Jul 8, 2020

ಒಂದು ಬೊಗಸೆ ಪ್ರೀತಿ - 70

ಕೊನೆಯ ಪರೀಕ್ಷೆ ಮುಗಿಸಿ ಹೊರಬರುವ ಸಂತಸ ವರ್ಣಿಸುವುದು ಕಡು ಕಷ್ಟದ ಕೆಲಸ. ಥಿಯರಿ ಪಾಸಾಗೋದು ಗ್ಯಾರಂಟಿ ಅನ್ನೋ ಖುಷಿಯಲ್ಲಿ ಹೊರಬಂದವಳಿಗೆ ಕಿವಿಯಿಂದ ಕಿವಿಯವರೆಗೆ ನಗು ಹರಡಿಕೊಂಡು ಬಂದ ಸುಮಾ ಜೊತೆಯಾದಳು. 

ಹತ್ತಿರ ಬಂದು ಕೈ ಹಿಡಿದುಕೊಂಡವಳು "ಹೆಂಗಾಯ್ತೆ" ಎಂದು ಕೇಳಿದವಳು ನಾ ಉತ್ತರಿಸುವ ಮೊದಲೇ "ನೀ ಬಿಡು ಚೆನ್ನಾಗೇ ಮಾಡಿರ್ತಿ" ಎಂದು ಅವಳೇ ಉತ್ತರಿಸಿಕೊಂಡಳು. 

ʻಹು. ಕಣವ್ವ. ಪೇಪರ್ ಸೆಟ್ ಮಾಡಿದ್ದು ನಮ್ ಸಂಬಂಧಿಕರೇ ನೋಡು. ಎಲ್ಲಾ ಗೊತ್ತಿರೋದೇ ಕೊಟ್ಬಿಟ್ಟಿದ್ರು' 

"ಹ ಹ. ನಿಂಗ್ ಗೊತ್ತಿಲ್ಲದಿರೋದು ಏನಾದ್ರೂ ಇತ್ತಾ" 

ʻಹೆ ಹೆ. ಇಲ್ಲ. ಎಲ್ಲಾ ಗೊತ್ತಿತ್ತು!' 

"ಹಂಗಾದ್ರೆ ನಿನ್ ಸಂಬಂಧಿಕರೇ ಸೆಟ್ ಮಾಡಿರ್ಬೇಕು ಬಿಡು" 

ʻಸರಿ ಕಣವ್ವ. ನಾನೇ ಸೋತೆ. ಥಿಯರಿ ಪಾಸಾಗೋದ್ರಲ್ಲಿ ಅನುಮಾನ ಇಲ್ಲ ಬಿಡೆ. ಇನ್ ಕ್ಲಿನಿಕ್ಸ್ ಹೆಂಗ್ ಆಗ್ತದೋ ನೋಡ್ಬೇಕು' 

"ನೀ ಓದಿರೋದಿಕ್ಕೆ ಫೇಲಾಗೋದಿಕ್ಕೆ ಸಾಧ್ಯವೇ ಇಲ್ಲ ಬಿಡು" 

ʻಡಿ.ಎನ್.ಬಿ ಕ್ಲಿನಿಕ್ಸಿನಲ್ಲಿ ಪಾಸಾಗೋದಿಕ್ಕೆ ಓದಿರೋದ್ರ ಜೊತೆಗೆ ಅದೃಷ್ಟ ಕೂಡ ಇರ್ಬೇಕಲ್ಲ' 

"ನಿನಗಿಂತ ಅದೃಷ್ಟವಂತೆ ಯಾರಿದ್ದಾರೆ ಬಿಡವ್ವ. ಪ್ರತೀ ಸಲ ಥಿಯರಿ ಎಕ್ಸಾಮು ಬೆಂಗಳೂರಲ್ಲೋ ಚೆನ್ನೈಯಲ್ಲೋ ಮುಂಬೈಯಲ್ಲೋ ಇರೋದಪ್ಪ. ಇದೇ ಮೊದಲ ಸಲ ಮೈಸೂರಲ್ಲಿ ಆಗಿರೋದು. ಅದೃಷ್ಟ ಅಲ್ಲದೇ ಮತ್ತೇನಿದು?" 

ʻಹು ಕಣವ್ವ. ತುಂಬಾ ಅದೃಷ್ಟವಂತೆ ನಾನು. ನನ್ ಹಣೆಬರಾ ನಂಗೇ ಗೊತ್ತು. ಮೇಲಾಗಿ ನೀನೂ ಇಲ್ಲೇ ನನ್ನ ಜೊತೆಯಲ್ಲೇ ಪರೀಕ್ಷೆ ಬರೆದಿದ್ದು ಮೇಡಂ. ನಿಮ್ದೂ ಅದೇ ಅದೃಷ್ಟ' ರಾಜೀವ ಕೆಲಸ ಬಿಟ್ಟಿದ್ದರ ಬಗ್ಗೆಯೇ ಮನ ಚಿಂತಿಸುತ್ತಿತ್ತು. 

"ಅಂತದ್ದೇನಾಯ್ತೇ" 

ʻಎಲ್ಲಾ ಇಲ್ಲೇ ಕೇಳಿ ಮುಗಿಸುಬಿಡ್ತೀಯೋ, ಇಲ್ಲಾ ಕರ್ಕಂಡ್ ಹೋಗಿ ತಿಂಡಿ ಗಿಂಡಿ ಕೊಡಿಸ್ತೀಯೋ? ಹೊಟ್ಟೆ ಪದ ಹಾಡ್ತಿದೆ' 

"ಅಯ್ಯೋ. ಹೌದಲ್ಲ. ನಡೀ ಪಿಜ್ಜಾ ಗಿಜ್ಜಾ ತಿಂದು ಬರೋಣ. ಕುಂತ್ಕಂಡ್ ಹರಟಿದ್ರಾಯ್ತು" 

ಇಬ್ಬರೂ ಹತ್ತಿರದಲ್ಲೇ ಇದ್ದ ಪಿಜ್ಜಾ ಅಂಗಡಿಯ ಒಳಹೊಕ್ಕೆವು. 

ಆರ್ಡರ್‌ ಮಾಡಿ ಮುಗಿಸಿದ ಮೇಲೆ "ಏನಾಯ್ತೆ" ಎಂದಳು ಸುಮ. ಪರೀಕ್ಷೆ ಮುಗಿಸಿದ ಸಂತಸದಲ್ಲೇ ತೇಲುತ್ತಿದ್ದ ನನಗೆ ಯಾವ ವಿಷಯ ಕೇಳುತ್ತಿದ್ದಾಳೆ ಅನ್ನುವುದೇ ನೆನಪಾಗಲೊಲ್ಲದು. 

ʻಏನಾಯ್ತು?ʼ 

"ಅದೇನೋ ಅದೃಷ್ಟವಂತೆ ಅಂತಂದಾಗ ಗೊಳೋ ಅಂದ್ಯಲ್ಲ ಯಾಕೆ ಅಂತ" 

ʻಓ ಅದಾ.... ಮಾಮೂಲಿ ಇರ್ತವಲ್ಲ.... ಮನೇಲಿʼ 

"ಮ್.... ರಾಜೀವ್?‌" 

ʻಹುʼ 

"ಮತ್ತೇನ್‌ ಮಾಡಿದ್ರು?" 

ʻಕೆಲಸ ಬಿಟ್ರುʼ 

"ಅಯ್ಯ! ಯಾವಾಗ" 

ʻಹೋದ ವಾರ ಬಿಟ್ರುʼ 

"ಮ್"‌ 

"ಅದ್ಯಾಕಂತೆ ಬಿಟ್ಟಿದ್ದು ಇಷ್ಟು ಸಡನ್ನಾಗಿ? ಹೇಳಿದ್ದೀನಿ ನನ್ನ ಪ್ರಾಕ್ಟಿಕಲ್ಸ್‌ ಮುಗಿಯೋವರೆಗೂ ಬಿಡಬೇಡಿ ಅಂತ ಹೇಳ್ತಿದ್ದೆ" 

ʻನಾನೇನೋ ಹಂಗೇ ಹೇಳಿದ್ನಪ್ಪ. ಅವರೂ ಹು ಅಂತ ತಲೆಯಾಡಿಸಿದ್ದರು. ಈಗ ನೋಡಿದ್ರೆ ಬಿಟ್ಟು ಬಂದ್ರು. ಓದೋ ಟೆನ್ಶನ್ನಿನಲ್ಲಿ ಜಗಳ ಕೂಡ ಆಡೋಕಾಗಿಲ್ಲ ಇನ್ನೂ!ʼ 

"ಸೋ ಇವತ್ತು ಫುಲ್‌ ಜಗಳಕ್ಕೆ ಸಿದ್ಧಳಾಗಿ ಹೋಗ್ತಿದ್ದಿ ಅನ್ನಪ್ಪ" 

ʻಅಯ್ಯ. ಇಲ್ವೇ. ಜಗಳ ಆಡಿ ಮಾಡೋದೇನಿದೆ. ಬಿಟ್ಟಾಗಿದೆಯಲ್ಲ ಕೆಲಸ. ನೋಡುವ ಏನ್‌ ಮಾಡ್ತಾರೋ ಏನ್‌ ಕತೇನೋ ಅಂತ. ಒಟ್ನಲ್ ಸಾಕಪ್ಪ ಜೀವನ ಅಂತ ದಿನಕ್ಕೊಮ್ಮೆಯಾದರೂ ಅನ್ನಿಸದಿದ್ದರೆ ನಡೆಯಲ್ಲ ನೋಡುʼ 

"ಮತ್ತೆ! ಏನಾದ್ರೂ ಎಂಟರ್‌ಟೈನ್ಮೆಂಟ್‌ ಇರ್ಬೇಕಲ್ಲ ಜೀವನದಲ್ಲಿ, ಇಲ್ಲಾಂದ್ರೆ ಬೋರ್‌ ಆಗೋಗುತ್ತೆ" 

ʻಎಂಟರ್‌ಟೈನ್ಮೆಂಟ್‌ ಅಪರೂಪಕ್ಕಿರಬೇಕು. ಎಂಟರ್‌ಟೈನ್ಮೆಂಟ್‌ಎ ಜೀವನ ಆಗೋಗಬಾರದುʼ 

"ಹು. ಅದೂ ಸರೀನೆ. ಬಿಡೆ. ಮುಗೀತಲ್ಲ ಪರೀಕ್ಷೆ ಎಲ್ಲ. ಸರಿ ಹೋಗ್ತದೆ ಮುಂದಕ್ಕೆ" 

ʻಸರಿ ಹೋಗುತ್ತೆ ಸರಿ ಹೋಗುತ್ತೆ ಅಂತಾನೇ ನಾನೂ ದಿನ ದೂಡ್ತಿದ್ದೀನಿ. ಎಷ್ಟೋ ವರ್ಷಗಳೇ ಕಳೆದುಹೋಯಿತು. ಏನ್‌ ಸರಿ ಹೋಗಿದ್ಯೋ ನನಗಂತೂ ಗೊತ್ತಾಗಿಲ್ಲʼ 

"ಬಿಡುವಾಗಿ ಕುಳಿತು ಮಾತನಾಡು. ಸರಿ ಹೋಗ್ತದೆ" 

ʻಹೋಪ್‌ ಸೋ. ಇದೆಲ್ಲದರ ಮಧ್ಯೆ ಅವರು ಕೆಲಸ ಬಿಟ್ಟ ಮೇಲೆ ಒಂದು ಬಹುದೊಡ್ಡ ಪಾಸಿಟಿವ್‌ ಬದಲಾವಣೆ ಕೂಡ ಆಗಿದೆʼ 

"ಅದೇನಪ್ಪ. ದಿನಾ ಅಡುಗೆ ತಿಂಡಿ ಮಾಡ್ಕೊಡ್ತಾರ" 

ʻಚೆನ್ನಾಗ್‌ ಹೇಳ್ದೆ! ಮಾಡಿರೋದನ್ನ ತಿನ್ನೋದೂ ಇಲ್ಲ ಸರಿಯಾಗಿ. ಅರ್ಧಕ್ಕರ್ಧ ವೇಸ್ಟ್‌ ಆಗೋಗ್ತದೆ ಮನೇಲಿ. ನಿಂಗೇ ಗೊತ್ತಲ್ಲೇ ರಾಜೀವ್‌ ರಾಧಳ ಜೊತೆ ಅಷ್ಟಾಗಿ ಬೆರೀತಾ ಇರಲಿಲ್ಲ, ಅವಳನ್ನು ಕಂಡ್ರೆ ಆಗದಂತೆ ಆಡೋರು...ʼ 

"ಹು ಹೇಳಿದ್ದೆ, ಮುಂಚೆ ಒಂದ್ಸಲ" 

ʻಈಗ ಕೆಲಸ ಬಿಟ್ಟ ಮೇಲೆ ಪರವಾಗಿಲ್ಲ. ಅವರೇ ಮಗಳನ್ನು ರೆಡಿ ಮಾ‍‍ಡಿಸ್ಕಂಡು ಅಮ್ಮನ ಮನೆಗೆ ಕರ್ಕಂಡ್‌ ಹೋಗ್ತಾರೆ. ಅಲ್ಲಿ ಬಿಟ್ಟು ಹೊರಟುಬಿಡೋದೂ ಇಲ್ಲವಂತೆ. ಮಧ್ಯಾಹ್ನದವರೆಗೂ ಅವಳನ್ನು ಎತ್ತಾಡಿಸಿಕೊಂಡಿದ್ದು ಮಧ್ಯಾಹ್ನ ಅವಳಿಗೊಂದಷ್ಟು ತಿನ್ನಿಸೋ ಪ್ರಯತ್ನ ಮಾಡಿ ಅವಳು ಮಲಗಿದ ಮೇಲೆ ಹೊರಗೆ ಹೋಗ್ತಾರಂತೆʼ 

"ಓ! ಇದು ರಿಯಲಿ ಪಾಸಿಟಿವ್‌ ನ್ಯೂಸೇ ಸರಿ. ಹಂಗಾದ್ರೆ ಅವರು ಕೆಲಸ ಬಿಟ್ಟಿದ್ದನ್ನೆಲ್ಲ ಮಾಫಿ ಮಾಡಿಬಿಡಬಹುದು ಬಿಡು" 

ʻಹು. ನಂಗೂ ಹಂಗೇ ಅನ್ನಿಸ್ತದೆ. ಹೆಂಗೋ ಅಪ್ಪನಿಗೆ ಮಗಳ ಮೇಲೆ ಬಾಂಧವ್ಯ ಮೂಡಿದರೆ ಸಾಕುʼ 

"ಸಾಮಾನ್ಯ ಅಪ್ಪಂದಿರು ಹಂಗೇ ಅಂತೆ ಕಣೇ. ಒಂದಷ್ಟು ಸಮಯ ತೆಗೆದುಕೊಂಡ ನಂತರ ಮಕ್ಕಳೊಡನೆ ಹೊಂದ್ಕೋತಾರಂತೆ" ಇರಬಹುದೆಂಬಂತೆ ತಲೆಯಾಡಿಸಿದೆ. ತುಂಬಾ ಮೇಲ್ಮೇಲೆ ಹೇಳಿದ್ದೆ ಸುಮಾಳಿಗೆ. ರಾಜೀವ ತೀರ ಅಸಹ್ಯದ ಪದಗಳನ್ನು ಬಳಸಿ ನನ್ನನ್ನೂ ಮಗಳನ್ನೂ ಬಯ್ಯುವುದನ್ನೆಲ್ಲ ಹೇಳಿರಲಿಲ್ಲ. 

ʻಮತ್ತೆ ನೀನ್ಯಾವಾಗ ಮಕ್ಳು ಮಾಡ್ಕೊಳ್ಳೋದುʼ 

"ಅಯ್ಯೋ ಮಾಡ್ಕೊಂಡ್ರಾಯ್ತು ಬಿಡು" 

ʻಬೇಗ ಮಾಡಿಕೊಳ್ಳವ್ವ. ಇಲ್ಲಾಂದ್ರೆ ನೀನೇ ನೋಡ್ತೀಯಲ್ಲ. ಆ ಟ್ರೀಟ್ಮೆಂಟು ಈ ಟ್ರೀಟ್ಮೆಂಟು ಅಂತ ದೇಹ ಹೈರಾಣಾಗೋಗ್ತದೆʼ 

"ಅಷ್ಟೆಲ್ಲ ಕಷ್ಟಪಟ್ಟು ಮಗು ಮಾಡ್ಕೋಬೇಕಾ ಅಂತ ಕೂಡ ಬಹಳಷ್ಟು ಸಲ ಅನ್ನಿಸ್ತದೆ" 

ʻಹು ಕಣವ್ವ. ಮೊದಮೊದಲು ಗಂಡ ಹೂವಿನಂಗೆ ನೋಡ್ಕೋತಾನಲ್ಲ. ಅವಾಗೆಲ್ಲ ಚೆನ್ನಾಗೇ ಇರ್ತದೆ. ಆಮೇಲಾಮೇಲೆ ಬೇಸರʼ 

"ಅಯ್ಯೋ ಇಲ್ವೇ. ನಮ್ಮೋರತ್ರ ಅಷ್ಟೆಲ್ಲ ಸೀನ್‌ ಇಲ್ಲ. ಅವರು ಮಾತಾಡೋದೇ ಚೂರ್‌ ಚೂರು. ಎಲ್ಲಿ ತಿಂದಿದ್ದೆಲ್ಲ ಅರಗಿಬಿಟ್ಟು ಸವೆದೋಗ್ತೀನೋ ಅಂತ ಲೆಕ್ಕ ಹಾಕಂಡ್‌ ಮಾತಾಡ್ತಾರೆ" 

ʻಅವರ ಮಾತೆಲ್ಲ ನೀನೇ ಆಡಿಬಿಡ್ತೀಯೋ ಏನೋʼ ಎಂದು ತಮಾಷೆ ಮಾಡಿದೆ. ನೋವಿನ ನಗು ಕಂಡಿತಷ್ಟೇ. ʻಯಾಕವ್ವ? ಏನಾದ್ರೂ ತಪ್ಪಾಡಿದ್ನಾ?ʼ 

"ತಪ್ಪೇನಿಲ್ವೇ. ಬೇಸಿಕಲಿ ಮಾತು ಕಮ್ಮಿ ಅನ್ನೋದು ಸಮಸ್ಯೆ ಅಲ್ಲ. ಅವರು ತುಂಬಾ ಇಂಟ್ರಾವರ್ಟ್.‌ ನನ್ನ ಜೊತೆ ಅಷ್ಟೇ ಅಂತಲ್ಲ. ಅವರ ಮನೆಯವರ ಜೊತೇಗೂ ಮಾತನಾಡಲ್ಲ. ಸೀರಿಯಸ್ಲಿ ನನಗೆಷ್ಟೋ ಸಲ ಇವರು ನನ್ನನ್ನು ಇಷ್ಟವಿಲ್ಲದೆ ಮದುವೆಯಾಗಿಬಿಟ್ಟರೇನೋ ಅನ್ನಿಸುತ್ತೆ. ಒಂದ್‌ ಊಟಕ್‌ ಕಾಯಲ್ಲ, ಊಟಕ್‌ ಕರೆದುಕೊಂಡು ಹೋಗಲ್ಲ. ಉಂಡ್ಯಾ ಬಿಟ್ಯಾ ಅಂತ ಕೇಳಲ್ಲ" 

ʻಕೆಲವರು ಹಂಗ್‌ ಇರ್ತಾರೆʼ ಸಮಾಧಾನದ ಮಾತಾಡುವ ಸರದಿ ಈಗ ನನ್ನದಾಗಿತ್ತು. 

"ಇಲ್ವೇ. ಒಂದ್‌ ದಿನದ ಕತೆಯಾದ್ರೆ ಪರವಾಗಿಲ್ಲ. ದಿನನಿತ್ಯ ಇದೇ ಆದ್ರೆ ತುಂಬಾನೇ ಹಿಂಸೆ ಆಗ್ತದೆ. ನೇರ ಅವರನ್ನೇ ಕೇಳಿದೆ ನಿಮಗೇನು ಈ ಮದುವೆ ಇಷ್ಟವಿರಲಿಲ್ಲವಾ? ಬೇರೆ ಯಾರನ್ನಾದ್ರೂ ಪ್ರೀತಿಸ್ತಿದ್ರಾ ಅಂತ. ಹಂಗೇನೂ ಇಲ್ಲ ಅಂತ ತಲೆಯಾಡಿಸಿ ಎದ್ದು ಹೋಗಿಬಿಡ್ತಾರೆ. ಕೇಳೋ ಪ್ರಶ್ನೆಗೂ ಉತ್ತರ ಕೊಡದವರ ಬಳಿ ಹೆಂಗಿರೋದು ಅನ್ನಿಸಿಬಿಟ್ಟಿದೆ. ಮನೆಯಲ್ಲಿ ಅಮ್ಮನ ಬಳಿ ಹೇಳಿಕೊಂಡೆ. ಸರಿ ಹೋಗ್ತಾರೆ ಬಿಡು, ನಿಮ್ಮಪ್ಪನ ಹತ್ತಿರ ಹೇಳೋಕೋಗಬೇಡ ಸುಮ್ನೆ ಗಲಾಟೆ ಆಗೋದೆಲ್ಲ ಯಾಕೆ. ತುಂಬಾ ಒಳ್ಳೆ ಕುಟುಂಬ ಅವರದು, ಸ್ವಲ್ಪ ಅಡ್ಜಸ್ಟ್‌ ಮಾಡ್ಕೋ, ಸ್ವಲ್ಪ ದಿನ ಸರಿ ಹೋಗ್ತದೆ ಅಂದ್ರು. ಒಳ್ಳೇ ಕುಟುಂಬ ಅಂತೆ ಮೈ ಫುಟ್.‌ ದಿನಾ ಅನುಭವಿಸೋದು ನಾನು" 

ʻಇಷ್ಟೆಲ್ಲ ನಡೀತಿದ್ಯೇನೇ. ಒಂದ್‌ ದಿನಕ್ಕೂ ಹೇಳಲೇ ಇಲ್ಲ ನೀನುʼ 

"ಯಾರ್‌ ಹತ್ರ ಏನ್‌ ಹೇಳಿಕೊಂಡ್ರೆ ಏನ್‌ ಉಪಯೋಗ ಅನ್ನಿಸಿಬಿಟ್ಟಿದೆ" 

ʻಮ್.‌ ಬೇರೆಯವರತ್ರ ಹೇಳಿಕೊಂಡ್ರೆ ಪರಿಹಾರ ಸಿಗ್ತದೆ ಅಂತಲ್ಲ, ಕೊನೇಪಕ್ಷ ಸುಳ್ಳು ಸುಳ್ಳೇ ಮನಸ್ಸಿಗೊಂದಷ್ಟು ಸಮಾಧಾನವಾಗ್ತದೆ ಅಂತ ಅಷ್ಟೇʼ 

"ಅದೂ ಸರೀನೆ. ನಿನ್‌ ಹತ್ರ ಹೇಳಬಾರದು ಅಂತೇನಿರಲಿಲ್ಲ. ಮೂರು ತಿಂಗಳಿಂದೀಚೆಗೆ ತೀರ ಜಾಸ್ತಿಯಾಗೋಗಿದೆ. ನಂಬ್ತೀಯೋ ಬಿಡ್ತೀಯೋ ನಾನೂ ನನ್ನ ಗಂಡ ಅನ್ನಿಸಿಕೊಂಡೋನು ಮಾತನಾಡಿ - ಆ...ಹೂ.... ಅಂತ ಮಾತನಾಡಿಯೂ ಹತ್ತು ದಿನದ ಮೇಲಾಗಿದೆ. ಯಾಕೆ? ಗೊತ್ತಿಲ್ಲ. ಜಗಳಾನ? ಇಲ್ಲ.... ಏನ್‌ ಹೇಳ್ತಿ ಇದಕ್ಕೆ" 

ʻಕೌನ್ಸಿಲಿಂಗ್‌ ಬೇಕು ಅವರಿಗೆ ಅನ್ನಿಸಲ್ವಾ ನಿನಗೆʼ 

"ಅದನ್ನೂ ಕೇಳಾಗಿತ್ತು. ಅವರಿಂದ ಏನೂ ಉತ್ತರ ಬರಲೇ ಇಲ್ಲ. ನನ್ನತ್ತೆಯ ಬಳಿ ಹೇಳಿದೆ. ನನ್‌ ಮಗನಿಗೇನಾಗಿದೆ? ಅದೆಲ್ಲ ಬೇಡ ಅಂದರು. ಈ ಕಡೆ ಗಂಡ ಮಾತಾಡಲ್ಲ, ಆ ಕಡೆ ನಮ್ಮಮ್ಮನ ಸಪೋರ್ಟ್‌ ಇಲ್ಲ. ಇನ್ನು ಅತ್ತೆ ಮಾವ ಏನೂ ಆಗೇ ಇಲ್ಲ ಅನ್ನೋವಂತೆ ಇರ್ತಾರೆ.... ತಲೆ ಚಿಟ್ಟು ಹಿಡ್ದೋಗುತ್ತೆ" 

ʻಮ್.‌ ಸೆಕ್ಸ್?‌ʼ 

"ಹ ಹ..... ಚೆನ್ನಾಗ್‌ ಕೇಳ್ದೆ. ಮಾತಾಡೋದೇ ಕಷ್ಟ ಇನ್ನು ಅದೆಲ್ಲ ಎಲ್ಲಿ ಮಾಡ್ತಾರೆ ಬಿಡು..." 

ʻಒಂದ್ಸಲಾನೂ ಆಗಿಲ್ವ!ʼ ಗಾಬರಿಯಾಗುವ ಸರದಿ ನನ್ನದು. 

"ಆಗಿತ್ತು. ಮದುವೆ ಮುಗಿದ ಮೇಲೆ ಹನಿಮೂನಿಗೆಂದು ಹೋದಾಗ.... ಎರಡು ಸಲ" 

ʻಅದಾದ ಮೇಲೆʼ 

"ಇಲ್ಲ" 

ʻಅದೂ ಬೇಕು ಅನ್ನಿಸಲ್ವಂತ ಅವರಿಗೆ?ʼ 

"ಯಾರಿಗ್ಗೊತ್ತು? ಬಾಯಿ ಬಿಟ್ಟು ಹೇಳಿದ್ರೆ ತಾನೆ" 

ʻಸೆಕ್ಸ್ ಸಮಸ್ಯೆಯಿಂದೇನಾದ್ರೂ ಈ ರೀತಿ ಮೌನಕ್ಕೆ ಶರಣಾಗಿಬಿಟ್ರು ಅನ್ನಿಸುತ್ತಾ ನಿನಗೆʼ 

"ಹಂಗೇನಿಲ್ವೇ. ಚೆನ್ನಾಗೇ ಆಗಿತ್ತು ಆಗ" 

ʻಮ್ʼ 

ಅರ್ಧ ಪಿಜ್ಜಾ ತಿಂದು ಮುಗಿಸುವವರೆಗೂ ಇಬ್ಬರೂ ಮಾತನಾಡಲಿಲ್ಲ. ಸಂಸಾರ ಕೂಡ ಈ ಪಿಜ್ಜಾ ತರ ಆಗೋಗಿದ್ಯಲ್ಲ. ಬಿಸಿಬಿಸೀಲಿದ್ದಾಗ ಚೆಂದ, ಚೂರ್‌ ತಣ್ಣಗಾದ್ರೂ ತಿನ್ನೋದು ಹಿಂಸೆ. ಕಾಸ್‌ ಕೊಟ್ಟು ಬಿಟ್ಟಿದ್ದೀವಲ್ಲ ಅಂತ ಬಲವಂತವಾಗಿ ತಿಂದು ಮುಗಿಸಬೇಕಷ್ಟೇ. ಪಾಪ ಸುಮಾಗೆ ಮೊದಲಿಂದಾನೂ ಹಿಂಸೇನೇ ಆಗೋಗಿದ್ಯಲ್ಲ. ನನಗೆ ಕೊನೇಪಕ್ಷ ಮದುವೆಯ ಮೊದಲ ವರ್ಷ ಅದ್ಭುತವಾಗೇ ಇತ್ತು. ಯಾಕೋ ಇತ್ತೀಚೆಗೆ ಹಿಂಸೆ ಅನ್ನಿಸ್ತಿದೆ. ಬಟ್‌ ಸ್ಟಿಲ್‌, ಭರವಸೆ ಬತ್ತಿಲ್ಲ. ಒಂದ್ಯಾವುದಾದ್ರೂ ಬ್ಯುಸಿನೆಸ್‌ ಸರಿಯಾಗಿ ಕೈ ಹಿಡಿದು ಕೈಯಲ್ಲಿ ನಾಕು ಕಾಸು, ನಾ ದುಡಿಯೋದಕ್ಕಿಂತ ನಾಕು ಹೆಚ್ಚಿನ ಕಾಸು ಸಿಕ್ಕಿದ್ರೆ ಸಾಕು ರಾಜೀವ್‌ ಲವಲವಿಕೆ ಮರಳಿ ಪಡೆದುಬಿಡುತ್ತಾರೆ. ಮಾತು, ಯೋಚನೆಗಳೆಲ್ಲವೂ ಯಾಕೋ ಸೀರಿಯಸ್ಸಾಗೋದೋ ಇವತ್ತು. 

ʻಅಲ್ವೇ ಸುಮ. ನಿಂಗ್‌ ಬೇಕು ಅನ್ನಿಸಲ್ವ?ʼ 

"ಏನು?" 

ʻಅದೇ ಕಣೇ ಸೆಕ್ಸುʼ 

"ಅನ್ಸುತ್ತೆ. ಈಗಂತೂ ದಿನಾ ರಾತ್ರಿ ಅನ್ಸುತ್ತೆ. ಹಿಂಸೆ ಆಗುತ್ತೆ. ಪರೀಕ್ಷೆಗೆ ಓದೋಕೆ ಅಂತ ಕುಂತಾಗೆಲ್ಲ ಅನ್ಸುತ್ತೆ. ಆದ್ರೆ ಏನ್‌ ಮಾಡೋದವ್ವ. ನಂಗೇನ್‌ ರಾಮ್‌ ತರ ಬಾಯ್‌ಫ್ರೆಂಡ್‌ ಇದ್ದಾರ ಹಿಂಸೆ ಕಮ್ಮಿ ಮಾಡಿಸಿಕೊಳ್ಳಲಿಕ್ಕೆ....." ಹೇಳ್ಬಾರ್ದಿತ್ತೇನೋ ಅಂತ ಉಗುಳು ನುಂಗುವುದರೊಳಗೆ ಹೇಳಾಗಿತ್ತು. 

ʻಏನಂತ ಮಾತಾಡ್ತಿದ್ದಿ?ʼ ಉಸಿರು ಜೋರಾಗಿತ್ತು. 

"ಸಾರಿ ಸಾರಿ. ನಾ ಆ ಅರ್ಥದಲ್ಲಿ ಹೇಳಲಿಲ್ಲ" 

ʻಅದೇ ಅರ್ಥದಲ್ಲೇ ಹೇಳಿದ್ದು ನೀನುʼ 

"ಸಾರಿ ಸಾರಿ" 

ʻಸಾರಿ ಯಾಕ್‌ ಕೇಳ್ತಿ? ನಿನ್‌ ಮನಸ್ಸಿನಲ್ಲಿರೋದನ್ನ ಹೇಳಿದೆ ಅಷ್ಟೇʼ 

"ನನ್‌ ಮನಸಲ್‌ ಹಂಗ್‌ ಇಲ್ವೇ. ನೋಡು. ಈಗ ಮಿಸ್ಸಾಗಿ ನನ್ನ ಬಾಯಿಂದ ಉದುರಿದ ಮಾತವು. ಆದರೆ ನಮ್ಮಾಸ್ಪತ್ರೇಲಿ ಬಹಳಷ್ಟು ಜನ ನಿಮ್ಮಿಬ್ಬರ ಮಧ್ಯೆ ಸಂಬಂಧ ಇದೆ ಅಂತಾನೇ ಮಾತಾಡ್ಕೋತಾರೆ" 

ʻದಿನಾ ಜೊತೇಲ್‌ ಒಂದ್‌ ಕಾಫಿ ಕುಡ್ದು, ಮಧ್ಯಾಹ್ನ ಜೊತೇಲಿ ಊಟ ಮಾಡಿದ್ದಕ್ಕೇ ಸಂಬಂಧ ಇದೆ ಅಂತಾನಾ?ʼ 

"ಅದು ನಿನಗೆ ಗೊತ್ತು. ನೋಡೋರಿಗೇನು ಗೊತ್ತು?" 

ʻನೋಡೋರ್‌ ಸಾವಿರ ಮಾತಾಡ್ಲಿ ಸುಮ. ನೀನೂ ಅಂತದ್ದೇ ಮಾತಾಡ್ತಿ ಅಂತ ಅಂದುಕೊಂಡಿರಲಿಲ್ಲ ನಾನು. ಬೇರೆಯವರ ತರಾನೇ ಯೋಚನೆ ಮಾಡೋ ನಿನಗೂ ಯಾವುದೇ ಕ್ಲ್ಯಾರಿಫಿಕೇಶನ್‌ ಕೊಡೋ ಅವಶ್ಯಕತೆ ನನಗಿಲ್ಲ ಅಂತ ಗೊತ್ತು. ಆದರೆ ನೀ ನನ್ನ ಸೋ ಕಾಲ್ಡ್‌ ಸ್ನೇಹಿತೆ ಅಲ್ವ, ಹಂಗಾಗಿ ಹೇಳ್ತಿದ್ದೀನಿ ಕೇಳಿಸ್ಕೋ. ನೀ ನಂಗೆ ಹೆಂಗೆ ಕ್ಲೋಸ್‌ ಫ್ರೆಂಡೋ ಹಂಗೇ ರಾಮ್‌ ಕೂಡ ನಂಗೇ ಒಳ್ಳೇ ಫ್ರೆಂಡು ಅಷ್ಟೇ. ಸರೀ ಲೆಕ್ಕ ಹಾಕಿದ್ರೆ ನಿನಗಿಂತ ಕಡಿಮೆ ಫ್ರೆಂಡು. ನಾ ನಿನ್‌ ಜೊತೆ ಯಾವಾಗಾದ್ರೂ ಸೆಕ್ಸ್‌ ಮಾಡಿದ್ದೀನಾ? ಇಲ್ಲವಲ್ಲ. ಹಂಗೇ ರಾಮ್‌ ಜೊತೇಗೂ ಮಾಡಿಲ್ಲ. ಫ್ರೆಂಡ್ಸ್‌ ಜೊತೆ ಎಲ್ಲ ಸೆಕ್ಸ್‌ ಮಾಡೋ ವ್ಯಕ್ತಿತ್ವ ನನ್ನದಲ್ಲʼ ಎಂದು ಹೇಳಿ ಅರ್ಧ ಉಳಿದಿದ್ದ ಪಿಜ್ಜಾದ ಪಕ್ಕದಲ್ಲಿ ಐನೂರರ ಒಂದು ನೋಟಿಟ್ಟು ಹೊರಟುಬಿಟ್ಟವಳ ಕಣ್ಣಲ್ಲಿದ್ದಿದ್ದು ನೋವಿನ ನೀರು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment