ ಬಟ್ಟೆಯ ತುಂಡಿನಲ್ಲಿ ಒರೆಸಿ ಬಟ್ಟೆಯನ್ನು ಕಸದ ಬುಟ್ಟಿಗೆಸೆದೆ. 

ಅಂತೂ ಇಂತೂ ಪರೀಕ್ಷೆ ಮುಗಿಸಿದಾಗ ಸಂಜೆ ಆರು ಘಂಟೆ. ಅಂದುಕೊಂಡಿದ್ದಕ್ಕಿಂತ ಚೆನ್ನಾಗಿಯೇ ಮಾಡಿದ್ದೆ. ಯಾವ ಕೇಸಿನಲ್ಲೂ ತಡಬಡಿಸಿರಲಿಲ್ಲ. ಪಾಸಾಗುವುದಂತೂ ಖಂಡಿತ ಎನ್ನುವ ಭಾವನೆ ಧೃಡವಾಗಿತ್ತು, ಆದರೆ ಈ ಹಾಳು ಡಿ.ಎನ್.ಬಿಯಲ್ಲಿ ಏನನ್ನೂ ಹೇಳುವುದಕ್ಕಾಗುವುದಿಲ್ಲ. ರಿಸಲ್ಟ್‌ ಬರುವವರೆಗೂ ಕಾಯಬೇಕು. ಪಾಸೋ ಫೇಲೋ ಇನ್ನು ಮೇಲಂತೂ ವಿದ್ಯಾರ್ಥಿ ಥರ ಇರೋ ಅವಶ್ಯಕತೆ ಇಲ್ಲ ನಮ್ಮಾಸ್ಪತ್ರೆಯಲ್ಲಿ. ರಿಸಲ್ಟ್‌ ಬರೋವರೆಗೂ ಕಡಿಮೆ ಸಂಬಳವೇ ಮುಂದುವರೀತದೆ. ಅಬ್ಬಬ್ಬಾ ಅಂದರೆ ಇನ್ನೊಂದು ತಿಂಗಳೊಳಗೆ ಬರ್ತದೆ ಫಲಿತಾಂಶ. ಅದಾದ ಮೇಲೆ ಬರುವ ಸಂಬಳ ಪಟ್ಟಂತ ದುಪ್ಪಟ್ಟಾಗ್ತದೆ. ಅರ್ಧ ಆರ್ಥಿಕ ಸಮಸ್ಯೆಗಳು ಮುಗೀತವೆ. ಸಮಸ್ಯೆಗಳೇನೂ ಮುಗಿಯುವುದಿಲ್ಲ. ಅಷ್ಟರೊಳಗೆ ಮಗಳನ್ನು ಕಿಂಡರ್‌ ಗಾರ್ಡನ್ನಿಗೆ ಸೇರಿಸುವ, ಶಾಲೆಗೆ ಅಡ್ಮಿಶನ್‌ ಮಾಡಿಸುವ ಸಂಭ್ರಮ ಶುರುವಾಗ್ತದೆ. ಬರುವ ದುಡ್ಡು ಅಲ್ಲಿಗಲ್ಲಿಗೆ ಸರಿದೂಗುತ್ತಾ ಸಾಗಿ ಮತ್ತದೇ ಕತೆ. ಇವೆಲ್ಲ ಮುಗಿಯುವುದ್ಯಾವಾಗ? ರಾತ್ರಿ ಹನ್ನೊಂದಕ್ಕಿತ್ತು ಬಸ್ಸು. ಬೆಂಗಳೂರಿಗೆ. ಅಲ್ಲಿಂದ ಮತ್ತೆ ಮೈಸೂರಿನ ಬಸ್ಸಿಡಿಯಬೇಕು. ಮರೀನಾ ಬೀಚು ನೋಡಿ ಬರುವ ಎಂದು ಹೊರಟೆ. ಹಿಂಗೆಲ್ಲ ಒಬ್ಬೊಬ್ಬಳೇ ಓಡಾಡಿ ಅಭ್ಯಾಸವೇ ಇಲ್ಲವಲ್ಲ ನನಗೆ ಎಂದಚ್ಚರಿಯಾಯಿತು. ಮದುವೆ ಆದಮೇಲೆ ಕಷ್ಟ ಸಾಧ್ಯವಾದರೂ ಕಾಲೇಜು ದಿನಗಳಲ್ಲಂತೂ ಒಬ್ಬಳೇ ತಿರುಗುವ ಅನುಕೂಲಗಳಿರ್ತವೆ. ಊರಿಗ್‌ ಮುಂಚೆ ಲವ್ವಿಗ್‌ ಬಿದ್ದು ಆ ಅನುಕೂಲವನ್ನೂ ಕಳೆದುಕೊಂಡುಬಿಟ್ಟಿದ್ದೆ ನಾನು. ನಮ್ಮ ಕ್ಲಾಸಿನಲ್ಲೇ ಒಂದಷ್ಟು ಹುಡುಗಿಯರಿದ್ರಲ್ಲ, ಏನವರ ಹೆಸರು.... ಥೂ ಥೂ.... ವಯಸ್ಸೇ ಆಗೋಯ್ತ? ತೀರ ಹನ್ನೆರಡದಿಮೂರು ವರ್ಷ ಮುಂಚೆ ಜೊತೆಗೆ ಓದಿದವರ ಹೆಸರುಗಳನ್ನೇ ಮರೆತುಬಿಟ್ಟೆನಲ್ಲ..... ಆ ಹುಡುಗಿಯರು ಒಬ್ಬೊಬ್ಬರೇ ಅಲೆದಲೆದು ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ನಾ ಒಬ್ಬಳೇ ಅಲೆಯುವುದಿರಲಿ.... ಮೆಡಿಕಲ್‌ ಫ್ರೆಂಡ್ಸುಗಳ ಜೊತೆಗೆ ಊಟ ಪಿಚ್ಚರ್ರು ಅಂತ ಹೋಗುವುದೇ ಅಸಾಧ್ಯವಾಗಿತ್ತಲ್ಲ ಪುರುಷೋತ್ತಮನ ಸಂಗಡದಿಂದ. ಯಾಕೀಗೆ ಮನಸ್ಸು? ಜೊತೆಯಲ್ಲಿದ್ದಾಗ ಒಳ್ಳೆಯ ಅಂಶಗಳನ್ನೇ ಹುಡುಕುತಿರ್ತದೆ. ದೂರವಾದ ಮೇಲೆ ಕೇವಲ ಕೆಟ್ಟ ಸಂಗತಿಗಳನ್ನೇ ಮುನ್ನೆಲೆಗೆ ತರುತ್ತಾ ಅಷ್ಟರಮಟ್ಟಿಗೆ ನೀ ಅವನಿಂದ ದೂರಾಗಿದ್ದು ಒಳ್ಳೆಯದೇ ಆಯಿತು ಅಂತ ಸಮಾಧಾನ ಮಾಡ್ತಿರ್ತದೆ. ಮರೀನಾ ಬೀಚ್‌ಗೆ ತಲುಪಿದಾಗ ಘಂಟೆ ಎಂಟಾಗಿತ್ತು. ಇನ್ನೇನ್‌ ರಾತ್ರಿ ಖಾಲಿ ಇರ್ತದೆ ಬೀಚು. ಅಲ್ಲೊಬ್ಬರು ಇಲ್ಲೊಬ್ಬರು ಇರ್ತಾರೆ, ಒಂದಷ್ಟು ಸಮುದ್ರದಲೆಗಳಿಗೆ ಕಾಲೊಡ್ಡಿ ಕುಳಿತು ವಾಪಸ್ಸಾದರಾಯಿತು ಎಂದಂದುಕೊಂಡು ಹೋದರೆ ಅಲ್ಲಿ ಕಂಡಿದ್ದೇನು! ಸಾವಿರಗಟ್ಟಲೆ ಜನ. ಸಮುದ್ರ ತೀರಕ್ಕಲ್ಲ ಯಾವುದೋ ಜಾತ್ರೆಗೆ ಬಂದಂತಾಗಿತ್ತು. ʻಏನ್‌ ಸ್ಪೆಷಲ್ಲಾ ಇವತ್ತು, ಇಷ್ಟೊಂದು ಜನ ಇದ್ದಾರೆʼ ಅಂತ ಆಟೋ ಡ್ರೈವರ್‌ಗೆ ಕೇಳಿದೆ. "ಇಲ್ಲವಲ್ಲ, ಯಾಕೋ ಇವತ್ತೇ ಕಮ್ಮಿ ಜನ" ಎಂದ್ಹೇಳಿ ಅಚ್ಚರಿಗೆ ದೂಡಿದ. ಜನರ ನಡುವೆ ನುಸುಳಿಕೊಂಡು ಸಮುದ್ರದ ಬಳಿಗೆ ಬಂದವಳಿಗೆ ಆ ಜನಜಂಗುಳಿಯ ನಡುವೆ ನೀರು ತೊಯ್ಯಿಸಿಕೊಳ್ಳುವ ಮನಸ್ಸಾಗಲಿಲ್ಲ. ಬಿಸಿ ಬಿಸಿ ಜೋಳ ತೆಗೆದುಕೊಂಡು ತಿಂದು ಜನರನ್ನೇ ಗಮನಿಸುತ್ತಾ ಅತ್ತಿತ್ತ ಒಂದಷ್ಟು ಓಡಾಡಿದೆ. ಒಂಭತ್ತಾಗುತ್ತಿದ್ದಂತೆ ಸಮುದ್ರ ತೀರಕ್ಕೆ ಮುತ್ತಿಗೆಯಿಡುವ ಜನರ ಸಂಖೈ ಹೆಚ್ಚುತ್ತಲೇ ಹೋಯಿತು. ಸಮುದ್ರ ತೀರವನ್ನೇ ಸಂಭ್ರಮ ಮಾಡಿಕೊಂಡ ಜನರ ನಡುವೆ ಹಾದು ಹೊರಬಂದು ಹೋಟೆಲ್ಲು ತಲುಪಿ ಸಂಜೆಯೇ ಪ್ಯಾಕ್‌ ಮಾಡಿಟ್ಟಿದ್ದ ಬ್ಯಾಗನ್ನೆತ್ತಿಕೊಂಡು ಬಸ್‌ ನಿಲ್ದಾಣವನ್ನೊಂದಷ್ಟು ಮುಂಚಿತವಾಗಿಯೇ ತಲುಪಿದೆ. ಊಟ ಮಾಡಲೆಂದು ಅಲ್ಲೇ ಇದ್ದ ಪುಟ್ಟ ಹೋಟೆಲ್ಲಿಗೆ ಹೋದರೆ ಅಲ್ಲೆಲ್ಲಿದೆ ಊಟ. ಥೂ.... ಏನು ತಮಿಳರಪ್ಪ. ರಾತ್ರಿ ಹನ್ನೊಂದೂವರೆಗೂ ಇಡ್ಲಿ ತಿನ್ನಿ ದೋಸೆ ತಿನ್ನಿ ಅಂತ ತಲೆ ತಿಂತಾರೆ. ಎರಡಿಡ್ಲಿ ಒಂದೊಡೆ ತಿಂದು ಬಂದು ಬಸ್‌ ಹತ್ತಿ ರಾಜೀವನಿಗೆ ಫೋನ್‌ ಮಾಡಿದೆ. ಮಲಗಿಬಿಟ್ಟಿದ್ದರೋ ಏನೋ ರಿಸೀವ್‌ ಮಾಡಲಿಲ್ಲ. ಮೊಬೈಲು ಬ್ಯಾಗಿನೊಳಗಿಟ್ಟ ಕ್ಷಣದ ನಂತರ ಮೆಸೇಜು ಬಂದ ಶಬ್ದ ಕೇಳಿತು. ಕಣ್ಣು ಎಳೆಯುತ್ತಿತ್ತು. ಯಾವ್ದೋ ಫಾರ್ವರ್ಡ್‌ ಮೆಸೇಜುಗಳಿರ್ತವೆ. ಬೆಳಿಗ್ಗೆ ನೋಡಿದರಾಯಿತು. 

ಮೆಸೇಜು ಕಳುಹಿಸಿದ್ದು ಫೋನ್‌ ರಿಸೀವ್‌ ಮಾಡದ ರಾಜೀವು. "ಥ್ಯಾಂಕ್ಸ್‌" ಅಂದಷ್ಟೇ ಇದ್ದ ಅವರ ಮೆಸೇಜನ್ನು ಓದದ ಕಾರಣಕ್ಕವತ್ತು ಚೆಂದ ನಿದ್ರೆ ಮಾಡಿದೆ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment