Aug 8, 2020

ಒಂದು ಬೊಗಸೆ ಪ್ರೀತಿ - 74

“ಹೇಳಿದ್ನಪ್ಪ. ಬರಲಿಲ್ಲ ನಿಮ್ಮಮ್ಮ” ಮೂರು ಪದ ಜೊತೆಗೂಡಿಸಲು ಮೂರು ನಿಮಿಷದಷ್ಟು ಸಮಯ ತೆಗೆದುಕೊಂಡು ರಾಮೇಗೌಡ ಅಂಕಲ್‌ ಹೇಳುವಾಗ ಆಸ್ಪತ್ರೆಯ ರೂಮಿನೊಳಗಿದ್ದವರೆಲ್ಲರ ಕಣ್ಣಲ್ಲಿ ನೀರಾಡಿತ್ತು. ಸೋನಿಯಾಳನ್ನೊಬ್ಬಳನ್ನ ಹೊರತುಪಡಿಸಿ. 

"ಆ ಪಾಪಿ ಪಿಂಡ ಹೋದ್ರೆ ಹೋಗ್ಲಿ ಬಿಡಿ" ಅಂದಿರಬೇಕಲ್ಲ ಎಂದು ವ್ಯಂಗ್ಯದಿಂದ ಕೇಳಿದ್ದಕ್ಕೆ ಅಂಕಲ್‌ ಪ್ರತಿಯಾಡಲಿಲ್ಲ. ಸೋನಿಯಾಳ ವ್ಯಂಗ್ಯದಲ್ಲಿ ಸತ್ಯವಿದ್ದಿರಲೇಬೇಕು. ಅಲ್ಲ, ತೀರ ತಾಯಿ ಆದವಳಿಗೆ ಇಷ್ಟರಮಟ್ಟಿಗೆ ದ್ವೇಷ ಇರೋದಕ್ಕಾದರೂ ಹೇಗೆ ಸಾಧ್ಯ? ಮಗಳೂ ತಾಯಿಯಾಗುವುದರಲ್ಲಿದ್ದಾಳೆ. ಅದೇನೋ ರಕ್ತ ಹೋಗ್ತಿದ್ಯಂತೆ. ಅಬಾರ್ಷನ್‌ ಆದರೂ ಆಗಿಬಿಡಬಹುದು. ಮಗಳೂ ಅಂತ ಬೇಡ, ಗೊತ್ತಿರೋ ಒಬ್ಬ ಹೆಣ್ಣುಮಗಳು ಅಂತಾದರೂ ಮನ ಕರಗಲಾರದಾ? ಕರಗಬಾರದಾ? ಸೋನಿಯಾಳ ಕಣ್ಣಲ್ಲಿ ಮೂಡದ ಕಣ್ಣೀರು ಮುಂದಿನ ದಿನಗಳಲ್ಲಿ ಅವಳು ಅವರಮ್ಮನ ಜೊತೆ ನಡೆದುಕೊಳ್ಳುವ ರೀತಿಯನ್ನು ವಿವರಿಸುತ್ತಿತ್ತು. 

ಅಂಕಲ್‌ ಮತ್ತು ಸೋನಿಯಾಳನ್ನು ಮಾತನಾಡಿಕೊಳ್ಳಲು ಬಿಟ್ಟು ನಾನೂ, ಶಶಿ, ಅಪ್ಪ, ಅಮ್ಮ ಹೊರಬಂದೆವು. ಮೌನ ಅಸಹನೀಯವಾಗಿತ್ತು. ಮೌನ ಮುರಿಯುತ್ತ ಅಮ್ಮ "ರಾತ್ರಿ ನಾನೇ ಉಳಿದುಕೊಳ್ಳಲಾ ಇಲ್ಲಿ?" ಎಂದು ಕೇಳಿದರು. 

"ಏನ್‌ ಬೇಡ. ನಾನೇ ಇರ್ತೀನಿ ಬಿಡಿ" ಎಂದ ಶಶಿ. 

"ಹಂಗಲ್ವೋ.... ನಾವ್ಯಾರಾದ್ರೂ ಹೆಂಗಸ್ರು ಇದ್ರೆ ಉತ್ತಮ ಅಲ್ವ" 

"ಯಾಕ್‌ ಗಂಡಸ್ರು ಇಂಥ ವಿಷಯ ಎಲ್ಲಾ ನೋಡ್ಕೋಬಾರ್ದು ಅಂತಾನಾ?" 

"ಹಂಗಲ್ವೋ" ಮತ್ತೇಗೆ ಮಾತು ಮುಂದುವರಿಸುವುದೆಂದು ತೋರಲಿಲ್ಲ. ಸೋನಿಯಾಳ ಅಮ್ಮನ ಮನಸ್ಥಿತಿಯ ಬಗ್ಗೆಯೇ ಯೋಚಿಸುತ್ತಾ ಕುಳಿತವಳಿಗೆ ಇವರೀರ್ವರ ಮಾತುಕತೆಯ ದಿಕ್ಕುದೆಸೆ ಅರಿವಾಗಲು ಒಂದಷ್ಟು ಸಮಯ ಹಿಡಿಯಿತು. ʻನೀವಿಬ್ರೂ ಬೇಡ. ನಾನೇ ಉಳ್ಕೋತೀನಿ ರಾತ್ರಿಗೆ. ನಂಗಾದ್ರೆ ಎಲ್ಲಾ ಗೊತ್ತಿರೋರೇ ಇದ್ದಾರಲ್ಲ ಇಲ್ಲಿ. ಏನಾದ್ರೂ ಎಮರ್ಜೆನ್ಸಿ - ಹಂಗೇನೂ ಆಗದಿರಲಿ - ಅಪ್ಪಿತಪ್ಪಿ ಏನಾದ್ರೂ ಎಮರ್ಜೆನ್ಸಿ ಆದ್ರೂ ನಾನಿದ್ರೆ ಅನುಕೂಲವಲ್ಲʼ ಎಂದು ನಿರ್ಧಾರ ಹೇಳಿದೆ. ಇಬ್ಬರಿಗೂ ಸರಿಯೆಂದು ತೋರಿ ತಲೆಯಾಡಿಸಿದರು. ಮಧ್ಯೆ ಎರಡು ಸಲ ಹೋಗಿ ಕಾಫಿ ಕುಡಿದು ಬಂದೊ. ಒಂಭತ್ತರಷ್ಟೊತ್ತಿಗೆ ನಾ ಶಶಿ ಜೊತೆ ಕ್ಯಾಂಟೀನಿಗೆ ಹೋಗಿ ಒಂದು ಪ್ಲೇಟ್‌ ಮೊಸರನ್ನ ತಿಂದು ಬಂದೆ. ಅಮ್ಮ ಮನೆಗೇ ಹೋಗಿ ಏನಾದ್ರೂ ಮಾಡ್ಕಂಡು ತರ್ತೀನಿ ಇಬ್ಬರಿಗೂ ಎಂದು ಬಹಳಷ್ಟು ಸಲ ಹೇಳಿದರು. ʻಸೋನಿಯಾಗೆ ಆಸ್ಪತ್ರೆಯವರೇ ಊಟ ಕೊಡುತ್ತಾರೆ. ಮನೆ ಊಟ ಬಿಡಲ್ಲ ಒಳಗಡೆ ಇಲ್ಲಿ. ಇನ್ನು ನನ್ನೊಬ್ಬಳಿಗ್ಯಾಕೆ ತರೋಕ್‌ ಹೋಗ್ತೀರ... ಇಲ್ಲೇ ತಿನ್ಕೋತೀನಿ ಬಿಡಿʼ ಎಂದು ಸುಮ್ಮನಾಗಿಸಿದ್ದೆ. ರಾಮೇಗೌಡ ಅಂಕಲ್‌ ಕಾಫಿ ಕುಡಿಯಲೂ ಬರಲಿಲ್ಲ. ಮಗಳೊಟ್ಟಿಗೆ ಕುಳಿತಿದ್ದರು. ಊಟ ಮಾಡಿ ಒಳಬಂದವರಿಗೆ ಅಪ್ಪ ಮಗಳನ್ನಲ್ಲ ಮಗಳು ಅಪ್ಪನನ್ನು ಸಮಾಧಾನಿಸುತ್ತಿದ್ದಂತೆ ತೋರುತ್ತಿತ್ತು. ನಿನ್ನೆ ಮೊನ್ನೆ ಪಾರ್ಕಿನಲ್ಲಿ ಕುಳಿತು ಕಣ್ಣೀರಾಗುತ್ತಿದ್ದ ಹುಡುಗಿ ಎಷ್ಟು ಬೇಗ ಎಷ್ಟೆಲ್ಲ ಪ್ರಬುದ್ಧತೆ ಪಡೆದುಕೊಂಡುಬಿಟ್ಟಿದ್ದಾಳಲ್ಲ ಅಂತ ಅಚ್ಚರಿ ಕಂಗಳಿಂದ ಸೋನಿಯಾಳನ್ನು ಗಮನಿಸುತ್ತಿದ್ದೆ. ಜೀವನ ಕಲಿಸುವ ಪಾಠ ಮೂಡಿಸುವ ಪ್ರಬುದ್ಧತೆ ಅವಳಲ್ಲೆದ್ದು ಕಾಣಿಸುತ್ತಿತ್ತು. 

ನಾನೇ ಇರ್ತೀನಿ ಬಿಡಿ ಅಂತ ಅಂಕಲ್‌ ಒಂದೆರಡು ಸಲ ಹೇಳಿದರಾದರೂ ಮನೆಯಲ್ಲಿ ಆಂಟಿಯನ್ನು ಒಬ್ಬರನ್ನೇ ಬಿಟ್ಟು ಇರುವುದೂ ಸಾಧ್ಯವಿಲ್ಲ ಅಂತ ಅವರಿಗೂ ಗೊತ್ತಿತ್ತು, ನಮಗೂ ಗೊತ್ತಿತ್ತು. ʻಪರವಾಗಿಲ್ಲ ಹೋಗಿ ಅಂಕಲ್.‌ ಏನಾದ್ರೂ ಇದ್ರೆ ನಾ ಫೋನ್‌ ಮಾಡ್ತೀನಿʼ ಎಂದ ಮೇಲೆ ಹೊರಟರವರು. ಅಪ್ಪ ಅಮ್ಮನೂ ಹೊರಟರು. ಶಶಿ ಇನ್ನೊಂದಷ್ಟು ಹೊತ್ತು ಇದ್ದು ಹೊರಡ್ತೀನಿ ಎಂದು ಸೋನಿಯಾ ಪಕ್ಕ ಕುಳಿತುಕೊಂಡು. ಗಂಡ ಹೆಂಡತಿಯ ಮಧ್ಯೆ ನಾನ್ಯಾಕೆ ಅಂತಂದುಕೊಂಡು ಹೊರಬಂದು ರಾಜೀವನಿಗೆ ಫೋನ್‌ ಮಾಡಿದೆ. ಮಗಳ ಡ್ಯೂಟಿಯಲ್ಲಿದ್ದರವರು. ʻಏನ್ರೀ ಮಾಡ್ತಿದ್ದೀರ? ಮಗಳು ಸುಮ್ಮನಿದ್ದಾಳಾ? ಗಲಾಟೇನಾ?ʼ 

"ಗಲಾಟೆ ಏನಿಲ್ಲಪ್ಪ. ಆರಾಮಿದ್ದೀವಿ ಆಟಾಡ್ಕಂಡು. ಹೇಗಿದ್ದಾಳೆ ಸೋನಿಯಾ?" 

ʻಸದ್ಯ ಏನ್‌ ತೊಂದರೆ ಇಲ್ಲ. ನಾಳೆ ನಾಡಿದ್ದರಲ್ಲಿ ಡಿಸ್ಚಾರ್ಜ್‌ ಆಗಬಹುದುʼ 

"ಮ್.‌ ನೀ ಎಷ್ಟೊತ್ತಿಗೆ ಬರ್ತಿ" 

ʻನಾನಿಲ್ಲೇ ರೀ ಇವತ್ತುʼ 

"ಯಾಕೆ?" 

ʻಅವರಮ್ಮ ಬಂದಿಲ್ಲʼ 

"ಅಯ್ಯಪ್ಪ! ಏನ್‌ ಆ ಹೆಂಗ್ಸು ಅಷ್ಟೆಲ್ಲ ದ್ವೇಷ ಸಾಧಿಸ್ತದೆ" 

ʻಮೆಲ್ಲ ಮಾತಾಡ್ರಿ! ನೀವೇಳ್ತಿರೋ ಹೆಂಗ್ಸು ಅಲ್ಲೇ ಪಕ್ಕದ ಮನೆಯಲ್ಲೇ ಇರೋದು. ಕೇಳಿಸಿಕೊಂಡಾರು ಮತ್ತೆʼ 

"ಕೇಳಿಸಿಕೊಳ್ಳಲಿ ಬಿಡು! ಹಂಗಾದ್ರೂ ಜಗಳ ಆಡೋಕ್‌ ಈ ಮನೆ ಮೆಟ್ಲು ತುಳೀತಾರೇನೋ ನೋಡುವ" ನಕ್ಕರು. 

ʻಒಳ್ಳೆ ಕತೆ ನಿಮ್ದು. ಮಗಳಿಗೆ ಹಿಂಗಿಂಗಾಗಿದೆ ಅಂತ ಗೊತ್ತಾದಾಗ್ಲೂ ಬರದವರು ಜಗಳ ಆಡೋಕ್‌ ಬಂದುಬಿಡ್ತಾರಾ? ಸಾ‍ಧ್ಯವೇ ಇಲ್ಲ ಬಿಡಿ. ಶಶಿನೂ ಅಮ್ಮಾನೂ ನಾವೇ ಇರ್ತೀವಿ ಅಂತಂದ್ರು. ನಾನೇ ನೀವ್‌ ಹೋಗಿ ನಾನಿರ್ತೀನಿ ಅಂದೆʼ 

"ಹು. ಅದೇ ಸರಿ. ನಿಮ್‌ ಆಸ್ಪತ್ರೇನೇ ಅಲ್ವ. ನೀ ಇರೋದೇ ಒಳ್ಳೇದು. ಎಷ್ಟೊತ್ತಿಗೆ ಬರ್ತಾರೆ ನಿಮ್ಮಮ್ಮ" 

ʻಹೊರಟ್ರು ಈಗ. ಬರಬೋದು ಇನ್ನೈದು ನಿಮಿಷಕ್ಕೆʼ 

"ಸರಿ ಸರಿ. ಅವರು ಬಂದ ಮೇಲೆ ಆಸ್ಪತ್ರೆಗೆ ಬಂದು ಹೋಗ್ತೀನಿ. ನಿಂಗೇನಾದ್ರೂ ತಿನ್ನೋಕೆ ತರಬೇಕಾ" 

ʻಬೇಡ ರೀ. ಇಲ್ಲೇ ಮೊಸರನ್ನ ತಿಂದೆʼ ಬೆಲ್‌ ಹೊಡೆದ ಸದ್ದು ಕೇಳಿಸಿತು ಫೋನಿನಲ್ಲಿ. 

"ಬಂದ್ರು ಅನ್ಸುತ್ತೆ. ಆಸ್ಪತ್ರೆ ಹತ್ರ ಬಂದು ಫೋನ್‌ ಮಾಡ್ತೀನಿ" ಎಂದ್ಹೇಳಿ ಫೋನಿಟ್ಟರು. 

ರಾಜೀವ ಬರೋದಕ್ಕೆ ಅರ್ಧ ಘಂಟೆಯಾಯಿತು. ಶಶಿ ಇನ್ನೂ ಸೋನಿಯಾ ಜೊತೆ ರೂಮಿನಲ್ಲೇ ಇದ್ದ. ನಾ ಕಾರಿಡಾರಿನಲ್ಲಿ ಫೇಸ್ಬುಕ್‌ ಸ್ಕ್ರಾಲ್‌ ಮಾಡುತ್ತಾ ಕುಳಿತಿದ್ದೆ. 

"ಇದ್ಯಾಕೆ ಇಲ್ಲೇ ಕುಳಿತಿದ್ದೆ" ರಾಜೀವ ನನ್ನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾ ಕೇಳಿದರು. 

ʻಅವರಿಬ್ರು ಏನೋ ಮಾತಾಡ್ಕೋತಿದ್ದಾರೆ. ನಾ ಯಾಕೆ ಸುಮ್ನೆ ಅಲ್ಲಿ ಅಂತ ಇಲ್‌ ಬಂದೆʼ 

"ಓಹೋ! ಇನ್ನೂ ಹೊಸತಲ್ವ ಮದುವೆಯಾಗಿ. ಮಾತಾಡೋಕಿರುತ್ತೆ ಬಿಡು" ಎಂದು ನಕ್ಕು "ಇರು ಹೋಗಿ ಮಾತಾಡಿಸ್ಕೊಂಡು ಬರ್ತೀನಿ. ಹೋಗಿ ಏನಾದ್ರೂ ತಿಂದು ಬರುವ" 

ʻನಂದಾಗ್ಲೇ ಆಯ್ತುʼ 

"ನಿಂದಾಗೋದ್ರೆ?! ನಾ ತಿನ್ನಬಾರದಾ?" 

ʻಮನೇಲೇ ತಿನ್ಕೋ ಬರೋದಲ್ವʼ 

"ನೋಡಿದ್ದೆ ಅಡುಗೆಮನೇಲಿ. ಎಲ್ಲೋ ಒಂಚೂರಿತ್ತು ಸಾರು. ಅವರಿಗಾಗ್ತದೆ. ಸುಮ್ನೆ ನಾನಿದ್ರೆ ಮತ್ತೆ ಹೊಸತಾಗಿ ಏನಾದ್ರೂ ಮಾಡಬೇಕು. ಅದಿಕ್ಕೇ ನಾನೇ ಹೊರಗೆ ತಿನ್ಕೋತೀನಿ ಅಂತಂದು ಬಂದೆ" 

ʻಇದ್ಯಾವಾಗಿಂದ ನಿಮಗೆ ಇಷ್ಟೊಂದೆಲ್ಲ ಒಳ್ಳೆ ಬುದ್ಧಿ ಬಂತುʼ 

"ನಾವ್‌ ಮುಂಚಿಂದಾನೂ ಒಳ್ಳೆಯವನೇ ಕಣ್‌ ತಕೊ" ಎಂದು ಕಣ್ಣು ಮಿಟುಕಿಸಿದರು. 

ಒಳಗೋಗಿ ಸೋನಿಯಾಳನ್ನು ಮಾತನಾಡಿಸಿ ಹೊರಬಂದೆವು. ರಾಜೀವ ಶಶಿಯನ್ನು ಊಟಕ್ಕೆ ಕರೆದ. "ನೀವೋಗಿ ಬನ್ನಿ, ಬಂದ ಮೇಲೆ ಹೊರಡ್ತೀನಿ ನಾನು. ಆಮೇಲ್‌ ಮಾಡ್ಕೋತೀನಿ" ಎಂದ. 

"ಎಲ್ಲಿಗೋಗೋಣ ಊಟಕ್ಕೆ" ಹೊರಬರುತ್ತಾ ಕೇಳಿದರು ರಾಜೀವ್.‌ 

ʻನಂದಾಯ್ತು ರೀʼ 

"ಅಯ್ಯ! ಮೊಸರನ್ನ ಅಂದ್ರೆ ಮೊದಲೇ ಆಗಲ್ಲ ನಿಂಗೆ. ಒಂದ್‌ ಪ್ಲೇಟ್‌ ತಗಂಡಿರ್ತಿ. ಅದರಲ್ಲಿ ಅರ್ಧ ಅಲ್ಲೆ ಬಿಟ್ಟರ್ತಿ. ಅರ್ಧ ಮೊಸರನ್ನಕ್ಕೆ ತುಂಬೋ ಹೊಟ್ಟೇನಾ ನಿಂದು?" 

ʻಏನ್‌ ಬಕಾಸುರೀ ಕೆಟ್ಟೋದ್ನ ನಾನುʼ ಹುಸಿಮುನಿಸು ತೋರುತ್ತಾ ʻನಡೀರಿ ಕ್ಯಾಂಟೀನಿಗೇ ಹೋಗುವʼ 

"ಕ್ಯಾಂಟೀನಿಗೋಗಿ ವೆಜ್‌ ತಿನ್ನೋದಾ.... ಬೇಡಪ್ಪ ಬೇಡ. ನಡಿ ಹೊರಗೋಗಿ ಬಿರಿಯಾನಿ ಗಿರಿಯಾನಿ ತಿಂದ್ಕಂಡು ಬರುವ...." 

ಬಿರಿಯಾನಿ ಅಂದ ತಕ್ಷಣ ಬಾಯಲ್ಲಿ ನೀರೂರಿದ್ದು ಹೌದು. ʻರೀ. ಇಲ್ಲಿವಳು ಆಸ್ಪತ್ರೆಯಲ್ಲಿರುವಾಗ ನಾವೋಗಿ ಬಿರಿಯಾನಿ ತಿಂದ್‌ ಬರೋದು ಸರಿಯಾʼ ಎಂದು ಪ್ರಶ್ನಿಸಿದವಳಿಗೆ ʻಬಿರಿಯಾನೀನೂ ಒಂದ್‌ ಊಟ ಅಷ್ಟೇ. ಅದರಲ್ಲೇನಿದೆ ನಡಿʼ ಅನ್ನೋ ಉತ್ತರದ ನಿರೀಕ್ಷೆಯಿತ್ತು. 

ಆದರೆ ರಾಜೀವ "ಹು. ನೀನೇಳೋದೂ ಸರೀನೆ. ನಡಿ. ನಿಮ್ಮ ಕ್ಯಾಂಟೀನಿಗೇ ಹೋಗಿ ಒಂದ್‌ ದೋಸೆ ಗೀಸೆ ತಿಂದು ಬರುವ" ಎಂದು ಬಿರಿಯಾನಿಯನ್ನು ಕಲ್ಪನೆಗೇ ಸೀಮಿತಗೊಳಿಸಿ ಕ್ಯಾಂಟೀನಿನ ಕಡೆಗೆ ಹೆಜ್ಜೆಹಾಕಿಬಿಟ್ಟರು. ಇನ್ನೇನು ನಿದ್ರೆಗೆಜ್ಜೆ ಹಾಕುತ್ತಿದ್ದ ಕ್ಯಾಂಟೀನಿನಲ್ಲಿ ದೋಸೆ ಇರಲಿಲ್ಲ. ಪೂರಿ, ಇಡ್ಲಿ ರೈಸ್‌ ಬಾತ್‌ ಅಷ್ಟೇ ಉಳಿದಿತ್ತು. ಎರಡು ಪ್ಲೇಟ್‌ ಪೂರಿಗೆ ಹೇಳಿ ಕುಳಿತಾಗ ರಾಮ್‌ಪ್ರಸಾದ್‌ ಮೆಸೇಜ್‌ ಬಂತು. "ಹೇಗಿದ್ದಾರವರು" ಅಂತ. 

ʻಈಗ ಪರವಾಗಿಲ್ಲ. ಆರಾಮಿದ್ದಾಳೆʼ 

"ನೀನು ಹೋದ್ರಾ ಮನೆಗೆ" 

ʻಇಲ್ಲ. ನಾ ಇಲ್ಲೇ ಉಳೀತೀನಿ ಇವತ್ತುʼ 

"ಗುಡ್‌ ಗುಡ್. ಮತ್ತೆ ಊಟ" 

ʻಈಗ ರಾಜೀವ್‌ ಜೊತೆ ಕ್ಯಾಂಟೀನಿಗೆ ಬಂದಿದ್ದೆ. ನಿಂದುʼ 

"ಮಾಡಬೇಕಿನ್ನು. ರಾಜೀವ್‌ ಬರ್ತಾರೆ ಅಂತ ಗೊತ್ತಿದ್ರೆ ಅಲ್ಲಿಗೇ ಬರ್ತಿದ್ದೆ ನೋಡಿ" 

ʻಓ, ಅವ್ರಿದ್ರಷ್ಟೇ ಬರೋದು, ನಾನಿದ್ರೆ ಬರಲ್ಲ ಅನ್ನಿʼ 

"ಹಂಗಲ್ಲರೀ" 

ʻಹೆ ಹೆʼ ಎಂದು ಮೆಸೇಜಿಸಿದವಳ ಮುಖದಲ್ಲೂ ಮೂಡಿದ ನಗುವನ್ನು ನೋಡಿ "ಯಾರಿಗೇ ಮೆಸೇಜ್ ಮಾಡ್ಕಂಡ್‌ ಕಿಸೀತಿದ್ದಿ" ಎಂದು ಕೇಳಿದರು ರಾಜೀವ್.‌ 

ʻನಿಮ್‌ ದೋಸ್ತು ರಾಮ್‌ಗೆ. ಸೋನಿಯಾ ಅಡ್ಮಿಟ್‌ ಆಗುವಾಗ ಅವರೂ ಇದ್ದರು ಜೊತೆಯಲ್ಲಿ. ಹೇಗಿದ್ದಾಳೆ ಅಂತ ಕೇಳ್ತಿದ್ರು. ನೀವ್‌ ಬಂದಿರೋದ್‌ ಗೊತ್ತಾಗಿದ್ರೆ ಬರ್ತಿದ್ದೆ ಅಂತಿದ್ರು. ಅವರಿದ್ರಷ್ಟೇ ಬರಬೇಕು ಅನ್ನಿ ಅಂತ ಕಾಲೆಳೀತಿದ್ದೆʼ. 

"ಅಯ್ಯೋ ಹೌದಲ್ಲ! ಸುಮ್ಮನೆ ನಿನ್ನ ಜೊತೆ ದೋಸೆ ತಿನ್ನೋ ಬದಲು ರಾಮ್‌ಗೆ ಫೋನ್‌ ಮಾಡಿ ಹೊರಗೆ ಊಟಕ್ಕೋಗಿದ್ರಾಗಿರೋದು" 

ʻಊಟಕ್ಕೋ ಕುಡಿಯೋಕೋ....ʼ 

"ಎರಡಕ್ಕೂ ಅಂತಿಟ್ಕೋ" ಎಂದು ನಕ್ಕರು. 

ಎಷ್ಟೋ ತಿಂಗಳುಗಳ ನಂತರ ನಾನೂ ರಾಜೀವು ಲೋಕಾಭಿರಾಮವಾಗಿ ಕುಳಿತು ಒಂದರ್ಧ ಘಂಟೆ ಹರಟಿದೆವು. ನಮ್ಮ ನಡುವಿನ ಮಧುರ ಮಾತುಗಳೇ ಸತ್ತು ಹೋದವಾ ಎಂಬನುಮಾನ ದಿನೇ ದಿನೇ ಕಾಡುತ್ತಿತ್ತು. ಮದುವೆಯ ಮೊದಲಲ್ಲಿದ್ದ ಪ್ರೀತಿ ಪ್ರೇಮವೆಲ್ಲ ಎಲ್ಲಿ ಹಾಳು ಬಿದ್ದು ಹೋಯಿತೋ ಅಂತ ಗಾಬರಿಯಾಗಿದ್ದಿದೆ. ಅವರ ಕೆಲಸದ ಒತ್ತಡ, ಅವರ ಇನ್ಫೀರಿಯಾರಿಟಿ ಕಾಂಪ್ಲೆಕ್ಸು, ನನ್ನ ಡಿ.ಎನ್.ಬಿ, ಮಗುವಿನ ದೇಖರೇಖಿ.... ಇವುಗಳೆಲ್ಲವುದರ ಮಧ್ಯೆ ನಮ್ಮ ಸಂಬಂಧವೇ ಅರ್ಥ ಕಳೆದುಕೊಳ್ಳಲಾರಂಭಿಸಿಬಿಟ್ಟಿದೆ. ಮದುವೆಯ ಬಂಧ ಬಂಧನವಾಗಿ ನಮ್ಮನ್ನು ಜೊತೆಯಾಗಿರಿಸಿದೆಯಷ್ಟೇ ಎಂಬ ಭಾವನೆ ಮೂಡಿದ್ದು ಸುಳ್ಳಲ್ಲವೇ ಅಲ್ಲ. ಎಲ್ಲಾ ಮದುವೆಗಳೂ ಹಿಂಗೇ ಕೊನೆಯಾಗಿ ಸಾಯುವವರೆಗೂ ಜೊತೆಯಾಗಿರುವಂತೆ ಬಲವಂತಿಸಿಬಿಡುತ್ತವಾ? ಈ ಬಾರಿ ಕೆಲಸ ಬಿಟ್ಟ ಮೇಲೆ ರಾಜೀವನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ನನ್ನ ಜೊತೆಯ ಮಾತುಕತೆಯಲ್ಲಿರಬಹುದು, ಅದಕ್ಕಿಂತ ಹೆಚ್ಚಾಗಿ ಮಗಳ ಜೊತೆಗಿನ ಅವರ ವರ್ತನೆ ಮುಂಚಿನ ದಿನಗಳಿಗೆ ಹೋಲಿಸಿದರೆ ದೊಡ್ಡ ಮಟ್ಟದಲ್ಲಿ ಬದಲಾಗಿದೆ. ಪುಣ್ಯಕ್ಕೀ ಬಾರಿ ಒಳ್ಳೆಯ ರೀತಿಯಲ್ಲಿ ಬದಲಾಗಿದೆ. ಪೂರಿ ತಿಂದು ಒಂದರ್ಧ ಘಂಟೆ ಮಾತನಾಡಿ ಮನೆಗೆ ಹೊರಟರು ರಾಜೀವ್. 

ಹತ್ತೂವರೆಯ ಸುಮಾರಿಗೆ ವಾರ್ಡಿಗೆ ಹೋಗಿ ಶಶಿಯನ್ನು ಕಳಿಸಿಕೊಟ್ಟೆ. 

"ಬೆಳಿಗ್ಗೆ ಬೇಗ ಬರ್ತೀನಿ" ಎಂದ್ಹೇಳಿ ಸೋನಿಯಾಳ ಹಣೆಗೊಂದು ಮುತ್ತನ್ನಿಟ್ಟು ಶಶಿ ಹೊರಟ.‌ ಪ್ರೀತಿ ಪ್ರೇಮ ಉತ್ತುಂಗದಲ್ಲಿದ್ದಾಗ, ಒಬ್ಬರಿಗೊಬ್ಬರು ತೋರುವ ಕಾಳಜಿ ಅತಿಯಲ್ಲಿರುವಾಗ ಬದುಕೆಷ್ಟು ಸುಂದರ ಅನ್ನಿಸುತ್ತದಲ್ಲ.....ಜೀವನವಿಡೀ ಜನರು ಹಂಗೇ ಇದ್ದು ಬಿಡಬಾರದೇಕೆ..... ಹಂಗೆಲ್ಲ ಇರೋಕೆ ಸಾ‍ಧ್ಯವಿಲ್ಲ ಅಂತ ಪುರುಷೋತ್ತಮ - ಸಾಗರ ಜೋರಾಗಿ ಹೇಳಿ ನಕ್ಕಂತಾಯಿತು. ನಿಟ್ಟುಸಿರು ಬಿಟ್ಟು ಸೋನಿಯಾಳಿಗೊಂದು ಗುಡ್‌ ನೈಟ್‌ ಹೇಳಿ ಲೈಟ್‌ ಆರಿಸಿ ಮಲಗಿದೆ. 

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment