Jun 4, 2020

ಒಂದು ಬೊಗಸೆ ಪ್ರೀತಿ - 66

ಡಾ. ಅಶೋಕ್.‌ ಕೆ. ಆರ್.‌
ಸದ್ಯ ರಾಧ ಯಾವುದೇ ಹೆಚ್ಚು ತೊಂದರೆಗಳಿಲ್ಲದೆ ಎರಡು ದಿನದಲ್ಲಿ ಗೆಲುವಾಗಿಬಿಟ್ಟಳು. ಅಷ್ಟರಮಟ್ಟಿಗೆ ನನಗೂ ನಿರಾಳ. ಇಲ್ಲವಾದರೆ ಆಸ್ಪತ್ರೆಗೆ ರಜೆ ಹಾಕಿ ಮಗಳನ್ನು ನೋಡಿಕೊಳ್ಳುವುದು ಕಷ್ಟವಾಗಿಬಿಡುತ್ತಿತ್ತು. ರಾಜೀವ ನೆಪಕ್ಕೆ ನಿನ್ನೆ ಬಂದು ಹೋಗಿದ್ದ. ನನ್ನೊಡನೆ ಮಾತುಕತೆಯಿರಲಿಲ್ಲ. ಅಮ್ಮನೊಡನೆ ಹು ಉಹ್ಞೂ ಎಂದಷ್ಟೇ ಮಾತನಾಡಿ ಹೊರಟುಬಿಟ್ಟ. ಏನಕ್ಕೆ ಈ ರೀತಿಯಾಗ್ತಿದೆಯೋ ಗೊತ್ತಿಲ್ಲ. ತೀರ ಜಗಳವಾಗುವಂತದ್ದೇನೂ ಇತ್ತೀಚೆಗೆ ನಡೆದೂ ಇಲ್ಲ. ಆದರೂ ಯಾಕೋ ನನ್ನ ಕಂಡರೆ ಅವರಿಗೆ ಮುನಿಸು, ಮಗಳನ್ನು ಕಂಡರಂತೂ ಬೇಡದ ಸಿಟ್ಟು. ಅವರಿಗೆ ಓದಿಗೆ ತಕ್ಕ ಕೆಲಸ ಸಿಗದಿದ್ದರೆ ನಾ ಹೇಗೆ ಹೊಣೆಯಾಗ್ತೀನಿ? ಅನ್ನೋ ಪ್ರಶ್ನೆಗೆ ಮದುವೆಯಾದಂದಿನಿಂದ ಉತ್ತರ ಹುಡುಕಲೆತ್ನಿಸುತ್ತಿದ್ದೀನಿ, ಇನ್ನೂ ಸಿಕ್ಕಿಲ್ಲ. ಒಂದು ವೇಳೆ ಅವರ ಓದಿಗೆ ತಕ್ಕ ಕೆಲಸ ಸಿಕ್ಕಿ, ನನ್ನ ಓದಿಗೆ ತಕ್ಕ ಕೆಲಸ ಸಿಗದೇ ʻನಡೀರಿ ಈ ಊರು ಬೇಡ. ಬೇರೆ ಊರಿಗೆ, ನನಗೆ ಸರಿಯಾದ ಕೆಲಸ ಸಿಗುವ ಊರಿಗೆ ಹೋಗುವʼ ಎಂದೇನಾದರೂ ನಾ ಹೇಳಿದ್ದರೆ ಅವರು ಒಪ್ಪಿ ಬಿಡುತ್ತಿದ್ದರಾ? ಖಂಡಿತ ಇಲ್ಲ. "ನಾ ದುಡೀತಿಲ್ವ. ಮುಚ್ಕಂಡ್‌ ಮನೇಲ್‌ ಬಿದ್ದಿರು, ಮಗು ನೋಡ್ಕಂಡು" ಅಂತಾನೋ ಅಥವಾ ಮೂಡು ಚೆನ್ನಾಗಿದ್ದಾಗ "ನಾ ದುಡೀತಿದ್ದೀನಲ್ಲ ಡಾರ್ಲಿಂಗ್.‌ ನೀ ಆರಾಮಿರು ಮನೇಲಿ" ಅಂತಾನೋ ಹೇಳಿ ಪುಸಲಾಯಿಸುತ್ತಿದ್ದರು. 

ಹೊಕ್ಕೊಳ್ಲಿ ನನಗೇನೂ ತೀರ ಮೈಸೂರಲ್ಲೇ ಇರಬೇಕು, ಬೆಂಗಳೂರಿಗೆ ಯಾವುದೇ ಕಾರಣಕ್ಕೂ ಹೋಗಲೇಬಾರದು ಅಂತೇನೂ ಇಲ್ಲ. ಒಳ್ಳೆ ಕೆಲಸ ಸಿಕ್ಕಿದರೆ ಮೈಸೂರಾದರೇನು, ಬೆಂಗಳೂರಾದರೇನು? ಎರಡೂ ಕಡೆ ನಡೀತದೆ. ಬರೀ ಎಂ.ಬಿ.ಬಿ.ಎಸ್‌ ಇಟ್ಕಂಡು ಬೆಂಗಳೂರಿಗೆ ಹೋಗೋ ಯೋಚನೆ ನನ್ನಲಿರಲಿಲ್ಲ. ಈ ಡಿ.ಎನ್.ಬಿಗೆ ಸೇರುವಾಗಲಾದರೂ ಪೂರ್ತಿ ಫೀಸು ಕಟ್ಟಿಬಿಟ್ಟಿದ್ದರೆ ಮುಗಿಸಿದ ತಕ್ಷಣ ಹೊರಡಬಹುದಿತ್ತೇನೋ, ಪೂರ್ತಿ ಫೀಸು ಕಟ್ಟಲು ಹಣವಿರಲಿಲ್ಲ, ಅವರಪ್ಪನ ಮನೇಲಿ ಹಣ ತರುವ ಮನಸ್ಸು ಇವರಿಗೂ ಇರಲಿಲ್ಲ. ಈಗ ವಿಧಿಯಿಲ್ಲ, ಇದೇ ಆಸ್ಪತ್ರೆಯಲ್ಲಿ ಬಾಂಡ್‌ ಪೂರೈಸಲೇಬೇಕು. ಒಂದ್‌ ವೇಳೆ ಪೂರ್ತಿ ಫೀಸು ಕಟ್ಟಿದ್ರೆ ತಾನೇ ಮೈಸೂರು ಬಿಟ್ಟೋಗಲು ಸಾಧ್ಯವಾಗ್ತಿತ್ತಾ? ಚಿಕ್ಕ ಮಗಳನ್ನು ಕಟ್ಟಿಕೊಂಡು. ಹೆಂಗೋ ಅಮ್ಮನ ಮನೆ ಹತ್ತಿರವಿದೆ, ಮಗಳನ್ನು ನೋಡಿಕೊಳ್ತಾರೆ. ಈ ಕಾರಣದಿಂದಲೇ ಅಲ್ಲವೇ ನಾನು ಓದಿಕೊಂಡು ಆಸ್ಪತ್ರೆಗೆ ಹೋಕ್ಕೊಂಡು ಇರೋಕೆ ಆಗಿರೋದು. ಅಮ್ಮನ ಮನೆ ಬೇರೆ ಕಡೆಯಿದ್ದಿದ್ದರೆ ಇದು ತಾನೇ ಎಲ್ಲಿ ಸಾಧ್ಯವಾಗುತ್ತಿತ್ತು. ರಾಜೀವನ ಮನೆಯವರಂತೂ ಮೊಮ್ಮಗಳನ್ನು ನೋಡಲು ಬರುವುದು ಅಪರೂಪದಲ್ಲಿ ಅಪರೂಪ. ಮಗಳಿಗಿಂಗೆ ಹುಷಾರಿಲ್ಲ ಅಂತ ರಾಜೀವ ಅವರ ಮನೆಯವರಿಗೆ ಹೇಳದೇ ಇರ್ತಾರಾ? ಹೇಳೇ ಇರ್ತಾರೆ. ಆದರೂ ನೋಡಲೊಬ್ಬರೂ ಬಂದಿಲ್ಲ. ಅಥವಾ ಇವರೇ ಹೇಳಿಲ್ಲವೋ? ತಿಳಿದುಕೊಳ್ಳುವುದೇಗೆ? ತಿಳಿದು ಆಗಬೇಕಾಗಿರುವುದಾದರೂ ಏನು. 

ಮಧ್ಯಾಹ್ನ ಮಲಗಿದ್ದ ರಾಧ ಎದ್ದಾಗ ಘಂಟೆ ಆರಾಗಿತ್ತು. ಮಗಳು ಏಳುವವರೆಗೆ ಒಂದಷ್ಟು ಓದಿಕೊಳ್ಳೋಣವೆಂದು ಪುಸ್ತಕ ಕೈಯಲ್ಲಿಡಿದುಕೊಂಡರೆ ಬರೀ ಇಂತವೇ ಬೇಡದ ಆಲೋಚನೆಗಳು. ಎರಡು ಪುಟದಷ್ಟನ್ನೂ ಓದಲಾಗಿರಲಿಲ್ಲ. ಓದಿದ್ದ ಎರಡು ಪುಟಗಳಲ್ಲೇನಿತ್ತು ಎನ್ನುವುದು ನೆನಪಾಗದಷ್ಟು ಅಚ್ಚುಕಟ್ಟಾಗಿ ಓದುತ್ತಿದ್ದೆ. ಇನ್ನೇನು ಇವತ್ಯಾಕೋ ಓದುವ ಸಾಧ್ಯತೆಯೂ ಇಲ್ಲ. ಮಗಳ ಜೊತೆ ಎರಡು ದಿನದಿಂದ ನಾನೂ ಇಲ್ಲೇ ಅಮ್ಮನ ಮನೆಯಲ್ಲೇ ಇದ್ದೆ. ಮನೆಗಾದರೂ ಹೋಗುವ ಎಂದುಕೊಂಡೆ. ಇನ್ನೊಂದೆರಡು ದಿನ ಇದ್ದು ಹೋಗು ಅಂದಿದ್ದೆ ಅಮ್ಮ. ʻಹೇ. ಮನೆ ಎಲ್ಲ ಧೂಳಾಗಿರ್ತದೆ. ಹೋಗಿ ಕ್ಲೀನ್ ಮಾಡ್ಬೇಕಲ್ಲ. ಇವರಂತೂ ಕ್ಲೀನ್ ಮಾಡಿರೋದಿಲ್ಲ' ಎಂದೊಂದು ನೆಪ ಹೇಳಿದೆ. ಮುಖ್ಯ, ರಾಜೀವನ ಜೊತೆ ಒಂದಷ್ಟು ಮಾತನಾಡಬೇಕಿತ್ತು ನನಗೆ. ಏನಾಗ್ತಿದೆ ನನ್ನ ಜೀವನದಲ್ಲಿ ಅನ್ನೋದು ನನಗೇ ತಿಳಿಯದಂತಾಗಿತ್ತು. ತಿಳಿದುಕೊಳ್ಳುವುದು ಅವಶ್ಯವಿದೆ. "ಅದೇನೋ ಸರಿ. ಕ್ಲೀನ್ ಮಾಡ್ಬೇಕಲ್ಲ. ನೀ ಹೋಗಿ ಕ್ಲೀನ್ ಮಾಡ್ಕೊ. ಕ್ಲೀನ್ ಮಾಡೋಕ್ ಮುಂಚೆ ಇವಳನ್ಯಾಕೆ ಕರೆದುಕೊಂಡು ಹೋಗ್ತಿ. ಧೂಳಿಗೆ ಮತ್ತೊಂದು ಮಗದೊಂದು ಆದೀತು ಮತ್ತೆ. ನೀ ಹೋಗಿ ಬಾ" ಎಂದುಬಿಟ್ಟರು. ಇನ್ಯಾವ ನೆಪ ಹೇಳಿ ಇವಳನ್ನು ಕರೆದುಕೊಂಡು ಹೋಗಲಾಗುವುದಿಲ್ಲ. ಮಗಳು ಜೊತೆಯಲ್ಲಿದ್ದಿದ್ದರೆ ಜಗಳದಲ್ಲಿ ನನ್ನ ಕೈ ಮೇಲಾಗುವ ಸಾಧ್ಯತೆ ಇತ್ತು. ಮಗಳಿಲ್ಲವೆಂದರೆ ಮಾತು ಇನ್ನೆಲ್ಲೆಲ್ಲಿಗೋ ಹೋಗುವುದು ಖಂಡಿತ. ವಿಧಿಯಿಲ್ಲ. ಈಗ ಹೇಳಾಗಿದೆ. ಕೊನೆಗೆ ಮನೆ ಕ್ಲೀನು ಮಾಡಲಾದರೂ ಹೋಗಲೇಬೇಕೀಗ. 

ರಾಜೀವ ಮನೆಯಲ್ಲೇ ಇದ್ದರು. ಬಾಗಿಲು ತೆಗೆದವರು ಮಾಮೂಲಿನಂತೆ ಒಂದೂ ಮಾತನಾಡದೆ ರೂಮು ಸೇರಿದರು. ಅಡುಗೆ ಮನೆ ಕಸದ ಗುಂಡಿಯಂತಾಗಿತ್ತು. ಒಂದರ್ಧ ಘಂಟೆ ಕ್ಲೀನು ಮಾಡಿ ಹೊರಬಂದೆ. ರಾಜೀವ ರೂಮು ಬಿಟ್ಟು ಬಂದಿರಲಿಲ್ಲ. ಮೊಬೈಲನ್ನು ಕೈಯಲ್ಲಿಟ್ಟಿಕೊಂಡು ಸಮಯ ಕಳೆಯುತ್ತಿದ್ದರು. ಹೋಗಿ ಮಂಚದ ಮೇಲೆ ಅವರ ಪಕ್ಕ ಕುಳಿತೆ. ಥೂ! ಜೋರು ಜೋರು ಮಾತಲ್ಲಿ ಜಗಳವಾಡಿಬಿಟ್ಟರೇ ಚೆಂದ. ಮಾತುಗಳು ಓತಪ್ರೇತವಾಗಿ ಹರಿದಾಡಿ ಕೊನೆಗೆ ಸಿಟ್ಟಿನ ಕಾವು ಮಾತಿನ ಹರಿದಾಟದೊಂದಿಗೇ ತೇಲಿಹೋಗಿಬಿಡುತ್ತದೆ. ಈ ಮೌನದ ಜಗಳಗಳದೇ ಪ್ರಾಬ್ಲಮ್ಮು. ಜಗಳ ಮುಗಿಸೋ ಮನಸ್ಸಿದ್ರೂ ಯಾವ ಪದಗಳನ್ನು ಮೊದಲು ಹೊರಬಿಡುವುದು ಎನ್ನುವುದೇ ತಿಳಿಯುವುದಿಲ್ಲ. ಅಪ್ಪಿ ತಪ್ಪಿ ತಪ್ಪು ಪದ ಬಾಯಿಂದೊರಬಂತೋ ಜಗಳ ಇನ್ನೂ ಹೆಚ್ಚಾಗಿ ಕಲಸುಮೇಲೋಗರವಾಗುವ ಭಯ. ಪದಗಳ ಹುಡುಕಾಟದಲ್ಲೇ ಹಲವು ಕ್ಷಣಗಳು ಕಳೆದು ಹೋದವು. ಜಗಳ ಕೊನೆಯಾಗುವುದು ಅವರಿಗೆ ಬೇಕಿದೆಯೋ ಇಲ್ಲವೋ ಗೊತ್ತಿಲ್ಲ, ನನಗಂತೂ ಜರೂರು ಬೇಕಿದೆ. ಇನ್ನು ಐದು ತಿಂಗಳಲ್ಲಿ ಪರೀಕ್ಷೆ ಇದೆ. ಈಗಿಂದಲೇ ಓದಲು ಶುರು ಮಾಡಿದರೂ ಅರ್ಧದಷ್ಟು ಪುಸ್ತಕಗಳನ್ನಷ್ಟೇ ಓದಲು ಸಾಧ್ಯವಾದೀತು. ಮನೆಯಲ್ಲೂ ನೆಮ್ಮದಿ ಇಲ್ಲದೇ ಹೋದರೆ, ಚೂರುಪಾರಾದರೂ ರಾಜೀವ ರಾಧಳ ದೇಖರೇಖಿಗಳನ್ನು ನೋಡಿಕೊಳ್ಳದೇ ಹೋದರೆ ನನಗೇ ಕಷ್ಟ, ಓದಲು ತೊಡಗಿಕೊಳ್ಳುವುದೇ ಕಠಿಣವಾಗಿಬಿಡುತ್ತದೆ. ಇವತ್ತಾದಂತೆ. ಯೋಚಿಸಿ ಯೋಚಿಸಿ ಯಾವ ರೀತಿಯಿಂದಲೂ ಇದು ಮತ್ತೊಂದು ಜಗಳಕ್ಕೆ ನಾಂದಿಯಾಡುವುದಿಲ್ಲ ಎಂದು ಖಚಿತಪಡಿಸಿಕೊಂಡು ʻರಮ್ಯಂದು ಯಾವ್ದೋ ಹೊಸ ಪಿಚ್ಚರ್‌ ಬಂದಿದೆಯಂತೆ ಹೋಗೋಣ್ವʼ ಎಂದು ಕೇಳಿದೆ. ಸಿಟ್ಟಿನ ಮುಖಭಾವದಿಂದ ನನ್ನ ಕಡೆಗೆ ನೋಡಿ ನಿಧಾನಕ್ಕೆ ಮಂದಹಾಸ ಮೂಡಿಸಿಕೊಂಡು "ನಾನಾಗ್ಲೇ ನೋಡಾಗಿದೆ ಆ ಪಿಚ್ಚರ್ರು" ಎಂದರು. ಅಬ್ಬಾ! ಸದ್ಯ! ಮುಖದ ಮೇಲೆ ನಗು ಮೂಡಿತಲ್ಲ. 

ʻನನ್ನ ಬಿಟ್ಟು ಅದೆಂಗೆ ಒಬ್ರೇ ಪಿಚ್ಚರ್ರಿಗೆ ಹೋಗಿಬಿಟ್ರಿ?ʼ ಹುಸಿ ಮುನಿಸು ತೋರಿದೆ. 

"ನಿಂಗೆಂಗಿದ್ರೂ ರಮ್ಯ ಇಷ್ಟ ಆಗಲ್ವಲ್ಲ. ಅದ್ಕೇ ಹೋಗಿದ್ದೆ" 

ʻಮ್‌ʼ 

"ಮ್‌" 

ಹಂಗೇ ಅವರಿಗೊರಗಿಕೊಂಡೆ. ʻಏನಾಯ್ತ್ರೀ?ʼ ಮುದ್ದು ದನಿಗೆ ಕರಗದೇ ಇರಲಿಲ್ಲ. 

"ಏನಿಲ್ವೇ.... ಮಾಮೂಲಿ" 

ʻಏನ್‌ ಮಾಮೂಲಿ?ʼ 

"ಅದೇ ಕೆಲಸದ ಒತ್ತಡ. ಇಷ್ಟವಿಲ್ದಿರೋ ಕೆಲಸಾನಾ ಎಷ್ಟು ದಿನಾ ಮಾಡೋದು ಅಂತ" 

ʻಸ್ವಲ್ಪ ದಿನ ತಡ್ಕೊಳ್ಳಿ. ಇನ್ನು ಐದು ತಿಂಗಳಲ್ಲಿ ನನ್ನ ಡಿ.ಎನ್.ಬಿ ಮುಗೀತದೆ. ಹೋಪ್‌ಫುಲಿ ಪಾಸ್‌ ಆಗ್ತೀನಿ ಅಂದ್ಕೊಂಡಿದ್ದೀನಿ. ಬಾಂಡ್‌ ಇರೋದ್ರಿಂದ ವಿಧಿ ಇಲ್ಲದೆ ಒಂದು ವರ್ಷವಂತೂ ಮೈಸೂರಿನಲ್ಲಿರಲೇಬೇಕುʼ 

"ಅಷ್ಟರವರೆಗೂ ನಾನಿಂಗೇ ಜಿಗುಪ್ಸೆ ತುಂಬಿದ ಜೀವನ ನಡೆಸಬೇಕು ಅನ್ನು...."

ʻಪೂರ್ತಿ ಹೇಳೋವರ್ಗೂ ತಡೀರಿ. ಅಲ್ಲಿವರೆಗೇನೂ ಕಾಯೋದು ಬೇಕಿಲ್ಲ. ನನ್ನ ಡಿ.ಎನ್.ಬಿ ಮುಗಿಯುವವರೆಗೆ ಕಾದರೆ ಸಾಕು. ಡಿ.ಎನ್.ಬಿ ಆದ ಮೇಲೆ ನನಗೆ ಬರುವ ಹಣವೂ ಹೆಚ್ಚಾಗ್ತದಲ್ಲ. ಆವಾಗ ನೀವು ಕೆಲಸ ಬಿಡೂರಂತೆʼ 

"ಬಿಟ್ಟೇನು ಮಾಡೋದು ಈ ಹಾಳು ಮೈಸೂರಲ್ಲಿ" 

ʻನನ್ನದೊಂದು ಐಡಿಯಾ ಇದೆ. ನೀವ್‌ ಒಪ್ಪೋದಾದ್ರೆʼ 

"ಅದೇನ್‌ ಹೇಳು" 

ʻಈ ಕಾರ್‌ ಮಾರಿ ಬಿಡುವ ಬೇಕಾದ್ರೆ. ಅಥವಾ ನಿಮ್ಮ ಮನೆಯಲ್ಲೋ ನಮ್ಮ ಮನೆಯಲ್ಲೋ ಸಾಲಕ್ಕೆ ಅಂತ ದುಡ್ಡು ತರುವ, ಮನೆಗಳಲ್ಲಿ ಕೇಳೋದ್‌ ಬೇಡ ಅಂದ್ರೆ ಬ್ಯಾಂಕಲ್ಲಿ ಸಾಲ ತರುವ....ʼ 

"ಸಾಲ ತಂದು" 

ʻಸಾಲ ತಂದು ಒಂದ್‌ ಮೆಡಿಕಲ್‌ ಶಾಪ್‌ ಇಡಿ. ಜೊತೆಗೆ ಅದಕ್ಕೆ ಅಟ್ಯಾಚ್ಡ್‌ ಆಗಿ ಒಂದ್‌ ಸಣ್ಣ ಕ್ಲಿನಿಕ್ಕೂ ಇರಲಿʼ ರಾಜೀವನ ಮುಖದ ಮೇಲೆ ನಗು ಮೂಡಿತು. ʻಇರಿ ಇರಿ. ಅಷ್ಟೊಂದ್‌ ನಗಬೇಡಿ. ಬಾಂಡ್‌ ಸಮಯದಲ್ಲಿ ನಾನಂತೂ ಬಂದು ಕ್ಲಿನಿಕ್ಕಲ್ಲಿ ಕೂರುವಂತಿಲ್ಲ. ಅದು ನಮ್ಮಾಸ್ಪತ್ರೆಯ ನಿಯಮದ ವಿರುದ್ಧ. ಅಲ್ಲಿಯವರೆಗೂ ಯಾರಾದ್ರೂ ಡಾಕ್ಟರ್‌ ಸಿಕ್ಕಿದ್ರೆ ಬರೋಕ್‌ ಹೇಳುವ, ದಿನಕ್ಕೊಂದು ಎರಡು ಘಂಟೆ. ನನ್ನ ಬಾಂಡ್‌ ಮುಗಿದ ಮೇಲೆ ನಾನೇ ಬರ್ತೀನಿʼ 

"ಮ್.‌ ಐಡಿಯಾ ಏನೋ ಚೆನ್ನಾಗಿದೆ. ಆದರೆ ಬಂಡವಾಳ ತುಂಬಾನೇ ಬೇಕಾಗೋದಿಲ್ವ. ರಿಸ್ಕ್‌ ಅನ್ಸುತ್ತಪ್ಪ" 

ʻಬ್ಯುಸಿನೆಸ್‌ ಅಂದ ಮೇಲೆ ರಿಸ್ಕ್‌ ತೆಗೆದುಕೊಳ್ಳಲೇಬೇಕಲ್ಲ. ತಗೊಳೋಣ. ಹೋದ್ರೆ ಒಂದಷ್ಟು ಲಕ್ಷ ಅಂದ್ಕಂಡೇ ರಿಸ್ಕ್‌ ತಗೋಬೇಕು. ನಂಗೊತ್ತಿರೋ ಹಂಗೆ ಫಾರ್ಮಸೀಲಿ ದುಡ್ಡು ತುಂಬಾ ಹೋಗಲ್ಲ. ನೋಡುವ. ಒಳ್ಳೆ ಏರಿಯಾದಲ್ಲಿ ಇಟ್ರೆ ಅಟ್ಯಾಚ್ಡ್‌ ಕ್ಲಿನಿಕ್‌ ಇಲ್ಲದೇ ಹೋದ್ರೂ ಚೆನ್ನಾಗಿ ವ್ಯಾಪಾರ ಆಗಬೇಕುʼ 

"ಮ್.‌ ಸರಿ. ಹಂಗೇ ಮಾಡುವ. ಇಷ್ಟು ವರ್ಷವೇ ಕಾದಿದ್ದೀನಂತೆ. ಇನ್ನು ಒಂದೈದು ತಿಂಗಳು ಕಾಯೋದರಲ್ಲೇನು ತಪ್ಪಿಲ್ಲ" 

ʻಮ್.‌ ಇನ್ನೊಂದ್‌ ಮಾತುʼ 

"ಹೇಳು" 

ʻನನ್ಜೊತೆ ಜಗಳವಾಡಿ, ಬೇಕಾದ್ರೆ ದಿನಾ ಜಗಳವಾಡೋಣ. ನನ್ನದೇನೂ ಅಭ್ಯಂತರವಿಲ್ಲ. ಆದರೆ ಪ್ಲೀಸ್‌ ಪ್ಲೀಸ್‌ ರಾಧಳ ಜೊತೆಗೊಂದಷ್ಟು ಚೆನ್ನಾಗಿರಿ. ಅವಳೀಗಾಗಲೇ ನಿಮ್ಮಿಂದ ಮಾನಸಿಕವಾಗಿ ದೂರಾಗಿಬಿಡುವ ಎಲ್ಲಾ ಸೂಚನೆಗಳನ್ನೂ ತೋರಿಸುತ್ತಿದ್ದಾಳೆ. ನೀವಾಗ್‌ ನೀವೇ ಪೂರ್ತಿ ದೂರಾಗುವಂತೆ ಮಾಡಿಬಿಡಬೇಡಿ, ಪ್ಲೀಸ್ʼ 

"ಮ್.‌ ಸರಿ ಸರಿ. ನೋಡುವ. ಅವಳುಟ್ಟಿದರಿಂದಾನೇ ಇಷ್ಷೆಲ್ಲ ಸಮಸ್ಯೆ ನಮಗೆ. ಅದೊಂದು ಹುಟ್ಟದೇ ಹೋಗಿದ್ದರೆ ಹೆಂಗೋ ಮನಸ್ಸಿಗ್‌ ತೋಚಿದ್ದು ಮಾಡಿಕೊಂಡಿರಬಹುದಿತ್ತು. ಇಷ್ಟೆಲ್ಲ ಗೊಂದಲಗಳೇ ಇರ್ತಿರಲಿಲ್ಲ ನನ್ನಲ್ಲಿ" ಎಂದು ಹೇಳುವ ಮೂಲಕ ರಾಧಳೊಡನೆ ನನ್ನ ಸಂಬಂಧ ಹಿಂಗೇ ಇರ್ತದೆ ಎನ್ನುವ ಸೂಚನೆ ನೀಡಿದರು. 

ʻಮಗಳು ಹುಟ್ಟುವ ಮುಂಚೆಯೂ ನಿಮ್ಮಲ್ಲಿ ಗೊಂದಲಗಳಿದ್ದವಲ್ಲ. ಇಲ್ಲ ಅಂತ ಯಾಕಂತೀರಿ?ʼ ಎಂದು ಕೇಳಬೇಕೆಂದುಕೊಂಡೆ. ಮತ್ತೊಂದು ಸುತ್ತಿನ ಜಗಳಕ್ಕೆ ನಾ ಸಿದ್ಧಳಿರಲಿಲ್ಲ. ಇನ್ನೊಂದು ದಿನ ಸಮಾಧಾನದಿಂದಿರುವಾಗ ಕೇಳಿಕೊಂಡರಾಯಿತು ಎಂದುಕೊಳ್ಳುವಾಗ ಹಾಲಿನಲ್ಲಿದ್ದ ಫೋನು ರಿಂಗಣಿಸಿತು. ರಾಮ್‌ಪ್ರಸಾದ್‌ ಫೋನು ಮಾಡಿದ್ದರು. 

ʻಹಲೋ ಹೇಳಿʼ 

"ಎಲ್ಲಿದ್ದೀರ ಧರಣಿ" 

ʻಇಲ್ಲೇ ಮನೇಲಿ. ಏನ್‌ ವಿಷಯʼ 

"ಏನಿಲ್ಲ. ಮಗಳು ನೋಡೋಕೆ ಬರೋನಿದ್ದೆ. ನಿಮ್ಮ ಮನೇನಾ ಅಮ್ಮನ ಮನೇನಾ?" 

ʻಮಗಳು ಅಮ್ಮನ ಮನೇಲಿದ್ದಾಳೆ. ನಾ ಸ್ವಲ್ಪ ಕೆಲಸ ಇತ್ತು ಅಂತ ಮನೆಗೆ ಬಂದಿದ್ದೆʼ 

"ಓ. ಹೌದಾ" 

ʻಇಲ್ಲಿಗೇ ಬಂದುಬಿಡಿ. ಹೋಗುವ ಇಲ್ಲಿಂದʼ 

"ನಿಮ್ಮಮ್ಮನ ಮನೇನೂ ಅಲ್ಲೇ ಹತ್ತಿರದಲ್ಲಲ್ವಾ?" 

ʻಹೌದು. ಎರಡು ರಸ್ತೆ ಆ ಕಡೆ ಅಷ್ಟೇʼ 

"ಹು. ರಾಜೀವ್‌ ತೋರಿಸಿದ್ದರು ಒಮ್ಮೆ. ನೀವು ಅಮ್ಮನ ಮನೆಗೆ ಹೋದಾಗ ಒಂದ್‌ ಮೆಸೇಜ್‌ ಹಾಕಿ. ಅಲ್ಲಿಗೇ ಬರ್ತೀನಿ" 

ʻಸರಿʼ 

ಯಾರು ಎನ್ನುವಂತೆ ನೋಡಿದರು ರಾಜೀವ್.‌ ʻರಾಮ್‌ಪ್ರಸಾದ್‌ ರೀ. ರಾಧಳನ್ನು ನೋಡೋಕೆ ಮನೆಗೆ ಬರ್ತೀನಿ ಅಂದಿದ್ರುʼ 

"ಓ. ಹೌದಾ. ಬರ್ತಾರಂತ" 

ʻಹು. ಅಮ್ಮನ ಮನೆಗೆ ಹೋದ ಮೇಲೆ ಮೆಸೇಜ್‌ ಹಾಕಿ ಅಂದ್ರುʼ 

"ನಡೀ ಹಂಗಾದ್ರೆ. ನಾನೂ ಬರ್ತೀನಿ" 

ʻನೋಡ್ದಾ! ನಾ ಕರೆದಾಗ ಬರ್ತಿರಲಿಲ್ಲ. ಮಗಳಿದ್ದಾಗ ಬರ್ತಿರಲಿಲ್ಲ. ಫ್ರೆಂಡು ಬರ್ತಾನೆ ಅಂದ ತಕ್ಷಣ ಕುಣ್ಕಂಡ್‌ ರೆಡಿಯಾಗೋದʼ 

"ಹು ಮತ್ತೆ. ಫ್ರೆಂಡ್ಸ್‌ ಅಂದ್ರೆ ಹಂಗೆ ಅಲ್ವ. ನೀನಿವತ್ತು ವಾಪಸ್‌ ಬರ್ತೀಯಾ ಅಥವಾ ಅಲ್ಲೇ ಇರ್ತೀಯಾ?" 

ʻಯಾಕ್‌ ಅಲ್ಲೇ ಇರ್ಬೇಕಾ?ʼ 

"ಇರು ಇವತ್ತೊಂದಿನ" 

ʻಯಾಕೋ?ʼ 

"ಯಾಕಿಲ್ಲ ಸುಮ್ಮನೆ. ಇನ್ನೊಂದಿನ ಅಮ್ಮನ ಮನೇಲಿ ಇರ್ಲಿ ಅಂತ" 

ʻಹಂಗೆ .... ಹಂಗೆ..... ರಾಮ್‌ಪ್ರಸಾದ್‌ ಕರ್ಕಂಡ್‌ ಪಾರ್ಟಿ ಮಾಡೋಕೆ ಅಂತ ಹೇಳಿ. ನಾನೇನೂ ಬೇಜಾರ್‌ ಮಾಡ್ಕಳಲ್ಲ!ʼ 

ಹೆ ಹೆ ಎಂದು ನಕ್ಕರಷ್ಟೇ.

No comments:

Post a Comment