Aug 22, 2020

ಒಂದು ಬೊಗಸೆ ಪ್ರೀತಿ - 76

ರಾತ್ರಿಯೆಲ್ಲ ಕನಸುಗಳು. ಪರಶು, ಸಾಗರ ಕನಸುಗಳನ್ನಾಳಿಬಿಟ್ಟರು. ನನ್ನವೇ ಮಾತುಗಳನ್ನು ತಿರುಗಿಸಿ ಮುರುಗಿಸಿ ನನಗೇ ಹೇಳುತ್ತಿದ್ದುದನ್ನು ಬಿಟ್ಟರೆ ಅವರವೇ ಮಾತುಗಳನ್ನು ಹೇಳಲೇ ಇಲ್ಲ. ಹೇಳಿದ್ದೆಲ್ಲವೂ ನನ್ನದೇ ದನಿಯಲ್ಲಿ ಕೇಳಿ ಮತ್ತಷ್ಟು ಹಿಂಸೆ. ನೀನ್‌ ಸರಿಯಿಲ್ಲ ಅಂತ ಹೇಳಿದವರೇ ಸರಿಯಾ? ನನ್ನ ಮನಸ್ಸು ಅಷ್ಟೊಂದು ಚಂಚಲವಾ? ನನಗೇ ಅನುಮಾನ ಮೂಡಿಸಿಬಿಟ್ಟ ಶಶಿ. ಎಷ್ಟೇ ವಿಶ್ಲೇಷಿಸಿದರೂ ರಾಮ್‌ ಬಗ್ಗೆ ನನ್ನಲ್ಲಿ ಯಾವತ್ತಿಗೂ ಸ್ನೇಹದ ಭಾವನೆ ಬಿಟ್ಟು ಮತ್ತೊಂದು ಮೂಡಲಿಲ್ಲ. ಸರಿಯಾಗಿ ನೆನಪಿಗೆ ತಂದುಕೊಂಡರೆ ಅವರ ಕುರಿತು ಸ್ನೇಹದ ಭಾವನೆ ಹುಟ್ಟಿದ್ದು ಕೂಡ ಅನಿವಾರ್ಯ ಕಾರಣಗಳಿಂದಾಗಿ. ರಾಜೀವ್‌ ಮನೆಯಿಂದ ದೂರವಿದ್ದಾಗ, ನಮ್ಮ ಮನೆಯವರೆಲ್ಲರೂ ಟ್ರಿಪ್ಪಿಗೆ ಹೋಗಿದ್ದಾಗ ಮಗಳು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ರಾಮ್‌ ಮಾಡಿದ ಸಹಾಯದಿಂದಲ್ಲವೇ ಅವರೊಡನೆ ಸ್ನೇಹ ಹಸ್ತ ಚಾಚಿದ್ದು. ಆ ಘಟನೆ ನಡೆಯದೇ ಹೋಗಿದ್ದಲ್ಲಿ ನಾ ರಾಮ್‌ ಜೊತೆಗೆ ಇನ್ನೂ ಅವರು ನಮ್ಮ ಮನೆಯಲ್ಲಿ ಬಂದು ಕುಡಿದ ಕಾರಣವನ್ನಿಟ್ಟುಕೊಂಡೇ ಮುನಿಸು ಸಾಧಿಸುತ್ತಿದ್ದುದೌದು. ರಾಮ್‌ ಇಸ್‌ ಸ್ಮಾರ್ಟ್‌, ಹ್ಯಾಂಡ್ಸಮ್....‌ ಇಲ್ಲ ಅನ್ನಲ್ಲ. ಆದರೆ ಅವರೊಟ್ಟಿಗೆ ಸಂಬಂಧ ಬೆಳೆಸಬೇಕು ಅಂತೆಲ್ಲ ಯಾವತ್ತೂ ಯೋಚನೆಯೂ ಸುಳಿದಿಲ್ಲ. ಇನ್ನೂ..... ಈಗಲ್ಲ...... ರಾಧ ಹುಟ್ಟುವ ಮುನ್ನ..... ಸಾಗರ ಪರಿಚಯವಾಗುವುದಕ್ಕೆ ಮೊದಲು......ಅಲ್ಲೆಲ್ಲೋ ಒಬ್ಬ ಅಪರಿಚಿತ ಕಂಡಾಗ ಪಟ್ಟಂತ ಇಷ್ಟವಾಗಿಬಿಟ್ಟರೆ...... ಅವನೊಡನೆ ಕಾಮಿಸಿದಂತೆ ಕಲ್ಪನೆ ಮೂಡುತ್ತಿತ್ತು......ಆ ಕಲ್ಪನೆ ಕೂಡ ನಿಜವಾಗಬೇಕೆಂಬ ಅನ್ನಿಸಿಕೆಯೇನೂ ಇರುತ್ತಿರಲಿಲ್ಲ.....ರಾಜೀವನೊಡನೆ ಮಲಗುವಾಗಲೂ ಆ ಅಪರಿಚಿತ ವ್ಯಕ್ತಿ ಸ್ಮೃತಿಪಟಲದಲ್ಲಿ ಮೂಡುತ್ತಿರಲಿಲ್ಲ. ಅದು ಸಹಜವಾಗಿ ಎಲ್ಲರಲ್ಲೂ ಮೂಡುವ ಭಾವನೆಗಳೇ ಹೌದು ಎಂದು ನಂಬಿದ್ದೆ. ಅಂತ ಯಾವ ಕಲ್ಪನೆ ಕೂಡ ರಾಮ್‌ ಬಗ್ಗೆ ನನಗಿದುವರೆಗೂ ಬಂದಿಲ್ಲ. ಆತನಿಗೆ ಬಂದಿರಬಹುದಾ? ಬಂದಿರಬಹುದು. ಬಂದಿದ್ದರೂ ಅದೇನೂ ತಪ್ಪಲ್ಲವಲ್ಲ. ಅವರೇ ಏನಾದರೂ ಆಸ್ಪತ್ರೆಯಲ್ಲಿ ಗುಲ್ಲೆಬ್ಬಿಸಲು ಸಹಕರಿಸಿಬಿಟ್ಟರಾ? ಗೆಳೆಯರ ಬಳಿ ಮಾತನಾಡುತ್ತಾ "ನಾನೂ ಅವ್ಳೂ ತುಂಬಾ ಕ್ಲೋಸು" ಅಂತೇಳಿ ಕಣ್ಣು ಹೊಡೆದುಬಿಟ್ಟರೂ ಸಾಕು.....ದೊಡ್ಡ ಸುದ್ದಿಯಾಗ್ತದೆ. ಆದರೆ ನನಗೆ ಗೊತ್ತಿರುವಂತೆ ರಾಮ್‌ ಅಂತಹ ಕೆಲಸ ಮಾಡುವವರಲ್ಲ. ಕಲ್ಪನೆಯಲ್ಲಿ ನನ್ನೊಡನೆ ಕಾಮಿಸಿದ್ದರೂ ಇರಬಹುದೇನೋ ಆದರೆ ಆ ಕಲ್ಪನೆ ನಿಜವಾಗಲಿ ಎಂಬುದ್ದೇಶ ಅವರಿಗೂ ಇದ್ದಿರಲಾರದು. ಮತ್ಯಾಕೆ ಜನರೀ ರೀತಿ ಸುಳ್ಳು ಸುಳ್ಳೇ ಸುದ್ದಿ ಹಬ್ಬಿಸುತ್ತಾರೆ? ನಾ ಸುಮಾಳೊಡನೆ ಹೋಗಿ ಕಾಫಿ ಕುಡಿದು ಹರಟೋದು ಎಷ್ಟು ಸಹಜವೋ ರಾಮ್‌ ಜೊತೆಗೆ ಹೋಗಿ ಕಾಫಿ ಕುಡಿದು ಹರಟೋದು ಕೂಡ ಅಷ್ಟೇ ಸಹಜ ಅಂತ ಇವರ್ಯಾಕೆ ಅರ್ಥೈಸಿಕೊಳ್ಳುವುದಿಲ್ಲ? ಕೆಲಸಕ್ಕೆ ಹೋಗಲೇ ಮನಸ್ಸು ಬಾರದಷ್ಟು ತಲೆ ನೋವು. ಕೆಲಸಕ್ಕೆ ಹೋಗಲಲ್ಲ ತಲೆ ನೋವು, ಕೆಲಸಕ್ಕೆ ಹೋದರೆ ಸೋನಿಯಾಳನ್ನು ಕಾಣಬೇಕಾಗುತ್ತದೆ ಎನ್ನುವ ಕಾರಣಕ್ಕೆ ತಲೆ ನೋವು. ಅವಳ ಮನದಲ್ಲೀಗ ನಾ ಕೆಟ್ಟವಳಾಗಿ ಹೋಗಿದ್ದೀನಿ. ಇವತ್ತಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ಮತ್ತೊಂದು ದಿನ ಅವಳನ್ನು ಎದುರಿಸಲೇಬೇಕಲ್ಲ ಎಂದು ಧೈರ್ಯ ತಂದುಕೊಳ್ಳುತ್ತಾ ಮೇಲೆದ್ದು ತಯಾರಾದೆ. 

ಆಸ್ಪತ್ರೆಗೆ ಹೋಗಿ ನನ್ನ ಬೆಳಗಿನ ವಾರ್ಡ್‌ ಕೆಲಸಗಳನ್ನೆಲ್ಲ ಮುಗಿಸಿ ಸೋನಿಯಾಳ ರೂಮಿನ ಬಳಿ ಹೋದೆ. ನಿನ್ನೆಯ ಮುನಿಸು ಇವತ್ತಿಗೂ ಮುಂದುವರೆದಿತ್ತು. ಶಶಿಯ ಕಡೆಗೆ ನೋಡಿದೆ. ಅವನ ಕಣ್ಣುಗಳಲ್ಲೂ ನಾನು ಚಿಕ್ಕವಳಾಗಿ, ಎಲ್ಲಾ ರೀತಿಯ ಅನುಮಾನಗಳಿಗೆ ಅರ್ಹಳಾದ ರೀತಿಯಲ್ಲಿ ಕಂಡು ಕಸಿವಿಸಿಯಾಯಿತು. ಕೊನೇಪಕ್ಷ ಅವನಿಗಾದರೂ ನಾ ಯಾಕೆ ಪರಶುನನ್ನು ಬಿಟ್ಟು ರಾಜೀವನನ್ನು ಮದುವೆಯಾದೆ ಎನ್ನುವುದರ್ಥವಾಗಿದೆ ಎಂದುಕೊಂಡಿದ್ದೆ. ನಾವು ನಂಬಿದ್ದೆಲ್ಲವೂ ಸುಳ್ಳೆಂದು ಸಾಬೀತಾಗುವವರೆಗಷ್ಟೇ ಅದು ಸತ್ಯ. ನಮ್ಮ ಮೂವರ ನಡುವೆ ಉಸಿರುಕಟ್ಟಿಸುವಂತಿದ್ದ ಮೌನಕ್ಕೆ ಪರಿಹಾರವೆಂಬಂತೆ ಅಂದು ಜಯಂತಿ ಮೇಡಂ ಎಂದಿಗಿಂತ ಮುಂಚಿತವಾಗಿಯೇ ರೌಂಡ್ಸಿಗೆ ಬಂದರು. ಮೇಡಂ ಆಗಮನದೊಂದಿಗೆ ಸ್ಮಶಾನ ಕಳೆಯನ್ನೊತ್ತುಕೊಂಡಿದ್ದ ಮೂವರ ಮುಖದಲ್ಲೂ ಕಪಟ ನಗು ವಿಜೃಂಭಿಸಿತು. 

"ಏನ್‌ ತೊಂದರೆ ಇಲ್ಲ. ಆರಾಮ್‌ ರೆಸ್ಟ್‌ ಮಾಡಿ. ಡಿಸ್ಚಾರ್ಜ್‌ ಮಾಡಿಸಿಕೊಂಡು ಹೋಗಮ್ಮ ಧರಣಿ" ಎಂದ್ಹೇಳಿ ಮೇಡಂ ಹೊರಟುಬಿಟ್ಟರು. ನಾನೆಲ್ಲಿ ಡಿಸ್ಚಾರ್ಜ್‌ ಬಗ್ಗೆ ಮಾತನಾಡಿಬಿಡುತ್ತೀನೋ ಎಂದು ಗಾಬರಿಗೊಳಗಾಗಿ "ನೀನ್‌ ಬೇಗ ಹೋಗಿ ಡಿಸ್ಚಾರ್ಜ್‌ ಮಾಡಿಸಿಕೊಂಡು ಬಾ ಶಶಿ. ನಮ್ಮ ಮನೆಯವರ ಬಗ್ಗೆ ನಮಗೇ ಗೊತ್ತಿಲ್ಲದ ಅನೇಕ ವಿಷಯಗಳು ಕಿವಿಗೆ ಬಿದ್ದು ತಲೆ ಹೋಳಾಗುವ ಮೊದಲು ಇಲ್ಲಿಂದ ತೊಲಗುವ" ಎಂದು ಸಿಟ್ಟಿನಿಂದ ಹೇಳಿದ್ದನ್ನು ಕೇಳಿ ನನಗೆ ನಿಜ್ಜ ನಗು ಬಂತು! 

ಏನೂ ಮಾತನಾಡದೆ ಹೊರಟುಹೋಗಿಬಿಡಬೇಕು ಎಂದುಕೊಂಡವಳಿಗೆ ಒಂಚೂರಾದರೂ ಪ್ರತಿಕ್ರಿಯೆ ನೀಡದೆ ಹೋಗುವುದು ಕಷ್ಟವೆನಿಸಿತು. ಸೋನಿಯಾಳ ಹತ್ತಿರಕ್ಕೆ ತೆರಳಿ ʻನೋಡು ಸೋನಿಯಾ. ಯಾರ್‌ ಏನ್‌ ಹೇಳಿದ್ದಾರೋ ನನಗೆ ಗೊತ್ತಿಲ್ಲ. ನನ್ನ ಕ್ರಿಯೆಗೆ ನಾ ಜವಾಬುದಾರಳೇ ಹೊರತು ಬೇರೆಯವರು ಮಾಡುವ ಅರ್ಥವಿಲ್ಲದ ಆರೋಪಗಳಿಗೆ ನಾ ತಲೆ ಕೊಡಲಾರೆ. ನನ್ನ ರಾಮ್‌ಪ್ರಸಾದ್‌ ಬಗ್ಗೆ ನೀ ಏನೇನು ಕೇಳಿದ್ದೀಯೋ ನನಗಂತೂ ಗೊತ್ತಿಲ್ಲ. ಅದನ್ನು ತಿಳಿಯುವ ಆಸಕ್ತಿಯೂ ನನಗಿಲ್ಲ. ರಾಮ್‌ಪ್ರಸಾದ್‌ ನಿನ್ನೆಯವರೆಗೂ ನನಗೆ ಒಳ್ಳೆ ಫ್ರೆಂಡು, ಇವತ್ತಿಗೂ...ನಾಳೆಗೂ ನನಗೆ ಒಳ್ಳೆ ಫ್ರೆಂಡ್‌ ಆಗೇ ಇರ್ತಾರೆ. ಸ್ನೇಹವನ್ನು ತಪ್ಪಾಗಿ ಅರ್ಥೈಸಿಕೊಳ್ಳುವವರಿಗೆಲ್ಲ ವಿವರಣೆ ನೀಡುತ್ತಾ ನನ್ನಮೂಲ್ಯ ಸಮಯ ವ್ಯರ್ಥ ಮಾಡುವುದು ನನ್ನಿಷ್ಟದ ಸಂಗತಿಯಲ್ಲ. ನಿನಗಿದೆಲ್ಲ ಹೇಳದೇ ಇದ್ದುಬಿಡಬಹುದಿತ್ತು. ನೀ ನನ್ನ ತಮ್ಮನ ಹೆಂಡತಿ ಎಂಬ ಭಾವವಷ್ಟೇ ನನ್ನಲ್ಲಿದ್ದಿದ್ದರೆ ಇದ್ಯಾವ ವಿವರಣೆಯನ್ನೂ ನಿನಗೆ ನೀಡುತ್ತಿರಲಿಲ್ಲ. ನೀ ನನ್ನ ಗೆಳತಿ ಅಂತ ನಂಬಿರೋಳು ನಾನು. ಹಂಗಾಗಿ ಇಷ್ಟು ಹೇಳಬೇಕಾಯ್ತು. ವದಂತಿಗಳನ್ನು ನಂಬುತ್ತೀಯೋ ಗೆಳತಿಯ ಮಾತನ್ನು ನಂಬುತ್ತೀಯೋ ನಿನಗೆ ಬಿಟ್ಟಿದ್ದುʼ ಎಂದ್ಹೇಳಿ ಹೊರಡುವವಳಿದ್ದೆ. 

"ಬೆಂಕಿ ಇಲ್ದೇ ಹೊಗೆಯಾಡುತ್ತಾ? ಅವರೇನೇನೋ ಹೇಳಿದರು ಅಂತ ನಂಬುವವಳಾ ನಾನು? ನೋಡಿದೆ ನಿಮ್ಮ ಎಫ್.ಬಿ ಪ್ರೊಫೈಲನ್ನು. ನೀವೂ ಒಮ್ಮೆ ನೋಡಿಕೊಳ್ಳಿ. ಅದ್ಯಾಕೆ ನೀವೂ ರಾಮ್‌ ಇರೋ ಅಷ್ಟೊಂದು ಫೋಟೋಗಳಿದ್ದಾವೆ ಅಲ್ಲಿ?" 

"ಸುಮ್ನಿರು ಸೋನಿಯಾ" ಶಶಿ ಗೋಗರೆದ. 

"ನಾನ್ಯಾಕೆ ಸುಮ್ಮನಿರಲಿ? ಅವರು ಗೆಳತಿ ಅಂತ ವಿವರಣೆ ಕೊಟ್ಟರಲ್ಲ. ಇದಕ್ಕೂ ವಿವರಣೆ ಕೊಡಲಿ" 

ʻನಾವಿಬ್ರೂ ತಬ್ಬಿ ನಿಂತಿರೋ, ಅಥವಾ ಕಿಸ್‌ ಮಾಡ್ತಿರೋ ಅಥವಾ ಸೆಕ್ಸ್‌ ಮಾಡ್ತಿರೋ ಫೋಟೋಗಳೇನಾದ್ರೂ ಇದ್ಯಾ ಅದರಲ್ಲಿ......ʼ 

"ಚಿ ಚಿ..... ನಿಮ್‌ ಬುದ್ಧಿ ಏನು ಅಂತ ನೀವಾಡೋ ಮಾತುಗಳಿಂದಾನೇ ಗೊತ್ತಾಗ್ತದೆ" ನನ್ನ ಮಾತಿಗೆ ದೇವರ ಕ್ಷಮೆ ಕೇಳುವಂತೆ ತಲೆ ತಗ್ಗಿಸಿ ಹೇಳಿದಳು. 

ʻಥ್ಯಾಂಕ್ಯುʼ ಎಂದ್ಹೇಳಿ ಹೊರಬಿದ್ದೆ. ಇವಳನ್ನಾ ನಾ ನನ್ನ ಗೆಳತಿ ಅಂದುಕೊಂಡು ವಿವರಣೆ ಕೊಟ್ಟಿದ್ದು ಎಂದು ನನ್ನ ಮೇಲೇ ಜಿಗುಪ್ಸೆಯಾಯಿತು. ಎಫ್.ಬೀಲಿ ನಾನೂ ರಾಮ್‌ ಒಟ್ಟಿಗೇ ಟ್ಯಾಗ್‌ ಆಗಿರೋ ಒಂದತ್ತು ಫೋಟೋಗಳಿರಬೇಕು. ಆ ಹತ್ತರಲ್ಲಿ ನಾವಿಬ್ಬರೇ ನಿಂತಿರೋ ಫೋಟೋ ಒಂದೆರಡೋ ಮೂರೋ ಇರಬೇಕಷ್ಟೇ. ಅಷ್ಟಕ್ಕೇ ನಮ್ಮಿಬ್ಬರ ನಡುವೆ ಸಂಬಂಧವಾ! ನಾನೂ ಸುಮ ಇಬ್ಬರೇ ಇರೋ ಫೋಟೋಗಳು ಐವತ್ತರ ಮೇಲಿದೆ.... ನಮ್ಮಿಬ್ಬರ ನಡುವೆ ಸಂಬಂಧವಿದೆಯಾ? ನಾನೂ ನಮ್‌ ಹೆಚ್.ಒ.ಡಿ ಸರ್ರು ಜೊತೆಲಿರೋ ಫೋಟೋಗಳು ಒಂದತ್ತಾದರೂ ಇರಬೇಕು...... ನಮ್ಮಿಬ್ಬರ ನಡುವೆ ಸಂಬಂಧವಿದೆಯಾ? ನಮ್ಮ ಮನಸ್ಸಲ್ಲೇನಿರುತ್ತೋ ಅದೇ ಕಣ್ಣ ಮುಂದೆ ಕಾಣಿಸುತ್ತೆ. ನಮ್ಮ ಮನಸ್ಸಲ್ಲಿರುವ ಕಲ್ಪನೆಗೆ ಪೂರಕವಾದ ಸಾಕ್ಷ್ಯಗಳನ್ನು ನಮ್ಮ ಕಣ್ಣುಗಳು ಹುಡುಕುತ್ತವೆ. ನಿನ್ನೆ ಇಲ್ಲಿ ಮಾತನಾಡಿ ಸೋನಿಯಾಳ ಮನಸ್ಸು ಕೆಡಿಸಿದ ಅದೇ ನರ್ಸುಗಳು "ನಿಂಗೊತ್ತಾ? ನಮ್ ಧರಣಿ ಡಾಕ್ಟ್ರು ಲೆಸ್ಬಿಯನ್ನು" ಅಂತ ಮಾತಾಡಿಕೊಂಡಿದ್ದರೆ "ಅದ್ಯಾಕೆ ನೀವೂ ಸುಮಾ ಜೊತೇಲಿರೋ, ಕೈ ಕೈ ಹಿಡಿದು ನಿಂತಿರೋ ಅಷ್ಟೊಂದು ಫೋಟೋಗಳಿದ್ದಾವೆ ಎಫ್.ಬೀಲಿ" ಅನ್ನೋ ಪ್ರಶ್ನೆಯನ್ನು ಇವತ್ತು ಸೋನಿಯಾ ಕೇಳಿರುತ್ತಿದ್ದಳು. ನಾ ರಾಮ್‌ ಜೊತೆ ಸ್ನೇಹದಿಂದ ನಿಂತು ತೆಗೆಸಿಕೊಂಡಿದ್ದ ಫೋಟೋಗಳಲ್ಲಾಗ ಯಾವ ದೋಷವೂ ಇರುತ್ತಿರಲಿಲ್ಲ! 

ಈ ವಿಷಯ ಇನ್ನೂ ಎಲ್ಲೆಲ್ಲಿಗೆ ಮುಟ್ತದೋ.... ಭಯವಾಯಿತು..... ಇವೆಲ್ಲವನ್ನೂ ನಾ ಹೇಗೆ ಎದುರಿಸಬಲ್ಲೆ ಎಂಬ ಕಾರಣಕ್ಕಲ್ಲ..... ಮಗಳ ಕಣ್ಣಿನಲ್ಲಿ ನಾ ಚಿಕ್ಕವಳಾಗಿಬಿಡ್ತೇನಾ ಅನ್ನುವ ಕಾರಣಕ್ಕೆ ಭಯವಾಯಿತು. ತಪ್ಪೇ ಮಾಡದೇ ಕೂಡ ಭಯ ಪಡುವ ಅವಶ್ಯಕತೆಯಾದರೂ ಏನಿದೆ ಎಂಬ ಸುಳ್ಳು ಸುಳ್ಳೇ ಸಮರ್ಥನೆಗಿಳಿದ ಮನಸ್ಸನ್ನು ನೋಡಿ ನಕ್ಕಿದ್ದು ಸಾಗರನ ನೆನಪುಗಳು. 

ಸಂಜೆ ಅಮ್ಮನ ಮನೆಗೆ ಹೋಗಿ ಸೋನಿಯಾಳನ್ನು ನೆಪಕ್ಕೆ ಮಾತನಾಡಿಸಿಕೊಂಡು ರಾಧಳನ್ನು ಕರೆದುಕೊಂಡು ಮನೆಗೆ ಹೋಗಿಬಿಟ್ಟೆ. ರಾಜೀವ ಅಪರೂಪಕ್ಕೆ ಬೇಗನೆ ಮನೆಗೆ ಬಂದರು. ನಂಗ್ಯಾವತ್ತು ಇವರು ನಿಧಾನಕ್ಕೆ ಬರಲಿ ಎಂದಿರ್ತದೋ ಅವತ್ತೇ ಬೇಗ ಬಂದು ವಕ್ಕರಿಸಿಕೊಳ್ಳುತ್ತಾರೆ. 

"ಏನ್‌ ಬೇಗ ಬಂದುಬಿಟ್ಟಿದ್ದಿ ಅಮ್ಮನ ಮನೆಯಿಂದ" ಎಂದವರು ಕೇಳಿದ್ದು ಸುಮ್ಮನೆ ಲೋಕಾಭಿರಾಮವಾಗಿ ಒಂದಷ್ಟು ಮಾತು ಪ್ರಾರಂಭಿಸುವ ಸಲುವಾಗಷ್ಟೇ. 

ʻಯಾಕ್‌ ಬರಬಾರದಿತ್ತಾ? ನೀವ್‌ ನಿಮ್‌ ಬಳಗ ಕಟ್ಕಂಡ್‌ ಕುಡೀತಾ ಕೂರ್ಬೇಕಿತ್ತೇನೋ.... ಹೋಗ್‌ ಬಿಡ್ಲಾ ವಾಪಸ್ಸುʼ ಎಂದೆಲ್ಲ ರೇಗಿಬಿಡುವ ಅನಿವಾರ್ಯತೆ ಖಂಡಿತ ಇರಲಿಲ್ಲ. 

"ನಾ ಈಗ ಅಂತದ್ದು ಕೇಳಬಾರದ್ದೇನು ಕೇಳಿದೆ? ಸುಮ್ನೆ ಫಾರ್ಮ್ಯಾಲಿಟಿಗೆ ಕೇಳಿದ್ನಪ್ಪ. ನಿಂಗ್ಯಾವ ಕಾರಣಕ್ಕೋ ಮೂಡು ಸರಿಯಿಲ್ಲ ಅಂದ್ರೆ ನನ್ನ ಮೇಲ್ಯಾಕೆ ಸಿಟ್ಟಾಗ್ತಿ" ಎಂದವರು ಕೇಳಿದ್ದರಲ್ಲಿ ತಪ್ಪೇನಿರಲಿಲ್ಲ. ಸುಮ್ಮನಿದ್ದರಾಗಿರೋದು. ಸುಮ್ಮನಿರಲಿಲ್ಲ. 

ʻನಾನೂ ಮೂರೊತ್ತೂ ನಿಮಗೆ ಅದನ್ನೇ ಬಡ್ಕೊಳ್ಳೋದು. ನಿಮಗೆ ಓದಿಗೆ ತಕ್ಕ ಕೆಲಸ ಸಿಗಲಿಲ್ಲ ಅಂದರೆ ಅದನ್ನ ತಂದು ಮನೆಯಲ್ಯಾಕೆ ನಮ್ಮ ಮೇಲೆ ತೋರಿಸ್ಕೋತೀರ ಅಂತʼ 

"ಓ! ನನಗೆ ಬುದ್ಧಿ ಕಲಿಸುವ ಆಟವೋ ಇದು. ಇರಲಿ ಬಿಡವ್ವ. ನೀನೇ ನೋಡ್ತಿದ್ದೀಯಲ್ಲ. ಒಂದಷ್ಟು ದಿನದಿಂದ ನಾನೂ ಬದಲಾಗಿದ್ದೀನಿ ಅಂತ ನನಗೇ ಅನ್ನಿಸ್ತಿದೆ. ನಿನಗೂ ಅನ್ನಿಸಿರಬೇಕಲ್ವ" ಅರೆರೆ ಈ ಯಪ್ಪ ಯಾವಾಗಿಂದ ಇಷ್ಟೆಲ್ಲ ತಾಳ್ಮೆ ತಂದುಕೊಂಡುಬಿಟ್ಟರು. ಸಿಟ್ಟೇ ಆಗ್ತಿಲ್ಲವಲ್ಲ. ಸಿಟ್ಟಾಗಿ ಜಗಳ ಜೋರಾಗಿ ಸೋನಿಯಾಳ ಚುಚ್ಚು ಮಾತುಗಳು, ಶಶಿಯ ಅನುಮಾನವೆಲ್ಲವೂ ಮನಸ್ಸಿಂದ ಮರೆಯಾಗಿಬಿಡಲಿ ಎಂಬ ಕಾರಣಕ್ಕೆ ನಾ ಹಿಂಗೆಲ್ಲ ಮಾತನಾಡಿದರೆ ಇಷ್ಟೆಲ್ಲ ತಾಳ್ಮೆ ತಂದುಕೊಂಡು ಮಾತನಾಡಿಬಿಟ್ಟರಲ್ಲ. ನನ್ನ ಉದ್ದಿಶ್ಯವನ್ನೇ ಹಾಳುಗೆಡವಿಬಿಟ್ಟರಲ್ಲ. 

ʻಹೋಗ್ಲಿ ಬಿಡಿ. ಏನೋ ಟೆನ್ಶನ್ನು. ಮಾತನಾಡಿಬಿಟ್ಟೆʼ 

"ಹೋಗ್ಲಿ ಬಿಡು" ಎಂದವರು ರಾಧಳೊಡನೆ ಆಟವಾಡಲು ತೊಡಗಿಕೊಂಡರು. ತಲೆ ಸಿಡಿಯುತ್ತಿತ್ತು. ತಲೆ ಸಿಡಿಯುವಿಕೆಗೆ ಅದು ಔಷಧಿಯಲ್ಲವೆಂದು ಗೊತ್ತಿದ್ದರೂ ಹೋಗಿ ಒಂದು ಸ್ಟ್ರಾಂಗ್‌ ಕಾಫಿ ಮಾಡಿಕೊಂಡು ಕುಡಿದೆ. ನೆಪಕ್ಕೆ ಒಂದಷ್ಟು ಕಮ್ಮಿಯಾಯಿತು. ʻರಾತ್ರಿ ಅಡುಗೆ ಮಾಡೋಕೆ ಮೂಡಿಲ್ಲ. ಏನಾದ್ರೂ ಪಾರ್ಸಲ್‌ ತಕ್ಕೊಂಡು ಬನ್ನಿʼ ಎಂದ್ಹೇಳಿ ರೂಮಿಗೋಗಿ ಅಡ್ಡಾದೆ. ಕಣ್ಣು ಮುಚ್ಚುವುದಕ್ಕೂ ಭಯವಾಗುತ್ತಿತ್ತು. ಕಣ್ಣು ಮುಚ್ಚಿದರೆ ಕಣ್ಣ ತುಂಬೆಲ್ಲ ಈ ವಿಷಯ ಎಲ್ಲೆಲ್ಲ ಹೋಗಿಬಿಡಬಹುದು ಎಂಬ ಭಯದ ಹತ್ತಾರು ರೂಪಗಳೇ ಕಣ್ಣ ಮುಂದೆ ಸುಳಿದಾಡ ಹತ್ತಿದವು. ಭಯದ ವಿಕಾರತೆ ಹೆದರಿಸಿತು. ರಾಮ್‌ ವಿಷಯದಲ್ಲೇನೋ ಹುರುಳಿಲ್ಲ, ಹೌದು. ಸಾಗರನ ವಿಷಯ ಮನೆಯಲ್ಲಿ ಗೊತ್ತಾಗಿಬಿಟ್ಟರೆ? ಗೊತ್ತಾಗುವ ಸಾಧ್ಯತೆಗಳೇನೋ ಇಲ್ಲ. ಸಾಗರ ನನ್ನಿಂದ ಪೂರ್ತಿ ದೂರಾಗಿಬಿಟ್ಟಿದ್ದಾನೆ. ಮೆಸೇಜ್‌ ಗಿಸೇಜೂ ಮಾಡಬೇಡ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾನೆ. ಆದರೂ ಯಾವ ರೂಪದಲ್ಲೋ ವಿಷಯ ತಿಳಿದುಬಿಟ್ಟರೆ ಎಂಬ ಭಯ. ಮೊಬೈಲ್‌ ಕೈಗೆತ್ತಿಕೊಂಡು ಮೆಸೆಂಜರ್‌ ಓಪನ್‌ ಮಾಡಿ ಸಾಗರನೊಡನೆ ಮಾಡಿದ ಯಾವುದಾದರೂ ಚಾಟ್‌ ಹಂಗೇ ಉಳಿದುಬಿಟ್ಟಿದೆಯಾ ನೋಡಿದೆ. ಯಾವುದೂ ಇರಲಿಲ್ಲ. ವಾಟ್ಸಪ್‌ ತೆರೆದು ನೋಡಿದೆ. ಯಾವುದೂ ಇರಲಿಲ್ಲ. ಯಾವತ್ತಿಗೂ ಚಾಟಿಂಗಿಗೆ ಬಳಸದ ಟೆಲಿಗ್ರಾಮ್‌ ತೆರೆದು ನೋಡಿದೆ. ಅಲ್ಲಿ ಸಾಗರನ ಹೆಸರೇ ಕಾಣಿಸಲಿಲ್ಲ. ಅವನಿದನ್ನು ಬಳಸುತ್ತಿಲ್ಲವೋ ಏನೋ. ಯಾವುದಕ್ಕೂ ಇರಲಿ ಅಂತ ಒಮ್ಮೆ ಜಿಮೇಲ್‌ ಕೂಡ ತೆರೆದು ನೋಡಿದೆ. ಅವನ್ಯಾವತ್ತೋ ಕಳುಹಿಸಿದ್ದ ಒಂದು ಲೇಖನದ ಕೊಂಡಿಯಿತ್ತು. ಮೆಡಿಕಲ್ಲಿಗೆ ಸಂಬಂಧಪಟ್ಟ ಲೇಖನದ ಕೊಂಡಿಯಿದ್ದ ಮಿಂಚೆ. ಯಾಕೆ ಬೇಕು ಸಹವಾಸ ಅಂತ ಅದನ್ನೂ ಡಿಲೀಟ್‌ ಮಾಡಿದ ಮೇಲೆ ಮನಸ್ಸು ಸ್ವಲ್ಪ ತಹಬದಿಗೆ ಬಂದಂತಾಯಿತು. ಪೂರ್ಣವಾಗೇನಲ್ಲ. ರಾಮ್‌ ಜೊತೆ ಮಾಡಿರೋ ಚಾಟ್‌ ಯಾವುದಾದರೂ ಇದೆಯಾ ನೋಡಿದೆ. ಅಲ್ಲೊಂದಿಲ್ಲೊಂದಿತ್ತು. ತುಂಬಾ ಸಾಧಾರಣವಾದ ಮಾತುಕತೆಗಳಿದ್ದ ಮೆಸೇಜುಗಳು. ಡಿಲೀಟ್‌ ಮಾಡುವುದು ಬೇಡ ಇವುಗಳನ್ನು ಎಂದುಕೊಂಡು ಸುಮ್ಮನಾದೆ. ಕಾಲ್‌ ಲಾಗ್‌ ತೆರೆದೆ. ರಾಮ್‌ ಜೊತೆಗೆ ಗರಿಷ್ಠ ಮಾತನಾಡಿರುವುದು ಮೂರು ನಿಮಿಷಗಳ ಕಾಲ. ಮಗಳು ಆಸ್ಪತ್ರೆಯಲ್ಲಿದ್ದ ದಿನಗಳಲ್ಲಿ ನಡೆದ ಮಾತುಕತೆಯದು. ಅದು ಬಿಟ್ಟರೆ ಮಿಕ್ಕೆಲ್ಲ ಕರೆಗಳು ಇಪ್ಪತ್ತರಿಂದ ನಲವತ್ತು ಸೆಕೆಂಡುಗಳ ಕಾಲವಿತ್ತು. ವಾರಕ್ಕೆರಡೋ ಮೂರೋ ಕರೆಗಳು. ಬಹುತೇಕ ಕರೆಗಳು ʻಎಲ್ಲಿದ್ದೀರಾ... ಬರ್ತೀರಾ ಕಾಫಿಗೆ..... ಬರ್ತೀರಾ ಊಟಕ್ಕೆʼಯಲ್ಲಿ ಮುಕ್ತಾಯವಾಗುತ್ತಿದ್ದವು. 

ನಾನ್ಯಾಕೆ ಇಷ್ಟೆಲ್ಲ ತಲೆಕೆಡಿಸಿಕೊಳ್ಳುತ್ತಿದ್ದೀನಿ. ನನ್ನಲ್ಲೇ ಏನೋ ಉಳುಕಿರುವವಳ ಹಾಗೆ! ಮುಂದೆ ನಡೆಯುವ ಯುದ್ಧಕ್ಕೆ ಶಸ್ತ್ರಭ್ಯಾಸ ಮಾಡಿದಂತೆ ಮಾಡುತ್ತಿದ್ದೀನಲ್ಲ ಯಾಕೆ? ಇವತ್ತಲ್ಲ ನಾಳೆ ಸೋನಿಯಾಗೆ ಶಶಿಗೆ ನಿಜ ವಿಷಯ ಗೊತ್ತಾಗೇ ಆಗುತ್ತದೆ. ಅಲ್ಲಿಗೆ ಎಲ್ಲ ಸರಿ ಹೋಗ್ತದಲ್ಲ. ಸರಿ ಹೋಗ್ತದಾ? 

"ಏನ್‌ ತರಲಿ ಊಟಕ್ಕೆ?" ರಾಜೀವನ ಮಾತುಗಳು ವಾಸ್ತವಕ್ಕೆ ನನ್ನನ್ನು ಎಳೆದು ತಂದವು. 

ʻಹೊರಗಡೆ ಊಟವ್ಯಾಕೆ? ಮಗಳ ಹೊಟ್ಟೆ ಕೆಟ್ಟರೆ. ಏನಾದ್ರೂ ಸಾಮಾನು ತಕೊಂಡ್‌ ಬನ್ನಿ. ಇಲ್ಲೇ ಮಾಡುವʼ 

"ಒಳ್ಳೇ ಕತೆ ಕಣೇ ನಿಂದು. ನೀನೇ ಹೇಳಿದ್ದಲ್ವ ಮುಕ್ಕಾಲು ಘಂಟೆ ಮುಂಚೆ. ಅಡುಗೆ ಮಾಡುವ ಮನಸ್ಸಿಲ್ಲ. ಏನಾದ್ರೂ ತಕೊಂಡು ಬನ್ನಿ ಅಂತ. ಈಗ ನೋಡಿದ್ರೆ ಹಿಂಗ್‌ ಮಾತಾಡ್ತಿ" 

ʻಓ! ಹೌದಲ್ಲ. ಮರೆತಿದ್ದೆʼ 

"ಏನಾಯ್ತು ನಿಂಗಿವತ್ತು" 

ʻಏನಿಲ್ಲ ಬಿಡಿ. ಇನ್ನೇನ್‌ ತರ್ತೀರಾ? ಒಂದೆರಡ್‌ ಬಿರಿಯಾನಿ ಒಂದಷ್ಟು ಕಬಾಬು ತಕೊಂಡ್‌ ಬನ್ನಿ ಸಾಕುʼ 

"ಮೂಡಿಲ್ಲದಿದ್ರೂ ನಾನ್‌ ವೆಜ್‌ ಬೇಕೇ ಬೇಕು ಅನ್ನು" ನಕ್ಕರು. 

ʻಮೂಡಿಲ್ಲದಿದ್ದಾಗ....ಮನಸ್ಸು ಬೇಸರದಲ್ಲಿದ್ದಾಗ್ಲೇ ಹೊಟ್ಟೆ ತುಂಬ ಬಿರಿಯಾನಿ ತಿಂದು ತೇಗಬೇಕು. ಇರೋ ಪರೋ ರಕ್ತವೆಲ್ಲ ಹೊಟ್ಟೆ ಕಡೆಗೆ ಹರಿದು ಮೆದುಳು ಶಾಂತವಾಗ್ತದೆʼ ನಾನೂ ನಕ್ಕೆ. 

"ನಕ್ಕಳಾ ಮಹಾರಾಣಿ. ಮಗಳನ್ನೂ ಕರ್ಕೊಂಡು ಹೋಗ್ಲಾ ಹೆಂಗೆ" 

ʻಅವಳ್ಯಾಕೆ ಈ ರಾತ್ರೀಲಿ. ಇಲ್ಲೇ ನನ್ನ ಜೊತೆ ಇರಲಿ ಬಿಡಿʼ 

ರಾಜೀವ್‌ ಬರುವವರೆಗೂ ಮತ್ಯಾವ ಯೋಚನೆಗೂ ಬಲಿಯಾಗದಂತೆ ಮಗಳು ನೋಡಿಕೊಂಡಳು. ಒಂದು ಕ್ಷಣ ಪುರುಸೊತ್ತು ಕೊಡದಂತೆ ಆಟವಾಡಿಸಿದಳು. ರಾಜೀವ್‌ ನಿಧಾನಕ್ಕೇ ಬರಲಪ್ಪ ಎಂದು ಬೇಡಿಕೊಳ್ಳುವಂತಾಯಿತು. 

ಊಟ ಮುಗಿಸಿ, ರಾಧಳನ್ನು ಮಲಗಿಸಿ, ಇದ್ದೆರಡು ತಟ್ಟೆ ಒಂದು ಸೌಟನ್ನು ತೊಳೆದಿಟ್ಟು ಬಂದು ಮಲಗಿದೆ. 

"ಮಗಳನ್ನು ಗೋಡೆಯ ಪಕ್ಕಕ್ಕೆ ಮಲಗಿಸಿ ಇತ್ತ ಬಾ" ಎಂದರು ರಾಜೀವ್.‌ 

ಮಲಗಿದ ಜಾಗದಿಂದಲೇ ಮುಲುಕುತ್ತಾ ʻಬೇಡ ರೀ. ಮೂಡ್‌ ಇಲ್ಲ ಇವತ್ತುʼ 

"ಪಕ್ಕದಲ್ಲಿ ಬಾ ಅಂದ ತಕ್ಷಣ ಅದು ಸೆಕ್ಸಿಗೇ ಅಂತ ಯಾಕ್‌ ಅಂದ್ಕೋತಿ? ಬಾ ಇಲ್ಲಿ" ಎಂದರು. ಬಂದೆ. ಅವರ ಎಡ ತೋಳನ್ನು ನನಗೆ ದಿಂಬಾಗಿಸಿ ತಬ್ಬಿಕೊಂಡರು. "ಏನಾಯ್ತು ಡಾರ್ಲಿಂಗ್?‌ ಅಮ್ಮ ಏನಾದ್ರೂ ಹೇಳಿದ್ರಾ ಹೆಂಗೆ?" ಕಳಕಳಿಯಿಂದ ಕೇಳಿದರು. 

ʻಇಲ್ಲ ರೀ. ಅಮ್ಮ ಏನೂ ಹೇಳಲಿಲ್ಲ. ನಿಮ್ಮನೊಂದು ಮಾತು ಕೇಳಲಾ?ʼ 

"ಕೇಳು" 

ʻನೀವು ನಿಮ್ಮ ಬ್ಯುಸಿನೆಸ್‌ ಶುರು ಮಾಡುವವರೆಗೆ ಮಗಳನ್ನು ಇಲ್ಲೇ ನೋಡಿಕೊಂಡಿರಲು ಸಾಧ್ಯವೇ? ಬೆಳಿಗ್ಗೆ ಮಧ್ಯಾಹ್ನಕ್ಕೆಲ್ಲ ಅಡುಗೆ ಮಾಡಿಟ್ಟಿರ್ತೀನಿ ಬೇಕಿದ್ರೆʼ 

"ಅಯ್ಯೋ ಪೂರ್ತಿ ದಿನ ಮಗಳನ್ನು ನೋಡಿಕೊಳ್ಳೋವಷ್ಟು ತಾಳ್ಮೆ ನನಗಿದೆ ಅನ್ನಿಸೋಲ್ಲ ನನಗೆ. ಜೊತೆಗೆ ಇವಳಿಗೆ ತಿನ್ನಿಸೋದೆಲ್ಲ ಅಭ್ಯಾಸವಿಲ್ಲವಲ್ಲ ನನಗೆ" 

ʻಹು. ಹೌದಲ್ಲ. ಹೋಗ್ಲಿ ಬೆಳಿಗ್ಗೆ ತಿಂಡಿ ತಿನ್ನಿಸಿ ಆಮೇಲೆ ನೀವೇ ಇವಳನ್ನು ಅಮ್ಮನ ಮನೆಗೆ ಬಿಟ್ಟು ಬಂದುಬಿಡಿ. ಮತ್ತೆ ಸಂಜೆ ಹೋಗಿ ಕರೆದುಕೊಂಡು ಬಂದರಾಗದಾ?ʼ 

"ಯಾಕೆ? ನಿಮ್ಮಮ್ಮ ಏನಾದ್ರೂ ಆಡ್ಕೊಂಡ್ರಾ? ಅಳಿಯನಾದೋನು ಸುಮ್ಮನೆ ಮನೆಯಲ್ಲಿ ಬಿಟ್ಟಿಯಾಗಿ ಕುಳಿತಿರ್ತಾನೆ ಅಂತ" 

ʻಅಂತದ್ದೇನಿಲ್ಲ ರೀʼ 

"ಮತ್ತಿನ್ಯಾಕೆ ಈ ರೀತಿ ಹೇಳ್ತಿದ್ದಿ? ಮುಂಚೆಯೆಲ್ಲ ನಾ ಮನೆಗೆ ಬರೋದೇ ಇಲ್ಲ. ಬಂದರೂ ಐದತ್ತು ನಿಮಿಷಕ್ಕೆ ಹೊರಟುಬಿಡ್ತೀನಿ ಅಂತ ನೀನೇ ಕಂಪ್ಲೇಂಟ್‌ ಹೇಳ್ತಿದ್ದೆ!" 

ಯಾವತ್ಯಾವತ್ತೋ ಯಾವುದ್ಯಾವುದೋ ಸಂದರ್ಭದಲ್ಲಿ ಆಡಿದ ಮಾತುಗಳು ಈ ರೀತಿಯಾಗೆಲ್ಲ ತಿರುಗಿ ಬಂದು ಹೊಡೆದು ಬಡಿದು ಮಾಡ್ತವೆ ಅಂತ ಗೊತ್ತಿದ್ದಿದ್ದರೆ ಆ ಯಾವ ಮಾತುಗಳನ್ನೂ ನಾ ಆಡುವ ಸಾಹಸ ಮಾಡುತ್ತಿರಲಿಲ್ಲ. 

ʻಅವತ್ತಿಗೆ ಹಂಗ್‌ ಹೇಳಿದ್ದೌದು. ಇವತ್ತಿಗೂ ಅದೇ ಅನ್ವಯಿಸಬೇಕು ಅಂತೇನಿಲ್ಲವಲ್ಲ. ನಾನ್ಯಾಕೆ ಹೇಳ್ತೀನಿ ಅಂದ್ರೆ ಅಮ್ಮನಿಗೆ ರಾಧಳನ್ನು ನೋಡಿಕೊಳ್ಳಬೇಕು. ಜೊತೆಗೆ ಈಗ ಸೋನಿಯಾಳನ್ನೂ ನೋಡಿಕೊಳ್ಳಬೇಕು. ಅವಳೆಚ್ಚು ಕಮ್ಮಿ ಇನ್ನೊಂದು ತಿಂಗಳು ಮನೆಯಲ್ಲೇ ಇರ್ತಾಳೆ. ಇದರ ಜೊತೆಗೆ ನೀವೂ ಇದ್ದುಬಿಟ್ಟರೆ ಅಳಿಯನನ್ನೂ ನೋಡಿಕೊಳ್ಳಬೇಕು.... ಅಡುಗೆಯಲ್ಲಿ ಹೆಚ್ಚು ಕಮ್ಮಿ ಆಗದಂತೆ ನೋಡಿಕೊಳ್ಳಬೇಕಲ್ಲ..... ಅದಕ್ಕೇ ಹೇಳಿದೆʼ 

"ಚೆನ್ನಾಗ್‌ ಹೇಳ್ದೆ. ನಿಮ್ಮಮ್ಮ ನಂಗೇನೂ ಅಷ್ಟು ದೊಡ್ಡ ಮಟ್ಟಕ್ಕೆಲ್ಲ ಅಳಿಯೋಪಚಾರ ಮಾಡೋರಲ್ಲ ಕಣಪ್ಪ! ಜೊತೆಗೆ ನಾನಿದ್ರೆ ಅವರಿಗೆ ಹೆಚ್ಚು ಉಪಯೋಗ ಈಗ. ಮಗಳನ್ನು ನಾನು ನೋಡಿಕೊಳ್ತೀನಿ. ಅವರು ಅವರ ಸೊಸೆಯ ಕುಶಲೋಪಚಾರ ಮಾಡಿಕೊಳ್ಳಬಹುದು" ಎಂದರು. ಈ ಸಮರ್ಥನೆಗೆ ಬದಲು ಹೇಳಲು ನನ್ನಲ್ಲಿ ಮತ್ಯಾವ ಉಪಾಯವೂ ಇರಲಿಲ್ಲ. ಸರಿಯೆಂಬಂತೆ ತಲೆಯಾಡಿಸಿದಂತೆ. ಕಣ್ಣೆವೆಗಳು ಮುಚ್ಚುವವರೆಗೂ ʻನೋಡ್ರೀ ಸೋನಿಯಾ ಈ ರೀತಿಯೆಲ್ಲ ಮಾತನಾಡಿಬಿಟ್ಟಳುʼ ಎಂದು ನಡೆದುದೆಲ್ಲವನ್ನೂ ಹೇಳುವ ಮನಸ್ಸಾಗುತ್ತಲೇ ಇತ್ತು. ಯಾವುದೋ ಅಗೋಚರ ಶಕ್ತಿಯ ಪ್ರಭಾವ ಅಂತ ಜನರು ಆಗಾಗ ಉದಹರಿಸುತ್ತಾರಲ್ಲ, ಅಂತಹ ಅಗೋಚರ ಶಕ್ತಿಯ ಪ್ರಭಾವ ನನ್ನ ಮೇಲಾಗಿತ್ತವತ್ತು. ಆ ವಿಷಯವಾಗಿ ರಾಜೀವನಿಗೆ ಏನನ್ನೂ ಹೇಳಲೋಗಲಿಲ್ಲ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment