Aug 1, 2020

ಒಂದು ಬೊಗಸೆ ಪ್ರೀತಿ - 73

ಮೆಸೇಜ್ ಮಾಡ್ಲೋ ಬೇಡ್ವೋ ಮಾಡ್ಲೋ ಬೇಡ್ವೋ ಅನ್ನೋ ಆಲೋಚನೆಗಳಲ್ಲೇ ಅರ್ಧ ದಿನ ಕಳೆದು ಹೋಯಿತು. ಎಫ್.ಬೀಲಿ ಅನ್ ಫ್ರೆಂಡ್ ಮಾಡಿದ್ದ, ಬ್ಲಾಕ್ ಮಾಡಿರಲಿಲ್ಲ. ವಾಟ್ಸಪ್ ಅಲ್ಲೇನೂ ಬ್ಲಾಕ್ ಮಾಡಿರಲಿಲ್ಲ. ಮೆಸೇಜ್ ಗಿಸೇಜ್ ಬೇಡ ಒಟ್ಗೇ ಫೋನೇ ಮಾಡಿಬಿಟ್ಟರೆ? ಧೈರ್ಯ ಸಾಲಲಿಲ್ಲ. ಪೂರ್ತಿ ದಿನ ಹೀಗೇ ಕಳೆದುಹೋದರೆ ಎಂದು ದಿಗಿಲಾಯಿತು. ಏನಾಗಿಬಿಡ್ತದೆ? ಎಂತದೂ ಆಗೋದಿಲ್ಲ. ಸುಮ್ಮನೆ ನಾ ಅನಾವಶ್ಯಕ ಗಾಬರಿ ಬಿಳ್ತಿದೀನಿ ಅಷ್ಟೇ ಎಂದುಕೊಂಡು ಮೊಬೈಲ್ ಕೈಗೆತ್ತಿಕೊಂಡು ವಾಟ್ಸಪ್ ತೆರೆದೆ. ಉಹ್ಞೂ... ವಾಟ್ಸಪ್ ಅಲ್ ಬೇಡ. ಅವ ಯಾವಾಗಲೋ ನೋಡಿ ಏನೇನೋ ರಿಪ್ಲೈ ಮಾಡಿಬಿಟ್ಟರೆ? ಮನೆಗೋದ ಮೇಲೆ ಮಗಳ ದೇಖರೇಖಿಯಲ್ಲಿ ಮೊಬೈಲು ನೋಡುವುದ್ಯಾವಾಗಲೋ. ರಾಜೀವನೋ ನಮ್ಮಮ್ಮನಿಗೋ ಮೆಸೇಜು ಕಂಡು ಗಬ್ಬೆಬ್ಬಿಬಿಟ್ಟರೆ? ಎಫ್.ಬಿ ಮೆಸೆಂಜರ್ ಆದ್ರೆ ಪರವಾಗಿಲ್ಲ.‌ ಹೆಂಗಿದ್ರೂ ನೋಟಿಫಿಕೇಶನ್ ಆಫ್ ಮಾಡಿಟ್ಟಿದ್ದೀನಿ. ಪಟ್ಟಂತ ಮೆಸೇಜು ಯಾರ ಕಣ್ಣಿಗೂ ಕಾಣೋದಿಲ್ಲ. ಥೂ! ಇದೇನಾಗಿದೆ ನಂಗೆ. ಸಾಗರನ ಹುಟ್ಟುಹಬ್ಬಕ್ಕೊಂದು ವಿಶಸ್ ಕಳಿಸೋದಿಕ್ಕೆ ಇಷ್ಟೆಲ್ಲ ಅತಿರೇಕದಿಂದ ಯೋಚಿಸೋ ಅಗತ್ಯವಾದರೂ ಏನಿದೆ? ಯಾಕೀ ರೇ ಪ್ರಪಂಚದಲ್ಲಿ ಇಲ್ಲದಿರುವುದನ್ನೆಲ್ಲ ಯೋಚಿಸುತ್ತಾ ಕುಳಿತಿದ್ದೀನಿ. ಎಫ್.ಬಿ ತೆರೆದು ಸಾಗರನ ಪ್ರೊಫೈಲ್ ತೆರೆದು ʻಹ್ಯಾಪಿ ಬರ್ತ್ ಡೇ ಕಣೋ' ಎಂದು ಮೆಸೇಜು ಕಳುಹಿಸಿದೆ. ಅವನ ಮೆಸೆಂಜರ್ನಲ್ಲಿ ಅದರ್ಸ್ ಫೋಲ್ಡರಿಗೆ ಹೋಗಿರ್ತದೆ ಮೆಸೇಜು. ಇನ್ಯಾವಾಗ ನೋಡ್ತಾನೋ ಏನೋ ಎಂದುಕೊಂಡವಳಿಗೆ ಸಾಗರ್ ಇಸ್ ಟೈಪಿಂಗ್ ಅನ್ನೋದು ಕಾಣಿಸಿ ಖುಷಿಯಾಯಿತು. ಏನ್ ಟೈಪಿಸುತ್ತಿರಬಹುದು? ಸದ್ಯ, ಇನ್ನೂ ಮರೆತಿಲ್ಲವಲ್ಲ ನನ್ನ ಅಂತ ಕಾಲೆಳಿಯಬಹುದು.... ಯಾರಿದು ಅಂತ ರೇಗಿಸಬಹುದು ಅಥವಾ ಎಂತದೂ ಬೇಡ ಅಂತ ಸುಮ್ಮನೊಂದು ಥ್ಯಾಂಕ್ಯು ಹೇಳಿ ಮಾತುಕತೆ ಮುಗಿಸಬಹುದು ಎಂಬ ನಿರೀಕ್ಷೆಯಲ್ಲೇ ಕಣ್ಣನ್ನು ಮೊಬೈಲಿನ ಸ್ಕ್ರೀನಿಗೆ ನೆಟ್ಟು ಕುಳಿತಿದ್ದೆ. ಒಂದಷ್ಟೇನೋ ಟೈಪ್ ಮಾಡಿದವನು ಮತ್ತೆ ಡಿಲೀಟು ಮಾಡಿದನೇನೋ.... ಕ್ಷಣ ಕಾಲ ಸುಮ್ಮನಿದ್ದ ಆ್ಯಪು ಮತ್ತೊಮ್ಮೆ ಸಾಗರ್ ಇಸ್ ಟೈಪಿಂಗ್ ಅಂತ ತೋರಿಸಿತು. ಒಂದು ನಿಮಿಷದ ಟೈಪಿಂಗಿನ ನಂತರ ಮೆಸೇಜು ಕಾಣಿಸಿತು "ನನ್ನ ಹುಟ್ಟುಹಬ್ಬಕ್ಕಲ್ಲ, ನಾ ಸತ್ರೂ ಮೆಸೇಜು ಮಾಡಬೇಡ. ಅಪ್ಪಿತಪ್ಪಿ ನಾ ಸತ್ತ ವಿಷ್ಯ ಗೊತ್ತಾದ್ರೂ ನೋಡೋಕ್ ಬರಬೇಡ. ಅಷ್ಟು ನಡೆಸಿಕೊಡು ಸಾಕು". 

ನಿಟ್ಟುಸಿರುಬಿಡುವುದನ್ನೊರತುಪಡಿಸಿದರೆ ಮತ್ತೇನು ತಾನೇ ಮಾಡಲು ಸಾಧ್ಯವಿತ್ತು ನನಗೆ. ಸಾಮಾನ್ಯವಾಗಿ ಈ ರೀತಿ ಮೆಸೇಜು ಮಾಡಿದ ತಕ್ಷಣವೇ ಸಾರಿ ಯಾವ್ದೋ ಮೂಡಲ್ಲಿದ್ದೆ, ಎಷ್ಟೆಲ್ಲ ಕಾಟ ಕೊಡ್ತಿ ನನಗೆ ಅಂತಂದು ಒಂದಷ್ಟಾದರೂ ಮಾತನಾಡುತ್ತಿದ್ದ. ಕೊನೇಪಕ್ಷ ವ್ಯಂಗ್ಯವನ್ನಾಡುತ್ತ ಚುಚ್ಚು ಮಾತುಗಳನ್ನಾದರೂ ಆಡುತ್ತಿದ್ದ. ಇವತ್ತೂ ಹಂಗೇ ಆಗಬಹುದೇನೋ ಅಂದುಕೊಂಡು ಕಾದೆ. ಉಹ್ಞೂ. ಯಾವ ಮೆಸೇಜೂ ಬರಲಿಲ್ಲ. ನಾನೇ ಮೆಸೇಜು ಮಾಡಲಾ? ಸತ್ರೂ ಮೆಸೇಜು ಮಾಡಬೇಡ ಅಂದುಬಿಟ್ಟಿದ್ದಾನಲ್ಲ. ಆದರೇನಂತೆ? ಮುಂಚೆ ಎಷ್ಟು ಸಲ ಈ ರೀತಿಯಾಗಿ ಮೆಸೇಜು ಮಾಡಿದ ಮೇಲೆ ನಾನೇ ದುಃಖ ತೋಡಿಕೊಂಡಿಲ್ಲ. ಮತ್ತೇನಿಲ್ಲದಿದ್ದರೂ ನನ್ನ ದುಃಖಕ್ಕಂತೂ ಹುಡುಗ ಕರಗಿಬಿಡ್ತಾನೆ. ನಿನ್ನ ದುಃಖದ ಕತೆಗಳನ್ನು ಕೇಳೋಕೊಂದು ಕಿವಿ ಬೇಕಷ್ಟೇ ನಿನಗೆ ಅಂತ ಎಷ್ಟು ಸಲ ಆಡಿಕೊಂಡಿದ್ದಾನೆ.‌ ಕೇಳುವದಕ್ಕೊಂದಷ್ಟು ಕಿವಿಗಳು ಎಲ್ಲರಿಗೂ ಬೇಕೇ ಬೇಕಲ್ಲ. ಮತ್ತೊಂದು ರೌಂಡು ಬಯ್ದರೂ ಪರವಾಗಿಲ್ಲ ಮೆಸೇಜು ಮಾಡೇಬಿಡುವ ಎಂದು ಧೃಡ ನಿರ್ಧಾರ ಮಾಡಿ ಫೋನ್ ಕೈಗೆತ್ತಿಕೊಂಡರೆ ಅಮ್ಮನ ಫೋನು ಬಂತು.‌ ನಂತರ ಮೆಸೇಜಿಸುವ ಅಂದುಕೊಂಡು ಫೋನೆತ್ತಿಕೊಂಡೆ. 

"ಹಲೋ ಧರು.... ಎಲ್ಲಿದ್ದಿ" ಅಮ್ಮನ ಅಳು ದನಿ ಕೇಳಿ ಜೀವ ದಸಕ್ಕೆಂದಿತು. 

ʻಏನಾಯ್ತಮ್ಮ?ʼ ಅಂದವಳ ಮನಸಲ್ಲಿ ಅಪ್ಪನಿಗೇನೋ ಅನಾಹುತವಾಗಿದೆ ಎಂದು ನಿರ್ಧಾರವಾಗಿಬಿಟ್ಟಿತ್ತು. 

"ಅಯ್ಯೋ ಏನೂ ಅಂತ ಹೇಳಲಮ್ಮ. ಎಲ್ಲಾ ಚೆನ್ನಾಗ್‌ ಆಗ್ತಿದೆ ಅಂದುಕೊಂಡಾಗಲೇ ಹಿಂಗಾಗಿದೆ" 

ಅಪ್ಪ ಸಿಗರೇಟು ಸೇದೋದು ಅಪರೂಪದಲ್ಲಿ ಅಪರೂಪ. ವಾರಕ್ಕೊಂದು ಎರಡು ಸಲ ಕುಡಿಯೋದಿದೆ. ಇಲ್ಲೇ ನೋಡ್ತೀವಲ್ಲ, ಕುಡಿಯದಿರೋರು ಸಿಗರೇಟು ಸೇದದೋರು ಎಷ್ಟೊಂದು ಜನ ಪಟ್ಟಂತ ಎದೆ ಹಿಡ್ಕಂಡು ಹೋಗೇಬಿಡ್ತಾರೆ. ಮೆಡಿಸಿನ್‌ ಒಪಿಡಿ ಎದುರಿಗೇನೆ ಇಪ್ಪತ್ತೈದು ವರ್ಷದ ಮೆಡಿಕಲ್‌ ರೆಪ್‌ ಒಬ್ಬ ಹೋಗೇಬಿಟ್ಟ. ಆಸ್ಪತ್ರೆಯಲ್ಲಷ್ಟೊಂದು ವೈದ್ಯರು, ಅತ್ಯಾಧುನಿಕ ಸೌಲಭ್ಯಗಳೆಲ್ಲ ಇದ್ದರೂ ಉಳಿಸಿಕೊಳ್ಳಲಾಗಲಿಲ್ಲ. ಕ್ಷಣಮಾತ್ರದಲ್ಲಿ ಮನಸಲ್ಲಿ ಎಷ್ಟೊಂದೆಲ್ಲ ಆಲೋಚನೆಗಳು ಓಡಾಡಿಬಿಡ್ತವೆ. ಅಮ್ಮ ಇನ್ನೂ ಏನಾಗಿದೆ ಅಂತ ಕೂಡ ಹೇಳಿಲ್ಲ. 

ʻಅದೇನಾಯ್ತು ಅಂತ ಹೇಳಮ್ಮ. ಏನೂ ಹೇಳದೇ ಹೋದರೆ ನನಗೇಗೆ ತಿಳಿಯಬೇಕುʼ ಒಂದಷ್ಟು ರೇಗಿದಂತೆಯೇ ಹೇಳಿದೆ. 

"ಶಶಿ ಫೋನ್‌ ಮಾಡಿದ್ದ. ಸೋನಿಯಾ ಅವನೂ ಎಲ್ಲೋ ಹೊರಗೆ ಊಟಕ್ಕೆ ಹೋಗಿದ್ದರು. ಇವತ್ತವರ ಬ್ಯಾಂಕಿಗೆ ರಜೆಯಿತ್ತಲ್ಲ...." 

ʻಹು ಕತೆ ಆಮೇಲ್‌ ಹೇಳುವಂತೆ. ಏನಾಯ್ತು ಅಂತ ಮೊದಲು ಹೇಳಮ್ಮʼ 

"ಅದೇ ಹೇಳ್ತಿದ್ದೆ ತಡಿ. ಹೋಟೆಲಲ್ಲಿ ವಾಶ್‌ರೂಮಿಗೆ ಹೋದಾಗ ಸೋನಿಯಾಗೆ ಬ್ಲೀಡಿಂಗ್‌ ಆಗೋಗಿದ್ಯಂತೆ" 

ʻಅಯ್ಯೋ...ʼ 

"ಹು. ಶಶೀನೂ ಅಳ್ತಿದ್ದ. ಸೋನಿಯಾಳೂ ಅಳ್ತಿದ್ದಳು. ಏನೂ ನೆಟ್ಟಗೆ ಮಾತನಾಡಲೇ ಇಲ್ಲ. ನಂಗ್ಯಾಕೋ ಗಾಬ್ರಿಯಾಗೋಗಿದೆ. ಮನೆ ಕಡೆ ಬರ್ತಿದ್ದೀವಿ ಅಂತಿದ್ರು" 

ʻಮನೇಗಾ? ಮನೇಗ್‌ ಬಂದ್‌ ಏನ್‌ ಮಾಡ್ತಾರಂತೆ. ಮೊದಲು ಆಸ್ಪತ್ರೆಗೆ ಬರಬೇಕಲ್ಲವಾ?ʼ 

"ಅದೇನೋ ಗೊತ್ತಿಲ್ಲ. ನಂಗ್‌ ಕೈ ಕಾಲೇ ಆಡ್ತಿಲ್ಲ ಕಣೇ.... ನಿಮ್ಮಪ್ಪ ಬೇರೆ ಫೋನ್‌ ರಿಸೀವ್‌ ಮಾಡ್ತಿಲ್ಲ" 

ʻಸರಿ ಸರಿ. ಅವರೇನೇಳೋಕಾಗ್ತದೆ. ನಾ ಫೋನ್‌ ಮಾಡ್ತೀನಿರು ಸೋನಿಯಾಗೆ. ಅದೇನಾಯ್ತೂಂತ ವಿಚಾರಿಸ್ತೀನಿ. ನೀ ಅಳ್ಬೇಡ. ನಾ ಫೋನ್‌ ಮಾಡ್ತೀನಿʼ 

"ಹು. ಅದೇನೋ ನೋಡವ್ವ" 

ಶಶಿಗೆ ಫೋನ್‌ ಮಾಡಿದೆ. ಬ್ಯುಸಿ ಬರ್ತಿತ್ತು. ಸೋನಿಯಾಗೆ ಫೋನ್‌ ಮಾಡಿದೆ. ವ್ಯಾನಿಟಿ ಬ್ಯಾಗಿನಲ್ಲಿಟ್ಟಿದ್ದಳೋ ಫೋನು ರಿಸೀವ್‌ ಮಾಡಲಿಚ್ಛೆಯಿರಲಿಲ್ಲವೋ ಬಹಳ ಹೊತ್ತಾದರೂ ಫೋನು ರಿಂಗಣಿಸುತ್ತಲೇ ಇತ್ತು. ಈಗ ಎರಡು ತಿಂಗಳು ತುಂಬಿರಬೇಕು ಸೋನಿಯಾಗೆ. ಮೊದಲ ಮೂರು ತಿಂಗಳಲ್ಲಿ ಅಬಾರ್ಷನ್‌ ಆಗೋದು ಅಪರೂಪವೇನಲ್ಲ. ಎಷ್ಟೋ ಜನಕ್ಕೆ, ಅದರಲ್ಲೂ ನನ್ನ ತರ ಮುಟ್ಟು ನೆಟ್ಟಗೆ ಆಗದವರಿಗಂತೂ ಪ್ರೆಗ್ನೆಂಟ್‌ ಆಗಿದ್ದೀವೋ ಇಲ್ಲವೋ ಅನ್ನೋದನ್ನು ಪರೀಕ್ಷಿಸುವ ಮುಂಚೆಯೇ ಭ್ರೂಣ ರಕ್ತದ ಜೊತೆ ಹೋಗಿಬಿಟ್ಟಿರ್ತದೆ. ಹೆಚ್ಚಿನ ಸಲ ಬೆಳೆಯುತ್ತಿರುವ ಭ್ರೂಣದಲ್ಲಿ ತೀರ ಸರಿಹೋಗಲಾರದಷ್ಟು ಅನುವಂಶಿಕ ಖಾಯಿಲೆಗಳಿದ್ದಾಗ ಅಂತಹ ಮಗುವನ್ನು ಪ್ರಕೃತಿಯೇ ನಿವಾರಿಸಿಕೊಳ್ಳುವ ರೀತಿಯಿದು. ಫೋನು ರಿಸೀವು ಮಾಡುವ ಸೂಚನೆಗಳಿಲ್ಲ ಎಂದುಕೊಳ್ಳುವಷ್ಟೊತ್ತಿಗೆ ಸೋನಿಯಾ "ಹಲೋ" ಎಂದಳು. 

ʻಹೇಳು ಸೋನಿಯಾ. ಅಮ್ಮ ಈಗ ಫೋನ್‌ ಮಾಡಿದ್ದರು. ಏನಾಯ್ತುʼ ಅಳುತ್ತಲೇ ಇದ್ದಳು. 

"ಏನಿಲ್ಲ ಅಕ್ಕ. ಎಲ್ಲ ಮುಗೀತು" 

ʻಬ್ಲೀಡಿಂಗ್‌ ಜಾಸ್ತಿಯಾಯ್ತ ಚೂರಾ.....ʼ 

"ಏನೋಪ ಜಾಸ್ತೀನೇ ಆದಂಗಿತ್ತು...." 

ʻಮ್.‌ ಈಗೆಲ್ಲಿದ್ದೀರ?ʼ 

"ಮನೆ ಕಡೆಗೆ ಹೊರಟಿದ್ದೊ" 

ʻಮನೆಗ್ಯಾಕೆ? ಮೊದಲು ಇಲ್ಲಿ ಆಸ್ಪತ್ರೆಗೆ ಬನ್ನಿ.... ತೋರಿಸುವʼ 

"ಇನ್ನೇನ್‌ ತೋರಿಸೋದಕ್ಕ? ಎಲ್ಲ ಮುಗೀತಲ್ಲ. ತೋರ್ಸೋಕ್‌ ಏನಿದೆ ಹೊಟ್ಟೇಲಿ" 

ʻಎಲ್ಲಾ ನೀವೇ ಡಿಸೈಡ್‌ ಮಾಡ್ಬಿಟ್ರಾ? ನಂಗೇ ಒಬಿಜೀದು ಬಹಳಷ್ಟು ವಿಷಯ ಗೊತ್ತಾಗೋದಿಲ್ಲ. ಸುಮ್ಮನೆ ದೂಸರಾ ಮಾತನಾಡದೆ ಇಲ್ಲಿಗೆ ಬನ್ನಿ. ಮೊದಲು ತೋರಿಸುವ. ಆಮೇಲೆ ಮಿಕ್ಕಿದ್ದುʼ 

"ಬರ್ಲೇಬೇಕಾ?" 

ʻಹು. ಬರ್ಲೇಬೇಕುʼ 

"ಸರಿ" ಎಂದ್ಹೇಳಿ ಫೋನಿಟ್ಟಳು. ಪುಣ್ಯಕ್ಕಿವತ್ತು ಓಪಿಡಿಯಲ್ಲಿ ಸೋನಿಯಾಳನ್ನು ಮೊದಲ ಸಲ ನೋಡಿದ್ದ ಜಯಂತಿ ಮೇಡಮ್ಮೇ ಇದ್ದರು. ಹೋಗಿ ಹಿಂಗಿಂಗಾಗಿದೆ ಮೇಡಂ ಎಂದೆ. ನನ್ನ ಗಾಬರಿ ಅವರಲ್ಲೇನೂ ಪ್ರತಿಫಲಿತವಾಗಲಿಲ್ಲ. 

"ಹೌದಾ" ಎಂದಷ್ಟೇ ಹೇಳಿ "ಓಪಿಡೀಗ್‌ ಬರೋಕ್‌ ಮುಂಚೆ ಒಂದ್‌ ಸ್ಕ್ಯಾನ್‌ ಮಾಡಿಸಿಕೊಂಡೇ ಕರ್ಕೊಂಡು ಬಂದ್ಬಿಡಿ" ಎಂದ್ಹೇಳಿ ಸ್ಕ್ಯಾನಿಂಗಿಗೆ ಬರೆದುಕೊಟ್ಟರು. 

ಸೋನಿಯಾ ಶಶಿ ಬರುವಷ್ಟರಲ್ಲಿ ಸ್ಕ್ಯಾನಿಂಗ್‌ ಫಾರಂ ಬರೆದು ತುಂಬಿಸಿ ದುಡ್ಡು ಕಟ್ಟಿ ಬಾಗಿಲ ಬಳಿ ಅತ್ತಿಂದಿತ್ತ ಓಡಾಡುತ್ತಿದ್ದುದನ್ನು ಕಂಡು ರಾಮ್‌ಪ್ರಸಾದ್‌ ಬಳಿ ಬಂದರು. 

"ಯಾಕ್ರೀ ಡಾಕ್ಟ್ರೇ ಹಿಂಗ್‌ ಓಡಾಡ್ತ ..." 

ʻಏನಿಲ್ಲ. ನನ್‌ ತಮ್ಮ ಅವನೆಂಡ್ತಿ ಬರ್ತೀನಿ ಅಂದಿದ್ರು. ಕಾಯ್ತಿದ್ದೆʼ 

"ಕಾಯೋದ್‌ ಓಕೆ. ಹಿಂಗ್‌ ಗಾಬರೀಲ್‌ ಓಡಾಡ್ಕಂಡಾ? ಎಲ್ಲಾ ಆರಾಮಿದ್ಯ" 

ʻಇಲ್ಲ ರಾಮ್.‌ ಸೋನಿಯಾ ಕ್ಯಾರಿಯಿಂಗ್‌ ಇದ್ಲು. ಏನೋ ಬ್ಲೀಡಿಂಗ್‌ ಆಗಿದ್ಯಂತೆ. ಚೂರ್‌ ಟೆನ್ಶನ್ನುʼ 

"ಡಾಕ್ಟರಾಗಿ ನೀನೇ ಟೆನ್ಶನ್‌ ಮಾಡಿಕೊಂಡುಬಿಟ್ರೆ? ನಿಮ್ಮನ್ನ ನೋಡಿ ಅವರು ಇನ್ನಷ್ಟು ಗಾಬರಿಯಾಗೋದಿಲ್ವ. ನೀವೇ ಧೈರ್ಯ ತುಂಬಬೇಕಪ್ಪ" 

ʻಅದಿಕ್ಕೇ ಅವರು ಬರೋವಷ್ಟರಲ್ಲಿ ಗಾಬರೀನೆಲ್ಲ ದೂರ ಮಾಡಿಬಿಡಬೇಕು ಅಂತ ಹಿಂಗ್‌ ಓಡಾಡ್ತಿರೋದುʼ ಎಂದೊಂದು ಪೇಲವ ನಗೆ ನಕ್ಕೆ. ಮತ್ತೇನು ಪ್ರತಿಕ್ರಿಯಿಸೋದೆಂದು ತಿಳಿಯದೆ ರಾಮ್‌ ಕೂಡ ಸುಮ್ಮನೆ ಜೊತೆಗೆ ನಿಂತಿದ್ದ. ಐದು ನಿಮಿಷಕ್ಕೆ ಶಶಿ ಸೋನಿಯಾ ಬಂದರು. ಸೋನಿಯಾಳನ್ನು ಬಾಗಿಲ ಬಳಿ ಇಳಿಸಿ ಗಾಡಿ ನಿಲ್ಲಿಸಿ ಬರಲು ಶಶಿ ಹೋದ. ಸ್ಕ್ಯಾನಿಂಗ್‌ ರೂಮ್‌ ಹತ್ತಿರ ಬಂದುಬಿಡು ಎಂದು ಹೇಳಿ ನಾವು ಮೂರು ಮಂದಿ ಒಳಬಂದೊ. 

ಒಳಗೆ ಮತ್ತೊಬ್ಬರಿಗ್ಯಾರಿಗೋ ಸ್ಕ್ಯಾನಿಂಗ್‌ ನಡೆಯುತ್ತಿತ್ತು. ಈಗಷ್ಟೇ ಶುರುವಾಗಿದೆ. ಒಂದತ್ತು ಹದಿನೈದು ನಿಮಿಷ ಅಂದರು ಸಿಸ್ಟರ್.‌ ಅಲ್ಲೇ ಹೊರಗೆ ಕುಳಿತುಕೊಂಡೆವು. ರಾಮ್‌ ನನ್ನ ಪಕ್ಕದಲ್ಲಿ ಕುಳಿತುಕೊಂಡರು. ನನ್ನ ಪಕ್ಕದಲ್ಲಿ ಸೋನಿಯಾ. ಘಳಿಗೆಗೊಮ್ಮೆ ಏನನ್ನೋ ನೆನಪಿಸಿಕೊಂಡು ಕಣ್ಣಿನಲ್ಲಿ ನೀರು ತುಂಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಸಮಾಧಾನದ ಎಲ್ಲಾ ಮಾತುಗಳು ಅಪ್ರಯೋಜಕವಾಗಿಬಿಡುವ ಸಮಯ. ಬೆನ್ನು ಸವರಿದೆ ಅಷ್ಟೇ. ಸ್ಕ್ಯಾನಿಂಗಿಗೆ ಕಾಯುವ ಆ ಹತ್ತು ನಿಮಿಷಗಳು ಯಮಯಾತನೆಯದ್ದು. ತಲೆಯಲ್ಲಿ ಕ್ಷಣಮಾತ್ರದಲ್ಲೇ ಸಾವಿರಾರು ಯೋಚನೆಗಳು ಸುತ್ತಾಡುವ ಸಂದರ್ಭಗಳಲ್ಲಿ ಕೋಟ್ಯಾಂತರ ಯೋಚನೆಗಳು ಬರಲಿ ಎಂದು ಇನ್ನಷ್ಟು ಅನಂತವೆನ್ನಿಸುವಷ್ಟು ಕ್ಷಣಗಳನ್ನು ನಮ್ಮೆಡೆಗೆ ಬಿಸುಟಿ ಕಾಲ ನಕ್ಕು ನಲಿಯುವ ಸಮಯವದು. ಶಶಿ ಬಂದವನು ರಾಮ್‌ ಕಡೆಗೊಂದು ನಗೆ ಬೀರಿ ಸೋನಿಯಾಳ ಕೈ ಹಿಡಿದು ಪಕ್ಕದಲ್ಲಿ ನಿಂತುಕೊಂಡ. 

ಸುದೀರ್ಘವೆನ್ನಿಸುವ ಹತ್ತು ನಿಮಿಷಗಳು ಮುಗಿದು ಸೋನಿಯಾಳನ್ನು ಒಳಗೆ ಕರೆದರು. ನೀವ್‌ ಬರಲ್ವಾ ಅಂತ ಕಣ್ಣಲ್ಲೇ ಕೇಳಿದ ಸಿಸ್ಟರ್‌ಗೆ ಪರವಾಗಿಲ್ಲ ಬೇಡಿ ಎಂದೆ. ಒಳಗಿದ್ದ ರೇಡಿಯಾಲಜಿಸ್ಟ್‌ ಗೊತ್ತಿದ್ದವರೇ, ಹೋಗಬಹುದಿತ್ತು. ಒಳಗೋದ್ರೆ ನನಗೂ ಟೆನ್ಶನ್ನೂ.... ಸೋನಿಯಾ ಮತ್ತಷ್ಟು ಅಳುವುದನ್ನು ನೋಡಲು ನನ್ನಿಂದಾಗುವುದಿಲ್ಲ. ನರ್ಸ್‌ ಸೋನಿಯಾ ಹಿಂಗಿಂಗೆ ಧರಣಿಯ ರಿಲೇಟೀವು ಅಂತೇಳಿರಬೇಕು. ನನ್ನನ್ನೂ ಶಶಿಯನ್ನೂ ಒಳಗೆ ಕರೆದರು, ಸ್ಕ್ಯಾನಿಂಗ್‌ ಮುಗಿದ ಮೇಲೆ. ಹಾಸಿಗೆಯಿಂದೆದ್ದು ಬಟ್ಟೆ ಸರಿಪಡಿಸಿಕೊಳ್ಳುತ್ತಿದ್ದ ಸೋನಿಯಾಳ ಮುಖದ ಭಾವ ನೋಡಿ ನಮ್ಮಿಬ್ಬರಲ್ಲೂ ನಿರಾಳತೆ ಮೂಡಿತು. 

"ಮಗುವಿನ ಹಾರ್ಟ್ ಬೀಟೆಲ್ಲ ನಾರ್ಮಲ್ಲೇ ಇದೆ. ಎಂಬ್ರಿಯೋದಿಂದ ಬ್ಲೀಡಿಂಗ್‌ ಆಗಿಲ್ಲ. ಹಾರ್ಟ್‌ ರೇಟ್‌ ಮಾಮೂಲಿಗಿಂತ ಒಂದಷ್ಟು ಹೆಚ್ಚೇ ಜಾಸ್ತಿ ಇದೆ. ಇಂಪೆಂಡಿಂಗ್‌ ಅಬಾರ್ಷನ್‌ ಇದ್ರೂ ಇರಬಹುದು. ಮೇಡಂಗೊಂದ್ಸಲ ತೋರ್ಸಿ" ಎಂದರು ರೇಡಿಯಾಲಜಿಸ್ಟ್.‌ 

ಮತ್ತೊಂದು ಸುತ್ತು ಅಬಾರ್ಷನ್‌ ಹೆಸರು ಕೇಳಿ ಶಶಿ ಸೋನಿಯಾರ ಮುಖದಲ್ಲಿ ಪ್ರಶ್ನಾರ್ಹ ಚಿಹ್ನೆ ಮೂಡಿತು. ಹೊರಗೆ ಬರುತ್ತಿದ್ದಂತೆ "ಏನ್‌ ತೊಂದರೆ ಇಲ್ವ" ಅಂತ ಇಬ್ರೂ ಒಟ್ಟಿಗೇ ಕೇಳಿದ್ರು. 

ʻಅಬಾರ್ಷನ್‌ ಆಗಿಲ್ಲ. ಮಗುವಿನ ಹಾರ್ಟ್‌ ರೇಟ್‌ ಸ್ವಲ್ಪ ಜಾಸ್ತಿ ಇರೋದು ಅಪಾಯ ಅಂತಿದ್ರು....ʼ ಹೇಳಿ ಮುಗಿಸಿರಲಿಲ್ಲ ಸೋನಿಯಾಳ ಕಣ್ಣಲ್ಲಿ ನೀರು ತುಂಬಿಕೊಂಡಿತು. ʻಅಯ್ಯೋ ಸೋನಿಯಾ... ಅಳುವಂತದ್ದೇನಿಲ್ಲ. ಇವರಂಗೇಳಿದ್ದಾರೆ. ಮೇಡಂಗೊಂದ್ಸಲ ತೋರಿಸುವ ನಡಿ. ಅಬಾರ್ಷನ್‌ ಅಂತೂ ಆಗಿಲ್ಲ. ಮಗು ಅಚ್ಚುಕಟ್ಟಾಗಿದೆ. ಮೇಡಂ ಏನೇಳ್ತಾರೆ ನೋಡುವʼ ಅಷ್ಟೊತ್ತಿಗೆ ನಮ್ಮ ಬಳಿಗೆ ಬಂದು ನಾ ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿದ್ದ ರಾಮ್‌ "ಏನಾಗಲ್ಲ ಬಿಡಿ. ನೀವ್‌ ಸ್ಟ್ರೆಸ್‌ ತಗಂಡಷ್ಟೂ ತೊಂದರೇನೇ ಅಲ್ವ. ಮೊದಲು ಜಯಂತಿ ಮೇಡಂಗೆ ತೋರಿಸುವ ನಡೀರಿ. ಓಟಿ ಅಂತೇನಾದ್ರೂ ಹೋಗಿಬಿಟ್ಟಾರು ಮತ್ತೆ" ಎಂದರು. 

ಜಯಂತಿ ಮೇಡಂ ರಿಪೋರ್ಟ್‌ ನೋಡಿದರು. ಎರಡೆರಡು ಸಲ ಓದಿದರೆನ್ನಿಸುತ್ತೆ. ಸೋನಿಯಾಳನ್ನು ಮಲಗಿಸಿ ಪರ್‌ ವೆಜೈನಲ್‌ ಪರೀಕ್ಷೆ ನಡೆಸಿದರು. 

"ನಥಿಂಗ್‌ ಮಚ್‌ ಟು ವರಿ. ಸುಮಾರು ಜನಕ್ಕೆ ಈ ರೀತಿ ಬ್ಲೀಡಿಂಗ್‌ ಆಗ್ತದೆ. ಮಗುವಿಗಂತೂ ಏನೂ ತೊಂದರೆಯಾಗಿಲ್ಲ. ಸರ್ವಿಕ್ಸ್‌ ಹತ್ರ ಸ್ವಲ್ಪ ಬ್ಲೀಡಿಂಗ್‌ ಸ್ಪಾಟ್ಸ್‌ ಇದಾವೆ" 

ʻಏನಕ್‌ ಆ ರೀತಿ ಮ್ಯಾಮ್ʼ 

"ಇಂತದ್ದೇ ಕಾರಣ ಅಂತೇನಿಲ್ಲ. ಓಡಾಡುವುದರಿಂದಾನೂ ಆಗಬಹುದು. ಕೆಲವರಿಗಂತೂ ಇಡೀ ಒಂಭತ್ತು ತಿಂಗಳೂ ತಿಂಗಳಿಗೊಂದು ಸಲ ಪಿರೀಯಡ್ಸ್‌ ತರ ಆಗ್ತಾನೇ ಇರುತ್ತೆ. ಪ್ರತೀ ಸಲ ಸ್ಕ್ಯಾನ್‌ ಮಾಡ್ಕಂಡ್‌ ಟೆನ್ಶನ್‌ ತಗೋಬೇಕು ಅಷ್ಟೇ" ಎಂದವರು ಸೋನಿಯಾ ಕಡೆಗೆ ನೋಡಿ "ಗಾಬರಿಯಾಗಬೇಡಪ್ಪ. ಏನೂ ತೊಂದರೆಯಿಲ್ಲ. ಒಂದಷ್ಟು ದಿನ ಪೂರ್ತಿ ಬೆಡ್‌ ರೆಸ್ಟಲ್‌ ಇರಿ. ಇಲ್ಲ ಒಂದ್‌ ಕೆಲಸ ಮಾಡಿ. ಇನ್ನೂ ಸ್ವಲ್ಪ ಆಕ್ಟೀವ್‌ ಬ್ಲೀಡಿಂಗ್‌ ಇದೆ. ಒಂದೆರಡು ದಿನ ಇಲ್ಲೇ ಅಡ್ಮಿಟ್‌ ಆಗಿಬಿಡಿ. ನೋಡ್ಕಂಡು ಡಿಸ್ಚಾರ್ಜ್‌ ಮಾಡಿದರಾಯ್ತು" ಎಂದರು. 

ಸರಿ ಎಂದು ತಲೆಯಾಡಿಸಿದೆವು. 

"ಹಾರ್ಟ್ ಬೀಟ್‌ ಇರಬೇಕಾದಕ್ಕಿಂತ ಹೆಚ್ಚಿದೆಯಲ್ಲ.... ಇಂಪೆಂಡಿಂಗ್‌ ಅಬಾರ್ಷನ್‌ ಅಂತ ಬರೆದಿದ್ದಾರೆ" ಸೋನಿಯಾ ಕೇಳಿದಳು. 

"ಅದೇನಿಲ್ಲ" ಎಂದವರು ಸೋನಿಯಾಳ ಕೈಹಿಡಿದು ನಾಡಿಬಡಿತ ಅಳೆದರು. "ನೀವೂ ಸ್ಟ್ರೆಸ್‌ ಅಲ್ಲಿದ್ದೀರಲ್ಲ. ನಿಮ್ಮ ಹಾರ್ಟ್‌ ರೇಟೇ ನೂರಮೂವತ್ತರಷ್ಟಿದೆ. ಹಂಗಾಗಿ ಮಗುವಿನ ಹಾರ್ಟ್ ರೇಟೂ ಜಾಸ್ತಿಯಾಗಿರ್ತದೆ. ಅದೇನ್‌ ತಲೆ ಕೆಡಿಸಿಕೊಳ್ಳೋ ವಿಷಯವಲ್ಲ. ಅಡ್ಮಿಟ್‌ ಮಾಡಲಾ ಧರಣಿ" 

ʻನೀವೆಂಗೆ ಹೇಳ್ತೀರೋ ಹಂಗೆ ಮೇಡಂʼ 

"ಮತ್ತೇನಿಲ್ಲ. ಮತ್ತೆ ಈಗ ಮನೆಗೆ ಹೋಗಲು ಟ್ರಾವೆಲ್‌ ಮಾಡಬೇಕಲ್ಲ. ಹತ್ತಿರಾನೇ ಇರಬಹುದು. ಈ ರಸ್ತೆಗಳಲ್ಲಿ ಒಂದು ಕಿಲೋಮೀಟ್ರು ಹೋಗುವಷ್ಟರಲ್ಲಿ ಸೊಂಟ ಬಾಯಿಗೆ ಬಂದಿರ್ತದೆ. ಜೊತೆಗೆ ಮನೆಗಿಂತ ಆಸ್ಪತ್ರೆಯಲ್ಲಿ ಪೂರಾ ಬೆಡ್ ರೆಸ್ಟ್‌ ಆಗ್ತದೆ. ಒಂದೆರಡು ದಿನ ಇರೋದು ಒಳ್ಳೇದು ಅಂತ ನನಗನ್ನಿಸ್ತದೆ" ಎಂದರು. 

ʻಖಂಡಿತ ಮೇಡಂ. ಅಡ್ಮಿಟ್‌ ಮಾಡ್ಸುವʼ 

ಹೊರಬಂದೆವು. ಫೋನು ತೆಗೆದು ನೋಡಿದರೆ ಅಮ್ಮನದು ಹತ್ತು ಮಿಸ್ಡ್‌ ಕಾಲ್‌ ಇತ್ತು. ಫೋನಾಯಿಸಿದೆ. ಹಿಂಗಿಂಗಮ್ಮ ʻಏನ್‌ ತೊಂದರೆ ಇಲ್ಲʼ ಎಂದೆ. 

"ಏನೂ ತೊಂದರೆ ಇಲ್ಲ ಅಂದರೆ ಆಸ್ಪತ್ರೆಗೆ ಯಾಕೆ ಅಡ್ಮಿಟ್‌ ಮಾಡೋಕ್‌ ಹೇಳ್ತಿದ್ರು. ಏನೋ ಮುಚ್ಚಿಡ್ತಿದ್ದೀರಾ" ಎಂದರು. 

ʻಅಯ್ಯೋ ಇಲ್ಲಮ್ಮ. ಎಂತದ್ದೂ ಇಲ್ಲ. ಬೆಡ್‌ ರೆಸ್ಟಿಗೆ ಹೇಳಿದ್ದಾರೆ ಅಷ್ಟೇ. ಮೊದಲು ಇಲ್ಲಿ ಅಡ್ಮಿಶನ್‌ ಮಾಡಿಸಿಬಿಟ್ಟು ಬರ್ತೀನಿರಿ ಮನೆಗೆ. ರಾಜೀವ್‌ ಇದಾರ ಮನೆಯಲ್ಲೇ?ʼ 

"ಇಲ್ಲ. ಊಟ ಮಾಡಿ ಎಲ್ಲೋ ಹೊರಗೆ ಹೋದರು" 

ʻಸರಿ. ನಾ ಅವರಿಗೆ ಫೋನ್‌ ಮಾಡಿ ಬರೋಕೇಳ್ತೀನಿ. ಇಲ್ಲಿ ಅಡ್ಮಿಶನ್‌ ಮಾಡಿಸಿ ಬರ್ತೀನಿ. ಜೊತೇಲ್‌ ಬರೋಣವಂತೆʼ 

"ಈಗ್ಲೇ ಬರ್ತೀನಿ ಬಿಡು ಪಾಪು ಕರ್ಕಂಡು" 

ʻಅಯ್ಯೋ ಬೇಡಮ್ಮ. ಮಕ್ಕಳನ್ನ ಒಳಗೆ ಬಿಡೋದೇ ಇಲ್ಲ ನಮ್ಮಲ್ಲಿ. ಸುಮ್ಮನೆ ಮತ್ತೆ ಅವಳೂ ಹುಷಾರು ತಪ್ಪಿಯಾಳುʼ 

"ಸರಿ. ಬೇಗ ಬಾ. ರಾಜೀವನಿಗೆ ಫೋನ್‌ ಮಾಡಿ ಹೇಳು. ಬೇಗ ಬರ್ಲಿ ಅವರೂನು" 

ʻಹು. ಸೋನಿಯಾಳ ಅಮ್ಮನಿಗೆ ಹೇಳಿದ್ರಾ?ʼ 

"ಇಲ್ಲಮ್ಮ. ಅವರೆಲ್ಲಿ ನಮಗೆ ಮುಖ ಕೊಟ್ಟು ಮಾತಾಡ್ತಾರೆ ಹೇಳು" 

ʻಸರಿ ಬಿಡಿ. ನಾನೇ ಅಂಕಲ್ಗೆ ಫೋನ್‌ ಮಾಡಿ ಹೇಳ್ತೀನಿʼ 

ಸೋನಿಯಾಳನ್ನು ಅಲ್ಲೇ ಓಪಿಡಿ ಹೊರಗೆ ಕೂರಿಸಿ ಅಡ್ಮಿಶನ್‌ ಫೈಲ್‌ ಮಾಡಿಸಲು ನಾನೂ ರಾಮ್‌ ಬಂದೆವು. 

"ನೀವು ಅದ್ಯಾರ್ಯಾರಿಗೋ ಫೋನ್‌ ಮಾಡಬೇಕಲ್ಲವಾ? ನೀವ್‌ ಫೋನ್‌ ಮಾಡ್ತಿರಿ. ನಾ ಅಡ್ಮಿಶನ್‌ ಮಾಡಿಸ್ಕೊಂಡು ಬರ್ತೀನಿ" ಎಂದ್ಹೇಳುತ್ತಾ ನನ್ನುತ್ತರಕ್ಕೂ ಕಾಯದೆ ಕೈಯಲ್ಲಿದ್ದ ಓಪಿಡಿ ಸ್ಲಿಪ್ಪನ್ನು ಬಲವಂತದಿಂದಲೇ ಕಿತ್ತುಕೊಂಡರು. "ಸೆಮಿ ಪ್ರೈವೇಟ್‌ ವಾರ್ಡಾ ಪ್ರೈವೇಟ್‌ ವಾರ್ಡಾ?" 

ʻಪ್ರೈವೇಟ್‌ ಮಾಡ್ಸಿ.... ಇಲ್ಲಾ ಸೆಮಿ ಪ್ರೈವೇಟೇ ಮಾಡಿಸಿಬಿಡಿ ಸಾಕು. ದುಡ್ಡು ತಗೊಳಿʼ 

"ದುಡ್ಡು ಆಮೇಲ್‌ ಕೊಡುವೆ ಬಿಡವ್ವ. ಮೊದಲು ಅದ್ಯಾರ್ಯಾರಿಗೋ ಫೋನ್‌ ಮಾಡಬೇಕಲ್ವ. ಅದನ್ನ ಮಾಡಿ ಮುಗಿಸಿ" ಎಂದ್ಹೇಳಿ ಕೌಂಟರಿನೊಳಗೆ ಹೋದರು. 

ರಾಜೀವನಿಗೆ ಫೋನ್ ಮಾಡಿ ಬೇಗ ಮನೆಗೋಗಲು ತಿಳಿಸಿ, ರಾಮೇಗೌಡ ಅಂಕಲ್‌ಗೆ, ಅಪ್ಪನಿಗೆ ಫೋನ್‌ ಮಾಡಿ ವಿಷಯ ತಿಳಿಸುವಷ್ಟರಲ್ಲಿ ರಾಮ್ ಬಂದರು. ಸೋನಿಯಾಳನ್ನು ವೀಲ್‌ಚೇರಿನಲ್ಲಿ ಕುಳ್ಳರಿಸಿಕೊಂಡು ವಾರ್ಡಿಗೆ ಸೇರಿಸಿ ಗಂಡ ಹೆಂಡತಿಗೊಂದಷ್ಟು ಪ್ರೈವೆಸಿ ಕೊಟ್ಟು ನಾನೂ ರಾಮ್‌ ಹೊರಬಂದೆವು. 

ದಡಬಡಿಸಿ ಓಡಾಡಿ ಸುಸ್ತಾಗಿತ್ತು. ಹೊರಗೆ ಕುರ್ಚಿಯಲ್ಲಿ ಕುಳಿತೆವು. 

ʻನೀವೇನ್ರೀ ಬರೀ ನಮ್‌ ಮನೆಯವರಲ್ಲಿ ಯಾರಿಗಾದರೂ ಹುಷಾರಿಲ್ಲದಿದ್ದಾಗಲೇ ಜೊತೇಲಿರ್ತೀರಾ? ಅದೂ ನಿನ್ನದೇ ದುಡ್ಡು ಖರ್ಚು ಮಾಡಿಕೊಂಡುʼ ಎಂದು ನಗಾಡಿದೆ. ಅವತ್ತಿನ ದುಗುಡ ತುಂಬಿದ ವಾತಾವರಣಕ್ಕೆ ಅತ್ಯಗತ್ಯವಾಗಿ ಬೇಕಾಗಿದ್ದ ನಗುವಾಗಿತ್ತದು. ಸುಮ್ಮನೆ ನಕ್ಕರು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment